Is there God? is there any dark power? No one knows for sure. How everyone believes in god and worships him, there are also few who believes in black magic and try to achieve powers. Matagathi is a novel where Evil and good fights.
ಭಗವಂತ ಇದ್ದಾನಾ? ಗೊತ್ತಿಲ್ಲ. ಪ್ರೇತಾತ್ಮವಿದೆಯಾ? ತಿಳಿದಿಲ್ಲ. ಹೇಗೆ ಭಗವಂತನ ಸುತ್ತ ಗುಡಿ, ಗೋಪುರ, ಕಳಶ, ಮಂತ್ರ, ಆಚರಣೆಗಳು ಬೆಳೆದುಕೊಂದಿವೆಯೋ ಹಾಗೆಯೇ ಇನ್ನೊಂದೆಡೆ ವಾಮವಿದ್ಯೆಯೂ ಬೆಳೆದಿದೆ. ಮಾಟ, ಕೈ ಮುಸುಗು, ಮದ್ದು, ವಶೀಕರಣ, ಶವ ಸಾಧನೆ, ಶವ ಭೋಜನ, ಸ್ಮಶಾನ ಜೀವನ-ಹೀಗೆ ನೂರೆಂಟು, ಸುಮಾರು ಇಪ್ಪತೈದು ವರ್ಷಗಳಿಂದಲೂ ಈ ಬಗ್ಗೆ ಒಂದು ಕುತೂಹಲ ಬೆಳೆಸಿಕೊಂಡು ಬಂದವನು ನಾನು. ಅದೇ ಗುಂಗಿನಲ್ಲಿ ಕೆಲವು ಕಾದಂಬರಿಗಳನ್ನು ಬರೆದೆ. ಮೊದಲನೆಯದು 'ಮಾಟಗಾತಿ'. ಎರಡನೆಯದು 'ಸರ್ಪ ಸಂಬಂಧ'. ಎರಡೂ ಒಂದಕ್ಕೊಂದು ತಳುಕು ಹಾಕಿಕೊಂಡಂತಿವೆ. ಕೂತೂಹಲವಿದ್ದವರು ಓದಿಕೊಳ್ಳಬಹುದು. ~ರವಿ ಬೆಳಗೆರೆ
Ravi Belagere was a writer and journalist based in Bengaluru, Karnataka, India. He was the editor of Kannada language tabloid Hi Bangalore,which he founded along with R. T. Vittalamurthy, Ra. Somanath, Jogi, and I. H. Sangam Dev. He used to run a show called Crime Diary, which used to air on a regional Kannada-language channel ETV Kannada, that focused on crime in Karnataka, and he started Prarthana, a school for children in Bangalore.
ಇಲ್ಲೊಂದು ನಿಷ್ಕಾರುಣ ಕ್ಷುದ್ರ ಲೋಕದ ಅನವಾರಣವಿದೆ. ಹಿಂದೆಲ್ಲೂ ಕೇಳಿರದ ತಂತ್ರ- ಮಂತ್ರ - ವಿದ್ಯೆಗಳ ಪರಿಚಯವಿದೆ. ಅಘೋರ ಜೀವನದ ನಿಬ್ಬೆರಗಾಗಿಸೋ details ಇದೆ. ಹಠ ಸಾಧನೆಯ ಮೈ ಜುಮ್ಮೆನಿಸುವ ಸನ್ನಿವೇಶಗಳಿವೆ. ರೋಮಾಂಚನ ಗಳಿಗಂತೂ ಬರವೇ ಇಲ್ಲ!
Trust me, ಬೀಭತ್ಸ ವಾದ ವಾಮ ಲೋಕದೊಳಗೆ ಬೆಳಗೆರೆಯವರು ಯಾವುದೇ ಮುಚ್ಚು ಮರೆಯಿಲ್ಲದೆ ಒಂದು satisfying ಟ್ರಿಪ್ ಮಾಡಿಸಿಬಿಟ್ಟಿದ್ದಾರೆ. ಒಂದು ವಾರದಿಂದ, ಕನಸಿನಲ್ಲೂ ತೇಜಮ್ಮ ನ ಆಕ್ರೋಶ, ಅಗ್ನಿನಾಥನ ಕಣ್ಣು ಕಾಣಿಸಿದೆ. ಸಣ್ಣದೊಂದು ಸರಪಳಿ ಕಂಡರಂತೂ ಸಿದ್ಧಿಮಾರಿ ನೆನಪಾಗ್ತಾನೆ. ಕಾಳ ಸರ್ಪದಂತೂ ಡಿಫರೆಂಟ್ ಸ್ಟೋರಿ ಬಿಡಿ !
ನಿಜಾ ! ಬೆಳಗೆರೆಯ ಬರವಣಿಗೆಯಲ್ಲಿ magic ಇದೆ.
ಒಟ್ನಲ್ಲಿ, ತೀರ ಇಷ್ಟ ಪಟ್ಟು..ಕಾಲದ ಪರಿವೆ ಇಲ್ಲದೆ ಓದಿ ಮುಗಿಸುವ ಹೊತ್ತಿಗೆ ‘ಸರ್ಪ ಸಂಬಂಧ’ ಕೂಡ ಜೊತೆಗೆ ಇರಬೇಕಿತ್ತು ಅನಿಸ್ತು..ಆದಷ್ಟು ಬೇಗ ಮುಂದಿನ ಭಾಗವನ್ನು ಓದಿ, ಕೌತುಕಕ್ಕೆ ತೆರೆ ಎಳೆಯುವೆ.
ಇನ್ನೂ ನೂರಿನ್ನೂರು ವರ್ಷಗಳು ಕಳೆದ ನಂತರವೂ ಉತ್ತರ ಸಿಗಲಾರದ ವಿಷಯವೆಂದರೆ ಅತಿ ಮಾನುಷ ಶಕ್ತಿ. ಬಹುಶಃ ನಾಗರಿಕತೆಯು ಹುಟ್ಟಿದಂದಿನಿಂದ ಅತಿ ಮಾನುಷ ಶಕ್ತಿಗಳ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ನಮಗೆ ತಿಳಿಯದೇ ಅದಕ್ಕೆ ಆಸ್ತಿಕ ಮತ್ತು ನಾಸ್ತಿಕ ವಾದಗಳು ಕೂಡ ತಳುಕು ಹಾಕಿಕೊಂಡಿವೆ. ಆ ವಿದ್ಯೆ, ಕಣ್ಕಟ್ಟು, ಸಾಧನೆಗಳ ಕುರಿತು ಎಷ್ಟೋ ವೈಜ್ಞಾನಿಕವಾದ ಮತ್ತು ವಿವೇಕಯುತವಾದ ವಿವರಣೆಗಳಿದ್ದರೂ ಒಪ್ಪಲಾರದ ಮನಸ್ಥಿತಿಯನ್ನು ತಲುಪಿದವರು ನಮ್ಮ ನಡುವೆ ಈಗಲೂ ಇದ್ದಾರೆ ಎನ್ನುವುದು ಸತ್ಯ. ಅಂತಹ ನಂಬಿಕೆಗಳು, ಆತ್ಮ, ಪ್ರೇತಾತ್ಮ, ಅಘೋರಿ, ವಾಮಾಚರ, ದುಷ್ಟ ಸಿದ್ದಿ, ಹಠ ಯೋಗ ಮುಂತಾದವುಗಳ ಹದವಾದ ಹೂರಣ "ಮಾಟಗಾತಿ"
ಅರ್ಚಕ್ ಮತ್ತು ದೇವಯಾನಿ ಎಂಬ ದಂಪತಿಗಳಿಂದ ಮೊದಲಾಗುತ್ತದೆ ಪುಸ್ತಕ. ಕಮ್ಯುನಿಸ್ಟ್ ಪಕ್ಷದ ಆಫೀಸಿನಲ್ಲಿ ಪ್ರೇಮಿಸಿ ಮದುವೆಯಾದ ಮೇಲೆ ಬದುಕಿನಲ್ಲಿ ಆದ ಎಲ್ಲಾ ಬದಲಾವಣೆಗಳನ್ನು ಎದೆಗೆಳೆದುಕೊಂಡು ಅರ್ಚಕ್ ಕುಳಿತಿರುತ್ತಾನೆ. ದೇವಯಾನಿ ಅವನ ಪಕ್ಷ ಕಟ್ಟುವ ಅಭಿಲಾಷೆಯನ್ನು ಕೊಂದು ಪತ್ರಿಕಾ ಕಛೇರಿಯ ಮೆಟ್ಟಿಲಿಳಿದು ಬರುತ್ತಿರುವ ಹೊತ್ತಿಗೆ ಈ ಪುಸ್ತಕ ಓದುಗನೆದೆಯನ್ನು ಮೃದುವಾಗಿ ಇರಿದು ಒಳಗೆ ಸಣ್ಣಗೆ ಇಳಿಯುತ್ತಿರುತ್ತದೆ. ಅರ್ಚಕ್ ಮೊದಲ ಪುಟದಲ್ಲಿ ಬರೆದಂತೆ ಹೆಣ್ಣು ಕಲ್ಪವಲ್ಲಿ, ಮಾತೃಸ್ವರೂಪಿ ಮತ್ತು ಮಾಟಗಾತಿ ಎಂದೆನಿಸಲು ಶುರುವಾಗುತ್ತದೆ. ಮಾಟಗಾತಿ ಅಲ್ಲೆಲ್ಲೋ ಅವಳ ವಾಮಾಚಾರಕ್ಕೆ ಮೊದಲ ಮಂಡಲ ಬರೆದಿರುತ್ತಾಳೆ. ಇಲ್ಲೆಲ್ಲೋ ಇನ್ನೊಂದು ಕಂಪನವಾಗುತ್ತದೆ. ಮತ್ತೆಲ್ಲೋ ಮತ್ತೊಂದು ಹವಣಿಕೆಗೆ ಅಂಗಳ ಸಿದ್ಧವಾಗುತ್ತದೆ. ಏನು ಎತ್ತ? ಉತ್ತರ ಪುಸ್ತಕದಲ್ಲಿ.
ಮಾಟ-ಮಂತ್ರ, ಪ್ರೀತಿ-ಪ್ರೇಮ, ಯಜ್ಞ-ಯಾಗಾದಿ, ವಿಧಿ-ವಿಧಾನಗಳನ್ನು ಮಾತ್ರ ಹೇಳಿದ್ದರೆ ಮಾಟಗಾತಿ ಪ್ರಾಯಶಃ ಇಷ್ಟೊಂದು ಆವರಿಸುತ್ತಿರಲಿಲ್ಲ. ಕಾಡುತ್ತಿರಲಿಲ್ಲ.
ಮಾಟಗಾತಿ ಪುಸ್ತಕದ ಅತಿಮುಖ್ಯ ವಿಶೇಷತೆ ಎಂದರೆ ಲೇಖಕರು ಕೇಳಿರುವ ಮತ್ತು ಅವರೇ ಒಳಪಟ್ಟಿರುವ ಅನುಭವಗಳನ್ನು ಬರೆದಿರುವುದು. ಅವುಗಳನ್ನು ಓದುತ್ತಾ ನಾವು ಎಲ್ಲೋ ಕೇಳ್ಪಟ್ಟ ವಾಮವಿದ್ಯೆಗಳು ಕಣ್ಣ ಮುಂದೆ ಹಾದುಹೋಗುತ್ತವೆ. ಬೆಳಗೆರೆರವರು ಉಲ್ಲೇಖಿಸಿರುವ ಉದಾಹರಣೆಯೊಂದರ ಅನುಭವ ನನಗೂ ಆಗಿತ್ತು. ಓದಿದರೆ ನೀವು ಕಂಡ ವಾಮಾಚರ ಮತ್ತು ಬಾನಾಮತಿ ಪ್ರಯೋಗಗಳಿಗೆ ಅವರ ವಿವರಣೆ ಸಾಮ್ಯವೆನಿಸಬಹುದು.
ಅಷ್ಟಲ್ಲದೇ ಅಘೋರಿಗಳ ಲೋಕದ ಬಗ್ಗೆಯೂ ಮುಕ್ತವಾಗಿ ಬರೆಯಲಾಗಿದೆ. ಅವರ ತಂತ್ರ ಮಂತ್ರ ಸಾಧನೆಗಳು ಎಷ್ಟರ ಮಟ್ಟಿಗೆ ಭೀತಿ ಹುಟ್ಟಿಸುತ್ತವೆ ಎಂಬುದು ನೆನಯಲಸಾಧ್ಯ. ಬೂದಿ ಬಳಿದುಕೊಂಡು, ನಿರ್ವಸ್ರ್ತರಾಗಿ ಹಾದಿ ಅಲೆಯುವ ಅಘೋರಿಗಳ ಹಿಂದಿನ ಘೋರ ಜೀವನ ಪರಿಚಯವಾಗುತ್ತದೆ. ಕೆಲವು ಸಾಧನೆಗಳಿಗೆ ಮಾಡಿಕೊಳ್ಳುವ ಪೂರ್ವಭಾವಿ ಸಿದ್ಧತೆಗಳನ್ನು ನೆನೆದರೆ ತೊಟ್ಟಿಲಲಿ ಮಲಗಿದ ಮಗುವಿನ ತಿತ್ತಿಯೂ ಬೆವರುತ್ತದೆ. ಅವರು ಸಂಖ್ಯೆ ಕ್ಷೀಣಿಸುತ್ತಿದೆಯಂತೆ. ಅವರೊಂದಿಗೆ ಅತಿ ಮಾನುಷ ಶಕ್ತಿಯೂ? ಗೊತ್ತಿಲ್ಲ.
ಪ್ರೀತಿಯ ಬೆಳಗೆರೆ ಅವರ ಬರಹಕ್ಕೆ ಮಾಂತ್ರಿಕ ಶಕ್ತಿಯಿದೆ. ಮಾಂತ್ರಿಕ ಜಗತ್ತಿನ ಬಗ್ಗೆಯೇ ಬರೆದ ಪುಸ್ತಕದಲ್ಲಿ ಇನ್ನೆಷ್ಟು ಸೆಳೆತಗಳಿವೆ ಎಂಬುದು ಓದಿದರೆ ತಿಳಿಯುತ್ತದೆ.
ಒಂದು ಮಾತು. ಪುಸ್ತಕದಲ್ಲಿರುವ ಕೆಲವು ವಿಷಯಗಳು ಕನಸಿನಲ್ಲಿ ಕಾಡಬಹುದು, ನಿದ್ದೆಗೆಡಿಸಬಹುದು, ನಿಮ್ಮ ಚಿತ್ತ..!!
ಎಂದಿನಂತೆ ಈ ಪುಸ್ತಕವನ್ನು ನೀವು ಓದಿದ್ದಲ್ಲಿ ನಿಮ್ಮ ಅನಿಸಿಕೆ ಹಂಚಿಕೊಳ್ಳಿ.
ಮಾಟಮಂತ್ರಗಳ ಬಗ್ಗೆ, ಅದರಲ್ಲಿರುವ ಕೂತುಹಲ ಅಂಶಗಳ ಕುರಿತು ರವಿ ಬೆಳಗೆರೆ ಅವರು ಚೆನ್ನಾಗಿ ಬರೆದಿದ್ದಾರೆ.ಆದರೆ ಕೆಲವೊಮ್ಮೆ ವಿವರಣೆಗಳು ಅತಿರೇಕ ಅನಿಸುತ್ತದೆ.ಮಾಟಮಂತ್ರಗಳ ಬಗ್ಗೆ ಇದ್ದ ನನ್ನ ಕೂತುಹಲ ಈ ಪುಸ್ತಕ ಓದುವ ಹಾಗೆ ಮಾಡಿತು. ಇದರ ಮುಂದಿನ ಅಧ್ಯಾಯ ಸರ್ಪ ಸಂಬಂಧ. ಇಲ್ಲಿ ಬರುವ ಪಾತ್ರಗಳಾದ ತೇಜಮ್ಮ, ಕಾಳಾಗಿ ರುದ್ರಮುನಿ, ಶೇಷಶಾಸ್ತ್ರಿ,ನಿಹಾರಿಕಾ,ಅಗ್ನಿನಾಥ ಇವು ನಿಮ್ಮನ್ನು ಕಾಡಬಹುದು. ಕೂತುಹಲ ಇದ್ದವರು ಒಂದು ಸಲ ಓದಿ ನೋಡಿ!.
ಮಾಟಗಾತಿ... ಹಲವಾರು ರಾತ್ರಿಗಳು ನನ್ನ ನಿದ್ರೆ ಕೆಡಿಸಿದ ಪುಸ್ತಕ... ನನ್ನ ಕನಸುಗಳಲ್ಲಿ ಕಾಡಿದ ತೇಜಮ್ಮ, ನಿಹಾರಿಕಾ, ಅಗ್ನಿನಾಥ ಎಂಬ ಕ್ಷುದ್ರ ಲೋಕದ ಪಾತ್ರಗಳು, ದೇವಯಾನಿಯ ಅಹಂಕಾರಕ್ಕೆ, ಅರ್ಚಕ್ ನ ಪ್ರೀತಿಗೆ ಕೊನೆಯಿಲ್ಲವೇ ಎಂಬ ಪ್ರಶ್ನೆಗಳು... ಮಾಟ ಮಂತ್ರ ವಿದ್ಯೆಗಳನ್ನು ಅತಿರೇಕವಿರದೆ ನೈಜತೆಗೆ ಹತ್ತಿರವಾಗಿ ಚಿತ್ರಿಸಿರುವ ಪುಸ್ತಕ... ರವಿ ಬೆಳಗೆರೆಯವರು ಅಕ್ಷರಬ್ರಹ್ಮ ಎಂಬುದರಲ್ಲಿ ಎರಡು ಮಾತಿಲ್ಲ.
ವಾಮಾಚಾರ ಮತ್ತು ಅಘೋರಿಗಳ ಬಗ್ಗೆ ಕೆಲವೇ ಕೆಲವು ಸಂಗತಿಗಳು ಗೊತ್ತಿದ್ದ ನನಗೆ ಈ ಪುಸ್ತಕದಲ್ಲಿ ಹೇಳಿರುವ ವಿಷಯಗಳ ಬಗ್ಗೆ ತಿಳಿದಾಗ ಮೈ ಕೊಡವಿ ನಿಟ್ಟುಸಿರ ಬಿಟ್ಟಂತಾಗಿದೆ. ಅಘೋರಿಗಳ 'ಮ' ಕಾರಗಳ ಪದ್ಧತಿ, ಹಟ ಸಾಧನೆ, ಅವರ ಅಂತಃಕರಣದ ಸಾಮರ್ಥ್ಯ ಒಂದು ಕಡೆ ಆದರೆ ವಾಮಚಾರಿಗಳ ಕ್ರೂರತೆ, ತಮ್ಮ ಸಾಧನೆಯ ಮೆಟ್ಟಿಲೇರಲು ಎಂತಹ ಕಠಿಣ ಕೆಲಸವಾದರೂ, ಅಸಹ್ಯವಾದರು ಇಡಿದ ಕೆಲಸವ ಸಾಧಿಸುವ ಛಲಾಗಾರರಂತೆ ಲೇಖಕರು ಎಳೆ ಎಳೆಯಾಗಿ ರೂಪಿಸಿದ್ದಾರೆ.
*ವಾಮಾಚಾರದ ಕೊನೆಯ ಮೆಟ್ಟಿಲಾದ ಮಾರ್ಕಾಂಡಿಯನ್ನು ತನ್ನ ದಾಗಿಸಿಕೊಳ್ಳಲು ಶತಗತ ಪ್ರಯತ್ನ ಮಾಡುವ ನಿರ್ದಯಿಯಾದ ತೇಜಮ್ಮ *ಅಘೋರಿವಿಧ್ಯೆಗಳಲ್ಲಿ ತನ್ನ ಅಧಿಪತ್ಯ ಸಾಧಿಸಿ ಜ್ವಾಲಾಮುಖಿಯಷ್ಟ್ಟು ಪ್ರಖರತೆ ಇರುವ ಅಗ್ನಿನಾಥ *ಸಮುದ್ರದಾಳದಷ್ಟು ಶಕ್ತಿ ಒಂದಿದ್ದರು ಸಾತ್ವಿಕತೆಗೆ ಮಾತ್ರ ಉಪಯೋಗಿಸುವ ಸುಬ್ಬು ಶಾಸ್ತ್ರಿಗಳು *ಎಳೆ ವಯಸ್ಸಿನ ಹುಡುಗಿ ಆದರೂ ಅವಳೆದುರು ನಿಲ್ಲಬೇಕೆಂದರೆ ಒಂದು ಕ್ಷಣ ತೇಜಮ್ಮಳು ಸಹ ನಡುಗುವ ಶಕ್ತಿ ಇರುವ ನಿಹಾರಿಕ ಇಂತಹ ಪಾತ್ರಗಳನ್ನು ಕಟ್ಟಿಕೊಡಲು ಕೇವಲ ಅಕ್ಷರ ಮಾಂತ್ರಿಕ, ಅಕ್ಷರ ಸೂರ್ಯ ರವಿಬೆಳಗೆರೆ ಯವರಿಗೆ ಮಾತ್ರ ಸಾದ್ಯ.❤️
ಈ ಪುಸ್ತಕವನ್ನು ರಾತ್ರಿಯ ಸಮಯದಲ್ಲಿ ಓದುವಾಗ ಮಧ್ಯರಾತ್ರಿಯಲ್ಲಿ ನಾಯಿಯ ಕೂಗಿಗೆ ಮೈ ಕಂಪಿಸಿ ಅರ್ಧಕ್ಕೆ ನಿಲ್ಲಿಸಿ ಮಲಗಿದ ಅನುಭವವೂ ನನಗಾಗಿದೆ😀
Excellent page turner. The forces of good come together to stop an evil sorceress, devoid of emotion and humanity as the odds are tilted in her favor. Black magic is her forte, and she has the willpower that burns with fury, and can never be watered down.
Her victory would mean the worst apocalypse. Can she be defeated? Can they save the unsuspecting world from the impending doom?
ರವಿ ಬೆಳಗೆರೆಯವರ 'ಪ್ರದೋಷ' ಪುಸ್ತಕ ಓದಿದ ಮೇಲೆ ಹುಚ್ಚೆದ್ದು ಹೋಗಿ ಅಂಕಿತ ಪುಸ್ತಕದಿಂದ ೨೦೨೨ರಲ್ಲೇ ತಂದ ಪುಸ್ತಕವಿದು. ಮಾರ್ಚ್ ೨೦೨೫ ರಲ್ಲಿ ಶುರು ಮಾಡಿ ಅಂತೂ ಇಂದು ಓದಿ ಮುಗಿಸಿದೆ. ಎರಡು ತಿಂಗಳು ಬೇಕಾಯ್ತು ನಂಗೆ ಇದನ್ನ ಓದಲಿಕ್ಕೆ. ಇಷ್ಟು ದೊಡ್ಡ ಕನ್ನಡ ಪುಸ್ತಕ ಓದಿದ್ದು ಬಹುಶಃ ಇದೇ ಮೊದಲನೇ ಬಾರಿ.
ಮೈ ನವಿರೇಳಿಸುವ ಸಂಗತಿಗಳಿರುವ ಈ ಪುಸ್ತಕ ಗಟ್ಟಿ ಹೃದಯವಿಲ್ಲದವರಿಗಲ್ಲ. ನಮ್ಮೆಲ್ಲರ ಕಲ್ಪನೆಗೂ ಮೀರಿದ ಒಂದು ಕ್ಷುದ್ರ ವಾಮಲೋಕವಿದೆ. ಅದರಲ್ಲಿ ಇಂದಿಗೂ ಹಲವಾರು ಪ್ರಯೋಗಗಳು ನಡೆಯುತ್ತಲೇ ಇವೆ. ನಂಬುವವರು ನಂಬುತ್ತಾರೆ. ಅದು ಸತ್ಯವೋ ಅಲ್ಲವೋ ಎಂಬುದು ನಿಮ್ಮ ಭಾವನೆಗೆ ಬಿಟ್ಟಿದ್ದು. ಕಥೆ ಕಾಲ್ಪನಿಕ ವಾಗಿರಬಹುದು, ಆದರೆ ಲೇಖಕರು ಸಾಕ್ಷಿ ಸಮೇತ ವಿವರಿಸಿದ್ದಾರೆ. Facts are real! ಸಾಹಿತ್ಯದಲ್ಲಿ ಸೆನ್ಸಾರ್ ಇರೋದಿಲ್ಲ.. ಅದರಲ್ಲೂ ರವಿ ಬೆಳಗೆರೆಯವರ ಬರವಣಿಗೆಯಲ್ಲಂತೂ ಇಲ್ಲವೇ ಇಲ್ಲ. ನಿಜವಾಗಿಯೂ ಅವರು 'ಅಕ್ಷರ ಮಾಂತ್ರಿಕ' ✨ ಮನುಷ್ಯ ಹೇಗೇ ಇರಲಿ, ಅವರ ಬರವಣಿಗೆ ಮಾತ್ರ ಅತ್ಯುತ್ತಮ. ಆ ಬರವಣಿಗೆಯ ಅಭಿಮಾನಿ ನಾನು. ಪುಸ್ತಕದ ಹಾಳೆಗಳನ್ನು ನಿರಾಯಾಸವಾಗಿ ತಿರುಗಿಸುತ್ತಾ ಹೋಗಬಹುದು.
ಇದು ನಿರ್ದಯಿ ಮಾಟಗಾತಿ ತೇಜಮ್ಮನ ಕಥೆ. ಶೇಷ ಸುಬ್ಬಾಶಾಸ್ತ್ರಿಗಳಂತಹ ಸಾಧು ವಾಮವಿದ್ಯಾ ಸಾಧಕರಿರುವ ಕಥೆ. ಜ್ವಾಲಾಮಾಲಿನಿಯ ಕೃಪಾಕಟಾಕ್ಷವಾಗಿರುವ ನಿಹಾರಿಕಾಳು ಇರುವ ಕಥೆ. ಮಹಾ ಅಘೋರಿಯಾದ, ಅಗ್ನಿನಾಥ, ಕಾಳಾಗ್ನಿ ರುದ್ರಮುನಿ, ಬಾಬಾ ಷೇಕ್ ಸಲೀಮ್, ಬಾಬಾ ಷೇಕ್ ಇಸ್ಮಾಯಿಲ್, ಹೀಗೆ ಮುಂತಾದವರು ಇರುವ ಒಂದು ರೋಚಕ ಕಾದಂಬರಿ.
ಖೇಚರಿ ವಿದ್ಯೆ, ವಜ್ರೋಲಿ ವಿದ್ಯೆ, ವಶೀಕರಣ, ಪ್ರಹರಿ ವಿದ್ಯೆ, ಪೆಹಲಿ ರೋಶನಿ, ದೇವ ಕಣಗಲೆಯ ಮಹತ್ವ ಹೀಗೆ ಮುಂತಾದವುಗಳ ಬಗ್ಗೆ ಲೇಖಕರು ಪ್ರಸ್ತಾಪಿಸಿದ್ದಾರೆ. ಕೆಲವೊಮ್ಮೆ ಓದುತ್ತಾ ಬಾಯಿ ಮೇಲೆ ಕೈಇಟ್ಕೊಂಡಿದೀನಿ. ಕೊನೆಯ ಯುದ್ಧ, ಪ್ರತಿ ವಿದ್ಯೆಯನ್ನು ಓದ್ತಾ ಅಂತೂ ಕೆಲವೊಂದು ಸನ್ನಿವೇಶಗಳು ಹೇಸಿಗೆಯೆನಿಸೋಷ್ಟು raw ಆಗಿ ಬರಿದಿದ್ದಾರೆ ಲೇಖಕರು! ಕುತೂಹಲ ಘಟ್ಟಕ್ಕೆ ತಂದಿರಿಸಿ, ಮಹಾ twist ಕೊಟ್ಟು ಇದರ ಮುಂದಿನ ಸರಣಿಯಾದ 'ಸರ್ಪ ಸಂಬಂಧ' ನಾ ಓದಿಲಿಕ್ಕೆ ಹೇಳಿದಾರೆ ನಮ್ಮ ಲೇಖಕರು.
ನಿಮಗೆ ನಾ ಮೇಲೆ ಹೇಳಿರೋಂಥ ಯಾವುದಾದರೂ ವಿಷಯದಲ್ಲಿ ಕುತೂಹಲವಿದ್ದರೆ, ಇವರ ಈ ಪುಸ್ತಕ ಓದಲೇಬೇಕಾದಂಥದ್ದು. ಒಂದೊಂದು ಸಲ ಇಂಗ್ಲಿಷ್ನ 'ಜೆ.ಕೆ. ರೌಲಿಂಗ್' ಬರೆದ 'ಹ್ಯಾರಿ ಪೊಟ್ಟರ್' ಸರಣಿ ನೆನಪಾಗತ್ತೆ. ಎರಡೂ ಓದಿರೋರಿಗೆ ಅಥವಾ ಗೊತ್ತಿರೋರಿಗೆ ನಾ ಹೇಳಿದ್ದು ಅರ್ಥ ಆಯಿತು ಅಲ್ವಾ? ಒಮ್ಮೆ ಓದಿ, ಕನ್ನಡ ಸಾಹಿತ್ಯ ಹಾಗೂ ಇವರ ಬರವಣಿಗೆಯ ಹುಚ್ಚು ಹಿಡಿಯುತ್ತೆ. 😆