ಈ ಊರು ನನಗೆ ಸಲ್ಲುವಷ್ಟು ನಾನದಕ್ಕೆ ಸಲ್ಲೆನೆನ್ನುವುದು ಯಾರೂ ಒಪ್ಪದೆಯೂ ನನ್ನೊಟ್ಟಿಗಿರುವ ಸತ್ಯ ಮತ್ತು ಸದ್ಯ
- ನಾಗರಾಜ ವಸ್ತಾರೆ
ನಿಮಗೆ ಈ ಪುಸ್ತಕ ಇಷ್ಟ ಆಗಬೇಕು ಎನ್ನುವುದಾದರೇ ನೀವು ಯಾವುದಾದರೊಂದು ತೀರಾ ಮುಂದುವರಿದ ನಗರದಲ್ಲಿ ಒಂದಷ್ಟು ಕಾಲ ಜೀವನ ನೋಡಿರಬೇಕು. ಇಲ್ಲವಾದಲ್ಲಿ ಇಲ್ಲಿರುವ ಕಥೆಗಳು ನಡೆಯುತ್ತವೆ ಎಂದು ಒಪ್ಪುವ ಮನಸ್ಥಿತಿಯಾದರೂ ಇರಬೇಕು. ಆಧುನಿಕತೆಯಲ್ಲಿ ರೋಸಿ ಹೋದ ಮುಂದುವರೆದ ನಗರಗಳಲ್ಲಿ ವಾಸಿಸುವವರ ಗೋಜು ಗೊಂದಲಗಳೇ ಈ ಪುಸ್ತಕದ ಒಡಲು. ಎಲ್ಲಿಯೂ ಮಲೆನಾಡು, ಹಸಿರು ಎಂಬ ಹಿತವಾದ ಹಳೆಯ ಸಾಂಬ್ರಾಣಿ ಘಾಟಿರದೇ ಬೆಂಗಳೂರಿನ ಜನತೆಯ ಸತ್ಯಗಳನ್ನು ಬರೆದಿರುವುದು ವಿಶೇಷ. ಸಾಂಬ್ರಾಣಿ ಘಾಟಿಗಿಂತ ಸತ್ಯದ ಘಾಟೇ ಹೆಚ್ಚು ನಾಟುವುದು ಅಲ್ಲವೇ!!!
"ಎಲ್ಲಿಯೂ ಸಲ್ಲದವರು ಇಲ್ಲಿ ಸಲ್ಲುತ್ತಾರೆ" ಎಂದು ಬೆಂಗಳೂರು ಒಂದು ಅಲಿಖಿತ ಕರಾರು ಕೊಟ್ಟು ಬಿಡುತ್ತದೆ ಎಂದು ಅನೇಕ ಬಾರಿ ಹೇಳಿದ್ದೇನೆ. ಹಾಗೇ ಸಲ್ಲುವ ಪ್ರೊಸೆಸ್‌ನಲ್ಲಿ ಇಲ್ಲಿನ ಜೀವನ ಶೈಲಿ ಹೇಗೆ ನಮ್ಮ ಮೇಲೆ ಪರಿಣಾಮ ಬೀರುತ್ತದೆ ಎಂಬುದರ ಅರಿವು ನಮಗೆ ಇರುವುದಿಲ್ಲ. ಹಾಗೇ ಸಲ್ಲಿಕೊಂಡ ಬೆರೆತುಹೋದ ನಮ್ಮ ನಡುವಿನ ಕೆಲವಾರು ಜನಗಳ ಕಥೆಯಲ್ಲಿ ನಾವು ನಮಗರಿವಿಲ್ಲದೇ ಬಂದು ಹೋಗುತ್ತೇವೆ.
ಎಷ್ಟೋ ಬಾರಿ "ಒನ್ ಲೈಫ್ ಒನ್ ಚಾನ್ಸ್" ಎನ್ನುವ ಮನೋಭಾವ ನಮ್ಮೊಳಗೆ ಎಂತಹ ಚಮತ್ಕಾರವನ್ನು ತರಬಲ್ಲದೋ ಅಂತಹುದೇ ವ್ಯತಿರಿಕ್ತವಾದ ಪರಿಣಾಮವನ್ನು ಬೀರಬಲ್ಲದು ಎಂಬುದು ಪುಸ್ತಕದುದ್ದಕ್ಕೂ ಕಾಣಸಿಗುತ್ತದೆ.
ಪ್ಲೆಟಾನಿಕ್ ಪ್ರೇಮದ ಗಾಢತೆಯನ್ನೇ ಅರಿಯದೇ ಐಹಿಕ ಸುಖವೇ ಹೆಚ್ಚು ಎಂದುಕೊಳ್ಳುವವರ ಒನ್ ನೈಟ್ ಸ್ಟ್ಯಾಂಡ್‌ಗಳು, ವಿವಾಹೇತರ ಸಂಬಂಧಗಳು, ಜಿಮ್ ಪ್ರಣಯಗಳು, ಸಹೋದ್ಯೋಗಿಗಳ ಒಡನಾಟ, ಮುಕ್ತವಾಗಿ "ಹೇಳಲಾಗದ" ಸಮಸ್ಯೆಗಳು, ಲಿವ್ ಇನ್‌ಗಳು, ಕೂದಲು ಉದುರುವಿಕೆಗಳು, ಕಾಸ್ಮೆಟಿಕ್ ಸರ್ಜರಿ, ಭಗ್ನ ಪ್ರೇಮ, ದೇಶ ಪ್ರೇಮ ಹೀಗೆ ಹಲವಾರು ವಿಷಯಗಳನ್ನೊಳಗೊಂಡ ಹದಿನೆಂಟು ಕಥೆಗಳಿರುವ ನಿರವಯವ ಪುಸ್ತಕ ನಗರ ಜೀವನಕ್ಕೆ ಹಿಡೊದ ಕೈಗನ್ನಡಿ ಎಂದರೇ ತಪ್ಪಲ್ಲ. ಈ ಎಲ್ಲವೂ ಗ್ರಾಮ್ಯ ಪ್ರದೇಶದಲ್ಲೂ ನಡೆಯುತ್ತದೆ, ಆದರೆ "ಮುಂದುವರಿದ" ನಗರಗಳಷ್ಟು ಸೊಫಿಸ್ಟಿಕೆಟೇಡ್ ಸಮಜಾಯಿಷಿ ಇರುವುದಿಲ್ಲವಷ್ಟೇ!!!
ಪುಸ್ತಕದ ತನ್ನೊಳಗೆ ಅಡಗಿಸಿಕೊಂಡಿರುವ ಇನ್ನೊಂದು ಬಹುಮುಖ್ಯ ವಿಷಯ ಇತಿ ಮತ್ತು ಮಿತಿ, ಯಾವುದೇ ಆಗಲಿ ಮಿತಿಯಲ್ಲಿದ್ದರೆ ಚಂದವೆನಿಸುವುದು, ಹೆಚ್ಚಾದರೆ ಯಾವುದು ಸುಖಿಸುವುದಿಲ್ಲ, ನೋಯಿಸುವುದೂ ಇಲ್ಲ. ಎರಡರ ನಡುವಿನ ಅಸಹನೀಯ ಭಾವ ಕಾಡಿಬಿಡುತ್ತದೆ. ಲೇಖಕರೇ ಬರೆದಿರುವಂತೆ "ಗಡುವು ತೀರಿ, ಹನ್ನೆರಡು ಹೊಡೆಯುತ್ತಲೇ ಸಿಂಡರೆಲಾ ಚಿಂದಿಗಿಳಿದಾಳು... ಅವಳ ಸಾರೋಟು ಮತ್ತೆ ಕುಂಬಳವಾದೀತು" ಅಂತಾ. ಹಾಗೇ ಯಾವುದಕ್ಕೆ ಆಗಲಿ, ಒಂದು ಮಿತಿ, ಒಂದು ಗಡುವು, ಒಂದು ನಿರ್ದಿಷ್ಟತೆ ಇದ್ದರೆ ಚೆನ್ನ.
ಮತ್ತೊಂದು ಹೈಲೈಟ್ ಪುಸ್ತಕದ ಅರ್ಪಣೆ. ವಸ್ತಾರೆ ಸರ್ ಅವರು ತಮ್ಮ ಮಡದಿ ಅಪರ್ಣಾರವರಿಗೆ ಪುಸ್ತಕವನ್ನು ಅರ್ಪಿಸಿದ್ದಾರೆ. ಅಲ್ಲಿ ಹೀಗೆ ಬರೆದಿದ್ದಾರೆ - "ಹೇ ಅಪರ್ಣೇ, ನಿನ್ನಿನಿಗನ್ನಡದ ಚೆನ್ನಿಗೆ" ಅಂತಾ. ಹೀಗೊಂದು ಮುಗುಳ್ನಗೆಯೊಂದಿಗೆ ಆರಂಭವಾಗುವ ಪುಸ್ತಕದುದ್ದಕ್ಕೂ ಭಾಷೆ ಮತ್ತು ಸಮಕಾಲೀನತೆಯೊಂದಿಗೆ ಮೇಳೈಸಿಕೊಂಡು ಓದುಗನಿಗೆ ಹತ್ತಿರವಾಗುತ್ತದೆ. ಸಮಯ ಮಾಡಿಕೊಂಡು ಓದಿ!!!