ಕದಂಬ ಸಾಮ್ರಾಜ್ಯದ ಬಗೆಗೆ ಇರುವ ಅತ್ಯಲ್ಪ ಶಾಸನವನ್ನು ಆಧಾರವಾಗಿರಿಸಿ ಮಯೂರವರ್ಮ ಗದ್ದಗೆಗೇರುವ ಕಥಾನಕ ಬಹಳ ಚೆನ್ನಾಗಿ ಮೂಡಿಬಂದಿದೆ. ಮೊದಲ 20% ಶೇಕಡ ಬರವಣಿಗೆ ಅಷ್ಟೊಂದು ಹಿಡಿಸಲಿಲ್ಲ, ನಂತರ ಕಡಂಬಿ ಜನಾಂಗವನ್ನು ಒಗ್ಗೂಡಿಸಿ ಸೈನ್ಯ ಕಟ್ಟಿ ದೈತ್ಯ ಪಲ್ಲವರನ್ನು ನೆಲಕಚ್ಚಿಸುವ ಯುದ್ಧ ಚಾಣಾಕ್ಷತನ ವೀರೋಚಿತವಾಗಿದೆ. ವೈಜಯಂತಿಪುರ ಅಥವಾ ಈಗಿನ ಬನವಾಸಿಯಲ್ಲಿ ಕನ್ನಡದ ಮೊಟ್ಟ ಮೊದಲ ಸಾಮ್ರಾಜ್ಯ ಸ್ಥಾಪಿಸಿದ ರೀತಿ ಪ್ರತಿಯೊಬ್ಬ ಕನ್ನಡಿಗನೂ ತಿಳಿದುಕೊಳ್ಳಲೇಬೇಕಾದ ಇತಿಹಾಸ. ಪ್ರತಿ ಪುಟದ ಕೆಳಗೆ ಆಕರ ಪುಸ್ತಕಗಳನ್ನು ನಮೂದಿಸಿರುವುದು ಲೇಖಕರು ಅದೆಷ್ಟು ಅಧ್ಯಯನ ನಡೆಸಿ ಕಾದಂಬರಿ ಬರೆದಿದ್ದಾರೆ ಎನ್ನುವುದು ಮನದಟ್ಟಾಗುತ್ತದೆ.
ಶಾಸನಗಳ ಮತ್ತು ಆ ಕಾಲಘಟ್ಟದ ಗ್ರಂಥಗಳ ಅಭಾವದಿಂದಾಗಿ, ಲೇಖಕರೇ ಹೇಳುವ ಹಾಗೆ ಮಯೂರ ವರ್ಮರ ಬಗೆಗಿರುವ ಮಾಹಿತಿ ಅತ್ಯಲ್ಪ. ಇದೇ ಪರಿಣಾಮವಾಗಿ ಕನ್ನಡದ ಮೊದಲ ಅರಸನ ಕುರಿತಾದ ಕಾದಂಬರಿಗಳೂ ಕಡಿಮೆಯೆ. ಈ ಎಲ್ಲಾ ನ್ಯೂನತೆಗಳ ಮಧ್ಯೆಯೂ ಬೃಹತ್ ಮಾಹಿತಿಯನ್ನ ಕಲೆಹಾಕಿ ಒಂದು ಅದ್ಭುತವಾದ ಕಾದಂಬರಿಯನ್ನ ಕನ್ನಡಿಗರ ಮುಂದಿಟ್ಟಿರುವ ಮಹೆಂದಳೆರವರಿಗೆ ಧನ್ಯವಾದಗಳು. Well researched and briefly detailed with quite a number of references!.
ಮೆಹಂದಳೆ ಅವರ ಬರವಣಿಗೆ ಶೈಲಿಗೆ ಹೊಸಬನಾದ್ದರಿಂದಲೋ, ಕ್ಲಿಷ್ಟ ಕರವಾಗಿ ಸಾಗುವ ನಿರೂಪಣೆಯಿಂಲೋ ಅಥವಾ ಕೆಲವು ವ್ಯಕ್ತಿಗಳ ಸ್ಥಳಗಳ ಬಗೆಗೆ ಗೊಂದಲಕ್ಕೆ ಒಳಗಾಗಿದ್ದರಿಂದಲೊ ಏನೋ ನನಗೆ ಈ ಪುಸ್ತಕ ಓದಲು ತುಂಬಾ ಸಮಯ ಹಿಡಿಯಿತು. ಆರಂಭದಲ್ಲಿ ಕೆಲವು ವಿಷಯಗಳನ್ನ ಲೇಖಕರು ತುಂಬಾ strech ಮಾಡಿದ್ದಾರೆ ಅಥವಾ repeat ಮಾಡಿದ್ದಾರೆ ಅಂತ ಅನ್ನಿಸಿದರೂ ಕ್ರಮೇಣ ಎಲ್ಲವೂ trackಗೆ ಬರುವವು. ಕುಡಂಬಿಗಳ ವಿಚಾರ ತುಂಬ ಚೆನ್ನಾಗಿ ಮೂಡಿಬಂದಿದೆ ಹಾಗೆಯೇ ಯುದ್ಧ ಸನ್ನಿವೇಶಗಳು ಕೂಡ. ಕದಂಬರಿಗಿಂತಲೂ ಹೆಚ್ಚಾಗಿ ಇದೊಂದು research work ಅಥವಾ ಸಂಶೋಧನಾ ಕೃತಿ ಅಂತ ಭಾಸವಾಯಿತು.
ದೇವುಡುರವರ ಕಾದಂಬರಿ ಆಧಾರಿತ ಮಯೂರ ಸಿನಿಮಾದ ಕಥೆಗೂ ಈ ಕಾದಂಬರಿಗೂ ಅಜಗಜಾಂತರ. ಅಲ್ಲಿ ಸಾಹಸಿ, ಸಹೃದಯಿ, ಪ್ರೇಮಮಯಾಗಿ ಕಾಣಸಿಗುವ ಮಯೂರನ ವೃತ್ತಾಂತ, ಹೆಚ್ಚು ಕಾಲ್ಪನಿಕ ಅಂಶಗಳಿಂದ ಕೂಡಿದೆ; ಆದರೆ ಇಲ್ಲಿ ಕೆಚ್ಚೆದೆಯ ಪರಾಕ್ರಮದ ಧೀಮಂತ ನಾಯಕನಾಗಿ ಕಾಣಸಿಗುವ ಮಯೂರನ ಕಥೆ, ವಾಸ್ತವಕ್ಕೆ ತುಂಬಾ ಹತ್ತಿರವಾಗಿದೆ ಅಂತ ನನಗೆ ಅನ್ನಿಸಿತು.
ತನ್ನದೇ ವಿಶಿಷ್ಟ ಯುದ್ಧಕ್ರಮದಿಂದ, ಕಾರ್ಯತತ್ಪರತೆ ಹಾಗೆಯೇ ಛಲದಿಂದ ಅಭಿಮಾನಿ ಹಾಗೂ ನಾಡಪ್ರೇಮಿಗಳ ಪಡೆಗೈದು ಪಲ್ಲವರ ಹುಟ್ಟಡಗಿಸಿ, ಶತ್ರುಗಳ ರುಂಡಗಳ ಚೆಂಡಾಡಿ ಚೊಚ್ಚಲ ಕನ್ನಡ ರಾಜ್ಯದ ನಕಾಶೆಯನ್ನ ಭಾರತ ಭೂಖಂಡದಲ್ಲಿ ಅಚ್ಚಳಿಯದಂತೆ ಸ್ಥಾಪಿಸಿದ ವೀರ, ಮಯೂರ ವರ್ಮ. ಕನ್ನಡಿಗರ ಶೌರ್ಯ ಪೌರುಷ ವಿಶಾಲತೆಗಳು ಜಗಜ್ಜಾಹೀರವಾಗಲು, ಸಾಲುಸಾಲು ವೈಭವಪೂರಿತ ಕನ್ನಡ ವಂಶಗಳು ಜಗತ್ನಕಾಷೆಯಲ್ಲಿ ಬೆಳಗಲು ಮಯೂರನು ಕಂಡ ಕನ್ನಡಿಗರ ಸ್ವಾತಂತ್ರ್ಯದ, ಸ್ವಾಭಿಮಾನದ ಕನಸೇ ಬುನಾದಿ. ಇದಕ್ಕೆ ನಾವು ಸದಾ ಚಿರಋಣಿಗಳಾಗಿರಬೇಕು. ಬರೇ ಪರಕೀಯರ ಜಪದಲ್ಲಿಯೇ, ನಮ್ಮವರು ಉಳಿಸಿ ಗಳಿಸಿ ಬೆಳೆಸಿದ ನಾಡಿನ ಇತಿಹಾಸದ ಬಗೆಗೆ ಅಜ್ಞಾನ ತಿರಸ್ಕಾರಗಳಲ್ಲಿಯೇ ಮುಳುಗಿರುವ ಈ ನಮ್ಮ ಪೀಳಿಗೆಯಿಂದ ಮಹೋನ್ನತವಾದ ಚೆಲುವ ಕನ್ನಡನಾಡು ಚಿರಸ್ಥಾಯಿಯಾಗಿ ಉಳಿಯಲು ಸಾಧ್ಯವೇ?, ಅಂತ ಕೆಲವೊಮ್ಮೆ ಮನ ಕೊರಗುವುದು!
ಕರುನಾಡಿನ ದಟ್ಟ ಕಾನನದ ಮಧ್ಯೆ ಇರುವ ಅಗ್ರಹಾರವೊಂದರ ಬಡ ಬ್ರಾಹ್ಮಣ ಕುಟುಂಬದ ಹುಡುಗನೊಬ್ಬ, ವಿದ್ಯಾರ್ಜನೆಗೆಂದು ತಮಿಳುನಾಡಿನ ಕಂಚಿಯವರೆಗೆ ಪ್ರಯಾಣ ಮಾಡಿ ಅಲ್ಲಿ ಪಲ್ಲವರ ದುರ್ನಡತೆಯಿಂದ ಆದ ಅವಮಾನಕ್ಕೆ ಪ್ರತಿಶೋದವಾಗಿ ಅವರ ಸಾಮ್ರಾಜ್ಯವನ್ನು ನಿರ್ನಾಮ ಮಾಡಿದ ಕಥೆ ಕರ್ನಾಟಕ ಬಲ ಎಂಬ ಗಡಿಗಳೇ ಇಲ್ಲದ ರಾಜ್ಯಕ್ಕೆ, ಇವೆಲ್ಲವೂ ಕರ್ಣಾಟಕಕ್ಕೇ ಸೇರಿದ ಪ್ರದೇಶ ಎಂದು ಇತಿಹಾಸದಲ್ಲಿ ಗುರುತಿಸುವಂತೆ ಮಾಡಿದ ಸಾಹಸಿಯ ಕಥೆ. ಕನ್ನಡದ ಮೊದಲ ಸಾಮ್ರಾಜ್ಯ ಕಟ್ಟಿದ ಕದಂಬ ವಂಶದ ಮೂಲಪುರುಷನ ಕಥೆ.
ಪ್ರತಿ ಕನ್ನಡಿಗನ ಮನದಲ್ಲಿಯೂ ಹಚ್ಚೆ ಹಾಕಿದಂತೆ ಅಚ್ಚಾಗಬೇಕಾದಂತಹ ಕಥೆ.
ಒಬ್ಬ ಬಡ ಬ್ರಾಹ್ಮಣನಾಗಿ ಹುಟ್ಟಿದ ಹುಡುಗ ಮುಂದೆ ಒಂದು ದೊಡ್ಡ ಸಾಮ್ರಾಜ್ಯ ಕಟ್ಟುವಷ್ಟು ಬೆಳೆಯುತ್ತಾನೆ ಅಂದರೆ ಅವನು ಸವೆಸಿದ ದಾರಿ ಸುಲಭವಿರಲಿಲ್ಲ. ಶತಮಾನಗಳವರೆಗೆ ಭಾರತದ ಉತ್ತರಕ್ಕೆ ಮತ್ತು ದಕ್ಷಿಣಕ್ಕೆ ತಡೆಗೋಡೆಯಾಗಿ ಆಡಳಿತ ನಡೆಸಿದ ಹೆಮ್ಮೆ ಕದಂಬರಿಗೆ ಸಲ್ಲುತ್ತದೆ. ಕರ್ನಾಟಕದ ಇತಿಹಾಸವನ್ನು ಬರೆಯಲು ಶುರು ಮಾಡಿದರೆ ಅದನ್ನು ಮಯೂರವರ್ಮನ ಕಥೆಯಿಂದಲೇ ಶುರು ಮಾಡಬೇಕು. ಇಂತಹ ಒಂದು ಮಹಾನ್ ಸಾಮ್ರಾಟನ ಬಗ್ಗೆ ನಮಗೆ ಇತಿಹಾಸ ಪಠ್ಯದಲ್ಲಿ ಹೇಳಿ ಕೊಟ್ಟಿರುವುದು ತುಂಬಾ ಕಡಿಮೆ. ಲೇಖಕರಾದ ಸಂತೋಷ್ ಕುಮಾರ್ ಮೆಹೆಂದಾಳೆ ಅವರು ತುಂಬಾ ಶ್ರಮವಹಿಸಿ ಅಧ್ಯಯನ ಮಾಡಿ ದೃಶ್ಯಗಳು ಕಣ್ಣಿಗೆ ಕಟ್ಟುವಂತೆ ಬರೆದಿದ್ದಾರೆ. ಏಷ್ಟು ಪುರಾವೆ ಹುಡುಕಿದರೂ ಮಯೂರವರ್ಮನ ಬಗ್ಗೆ ಸಿಗುವುದು ಎರಡು ಮೂರು ಪುಟಗಳ ಮಾಹಿತಿ ಅಷ್ಟೇ ಎನ್ನುತ್ತಾರೆ ಲೇಖಕರು. ಅದನ್ನೇ ಬಳಸಿ, ಒಂದಿಷ್ಟು ಭೌಗೋಳಿಕ ಹಿನ್ನೆಲೆ ಲೇಖಕನ ಸ್ವಾತಂತ್ರ್ಯವನ್ನು ಬಳಸಿ ಈ ಕಾದಂಬರಿಯನ್ನು ಹೆಣೆದಿದ್ದಾರೆ. ಕಾದಂಬರಿಯನ್ನು ಬೆಳೆಸಿದ ರೀತಿ ಕಾಲ್ಪನಿಕವಾದರೂ ಕಥೆಯ ಎಳೆ ಕಾಲ್ಪನಿಕ ಅಲ್ಲ. ಅದಕ್ಕೆ ಶಾಸನಗಳ ಪುರಾವೆಗಳನ್ನು ಕೊಟ್ಟಿದ್ದಾರೆ. ಕರ್ನಾಟಕ ಮತ್ತು ಕನ್ನಡದ ಅಸ್ಮಿತೆಗೆ ಕಾರಣನಾದ ಮೂಲಪುರುಷನ ಕಥೆಯನ್ನು ಓದುವುದು, ಕಥೆ ರೂಪದಲ್ಲಾದರೂ ಮುಂದಿನವರಿಗೆ ಹಂಚುವುದು ನಮ್ಮ ಜವಾಬ್ದಾರಿ ಎಂದು ನನಗನಿಸುತ್ತದೆ. ಪ್ರತಿ ಕನ್ನಡದ ಓದುಗನೂ ಒಮ್ಮೆ ಆದರೂ ಈ ಪುಸ್ತಕದ ಮೇಲೆ ಕಣ್ಣಾಡಿಸಬೇಕು.