#ಅಕ್ಷರವಿಹಾರ_೨೦೨೫ ಕೃತಿ: ಕಾರಣ ಪುರುಷ ಲೇಖಕರು: ರಾಮಚಂದ್ರ ಭಾವೆ ಪ್ರಕಾಶಕರು: ವಿಕ್ರಂ ಪ್ರಕಾಶನ,ಬೆಂಗಳೂರು ಬೆಲೆ: ರೂ. 330 ಪ್ರಕಟಣೆಯ ವರ್ಷ: 2018
ಈ ಪುಸ್ತಕವು ನನಗೆ ಗ್ರಂಥಾಲಯದಲ್ಲಿ ಕಣ್ಣಿಗೆ ಬಿತ್ತು. ಕೈಗೆತ್ತಿಕೊಂಡು ಕಣ್ಣಾಡಿಸಿದಾಗ “ಕುರುಕ್ಷೇತ್ರ ಮಹಾಯುದ್ಧದಲ್ಲಿ ಹದಿನೆಂಟು ಅಕ್ಷೋಹಿಣಿ ಸೇನೆಯೊಂದಿಗೆ ದುಷ್ಟರೆನಿಸಿದವರೆಲ್ಲ ಅವಸಾನ ಕಾಣುವುದುರೊಂದಿಗೆ ಕೃಷ್ಣ ಬಯಸಿದ ಧರ್ಮಸಂಸ್ಥಾಪನೆ ಆಯಿತೆ?” ಎಂಬ ಬರಹವನ್ನು ಮುಖಪುಟದಲ್ಲಿ ನೋಡಿ ಕುತೂಹಲದಿಂದ ಪುಸ್ತಕವನ್ನು ತಂದು ಓದಲಾರಂಭಿಸಿದೆ.
ಇಲ್ಲಿ ಕೃಷ್ಣನನ್ನು ದೇವತಾ ಮನುಷ್ಯ ಎನ್ನುವುದಕ್ಕೆ ವಿರುದ್ಧವಾಗಿ ಅವನೊಬ್ಬ ಅಸಾಮಾನ್ಯ ಮನುಷ್ಯ ಎಂಬರ್ಥದಲ್ಲಿ ಲೇಖಕರು ಚಿತ್ರಿಸಿದ್ದಾರೆ. ಅದರಲ್ಲಿ ಸ್ವಲ್ಪಮಟ್ಟಿಗೆ ಯಶಸ್ವಿ ಸಹ ಆಗಿದ್ದಾರೆ. ತನ್ನ ಅಸೀಮ ಧೈರ್ಯ,ಜಾಣ್ಮೆ,ತಾಳ್ಮೆ,ವಿವೇಕ ಮತ್ತು ಸಮಯಪ್ರಜ್ಞೆ ಮುಂತಾದ ವಿಶಿಷ್ಟ ಗುಣಗಳಿಂದಾಗಿ ದುರ್ಭರ ಸನ್ನಿವೇಶಗಳನ್ನು ಶ್ರೀಕೃಷ್ಣನು ನಿಭಾಯಿಸಿದ ರೀತಿಯಿಂದ ಅವನು ಇತರರಿಗಿಂತ ಭಿನ್ನವಾಗಿ ಕಾಣಿಸಲ್ಪಡುತ್ತಾನೆ ಎಂಬ ನೆಲೆಯಲ್ಲಿ ಲೇಖಕರು ಇಲ್ಲಿಯ ಕತೆಯನ್ನು ಚಿತ್ರಿಸಿದ್ದಾರೆ. ಕಂಸನ ಜನನದಿಂದ ಪ್ರಾರಂಭಿಸಿ ಯಾದವರ ಅವಸಾನದವರೆಗೆ ಕತೆಯು ಹರಡಿಕೊಂಡಿದೆ. ಆದರೆ ತೀರಾ ಇಕ್ಕಟ್ಟಾದ ಅಥವಾ ಗೊಂದಲಗಳನ್ನುಂಟುಮಾಡುವ ಪ್ರಸಂಗಗಳನ್ನು (ಉದಾ: ಬಿಲ್ವಿದ್ಯೆ ಪ್ರದರ್ಶನ, ಶಾಪವನ್ನು ನೀಡುವ ಸಂದರ್ಭಗಳು) ಕೈಬಿಡುವ ಅಥವಾ ತೇಲಿಸಿ ಬಿಡುವ ತಂತ್ರವನ್ನು ಲೇಖಕರು ಅನುಸರಿಸಿದ್ದಾರೆ ಎನಿಸಿತು.
ಇದನ್ನು ಹೊರತುಪಡಿಸಿ ಅನೇಕ ಮಾಹಿತಿಗಳನ್ನು ಪುಸ್ತಕವು ಒದಗಿಸುತ್ತದೆ. ಕಂಸ ಮತ್ತು ಜರಾಸಂಧರ ನಡುವಿನ ಒಡನಾಟ, ಕೃಷ್ಣನಿಗೆ ಪಾಂಚಜನ್ಯ ಶಂಖವು ದೊರೆತ ಬಗೆ, ಕಾಲಯವನ ಎಂಬ ಯಾದವನನ್ನು ಉಪಾಯವಾಗಿ ನಿವಾರಿಸಿಕೊಂಡದ್ದು,ಜರಾಸಂಧನಿಗೆ ಚಳ್ಳೆಹಣ್ಣು ತಿನ್ನಿಸಿ ಗೋಮಾಂತಕದ ಪರ್ವತ ಒಂದರಲ್ಲಿ ಅಡಗಿಕೊಂಡಿದ್ದೆಲ್ಲವೂ ನನಗೆ ಹೊಸ ಉಪಯುಕ್ತ ಮಾಹಿತಿ. ಇದು ಬಿಟ್ಟರೆ ಬೇರೆಲ್ಲಾ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ಕತೆಯೇ. ಕುರುಕ್ಷೇತ್ರ ಯುದ್ಧ ಮುಗಿದ ತರುವಾಯ ಯುಧಿಷ್ಠಿರ ಮತ್ತು ಕೃಷ್ಣನ ನಡುವಿನ ಸಂಭಾಷಣೆಯಲ್ಲಿ “ಅಧರ್ಮದ ವಿರುದ್ಧ ಅಧರ್ಮವನ್ನು ಪ್ರಯೋಗಿಸುವುದೇ ನಿಜವಾದ ಧರ್ಮ” ಎಂಬ ಕೃಷ್ಣನ ನುಡಿಗಳು ಸರಿ ಎಂದೆನಿಸಿತು. ಮನದಲ್ಲಿ ಮೂಡಿದ ಇನ್ನೊಂದು ಸಂಗತಿಯೆಂದರೆ ಜರಾಸಂಧ,ಕಂಸ, ದುರ್ಯೋಧನನಂತಹವರು ಕಪಟದಿಂದ ಮೋಸದಿಂದ ವಂಚಿಸಿದಾಗ ಯಾವುದನ್ನೂ ಗಣನೆಗೆ ತೆಗೆದುಕೊಳ್ಳದವರು, ಆತ್ಮಾವಲೋಕನ ಮಾಡಿಕೊಳ್ಳದವರು ಕುರುಕ್ಷೇತ್ರ ಯುದ್ಧದಲ್ಲಿ ಅದೂ ಧರ್ಮಯುದ್ಧದಲ್ಲಿ ಪಾಂಡವರು ಮೋಸದಿಂದ ಗೆದ್ದರು ಎಂದು ಹಲುಬುವುದಕ್ಕೆ ಏನನ್ನೋಣ? ಇದು ಧೃತರಾಷ್ಟ್ರ ಗಾಂಧಾರಿಯಾದಿಯಾಗಿ ಎಲ್ಲರೂ ಕೇಳುವಂತಹ ಪ್ರಶ್ನೆ. ಇದಕ್ಕೆ ನನಗನಿಸಿದ್ದು ಇಷ್ಟು, ಒಂದು ಇದು ಸ್ವಾನುಕಂಪ ಅಥವಾ ತೇಪೆ ಹಚ್ಚುವ ಕೆಲಸ ಇನ್ನೊಂದು ರೀತಿಯಲ್ಲಿ ನೋಡಿದರೆ ನಮಗಿಷ್ಟವಾದವರನ್ನು ಎಲ್ಲಾ ರೀತಿಯ ಆರೋಪ ವಿವಾದಗಳಿಂದ ಹೊರತಾದ ವ್ಯಕ್ತಿತ್ವದವರಾಗಿ ನೋಡಬಯಸುವ ಮನೋಧರ್ಮ ಕಾರಣವಿರಬಹುದು ಎನಿಸಿತು.