ಇಲ್ಲಿ ಐತಿಹಾಸಿಕ ಪಾತ್ರಗಳು, ಸ್ಥಳಗಳು ಇವೆ.. ಆದರೆ ಇದು ಐತಿಹಾಸಿಕ ಕಾದಂಬರಿಯಲ್ಲ.
ಇಲ್ಲಿ ಪತ್ತೇದಾರಿಕೆಯ ಪಾತ್ರಗಳು, ಸನ್ನಿವೇಶಗಳು ಇವೆ.. ಆದರೆ ಇದು ಪತ್ತೆದಾರಿಕೆ ಕಾದಂಬರಿಯಲ್ಲ.
ಇಲ್ಲಿ ವಿಜ್ಞಾನಿಗಳ ಪಾತ್ರಗಳು, ಸಂಶೋಧನೆಗಳು ಇವೆ.. ಆದರೆ ಇದು ವೈಜ್ಞಾನಿಕ ಕಾದಂಬರಿಯಲ್ಲ.
ಇಲ್ಲಿ ಪ್ರೀತಿ, ದ್ವೇಷ, ಸಂಕಟ, ನೋವಿನ ಪಾತ್ರಗಳು ಸನ್ನಿವೇಶಗಳಿವೆ.. ಆದರೆ ಭಾವುಕತೆಯ ಕಾದಂಬರಿಯಲ್ಲ.
ಒಟ್ಟಿನಲ್ಲಿ ಹೇಳುವುದಾದರೆ ಇದು ಎಲ್ಲಾ ವಿಷಯಗಳನ್ನ ಒಳಗೊಂಡ ವಿಭಿನ್ನ ಅಭಿರುಚಿಯ ಕಾದಂಬರಿ.
ಕೆ ಎನ್ ಗಣೇಶಯ್ಯನವರು ನನ್ನ ಮೆಚ್ಚಿನ ಬರಹಗಾರಲ್ಲಿ ಒಬ್ಬರು. ನಾನು ಓದಿರೋ ಅವರ ಎಲ್ಲಾ ಕಾದಂಬರಿಗಳಲ್ಲೂ ಮೇಲಿನ ವಿಷಯಗಳು ಇದ್ದಾವೆ.
ಇತಿಹಾಸ, ವರ್ತಮಾನ, ವಿಜ್ಞಾನ, ಮಾನವನ ನಡವಳಿಕೆಗಳು ಎಲ್ಲವನ್ನೂ ಒಂದರೊಳಗೊಂದು ಬೆಸೆಯುತ್ತಾ, ಓದುಗನಲ್ಲಿ ಕುತೂಹಲ ಬೆಳಸುತ್ತಾ, ಕೊನೆಯಲ್ಲಿ connect the dots ಅಂತಾರಲ್ಲ, ಹಾಗೆ ಎಲ್ಲವನ್ನು ಒಟ್ಟಿಗೆ ತಂದು ನಿಲ್ಲಿಸಿ ಅಚ್ಚರಿ, ಅವ್ಯಕ್ತ ಭಾವನೆಗೆ ಒಳಪಡಿಸಿ ಮುಗಿಸುತ್ತಾರೆ.
ಕನಕ ಮುಸುಕು ಕಾದಂಬರಿಯಲ್ಲೂ ಕೂಡ ಮೇಲಿನ ಎಲ್ಲಾ ವಿಷಯಗಳು ಇವೆ.
ಹಾಂಕಾಂಗ್ ನಲ್ಲಿ ಯಾವುದೇ ಕಾರಣವಿಲ್ಲದೆ ದಂಪತಿಯ ಕೊಲೆಯ ಚಿತ್ರಣದೊಂದಿಗೆ ಶುರುವಾಗುತ್ತದೆ ಕಾದಂಬರಿ.
ಆ ಕೊಲೆಗೆ ಕಾರಣವೇನು ಎಂಬುದು ತಿಳಿಯುವುದು ಕಾದಂಬರಿ ಅಂತ್ಯಭಾಗದಲ್ಲಿ. ಆದರೆ
ಕಾದಂಬರಿಯ ಹರವು ಇರುವುದು ಬೇರೆ. ಜೈನ ಧರ್ಮಕ್ಕೆ ಸಂಬಂಧಪಟ್ಟ ನಿಧಿಯ ಬಗ್ಗೆ. ಅದನ್ನು ಹುಡುಕುತ್ತಿರುವ ಕಳ್ಳರ ಗುಂಪು ಒಂದು ಕಡೆ, ಆದರ ರಕ್ಷಣೆಯ ಭಾರ ಹೊತ್ತಿರುವ ಗುಂಪು ಒಂದು ಕಡೆ, ಅದರ ಬಗ್ಗೆ ಸಂಶೋಧನೆ ಮಾಡುತ್ತಿರುವ ಪಾತ್ರ ಒಂದು ಕಡೆ , ಹೀಗೆ ಮೂರು ಪ್ರಕಾರಗಳು ಒಂದರೊಳಗೊಂದು ಬೆಸುದುಗೊಂಡು ನಿಧಿಯನ್ನೇ ಸುತ್ತುತ್ತಿರುತ್ತವೆ.
ಸಂಶೋಧನ ವಿದ್ಯಾರ್ಥಿ ಡಾ|| ಪೂಜಾ, ಅವಳ ಪತಿ ವಿನೋದ್ ಮತ್ತು ಸಂಸಾರ, ಅವಳ ಪ್ರೊಫೆಸರ್ ಡಾ|| ರಾವ್, ಅವಳು ನಿಧಿಯ ಬಗ್ಗೆ.. ಜೈನಧರ್ಮದ ಬಗ್ಗೆ.. ಮಾಡುವ ಸಂಶೋಧನ ವಿವರಗಳು, ಪತಿಯ ಜತೆಯಲ್ಲಿ ಶ್ರವಣಬೆಳಗೊಳದಲ್ಲಿ ಮಾಡುವ ಸಾಹಸ, ಶಾಂತಲಾ ವಿಷ್ಣುವರ್ಧನ ಸಂಬಂಧದ ಬೇರೆ ರೀತಿ ವ್ಯಾಖ್ಯಾನ (ಇದಂತೂ ಅಚ್ಚರಿಪಡಿಸುತ್ತದೆ), ಸೋಮನಾಥಪುರ, ಹಳೇಬೀಡಿನಲ್ಲಿರುವ ಶಿಲ್ಪ ಕೆತ್ತನೆಯ ವಿವರಗಳು, ಅಂತಾರಾಷ್ಟ್ರೀಯ ಕಳ್ಳರ ಗುಂಪು ಮತ್ತು ಕೋಡ್ ವರ್ಡ್ಗಳಲ್ಲಿ ಚಿತ್ರಿತವಾಗಿರುವ ಅವರ ಗುಂಪಿನ ಪಾತ್ರಗಳು ಮತ್ತು ತಂತ್ರಗಳು, ಜೈನ ಕಲಾ ರಕ್ಷಣಾ ವೇದಿಕೆ.. ಅದರ ಅಧ್ಯಕ್ಷ ಬಿ.ಪಿ. ಮತ್ತು ಆ ವೇದಿಕೆಯ ನಿಗೂಢ ನಡವಳಿಕೆಗಳು, ಜೈನಧರ್ಮದ ನಿಗೂಢ ಸ್ಥಳ, ಕೇಶವಭಟ್ಟನ ಪುಟ್ಟ ಕಥೆ, ಕಂಬಳ್ಳಿಯ ಬಸದಿ ಚಿತ್ರಣ, ಹೀಗೆ ಮುಂತಾದವು ಒಂದರೊಳಗೊಂದು ಮಿಳಿತವಾಗಿವೆ.
ಮೊದಲಿನಿಂದ ಕೊನೆಯವರೆಗೂ ಕುತೂಹಲ ಕಾಯ್ದುಕೊಂಡಿರುವ, ಕಥೆಯ ನಡುವೆ ಬರುವ ವಿವರಗಳನ್ನು ಸಾಮಾನ್ಯ ಓದುಗನಿಗೂ ಅರ್ಥವಾಗುವಂತೆ ಕಟ್ಟಿಕೊಟ್ಟಿರುವ, ಮುಗಿದ ಮೇಲೂ ಕಥೆಯನ್ನೇ ಧ್ಯಾನಿಸಿ.. ಅದರಲ್ಲಿ ಬರುವ ಸ್ಥಳಗಳನ್ನು ನೋಡಲು ಪ್ರೇರೇಪಿಸುವ, ಒಂದೇ ಬಾರಿಗೆ ಓದಿ ಮುಗಿಸಬೇಕು ಎಂಬ ಆಸೆ ಹುಟ್ಟಿಸುವ, ಒಟ್ಟಿನಲ್ಲಿ ಓದುಗನಿಗೆ ಇಷ್ಟವಾಗುವ ವಿಶಿಷ್ಟ ಕಾದಂಬರಿ ಇದು.