'ಕಾಡು ಹುಡುಗನ ಹಾಡು ಪಾಡು' ಕತೆಗಾರ ಸ್ವಾಮಿ ಪೊನ್ನಾಚಿ ಅವರ ಅನುಭವ ಕಥನ. ಈ ಸಂಕಲನದ ಬರಹಗಳು ಸಣ್ಣಕತೆ, ಲಲಿತ ಪ್ರಬಂಧಗಳ ಸೃಜನಶೀಲತೆ, ಸ್ವಾರಸ್ಯ, ರಂಜಕತೆ, ಪತ್ರಿಕಾ ಬರಹಗಳ ಖಚಿತತೆ, ಸಂಕ್ಷಿಪ್ತತೆ, ಸಂಶೋಧಕನ ಅಧ್ಯಯನಶೀಲತೆ ಸಾಮಾಜಿಕ ಕಳಕಳಿ ಈ ಎಲ್ಲವನ್ನೂ ಒಳಗೊಂಡಿದೆ. ಇಲ್ಲಿಯ ಬರಹಗಳು ರಂಜನೀಯತೆಯ ಆಚೆಗೂ ತಮ್ಮ ಕೈ ಚಾಚುತ್ತವೆ. ಈ ಸಂಕಲನದ ಬಹುತೇಕ ಬರಹಗಳು ನಮ್ಮ ನಾಡಿನ ವಿಶಿಷ್ಟ ಕಾಲಘಟ್ಟದವು. ದಂತಚೋರ ನರಹಂತಕ ವೀರಪ್ಪನ್ ವಿರುದ್ಧ ಕಾರ್ಯಾಚರಣೆ ನಡೆಯುತ್ತಿದ್ದ ಸಂದರ್ಭದ್ದು. ಆ ಬಗ್ಗೆ ವಿವರಗಳು ಪತ್ರಿಕೆಗಳ ಹಳೆ ಸಂಚಿಕೆಗಳಲ್ಲಿ, ಪೊಲೀಸ್ ದಾಖಲೆಗಳಲ್ಲಿ ಸಿಕ್ಕಾವು. ಆದರೆ ಸ್ವಾಮಿ ಪೊನ್ನಾಚಿಯವರ ಬರಹಗಳಲ್ಲಿ ಈ ಪ್ರಕರಣಗಳ ಮತ್ತೊಂದು ಮಾನವೀಯ ಮುಖ ಬಿಚ್ಚಿಡುತ್ತಾರೆ. ಈ ಸಂಕಲನದಲ್ಲಿ ಹುತಾತ್ಮರಾದ ಶಕೀಲ್ ಅಹಮದ್ ಅವರ ಬಗ್ಗೆ ಬರಹ ಇದೆ. ಶಕೀಲ್ ಅಹಮದ್ ಅವರ ಕೆಲಸ ಸಾಧನೆ ತ್ಯಾಗ ಎಲ್ಲ ದಾಖಲೆಗಳಲ್ಲಿ ಸಿಕ್ಕೀತು. ಆದರೆ, ಸ್ವಾಮಿ ಪೊನ್ನಾಚಿ ಶಕೀಲ್ ಅಹಮದ್ ಅವರ ವ್ಯಕ್ತಿಚಿತ್ರ ಬಿಡಿಸಿರುವ ಪರಿಯೇ ಬೇರೆ. ಒಬ್ಬ ಕತೆಗಾರ ಮಾತ್ರ ಹೀಗೆ ಬಿಡಿಸಬಲ್ಲ. ಆದರೆ ವಾಚಾಮಗೋಚರ ಹೊಗಳದ ಅಥವಾ ಅನಗತ್ಯ ತೆಗಳದ, ಕಣ್ಣೀರು ಸುರಿಸದ ಸಂಯಮ ಇವರಿಗಿದೆ.
ಕವಿ, ಕಥೆಗಾರ ಮಹದೇವಸ್ವಾಮಿ ಕೆ.ಎಸ್ ಅವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸ್ವಾಮಿ ಪೊನ್ನಾಚಿ ಎಂದೇ ಗುರುತಿಸಿಕೊಂಡಿದ್ದಾರೆ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಪೊನ್ನಾಚಿಯಲ್ಲಿ 1986ರಲ್ಲಿ ಜನಿಸಿದ ಅವರು, ಪ್ರಾಥಮಿಕ ಶಿಕ್ಷಣವನ್ನು ಪೊನ್ನಾಚಿ ಯಲ್ಲಿ. ಕೊಳ್ಳೇಗಾಲ ಮತ್ತು ಮೈಸೂರಿನಲ್ಲಿ ಉನ್ನತ ವ್ಯಾಸಂಗವನ್ನು ಮುಗಿಸಿ ಪ್ರಸ್ತುತ ಚಾಮರಾಜನಗರ ಜಿಲ್ಲೆ ಯಳಂದೂರು ಇಲ್ಲಿ ಸಂಪನ್ಮೂಲ ವ್ಯಕ್ತಿ ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಕನ್ನಡ ಪುಸ್ತಕ ಪ್ರಾಧಿಕಾರ ದಿಂದ ಧನ ಸಹಾಯ ಪಡೆದು 2015ರಲ್ಲಿ "ಸಾವೊಂದನ್ನು ಬಿಟ್ಟು " ಮೊದಲ ಕವನ ಸಂಕಲನ ಪ್ರಕಟಣೆಯಾಗಿದೆ. ಈ ಕೃತಿಗೆ ಬೇಂದ್ರೆ ಗ್ರಂಥ ಬಹುಮಾನ ದೊರೆತಿದೆ ಹಾಗೂ ಮಂಡ್ಯದ adviser ಪತ್ರಿಕೆಯವರು adviser ಪ್ರಶಸ್ತಿಯನ್ನೂ ನೀಡಿ ಗೌರವಿಸಿದ್ದಾರೆ.
2018 ರಲ್ಲಿ ಧೂಪದ ಮಕ್ಕಳು ಕಥಾ ಸಂಕಲನದ ಹಸ್ತ ಪ್ರತಿಗೆ ಕನ್ನಡ ಯುವಜನ ಕ್ರಿಯಾ ಸಮಿತಿ. ಹಾನಗಲ್ಲು ಇವರಿಂದ ಪಾಪು ಕಥಾ ಪುರಸ್ಕಾರ ಹಾಗೂ ಛಂದ ಪ್ರಕಾಶನ ಕೊಡಮಾಡುವ ಛಂದ ಪುಸ್ತಕ ಬಹುಮಾನ ದೊರೆತಿದೆ. ಬೆಂಗಳೂರಿನ ಸುಚಿತ್ರ ಗ್ಯಾಲರಿಯಲ್ಲಿ ಧೂಪದ ಮಕ್ಕಳು ಪುಸ್ತಕದ ಕುರಿತು ಸಂವಾದ ಕಾರ್ಯಕ್ರಮ ನಡೆದಿದೆ. ನಿಯತಕಾಲಿಕೆ ಹಾಗೂ ದಿನಪತ್ರಿಕೆಯಲ್ಲಿ ಕಥೆ ಕಾವ್ಯ ಪ್ರಕಟವಾಗಿದೆ. ಮಂಟೇಸ್ವಾಮಿ ಹಾಗೂ ಮಹದೇಶ್ವರ ಕಾವ್ಯಗಳಲ್ಲಿ ವಿಶೇಷ ಆಸಕ್ತಿಹೊಂದಿದ್ದಾರೆ.
ಇತ್ತೀಚಿನ ಹೆಚ್ಚಿನ ಬರಹಗಾರರಿಗಿರುವ ಬರೆದುಬಿಡಬೇಕು, ಅಚ್ಚಾಗಿಸಿಬಿಡಬೇಕು, ಹತ್ತಾರು ಮರುಮುದ್ರಣಕ್ಕೆ ಅನುವಾಗಬೇಕು ಎಂಬ ಯಾವ ಅವಸರವೂ ಇಲ್ಲದೆ ಕತೆಗಾರ ಸ್ವಾಮಿ ಪೊನ್ನಾಚಿ ತಣ್ಣಗೆ ಕೂತು ಬಾಲ್ಯದ ಮೆಲುಕುಗಳನ್ನೂ ಇತಿಹಾಸದ ಝಲಕುಗಳನ್ನೂ ಇಲ್ಲಿ ಬಿಡಿಬಿಡಿಯಾಗಿ ಹರವಿದ್ದಾರೆ. ವೀರಪ್ಪನ್ ಮತ್ತವನ ಸಹಚರರ ತೆಳು ನೆನಪು, ವೀರಪ್ಪನ್ ಬೇಟೆ ಕಾರ್ಯಾಚರಣೆಯ ಒಂದು ಮುಖ್ಯ ಹೆಸರಾದ ಶಕೀಲ್ ಅಹಮದ್ದರ ಕುರಿತಾದ ಬರಹಗಳೂ, ಬ್ರಿಟೀರ ಆಡಳಿತ, ಅವರೊಂದಿಗೆ ಹಳ್ಳಿಗರ ಒಡನಾಟದ ಬರಹಗಳೂ ಕಾಫಿ ಎಸ್ಟೇಟ್ ಕಥೆಗಳು; ಅರಣ್ಯ ಉತ್ಪನ್ನಗಳನ್ನೇ ನೆಚ್ಚಿಕೊಂಡು ಬದುಕಿದ್ದ ಸೋಲಿಗರು ಕ್ರಮೇಣ ಕಾಫಿ ಬೆಳೆಗಾರರಾದ ಬಗ್ಗೆ, ಹಿಂದಿನ ಕೃಷಿ ಪದ್ಧತಿಯ ಕಷ್ಟ ಜೀವನದ ನೆನಪು, ನಕ್ಸಲ್ ನಾಯಕ ಸಾಕೇತ್ ರಾಜನ್ , ಪೊನ್ನಾಚಿಯ ಪೋಸ್ಟಾಫೀಸು, ಮಾದಪ್ಪನ ಬೆಟ್ಟ... ಹೀಗೆ ಸಂಬಂಧವೇ ಇರದ ಆದರೂ ಆಸಕ್ತಿದಾಯಕವಾದ ವಿಷಯಗಳ ಕುರಿತು ಬಿಡಿಬಿಡಿ ಬರಹಳಿವೆ. ಓದಲೇಬೇಕು ಎಂಬ ಒತ್ತಡವನ್ನೇನೂ ಸೃಷ್ಟಿಸದ ಆದರೆ ಓದುತ್ತಾ ಸಾಗಿದಂತೆ ಆಸಕ್ತಿ ಹಿಡಿದಿಡುವ ಚೆಂದದ ಬರಹಗಳ ಸಂಗ್ರಹ.
ಒಂದು ಒಳ್ಳೆಯ ಪುಸ್ತಕ. ಈ ಪುಸ್ತಕ ಓದಲು ಶುರುಮಾಡಲು ಕಾರಣ ಪುಸ್ತಕದ ಹೆಸರು ಮತ್ತು ಮುಖಪಟ. ಅನುಮಾನದಲ್ಲೇ ಓದಲು ಶುರು ಮಾಡಿದ್ದೆ. ಚಾಮರಾಜನಗರದ ಸುತ್ತ ನೆಡೆಯುವ ಅನುಭವ ಕಥನ. ವೀರಪ್ಪನ್, ಕನ್ನಡ ಭಾಷೆ, ಪೋಸ್ಟ ಆಫೀಸ್ ಹಳ್ಳಿಗೆ ಬಂದ ಕತೆಗಳು. ಇದೆ ರೀತಿ ಲೇಖಕರು ತುಂಬಾ ಚನ್ನಾಗಿ ಎಲ್ಲಾ ವಿಚಾರವನ್ನು ಈ ಪುಸ್ತಕದಲ್ಲಿ ಬರೆದಿದ್ದಾರೆ.
ಒಂದು ಇಲ್ಲ ಎರಡು sitting ನಲ್ಲಿ ಮುಗಿಸ ಬಹುದಾದ ಪುಸ್ತಕ. ಒಮ್ಮೆ ಓದಿ.
ಒಮ್ಮೆ ಕಾಡಿನೊಳಗೆ ಹೊಕ್ಕು ಬಂದರೆ ಮುಗಿಯಿತು ಅದರ ಗಾಢ ಅನುಭವಗಳಿಂದ ಹೊರ ಬರುವುದು ಸಾಧ್ಯವಿಲ್ಲ. ತನ್ನೊಳಗೆ ಅಸಂಖ್ಯ ವಿಸ್ಮಯಗಳನ್ನು ತುಂಬಿಕೊಂಡು, ಯುಗಯುಗಳಿಂದ ನಿಂತಲ್ಲೇ ನಿಂತಿದ್ದು ತಪಸ್ಸುಗೈಯ್ಯುತ್ತಿರುವ ಹಾಗೆ ಕಾಣಿಸುತ್ತವೆ ಈ ಕಾಡು,ಬೆಟ್ಟ, ಗುಡ್ಡಗಳು. ಇಂತಹ ಕಾಡು ಮೇಡು ಸುತ್ತಿದ ಅನುಭವಗಳನ್ನು ಲೇಖಕರು ಈ ಪುಸ್ತಕದಲ್ಲಿ ಹಂಚಿಕೊಂಡಿದ್ದಾರೆ.
ಕಾಡಿನಲ್ಲಿರುವ ವಸ್ತುಗಳನ್ನು ಮಾರಿ ಹೇಗೋ ಜೀವನ ನಡೆಸುತ್ತಿದ್ದ ಸೋಲಿಗರಿಗೆ ರಾಡಾಲ್ಫ್ ಮಾರೀಸ್ ಎಂಬಾತ ಕಾಫಿ ಬೆಳೆಸುವುದನ್ನು, ಕಾಫೀ ಎಸ್ಟೇಟುಗಳ ದೇಖರೇಖಿ ಮಾಡುವುದನ್ನು ಕಲಿಸುತ್ತಾನೆ. ಅದರಲ್ಲಿಯೇ ನುರಿತರಾಗಿ ಬದುಕು ಕಟ್ಟಿಕೊಂಡಿರುವ ಸೋಲಿಗರನ್ನು ನೋಡಿದರೆ ನಮ್ಮ ದೇಶದಲ್ಲಿರುವ ಮಾನವ ಸಂಪನ್ಮೂಲವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡಾಗ ಎಷ್ಟೆಲ್ಲ ಅಭಿವೃದ್ಧಿ ಸಾಧಿಸಬಹುದಲ್ಲ ಎನ್ನಿಸುತ್ತದೆ.
ಯಾವುದೋ ಕಾಡೊಂದರಲ್ಲಿ ವೀರಪ್ಪನ್ ಇದ್ದಾನೆ, ಅವನು ಮಹಾ ಕ್ರೂರಿ, ಎದುರಿಗೆ ಸಿಕ್ಕವರನ್ನು ಸುಮ್ಮನೆ ಬಿಡುವುದಿಲ್ಲ ಎಂಬ ಸುದ್ದಿಗಳು ನಾನು ಚಿಕ್ಕವಳಿದ್ದಾಗ ಕೇಳಿ ಬರುತ್ತಿದ್ದವು. ಸುದ್ದಿ ಪತ್ರಿಕೆಯಲ್ಲಿ ಬರುತ್ತಿದ್ದ ಅವನ ಫೋಟೊದಲ್ಲಿನ ಗಡಸು ಮುಖ, ಆ ದಪ್ಪ ಮೀಸೆಯನ್ನು ನೋಡಿ ಏನೇನೋ ಭೀಭತ್ಸವನ್ನು ಕಲ್ಪನೆ ಮಾಡಿಕೊಂಡು ಹೆದರುತ್ತಿದ್ದ ಕಾಲವದಾಗಿತ್ತು. ಅವನಿಂದ ಅದೆಷ್ಟೋ ಮೈಲಿಗಳು ದೂರವಿರುತ್ತಿದ್ದ ನಮಗೆ ಹೀಗಾಗುತ್ತಿದ್ದಾಗ ಅಲ್ಲೇ ಅವನಿರುತ್ತಿದ್ದ ಕಾಡಿನ ಪಕ್ಕದಲ್ಲಿಯೇ ಇದ್ದ ಹಳ್ಳಿಗರ ಕಥೆ ಹೇಗಿತ್ತೆಂಬ ಚಿತ್ರಣ ಈ ಪುಸ್ತಕದಲ್ಲಿ ಬರುತ್ತದೆ. ಲೂಟಿ ಮಾಡುತ್ತಿದ್ದ ಅವನ ಸಹಚರರು, ಅವರನ್ನು ಹಿಡಿಯಲೆಂದು ಪಟ್ಟಾಂಗ ಹಾಕಿದ್ದ ಪೋಲಿಸ್ ಪಡೆಗಳು ತೋರಿಸುತ್ತಿದ್ದ ದರ್ಪ ದೌರ್ಜನ್ಯಗಳನ್ನೆಲ್ಲ ಇಲ್ಲಿರುವ ಹಲವಾರು ಲೇಖನಗಳ ಮೂಲಕ ಸೆರೆ ಹಿಡಿದಿದ್ದಾರೆ.
ಆದಿವಾಸಿ ಜನರು ಕಾಡು ಪ್ರಾಣಿಗಳನ್ನು ಪ್ರೀತ್ಯಾದರಗಳಿಂದ ಕಾಣುವ ರೀತಿ, ಒಂದು ಕಾಲದಲ್ಲಿ ಕರ್ನಾಟಕಕ್ಕೆ ಸೇರಿದ್ದು ಈಗ ತಮಿಳುನಾಡಿನ ಪಾಲಾಗಿರುವ ಹಳ್ಳಿಗಳಲ್ಲಿನ ಕನ್ನಡದ ಸ್ಥಿತಿ ಮತ್ತು ಅವನತಿಯತ್ತ ಹೊರಟಿರುವ ಅಲ್ಲಿನ ಕನ್ನಡ ಶಾಲೆಗಳು, ಜೀವನಾನುಭವ ಕಲಿಸುವ ಬದುಕಿನಿಂದ ದೂರವಾಗಿ ವರ್ಚುವಲ್ ಬದುಕಿನತ್ತ ಸಾಗಿರುವ ಈ ಕಾಲದ ಮಕ್ಕಳು ಮತ್ತು ಅವರ ಕಿರುಬೆರಳು ಹಿಡಿದಿರುವ ಪೋಷಕರು, ಮಲೆ ಮಹದೇಶ್ವರ ಬೆಟ್ಟ, ಬಿಳಿಗಿರಿ ರಂಗಯ್ಯ ಹೀಗೆ ಅನೇಕ ವಿಚಾರಗಳು ಈ ಪುಸ್ತಕದಲ್ಲಿ ಪ್ರಸ್ತಾಪವಾಗಿವೆ. ಹಳ್ಳಿಗಳನ್ನು ಬಿಟ್ಟು ನಗರಕ್ಕೆ ಬಂದ ನಮ್ಮಗಳ ಒಂದಾನೊಂದು ಕಾಲದಲ್ಲಿದ್ದ ಬದುಕಿನ ಝಲಕ್ ಕಾಣಿಸುತ್ತದೆ. ಸ್ವಾಮಿಯವರ ಎಲ್ಲಿಯೂ ಬೋರ್ ಹೊಡೆಸದಂತಹ ನಿರೂಪಣಾ ಶೈಲಿಯಿಂದ ಈ ಪುಸ್ತಕವನ್ನು ಒಂದೇ ಪಟ್ಟಿಗೆ ಓದಿ ಮುಗಿಸಬಹುದು. ಅವರೇ ಹೇಳುವ ಹಾಗೆ - ಹೇಳುವ ವಿಷಯಕ್ಕೆ ಸಾಕ್ಷಿ ಇಟ್ಟುಕೊಂಡೇ ಪ್ರಸ್ತುತಪಡಿಸುವ ಶೈಲಿಯಿಂದಾಗಿ ವಿಷಯಗಳು ಇಂಟ್ರೆಸ್ಟಿಂಗ್ ಎನ್ನಿಸುತ್ತವೆ.
ಬೃಹತ ಕಾದಂಬರಿ, ಅಸಂಖ್ಯ ಕಥೆಗಳಾಗುವಷ್ಟು ಅನುಭವ ಸ್ವಾಮಿ ಪೊನ್ನಾಚಿ ಅವರ ಬಳಿಯಲ್ಲಿದೆ. ಈ ಪುಸ್ತಕದಲ್ಲಿ ಹಲವಾರು ಕಡೆಗಳಲ್ಲಿ 'ದೊಡ್ಡ ಕಾದಂಬರಿಯೇ ಆದೀತು' ಎಂದು ವಿಷಯವನ್ನು ಚೊಕ್ಕವಾಗಿ ಹೇಳಿ ಮುಗಿಸಿದ್ದಾರೆ. ವಿಸ್ತಾರವಾದ ಕಥಾನಕಗಳು ಬರಲಿ ಮತ್ತು ಅದನ್ನು ಓದುವ ಅವಕಾಶ ನಮ್ಮದಾಗಲಿ ಎಂದು ಆಶಿಸುತ್ತಾ...