ಮಂಗಳೂರಿನಲ್ಲಿ ಹುಟ್ಟಿ, ಬೆಳೆದು, ಮೈಸೂರಿನಲ್ಲಿ ಇಂಜಿನಿಯರಿಂಗ್ ಓದಿದ ವಿಠಲ್ ಶೆಣೈಯವರು, ಬೆಂಗಳೂರಿನ ಹಲವು ಬಹುರಾಷ್ಟ್ರೀಯ ಸಾಫ್ಟ್ವೇರ್ ಕಂಪೆನಿಗಳಲ್ಲಿ ಕಳೆದ ಎರಡು ದಶಕಗಳಿಗಿಂತಲೂ ಹೆಚ್ಚು ಕಾಲ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡ ಬರವಣಿಗೆಯ ಹುಚ್ಚು ಕಳೆದ ಏಳು-ಎಂಟು ವರ್ಷಗಳಿಂದ ಪ್ರಾರಂಭವಾಗಿ ಈಗ ಪುಸ್ತಕ ಪ್ರಕಾಶನದತ್ತ ತಮ್ಮ ಸಾಹಿತ್ಯ ಪ್ರಯಾಣವನ್ನು ಮುಂದುವರೆಸಿದ್ದಾರೆ.
ಅಮೇರಿಕಾ, ಇಂಗ್ಲೆಂಡ್, ಸ್ಕಾಟ್ಲೆಂಡ್, ಜರ್ಮನಿ, ಬಲ್ಗೇರಿಯ, ಸಿಂಗಾಪುರ್-ಗಳಂತಹ ದೇಶಗಳನ್ನು ಕೆಲಸದ ನಿಮಿತ್ತ ವಿಹರಿಸಿ, ವಿವಿಧ ಜನರೊಡನೆ ಬೆರೆತು, ಅಲ್ಲಿಯ ಕೆಲವು ಸೂಕ್ಷ್ಮತೆಗಳನ್ನು ಗಮನಿಸಿ ಅವುಗಳನ್ನು ಕಥೆ, ಪ್ರಬಂಧ ಮತ್ತು ಕಾದಂಬರಿಗಳಲ್ಲಿ ತರುವ ಪ್ರಯತ್ನ ಮಾಡುತ್ತಲೇ ಇದ್ದಾರೆ.
ಯಂಡಮೂರಿ ವೀರೇಂದ್ರನಾಥ್, ಪೂರ್ಣಚಂದ್ರ ತೇಜಸ್ವಿ, ಕೆ.ಎನ್.ಗಣೇಶಯ್ಯ ನವರಂತಹ ಮಹಾನ್ ಲೇಖಕರ ಬರಹಗಳನ್ನು ಓದಿ ಪ್ರೇರೇಪಿತರಾಗಿದ್ದಾರೆ. ಸಾಫ್ಟ್ವೇರ್ ಕೋಡ್ ಮತ್ತು ಕಥೆಗಳನ್ನು ನಿಯತವಾಗಿ ಬರೆಯುತ್ತಾರೆ.
ಕನ್ನಡದಲ್ಲಿ ಹಾಲೋಕಾಸ್ಟ್ ಕಾದಂಬರಿ ಅಂದರೆ ನೆನಪಾಗೋದು ಯಾದ್ ವಶೇಂ. ಪಾಶ್ಚಾತ್ಯ ಸಾಹಿತ್ಯದಲ್ಲಿ ಈಗಲೂ ರಾಶಿ ರಾಶಿ ಕಾದಂಬರಿಗಳು ಬರುತ್ತಲೇ ಇವೆ. ಕಳೆದ ದಶಕದಲ್ಲಿ nightingale ಈ ದಿಸೆಯಲ್ಲಿ ಗಮನಾರ್ಹ ಕೃತಿ.
ಈ ಕಾದಂಬರಿಯ ಕಥಾವಸ್ತು ಕನ್ನಡಿಗರಿಗೆ ಹೊಸತು. ಎರಡನೇ ಮಹಾಯುದ್ಧ , ಅದರಲ್ಲಿ ನಾಜಿಗಳ jew ದ್ವೇಷ, ಆ ಭೀಕರತೆ, ಉಳಿವಿಗಾಗಿ ಹೋರಾಟ,ಒಂದು ಟ್ರೆಷರ್ ಹಂಟ್ ಹೀಗೆ ಈ ಕಾದಂಬರಿಯ ಹರಹು ದೊಡ್ದದು.
ಈ ಕಾದಂಬರಿಗೆ ವಿಠ್ಠಲ್ ಶೆಣೈ ಮಾಡಿದ ರಿಸರ್ಚ್ ಪುಟ ಪುಟದಲ್ಲಿ ನಿಮಗೆ ಕಾಣುತ್ತದೆ. ಆ ನೈಜ ಅನುಭವಗಳ ವಿವರಣೆ, ಕತೆಯ ಕೊಂಡು ಹೋದ ರೀತಿ ಇವೆಲ್ಲಾ ಬಹಳ ಚೆನ್ನಾಗಿದೆ.
ನನಗೆ ಇದರ ಬಗ್ಗೆ ಚರ್ಚೆ ಆಗದಿರುವುದು ನಿಜಕ್ಕೂ ಆಶ್ಚರ್ಯ ಹುಟ್ಟಿಸಿತು. 1939ರಿಂದ ಎರಡನೇ ಮಹಾಯುದ್ಧ ಕೊನೆಯಾಗುವ ಗಳಿಗೆಯವರೆಗಿನ ಆ ಚಿತ್ರಣ ಕಣ್ಣ ಮುಂದೆ ಬರುವ ಹಾಗೆ ಬರೆದ ರೀತಿ ಇಷ್ಟ ಆಗುತ್ತದೆ. ಫ್ಲಾಶ್ ಬ್ಯಾಕ್ ತಂತ್ರದ ಬಳಕೆ, ಹುಡುಕಾಟ ಕುತೂಹಲ ಹುಟ್ಟಿಸುವ ಶೈಲಿ .
ಇದನ್ನು ನೀವು ಓದಬೇಕು.
ಕನ್ನಡದ ಮಟ್ಟಿಗೆ ತೀರಾ ಹೊಸತು ಎನ್ನಿಸುವ ಕತಾ ವಸ್ತು. ಅಚ್ಚುಕಟ್ಟಾದ ಮುದ್ರಣ.
ನಂಗೆ ಬಹಳ ಕುಶಿ ಕೊಟ್ಟ ಓದು.
ಇದನ್ನು ಓದಿದ ಮೇಲೆ ಎರಡನೇ ಮಹಾಯುದ್ಧದ ಕರಾಳತೆ ನಿಮಗೆ ಅನುಭವಕ್ಕೆ ಬರುತ್ತದೆ.
Wow.... Just wow... ಈ ವರ್ಷ ಬಿಡುಗಡೆಯಾದ ಯಾವುದಾದ್ರೂ ಒಂದು ಪುಸ್ತಕ ನನಗೆ ಭರವಸೆ ಕೊಟ್ಟಿದೆ ಅಂದರೆ ಇದೇ. ವಿಠಲ್ ಶೆಣೈರ ಇಲ್ಲಿವರೆಗೂ ಬಂದ ಪುಸ್ತಕಗಳನ್ನು ಗಮನಿಸಿದರೆ ಇದು ಇವರು ಬರೆದಿರುವ ಅತ್ಯುತ್ತಮ ಕೃತಿ.
ಎರಡನೇ ವಿಶ್ವಯುದ್ಧದ ಕರಾಳತೆಯನ್ನು ಆಧಾರಿಸಿ ಬರೆದ ಪುಸ್ತಕಗಳ ರಾಶಿಯನ್ನೇ ಆಂಗ್ಲ ಸಾಹಿತ್ಯದಲ್ಲಿ ಕಾಣಬಹುದು. ಕನ್ನಡದಲ್ಲಿ ಒಂದಷ್ಟು ಪುಸ್ತಕ ಬಂದಿದ್ದರೂ ಇಷ್ಟು ವಿಶಾಲವಾಗಿ ಯಾರೂ ಬರೆದಿಲ್ಲ. ಯುದ್ಧದ ನಂತರದ ಪರಿಣಾಮಗಳನ್ನು ಹೇಳಿರುವುದು ಕನ್ನಡದ ಮಟ್ಟಿಗೆ ಹೊಸ ವಿಷಯವೇ. ಇದಲ್ಲದೇ ಯಾತನ ಶಿಬಿರಗಳ ಘೋರತೆಯನ್ನು ತಿಳಿಸಿ ಕೊಡುವ ಭಾಗವೂ ಹಲವು ಮೌಲ್ಯಯುತ ವಿಚಾರಗಳನ್ನು ತಿಳಿಸಿಕೊಡುತ್ತವೆ. ಕಥೆಯ ಅಂತ್ಯ ಅರ್ಥಪೂರ್ಣವಾಗಿದೆ.
2nd world war ಅನ್ನು ವಿಷಯವಾಗಿ ಇಟ್ಕೊಂಡ್ ಬರ್ದಿರೋ ಪುಸ್ತಕ. ಇದಕ್ಕೆ ಮುಂಚೆ ಇದೇ ವಿಷಯವಾಗಿ ಓದಿದ ಹಾಗೂ ಬಹಳ ಇಷ್ಟವಾದ ಪುಸ್ತಕ ಯಾದ್ ವಶೇಮ್. ಅದರಷ್ಟೇ ಈ ಪುಸ್ತಕ ಕೂಡ ಇಷ್ಟ ಆಯ್ತು.
ಹನುಕಿಯ ಮೊದಲ ಪುಟದಿಂದ ಕೊನೆ ಪುಟದವರೆಗು ಹಿಡಿದು ಇಡತ್ತೆ. ಮೀರಾ ತನ್ನ ಕಥೆ ಹೇಳ್ತಾ ಹೋಗೋವಾಗ, ಅವಳ ಕಥೆಯಲ್ಲಿ ನಾವು ಮುಳುಗಿ ಹೋಗ್ತೀವಿ. ಈ ಪುಸ್ತಕದಲ್ಲಿ ಬರುವ ಮಹಾರಾಜ ದಿಗ್ವಿಜಯ ಸಿಂಗ್ ಬಗ್ಗೆ ಹೆಚ್ಚಿಗೆ ಓದಿದಾಗ ತುಂಬಾ ಖುಷಿ ಆಯ್ತು. ಪುಸ್ತಕದ ಅಂತ್ಯ ಮಾತ್ರ super!!
ನನ್ನ ಮನೆಯ ಬೆಚ್ಚನೆಯ comfort ಅಲ್ಲಿ ಕೂತು ಯುದ್ಧದ ಕಥೆಗಳನ್ನ ಓದೋವಾಗ, ಯಾವಾಗ್ಲೂ ಇರುವ gratitude feeling ಮತ್ತಷ್ಟು ಜಾಸ್ತಿ ಆಗತ್ತೆ.
ಯಾಹೂದಿ ಹತ್ಯಾಕಾಂಡದ ಬಗ್ಗೆ ಬಂದಿರುವ ಯಾದ್ ವಶೇಮ್ ನಂತರದ ಶ್ರೇಷ್ಠ ಕೃತಿ ಹನುಕಿಯ. ಯಾಹೂದಿ ಹತ್ಯಾಕಾಂಡದ ಕರಾಳ ಘಟನೆಗಳ ಜೊತೆಗೆ ಎರಡನೇ ವಿಶ್ವ ಯುದ್ಧದ ವಿವಿಧ ಮಜಲುಗಳು, ಭಾರತ ಸ್ವಾತಂತ್ರ್ಯ ಸಂಗ್ರಾಮ, ಮಹಾರಾಜ ಜಾಮ್ ಸಾಹೇಬರ ಉದಾರೀತನ ಎಲ್ಲವನ್ನೂ ವಿಷದವಾಗಿ ನಮಗೆ ಪರಿಚಯಿಸುವ ಕಾದಂಬರಿ. ಲೇಖಕರು ಸತ್ಯ ಘಟನೆಗಳ ಮಾಹಿತಿಯನ್ನು ಅಲ್ಲಲ್ಲಿ ನೀಡಿರುವುದು ಜ್ಞಾನಾರ್ಥಿಗಳಿಗೆ ಸಂಗ್ರಹ ಯೋಗ್ಯಕ್ಕೆ ಪೂರಕವಾಗಿದೆ. ಇಸ್ರೇಲಿಗೂ ಸಂಬಂಧಿಸಿದ ಕಾದಂಬರಿ ಆದ್ದರಿಂದ ಓದುವಾಗ ಬಹುವಾಗಿ ಅನಿಸಿದ್ದು ಮುಂದೊಂದು ದಿನ ಗಾಜಾ ಪಟ್ಟಿಯ ಬಗ್ಗೆ ಕಾದಂಬರಿ ಓದುವಂತಾಗದಿರಲಿ, ವಿಶ್ವಶಾಂತಿ ಆರಿ ಹೋಗದ ದೀಪವಾಗಲಿ ಎಂದು.
#ಪರಿಚಯ_೮_೨೦೨೬ ಕೃತಿ: ಹನುಕಿಯಾ ಲೇಖಕರು: ವಿಠ್ಠಲ ಶೆಣೈ ಪ್ರಕಾಶಕರು: ಸಾಹಿತ್ಯಲೋಕ ಪಬ್ಲಿಕೇಷನ್ಸ್, ಬೆಂಗಳೂರು
ಎರಡನೇ ವಿಶ್ವ ಮಹಾಯುದ್ಧ,ಯಹೂದಿಗಳ ವಿರುದ್ಧದ ಜನಾಂಗೀಯ ದ್ವೇಷ,ಯಾತನೆಯ ಶಿಬಿರಗಳ ಭೀಭತ್ಸ ವಿವರಗಳು,ಯಹೂದಿಗಳ ಸಾಮೂಹಿಕ ಮಾರಣಹೋಮ,ಹಿಟ್ಲರನ ದುರಾಡಳಿತದ ಅಂತ್ಯ, ಭಾರತದ ಸ್ವಾತಂತ್ರ್ಯ ಹೋರಾಟ, ಪೋಲಂಡಿನ ನಿರಾಶ್ರಿತ ಮಕ್ಕಳಿಗೆ ಭಾರತದ ಮಹಾರಾಜರೊಬ್ಬರು ನಿಸ್ವಾರ್ಥವಾಗಿ ಆಶ್ರಯ ಕಲ್ಪಿಸಿದ್ದು ಮುಂತಾದ ಐತಿಹಾಸಿಕ ಘಟನೆಗಳ ಸುತ್ತ ಹೆಣೆದ ಸುಂದರವಾದ ಕಾದಂಬರಿ. ಐತಿಹಾಸಿಕ ವಿವರಗಳನ್ನು ಬಳಸಿಕೊಂಡು ಒಂದು ಚೂರು ಹದಗೆಡದಂತೆ ಕಾಲ್ಪನಿಕವಾಗಿ ಕೆಲವೊಂದು ಪಾತ್ರಗಳನ್ನು ಬಳಸಿ, ಇತಿಹಾಸದ ಜೊತೆಯಲ್ಲಿ ನವಿರಾದ ಪ್ರೇಮವನ್ನು ಬೆರೆಸಿ ಕತೆಯನ್ನು ಹೆಣೆದ ಲೇಖಕರ ಜಾಣ್ಮೆ ಇಷ್ಟವಾಯಿತು. ಫ್ಲಾಶ್ ಬ್ಯಾಕ್ ಮಾದರಿಯಲ್ಲಿ ಅನಾವರಣಗೊಳ್ಳುವ ಕತೆಯು ಈ ಜಗತ್ತಿನಲ್ಲಿ ನಡೆದು ಹೋದ ಅತ್ಯಂತ ಹೇಯವಾದ ಅಧ್ಯಾಯವೊಂದನ್ನು ಓದುಗರೆದುರು ತೆರೆದಿಡುತ್ತದೆ.
ಹಿಟ್ಲರನ ನಾಜಿ ಸೈನ್ಯವು ಪೋಲಂಡನ್ನು ಆಕ್ರಮಿಸಿಕೊಳ್ಳುವ ಮೂಲಕ ಪ್ರಾರಂಭವಾಗುವ ಕತೆಯು ಅರವತ್ತು ಲಕ್ಷ ಯಹೂದಿಗಳ ನರಮೇಧ, ಯಾತನೆಯ ಶಿಬಿರದಲ್ಲಿ ನಡೆದ ಅಮಾನವೀಯ ಘಟನೆಗಳು, ಆ ಶಿಬಿರಗಳಿಂದ ತಪ್ಪಿಸಿಕೊಂಡು ಬಂದವರ ಕತೆ, ಜನಾಂಗೀಯ ದ್ವೇಷಕ್ಕೆ ಬಲಿಯಾದ ಅನಾಥ ಮಕ್ಕಳಿಗೆ ಭಾರತದಲ್ಲಿ ನಡೆದ ಪುನರ್ವಸತಿ, ಎರಡನೇ ಮಹಾಯುದ್ಧ ತೀಕ್ಷ್ಣವಾಗುತ್ತ ಹೋದಂತೆ ಹಿಟ್ಲರನ ಹುಟ್ಟಡಗಿಸಲು ನಡೆದ ವಿಶ್ವ ನಾಯಕರ ತಂತ್ರ ಪ್ರತಿತಂತ್ರಗಳು, ಹಿಟ್ಲರ್ ಪತನದ ನಂತರ ನಡೆದ ವಿಚಾರಣೆಗಳು ಮುಂತಾದವುಗಳ ಭರ್ಜರಿ ವಿವರಗಳು ಕೃತಿಯಲ್ಲಿ ಅಡಕವಾಗಿವೆ. ಇದೇ ಸಮಯದಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟದ ಅಲ್ಪಸ್ವಲ್ಪ ವಿವರಗಳು ಸಹ ಸಂದರ್ಭಕ್ಕನುಗುಣವಾಗಿ ತೆರೆದುಕೊಳ್ಳುತ್ತಾ ಸಾಗುತ್ತದೆ. ಇಡೀ ಭಾರತೀಯರು ಹೆಮ್ಮೆ ಪಡಬಹುದಾದ ಒಂದು ಐತಿಹಾಸಿಕ ಘಟನೆಯೊಂದು ಈ ಪುಸ್ತಕ ಓದುವವರೆಗೆ ಗೊತ್ತೇ ಇರಲಿಲ್ಲ. ನಮ್ಮ ಇತಿಹಾಸದಲ್ಲಿ ಬೇಡದ್ದೆಲ್ಲ ತುರುಕಿ ಇಂತಹ ವಿವರಗಳನ್ನು ಯಾಕೆ ಮರೆಮಾಚಿ ಹಾಕಿದ್ದಾರೋ. ಅಂದು ಮಾಡಿದ ಆ ನಿಸ್ವಾರ್ಥ ಸೇವೆಗೆ ಇಂದಿಗೂ ಪೋಲಂಡಿನಲ್ಲಿ ಆ ಮಹಾರಾಜರ ಹೆಸರಿನ ಒಂದು ರಸ್ತೆ ಇದೆ ಎಂದರೆ, ಅದು ಎಂತಹಾ ಪ್ರಮುಖ ವಿಚಾರ ಎಂದು ಊಹಿಸಬಹುದು.
ಪುಸ್ತಕದಲ್ಲಿ ಅಲ್ಲಲ್ಲಿ ಕೊಟ್ಟಿರುವ ಆಕರ ಗ್ರಂಥಗಳು ಮತ್ತು ಕೊನೆಯಲ್ಲಿ ಪಟ್ಟಿ ಮಾಡಿರುವ ಆಕರ ಗ್ರಂಥಗಳು, ಸಿನಿಮಾಗಳು ಮತ್ತು ಯೂಟ್ಯೂಬ್ ವಿಡಿಯೋಗಳ ಲಿಂಕ್ ಆಸಕ್ತರಿಗೆ ಮತ್ತಷ್ಟು ಮಾಹಿತಿಯನ್ನು ಅರಿಯಲು ಪೂರಕವಾಗಿವೆ. ಈ ಕಾದಂಬರಿಯ ಮೊದಲ ಭಾಗವನ್ನು ಓದುವಾಗ ಪದೇ ಪದೇ ಕಾಶ್ಮೀರಿ ಪಂಡಿತರ ವಲಸೆಯ ನೆನಪಾಗುತ್ತಿತ್ತು. ಒಟ್ಟಿನಲ್ಲಿ ಒಳ್ಳೆಯ ಮಾಹಿತಿಯುಕ್ತ ಓದು.
ದುರಾದೃಷ್ಟವಶಾತ್ ಈ ಪುಸ್ತಕ ಓದಿ ಮುಗಿಸಿ ಮೊಬೈಲ್ ತೆರೆದು ನೋಡಿದರೆ ಜಗತ್ತು ಮೂರನೇ ಮಹಾಯುದ್ಧದ ಕಡೆಗೆ ವಾಲುವಂತೆ ಕಾಣಿಸುತ್ತಿದೆ.