--- ನನ್ನ ದೇವರು --
ಆಕೆ. ಸಣ್ಣದರಲ್ಲೆ ಮದುವೆಯಾಗಿದೆ. ಗಂಡ ಒಂದು ದಿನ ತೀರಿಕೊಂಡ. ಗಂಡನಿಗೊಬ್ಬ ಅಣ್ಣ. ಗಂಡ ತೀರಿಕೊಂಡ ಕೊರಗಲ್ಲಿ ಕುಗ್ಗಿದ್ದ ಆಕೆಯನ್ನು ಮೇಲೆತ್ತಿದ್ದು ಆಕೆಯ ಭಾವ.(ಗಂಡನ ಅಣ್ಣಾ). ಆತನೊಬ್ಬ ಹುಚ್ಚ ಎಂದು ಕೆಲವರು ವ್ಯಂಗ್ಯ ಮಾಡಿದರೆ, ಇನ್ನೂ ಕೆಲವರು ಆತನೊಬ್ಬ ವೈರಾಗಿ, ಅಧ್ಯಾತ್ಮಿ,ಆತನ ಮುಖದ ಕಳೆ ಬಲು ಅಪರೂಪ ಎಂದು ಗೌರವಿಸುತ್ತಿದ್ದರು. ಆತನಿಗೆ ಕಾವ್ಯ,ದೇವರು, ಧರ್ಮ,ಅಧ್ಯಾತ್ಮ ಹೀಗೆ ಹಲವು ವಿಚಾರಗಳ ಮೇಲೆ ಆಸಕ್ತಿ. ಇವರ ಪ್ರಭಾವದಿಂದ ಆಕೆಯೂ ಕೂಡ ಏನೇನೋ ಓದ���ತ್ತಿದ್ದಳು. ಹಾಡುತ್ತಿದ್ದಳು. ನಿಧಾನವಾಗಿ ಗಂಡನ ನೆನಪು ಮಾಸುತ್ತದೆ. ದಿನಗಳುರುಳಿದಂತೆ ಭಾವ ನ ಮೇಲೆ ತನಗಿರುವುದು ಪ್ರೇಮ ಎಂಬ ಕಹಿ ಸತ್ಯದ ಅರಿವಾಗಿ ತನ್ನ ಮೇಲೆ ಅಸಹ್ಯವೂ ಆಗಿ ಮುಂದೆ ಆ ಭಾವವೇ ನಿಜವೆಂದು ಅರಿವಾಗಿ, ಅವರೂ ತನ್ನನ್ನು ಬಯಸುತ್ತಿರುವರು ಎಂಬ ಭ್ರಮೆಗೆ ಒಳಪಡುತ್ತಾಳೆ.
ಇದೆಲ್ಲವೂ ಕೊನೆಯಾಗಿದ್ದು ಆ ಒಂದು ರಾತ್ರಿಯಲ್ಲಿ. ಭಾವನ ಜಾಗದಲ್ಲಿ ತನ್ನ ಗಂಡನ ರೂಪ ಪ್ರತ್ಯಕ್ಷ ವಾದಾಗ ! ಆ ಒಂದು ಘಟನೆ ಆಕೆಯೊಳಗಿದ್ದ ಭ್ರಮೆಯ ಪರದೆಯನ್ನು ಸರಿಸಿ ಆಕೆಯನ್ನು ಪರಿಷ್ಕರಿಸಿತ್ತದೆ.
ಮನುಷ್ಯನ ಚಂಚಲ ಮನಸ್ಸು, ಕ್ಷಣಿಕ ಬಂಧನಗಳ ಅನಾವರಣ ಈ ಕಥೆ !!
-- ಸಾಲದ ಮಗು --
ಊರ ಗೌಡರು. ಅವರ ಬಳಿ ಜೀತಕ್ಕಿರುವ ೧೦ ವಯಸಿನ ಬಾಲಕ. ಹೊರಗೆ ಜೋರು ಮಳೆ. ಗೌಡರಿಗೆ ಮಧ್ಯ ರಾತ್ರಿಯಲ್ಲೂ ಗದ್ದೆಯ ಬಳಿ ಸಿಕ್ಕಿರುವ ಮೀನಿನ ಚಿಂತೆ. ಗೌಡರ ದರ್ಪ ದೌರ್ಜನ್ಯಕ್ಕೆ ಸಿಲುಕಿ ಆ ಮಳೆಯ ರಾತ್ರಿಯಲ್ಲಿ ಮೀನು ಹೆಕ್ಕಲು ಹೋದ ಜೀತದಾಳು ಏನಾದ?
ಇಲ್ಲಿ ಮಲೆನಾಡಿನ ಮಳೆಯನ್ನು ಅಮೋಘವಾಗಿ ವರ್ಣಿಸಿದ್ದಾರೆ ಲೇಖಕರು.
-----ಆದರ್ಶ ಸಾಧನೆ----
ಜೀವನದಲ್ಲಿ ಆದರ್ಶವಾದಿಯಾಗುವುದು ಹೇಗೆ ? ಸನ್ಯಾಸದಿಂದ ಆದರ್ಶ ಜೀವನವ ಸಾಧಿಸಬಹುದೇ? ಅಥವಾ ಅಜೀವ ಪರ್ಯಂತ ಬ್ರಹ್ಮಚರ್ಯ ವನ್ನು ಅನುಸರಿಸುವುದರಿಂದ ಕಾರ್ಯ ಸಾಧನವಾಗಬಹುದೇ ? ಇನ್ನೂ ಒಂದು ಮಜಲು ಮುಂದೆ ಹೋಗಿ, ಮದುವೆ ಯಾಗಿ, ಕರ್ಮ ಯೋಗಿಯಂತೆ ಆದರ್ಶ ಜೀವನ ಸಿದ್ಧಿಸಬಹುದೇ? ಏನೇ ಹೇಳಿ, ಮನೋ ನಿಗ್ರಹವಿಲ್ಲದೆ ಯಾವ ಸಾಧನೆಯೂ ಅಪೂರ್ಣವಲ್ಲವೆ?
-- ಔದಾರ್ಯ--
ಒಬ್ಬರ ಮೇಲೆ ಎಷ್ಟೊಂದು ಔದಾರ್ಯ ತೋರಬಹುದು? ಔದಾರ್ಯ ತೋರಿದ ಮೇಲೂ ಅವರ ನಡುವಳಿಕೆ ಬದಲಾಗಬೇಕು ಎಂದೇನಿಲ್ಲವಲ್ಲ ! ಇಲ್ಲೊಂದು ಸುಂದರ ಕಥೆಯಿದೆ. ಮಂಡ್ಯ ದಿಂದ ತೀರ್ಥ ಹಳ್ಳಿಗೆ ವರ್ಗವಾಗಿ ಬರುವ ಕಥಾ ನಾಯಕ ಒಂದು ಹುಣ್ಣಿಮೆಯ ರಾತ್ರಿ ರಾಮತೀರ್ಥ ಸುಂದರ ಪ್ರಕೃತಿಯನ್ನು ಆಸ್ವಾದಿಸುತ್ತಿರುವಾಗ ಬರುವ ಡೇವಿಡ್ ಮಾಸ್ತರರು ಅವರು ತೋರಿದ ಔದಾರ್ಯದ ದುರಂತ ಕಥೆಯನ್ನು ಹೇಳ ತೊಡಗುತ್ತಾರೆ.ಒಟ್ಟಿನಲ್ಲಿ, ಅರ್ಹರಿಗೆ , ತಕ್ಕಮಟ್ಟಿಗೆ ಔದಾರ್ಯ ತೋರುವುದಷ್ಟೆ ಒಳಿತು.
-- ‘ಗಂಟು’ ಅಥವಾ ಗುಪ್ತ ಧನ --
ಹಿಂದೆಲ್ಲ ಭುವಿಯ ಒಳಗೆ ಅಡಗಿದ್ದ ಗುಪ್ತ ನಿಧಿಯ ವಶ ಮಾಡಿಕೊಳ್ಳಲು ಹೆಣಗುತ್ತಿದ್ದ ಜನರ ಮೌಢ್ಯವೇ ಈ ಕಥೆಯ ಮೂಲ. ಮರವೊಂದಕ್ಕೆ ಕೈ ಮೂಡಿದರೆ ಅದರ ಬುಡದಲ್ಲಿ ನಿಧಿಯಿರುತ್ತದೆಯಂತೆ, ಕೈ ಎಷ್ಟು ಉದ್ದವಿದೆಯೋ ಅಷ್ಟು ಆಳ ಆಗಿಯಬೇಕಂತೆ, ಆಗಿಯುವ ಮೊದಲು ಭೂತ ಪಿಶಾಚಿಗಳನ್ನು ಸಂತೃಪ್ತಗೊಳಿಸಬೇಕಂತೆ. ಇಂಥಾ ಮೌಢ್ಯದ ಬೆನ್ನು ಬಿದ್ದು ಮಂಜಣ್ಣ ಎನ್ನುವವರ ಕಥೆಯನ್ನು ಸೊಗಸಾಗಿ ವಿವರಿಸಿದ್ದಾರೆ ಲೇಖಕರು.
-- ಮೀನಾಕ್ಷಿಯ ಮನೆಮೇಷ್ಟರು --
ಇನ್ನೊಬ್ಬರ ಮೇಲಿರುವ ತಪ್ಪು ಕಲ್ಪನೆಗಳು ಯಾ ಭಾವನೆಗಳನ್ನು , ಪರಸ್ಪರ ಮಾತುಕತೆ ಯಿಂದಲೇ ಸರಿ ಮಾಡಿಕೊಳ್ಳಬೇಕೇ ಹೊರತು , ಮನಸಿನ ಭೂತದ ದಾಸನಾಗಬಾರದು ಎಂಬುದೇ ಈ ಕಥೆಯ ಆಶಯ.
ಮೀನಾಕ್ಷಿ ಗೆ ಒಬ್ಬರು ಮನೆ ಮೇಷ್ಟ್ರು ಇದ್ದರು. ಅವರಿಗಿದ್ದ ಒಂದು ಸಮಸ್ಯೆಯೆಂದರೆ , ತಾವು ಓದಿದ ಪುಸ್ತಕದಲ್ಲಿ ಬರುವ ಪಾತ್ರಗಳಿಗೆ ನಿಜ ಜೀವನದ ವ್ಯಕ್ತಿಗಳನ್ನು ಕಲ್ಪಿಸಿ ಜೀವಿಸುವುದು. ಕಾಲ ಕಳೆದಂತೆ, ಮೇಷ್ಟರು ಮೀನಾಕ್ಷಿ ಯೆಡೆ ಆಕರ್ಷಿತರಾಗುತ್ತಾರೆ. ಮೀನಾಕ್ಷಿಯೂ ತಮ್ಮನ್ನು ಇಷ್ಟ ಪಡುವಂತೆ ಭ್ರಮಿಸುತ್ತಾರೆ. ಈ ಭ್ರಮೆಯಿಂದ ಏನೆಲ್ಲಾ ಜರಗುತ್ತದೆ ಎಂದು ಕಥೆ ಓದಿ ತಿಳಿದುಕೊಳ್ಳಿ.
-- ಧನ್ವಂತರಿಯ ಚಿಕಿತ್ಸೆ --
ಹೃದಯ ವಿದ್ರಾವಕ ಕೂಗನ್ನು ಬೆನ್ನಟ್ಟಿಕೊಂಡು ಭೂಲೋಕಕ್ಕೆ ಬಂದ ವಿಶ್ವಾಮಿತ್ರ - ಪರಶುರಾಮ ರಿಗೆ ಕಂಡದ್ದು ಮರಣ ಶಯ್ಯೆಯಲ್ಲಿದ್ದ ಓರ್ವ ರೈತ. ಆತನ ರೋಗದ ಮೂಲವನ್ನು ಪರೀಕ್ಷಿಸಿದ ಧನ್ವಂತರಿ ಗೆ ಕಂಡದ್ದು ಆತನ ಎದೆಯ ಮೇಲಿರುವ ಯಮ ಭಾರ ! ದಬ್ಬಾಳಿಕೆ !
- ಇಂದಿಗೂ ವಾಸ್ತವ ಎನಿಸುವ ಈ ಕತೆಯಲ್ಲಿ ರೈತನ ಮೇಲಾಗುವ ಶೋಷಣೆಯನ್ನು ಮಾರ್ಮಿಕವಾಗಿ ಲೇಖಕರು ವಿಡಂಬನೆ ಮಾಡಿದ್ದಾರೆ.
-- ವೈರಾಗ್ಯದ ಮಹಿಮೆ --
ಅಟ್ಟಿದರೆ ಓಡುತ್ತದೆ;ಬಿಟ್ಟರೆ ಹಿಂಬಾಲಿಸುತ್ತದೆ.
ಸೋಮಾರಿಯಾದ ಒಬ್ಬ ಮದುವೆಯ ಕನಸು ಕಂಡು ವೈರಾಗ್ಯದ ದೀಕ್ಷೆ ಪಡೆದರೆ ಏನಾಗಬಹುದು ? ವೈರಾಗ್ಯ ವೆಂದರೆ ಇಷ್ಟ ಪಟ್ಟದನ್ನು ತ್ಯಜಿಸುವುದು ಯಾ ಬಿಡುವುದು. ಆದರೆ ಏನನ್ನು ತ್ಯಜಿಸಬೇಕು ಎಂದು ನಿರ್ಧರಿಸಿದ್ದನೋ , ಸನ್ಯಾಸಿಯಾದ ಮೇಲೆ ಅದು ತಾನಾಗೇ ಇವನ ಬಳಿ ಬಂದು ಸೇರುತ್ತದೆ. ವೈರಾಗ್ಯದ ಪರದೆಯ ಹಿಂದೆ !!
--------------------------------------------------------------------
- ಕಾರ್ತಿಕ್ ಕೃಷ್ಣ
ಮೈಸೂರು.
9-10-2021