ಇದೊಂದು ವಿಶಿಷ್ಟ ಪುಸ್ತಕ. ನವ್ಯದ ಧಾಟಿಯ ಶೈಲಿಯ ನಿರೂಪಣೆ ಉಳ್ಳ ಕಾದಂಬರಿ. ಆದರೆ ಇಡೀ ಕಾದಂಬರಿಯ ಜೀವಾಳ ಕನ್ನಡದ ಮಟ್ಟಿಗೆ ವಿಶಿಷ್ಟ ಎನಿಸಬಹುದಾದ ಅನ್‌ರಿಲಯೇಲ್ ನ್ಯಾರೇಟರ್ ಇದರ ಮುಖ್ಯ ಪಾತ್ರ. ಅಂದರೆ ನಾಯಕನ ಕಣ್ಣುಗಳಿಂದ ಇಡಿಯ ಕಥೆ ಹೇಳಲ್ಪಡುತ್ತದೆಯಾದರೂ ಅವ ಹೇಳುವುದು ಎಲ್ಲ ನಿಜ ಎಂದು ನಂಬುವುದು ಕಷ್ಟವಾಗುತ್ತದೆ. ತನಗಾದ ಆಘಾತಗಳ ಬಣ್ಣಿಸುವಾಗ ಅವ ಹೇಳುವ ಕಥೆಗೂ ಓದುಗನಿಗೆ ಕಾಣುವ ಚಿತ್ರಣಕ್ಕೂ ವ್ಯತ್ಯಾಸ ಎದ್ದು ಕಾಣುತ್ತದೆ. ಇನ್ನೊಂದು ವಿಶಿಷ್ಟ ಅಂಶ ಎಂದರೆ ಪರಿಸರದ ಗಾಢ ವರ್ಣನೆ.
ಇಡೀ ಕಾದಂಬರಿ ಹಲವಾರು ಛಿದ್ರ ಪ್ರತಿಮೆಗಳ ಹೊಂದಿದೆ . ಅನೇಕ ಬಣ್ಣದ ಬಟ್ಟೆಗಳ ಸೇರಿಸಿ ಹೊಲಿದ ಕೌದಿಯ ಹಾಗೆ ಭಾಸವಾಗುತ್ತದೆ.
ಒಂದೊಳ್ಳೆಯ ವಿಶಿಷ್ಟ ಓದು. ಇನ್ನೊಂದು ಮುಖ್ಯ ಹೇಳಬೇಕಾದ ವಿಷಯ ಎಂದರೆ ಅಂದವಾದ ಮುದ್ರಣ. ಇಂದ್ರಕುಮಾರ್ ನಮ್ಮ ನಡುವಿನ ನಿಯಮಿತವಾಗಿ ಬರೆಯುವವರಲ್ಲಿ ಒಬ್ಬರು. ಅವರಿಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲವೇನೋ ಎಂಬ ವಿಷಾದವಿದೆ.