#ಅಕ್ಷರವಿಹಾರ_೨೦೨೪
ಕೃತಿ: ಮನೀಷೆ
ಲೇಖಕರು: ವಸುಧೇಂದ್ರ
ಪ್ರಕಾಶಕರು: ಛಂದ ಪುಸ್ತಕ, ಬೆಂಗಳೂರು
ಈ ಪುಸ್ತಕದ ಕುರಿತು ವಸುಧೇಂದ್ರ ಅವರೇ ಬರೆದ ಅನುಭವದ ಮಾತುಗಳನ್ನು ಫೇಸ್ಬುಕ್ನಲ್ಲಿ ಹಿಂದೊಮ್ಮೆ ಓದಿದ್ದೆ. ಆ ಲೇಖನದಲ್ಲಿ ಅವರು ಈ ಪುಸ್ತಕದಲ್ಲಿನ ಕತೆಗಳು ತಿರಸ್ಕೃತಗೊಂಡಿದ್ದು ಮತ್ತು ಪ್ರಕಾಶನಕ್ಕೆ ಅನುಭವಿಸಿದ ತೊಂದರೆಗಳು ಮತ್ತು ಇವುಗಳೆಲ್ಲದರ ಪರಿಣಾಮವಾಗಿ ಬರೆಯುವುದನ್ನೇ ನಿಲ್ಲಿಸಬೇಕೆಂದು ಆಲೋಚಿಸಿದ್ದರ ಕುರಿತು ಬರೆದುಕೊಂಡಿದ್ದರು. “ತೇಜೋ-ತುಂಗಭದ್ರಾ” ಕೃತಿಯನ್ನು ಓದಿ ನಂತರ ಇತರ ಹಲವಾರು ಪುಸ್ತಕಗಳನ್ನು ಓದಿದ ಮೇಲೆ ಅವರು ತಮ್ಮ ಬರವಣಿಗೆಯ ಪ್ರಾರಂಭಿಕ ಹಂತದಲ್ಲಿ ಯಾವ ತರಹ ಬರೆದಿರಬಹುದು ಎಂಬ ಕುತೂಹಲ ಸಹಜವಾಗಿ ಹುಟ್ಟಿಕೊಂಡಿತು. ಮನದಿಂಗಿತವನರಿತಂತೆ ವೀಣಾ ನಾಯಕ್ ಮೇಡಂ ಅವರು ವಿಭಾ ವಿಶ್ವನಾಥ್ ಅವರ ಪ್ರಾಯೋಜಕತ್ವದಲ್ಲಿ ಈ ಪುಸ್ತಕವನ್ನು ಬಹುಮಾನವಾಗಿ ಕಳುಹಿಸಿಕೊಟ್ಟರು. ವೀರಲೋಕದವರು ಆಯೋಜಿಸಿದ ಪುಸ್ತಕ ಸಂತೆ ಕಾರ್ಯಕ್ರಮದಲ್ಲಿ ವಸುಧೇಂದ್ರ ಅವರನ್ನು ಭೇಟಿಯಾಗಿ ಈ ಪುಸ್ತಕಕ್ಕೆ ಅವರ ಹಸ್ತಾಕ್ಷರವನ್ನು ಸಹ ಪಡೆದುಕೊಂಡದ್ದು ಒಂದು ಹೊಸ ಅನುಭವ. ನಾನು ಪುಸ್ತಕದ ಕುರಿತು ಓದಿದ್ದು,ಅದೇ ಪುಸ್ತಕ ಬಹುಮಾನವಾಗಿ ಸಿಕ್ಕಿದ್ದು, ಆರಂಭದ ಹತ್ತು ಹಲವು ತೊಡಕುಗಳನ್ನು ದಾಟಿ ಏಳನೆಯ ಮುದ್ರಣದ ಈ ಪುಸ್ತಕಕ್ಕೆ ಲೇಖಕರಿಂದ ಹಸ್ತಾಕ್ಷರ ಹಾಕಿಸಿಕೊಂಡಿದ್ದು, ಇವುಗಳನ್ನು ಒಟ್ಟಾಗಿ ಗಮನಿಸಿದರೆ ಏಕೆ ವಿಶೇಷ ಅನುಭವ ಎಂಬುದು ಸ್ಪಷ್ಟವಾದೀತು.
ಇನ್ನು ಇಲ್ಲಿರುವ ಆರು ಕತೆಗಳು ಸಹ ಲೇಖಕರ ಮೊದಲ ಪ್ರಯತ್ನ ಎಂಬ ಯಾವ ರಿಯಾಯಿತಿಯ ಅವಶ್ಯಕತೆಯನ್ನು ಬೇಡದಿರುವ ಕತೆಗಳು. “ಸಮಾಜದ ಮೌಢ್ಯಕ್ಕೆ ಬಲಿಯಾದ ಮಡಿ ಹೆಂಗಸರಿಗೆ” ಅರ್ಪಿತವಾದಂತಹ ಕತೆಗಳು ಒಂದು ತರಹದ ಗುಂಗಿನಲ್ಲಿ ನನ್ನನ್ನು ಹಿಡಿದಿಟ್ಟಿವೆ. ಈಗಿನ ಕಾಲವನ್ನು ಪರಿಗಣಿಸಿದರೆ ಈ ತರಹದ ಒಂದು ಕಾಲಘಟ್ಟವನ್ನು ದಾಟಿ ನಾವು ಮುಂದಕ್ಕೆ ಸಾಗಿರುವುದು ದುಃಖ ಮತ್ತು ಸಮಾಧಾನವನ್ನು ಒಟ್ಟಿಗೆ ಉಂಟುಮಾಡುತ್ತದೆ. ಆರು ಕತೆಗಳಲ್ಲಿ ಮೂರು ಕತೆಗಳು ಸಂಪೂರ್ಣವಾಗಿ ಕಿರಿ ಪ್ರಾಯದಲ್ಲಿಯೇ ವಿಧವೆಯರಾಗಿ ನರಕಯಾತನೆಯನ್ನು ಅನುಭವಿಸಿದ ಮಹಿಳೆಯರ ಬಗ್ಗೆ. “ನಮ್ಮ ವಾಜೀನ್ನು ಆಟಕ್ಕೆ ಸೇರಿಸಿಕೊಳ್ರೋ” ಕತೆಯಲ್ಲಿ ಮಡಿ ಹೆಂಗಸಾದ ಕಮಲಮ್ಮ ತೊನ್ನು ರೋಗದಿಂದ ಪೀಡಿತನಾದ ಮಗನ ಜೀವನವನ್ನು ಸಮಾಜದ ಮುಖ್ಯವಾಹಿನಿಗೆ ಸೇರಿಸುವ ಪ್ರಯತ್ನದ ಕತೆ. ಗಂಡನನ್ನು ಕಳೆದುಕೊಂಡ ದುಃಖದ ಜೊತೆಗೆ ಇರುವ ಒಬ್ಬ ಮಗನನ್ನು ಅನಿಷ್ಠದಂತೆ ಕಾಣುವ ಸಮಾಜ, ಇದರ ಒಳಹೊರಗುಗಳ ಅರಿವಿಲ್ಲದೆ ಆಗಾಗ ತಾಯಿಯ ಕೋಪಕ್ಕೆ ಬಲಿಯಾಗುವ ವಾಜಿ, ಈ ಇಬ್ಬರ ಮನದೊಳಗೆ ನಡೆದಿರಬಹುದಾದ ಸಂಘರ್ಷಗಳು ಯಾವ ರೂಪದ್ದಿಬಹುದು… ಸಾಮಾಜಿಕ ನೀತಿ ನಿಯಮಗಳ ಹೆಸರಿನಲ್ಲಿ ಈ ಮನಸ್ಸುಗಳ ಮೇಲೆ ಎಂತಹಾ ದಾಳಿಯಾಗಿರಬಹುದು ಎಂದು ಯೋಚಿಸಿದರೆ ಮನಸ್ಸು ಮ್ಲಾನವಾಗುವುದು ಖಂಡಿತಾ. ಇದೇ ರೀತಿ “ಹುಲಿಯ ಬೆನ್ನೇರಿ” ಮತ್ತು “ಮೌಢ್ಯೋಪಾಸನೆ” ಕತೆಗಳು ತಮಗಾದ ಅನ್ಯಾಯವನ್ನು ಗಂಭೀರವಾಗಿ ಪರಿಗಣಿಸದೆ ಮಡಿಯಲ್ಲಿಯೇ ತಮ್ಮ ವ್ಯಕ್ತಿತ್ವವನ್ನು ಕಂಡು ರೂಪಿಸಿಕೊಂಡ ಮಹಿಳೆಯರ ಬಗ್ಗೆ ವಿಚಾರ ಮಾಡುವಾಗ ಹೃದಯ ಭಾರವಾಗುತ್ತದೆ.
“ಮನೀಷೆ” ಕತೆಯು ಒಂದು ಬಗೆಯಲ್ಲಿ ನಮ್ಮ ಇಂದಿನ ಸಮಾಜದ ಕತೆ. ಈ ಕತೆಯ ವಸ್ತು ಯಾವ ಕಾಲಕ್ಕೂ ಸಲ್ಲುವುದು ಎಂದು ನನ್ನ ಅಭಿಮತ. ನನಗೇನು ಬೇಕು ಎಂಬ ಗೋಜಿಗೆ ಹೋಗದೆ ಬಹುತೇಕರು ನಡೆದ ದಾರಿಯೇ ಸರಿಯಾದ ದಾರಿಯೆಂದು ತಿಳಿದು, ಅದರಲ್ಲಿ ಬಹುದೂರ ಸಾಗಿ ದಿಕ್ಕೆಟ್ಟು ನಿಂತು, ಹಿಂತಿರುಗಿ ನೋಡಿದಾಗ ವಾಪಾಸು ಹೋಗಲು ಆಗದೇ, ಮುಂದೆ ಹೋಗುವ ದಾರಿ ಸ್ಪಷ್ಟವಿಲ್ಲದೆ, ಸಮೂಹದಲ್ಲಿ ಸ್ವಂತಿಕೆಯನ್ನೇ ಕಳೆದುಕೊಂಡು ಬದುಕು ಸಾಗಿಸುವ ಬವಣೆಯೇ ಇಲ್ಲಿನ ಕತೆ. ಇದರ ಜೊತೆಗೆ ಒಂದು ಹಂತವನ್ನು ದಾಟಿದ ಮೇಲೆ ನಾವು ಬಯಸುವ ಆರಾಮದ, ವಿರಾಮದ ಬದುಕು ಸಹ ನಮ್ಮ ಸ್ವಂತಿಕೆಯನ್ನು ನಾಶಪಡಿಸುವುದು ಎಂಬುದನ್ನು ಸಹ ಕತೆಯು ಓದುಗರಿಗೆ ದಾಟಿಸುತ್ತದೆ. “ಬಾಗಿಲಿನಾಚೆ ಪೋಗದಿರಲೋ ರಂಗ” ಕತೆಯ ಹೆಸರೇ ಹೇಳುವಂತೆ ಅತಿಯಾದ ಮುದ್ದು ಮಾಡುವಿಕೆ ಮಕ್ಕಳನ್ನು ಬಾಲ್ಯ ಸಹಜವಾದ ಅನುಭವಗಳಿಂದ ವಂಚಿತವಾಗಿಸುವ ದುರಂತದ ಕುರಿತಾದ ಕತೆ. ಬೆರಗುಗಣ್ಣಿನ, ಮುಗ್ಧ ಮನಸ್ಸಿನ ಮೂಲಕ ದೊರಕುವ ಪ್ರಾಪಂಚಿಕ ಅನುಭವಗಳ ಜೊತೆಗೆ ವರ್ಣರಂಜಿತವಾಗಬೇಕಿದ್ದ ಬಾಲ್ಯವನ್ನು ಅತಿಯಾದ ಕಾಳಜಿ ಕೂಪ ಮಂಡೂಕದಂತೆ ಏಕತಾನತೆಗೆ ದೂಡುವುದು ಎಷ್ಟು ಸರಿ ಎಂಬ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳಬೇಕು. ಲೇಖಕರು ಉದಾಹರಿಸಿದ ಸಂಗತಿಗಳು, ಕತೆಗಳಿಗೆ ಬಳಸಿಕೊಂಡ ಉಪಮೆಗಳನ್ನು ಓದುವುದೇ ಒಂದು ಸುಖ.
ಒಂದು ತೃಪ್ತಿದಾಯಕ ಓದಿನೊಂದಿಗೆ ಈ ವರ್ಷದ ಓದಿಗೆ ಒಂದು ಪೂರ್ಣ ವಿರಾಮವನ್ನು ಹಾಕುತ್ತಿರುವೆ… ಮುಂದಿನ ವರ್ಷ ಮತ್ತೆ ಸಿಗೋಣ…
ನಮಸ್ಕಾರ,
ಅಮಿತ್ ಕಾಮತ್