Jogi Girish Rao Hatwar ಹುಟ್ಟೂರು ಮಂಗಳೂರಿನ ಸುರತ್ಕಲ್ ಸಮೀಪದಲ್ಲಿರುವ ಹೊಸಬೆಟ್ಟು. ಹತ್ವಾರ್ ಮನೆತನಕ್ಕೆ ಸೇರಿದ ಜೋಗಿ ಓದಿದ್ದು ಗುರುವಾಯನಕೆರೆ ಮತ್ತು ಉಪ್ಪಿನಂಗಡಿಗಳಲ್ಲಿ. ತಂದೆ ಶ್ರೀಧರರಾವ್ ಕೃಷಿಕರು. ತಾಯಿ ಶಾರದೆ. ಹಿರಿಯ ಸೋದರ ಹತ್ವಾರ ನಾರಾಯಣ ರಾವ್ ಯಕ್ಷಗಾನ ಪ್ರಸಂಗಗಳನ್ನು ಬರೆದು, ತಾಳಮದ್ದಲೆ ಅರ್ಥಧಾರಿಯಾಗಿ, ಲೇಖಕರಾಗಿ ಪ್ರಸಿದ್ಧರು. ೧೮ನೇ ವಯಸ್ಸಿಗೆ ಬರಹ ಆರಂಭಿಸಿದ ಜೋಗಿ ಓದಿದ್ದು ಬಿ.ಕಾಂ. ಕಾಲೇಜು ದಿನಗಳಲ್ಲಿ ಅವರ ಸಾಹಿತ್ಯ ಆಸಕ್ತಿಯನ್ನು ರೂಪಿಸಿದವರು ಬಳ್ಳ ವೆಂಕಟರಮಣ. ಬೆಂಗಳೂರಿಗೆ ೧೯೮೯ರಲ್ಲಿ ಕಾಲಿಟ್ಟ ಗಿರೀಶ ರಾವ್ ಹತ್ವಾರ್ ಅವರನ್ನು ಜೋಗಿಯಾಗಿ ರೂಪಿಸಿದವರು ವೈಎನ್ ಕೆ. ಸದ್ಯ ಬೆಂಗಳೂರಲ್ಲಿ ನೆಲೆನಿಂತಿರುವ ಜೋಗಿ ಪತ್ನಿ ಜ್ಯೋತಿ, ಮಗಳು ಖುಷಿಯೊಂದಿಗೆ ಜೀವಿಸುತ್ತಿದ್ದಾರೆ.
ಜೋಗಿಯವರ ನಾಯಕನಿಗೆ ಎಲ್ಲವೂ ಸರಿ ಇರ್ತದೆ ಅಥವಾ ಹಾಗಂತ ಅವನು ಅಂದ್ಕೊಂಡಿರ್ತಾನೆ. ಧುತ್ ಎಂದು ಎದುರಾಗುವ ಒಂದು ಸನ್ನಿವೇಶ ಅವನಿಗೆ ತಾನು ನಿಜಕ್ಕೂ ತಾನಂದುಕೊಂಡಷ್ಟು ನೆಮ್ಮದಿಯಾಗಿ ಇದೀನಾ ಅಂತ ತನ್ನೊಳಗೆ ಹುಡುಕಾಟಕ್ಕೆ ಎಳಸುತ್ತದೆ. ಅದರಲ್ಲಿ ಅವನು ಯಶಸ್ವಿಯಾಗ್ತಾನಾ ಇಲ್ವಾ ಅನ್ನೋದಕ್ಕಿಂತ ಓದುಗರಾದ ನಾವು ಅವನೇ ಅಂತನಿಸಿಬಿಡೋದು ಮತ್ತು ನಮಗೂ ಹುಡುಕುವ ಮನಸಾಗೋದು ಜೋಗಿಯ ಬರವಣಿಗೆಯ ಶೈಲಿ.
ಎಂದಿನಂತೆ ಜೋಗಿ ಕೆಲವು ಸತ್ಯಗಳ ಸಂಭಾಷಣೆಗಳ ಮೂಲಕ ಹೇಳಿಬಿಡ್ತಾರೆ.
ಸಂಭಾಷಣೆಗಳ ಮೂಲಕವೇ ಹೇಳುವುದರ ಶಕ್ತಿ ಮತ್ತು ಮಿತಿ ಏನೆಂದರೆ ಒಮ್ಮೆ ಅದು ಧಾರಾವಾಹಿ ನೋಡಿದ ಅನುಭವ ಕೊಡ್ತದೆ. ನೀವು ನಡುವೆ ಎದ್ದು ಹೋಗಿ ಅನ್ನಕ್ಕಿಟ್ಟು ಬಂದರೂ ಕತೆಯೇನೂ ಅಂತ ವೇಗವಾಗಿ ಹೋಗಿರೊಲ್ಲ. ಮಿಸ್ ಮಾಡಿದ ಅನುಭವ ಕೊಡೊಲ್ಲ ಶಕ್ತಿ ಏನೆಂದರೆ ಪರಿಸರವನ್ನು ವಿವರಿಸುವ ಮೂಲಕ ಜೋಗಿ ಒಂದು ಚಿತ್ರವನ್ನು ಕೊರೆದು ಎದುರಿಗೆ ಇಡ್ತಾರೆ.
ಬೆಂಗಳೂರು ಸರಣಿಯ ಆರನೇ ಮತ್ತು ಕೊನೆಯ ಪುಸ್ತಕ ಇದಂತೆ. ಆರೂ ಪುಸ್ತಕ ಬೇರೆ ಬೇರೆ ಬಣ್ಣಗಳ ಒಂದೇ ಮಾಲೆ. ನಿಮಗಿಷ್ಟವಾದದ್ದು ನೀವು ಆಯ್ದುಕೊಳ್ಳಬಹುದು.
ಭಾರತದಲ್ಲಿ ಅತ್ಯಂತ ಕಾಂಪ್ಲಿಕೇಟೆಡ್ ಆದ ಅಪ್ಪಮಗನ ಸಂಬಂಧವನ್ನು ಇಲ್ಲಿ ಮಗನ ಮೂಲಕ ಜೋಗಿ ಮಥಿಸಿದ್ದಾರೆ. ತುಂಬಾ ಸಲ, ಅಪ್ಪನ ಕಣ್ಣಿನಲ್ಲಿ ಮೆಚ್ಚುಗೆ ಮೂಡಿಸುವುದು ಮಾತ್ರ ಮಗಂದಿರ ಜೀವನದ ಪರಮಗುರಿ ಅನ್ನಿಸಿಬಿಡುತ್ತದೆ.
ಜೋಗಿಯವರ ಈ ಕಾದಂಬರಿಯ ಮಗ, ನೀವೂ ಆಗಿರಬಹುದು.
ಅಂದ ಹಾಗೆ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಮತ್ತೆ ನೋಡಬೇಕು.
ಒಂದೇ ಸಿಟ್ಟಿಂಗ್ನಲ್ಲಿ ಓದಿ ಮುಗಿಸಬಹುದಾದ ಕಾದಂಬರಿ. ಪತ್ರಿಕೋದ್ಯಮವನ್ನು ಹತ್ತಿರದಿಂದ ನೋಡಿರುವ ಜೋಗಿಯವರು ಪ್ರಸ್ತುತ ಮಾಧ್ಯಮದ ತಲ್ಲಣಗಳನ್ನು ತಂದೆ - ಮಗನ ಕ್ಲಿಷ್ಟಕರ ಸಂಬಂಧದ ಮೂಲಕ ಅತೀ ಸೂಕ್ಷ್ಮವಾಗಿ ಮೊನಚಾದ ಸoಭಾಷಣೆಗಳಿಂದ ದಾಖಲಿಸಿದ್ದಾರೆ.
ಕಣ್ಣು ಮಂಜಾಗುವುದು, ಕಿವಿ ಮಂದವಾಗುವುದು, ಚರ್ಮ ಕುಂದುವುದು, ನಡಿಗೆ ನಿಧಾನವಾಗುವುದು, ಬಹಳ ಬೇಗ ಸುಸ್ತಾಗುವುದು, ಊರು ಹೋಗು ಅನ್ನುತ್ತಿದೆ, ಕಾಡು ಬಾ ಅನ್ನುತ್ತಿದೆ ಅನ್ನಿಸುವುದು, ನಿದ್ದೆ ದೂರವಾಗುವುದು ತಿಂದದ್ದು ಜೀರ್ಣವಾಗದೇ ಇರುವುದು.ವೃದ್ಧಾಪ್ಯದ ಲಕ್ಷಣಗಳು ಇವಿಷ್ಟೇ ಅಲ್ಲ, ಜಗತ್ತನ್ನು ಬದಲಾಯಿಸಲು ಆಗಲಿಲ್ಲ ಎಂಬ ಹತಾಶೆ, ಯಾರೂ ನನ್ನ ಮಾತು ಕೇಳುತ್ತಿಲ್ಲ ಎಂಬ ಸಿಟ್ಟು, ತನ್ನ ಅನುಭವ ಯಾರಿಗೂ ಬೇಕಾಗಿಲ್ಲ ಎಂಬ ಅಸಹಾಯಕ ನಿರಾಶೆ, ತರುಣ ಜನಾಂಗ ಸಾರ್ಥಕವಾದ ಏನನ್ನೂ ಮಾಡುತ್ತಿಲ್ಲ ಎಂಬ ಅಳಲು. ಈ ಪುಸ್ತಕವು ಕಥಾನಾಯಕ ಅನಿರುದ್ಧ ಮತ್ತು ಅವನ ಬದುಕಿನಲ್ಲಿ ಆದ ಮತ್ತು ಆಗುತ್ತಿರುವ ಸಂಗತಿಗಳ ಮಧ್ಯೆ ಸುತ್ತುತ್ತದೆ. ತನ್ನ ತಂದೆಯನ್ನು ತಿಳಿದಿದ್ದೇನೆ ಎನ್ನುವ ಭಾವನೆಯಲ್ಲಿ ಅನಿರುದ್ಧ ಇರುವಾಗ ಇದ್ದಕಿದ್ದಂತೆ ಅವನ ತಂದೆ ಕಾಣೆಯಾಗಿ ಹುಡುಕಾಟ ನಡೆಸಿದಾಗ ತಿಳಿಯುವ ವಿಷಯಗಳು ಅವನಿಗೆ ನಾನು ನಿಜವಾಗಿ ಅವರನ್ನು ಅರ್ಥ ಮಾಡಿಕೊಂಡಿದ್ದೇನಾ ? ಎನ್ನುವ ಮನಸ್ಸಿನ ತೊಳಲಾಟವನ್ನು ಜೋಗಿಯರವರು ಸುಂದರವಾಗಿ ವರ್ಣಿಸಿದ್ದಾರೆ. ಈ ಪುಸ್ತಕ ಓದುವಾಗ ನಮಗೆ ನಮ್ಮ ತಂದೆಯ ಬಗ್ಗೆ ಅವರ ವಿಚಾರಗಳ ಬಗ್ಗೆ ಅವರ ವ್ಯಕ್ತಿತ್ವದ ಬಗ್ಗೆ ನಿಜಕ್ಕೂ ಅರಿವಿದೆಯೇ ಎಂಬ ಪ್ರಶ್ನೆ ಕಾಡುವುದಂತು ನಿಜ. ಯುವ ಜನಾಂಗ ಓಡಲೇಬೇಕಾದಾಗ ಒಂದು ಪುಸ್ತಕಗಳಲ್ಲಿ ಇದು ಒಂದು.