ಶ್ರೀನಿವಾಸ ವೈದ್ಯ ಅವರ ಕಾದಂಬರಿ 'ಹಳ್ಳ ಬಂತು ಹಳ್ಳ' ಮತ್ತು 'ಮನಸುಖರಾಯನ ಮನಸು' ಓದಿದ ಮೇಲೆ ಅವರ ಎಲ್ಲಾ ಪುಸ್ತಕಗಳನ್ನು ಓದಬೇಕೆಂದು ನಿರ್ಧರಿಸಿಯಾಗಿತ್ತು. ಮೇಲಿನ ಕಥಾ ಸಂಕಲನದಲ್ಲಿ ಒಟ್ಟು ಐದು ಕಥೆಗಳಿವೆ….
#ಕೆಲವಂಬಲ್ಲವರಿಂದ
ಆಗತಾನೇ ಬಾಲ್ಯಾವಸ್ಥೆಯನ್ನು ದಾಟಿ ಯೌವನಕ್ಕೆ ಕಾಲಿಡುವ ವಯಸ್ಸಿನ ಹುಡುಗರು ತಮ್ಮ ಶರೀರ ಪ್ರಕೃತಿಯಲ್ಲಿನ ಬದಲಾವಣೆಗಳು ಮತ್ತು ಗಂಡು ಹೆಣ್ಣು ಭೇದವಿಲ್ಲದೆ ಒಂದಾಗಿ ಆಟವಾಡಿಕೊಂಡಿರುವವರ ನಡುವೆ ನಿಧಾನಕ್ಕೆ ಏಳುವ ಸಾಮಾಜಿಕ ಅಂತರ,ತಾವು ದೊಡ್ಡವರಾಗುತ್ತಿದ್ದೇವೆ ಎಂಬ ಸಣ್ಣ ಖುಷಿ ಮತ್ತು ಕಾತರಗಳು,ಪೂರ್ತಿ ಅರ್ಥವಾಗದ ಆದರೆ ಕುತೂಹಲ ಕೆರಳಿಸುವ ಹಿರಿಯರ ಮಾತುಗಳು ಹಾಗೂ ವರ್ತನೆಗಳು ಅವರಲ್ಲುಂಟುಮಾಡುವ ಕಸಿವಿಸಿಯ ಕಥೆ.
#ಉದ್ಯೋಗಪರ್ವ
ಕೆಲಸದ ಕಛೇರಿಯಲ್ಲಿ ನಡೆಯುವ ಒಳ ರಾಜಕೀಯ, ಒಬ್ಬರನ್ನೊಬ್ಬರು ತುಳಿಯಲು ಹೂಡುವ ತಂತ್ರ ಪ್ರತಿತಂತ್ರ,ಏಟು ಎದಿರೇಟು, ಸ್ವಾರ್ಥಕ್ಕಾಗಿ ಮುಗ್ಧ ಕೆಲಸದವರನ್ನು ಬಳಸಿಕೊಳ್ಳುವ ಬಗೆಯ ಬಹಳ ಸ್ವಾರಸ್ಯಕರವಾಗಿ ಮೂಡಿಬಂದಿದೆ. ಕಾರ್ಪೋರೇಟ್ ಜಗತ್ತಿನ ಹುಳುಕುಗಳು ಥಳುಕು ಬಳುಕಗಳ ಕುರಿತು ಗಮನಸೆಳೆವ ಕಥೆ.
#ಕಬಡ್ಡಿಕಬಡ್ಡಿ
ನನಗೆ ಬಹಳ ಇಷ್ಟವಾದ ಕಥೆ. ತನ್ನ ನಿವೃತ್ತಿ ವೇತನಕ್ಕಾಗಿ ಪರದಾಡುವ ಶಿರಹಟ್ಟಿ ಮೇಷ್ಟ್ರು. ಬೆಂಗಳೂರಿನಲ್ಲಿ ಸ್ವಂತ ಸೂರಿನ ಕನಸು. ಇಬ್ಬರು ಮಕ್ಕಳು ಅಮೇರಿಕಾದಲ್ಲಿದ್ದು ಕೆಲವು ತಿಂಗಳಿಂದ ಅವರಿಂದ ಯಾವುದೇ ಪತ್ರವ್ಯವಹಾರವಾಗಲಿ ಅಥವಾ ಮನೆಕಟ್ಟಲು ಹಣವಾಗಲಿ ಬಂದಿಲ್ಲ. ಎಲ್ಲವನ್ನೂ ಬಿಟ್ಟು ಹುಟ್ಟೂರಿಗೆ ಹೊರಡಬೇಕು ಎನ್ನುವಷ್ಟರಲ್ಲಿ ಮೇಲಾಧಿಕಾರಿಗಳಿಗೆ ಕೈ ಬೆಚ್ಚಗೆ ಮಾಡಿದ ಪರಿಣಾಮ ನಿವೃತ್ತಿ ವೇತನ ಮಂಜೂರಾಗುತ್ತದೆ. ಮುಂದೇನು? ಆದರೆ ಹಣದಲ್ಲಿ ಮನೆ ಕಟ್ಟಿದರೇ? ಪರದೇಶದಲ್ಲಿನ ಅವರ ಮಕ್ಕಳು ಮತ್ತೆ ಸಂಪರ್ಕಕ್ಕೆ ಸಿಕ್ಕಿದರೇ? ಅವರು ತಿಂಗಳುಗಟ್ಟಲೇ ಅಜ್ಞಾತವಾಗಲು ನಿಜವಾದ ಕಾರಣ ತಿಳಿದಾಗ ಹೆತ್ತವರ ಪ್ರತಿಕ್ರಿಯೆ ಹೇಗಿತ್ತು ತಿಳಿಯಬೇಕಾದರೆ ಕಥೆಯನ್ನು ಓದಬೇಕು… ಕಥೆಯ ಅಂತ್ಯದಲ್ಲಿ ಕಣ್ಣು ತುಂಬಿಬಂತು. ಗಂಟಲು ಕಟ್ಟಿ ಹೃದಯ ಭಾರವಾಯಿತು.
#ಕಪ್ಪೆನುಂಗಿದಹುಡುಗ
ಈ ಕಥೆ ಮಜವಾಗಿದೆ. ಬ್ಯಾಂಕ್ ಚೆಕ್ ಫೋರ್ಜರಿ ಕೇಸ್ ನಲ್ಲಿ ಸಿಕ್ಕಿಕೊಳ್ಳುವ ಹುಡುಗನ ಕಥೆ. ಅವನು ಕಪ್ಪೆ ನುಂಗಿದ ಹಾವಿನಂತೆ ಪೆದ್ದುಪೆದ್ದಾಗಿ ತನಗೆ ಏನಾಗುತ್ತಿದೆ ಎಂಬ ಕನಿಷ್ಠ ಪ್ರಜ್ಞೆ ಇಲ್ಲದ ಯುವಕ. ಅವನ ವಿರುದ್ಧ ಕೋರ್ಟ್ ನಲ್ಲಿ ಸಾಕ್ಷಿ ಹೇಳಲು ಸೇರಿರುವ ಸಿಬ್ಬಂದಿ. ಕೊನೆಯಲ್ಲಿ ಬ್ಯಾಂಕಿನ ಅಸಿಸ್ಟೆಂಟ್ ಮ್ಯಾನೇಜರ್ ಯಾವುದೋ ವೈಯಕ್ತಿಕ ಕೇಸ್ ನಲ್ಲಿ ಸಿಕ್ಕಿಕೊಂಡು ಅವನ ಸ್ಥಿತಿ ಕಪ್ಪೆ ನುಂಗಿದಂತಾಗುವುದು ಮಾರ್ಮಿಕವಾಗಿದೆ.
#ತರಬೇತಿಯದಿನಗಳು
ಉದ್ಯೋಗ ನಿಮಿತ್ತ ಮುಂಬೈ ಸೇರಿಕೊಂಡು ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಪರದಾಡುವ ಯುವಕನೊಬ್ಬ ಕ್ರಮೇಣ ಅಲ್ಲಿಗೆ ಹೊಂದಿಕೊಳ್ಳುವ ಕಥೆ. ಕೆಲಸ ಸಿಕ್ಕಿದ ಎರಡು ವರ್ಷಗಳ ತರುವಾಯ ಊರಿಗೆ ಬಂದು ತಾನು ಇಷ್ಟಪಟ್ಟ ಹುಡುಗಿಯನ್ನು ಭೇಟಿಯಾಗಲು ಹೋದಾಗ ಅಲ್ಲಿ ಕಾದಿದ್ದೇನು? ಅವನ ಸೋದರಮಾವ ಅವನಿಷ್ಟಪಟ್ಟ ಹುಡುಗಿಯ ಮನೆಯವರೇ ಸಂಬಂಧ ಅರಸಿಕೊಂಡುಬಂದು ಏನು ಹೇಳಿದರು?ಅವರಿಬ್ಬರೂ ಮದುವೆಯಾದರೆ ಎಂದು ತಿಳಿಯುವ ಕುತೂಹಲವೇ? ಅದನ್ನು ಪುಸ್ತಕ ಓದಿಯೇ ತಿಳಿಯಬೇಕು.
ಲೇಖಕರ ಮರಾಠಿ ಮಿಶ್ರಿತ ಕನ್ನಡ ಓದಲು ಬಹಳ ಮುದ ನೀಡುತ್ತದೆ. ಅಲ್ಲಲ್ಲಿ ನವಿರು ಹಾಸ್ಯ, ವ್ಯಂಗ್ಯ ಮತ್ತು ವಿಡಂಬನೆಗಳು ಕಚಗುಳಿಯಿಟ್ಟು ಮುಖದಲ್ಲಿ ಮಂದಹಾಸ ಮೂಡಿಸುತ್ತವೆ.ಜಯಂತ ಕಾಯ್ಕಿಣಿಯವರ ಸೊಗಸಾದ ಬೆನ್ನುಡಿಯಲ್ಲಿ ಹೇಳಿರುವಂತೆ ಲೇಖಕರ ಜೀವನಾನುಭವ ಇಲ್ಲಿನ ಕಥೆಗಳ ಜೀವಾಳ. ಸುತ್ತಲಿನ ಸಮಾಜದ ಆಗುಹೋಗುಗಳನ್ನು ಮತ್ತು ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಕಥೆಯ ರೂಪದಲ್ಲಿ ಹೇಳುವ ಕಲೆ ಶ್ರೀನಿವಾಸ ವೈದ್ಯ ಅವರಿಗೆ ಕರಗತವಾಗಿದೆ…
ಕಪ್ಪೆ ನುಂಗಿದ ಹುಡುಗ - ಶ್ರೀನಿವಾಸ ವೈದ್ಯ ಇದು ಶ್ರೀನಿವಾಸ ವೈದ್ಯರ ಎರಡನೆಯ ಕತಾ ಸಂಕಲನ. ವೈವಿಧ್ಯಮಯ ಕತೆಗಳು ಇದರ ಹೆಗ್ಗಳಿಕೆ
ಕೆಲವಂ ಬಲ್ಲವರಿಂದ ಕತೆ ಬಾಲ್ಯದಿಂದ ಯೌವನಕ್ಕೆ ಬರುವ ಹುಡುಗನ ಕಣ್ಣಿಂದ ನಿರೂಪಿತ.ಹೇಗೆ ದೊಡ್ಡವರ ಗುಟ್ಟಾದ ಸಂಗತಿಗಳೆಲ್ಲ ಮಕ್ಕಳ ಕುತೂಹಲ ಕೆರಳಿಸುತ್ತವೆ. ಅಷ್ಟೆಲ್ಲ ಪ್ರೀತಿ ತೋರಿಸುವ ಅವ್ವ ,ಯಾರೋ ಇಟ್ಟುಕೊಂಡಾಕಿಯ ಬಗ್ಗೆ ತೋಎಉವ ನಿಷ್ಕಾರಣ ಕ್ರೌರ್ಯ ನಿರೂಪಕನಿಗೆ ಹಿಂಸೆಯಾಗುವಂತೆ ಮಾಡುತ್ತದೆ.ಶಾಲೆಗೆ ಹೊಸದಾಗಿ ಬರುವ ಕ್ಲಾರಾ ಕೂಡ ಅವನ ವಯಸ್ಸಿನ ಬೆಳವಣಿಗೆಗೆ ನೀರೆರೆಯುತ್ತಾಳೆ. ಬಲ್ಲವರಿಂದ ಮಾತ್ರವಲ್ಲದೆ ಅನುಭವದಿಂದಲೂ ನಿರೂಪಕ ಕಲಿಯುತ್ತಾನೆ. ಉದ್ಯೋಗ ಪರ್ವ ದಲ್ಲಿ ಸರ್ವೇ ಸಾಧಾರಣವಾಗಿ ನಡೆವಂತಹ ಸ್ಥಾನ ಉಳಿಸಿಕೊಳ್ಳಲು ನಡೆವ ಕಾಲೆಳೆದಾಟ, ವೃತ್ತಿ ಮಾತ್ಸರ್ಯಗಳ ಚಿತ್ರಣವಿದೆ. ಕಬಡ್ಡಿ ಕಬಡ್ಡಿ ಕತೆ ಆರಂಭದಲ್ಲಿ ತಬರನಕತೆಯ ನೆನಪಿಸಿದರೂ ಪೆನ್ಶನ್ ಬರುವುದರಿಂದ ಇಡೀ ಕತೆಯ ಜಾಡೇ ಬದಲಾಗುತ್ತದೆ. ಬಂದರೂ ಕಷ್ಟ ಬಾರದಿದ್ರೂ ಕಷ್ಟ ಅನ್ನುವುದನ್ನ ಸೂಚ್ಯವಾಗಿ ಹೇಳುತ್ತದೆ.
ಕಪ್ಪೆ ನುಂಗಿದ ಹುಡುಗ ಕತೆ ಬ್ಯಾಂಕಲ್ಲಿ ಚೆಕ್ ತಿದ್ದಿ ಬರೆದು ಸಿಕ್ಕಿಬಿದ್ದ ಹುಡಗನ ಕೇಸಲ್ಲಿ ಸಾಕ್ಷಿ ಹೇಳಲು ಹೋದ ಮ್ಯಾನೇಜರ್ ಒಬ್ಬನ ಪಡಿಪಾಟಲನ್ನು ವಿವರಿಸುತ್ತದೆ. ಸಾಕ್ಷಿ ಹೇಳಲು ಹೋದವ ಅಲ್ಲಿನ ಕಿರಿಕಿರಿ ಮುಗಿಸಿ ಹೊರಬಂದರೂ, ಬದುಕು ನೇಯ್ದ ಇನ್ನೊಂದು ಬಲೆಯಲ್ಲಿ ಸಿಲುಕಿ ಇಲ್ಲಿ ಎಲ್ಲರೂ ಕಪ್ಪೆ ನುಂಗಿದವರೇ ಅನ್ನುವುದ ಶ್ರುತಪಡಿಸುತ್ತದೆ. ತರಬೇತಿಯ ದಿನಗಳು ಉದ್ಯೋಗ ನಿಮಿತ್ತ ಮುಂಬಯಿ ಶಹರಕ್ಕೆ ಹೋದ ಗೋಪಾಲನ ಕೆಲಸ ಖಾಯಂ ಆಗುವವರೆಗಿನ ಡಾಯರಿ ತರಹ ಇದೆ. ಹಳ್ಳಿಯ ಜೀವವೊಂದು ಶಹರಕ್ಕೆ ಬಿಚ್ಚಿಕೊಳ್ಳುತ್ತಾ ಕೊನೆಗೆ ಅಲ್ಲಿಯದೇ ಆಗುವ ಈ ಕತೆ ಚೆನ್ನಾಗಿದೆ.
ಒಟ್ಟಾರೆ ಈ ಕಥಾಸಂಕಲನ ಮಾಗಿದ ಜೀವವೊಂದರ ಅನುಭವದ ಬುತ್ತಿಯ ಒಂದೆರಡು ತುತ್ತಿನಂತೆ ಭಾಸವಾಗುವುದು ಸುಳ್ಳಲ್ಲ.