ಬೆಟ್ಟದ ಜೀವ - ಪುಸ್ತಕಾನುಭವ
-----------------------------
ಮೊನ್ನೆ ಶಿವರಾಮ ಕಾರಂತರ "ಬೆಟ್ಟದ ಜೀವ" ಜೀವ ಕಾದಂಬರಿಯನ್ನು ಓದಿ ಮುಗಿಸಿದೆ. ಇದು ನನ್ನ ಅವರ ಎರೆಡನೆ ಕಾದಂಬರಿ(ಮೊದಲನೆಯದು "ಮೂಕಜ್ಜಿಯ ಕನಸು"). ಚಿಗುರಿದ ಕನಸು ಚಲನಚಿತ್ರವನ್ನು ಟಿ.ವಿ ಯಲ್ಲಿ ನೋಡಿದ್ದರಿಂದ, ಅದನ್ನು ಓದುವ ಕುತೂಹಲ ಮನಸ್ಸಿನಲ್ಲಿ ಸರಿಯಾಗಿ ಘನವಾಗದೆ, ಕೈಗೆ ಸಿಕ್ಕ ಅದರ ಪುಸ್ತಕವನ್ನು ಓದದೆ ಹಾಗೆಯೆ ಬಿಟ್ಟೆ. ಬೆಟ್ಟದ ಜೀವ ಶೀರ್ಶೆಕೆ ನನ್ನನ್ನು ಆಕರ್ಶಿಸಿದ್ದು "ಬೆಟ್ಟ" ಎಂಬ ನಿಸರ್ಗ ಸೂಚಿ ಪದ ಅದರಲ್ಲಿದ್ದುದರಿಂದ. ಪ್ರಕೃತಿ ಪ್ರೇಮಿಯಾದ ನನ್ನನ್ನು, ನನ್ನ ಎಲ್ಲಾ ಪುಸ್ತಕರಾಶಿಗಳ ಮಧ್ಯೆ, ಬೃಹತ್ ಕಾಯ ಪುಸ್ತಕಗಳನ್ನೂ ಹಿಂದಿಕ್ಕಿ ಆಕರ್ಷಿಸಿದ್ದು ಇದರೊಳಗಿರಬಹುದಾದ ಪ್ರಕೃತಿಯ ಹಸಿರಿನ ಶೀತಲ ನಿರ್ಮಲ ಕಂಪು. "ಬೆಟ್ಟದ ಜೀವ" ಹೆಸರೇ ಸೂಚಿಸಿರುವ ಹಾಗೆ ಇದು ವಿಶಾಲ ಅರಣ್ಯದ ನೀಳಬಾಹುವಿನ ಆಲಿಂಗನದಲ್ಲಿ ಮಲೆನಾಡಿನ "ಬೆಟ್ಟ"ವೊಂದರಲ್ಲಿ ನೆಲಸಿ, ಹೊರಜಗತ್ತಿಗೆ ಕಂಡರೂ ಕಾಣದಹಾಗೆ ಸ್ವತಂತ್ರವಾಗಿ ಸಾಹಸಮಯ ಬಾಳ್ವೆ ನೆಡೆಸಿದ ಮಾನವ "ಜೀವ"ವೊಂದರ ವಿಶಿಷ್ಟ ಕಥೆ. ಕಾದಂಬರಿಯ ಕರ್ತೃ ತಾವೆ ಕಥೆಯ ಒಂದು ಪಾತ್ರವಾಗಿ(ಶಿವರಾಮ), ತಮಗೊದಗಿದ ಜೀವನಾನುಭವವನು ಪ್ರಥಮಪುರುಷ ನಿರೂಪಣೆಯಲ್ಲಿ ಓದುಗರಿಗೆ ಉಣಿಸುವ ಬಗೆ ಮನಸ್ಸಿಗೆ ಹಿತವೆನಿಸುತ್ತದೆ. ಕಥೆಯನ್ನು ಪ್ರವೇಶಿಸಿದ ಓದುಗ ಸ್ವಲ್ಪ ಸಮಯದ ನಂತರ ತಾನೆ "ಶಿವರಾಮ" ನಾಗಿ ಕಥಾವಾಹಿನಿಯಲ್ಲಿ ಬದಲಾಗಿ, ತನ್ನೆದುರಿನ ಹೊಸ ಜಗತ್ತನ್ನು ಆಂತರ್ಯದಲ್ಲಿ ಅನುಭವಿಸುವಷ್ಟು ಆಪ್ತವಾಗಿ, ಸರಳವಾಗಿ, ಮೃದುಲವಾಗಿ ಇಲ್ಲಿಯ 'ಪ್ರಥಮಪುರುಷ' ನೀರೂಪಣೆ ತನ್ನ ನೈಜತೆಯನ್ನು ಮೆರೆದಿದೆ.
ಕಥೆಯಲ್ಲಿ ಬರುವ ಪಾತ್ರಗಳಲ್ಲೆಲ್ಲಾ ಪ್ರಮುಖವಾಗಿ ನನ್ನ ಮನಸ್ಸಿಗೆ ಕಂಡಿದ್ದು "ಗೋಪಾಲಯ್ಯನ" ಪಾತ್ರ. ಕಥೆಯ ಪಾತ್ರಚಿತ್ರಣಗಳಲ್ಲಿ ಸುಪ್ರಭುದ್ಧವಾಗಿ ಬೆಳೆದು ಓದುವ ಮನಸ್ಸಿನ್ನೆದುರಿಗೆ ತನ್ನ ಅಂತರಂಗ, ಚಾರಿತ್ರ್ಯ, ಧ್ಯೇಯ, ಆಕಾಂಕ್ಷೆ, ದುಗುಡ , ಸಂತಸ ಸರ್ವಸ್ಸ್ವವನ್ನು ತೆರೆದಿಡುವುದು ಗೋಪಾಲಯ್ಯನ ವ್ಯಕ್ತಿತ್ವ. ಇಲ್ಲಿ ಗೋಪಾಲಯ್ಯನೇ "ಬೆಟ್ಟದ ಜೀವ". ಕಥೆಯ ನಿರೂಪಣೆ ವ್ಯಕ್ತಿನಿಷ್ಠ ಸ್ವರೂಪದ್ದೆಂದು ಓದಿನ ಅರ್ಧಭಾದಲ್ಲೇ ತಿಳಿದುಬಿಡುತ್ತದೆ. ಏಕೆಂದರೆ ಕಥೆಯ ಜೊತೆ ಅದರ ವೇಗದಲ್ಲೇ ಎಳೆಯುವುದು ಗೋಪಾಲಯ್ಯನ ವ್ಯಕ್ತಿತ್ವ ಲೋಕ. ಇದರ ನಂತರವೆ ಇತರ ಪಾತ್ರವರ್ಗಗಳ ಸ್ವರೂಪ ನಮ್ಮ ಮನಸ್ಸಿನೊಳಗೆ ಇಳಿಯಲೆತ್ನಿಸುವುದು. ಗೋಪಾಲಯ್ಯ ಓರ್ವ ಕೃಷಿಕ, ಶ್ರಮಜೀವಿ, ಸಾಹಸಿ. ಹಿರಿಕರಿಂದ ಬಂದ ನೆಲದಲ್ಲಿ ವ್ಯವಸಾಯ ಮಾಡುತ್ತ ಜೀವನವನ್ನು ಸಾಗಿಸುವಾಗ, ಶಂಕರಿ ಸಹಬಾಳ್ವೆಯಾಗಿ ಇವರ ಬದುಕನ್ನು ಪ್ರವೇಶಿಸುತ್ತಾಳೆ. ಎರೆಡು ಮಕ್ಕಳಾದರೂ ಅವರ ಜೊತೆಗಿನ ಬದುಕು ಸಂಪೂರ್ಣವಾಗುವುದಿಲ್ಲ. ಮಗಳು ಹೆರುವಾಗ ಅಸುನೀಗಿದರೆ, ಮಗ ಇಂಗ್ಲೀಷ್ ವಿದ್ಯಾಭ್ಯಾಸ ಮುಗಿಸಿ ಪೇಟೆಗೆ ಹೋಗಿ ಮತ್ತೆ ಮರಳಿ ಎಂದೂ ಬಾರದೆ ಹೋಗುತ್ತಾನೆ. ಮಗನಿಂದ ದೂರಾಗಿ ವರುಷಗಳು ಕಳೆದರೂ, ಅವನ ಬರುವಿಕೆಯ ನಿರೀಕ್ಷೆ ವೃದ್ಧದಂಪತಿಗಳಲ್ಲಿ ಜೀವಂತವಾಗಿಯೇ ಇರುತ್ತದೆ. ಅವನು ಮನೆಯನ್ನು ಬಿಟ್ಟುಹೋದ ಕಾರ್‍ಅಣಗಳನ್ನು ಊಹಿಸುತ್ತಾ, ಮತ್ತೆ ಹಿಂದಿರುಗುವ ಕನಸನ್ನು ಕಾಣುತ್ತ, ಒಳಗಿರುವ ತಲ್ಲಣಗಳನ್ನು ಸುತ್ತಲಿರುವ ಜನರೊಂದಿಗೆ ಹಂಚಿಕೊಂಡು ಮನಸ್ಸಿನ ಭಾರವನ್ನು ಇಳಿಸಿಕೊಳ್ಳುವ ಬಗೆಯನ್ನು ಕಥೆ ಸೂಕ್ಷ್ಮವಾಗಿ ತೆರೆದಿಡುತ್ತದೆ.
ಮಕ್ಕಳನ್ನು ಕಳೆದುಕೊಂಡ ಶಂಕರಿಗೆ ಮನೋಸ್ಥ್ಯೆರ್ಯವನ್ನು ತುಂಬುವುದು ಗೋಪಾಲಯ್ಯನ ಜೀವನಧೈರ್ಯ ಹಾಗು ಬದುಕಿನಲ್ಲಿ ತಾನು ಕಂಡುಕೊಂಡ ನಂಬಿಕೆ. ಸ್ವಂತ ಮಗನಿಲ್ಲದಿರುವ ದುಸ್ಥಿತಿ ಜೀವನವನ್ನು ಕಾಡುತ್ತಿದ್ದರೂ, ನಾರ್‍ಆಯಣನೆಂಬ ಅನಾಥನಿಗೆ ಮಗನಿಗಿಂತಲೂ ಹೆಚ್ಚಿನ ಸ್ಥಾನವನ್ನು ಕೊಟ್ಟ ಉದಾರ ಜೀವಿ ಗೋಪಾಲಯ್ಯ. ಕಾಟುಮೂಲೆಯಂತ ಕಗ್ಗಾಡನ್ನು ಕಡಿದು, ಬಳಿಯಿರುವ ನೀರಿನ ಸೆಲೆಯನ್ನು ವ್ಯವಸಾಯಕ್ಕೆ ಒಡ್ಡಿಸಿಕೊಂಡು, ಕಷ್ಟ ವಾತಾವರಣದಲ್ಲೂ ಕೃಷಿಬೆಳೆಯನ್ನು ತೆಗೆಯುವ ಸಾಧನೆಯನ್ನು ಮಾಡಿದ ಸಾಹಸಿ. ಕಾಡನ್ನು ವ್ಯವಸಾಯ ಭೂಮಿಯನ್ನಾಗಿ ಮಾಡುವ ಗೋಪಾಲಯ್ಯನ ಸಾಹಸ ಕಾರ್ಯ ಎಂತವರ ಹೃದಯವನ್ನು ಹುರಿದುಂಬಿಸುತ್ತದೆ. ಮನೆಗೆ ಬಂದ ಪರಿಚಯವಿಲ್ಲದ ಅತಿಥಿಯಾದ ಶಿವರಾಮನನ್ನು, ಪಕ್ಕದ ತೋಟದ ದೇರಣ್ಣಗೌಡನನ್ನು, ಆಳು ಬಟ್ಯನನ್ನು ಆದರದಿಂದ ಆತ್ಮೀಯತೆಯಿಂದ ಕಾಣುವ ರೀತಿ ಗೋಪಾಲಯ್ಯನ ಸೌಜನ್ಯತೆ ಸಜ್ಜನತೆಯನ್ನು ಪ್ರತಿಬಿಂಬಿಸುತ್ತದೆ. ಓದುಗನ ಮನಸ್ಸಿಗೆ ಓರ್ವ ಧೀಮಂತ ವ್ಯಕ್ತಿಯ ಪರಿಚಯ ಮಾಡಿಕೊಡುತ್ತದೆ.
ಇದರ ಜೊತೆಗೆ ಓದುಗನಿಗೆ ಉಲ್ಲಾಸವನ್ನು, ಸೋಜಿಗವನ್ನು ಉಣಬಡಿಸುವುದು , ಪಶ್ಚಿಮಘಟ್ಟದ ಅರಣ್ಯ ಸಂಪತ್ತು. ಕಥೆಯಲ್ಲಿ ಬರುವ ಅರಣ್ಯ, ಕುಮಾರಪರ್ವತ ಹಾಗು ಇತರೆ ಬೆಟ್ಟಗಳ ವಿವರಣೆ, ಆ ಬೆಟ್ಟಗಳಿಂದ ಹಳ್ಳಿಗಳ ಹೊಲಗದ್ದೆಗಳಿಗೆ ನುಗ್ಗುವ ಆನೆ, ಕಾಟಿ, ಕಾಡುಹಂದಿಗಳ ದಾಂಧಲೆ, ಸುತ್ತಲಿನ ಹಳ್ಳಿಗಳಿಗೆ ಜೀವನಾಡಿಯಾಗಿರುವ ನದಿ ಕೆರೆಗಳ ಪರಿಚಯ ಕಣ್ಣಮುಂದೆ ಹಳೆಯ ಕಾಲದ ಕಾಡಿನಜೀವನವನ್ನು ಕಣ್ಣಮುಂದೆ ಬಿತ್ತರಿಸುತ್ತದೆ.
ಗೋಪಾಲಯ್ಯನ ಪಾತ್ರದಂತೆ ಕಥೆಯ ಉಳಿದ ಪಾತ್ರಗಳು ಬೆಳೆದಿಲ್ಲ. ಇಲ್ಲಿ ಲೇಖಕರಿಗೆ ಕಥೆಯ ಸಾಂದ್ರತೆಯನ್ನು ಹೆಚ್ಚಿಸುವ ಅವಕಾಶವಿದ್ದರೂ ಅದನ್ನು ಉಪಯೋಗಿಸಿಕೊಂಡಿಲ್ಲ. ಕಾದಂಬರಿಯನ್ನು ಪೂರ್ತಿ ಓದಿದ ಮೇಲೆ ನನಗೆ ಅನಿಸಿದ್ದು , ಇತರ ಪಾತ್ರಗಳೂ ಸಹ ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಪುಷ್ಟವಾಗಿ ಬೆಳೆದಿದ್ದರೆ, ಕಥೆಯ ದೃಷ್ಟಿವೈಶಾಲ್ಯತೆಯನ್ನು ವಿಸ್ತರಿಸಬಹುದಾಗಿತ್ತೆಂದು. ದೇರಣ್ಣ ಗೌಡ, ಬಟ್ಯರು ಬಂದೂ ಬಾರದ ಹಾಗೆ ಕಥೆಯ ಮುಖ್ಯವಾಹಿನಿಯಿಂದ ಮರೆಯಾಗಿ ನಿಲ್ಲುತ್ತಾರೆ. ನಾರ್‍ಆಯಣನ ಮನಸ್ಸಿನ ಆಗುಹೋಗುಗಳು ಕೇವಲ ಕಥೆಯ ಕೊನೆಯಲ್ಲಿ ಮಾತ್ರ ಕೊಂಚ ಇಣುಕಿ ನೋಡುತ್ತದೆ. ಶಿವರಾಮನ ಕೇವಲ ಒಬ್ಬ ಪ್ರೇಕ್ಷಕನಾಗಿ ನಿಲ್ಲುತ್ತಾನೆಯೇ ಹೊರತೂ ಘನ ಪಾತ್ರವಾಗಿ ಕಥೆಯ ಅಂತರಂಗದೊಂದಿಗೆ ಬೆಸೆದುಕೊಳ್ಳುವುದಿಲ್ಲ. ಇದೆಲ್ಲದರ ನಡುವೆಯೂ ಕಥೆಯು ತನ್ನ ಮಿಡಿತವನ್ನು ಉಳಿಸಿಕೊಳ್ಳುವುದು ಗೋಪಾಲಯ್ಯನ ಪಾತ್ರದ ಮೂಲಕವೆ. ಬೆಟ್ಟದಲ್ಲಿ ಹುಟ್ಟುವ ಈ ಪಾತ್ರ, ಬೆಟ್ಟದಲ್ಲಿಯೇ ಕಲಿತು, ಅಲ್ಲಿಯೇ ಅರಳಿ, ಬೆಟ್ಟದೊಂದಿಗೆ ಸಂವೇದಿಸುತ್ತ ಅದರ ಅಂತಸತ್ವವನ್ನರಿತು, ಅದನ್ನು ಪಳಗಿಸಿ ತನ್ನ ಜೀವನವನ್ನು ಅದರೊಂದಿಗೆ ಬೆಸೆದು ದೃಢವಾಗಿ ನಿಲ್ಲುವ ರೀತಿ ನಮ್ಮ ಮನಸ್ಸಿನಲ್ಲಿ ಆ ಸಾಹಸದ ಶಾಶ್ವತ ಮುದ್ರೆಯೊಂದನ್ನು ಒತ್ತದೆ ಬಿಡುವುದಿಲ್ಲ.
- ಚಂದ್ರಹಾಸ ( ೨೪ - ಜನವರಿ - ೨೦೧೫)