ಒಟ್ಟು 1824 ಪುಟಗಳ ಎರಡು ಸಂಪುಟಗಳ ಬೃಹತ್ ಕೃತಿ ಪಟ್ಟಮಹಾದೇವಿ ಶಾನ್ತಲದೇವಿ. ಕೆ ವಿ ಅಯ್ಯರ್ ಅವರು ಬರೆದ ಶಾಂತಲಾ ಕೃತಿಯನ್ನೂ ಸಹ ಓದಿದ್ದೇನೆ. ಶಾಂತಲಾ ದೇವಿ ಕುರಿತು ನನಗೆ ಚಿಕ್ಕ ವಯಸ್ಸಿನಿಂದ���ೇ ತಿಳಿದಿತ್ತು. ಆದರೆ, ಸಮಗ್ರ ವ್ಯಕ್ತಿಯಾಗಿ, ಒಂದು ರಾಷ್ಟ್ರದ ಶಕ್ತಿಯಾಗಿ ಆಕೆ ಮನಸ್ಸಲ್ಲಿ ಅಚ್ಚೊತ್ತಿ ನಿಂತದ್ದು ಸಿ ಕೆ ನಾಗರಾಜರಾವ್ ಅವರ ಈ ಕೃತಿ ಓದಿದ ಮೇಲೆಯೇ. ಅಯ್ಯರ್ ಅವರ ಶಾಂತಲಾ ಕೃತಿ ಓದಿದ ಮೇಲೆ ರಸ ಸ್ವಾದನೆಯ ದೃಷ್ಟಿಯಿಂದ ಅದು ಶ್ರೇಷ್ಠ ಎನಿಸಿದರೂ ನನಗೆ ಅಲ್ಲಲ್ಲಿ ಕೆಲವು ಅಂಶಗಳು ಸಮಂಜಸ ಎನಿಸಿರಲಿಲ್ಲ. ಅದರಲ್ಲಿ ಮುಖ್ಯವಾಗಿ ಆಕೆಯ ಸಾಯುಜ್ಯದ ಕುರಿತಾದ ವಿಷಯಗಳು. ಪ್ರತಿಭೆ, ಸೌಂದರ್ಯ, ವಿವೇಚನೆ, ಸಹಿಷ್ಣುತೆ, ಜೀವನ ಕಲೆ ಹೀಗೆ ಎಲ್ಲದರಲ್ಲಿಯೂ ಶ್ರೇಷ್ಠ ಗುಣಗಳನ್ನು ಮೈಗೂಡಿಸಿಕೊಂಡ ಶಾಂತಲಾ ದೇವಿ ಶಿವಗಂಗೆ ಬೆಟ್ಟದಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಳು ಎಂಬುದು ನನಗೇಕೋ ಅರಗಲಾರದಾಗಿತ್ತು.
ಸಿ ಕೆ ನಾಗರಾಜರಾವ್ ಅವರ ಈ ಬೃಹತ್ ಕೃತಿಯನ್ನು ನಾನು ಓದಬೇಕೆಂದು ನಿರ್ಣಯಿಸಲು ಕಾರಣ ಈ ಮೇಲೆ ತಿಳಿಸಿದ ಅಂಶ ಎನ್ನಬಹುದು. ಬಿಟ್ಟು ಬಿಡದೆ ಓದಿಸಿಕೊಂಡು ಹೋಯಿತು ಈ ವಿಸ್ತಾರ ಗದ್ಯ. ಇದು ಮುಖ್ಯವಾಗಿ ಲೇಖಕರ ಲೇಖನಿಗೆ ಸಲ್ಲಬೇಕಾದ ಗೌರವ. ಇದು ಅವರ ಹಿಡಿದಿಡುವ ಶಕ್ತಿ.
ಅಯ್ಯರ್ ಅವರ ಶಾಂತಲೆಗೂ ಸಿ ಕೆ ನಾಗರಾಜರಾವ್ ರವರ ಶಾನ್ತಲದೇವಿಗೂ ಕೆಲವು ವ್ಯತ್ಯಾಸಗಳಿವೆ. ಆಕೆಯ ಪ್ರತಿಭೆ, ಕಲಾ ನಿಪುಣತೆ, ಸೌಂದರ್ಯ ಇವೆಲ್ಲವೂ ಒಂದೇ ಆಗಿದ್ದರೂ ಸಿ ಕೆ ನಾಗರಾಜರಾವ್ ಅವರ ಪಟ್ಟಮಹಾದೇವಿ ಶಾನ್ತಲದೇವಿ ಸಮ ಚಿತ್ತಳು, ದೂರ ದೃಷ್ಟಿ ಉಳ್ಳವಳು, ಸಮಷ್ಠಿ ಚಿಂತನೆಯ ಪ್ರತೀಕಳು, ಪರಮತ ಸಹಿಷ್ಣುವು, ಅಚಲ ಶ್ರದ್ಧೆ ಉಳ್ಳವಳು, ಎಲ್ಲರಲ್ಲಿಯೂ ಗುಣವನ್ನು ಗುರುತಿಸಿ ನಡೆಯುವವಳು ಹೀಗೇ ಹೇಳುತ್ತಲೇ ಸಾಗಬಹುದು.
ಆಕೆಯ ಬಾಲ್ಯದಿಂದಲೇ ಆಕೆಯ ಸಂಸ್ಕಾರ ಆಕೆಯನ್ನು ಮಹತ್ತರವಾದುದೆಡೆಗೆ ಕೊಂಡೊಯ್ಯುತ್ತದೆ. ಎರೆಯಂಗ ಪ್ರಭು ಮತ್ತು ಏಚಲ ದೇವಿಯವರ ಪುತ್ರರು ಬಲ್ಲಾಳ, ಬಿಟ್ಟಿದೇವ ಮತ್ತು ಉದಯಾದಿತ್ಯ. ಆಸ್ಥಾನದ ಡಣ್ಣಾಯಕರಾದ ಮರಿಯಾನೆ ಮತ್ತು ಅವರ ಪತ್ನಿ ಚಾಮವ್ವೆ (ಈಕೆ ಪ್ರಧಾನಿ ಗಂಗರಾಜರ ತಂಗಿ) ತಮ್ಮ ಮಕ್ಕಳಾದ ಪದ್ಮಲೆ, ಚಾಮಲೆ ಮತ್ತು ಬೊಪ್ಪ ದೇವಿ ಯವರನ್ನು ಅರಮನೆಯ ಸೊಸೆಯರನ್ನಾಗಿ ಮಾಡಬೇಕೆಂಬ ಮಹತ್ವಾಕಾಂಕ್ಷೆ ಹೇಗೆಲ್ಲಾ ಸಂಚುಗಳಿಗೆ ಎಡೆ ಮಾಡಿಕೊಟ್ಟಿತು. ತಮ್ಮ ಮಗಳು ಪದ್ಮಲೆ ಪಟ್ಟಮಹಾದೇವಿಯಾಗಲೇ ಬೇಕು ಎಂದು ಹಠ ಹಿಡಿದದ್ದು, ಬಿಟ್ಟಿದೇವನಿಗೆ ಶಾಂತಲೆ ಇಷ್ಟವಾಗಿ ಈ ಕಡೆ ಆತ ಸೊಪ್ಪು ಹಾಕದೆ ಇದ್ದದ್ದು. ಕೊನೆಗೆ ರಗಳೆಗಳೆ ಆಗಿ ಚಾಮವ್ವೆ ವಾಮಾಚಾರದ ಮೊರೆ ಹೋಗಿ, ಅದು ಕಾಕತಾಳೀಯ ಎಂಬಂತೆ ಎರೆಯಂಗ ಪ್ರಭುಗಳ ಜೀವಕ್ಕೆ ಕುತ್ತಾಗುತ್ತದೆ. ಇದನ್ನೆಲ್ಲ ಅರಿತ ಬಲ್ಲಾಳ ತಾನು ಪ್ರೀತಿಸಿದರೂ ಸಹ ರಾಷ್ಟ್ರಕ್ಕೆ ಒಳಿತಲ್ಲ ಎಂದು ಪದ್ಮಲೆಯನ್ನು ದೂರ ಇಡುತ್ತಾನೆ.
ಇದೆಲ್ಲ ಬಯಲಾಗಿ ಚಾಮವ್ವೆಗೆ ನಿಜವಾಗಿ ಪಶ್ಚಾತ್ತಾಪವಾಗಿ ಆಕೆ ರೋಗಕ್ಕೆ ತುತ್ತಾಗಿ ಅಸುನೀಗುತ್ತಾಳೆ. ಮತ್ತೆ ಸಂಧಾನವಾಗಿ, ಸಮಾಲೋಚನೆಯಾಗಿ ಮೂರು ಜನ ಸೋದರಿಯರು ಮಹಾರಾಜ ಬಲ್ಲಾಳನನ್ನೆ ಮದುವೆಯಾಗುವುದು ಎಂದು ನಿಶ್ಚಯವಾಗಿ ಮದುವೆಯೂ ಜರುಗುತ್ತದೆ. ಆದರೂ ಸೋದರಿಯರಲ್ಲಿಯೂ ಸವತಿ ಮಾತ್ಸರ್ಯ ತಲೆದೋರಿ ಮಹಾರಾಣಿ ಪದ್ಮಲೆಯ ವಿವೇಚನಾ ರಹಿತ ನಡೆಯಿಂದಾಗಿ ಹೊಯ್ಸಳ ವಂಶ ಮಹಾರಾಜ ಬಲ್ಲಾಳನನ್ನು ಕಳೆದುಕೊಳ್ಳುತ್ತದೆ. ಬಲ್ಲಾಳನ ನಂತರ ಆತನ ಪುತ್ರರು ಯಾರೂ ಇಲ್ಲದ ಕಾರಣ ಅನಪೇಕ್ಷಿತವಾಗಿ ಬಿಟ್ಟಿದೇವ ಮಹಾರಾಜನಾಗುತ್ತಾನೆ ಮತ್ತು ಆತನ ಮಡದಿ ಶಾಂತಲಾದೇವಿ ಪಟ್ಟಮಹಾದೇವಿಯಾಗುತ್ತಾಳೆ. ರಾಜಮಾತೆ ಏಚಲ ದೇವಿ ವಯೋಸಹಜ ಅನಾರೋಗ್ಯದಿಂದ ಸಾವನ್ನಪ್ಪುತ್ತಾಳೆ. ಆಕೆಗೆ ಮಹಾರಾಜ ಬಿಟ್ಟಿದೇವನಿಗೆ ಬಹು ಪತ್ನಿಯರಿರುವುದು ಇಷ್ಟವಿರುವುದಿಲ್ಲ. ಆದರೆ ರಾಜಕೀಯ ಕಾರಣಗಳಿಂದ ಪೂರ್ವ ಚಾಲುಕ್ಯ ವಂಶದ ಕುವರಿಯರಾದ ಬಮ್ಮಲದೇವಿ ಮತ್ತು ರಾಜಲದೇವಿಯರು ರಾಣಿಯರಾಗುತ್ತಾರೆ.
ಈ ಮಧ್ಯೆ ರಾಜಕುಮಾರಿ ಹರಿಯಲದೇವಿಯ ರೋಗ ಗುಣವಾಗದ ಸ್ಥಿತಿ ತಲುಪಿ ಆಚಾರ್ಯ ಶ್ರೀ ರಾಮಾನುಜರು ಅದೇ ಸಮಯಕ್ಕೆ ಆಗಮಿಸಿ ಗುಣಪಡಿಸಿದ್ದರಿಂದ ಬಿಟ್ಟಿದೇವನು ಜನ್ಮಾಪಿ ಜೈನ ಧರ್ಮೀಯನಾಗಿದ್ದರು ಶ್ರೀವೈಷ್ಣವ ತತ್ವದಲ್ಲಿ ನಂಬಿಕೆಯೂ ನೆಲೆಯೂರಿ ಆತ ಬಿಟ್ಟಿದೇವನಿಂದ ಮಹಾರಾಜ ವಿಷ್ಣುವರ್ಧನನಾಗುತ್ತಾನೆ. ಇದರ ಕುರಿತು ಸಾಕಷ್ಟು ಚರ್ಚೆಗಳು ನಡೆದು, ಚೋಳ ರಾಜ್ಯದಿಂದ ಆಚಾರ್ಯರು ಅತೃಪ್ತರಾಗಿ ಈ ಕಡೆ ಬಂದದ್ದರಿಂದ ಅವರಿಗೆ ಆಶ್ರಯ ನೀಡಿ, ಮಹಾರಾಜರು ಅವರ ಅನುಯಾಯಿಗಳಾದ ಮೇಲೆ ಆಗಬಹುದಾದ ರಾಜಕೀಯ, ಸಾಮಾಜಿಕ ಬದಲಾವಣೆಗಳ ಬಗೆಗೆ ಆಳವಾದ ಚಿಂತನೆ ನಡೆದು ಮತ ಪರಿವರ್ತನೆಗೆ ಸಮ್ಮತಿ ದೊರೆತಿರುತ್ತದೆ. ಆದರೆ ಪಟ್ಟಮಹಾದೇವಿ ಶಾಂತಲಾದೇವಿ ತನ್ನ ಧರ್ಮವನ್ನು ಬದಲಾಯಿಸಲು ಇಚ್ಛಿಸದೇ ಆಕೆ ಜೈನ ಮತಾನುಯಾಗಿಯೇ ಉಳಿಯುತ್ತಾಳೆ. ಇದರಿಂದ ಸಾಮರಸ್ಯವೇನು ಕದಡುವುದಿಲ್ಲ. ಸ್ವತಃ ಶಾಂತಲಾ ದೇವಿಯವರ ತಂದೆ ಹೆಗ್ಗಡೆ ಮಾರಸಿಂಗಮಯ್ಯ ಅವರು ಶೈವರು ತಾಯಿ ಮಾಚಿಕಬ್ಬೇ ಜಿನಭಕ್ತಳು. ಈ ಸಾಮರಸ್ಯದ ಬೆಳಕು ಶಾಂತಲಾ. ಆದ್ದರಿಂದ, ಇದನ್ನು ಆಕೆ ಅಷ್ಟೇ ಸಹಜವಾಗಿ ಸ್ವೀಕಾರ ಮಾಡುತ್ತಾಳೆ ಅಲ್ಲದೆ ವೇಲಾಪುರಿಯಲ್ಲಿ ಚೆನ್ನ ಕೇಶವ ಮತ್ತು ಸೌಮ್ಯ ನಾಯಕಿಯ ದೇವಸ್ಥಾನದ ಬೃಹತ್ ಕಾರ್ಯಕ್ಕೆ ಕಂಕಣ ಬದ್ಧಳಾಗಿ ನಿಲ್ಲುತ್ತಾಳೆ. ಅದರ ಫಲವನ್ನು ಇವತ್ತಿಗೂ ನಾವು ಕಾಣಬಹುದು.
ನಮಗೆ ಶಾಸನಾದಿಗಳಿಂದ ಮಹಾರಾಜ ವಿಷ್ಣುವರ್ಧನನ ನಂತರ ರಾಣಿ ಲಕ್ಷ್ಮೀ ದೇವಿಯ ಪುತ್ರ ನರಸಿಂಹ ಆಳಿದ ಎಂದು ಮಾತ್ರ ತಿಳಿದು ಬರುತ್ತದೆ. ರಾಣಿ ಲಕ್ಷ್ಮೀ ದೇವಿಯ ಪೂರ್ವಪರ ಯಾವುದೂ ಎಲ್ಲಿಯೂ ತಿಳಿಯುವುದಿಲ್ಲ. ಲೇಖಕರು ಕವಿಗೆ ಇರುವ ಕಲ್ಪನಾ ವಿಲಾಸದಿಂದ ರಸ ಸ್ವಾದನೆಗೆ ಭಂಗಬರಲಾಗದಂತಹ ಮಾರ್ಪಾಡುಗಳನ್ನು ಮಾಡಿಕೊಂಡು ವಿಸ್ತಾರವಾಗಿಯೇ ಲಕ್ಷ್ಮೀ ದೇವಿಯವರ ಅವರ ತಂದೆ ತಿರುವರಂಗದಾಸರ ಪಾತ್ರ ಪೋಷಣೆಯನ್ನು ಮಾಡಿದ್ದಾರೆ.
ಈ ಸಮಯದಲ್ಲಿ ಆದ ಚೋಳರಿಂದಾದ ಯುದ್ಧದ ವರ್ಣನೆಗಳು ಸೊಗಸಾಗಿ ಮೂಡಿವೆ, ವೇಲಾಪುರಿಯಲ್ಲಿ ಭರದಿಂದ ಸಾಗಿದ ಶಿಲ್ಪ ಕಲಾ ರಚನೆ. ಜಕಣಾಚಾರಿ ಡಂಕಣಾಚಾರಿಯ ಎಲ್ಲ ಕಥೆಯೂ ಎಳೆ ಎಳೆಯಾಗಿ ರೂಪುಗೊಂಡಿದೆ. ಸಮಾಜದಲ್ಲಿ ಸಾಮಾನ್ಯವಾಗಿ ಮಹಾರಾಜನ ಮತ ಪರಿವರ್ತನೆಯಿಂದ ಆಗಬಹುದಾದ ಸೂಕ್ಷ್ಮಾತಿ ಸೂಕ್ಷ್ಮ ಬದಲಾವಣೆಗಳು, ತಾತ್ಪೂರ್ತಿಕ ಹಿನ್ನಲೆ, ರಾಜಕೀಯ - ಸಾಮಾಜಿಕ ಅಸಮಾಧಾನಗಳು, ವೈಮನಸ್ಸು, ಘರ್ಷಣೆ, ಮತೀಯ ತಿಕ್ಕಾಟಗಳು, ಗೊಂದಲಗಳು, ಪಿತೂರಿ ಸಂಚುಗಳು ಎಲ್ಲವೂ ರೂಪ ತಾಳಿವೆ.
ಕೊನೆಗೆ ಈ ಎಲ್ಲದರಿಂದ ಬೇಸತ್ತ ಶಾಂತಲಾ ದೇವಿ, ಸಾಮರಸ್ಯ ಬಯಸಿ ಮುಂದಾದ ಮದುವೆಯಿಂದಲೇ ರಾಜ್ಯಾದ್ಯಂತ ಹರಡಿದ ಮತೀಯ ವೈಮನಸ್ಸು ತಾಂಡವವಾಡುವುದು ಸಹಿಸಲಾಗದೆ, ತನ್ನ ಅರಮನೆಯಲ್ಲಿ ಮತ್ತೆ ಸವತಿ ಮಾತ್ಸರ್ಯ ತಲೆದೋರಿ ಮಹಾರಾಜನಿಗೆ ಅಸಮಾಧಾನದ ಪ್ರಸಂಗಗಳು ಬಂದುದರಿಂದ ನೊಂದ ಶಾಂತಲಾ ದೇವಿ ಸಲ್ಲೇಖನ ವ್ರತ ಕೈಗೊಂಡು ಇಹಲೋಕವನ್ನು ತ್ಯಜಿಸುತ್ತಾಳೆ. ಆಕೆಗೆ ಮಕ್ಕಳು ಇದ್ದರು ಎಂದು ಲೇಖಕರು ತಿಳಿಸುತ್ತಾರೆ. ಇದು ಅಯ್ಯರ್ ಅವರ ಕೃತಿಯಲ್ಲಿನ ಉಲ್ಲೇಖಕ್ಕೂ, ಸಾಮಾನ್ಯವಾಗಿ ತಿಳಿದುಬರುವ ಜನ ವಾಹಿನಿಯಿಂದ ಬಾಯಿಂದ ಬಾಯಿಗೆ ಸಾಗಿ ಬರುವ ಕಥೆಗೂ ವ್ಯತ್ಯಾಸವಿದೆ. ಶಾಂತಲಾದೇವಿಗೆ ಬಲ್ಲಾಳ, ಚಿಕ ಬಿಟ್ಟಿ, ವಿನಯಾದಿತ್ಯ ಎಂಬ ಪುತ್ರರು ಹರಿಯಲ ದೇವಿ ಎಂಬ ಪುತ್ರಿಯೂ ಇದ್ದರೆಂದು ತಿಳಿಸುತ್ತಾರೆ. ಲಕ್ಷ್ಮೀದೇವಿಯ ಪುತ್ರ ನರಸಿಂಹನಿಗೆ ಪಟ್ಟವಾಗಬೇಕು ಎಂಬ ಹಠ ತಲೆದೋರಿ ಅರಮನೆಯ ವಾತಾವರಣ ಕಲುಷಿತವಾಗಿತ್ತು ಎಂಬುದಾಗಿ ಲೇಖಕರು ತಿಳಿಸುತ್ತಾರೆ. ಮಹಾರಾಜರು ಶ್ರೀ ವೈಷ್ಣವ ತತ್ವವನ್ನು ಒಪ್ಪಿಕೊಂಡವರು, ಅವರ ನಂತರವೂ ಅದೇ ತತ್ವ ಪರಿಪಾಲನೆ ಮಾಡುವ ನರಸಿಂಹ ಉತ್ತರಾಧಿಕಾರಿ ಆಗಬೇಕು, ಜೈನ ಮತೀಯರಲ್ಲ ಎಂಬಷ್ಟರ ಮಟ್ಟಿಗೆ ರಾಜ್ಯಾದ್ಯಂತ ಮತೀಯ ಭಿನ್ನಾಭಿಪ್ರಾಯ ಬೆಳೆದಿತ್ತು ಎಂಬುದನ್ನು ಸಹ ಲೇಖಕರು ತಿಳಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳಿಂದ ಮನನೊಂದ ಮಹಾರಾಣಿ ಶಾಂತಲಾ ದೇವಿ ಸಲ್ಲೇಖನಕ್ಕೆ ಶರಣಾಗುತ್ತಾಳೆ.
ಅಯ್ಯರ್ ಅವರ ಕೃತಿಯಿಂದ ಶಾಂತಲಾ ದೇವಿಯ ಬಗೆಗೆ ಮತ್ತಷ್ಟು ತಿಳಿಯಬೇಕೆಂಬ ಆಸೆ ಬಲಿತು ಈ ಬೃಹತ್ ಕೃತಿಯನ್ನು ಓದಿ ಆಕೆಯ ವ್ಯಕ್ತಿತ್ವಕ್ಕೆ ಮನಸೋತಿರುವೆ. ಎಂತಹ ಅದಮ್ಯ ಆದರ್ಶ ಶಾಂತಲಾ ದೇವಿಯದು. ದೂರದೃಷ್ಟಿ, ಸಮದರ್ಶಿತ್ವ, ಸಮಯ ಪ್ರಜ್ಞೆ, ಸಹಿಷ್ಣುತೆ ಈ ಎಲ್ಲವೂ ನನ್ನನ್ನು ನಿಬ್ಬೆರಗುಗೊಳಿಸಿದವು. ಇಂತಹ ವ್ಯಕ್ತಿಗಳಿಂದ ಮಾತ್ರ ಇಂದು ಸಾಕ್ಷಿಯಾಗಿ ನಿಂತಿರುವ ದೇವಾಲಯಗಳ ಸೃಷ್ಟಿ ಕಾರ್ಯ ಸಾಧ್ಯ. ಕೆ ವಿ ಅಯ್ಯರ್ ಅವರು ವಿವರಿಸಿದ ಶಾಂತಲೆಯ ಸಾಯುಜ್ಯಕ್ಕಿಂತ ಸಿ ಕೆ ನಾಗರಾಜರಾವ್ ಅವರು ತಿಳಿಸಿರುವ ಶಾಂತಲೆಯ ಅಂತ್ಯ ವಸ್ತುನಿಷ್ಠವಾಗಿದೆ ಮತ್ತು ಸತ್ಯಕ್ಕೆ ಹತ್ತಿರ ಎನಿಸಿತು.
ಬಹಳ ಸೊಗಸಾದ ಮೇರು ಕೃತಿ. ಆ ಮಹಾದೇವಿಯ ವ್ಯಕ್ತಿತ್ವಕ್ಕೆ ಯಾರಾದರೂ ಸರಿ ಮಾರುಹೋಗಲೆ ಬೇಕು. ಅಮೋಘ ವ್ಯಕ್ತಿತ್ವದ ಶಾಂತಲಾದೇವಿಗೆ ಅನಂತ ನಮಸ್ಕಾರಗಳು. ಈ ಕೃತಿಯಿತ್ತ ಸಿ ಕೆ ನಾಗರಾಜರಾವ್ ರವರಿಗೆ ಎಷ್ಟು ನಮನಗಳು ಸಲ್ಲಿಸಿದರೂ ಸಾಲದು.