ಶುದ್ಧ ಶುಂಠಿಯಲ್ಲಿ ಶುಂಠಿಯದೇನು ತಪ್ಪು? ಸೋಲುವುದು ಸರಿ, ಸೋತು ಸುಣ್ಣವಾಗುವುದು ಯಾಕೆ? ಎಂಟೇ ದಿಕ್ಕುಗಳಿರುವಾಗ ದಶದಿಕ್ಕು ಅನ್ನುವುದು ಯಾಕೆ? ಗಿರಿಜೆಗೆ ಮೀಸೆ ಯಾಕೆ ಅಂಟಿಕೊಂಡಿತು? ಮರೀಚಿಕೆಗೂ ಮಾರೀಚನಿಗೂ ಸಂಬಂಧ ಇದೆಯೆ? ಈ ಸಂಬಂಧ ಅನ್ನುವುದರಲ್ಲಿ ಬಾಲ ಸೀಳಬೇಕಾದ ಅಕ್ಷರ ಯಾವುದು? ಕಬಂದಬಾಹು ಅನ್ನುವುದರ ಹಿಂದೊಂದು ಕತೆ ಇದೆಯಾ? ಅಡಗೂಲಜ್ಜಿ ಕತೆ ಅಂದರೇನು? ಕುಚಿಕು ಅನ್ನುವುದು ಸಿನಿಮಾ ಹಾಡಿಗಿಂತ ಮೊದಲೇ ಇದ್ದ ಪದವೆ? ಈ ಚಳ್ಳೆಹಣ್ಣನ್ನು ಪೊಲೀಸರಿಗೇ ಯಾಕೆ ತಿನ್ನಿಸುವುದು? ಬಡ್ಡಿಮಗ ಅಂದರೆ ಅಷ್ಟೆಲ್ಲಾ ಕೆಟ್ಟರ್ಥ ಇದೆಯಾ? ನೀಟು ಅನ್ನುವುದು ಕನ್ನಡ ಪದ ಹೇಗಾಗುತ್ತೆ? ಹತ್ಯೆ ಬೇರೆ ವಧೆ ಬೇರೇನಾ? ಬಿರುದು ಸರಿ ಬಾವುಲಿ ಯಾಕೆ ಕೊಡುವುದು? ಧರ್ಮದೇಟಿಗೆ ಧರ್ಮದೇಟು ಅನ್ನುವುದು ಯಾವ ಧರ್ಮ? ತುಕಾಲಿ ಅನ್ನುವ ಪದವನ್ನು ಡಿಕ್ಷನರಿಗೇಕೆ ಸೇರಿಸಿಕೊಂಡಿಲ್ಲ? ದಿಗ್ಗಜರು ಅಲ್ಲ ದಿಗ್ಗಜಗಳು ಅನ್ನಬೇಕು ತಾನೆ? ಜಹಾಂಗೀರಿಗೆ ಆ ಸ್ವೀಟ್ ನೇಮ್ ಬಂದದ್ದು ಹೇಗೆ? ದಮ್ಮಯ್ಯ ದಕ್ಕಯ್ಯ ಸುತರಾಂ, ಚಾಚೂ ಇವರೆಲ್ಲಾ ಯಾರು? ಬಂದಾಗ ಕಣ್ಣು ಮುಚ್ಚಿಕೊಳ್ಳಬಾರದ ಎಣ್ಣೆ ಯಾವುದದು? ಕೊಡೆ ಇರುವುದು ಬಿಸಿಲಿಗೋ ಮಳೆಗೋ? ನಾಗಾಲೋಟದಲ್ಲಿ ಹಾವೂ ಇಲ್ಲ ಲೋಟವೂ ಇಲ್ಲವೆ? ಮಾಣಿ ಅನ್ನುವ ಪದ ಉಡುಪಿ ಹೊಟೆಲುಗಳ ಅಡುಗೆಮನೆಯಲ್ಲಿ ತಯಾರಾದ ಬಿಸಿ ಪದಾರ್ಥವೆ? ಕುಟುಂಬದಲ್ಲಿ ಭಾವ ಒಬ್ಬನೇ ಬಾಲ ಇರುವ ಮಹಾಪ್ರಾಣಿಯೆ? ಪ್ರಮೀಳಾ ರಾಜ್ಯ ಅಂತ ನಿಜಕ್ಕೂ ಒಂದಿತ್ತೆ? ಎಷ್ಟು ಹರದಾರಿ ಸೇರಿದರೆ ಒಂದು ಗಾವುದ? ಡಕೋಟ ಸ್ಕೂಟರ್ ವಿಮಾನದಲ್ಲಿ ಹಾರಿ ಬಂತೆ? ತಲೆ ರುಂಡ ಅನ್ನುವುದಾದರೆ ರುಮಾಲಿಗೆ ಮುಂಡಾಸು ಅನ್ನುವುದೇಕೆ? ಮಮಕಾರಕ್ಕೂ ಮಮತೆಗೂ ವ್ಯತ್ಯಾಸ ಇದೆಯಾ? ಮುಂದಿನ ಶತಮಾನದವರ ಪಾಲಿಗೆ ಈಗ ನಾವಾಡುವ ಕನ್ನಡ ಹಳಗನ್ನಡವಾಗುತ್ತಾ? ಪದೇಪದೇ ಮಾಡುವ ಕಾಗುಣಿತದ ತಪ್ಪುಗಳು, ಪದಗಳನ್ನು ಒಡೆದು ನೋಡಿದಾಗ ರಟ್ಟಾದ ಗುಟ್ಟುಗಳು, ಯಾವ ಪದದ ಸಿಟಿಜನ್ ಶಿಪ್ ಯಾವ ದೇಶದ್ದು- ಇಂಥ ಆರು ನೂರು ಬೆರಗಿನ ಸಂಗತಿಗಳನ್ನು ಸ್ವಾರಸ್ಯಕರವಾಗಿ ತೆರೆದಿಡುವ ಪುಸ್ತಕವಿದು. ಬನ್ನಿ, ಕನ್ನಡದ ಸೊಗಸಿನ ಲೋಕಕ್ಕೆ ನಿಮಗೆ ಸ್ವಾಗತ.
ಪುಸ್ತಕ: ಸರಿಗನ್ನಡಂ ಗೆಲ್ಗೆ ಲೇಖಕರು: ಅಪಾರ ಪುಟಗಳು: 332 ಬೆಲೆ: 390
ಇಂತಹದ್ದೊಂದು ಪುಸ್ತಕವನ್ನು ಓದಿ ಮುಗಿಸಿಬಿಡಬಾರದು, ಓದುತ್ತಾ ಇರಬೇಕು. ಪುಸ್ತಕದಲ್ಲಿರುವ ಅನೇಕ ವಿವರಣೆಗಳು, ವಾಕ್ಯಗಳು, ಪದಗಳು, ನಾಣ್ಣುಡಿಗಳನ್ನು ಈಗಾಗಲೇ ನಾವು ಕೇಳಿರುತ್ತೇವೆ, ಬಹುಷಃ ಅವುಗಳ ಪ್ರಯೋಗದಲ್ಲಿ, ಬಳಸುವುದರಲ್ಲಿ ಅಥವಾ ಬರೆಯುವಾಗ, ಅಪಭ್ರಂಶ ವಾಗಿರಬಹುದು.
"ತಪ್ಪಾಗೋದು ದೊಡ್ಡ ವಿಷಯ ಅಲ್ಲ. ತಿದ್ದಿಕೊಳ್ಳೋದೂ ಸಣ್ಣ ವಿಷಯನೂ ಅಲ್ಲ." ಹಾಗಾಗಿ ಸಮಯ ಸಿಕ್ಕಾಗ ಈ ಪುಸ್ತಕ ನಿಮ್ಮ ಕೈಗೆಟುಕುವಂತಿರಲಿ.
ಯಾರಿಗಾದರೂ ಉಡುಗೊರೆ ಕೊಡಬೇಕು ಅನ್ನಿಸಿದಾಗ, ರವಿ ಬೆಳೆಗೆರೆಯರ "ಉಡುಗೊರೆ" ಜೊತೆಗೆ ಇದನ್ನೂ ಸೇರಿಸಿಕೊಳ್ಳಬಹುದು.
ಸಾಮಾನ್ಯ ಪ್ರಕಾರಗಳನ್ನು ಹೊರತು ಪಡಿಸಿ, ಭಾಷೆಗೆ ಇಂತಹ ಪುಸ್ತಕಗಳ ಅವಶ್ಯಕತೆ ಇದೆ. ಇಂತಹದ್ದೊಂದು ಯೋಚನೆಯಿಂದ ಈ ಪುಸ್ತಕವನ್ನು ಬರೆದಿರುವ ಅಪಾರ ರವರಿಗೆ ಅಪಾರವಾದ ಅಭಿನಂದನೆಗಳು ಮತ್ತು ವಸುದೇಂಧ್ರ ರವರ ಛಂದ ಪುಸ್ತಕ ಇಂತಹ ಅನೇಕ ಪುಸ್ತಕಗಳನ್ನು ಹೊರತರಲಿ ಎಂದು ಹಾರೈಸುವೆ.