ಹತ್ತು ಕಥೆಗಳ ಈ ಸಂಕಲನದಲ್ಲಿ ಮನುಷ್ಯನ ಅಹಮಿಕೆ, ಅನುಮಾನ, ದರ್ಪ, ಅಸಹಾಯಕತೆ, ತಣ್ಣಗಿನ ಕ್ರೌರ್ಯ, ತಲೆಮಾರು ಕಳೆದರೂ ತಣಿಯದ ದ್ವೇಷ,ಮತ್ತೊಬ್ಬರ ಏಳಿಗೆಯನ್ನು ಕಂಡಾಗ ಇದ್ದಕ್ಕಿದ್ದಂತೆ ಉಂಟಾಗುವ ಅಸಹನೆ, ಪದೇ ಪದೇ ಸುಳ್ಳಾಗಿ ಹೋಗುವ ನಿರೀಕ್ಷೆಗಳು, ಯಾರಿಗೂ ಕಾಯದೆ ಹೋಗಿ ಬಿಡುವ ಪ್ರಾಣ...ಹೀಗೆ ಮನುಷ್ಯನ ಮಿತಿಗಳಿಗೆ ಪುರಾವೆ ಒದಗಿಸುವ ಪ್ರಸಂಗಗಳು ಎಲ್ಲಾ ಕಥೆಗಳಲ್ಲೂ ಬರುತ್ತವೆ. ಪ್ರತಿಯೊಂದು ಕಥೆಯೂ ತನ್ನದೇ ರೀತಿಯಲ್ಲಿ ಮುಗಿದು ಲೈಫು ಇಷ್ಟೇನೇ! ಎಂದು ಪಿಸುಗುಟ್ಟಿದಂತೆ ಭಾಸವಾಗುತ್ತದೆ.
ಕಾದಂಬರಿಗಳ ಜೊತೆ ಸಣ್ಣಕಥೆಗಳೂ ನನಗೆ ಪ್ರಿಯವಾದ ಸಾಹಿತ್ಯ ಪ್ರಕಾರ, ಈ ಪ್ರಕಾರಕ್ಕೆ ತನ್ನದೇ ಆದ ಮಿತಿಯಿದೆ. ಕಾದಂಬರಿಗಳಂತೆ ಓದುಗರನ್ನು ಆವರಿಸಿಕೊಳ್ಳುವ ಗುಣ ಎಲ್ಲ ಕಥೆಗಳಲ್ಲೂ ಇರುವುದಿಲ್ಲ, "ಮರ ಹತ್ತದ ಮೀನು" ಸಂಕಲನದ ಕಥೆಗಳು ಮೇಲೆ ಹೇಳಿದ್ದಕ್ಕೆ ವಿರುದ್ಧವಾಗಿವೆ ಅಂತಲೇ ಹೇಳಬೇಕು.ಇಲ್ಲಿನ ಕಥೆಗಳ ವಿಸ್ತಾರ ಕಾದಂಬರಿಗಳಂತೆ ಹರಡಿಕೊಳ್ಳದೆ ಇದ್ದರೂ ಕೂಡ ಓದುಗರನ್ನು ಸೆಳೆಯುವಂಥ, ಆವರಿಸಿಕೊಳ್ಳುವಂಥ ಮತ್ತು ನೆನಪಿನಲ್ಲುಳಿದುಕೊಳ್ಳುವಂಥ ಕಥೆಗಳಿಲ್ಲಿವೆ. ಇದು ನನ್ನ ಕಥೆಯೇನೋ, ನಮ್ಮ ಸುತ್ತಮುತ್ತಲಿನವರ ಕಥೆಯೇನೋ, ಮುಂದೊಂದು ದಿನ ನನ್ನ ಜೀವನದಲ್ಲಿ ಘಟಿಸಬಹುದಾದ ಸನ್ನಿವೇಶಗಳು ಇವಾಗಿರಬಹುದೇನೋ ಎನ್ನಿಸುವಷ್ಟು ಕಾಡುವ ಉತ್ಕೃಷ್ಟ ಕಥೆಗಳು ಇಲ್ಲಿವೆ. ಒಮ್ಮೆ ಓದಿ.
ವೈಯಕ್ತಿಕ ಬದುಕಿನ ಕತೆಯಾಗಿಸಿದ್ದಾರೆ ಎಂದು ಗಾಢವಾಗಿ ಅನ್ನಿಸಿತು. ಅಪ್ಪ ಎಂಬ ಗೋಡೆಯ ಹತ್ತದಿದ್ದರೆ ಇವರ ಮುಂದಿನ ಕತೆಗಳ ಬಗ್ಗೆ ಆಸಕ್ತಿ ಉಳಿಯಬಹುದೇ ಎಂಬ ಆತಂಕ.. ಇಷ್ಟೊಳ್ಳೆ ಕತೆಗಾರ ಒಂದೇ ಕಡೆ ಬಾಕಿಯಾಗುತ್ತಾರಾ ಎಂಬ ಬೇಸರ.
ಈ ಸಂಕಲನ ಬಹಳ ಒಳ್ಳೆ ಸಂಕಲನ. ಆದರೆ ಈ ವಸ್ತು ಇಲ್ಲಿಗೆ ಮುಗಿದು ಹೊಸ ದಾರಿಗಳ ಅನ್ವೇಷಣೆ ಮಾಡಿದರೆ ಮಾತ್ರ..
ಎಲ್ಲಾ ಕತೆಗಳೂ ಆಶಯವನ್ನು ಹೊಂದಿದ್ದು, ಆ ಆಶಯ/ಸಂದೇಶ ಓದುಗನನ್ನ ತಲುವುದರಲ್ಲಿ ಸಫಲವಾಗಿದೆ. ಜೀವನದ ಏಳು-ಬೀಳು, ನೋವು-ನಲಿವು ಎಲ್ಲವನ್ನೂ ಈ ಕತೆಗಳು ಹೇಳುತ್ತವೆ... ಒಂದೊಳ್ಳೆಯ ಓದಿನ ಅನುಭವವನ್ನು ಒದಗಿಸುತ್ತದೆ.
ಲಂಕೇಶರ 'ಒಂದು ಘಟನೆ' ಹೆಸರಿನ ಕಥೆಯೊಂದಿದೆ. ಅದರ ನಾಯಕ ಕಥೆಗಾರ. ಇವನ ಕಥೆ ಪತ್ರಿಕೆಯೊಂದರಲ್ಲಿ ಪ್ರಕಟವಾಗಿದೆ. ಅದರ ಸಂಭಾವನೆ ಪಡೆಯಲು ಪತ್ರಿಕೆಯ ಆಫೀಸಿಗೆ ಹೋದಲ್ಲಿ ಭೇಟಿಯಾಗುವ ವ್ಯಕ್ತಿಯೊಬ್ಬ ಇವನ ಕಥೆಯ ಬಗ್ಗೆ ಕೇಳುವ ಪ್ರಶ್ನೆಗಳು ಇವನಲ್ಲಿ crisis ಹುಟ್ಟಿಸಿ ಇವನು ತನ್ನ ಆಫೀಸಿಗೆ ಓಡೋಡಿ ಬಂದು ಸಹೋದ್ಯೋಗಿಯ ಜೊತೆಗೆ ಸಿನಿಮಾ, ಫುಟ್ಬಾಲ್ ಮ್ಯಾಚ್ ಇತ್ಯಾದಿ small talk ಮಾಡಲು ಯತ್ನಿಸಿ ಅದರಲ್ಲೂ ಸೋಲುವಲ್ಲಿಗೆ ಕಥೆ ಮುಗಿಯುತ್ತದೆ. ಕಥೆಗಾರನ ಬಗ್ಗೆ ವಿಷಾದ ಹುಟ್ಟಿಸುವ ಕಥೆಯಿದು.
ವಿನಾಯಕ ಅರಳಸುರಳಿಯವರ ಪುಸ್ತಕದ ಟೈಟಲ್ ಕಥೆಯಾದ 'ಮರ ಹತ್ತದ ಮೀನು' ಓದಿದಾಗಲೂ ವಿಷಾದ ಹುಟ್ಟಿತು. ಎರಡೂ ಕಥೆಗಳೂ ಬೇರೆಬೇರೆಯಾದರೂ ನನಗೆ ಲಂಕೇಶರ ಕಥೆ ನೆನಪಾಯಿತು.
'ಮರ ಹತ್ತದ ಮೀನು' ಎನ್ನುವ ಹೆಸರೇ ಕಥೆ ಯಾವುದರ ಬಗ್ಗೆ ಇರಬಹುದು ಎನ್ನುವುದನ್ನು ಬಿಟ್ಟುಕೊಡುತ್ತದೆ. ಕಥೆ ಕೂಡ ಹೆಚ್ಚೂಕಡಿಮೆ ನಾವು ಊಹಿಸಿದಂತೆಯೇ ಸಾಗುತ್ತದೆ. ಆದರೂ ಕೊನೆಯಲ್ಲಿ ಬರುವ ಸಾಲುಗಳು ಮನಸಿಗೆ ನಾಟುತ್ತವೆ. ವಿಷಾದ ಕಾಡುತ್ತದೆ. ಕಥೆಗಾರ ತಮ್ಮ ಬದುಕಿನ ಕಷ್ಟಗಳಿಂದಾದ ದುಃಖವನ್ನು ಕಡಿಮೆ ಮಾಡಿಕೊಳ್ಳಲೇ ಇಲ್ಲಿನ ಕೆಲವು ಕಥೆಗಳನ್ನು ಬರೆದಿದ್ದಾರೆಂದು ಅನ್ನಿಸುತ್ತದೆ. ಇಂಥ ಕಥೆಗಳನ್ನು ಬರೆಯುವುದು ಕಷ್ಟದ ಕೆಲಸ, ಸ್ವಲ್ಪ ಮಿತಿ ದಾಟಿದರೂ self pity ಯಲ್ಲಿ ಮುಳುಗಿ ಬಿಡುವ ಅಪಾಯವಿದೆ. ಆದರೆ ಇಲ್ಲಿ ಹಾಗಾಗಿಲ್ಲ, ಹದವಾಗಿ ಹೇಳಬೇಕಾದ್ದನ್ನು ಹೇಳಿ ಮುಗಿಸಿದ್ದಾರೆ. ಕಥೆಗಾರನ ಅನುಭವ ಪ್ರಾಮಾಣಿಕವಾಗಿ ಓದುಗನಿಗೂ ದಾಟುವುದರಿಂದ ಆ ದುಃಖ ಓದುಗನನ್ನೂ ಕಾಡುತ್ತದೆ.
ಇನ್ನೊಂದು ವಿಷಯವೆಂದರೆ ಅಲ್ಲೆಲ್ಲೋ ಶಿವಮೊಗ್ಗದ ಹಳ್ಳಿಯೊಂದರಲ್ಲಿ ಬೆಳೆದ ವಿನಾಯಕರ ಬಾಲ್ಯವು ಕೊಡಗಿನ ಹಳ್ಳಿಯೊಂದರಲ್ಲಿ ಬೆಳೆದ ನನ್ನ ಬಾಲ್ಯದ ಹಾಗೆಯೇ ಇತ್ತೇನೋ ಎಂದು ಈ ಕಥೆಗಳನ್ನು ಓದುತ್ತಾ ಅನ್ನಿಸಿತು. ಕಥೆಗಳಿಗೆ ಕಾಲ್ಪನಿಕ ವಿವರಗಳನ್ನು ಬೆರೆಸಿ ರಸವತ್ತಾಗಿಸುವ ಸೆಳೆತವನ್ನು ಹತ್ತಿಕ್ಕಿ ನಮ್ಮ ನೀರಸ ಬದುಕನ್ನು ಅದಿರುವ ರೀತಿಯಲ್ಲಿಯೇ, ನೀರಸವಾಗಿಯೇ ದಾಖಲಿಸುವುದರಿಂದ ಇಂಥ ಕೆಲವು ಲಾಭಗಳಿವೆ! ಇನ್ನು ಕೆಲವೇ ಕೆಲವು ಕಥೆಗಳಲ್ಲಿ ಮಹತ್ವಾಕಾಂಕ್ಷೆ ಇದ್ದರೂ ಹೇಳಬೇಕಾದ್ದನ್ನು ಸರಳೀಕರಿಸಿದ್ದಕ್ಕೋ ಏನೋ, ವಿಷಯ dilute ಆಗಿದೆ. ಉದಾ: 'ಚಿಕಿತ್ಸೆ' ಎನ್ನುವ ಕಥೆಯಲ್ಲಿ ಹೆಲ್ತ್ ಇನ್ಶೂರೆನ್ಸ್ ಸಂಸ್ಥೆಯೊಂದರ ಮಾಲಿಕ ತನ್ನ ಖಾಯಿಲೆಗೆ ಮದ್ದು ಹುಡುಕುತ್ತಾ ಯಾವುದೋ ಹಳ್ಳಿಯ ಪಂಡಿತನೊಬ್ಬನನ್ನು ಹುಡುಕುತ್ತಾ ಹೊರಡಬೇಕು. ಈ ವಿಷಯ ಆಸಕ್ತಿ ಹುಟ್ಟಿಸುವಂತಿದ್ದರೂ ಕಥೆಯ ಕೊನೆಯಲ್ಲಿ ವಿಷಯಗಳನ್ನು generalize ಮಾಡುತ್ತಾ ಹೋದಂತೆ ಅನ್ನಿಸಿ ಕಥೆ ಮನಸಿಗೆ ಮುಟ್ಟುವುದಿಲ್ಲ.
ಇದು ಸಣ್ಣ ದೂರು. ಆದರೆ ಪುಸ್ತಕ ಓದಿ ಮುಗಿಸಿದಾಗ ಉಳಿಯುವುದು ಹಿತವಾದ ಭಾವ. ಕಥೆಗಾರನ ಪ್ರಾಮಾಣಿಕತೆಯಿಂದಲೇ ಇದು ಸಾಧ್ಯವಾಗಿರುವುದೆಂದು ನನ್ನ ಅನಿಸಿಕೆ.
ಇವರ ಮುಂದಿನ ಕಥೆಗಳು ಯಾವ ರೀತಿ ಇರಬಹುದೆಂದು ಕುತೂಹಲ ಹುಟ್ಟಿಸುವಂತಿರುವ, ಚೆಂದದ ಮುಖಪುಟವೂ ಇರುವ ಈ ಕಥಾಸಂಕಲನದ ಪ್ರತಿಗಳಿಗಾಗಿ ಸಾಹಿತ್ಯಲೋಕ ಪಬ್ಲಿಕೇಷನ್ಸನ್ನು ಸಂಪರ್ಕಿಸಿ. ಮೊ: 9945939436
ವಿನಾಯಕ ಅರಳಸುರುಳಿಯವರ ಮೊದಲ ಕಥಾಸಂಕಲನ ನವಿಲುಗರಿ ಮರಿ ಹಾಕಿದೆ. ಈಗ ಎರಡನೇ ಕಥಾಸಂಕಲನ ಮರ ಹತ್ತದ ಮೀನು, ಲೇಖಕರ ಬರವಣಿಗೆಯ ಪ್ರೌಢಿಮೆ ವೃದ್ಧಿಸಿರುವುದು ಕಥೆಗಳಲ್ಲಿ ಕಾಣಬಹುದು. ಹೆಚ್ಚಿನ ಕಥೆಗಳು ಲೇಖಕರ ತಮ್ಮ ಜೀವನಾನುಭವದ ಎಳೆಯಿಂದ ಸೃಷ್ಟಿಸಿದ್ದಾದರೆಂದು ಅವರನ್ನು ಬಲ್ಲವನಾಗಿ ಹೇಳಬಹುದು. ಪುಸ್ತಕವನ್ನು ಓದಿಸಿಕೊಂಡು ಹೋಗುವ ಶಕ್ತಿಯುಳ್ಳ ಕಥೆಗಳನ್ನು ಒಳಗೊಂಡಿರುವ ಉತ್ತಮ ಕಥಾಗುಚ್ಚ. ಒಂದೊಳ್ಳೆ ಕಾದಂಬರಿ ಬರೆಯುವ ತಾಕತ್ತು ಹಾಗೂ ಬುದ್ದಿಮತ್ತೆಯ ಇರುವನ್ನು ತೋರಿಸುವ ಕಥೆಗಳಿವೆ.