ಹುಚ್ಚು ಮನಸ್ಸಿನ ಹತ್ತು ಮುಖಗಳು
ಡಾ. ಕೆ. ಶಿವರಾಮ ಕಾರಂತ
ಕಾರಂತರ ಜೀವನವೃತ್ತವನ್ನು ಅವರ ಕೆಲವು ಮಿತ್ರರಿಗೆ ಕುತೂಹಲಕಾರಿಯಾಗಿ ಕಂಡುದರಿಂದ ಅವರು ಅದನ್ನು ಬರೆಯುತ್ತೇವೆಂದು ಉತ್ಸುಕತೆ ತೋರಿಸಿದಾಗ “ನೀವು ನನ್ನನ್ನು ಕೊಲ್ಲಬೇಕಿಲ್ಲ, ನನ್ನ ಆತ್ಮಹತ್ಯೆಯನ್ನು ನಾನೇ ಮಾಡಿಕೊಳ್ಳುತ್ತೇನೆಂದು “ ಕಾರಂತರು ಪರಿಹಾಸ್ಯಮಾಡಿದರಂತೆ. ನಂತರ ಕಾರಂತರು ಬರೆದದ್ದೇ ಹುಚ್ಚು ಮನಸ್ಸಿನ ಹತ್ತು ಮುಖಗಳು ಆತ್ಮಕಥನ. ಇದರಲ್ಲಿ ಬಾಲ್ಯದಿಂದ ತೊಡಗಿ (1902 ರಿಂದ) ಸರಿ ಸುಮಾರು 1994ರ ತನಕ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. “ತಂತಮ್ಮ ಮನಸ್ಸು ಹುಚ್ಚೆಂಬ ಅರಿವು ಎಲ್ಲ ಗಳಿಗೆಯಲ್ಲಿಯೂ ಉಂಟಾಗುವುದಿಲ್ಲ, ಇನ್ನೊಬ್ಬರ ಹುಚ್ಚುತನ ತಮಗೆ ಕಾಣಿಸುವಷ್ಟು ಸುಲಭವಾಗಿ ತಮ್ಮದೇ ಹುಚ್ಚುತನ ತಮಗೆ ಕಾಣಿಸುತ್ತದಯೇ?ಕಾಣಬೇಕೆಂಬ ಆಸೆಯೂ ತಮಗಿದ್ದ ಕಾರಣ ಈ ಆತ್ಮಕಥನಕ್ಕೆ ಹುಚ್ಚು ಮನಸ್ಸಿನ ಹತ್ತು ಮುಖಗಳು ಎಂಬ ಶೀರ್ಷಿಕೆ ಕಾರಂತರು ಕೊಟ್ಟರು”. ತಮ್ಮ ನಿತ್ಯ ಜೀವನವನ್ನು ರೂಪಿಸಿಕೊಂಡಾಗ, ಮಾನವನಲ್ಲಿ ಬದುಕಬೇಕು, ಚೆನ್ನಾಗಿ ಬದುಕಬೇಕೆಂಬ ಹಟವಿದ್ದು, ಆ ಹಟಕ್ಕೆ ತಕ್ಕಂತೆ ದುಡಿಯುವ ಶಕ್ತಿಯಿದ್ದುದಾದರಮ ಏನೆಲ್ಲಾ ಸಾಧಿಸಬಹುದೆಂದು ಅವರು ತೋರಿಸಿಕೊಟ್ಟಿದ್ದಾರೆ.
ಕೋಟ ಎಂಬ ಗ್ರಾಮದಲ್ಲಿ ಬ್ರಾಹ್ಮಣರ ಮನೆಯಲ್ಲಿ ಜನಿಸಿದ ಕಾರಂತರು ಅಲ್ಲಿರುವ ಜನರ ಬಡತನ, ನಡೆ, ಆಚಾರಗಳನ್ನು ಕಂಡು ಅನುಭವಿಸಿರುವುದನ್ನು ತಮ್ಮ ಮರಳಿ ಮಣ್ಣಿಗೆ ಕಾದಂಬರಿಯಲ್ಲಿ ಸವಿಸ್ತಾರವಾಗಿ ಚಿತ್ರಿಸಿದ್ದಾರೆ. ಮೊದಲಿಗೆ ಸೇರಿದ್ದು ಸರಕಾರಿ ಶಾಲೆಗೆ, ಅದೂ ತಮ್ಮ ಮನೆಯ ಸಮೀಪದಲ್ಲಿದ್ದ ಶಿವಾಲಯದಲ್ಲಿದ್ದ ಯಾಗ ಶಾಲೆಯಲ್ಲಿ, ನೆಲದ ಮೇಲೆ ಕುಳಿತು ಪಾಠ ಓದುತ್ತಿದ್ದು ನಂತರ ೧೦ನೆ ತರಗತಿ ವರೆಗೂ ತಮ್ಮ ವಿದ್ಯಾಭ್ಯಾಸದ ಬಗ್ಗೆ ಆ ಆ ಶಾಲೆಯ ಅನುಭವಗಳನ್ನು ವಿವರವಾಗಿ ಚಿತ್ರಿಸಿದ್ದಾರೆ. ಅಲ್ಲಿಗೇ ತಮ್ಮ ವಿದ್ಯಾಭ್ಯಾಸಕ್ಕೆ ನಾಂದಿ ಹಾಡಿ ಅಸಹಕಾರ ಚಳುವಳಿಯಲ್ಲಿ ಧುಮುಕಿ ಗಾಂಧೀಜಿಯವರ ಆದರ್ಶವನ್ನು ಪರಿಪಾಲಿಸಿದರು. ಕೆಲವು ಉಪನ್ಯಾಸಗಳನ್ನು ಕೊಡಲು ನಿರ್ಧರಿಸಿ ಊರೂರು ಅಲೆದಾಡಿ ಜನಗಳನ್ನು ಕೂಡಿಸುವ ಪ್ರಯತ್ನಮಾಡಿ ಕಾಂಗ್ರೇಸ್ ಕಮಿಟಿಯನ್ನು ಸ್ಥಾಪಿಸಲು ಕಷ್ಟಪಟ್ಟರು. ಅವರ ಈ ವಯಸ್ಸಿನ ರಾಜಕೀಯ ಅನುಭವಗಳನ್ನು *ಔದಾರ್ಯದ ಉರುಳಲ್ಲಿ* ಕಾದಂಬರಿಯಲ್ಲಿ ಚಿತ್ರಿಸಿದ್ದಾರೆ. ತಮ್ಮ ಊರಿನ ದೊಡ್ಡ ಮದುವೆಗಳಲ್ಲಿ ವೇಶ್ಯೆಯರನ್ನು ಕರೆಸಿ ನರ್ತನವನ್ನು ಮಾಡುವ ರೂಢಿಯಿತ್ತಂತೆ, ಇದರ ಕುರಿತು ಅಪಪ್ರಚಾರ ಮಾಡಿದಾಗ ಆ ಊರಲ್ಲಿ ವೇಶ್ಯಾಪದ್ಧತಿ ಅಲ್ಲ ಅವರ ನರ್ತನ ಪದ್ಧತಿ ನಿಂತಿತು. ಬಸರೂರು, ಬಾರಕೂರುಗಳಲ್ಲಿ ಗೆಜ್ಜೆಕಟ್ಟುವ ಮನೆತನಗಳು ಕೆಲವಿವೆ, ಅವರ ಮೋಹಕ್ಕಾಗಿ ಮನೆ ಕಳೆದುಕೊಂಡವರೂ ಇದ್ದಾರೆ, ಇಂತ ವೇಶ್ಯೆಯರ ಸಮಸ್ಯೆ ಹತ್ತಿರದಿಂದ ನೋಡಿದ ಕಾರಂತರು *ಕನ್ಯಾಬಲಿ, ಮೈ ಮನಗಳ ಸುಳಿಯಲ್ಲಿ* ತಮ್ಮ ಅನುಭವಗಳನ್ನು ಸುಂದರವಾಗಿ ಚಿತ್ರಿಸಿದ್ದಾರೆ.
*ಪತ್ರಿಕೋದ್ಯಮದಲ್ಲಿ:* 1924ರಲ್ಲಿ ತಮ್ಮದೇ ಆದ “ವಸಂತ” ಮಾಸಪತ್ರಿಕೆ ಹೊರಡಿಸುತ್ತಾರೆ, ಹೊರಡಿಸಿದ ಮೇಲೆ ಅದರಲ್ಲಿ ಲೇಖನ ತುಂಬಬೇಡವೇ? ಕೆಲವು ಕವನಗಳನ್ನು ನಂತರ ಕಾದಂಬರಿಯನ್ನು ಪ್ರಕಟಿಸಲು ತೊಡಗುತ್ತಾರೆ. ಕ್ರಮೇಣ ಪತ್ರಿಕೋದ್ಯಮದಲ್ಲಿ ನಷ್ಟವಾಗಿ ಸಾಲಮಾಡಿಕೊಂಡು ನಡೆಸುತ್ತಿದ್ದ ವಸಂತ ಮಾಸಪತ್ರಿಕೆಯನ್ನು ನಿಲ್ಲಿಸುವ ಪ್ರಸಂಗ ಬಂದಾಗ ಅವರಿಗಾದ ನಿರಾಶೆ ಹೇಳತೀರದು.
*ರಂಗಭೂಮಿಯಲ್ಲಿ*: ತಮ್ಮ ಜೀವನ ಅನುಭವಗಳಿಂದ ಹಲವಾರು ನಾಟಕಗಳನ್ನು ಬರೆದು ಅದನ್ನು ಪ್ರದರ್ಶಿಸಲು ತೊಡಗಿದರು. ನಾಟಕಗಳಿಂದ ದೊರೆತ ಅಲ್ಪಸ್ವಲ್ಪ ಹಣದಿಂದ ಊರೂರು ಪ್ರವಾಸ ಮಾಡುತ್ತಾರೆ, ಆ ಸಮಯದಲ್ಲಿ ಗುಬ್ಬಿವೀರಣ್ಣ, ಗುರು ಸಮರ್ಥ ನಾಟಕ ಕಂಪನಿಯೊಂದು ಪರಿಚಯವಾಗುತ್ತದೆ. ನಿಷಾ ಮಹಿಮೆ,ಹೊಣೆ ಯಾರು, ಸಿಡಿಲು ಮಿಂಚು, ವಿಜಯದಶಮಿ, ಗೋಮಾತೆ ನಾಟಕಗಳನ್ನು ಪ್ರದರ್ಶಿಸುವ ಅವಕಾಶವೂ ದೊರೆಯುತ್ತದೆ.
*ಸಂಚಾರಿ ಜೀವನ*: ಜೀವನದಲ್ಲಿ ಅವರಿಗಿದ್ದ ಧ್ಯೆಯ ದೇಶ ತಿರುಗುವುದು ಘೋಷ ಓದುವುದು. ಸಂಚಾರಿ ಜೀವನದಲ್ಲಿ ಆಸಕ್ತಿಯಿದ್ದ ಕಾರಂತರಿಗೆ ಪ್ರವಾಸ ಹೊಗುವುದೆಂದರೆ ಆಸೆ, ಪೋಟೋ ತೆಗೆಯುವ ಹುಚ್ಚು ಬೇರೆ. ಹಲಸಂಗಿ, ನವಿಲೂರು, ಬಾದಾಮಿ, ಸಾಬರ್ಮತಿ, ಅಜಂತ, ಎಲ್ಲೋರ ಕೆಲವು ಸ್ಥಳಗಳ ಹಾಗು ಅಲ್ಲಿರುವ ವೈಶಿಷ್ಟ್ಯಗಳನ್ನು ಹಾಗು ವಾಸ್ತುದರ್ಶನ, ಪಲ್ಲವರ ಆದರ್ಶ, ಶಿಲ್ಪದ ವಿಚಾರ, ಸಾಂಚಿಯಲ್ಲಿರುವ ಬುದ್ಧನ ಸ್ಮಾರಕ, ಸಾರನಾಥ, ಅಬುವಿನ ಸೂಚಿ ಶಿಲ್ಪ, ಮಹಾಬಲಿಪುರ, ಫತ್ತೇಪುರ ಸಿಕ್ರಿ, ಕೇದದಿಗೆಯ ಬನ, ಹೆಮ್ಮೆಯ ಸ್ಮಾರಕ ಗೋಲ್ ಗುಂಬಜ್, ಅವರ ಈ ಪ್ರವಾಸಗಳ ಕುರಿತು * ಅಬೂವಿನಿಂದ ಬರಾಮಕ್ಕೆ* ಪ್ರವಾಸ ಕಥನದಲ್ಲಿ ಸುಂದರವಾಗಿ ವಿನರಿಸಿದ್ದಾರೆ.
*ಧಾರ್ಮಿಕ ವಿಚಾರಗಳಲ್ಲಿ ಮನಸ್ಸು:* ತನ್ನ ಸುತ್ತಮುತ್ತಲಿನ ಜನರಲ್ಲಿದ್ದ ವೈದಿಕ ವಾತಾವರಣ, ಸಂಪ್ರದಾಯ, ಧರ್ಮದಲ್ಲಿ ಹೆಚ್ಚಿನ ಶ್ರದ್ಧೆ, ಅಂದಶ್ರದ್ಧೆಯಂದರೂ ಸರಿಯೆ ಅದರ ಕುರಿತು ಹಲವಾರು ನಿದರ್ಶನಗಳನ್ನು ಕೊಟ್ಟಿದ್ದಾರೆ, ಅವರು ಆಸ್ತಿಕನೂ ಅಲ್ಲ, ನಾಸ್ತಿಕನೂ ಅಲ್ಲ, ಅವರ ಪ್ರಕಾರ ಅವರು ಅನಾಸ್ತಿಕರು. ಬಾಳು ತಮಗೆ ಮುಖ್ಯ, ಬಾಳನ್ನು ತಿಳಿಯಲು ಬೇಕಾಗುವ ಸಾಧನೆಗಳೂ ಅಷ್ಟೇ ಪ್ರಾಮುಖ್ಯ. ಇಂದ್ರಿಯಗಳು ವೈರಿಯಲ್ಲ, ಅದರಿಂದ ಬೆಳೆಯುವ ಮನಸ್ಸು, ಬುದ್ಧಿಗಳೂ ವೈರಿಗಳಾಗವು, ಇಂತಹ ದೃಷ್ಟಿಕೋನ ಕುರಿತು *ಬಾಳ್ವೆಯೇ ಬೆಳಕು* ಕಾದಂಬರಿಯಲ್ಲಿ ಇದನ್ನು ಚಿತ್ರಿಸಿದ್ದಾರೆ.
*ಗ್ರಾಮೋದ್ಧಾರ*: ಪುತ್ತೂರಿಗೆ ಬಂದು ನೆಲಸಿ, ಶಾಂತಿ ಶಿಬಿರಗಳು, ನೀರಿನ ಪೂರೈಕೆ, ಹಳ್ಳಿಗಳ ಉದ್ಧಾರ, ಗ್ರಾಮೋದ್ಧಾರಣ ಮಾಡಲು ತೊಡಗಿದರು. ಅದೇ ಸಮಯದಲ್ಲಿ ದೇವದೂತರು ಎಂಬ ಕಾದಂಬರಿ ಹಾಗು ಕೆಲವು ನಾಟಕಗಳನ್ನೂ ಬರೆಯುತ್ತಾರೆ. ಈ ಪ್ರವಾಸ ಫಲದಿಂದ *ಚೋಮನ ದುಡಿ* ಕಾದಂಬರಿ ಬರೆಯಲು ಅವಕಾಶ ದೊರೆಯಿತು.
*ಶಿಕ್ಷಣ ಪ್ರಯೋಗಗಳು*: ಮಕ್ಕಳ ಕೂಟ ಒಂದು ಆಟದ
ರೂಪದಲ್ಲಿರಬೇಕೆಂದು ನಿರ್ಧರಿಸಿ ಅದಕ್ಕೆ ಪೂರ್ವಭಾವಿಯಾಗಿ ಕೆಲವೊಂದು ಪ್ರಯೋಗಗಳನ್ನು ಮಾಡಿದರು. 1935 ರಲ್ಲಿ ಬಾಲವನವನ್ನು ನಿರ್ಮಿಸಿ ಮಕ್ಕಳಿಗಾಗಿ ಶಾಲೆ ಪ್ರಾರಂಭಿಸಿದರು. ಆದರೆ ಮೂರು ವರ್ಷದ ಒಳಗೆ ನಷ್ಟವಾಗಿ ಶಾಲೆ ಮುಚ್ಚುವ ಪ್ರಸಂಗವೂ ಬಂತು. ಮಕ್ಕಳಿಲ್ಲದೆ, ಮಿತ್ರರ ನೆರವಿಲ್ಲದೆ, ಸಾಲ ಮಾಡಿಕೊಂಡು ನಿರ್ಮಿಸಿದ ಬಾಲವನದ ಸಾಲವನ್ನು ತೀರಿಸಲಾಗದೆ ಶಾಲೆಯನ್ನು ಮುಚ್ಚಿಬಿಟ್ಟರು.
*ಶಿಕ್ಷಣ ಅನ್ಯ ವಿಷಯಗಳಲ್ಲಿ*: ಹಲವಾರು ವಿಷಯಗಳನ್ನು ಸಂಗ್ರಹಿಸಿ, ಚಿತ್ರಹಳ ಸಮೇತ ಬಾಲ ಪ್ರಪಂಚ, ವಿಜ್ಞಾನ ಪ್ರಪಂಚ ಬರೆದಾಗ, ಆ ಬರವಣಿಗೆಗೆ ಹಾಗು ಅವರ ಪಟ್ಟ ಶ್ರಮಕ್ಕೆ ಅವರಿಗಿದ್ದ ಕೀರ್ತಿ ಹೆಚ್ಚಿತು. ಕೆಲವೇ ತಿಂಗಳಲ್ಲಿ ಹೆಚ್ಚು ಪ್ರತಿಗಳು ಅಚ್ಚಾಗಿ ಜನರು ಕೊಂಡು ಓದುತ್ತಿರುವುದನ್ನು ಕಂಡ ಕಾರಂತರಿಗೆ ಅತ್ಯಾನಂದವಾಗುತ್ತದೆ.
*ನಾಟಕ ರಂಗದಲ್ಲಿ ಹಾಗು ಸಂಗೀತದಲ್ಲಿ*: ಗೀತ ನಾಟಕಗಳು, ಯಕ್ಷಗಾನ, ನಾಟ್ಯರೂಪ, ಚೀನಿ ನಾಟಕವನ್ನು ನೋಡಲು ಅವಕಾಶ ದೊರೆಯುತ್ತದೆ. ಯಕ್ಷಗಾನದಲ್ಲಿ ಆಸಕ್ತಿಯಿದ್ದ ಕಾರಂತರು ಯಕ್ಷಗಾನದ ಕುರಿತು ಅಧ್ಯಯನ ಮಾಡಿ * ಯಕ್ಷಗಾನ ಬಯಲಾಟ* ಕೃತಿಯನ್ನು ರಚಿಸಿದಾಗ, ಯಕ್ಷಗಾನ ಕುರಿತು ಅವರಿಗಿದ್ದ ಜ್ಞಾನಕ್ಕೆ ಜನರು ತಲೆದೂಗುತ್ತಾರೆ. ನಂತರ ಯಕ್ಷಗಾನ ಬಯಲಾಟ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಲಭಿಸಿದಾಗ ಕಾರಂತರು ಸಂತೋಷಪಟ್ಟರು. ಬಹುಮಾನಕ್ಕೆ ಬಂದ ಕೊಂಚ ಹಣದಿಂದ ತಾವು ಮಾಡಿದ ಕೊಂಚ ಸಾಲವನ್ನು ತೀರಿಸುತ್ತಾರೆ. ರಾಷ್ಟ್ರಗೀತೆ, ಗೀತ ಸಾಹಿತ್ಯದಲ್ಲಿ, ಯಕ್ಷಗಾನ ಸಂಗೀತದಲ್ಲಿ ಅವರ ಆಸಕ್ತಿ ಹೆಚ್ಚು. ಆ ಅನುಭವದಿಂದ *ಕೀಚಕ ಸೈರಂಧ್ರ*ಯನ್ನು ರಚಿಸಿದ ಕೆಲವು ಸಮಯದಲ್ಲೇ ಆ ನಾಟಕವನ್ನು ಹಲವಾರು ಕಡೆ ಪ್ರದರ್ಶಿಸಲು ಅವಕಾಶ ದೊರೆಯುತ್ತದೆ. ಕೀಚಕ ಸೈರಂಧ್ರ ನಾಟಕವೂ ಪ್ರಸಿದ್ಧಿಗೊಳ್ಳುತ್ತದೆ.
*ಗದ್ಯೋದ್ಯಾನದಲ್ಲಿ*: ಸರಿ ಸುಮಾರು ೫೦ ಕಾದಂಬರಿಗಳನ್ನು ರಚಿಸುತ್ತಾರೆ. ಅದರಲ್ಲಿ ಎಲ್ಲವೂ ತಮ್ನ ಜೀವನದಲ್ಲಾದ ಆಯಾ ಅನುಭವಗಳಿಂದ ಪ್ರೇರಣೆಯಾದವುಗಳೆ.
ಉದಾಹರಣೆಗೆ:
೧. ತಮ್ಮ ಗ್ರಾಮ ಜೀವನದ ಸುತ್ತಾಟದಲ್ಲಿ, ಹತ್ತಾರು ಹೊಲೆಯರ ಮನೆಗಳನ್ನು ಕಂಡು ಜೀವನವನ್ನು ಸಾಕಷ್ಟು ನೋಡಿ, ಅದರ ಕುರಿತು ಚೋಮನ ದುಡಿ ಕಾದಂಬರಿಯನ್ನು ಬರೆಯುತ್ತಾರೆ.
೨. ಕಡಲಿನ ತಡಿಯಾದ ಕೋಟದಲ್ಲಿ ನಲಿದಾಡುವ ಜನರ ಬಾಳ್ವೆಯಿಂದ ಹಾಗು ಅಲ್ಲಿನ ಸುಂದರವಾದ ನಿಸರ್ಗ ಸೊಬಗನ್ನು, ಆ ತೀರದಲ್ಲಿ ವಾಸಿಸುವ ಕುಟುಂಬಗಳು ಪಡುವ ಸುಖ ದುಃಖಗಳನ್ನು ಹತ್ತಿರದಿಂದ ನೋಡಿ ಪ್ರೇರಿತರಾಗಿ ಮರಳಿ ಮಣ್ಣಿಗೆ ಕಾದಂಬರಿ ರಚಿಸುತ್ತಾರೆ.
೩. ಬಡ ಶಾಲಾ ಉಪಾಧ್ಯಾಯರ ಕಥೆ, ಪುತ್ತೂರಿನಲ್ಲಿ ನೆಲಸಿ, ಉಪಾಧ್ಯಾಯರ ಜೊತೆ ಬಾಳಿ ಅವರ ಸುಖ ದುಃಖಗಳನ್ನು ಕಂಡು ಪ್ರೇರಿತಗೊಂಡು ಹೊರಬಂದ ಕಾದಂಬರಿಯೇ ಮುಗಿದ ಯುದ್ಧ.
೪. ಅಸಹಕಾರ ಚಳುವಳಿಯಲ್ಲಿ ಧುಮುಕಿ ಗಾಂಧೀಜಿಯವರ ಆದರ್ಶವನ್ನು ಪರಿಪಾಲಿಸಿದರು. ಕೆಲವು ಉಪನ್ಯಾಸಗಳನ್ನು ಕೊಡಲು ನಿರ್ಧರಿಸಿ ಊರೂರು ಅಲೆದಾಡಿ ಜನಗಳನ್ನು ಕೂಡಿಸುವ ಪ್ರಯತ್ನಮಾಡಿ ಕಾಂಗ್ರೇಸ್ ಕಮಿಟಿಯನ್ನು ಸ್ಥಾಪಿಸಲು ಕಷ್ಟಪಟ್ಟರು. ಅವರ ಈ ವಯಸ್ಸಿನ ರಾಜಕೀಯ ಅನುಭವಗಳನ್ನು *ಔದಾರ್ಯದ ಉರುಳಲ್ಲಿ* ಕಾದಂಬರಿಯಲ್ಲಿ ಚಿತ್ರಿಸಿದ್ದಾರೆ.
೫. ತನ್ನ ವಸ್ತು ವಿಸ್ತಾರಕ್ಕಾಗಿ ಲೈಂಗಿಕ ಜೀವನದ ಚಾರಿತ್ರಿಕ ಸಾಕ್ಷಿಗಳನ್ನು ಹೇಗೆ ತೀರ ಪುರಾತನ ಕಾಲಕ್ಕೆ ಒಯ್ದಿತೋ ಹಾಗೆಯೇ ಅಂಥ ಪುರಾತವೃನ ದೇವಾನುದೇವತೆಗಳ ಕಲ್ಪನೆಗಳು ಸಹ ಹೇಗೆ ವಿಕೃತಗೊಂಡು ಬಂದಿವೆ ಎಂದು ಮೂಕಜ್ಜಿಯ ಕನಸುಗಳು ಕಾದಂಬರಿಲ್ಲಿ ಕಾಣಬಹುದು.
ನಂತರ 1936ರಲ್ಲಿ ಲೀಲಾ ಜೊತೆ ವಿವಾಹ, ನಾಲ್ಕು ಮಕ್ಕಳ ತಂದೆಯಾಗುತ್ತಾರೆ. ಹರ್ಷ, ಕ್ಷಮಾ, ಮಾಲವಿಕ, ಉಲ್ಲಾಸ ಅವರ ಹೆಸರುಗಳು. ಲೀಲಾ ಬ್ರಾಹ್ಮಣರಲ್ಲ, ಮದುವೆಯಾದ ಹೊಸತರಲ್ಲಿ ಕುಟುಂಬವು ತಮ್ಮನ್ನು ದೂರಿದರು ಕ್ರಮೇಣ ಒಪ್ಪಿಕೊಂಡರು, ಆದರೆ ಸಮಾಜದ ದೃಷ್ಟಿಯಲ್ಲಿ ತಾನು ತಪ್ಪು ಕೆಲಸ ಮಾಡಿರುವನೆಂಬ ಭಾವನೆ. ಹೀಗೆ ಕೆಲವು ಸಂದರ್ಭಗಳಲ್ಲಿ ಕೆಲವು ಸನ್ನಿವೇಶಗಳಲ್ಲಿ ಅವಮಾನಿತರಾಗಿ ದುಃಖ ಪಟ್ಟದ್ದೂ ಉಂಟು, ಅವರ ಕುಟುಂಬದ ಕುರಿತು, ಮಕ್ಕಳ ವಿಧ್ಯಾಭ್ಯಾಸ ಕುರಿತು, ತಮ್ಮ ಅಣ್ಣ, ತಮ್ಮಂದಿರ, ತಂಗಿಯರ ಕುರಿತು. ತಮ್ಮ ಕುಟುಂಬದ ಬಗ್ಗೆ ಎಳೆ ಎಳೆಯಾಗಿ ವಿವರಿಸಿದ್ದಾರೆ. ಮಗ ಹರ್ಷ ಸಾವು, ನಂತರ ತನ್ನ ಪತ್ನಿ ಲೀಲಾ ಸಾವಿನಿಂದ ತಮಗಾದ ಆಘಾತವನ್ನೂ ಹಂಚಿಕೊಂಡಿದ್ದಾರೆ.
ನಂತರ ಯುನೆಸ್ಕೊ, ಪರ್ಸಿಯಾ, ಕಾಬುಲ್, ಬಾಮಿಯಾ,ಬುಂದೆ ಅಮೀರ್, ನೇಪಾಲ, ಪೂರಿ, ಭುವನೇಶ್ವರ ದೇಗುಲ, ದಿಲ್ಲಿ, ಕಾಶಿ, ಗಯಾ, ಪ್ರಯಾಗ, ಖುಜರಾಹೋ, ನರ್ಮದೆಯ ದಂಡ ಜಬ್ಬಲಪುರ, ಕರ್ನಾಟಕದ ಹಂಪಿ, ಬಾದಾಮಿ, ಐಹೊಳೆ ಗಳ ಸ್ಥಳಗಳ ಕುರಿತು, ಸ್ಥಳದ ಮಹತ್ವ, ಅಲ್ಲಿರುವ ದೇವಾಲಯ, ನದಿಗಳ ಕುರಿತು ಅತ್ಯದ್ಭುತವಾಗಿ ಚಿತ್ರಿಸಿದ್ದಾರೆ, ಅವರ ಪ್ರವಾಸ ಅನುಭವವನ್ನು ಓದಲು ಖುಷಿಯಾಗುತ್ತದೆ.
ಯಕ್ಷಗಾನ ನಾಟಕ(ಬ್ಯಾಲೆ) ಪ್ರದರ್ಶನಕ್ಕಾಗಿ ಭಾರತದಲ್ಲಿ, ವಿದೇಶದಲ್ಲಿ (ಇಂಗ್ಲೆಂಡ್, ಪೇರು, ಇಂಕಾ,ಲೀಮಾ,ಬ್ರೇಜಿಲ್,)ಯಕ್ಷಗಾನ ನಡೆಸಲು ಅವಕಾಶಗಳು ದೊರಕುತ್ತದೆ, ತಮ್ಮ ಕೀರ್ತಿಯೂ ಬೆಳೆಯುತ್ತದೆ. 1969ರಲ್ಲಿ ಪದ್ಮಭೂಷಣ ಲಭಿಸಿದಾಗ ಖುಷಿಪಟ್ಟ ಕಾರಂತರು, ಕಾಂಗ್ರೇಸ್ಸಿಗರ ರಾಜಕೀಯದಿಂದ ಬೇಸತ್ತು, ಗಾಂಧಿ ನಂತರ ಬಂದ ಹಲವಾರು ರಾಜಕಾರಣಿಗಳು ಕಾಂಗ್ರೇಸ್ ಪಕ್ಷದಲ್ಲಿದ್ದು ಭಾರತವನ್ನು ನಿರ್ನಾಮ ಮಾಡಲು ಹೊರಟಿರುವುದನ್ನು ಕಂಡು ಹಾಗು ಇಂದಿರಾಗಾಂಧಿ ನೇತೃತ್ವದಲ್ಲಿ ತುರ್ತು ಪರಿಸ್ತಿತಿ ಒದಗಿದಾಗ ಜನರ ಸಂಕಷ್ಟಗಳನ್ನು ಕಣ್ಣಾರೆ ಕಂಡು ಬೇಸತ್ತು ಪದ್ಮಭೂಷಣವನ್ನು ಹಿಂದಿರುಗಿಸುತ್ತಾರೆ, ಆ ಪ್ರಸಂಗ ಓದಿದಾಗ ಕಾರಂತರು ನಮಗೆ ಖಂಡಿತ ರೋಲ್ ಮಾಡಲ್ ಆಗುತ್ತಾರೆ.
ಇದೇ ಸಮಯದಲ್ಲಿ 1978ರಲ್ಲಿ ಪುತ್ತೂರಿನಿಂದ ಸಾಲಿಗ್ರಾಮಕ್ಕೆ ಬಂದು ನೆಲಸಿದಾಗ ರಮಾಬಾಯಿ ಜೈನ್ ಎಂಬ ಮಹಿಳೆ ಸ್ಥಾಪಿಸಿದ ಜ್ಞಾನಪೀಠ ಸಂಸ್ಥೆಯವರು ಕಾರಂತರು ಬರೆದ *ಮೂಕಜ್ಜಿಯ ಕನಸುಗಳಿಗೆ* ಪ್ರಶಸ್ತಿ ಕೊಡುತ್ತಾರೆ, ಸಾಹಿತಿಗಳಿಗೆ ಇದು ಭಾರತದಲ್ಲಿ ಕೊಡುತ್ತಿರುವ ಅತಿ ದೊಡ್ಡ ಪ್ರಶಸ್ತಿ. ಆ ಮೂಲಕ ಜನರಿಂದ ಹಲವಾರು ಶುಭಕಾಮನೆಯ ಪತ್ರಗಳು ಬಂದಾಗ ಓದುಗರಿಗೆ ತಮ್ಮ ವಿಷಯದಲ್ಲಿದ್ದ ಅಭಿಮಾನ ಎಷ್ಟಿತ್ತೆಂಬುದು ಮನವರಿಕೆಯಾಗುತ್ತದೆ.
ನಂತರ ರಾಜಕೀಯಕ್ಕೆ ಸಂಬಂಧ ಪಟ್ಚ ಗೂಂಡಾರಣ್ಯ ಮೂಜನ್ಮ, ಅದೇ ಊರು ಅದೇ ಮರ, ಕಾದಂಬರಿ ಬರೆಯುತ್ತಾರೆ. ಕಣ್ಣಿದ್ದೂ ಕಾಣರು, ಅಂಟಿದ ಅಪರಂಜಿ ಕಾದಂಬರಿಯಲ್ಲಿ ಒಬ್ಬ ವ್ಯಕ್ತಿ ತನ್ವ ಸ್ವಾರ್ಥವನ್ನು ಸಾಮಾಜಿಕ ಮನೋವಿಲಾಸದ ಶೋಷಣೆಗಾಗಿ ಬಳಸುವ,ನಿತ್ಯ ಜೀವನದ ತಮ್ಮದೇ ಹಲಕೆಲವು ಕಹಿ ಅನುಭವಗಳ ವಸ್ತುವಾಗಿದೆ.
ಯಕ್ಷಗಾನ ಪ್ರದರ್ಶನ ಅವಕಾಶದಿಂದ ಹಲವಾರು ದೇಶಗಳು ಸುತ್ತಿ, ಬ್ಯಾಲೆ ಪ್ರದಶನಕೊಟ್ಟು, ಆ ಪ್ರವಾಸದ, ಪ್ರದರ್ಶನದ ಅನುಭವಗಳನ್ನು ಪೂರ್ವದಿಂದ ಅತ್ಯಪೂರ್ವಕ್ಕೆ, ಪಾತಾಳಕ್ಕೆ ಪಯಣ, ಅರಸಿಕರಲ್ಲ ಎಂಬ ಪ್ರವಾಸ ಕಥನಗಳಲ್ಲಿ ಕಾಣಬಹುದು. ಬಾಲ ಪ್ರಪಂಚ, ವಿಜ್ಞಾನ ಪ್ರಪಂಚ ತಂದು ಕೊಟ್ಟ ಕೀರ್ತಿಯಿಂದ ನಂತರ ಪ್ರಾಣಿ ಪ್ರಪಂಚವನ್ನೂ ಬರೆಯುತ್ತಾರೆ.
ಹೀಗೆ ತಮ್ಮ ಜೀವನದ ಅನುಭವಗಳನ್ನು ಸರಿಸುಮಾರು ೬೦೦ ಪುಟಗಳಲ್ಲಿ ಈ ಹುಚ್ಚು ಮನಸ್ಸಿನ ಹತ್ತು ಮುಖಗಳು (ಸಾಹಿತಿ, ಪತ್ರಿಕೋದ್ಯಮ, ಉಪಾಧ್ಯಾಯ, ರಾಜಕೀಯ, ಸಮಾಜ ಸೇವೆ, ಯಕ್ಷಗಾನ, ನಾಟಕ, ಸಂಚಾರಿ ಜೀವನ, ಛಲಚಿತ್ರ ಒಂದಾ ಎರಡಾ ಇವರಲ್ಲಿ ಹತ್ತು ಮುಖಗಳನ್ನು ಕಾಣಬಹುದು). ಕೃತಿಯಲ್ಲಿ ವಿವರಿಸಿದ್ದಾರೆ. ತಮ್ಮ ಜೀವನದ ವಿವಿಧ ಸಮಸ್ಯೆಗಳನ್ನು ಹೇಗೆ ಇದಿರಿಸಿದರೆಂದು, ಆಕರ್ಷಣೆಗಳು ಹೇಗೆ ಕಾದು ಬೆಳೆಯಿಸಿದರೆಂದು ವಿವರವಾಗಿ ಹೇಳಿದ್ದಾರೆ, ಸಾಹಿತ್ಯ, ರಂಗಭೂಮಿ, ರಾಜಕೀಯ ಇನ್ನು ಹಲವು ಕ್ಷೇತ್ರಗಳಲ್ಲಿ ತಮ್ಮ ಕೊಡುಗೆಯನ್ನು ನೀಡಿರುವ ಬಗ್ಗೆ, ಅದರಿಂದ ತಮ್ಮ ಜೀವನದಲ್ಲಾದ ಅನುಭವಗಳ ಕುರುತೂ ವಿವರಿಸಿದ್ದಾರೆ. ಪದ್ಮಭೂಷಣ ಪ್ರಶಸ್ತಿ, ಕರ್ನಾಟಕ ಜ್ಯೋತಿ ಬಿರುದು ಪಡೆದುದು ಹಾಗು ಕೆಲವು ಕಾರಣಗಳಿಂದ ಅವನ್ನು ಹಿಂದಿರುಗಿಸಿದ ಸಂದರ್ಭಗಳನ್ನು ಓದಿದಾಗ ಅವರು ಆದರ್ಶ ವ್ಯಕ್ತಿಯಾಗಿ ಕಾಣುತ್ತಾರೆ.
*ಕಾರ್ತಿಕೇಯ*