ಮರೆಯಲಾಗದ ಸಾಮ್ರಾಜ್ಯವಾದ ವಿಜಯನಗರದ ಸಾಮ್ರಾಜ್ಯದ ಇತಿಹಾಸವನ್ನು ಅನಕೃ ಅವರು 1954ರಿಂದ ಶುರುಮಾಡಿದರು. ಕನ್ನಡಲ್ಲಿ ಹಲವಾರು ಲೇಖಕರು ವಿಜಯನಗರದ ಇತಿಹಾಸದ ಮೇಲೆ ಸಾಹಿತ್ಯದ ಬೆಳಕನ್ನು ಚೆಲ್ಲಿದ್ದಾರೆ. ಹಾಗೆಯೇ ವಿದೇಶಿ ಇತಿಹಾಸತಜ್ಞರೂ ಕೂಡ ಶೋಧನೆಯಲ್ಲಿ ತೊಡಗಿ ಬೃಹತ್ ಪುಸ್ತಕಗಳನ್ನು ಬರೆದಿದ್ದಾರೆ. ಹತ್ತು ಸಂಪುಟಗಳಲ್ಲಿ ವಿಜಯನಗರ ಸಾಮ್ರಾಜ್ಯವನ್ನು ಚಿತ್ರಿಸಲು ಹೋರಾಟ ಅನಕೃ ಅವರು ಪ್ರಾರಂಭಿಸಿದ್ದು ವಿಜಯನಗರ ಸಾಮ್ರಾಜ್ಯದ ಉದಯದ ಬಗ್ಗೆ. ಒಂದು ಕಾಲದಲ್ಲಿ ನೆರೆಹೊರೆಯರ ಮುಸಲ್ಮಾನ ದಂಡನಾಯಕರಿಂದ ತನ್ನ ಸತ್ವವನ್ನು ಕಳೆದುಕೊಂಡಿದ್ದ ಭಾರತ ರಾಷ್ಟ್ರವನ್ನು ಮತ್ತೆ ಕಾಂತಿಯುತವಾಗಿ ಮಾಡಲು ಪಣತೊಟ್ಟವರು ಶ್ರೀ ವಿದ್ಯಾರಣ್ಯರು. ಮೊದಲು ಶ್ರೀ ಶಂಕರಾನಂದರ ಆಶ್ರಮದಲ್ಲಿ ಶಿಷ್ಯರಾಗಿದ್ದ ಮಾಧವ ಮತ್ತು ಸಾಯಣರನ್ನು ಕರೆದು ಶಂಕರಾನಂದರು ಹಿಂದೂ ಸಂಸ್ಕೃತಿಯನ್ನು ಉಳಿಸಲು ಅವರಿಗೆ ಆಯಾ ಜವಾಬ್ದಾರಿಯನ್ನು ನೀಡಿದರು. ಅದರಂತೆಯೇ ಮಾಧವರು ಕಂಚಿಗೆ ತೆರಳಿ ಅಲ್ಲಿ ವಿದ್ಯಾತೀರ್ಥ ಮಹಾಸ್ವಾಮಿಗಳಿಂದ ದೀಕ್ಷೆಪಡೆದು ಶ್ರೀ ವಿದ್ಯಾರಣ್ಯರಾಗಿ ಶೃಂಗೇರಿಗೆ ಮರಳುತ್ತಾರೆ. ಹಾಗೆಯೆ ಸಾಯಣರು ಭಾರತದ ಮೂಲ ಗ್ರಂಥಗಳಾದ ವೇದಗಳಿಗೆ ಭಾಷ್ಯವನ್ನು ಬರೆಯಲು ಮುಂದಾಗುತ್ತಾರೆ. ಆಗ ಅನೆಗೊಂದಿಯು ಹೊಯ್ಸಳ ರಾಜ ಬಲ್ಲಾಳರ ಮಾಂಡಲೀಕರಾಗಿ ನಾಯಕರು ಅಲ್ಲಿ ಆಳುತ್ತಿದ್ದರು. ಮೇಲಿನ ಕಾಲಘಟ್ಟದಲ್ಲಿ ಜಂಬುಕೇಶ್ವರರಾಯ ಅಲ್ಲಿಯ ರಾಜನಾಗಿದ್ದ. ಅವನಿಗೆ ಗಂಡುಸಂತಾನವಿರಲಿಲ್ಲ ಆದರೆ ಗಂಡಸಿನಷ್ಟೇ ಧಾಡಸಿಯಾಗಿದ್ದ ಪದ್ಮಾವತಿ ಎಂಬ ಮಗಳಿದ್ದಳು. ಅವಳನ್ನು ಮಗನೆಂದು ಭಾವಿಸಿ ರಾಜ್ಯ ನಿರ್ವಹಣೆಗೆ ಅವಶ್ಯವಾದ ಶಿಕ್ಷಣ ಕೊಡಿಸಿದ್ದ. ಅವನ ಅಧಿಪತ್ಯದಲ್ಲಿ ಪ್ರಮುಖರಾದವರು ಹರಿಹರ ಮತ್ತು ಬುಕ್ಕರಾಯ. ತುಘಲಕ್ ಸಂತತಿಯ ಮೊಹಮ್ಮದ್ ಬಿನ್ ತುಘಲಕ್ ಆನೆಗೊಂದಿಯ ಮೇಲೆ ದಂಡೆತ್ತಿ ಬಂದು ಅದನ್ನು ತನ್ನ ಅಧೀರದಲ್ಲಿ ಇಟ್ಟುಕೊಳ್ಳುತ್ತಾನೆ. ಆದರೆ ಅವನಿಗೆ ಆಶ್ಚರ್ಯವಾದದ್ದು ಅಲ್ಲಿಯ ಸಂಪತ್ತು ಸಿಗದೇ ಇರುವುದು. ಎಷ್ಟು ಹುಡುಕಾಡಿದರೂ ಸಿಗದೇ ಇದ್ದಾಗ ಅವನು ಜಂಬುಕೇಶ್ವರರಾಜನ ಮಂತ್ರಿ ದೇವರಾಯನಿಗೆ ಆನೆಗೊಂದಿಯ ಮಾಂಡಲೀಕನನ್ನಾಗಿ ಮಾಡಿ ಪ್ರತಿವರ್ಷ ಕಾಣಿಕೆಯೊಂದಿಗೆ ಬರಲು ಹೇಳಿಕಳುಹಿಸಿದನು. ಇತ್ತ ಪದ್ಮಾವತಿ, ಹಕ್ಕ-ಬುಕ್ಕರು ವಿದ್ಯಾರಣ್ಯರ ಆಶ್ರಯದಲ್ಲಿ ಅವಕಾಶಕ್ಕಾಗಿ ಕಾದುಕುಳಿತಾಗ ದೇವರಾಯನ ಆಗಮನವಾಗಿ ಹಕ್ಕ-ಬುಕ್ಕರಲ್ಲಿ ವಿಜಯದ ದುಂದುಭಿ ಸದ್ಯದಲ್ಲೇ ಮೂಡಲಿದೆ ಎಂಬ ಆಶಾಭಾವ ಮೂಡುತ್ತದೆ. ವಿದ್ಯಾರಣ್ಯರ ಆಶಯದಂತೆ ಹಕ್ಕ-ಬುಕ್ಕರು ಆನೆಗೊಂದಿಗೆ ಮುತ್ತಿಗೆ ಹಾಕಿ ಅಲ್ಲಿಯ ದಳದ ನಾಯಕ ಅಯೂಬ್ ಖಾನನ್ನು ಅವನ ಸ್ವಸ್ಥಾನಕ್ಕೆ ಅಂದರೆ ದಿಲ್ಲಿಗೆ ಓಡಿಸುತ್ತಾರೆ, ಅಲ್ಲಿ ವಿಜಯನಗರದ ಸಾಮ್ರಾಜ್ಯ ಉದಯಿಸುತ್ತದೆ. ಹೊಯ್ಸಳೇಶ್ವರ ಬಲ್ಲಾಳರಾಯನು ಹರಿಹರರಾಯನ ಪಟ್ಟಾಭಿಷೇಕಕ್ಕೆ ಬಂದು ಅವನಿಗೆ ಮಹಾಮಂಡಲೇಶ್ವರ ಎಂಬ ಬೀರುದನ್ನು ನೀಡುತ್ತಾನೆ. ಹರಿಹರನಿಗೆ ಜಂಬೂಜೇಶ್ವರರಾಯಣ ಮಗಳಾದ ಪದ್ಮಾವತಿಯೊಂದಿಗೆ ಮದುವೆಯಾಗುತ್ತದೆ. ಈ ಎಲ್ಲ ಕ್ಷಣಗಳನ್ನು ಪ್ರೀತಿಯಿಂದ ನೋಡುತ್ತಿದ್ದವರು ಶ್ರೀ ಭಾರತೀಕೃಷ್ಣತೀರ್ಥರಿಂದ "ಕರ್ನಾಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯ" ಎಂಬ ಬಿರುದಾಂಕಿತರಾದ ಶ್ರೀ ವಿದ್ಯಾರಣ್ಯ ಮಹಾಸ್ವಾಮಿಗಳು. ಅವರಂದು ವಿಜಯಶಾಲಿಯಾಗಿದ್ದರು - ಧರ್ಮರಕ್ಷಣೆಯಲ್ಲಿ.