ವೈದೇಹಿಯವರ ಕಥೆಯಾಧಾರಿತ ಅಮ್ಮಾಚಿಯೆಂಬ ನೆನಪು, ಗುಲಾಬಿ ಟಾಕೀಸ್ ಚಿತ್ರಗಳನ್ನು ನೋಡಿದಾಗ ಅವರ ಪುಸ್ತಕಗಳನ್ನೊಮ್ಮೆ ಓದಬೇಕೆಂದುಕೊಂಡಿದ್ದೆ. ನಾನು ಓದಿದ ವೈದೇಹಿಯವರ ಮೊದಲ ಪುಸ್ತಕ ಅಸ್ಪೃಶ್ಯರು ಜಾತಿ ವ್ಯವಸ್ಥೆಯ ಆಧಾರದ ಮೇಲೆ ರಚಿಸಲಾಗಿದೆ. ಈ ಕಾದಂಬರಿ ಕುಂದಾಪುರ ಭಾಗದ ಅಂದಿನ ಕಾಲದ ಜನ ಜೀವನ ಚಿತ್ರಿಸುತ್ತದೆ. ಜೊತೆಗೆ ಕುಂದಾಪ್ರ ಕನ್ನಡ ಹಾಗು ಅಲ್ಲಿನ ಗ್ರಾಮ್ಯ ಸೊಗಡಿನ ಕಂಪನ್ನು ಬೀರಿದೆ.
ಅಸ್ಪೃಶ್ಯ ಎಂದರೆ ಮುಟ್ಟಲಾಗದ ಎಂಬ ಅರ್ಥಕೊಡುವುದಲ್ಲವೆ. ಈ ಕಾದಂಬರಿ ಅಸ್ಪೃಶ್ಯತೆಯ ಹಲವೂ ಆಯಾಮಗಳನ್ನು ಕೊಡುವ ಕೃತಿಯಾಗಿದೆ. ಬರೀ ಕೀಳು ಜಾತಿಯವರನ್ನು ಮುಟ್ಟಿಸಿಕೊಳ್ಳುವುದು ಅಥವಾ ಮುಟ್ಟುವುದಲ್ಲದ ಅಸ್ಪೃಶ್ಯತೆಯೊಂದಿಗೆ ಇಲ್ಲಿ ಮಡಿ ಮೈಲಿಗೆಗಳ ಕಟ್ಟು ಪಾಡಿಗೆ ಬಿದ್ದು ನೆಮ್ದದಿಯ ಜೀವನ ಅಸ್ಪೃಶ್ಯಗೊಂಡಿದೆ. ಗಂಡ ಹೇಳಿದಂತೆ ಕೇಳುವ, ಹೊಡೆದರೆ ಹೊಡೆಸಿಕೊಳ್ಳುವ ಮದುವೆಯಾದ ಹೆಂಗಸಿನ ಭಾವನೆಗಳು ಅಸ್ಪೃಶ್ಯಗೊಂಡಿದೆ. ಮನೆಮಗಳು ತನ್ನ ಭವಿಷ್ಯವನ್ನು ತಾನೇ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಆಸ್ಪೃಶ್ಯಗೊಂಡಿದೆ.
ಇಲ್ಲಿ ಯಾರನ್ನ ದೂರುವುದೆನ್ನುವ ಪ್ರಶ್ನೆಗಳು ಸುಳಿಯುತ್ತಲೆ ಇರುತ್ತದೆ. ಅತ್ಯಂತ ಕೀಳು ಜಾತಿಯಲ್ಲಿ ಹುಟ್ಟಿದವಳನ್ನು ಬ್ರಾಹ್ಮಣನೊಬ್ಬ ಮದುವೆಯಾಗುತ್ತಾನೆ. ನೀನು ಜಾತಿ ಕೆಡಿಸಿದೆಯಂತ ಅವಳ ಮನೆಯವಳು ಅವಳನ್ನು ಮನೆಯಿಂದ ಹೊರಹಾಕುತ್ತಾರೆ. ಅವಳ ಹೆರಿಗೆ ಸಮಯದಲ್ಲಿ ಅವಳ ಗಂಡನ ಮನೆಯವರು ಕೆಲವೊಬ್ಬರು ಅವಳ ಆರೈಕೆಗೆ ಮುಂದಾಗುವವರೇ ಹೊರತು ಅವಳ ಮನೆಯಿಂದ ಒಬ್ಬರು ಬಂದವರಿಲ್ಲ. ಈಗ ಕಾಡುವ ಪ್ರಶ್ನೆ ಏನೆಂದರೆ ನಿಜವಾದ ಅಸ್ಪೃಶ್ಯರು ಮೇಲು ಜಾತಿಯವರ ಆಥವಾ ಕೀಳು ಜಾತಿಯವರ? ಹೀಗೆ ಕೆಲವೊಂದು ಸಂದರ್ಭ ನಮ್ಮನ್ನು ನಾವೇ ಪ್ರಶ್ನಿಸುವಂತೆ ಮಾಡುತ್ತದೆ.
ನೀವ್ಯಾಕೆ ಓದಿ ಉದ್ದಾರವಾಗುದಿಲ್ಲವೆಂದು ಹೀಗೆ ಮೇಲ್ಜಾತಿಯವರು ಕೆಳ ಜಾತಿಯವರನ್ನು ಕೇಳಿದಾಗ, 'ನಾವು ಓದಿ ಕೆಲಸ ಹಿಡಿದರೆ ನಿಮ್ಮ ಮನೆಯ ತೆಂಗಿನ ಮರ ಹತ್ತುವುದ್ಯಾರು? ಬಾವಿ ಕೆಸರು ತೆಗೆಯುದ್ಯಾರು? ನೀರು ಹೊರುವುದ್ಯಾರು? ನಮಗೆ ಇಷ್ಟೇ ಸಾಕು ಇದರಲ್ಲಿಯೇ ಜೀವನ ಸಾಗಿಸುತ್ತೇವೆ. ಓದು ಕೆಲಸವೆಲ್ಲ ನಮಗಲ್ಲವೆಂದು ಅವರ ಮಿತಿಯನ್ನು ಅವರೇ ರೂಪಿಸಿಕೊಂಡಿರುವಾಗ ಅವರನ್ನು ಉದ್ದಾರ ಮಾಡುವುದಾದರೂ ಯಾರು?
ತಮಗಿಂತ ಮೇಲ್ಜಾತಿಯವರು ಮುಟ್ಟಿಸಿಕೊಂಡಾಗಾ
' ಏನಾಗುತ್ತದೆ ನಾವೂ ಮನುಷ್ಯರೆ' ಎನ್ನುವವರು ತಮಗಿಂಗ ಕೀಳು ಜಾತಿಯವರನ್ನು ಮುಟ್ಟಿಕೊಂಡಾಗ ಮಡಿಯಂತ ಓಡಿ ಹೋಗಿ ಸ್ನಾನ ಮಾಡುತ್ತಾರೆ. ಇಂತಹ ಮನಸ್ಥಿತಿಗೆ ಔಷಧಿಯಾದರೂ ಎಲ್ಲಿಂದ ಹುಡುಕುವುದು?
ಇನ್ನೂ ಹೇಳಬೇಕೆಂದರೆ ಕೆಲವೊಂದು ಪಾತ್ರಗಳು ತುಂಬಾ ಕಾಡುವುದು. ಮಡಿ, ಮೈಲಿಗೆಯಿಂದ ತುಂಬಿರುವ ಮನೆಯಲ್ಲಿ ಧೈರ್ಯವಾಗಿ ಎಲ್ಲರನ್ನು ಎದುರಿಸುವ ಸರೋಜ ತುಂಬ ಇಷ್ಟವಾಗುತ್ತಾಳೆ. ನನ್ನ ಅಕ್ಕನ ತರ ಭಾವನೆ ಸತ್ತ ಬಾವನಂತ ಗಂಡನನ್ನು ಮದುವೆಯಾಗುವ ಬದಲು ನನ್ನನ್ನು ಸುಖವಾಗಿ ನೋಡಿಕೊಳ್ಳುವವನು ಕೀಳುಜಾತಿಯವನಾದರೂ ಆಗಬಹುದು ಎಂದು ಧೈರ್ಯದಿಂದ ಹೇಳುತ್ತಾಳೆ. ಹಾಗೇ ವಾಸುದೇವ ಆಚಾರ್ಯ, ಶೀನ, ಭಾಸ್ಕರ, ಶಾರಿ, ಪುಟ್ಟ, ಶಿವ ಪಾತ್ರಗಳು ತುಂಬಾ ಚೆನ್ನಾಗಿರುವವು.
ಬಾಲ್ಯದಲ್ಲಿ ಆಡಿದ ಆಟಗಳು. ತೆಂಗಿನ ಓಲೆಯ ವಾಚು, ಪಿಂಪಿರ್ಕಿ (ವಿಸೀಲು), ಪೇಪರ್ ದೋಣಿ, ಹಲಸಿನ ಹಪ್ಪಳ, ಮಹಡಿ ಮನೆ ಹೀಗೆ ಇಲ್ಲಿ ಬರುವ ಕೆಲವೊಂದು ಸನ್ನೀವೇಶಗಳು 20-25 ವರ್ಷಗಳ ಹಿಂದಕ್ಕೆ ಕರೆದುಕೊಂಡು ಹೋಗಿತ್ತು. ಮಕ್ಕಳ ತುಂಟಾಟ, ಅವರ ಕೂತೂಹಲ, ಅವರು ಕೇಳುವ ಪ್ರಶ್ನೆಗಳು, ಭೂತದ ಕತೆಗಳು ಹಳೆಯ ನೆನಪುಗಳನ್ನಂತು ಮೆಲುಕು ಹಾಕಿಸಿತ್ತು. ಇದರಲ್ಲಿ ಬರುವ ಮಕ್ಕಳ ಪಾತ್ರಗಳಲ್ಲಿ ನಾನು ಬೇರಂತೆ ಅನಿಸಿತ್ತು.
ಭೈರಪ್ಪ, ಕಾರಂತರನ್ನು ಇಷ್ಟಪಡುವವರಿಗೆ ಈ ಕಾದಂಬರಿ ಇಷ್ಟವಾಗುದೇನು ಕಷ್ಟವಲ್ಲ. ಸಮಾಜದ ಪಿಡುಗುಗಳು, ಆಚಾರ ವಿಚಾರಗಳು, ಮನುಷ್ಯನ ಹಾಗೇ ಸಮಾಜದ ಮೇಲೆ ಹೇಗೆ ಪ್ರಭಾವ ಬೀರುವುದೆಂದು ತಿಳಿಸಿ ಕೊಡುವ ಈ ಕಾದಂಬರಿ ಪ್ರತಿಯೊಬ್ಬರು ಓದಬೇಕಾಗಿರುವ ಪುಸ್ತಕ.