ಹೀಗೆ, ಹಲವು ಪದರಗಳಿರುವ ನಿರೂಪಣೆ, ಹಲವು ಕೋನಗಳಿಂದ ನಡೆಯುವ ನಿರೂಪಣೆ ಇರುವ ಕನ್ನಡ ಕಾದಂಬರಿ ಓದಿ ಬಹಳ ಬಹಳ ವರ್ಷಗಳೇ ಕಳೆದಿವೆ. ಒಂದು ಮಾತಲ್ಲಿ ಹೇಳಬೇಕು ಅಂದರೆ ಇದು ನಾವು" ಬದುಕುತ್ತಿರುವ ಈ ೨೦೨೪ರ ಬದುಕಿಗೆ ನನ್ನ ತಲೆಮಾರಿನವರೊಬ್ಬರು ಅಮೆರಿಕದಲ್ಲಿ ಕೂತು ಹಿಡಿದಿರುವ ಕನ್ನಡಿ.
ಬೇರೆ ಬೇರೆ ಕಾಲಘಟ್ಟಗಳಲ್ಲಿಯೂ ಬದಲಾಗದ ಸಮಸ್ಯೆಯನ್ನು 'ಸತ್ಕುಲಪ್ರಸೂತರು' ಪರಿಶೀಲಿಸಿದೆ. ಕಾದಂಬರಿಯೊಂದು ಕಥೆಯ ಕಾಲವನ್ನು ಹೇಗೆ ನಿರ್ವಹಿಸುತ್ತದೆ ಎಂಬುದು ಮುಖ್ಯ ಸಂಗತಿಯಾಗುತ್ತದೆ. ಈ ಕಾದಂಬರಿಯು ನವೋದಯ, ನವ್ಯಗಳ ಮಾರ್ಗವನ್ನು ಬಿಟ್ಟು ಕಾಲವನ್ನು ಕೌದಿಯ ಹಾಗೆ ಹೆಣೆದಿದೆ.
ಇದು ಆತ್ಮಕಥೆಯೋ, ಸಮುದಾಯವೊಂದರ ಆಚರಣೆಗಳ ದಾಖಲೆಯೋ, ಹುಟ್ಟಿದ ನೆಲ ಮತ್ತು ಸಾಕಿದ ಕುಟುಂಬ, ನಂಟಸ್ತನ, ಪರಿಚಿತ ಉದ್ಯೋಗಗಳಿಲ್ಲದರಿಂದ ದೂರವಾಗಿ ಬದುಕುವ ಜನಸಮೂಹದ ಸ್ವವಿಮರ್ಶೆಯೋ, ಬರೆಯಲಿರುವ ಕಾದಂಬರಿಯೊಂದರ ಟಿಪ್ಪಣಿಯೋ, ಇದೇ ಕಾದಂಬರಿಯೋ, ಇಲ್ಲಿರುವಂಥ ನಿರೂಪಣೆ ಕಾದಂಬರಿಯ ನಿರೂಪಕನ ಅಗತ್ಯ ಮತ್ತು ಕಾದಂಬರಿಯ ಪಾತ್ರವೊಂದರ ಒತ್ತಾಯದಿಂದ ರೂಪುಗೊಂಡದ್ದೋ ಎಂದು 'ಸತ್ಕುಲಪ್ರಸೂತ'ರನ್ನು ಹಲವು ಕೋನಗಳಿಂದ ನೋಡಲು ಸಾಧ್ಯವಿದೆ.
ಅಮೇರಿಕಾದಲ್ಲಿ ಸೆಟಲ್ ಆಗಿರುವ ಅನಂತ ಕೃಷ್ಣನ ಕುಟುಂಬ, ಊರಲ್ಲಿ ನೆಲೆಸಿರುವ ಸಂಪ್ರದಾಯಸ್ಥ ಕುಟುಂಬಸ್ಥರು, ಮಾರ್ಮನಿಯನ್ ಎಂಬ ಕ್ರೈಸ್ತ ಕುಲದ ಹುಡುಗನನ್ನೇ ಮದುವೆ ಆಗುತ್ತೇನೆ ಎಂದು ಪಟ್ಟು ಹಿಡಿದಿರುವ ಅನಂತನ ಮಗಳು ಅಕ್ಷರ, ಮದುವೆಯಾದರೆ ಮಾರ್ಮನಿಯನ್ ಸಂಪ್ರದಾಯದ ಪ್ರಕಾರವೇ ಆಗಬೇಕೆಂದು ನಿಂತಿರುವ ಕೆವಿನ್ ನ ಅಪ್ಪ - ಅಮ್ಮ, ಅನ್ಯ ಮತೀಯನನ್ನು ಮದುವೆಯಾದರೆ ತಮ್ಮ ಪಿತೃಗಳಿಗೆ ಮೋಕ್ಷಪ್ರಾಪ್ತಿಯಾಗುವುದಿಲ್ಲ ಎಂದು ಸ್ವಂತ ಮಗನಿಗೆ ಘಟ ಶ್ರಾದ್ಧ ಮಾಡುವ ಅಪ್ಪ…ಕಥೆ ಇಂತಹ ಸಂದಿಗ್ಧ ಸನ್ನಿವೇಶಗಳ ಸುತ್ತ ನಡೆಯುತ್ತದೆ. ಕೊನೆಗೂ ಕೆವಿನ್ ಹಾಗೂ ಅಕ್ಷರ ಮದುವೆಯಾಗುತ್ತಾರಾ? ಅದನ್ನು ತಿಳಿದುಕೊಳ್ಳಲು ನೀವು ಪುಸ್ತಕ ಓದಬೇಕು.
ಕಾದಂಬರಿಯ ಶುರುವಿನಲ್ಲಿ “ಇದೆಂತ ಮರೆ ಹೀಗೆ ಬರ್ದಿದ್ದಾರೆ” ಅಂತ ಅನಿಸಿದರೂ, ಕಥೆ ಬೆಳೆದ ಹಾಗೆ, ಪಾತ್ರಗಳು ಗಟ್ಟಿಯಾಗಿ ನೆಲೆಯೂರುತ್ತ ಹೋದ ಹಾಗೆ ಕಾದಂಬರಿ ಇಷ್ಟ ಆಯ್ತು. ದ್ವೈತಾದ್ವೈತದ ವೈಚಾರಿಕ ಕಲಹಗಳು, ಕೆಲವೊಂದು ಆಚರಣೆಗಳು ಈಗಲೂ ಪ್ರಸ್ತುತವೇ ಎಂದು ಪ್ರಶ್ನಿಸುವಂತೆ ಮಾಡಿತು. ಮಾಲಿನಿ ಹಾಕಿದ ಫೇಸ್ಬುಕ್ ಪೋಸ್ಟು ಹಾಗೂ ಅದಕ್ಕೆ ಶ್ರೀಮಠದ ಉತ್ತರ To the Point ಅನ್ನಿಸಿ ನನ್ನಲ್ಲೇ ಇದ್ದ ಹಲವು ಅನುಮಾನಗಳನ್ನು ಬಗೆಹರಿಸಿತು. ಆನಂದ-ಟಿ ಹಚ್ಚೆಯಂಗಡಿಯ ಅನಂದತೀರ್ಥರ ಡಿಸ್ಕ್ರಿಪ್ಷನ್, ತನ್ನ ಅಭಿಮಾನಿಗಳ ಹೆಸರಲ್ಲಿ ಹಚ್ಚೆ ಹಾಕಿಸಿಕೊಂಡ ಕನ್ನಡದ ನಟರೊಬ್ಬರಿಗೆ ಹಚ್ಚೆ ಹಾಕಿದ ಆರ್ಟಿಸ್ಟನ್ನು ನೆನಪಿಸಿತು! ಬಾಲ್ಯವಿವಾಹದ ರೆಫರೆನ್ಸ್ ಕೊಟ್ಟು, ಅವರೂ ಅದರಿಂದ ಹೊರಗೆ ಬರುವ ಪಾಸಿಬಿಲಿಟಿಯನ್ನು ಚರ್ಚಿಸಿದ್ದು ಸಮಂಜಸವೆನಿಸಿತು.
ಇಂಟ್ರೆಸ್ಟಿಂಗ್ಲಿ, ಈ ಕಾದಂಬರಿ ಓದಿದ ಮೇಲೆ ಟರ್ಕಿಯ ಲೇಖಕ ಒರ್ಹಾನ್ ಪಾಮುಕ್ ಅವರ ಮ್ಯೂಸ್ಯೂಂ ಆಫ್ ಇನೋಸೆನ್ಸ್ ಓದಬೇಕು ಎಂದೆನಿಸುತ್ತಿದೆ. ಮತ್ತೆ ಸಿಗುವ!
ಸಾಮಾನ್ಯವಾಗಿ ಪುಸ್ತಕ ಓದಿದ ಕೂಡಲೇ ನಾನು ಆ ಕುರಿತಾಗಿ ಬರೆಯುತ್ತೇನೆ.ಆದರೆ ಪ್ರಜ್ಞಾಪೂರ್ವಕವಾಗಿ ಇದರ ಬಗ್ಗೆ ಒಂದು ದಿನ ತಡೆದು ಬರೆಯುವ ಅಂತ ಬರೆದದ್ದು. ಇದಕ್ಕೆ ಕಾರಣ ಈ ಪುಸ್ತಕ ಓದಿದರೆ ಗೊತ್ತಾಗುತ್ತದೆ.
ಸತ್ಕುಲ ಪ್ರಸೂತರು ಹೊಸದಾಗಿ ಏನನ್ನು ಹೇಳುತ್ತಿದೆ ಎಂದು ಹುಡುಕಹೊರಟರೆ ಕರ್ಮಠರು ಎಲ್ಲಾ ಮತಗಳಲ್ಲೂ ಇದ್ದಾರೆ ಮತ್ತು ಅವರ ನಡುವಿನ ತಿಕ್ಕಾಟ ಮುಗಿಯದ್ದು ಎಂದಷ್ಟೆ. ಸ್ಥೂಲವಾಗಿ ಇದರ ಕತೆ ಏನೆಂದರೆ - ಊರು ಬಿಟ್ಟು ವಿದೇಶದಲ್ಲಿ ನೆಲೆಸಿದ ಮೇಲ್ವರ್ಗದ ನಾಯಕ ಅವನ ಬೇರುಗಳು ಇಲ್ಲಿವೆ ಅದರೊಂದಿಗೆ ತಾನು ಗುರುತಿಸಿಕೊಂಡಿದ್ದೇನೆ ಎಂಬ ಅವನ ನಂಬಿಕೆ ಇವೆಲ್ಲಕ್ಕೂ ಅವನ ಮಗಳು ಅನ್ಯಮತೀಯನ ಅದರಲ್ಲೂ ಮಾರ್ಮನ್ ಎಂಬ ಕ್ರಿಶ್ಚಿಯನ್ನರ ಒಂದು ಕರ್ಮಠ ಪಂಗಡದ ಹುಡುಗನ ವರಿಸಲು ಹೊರಡುವಾಗ ಅಲುಗಾಡುತ್ತವೆ. ಇದರಲ್ಲಿ ಮುಖ್ಯವಾಗಿ ನಾಯಕನ ಮಡದಿಯ, ನಾಯಕನ ಸ್ವಂತ ಅಪ್ಪ ಅಮ್ಮನಿಗೆ ಬಾರದ ಎಲ್ಲಾ ಕೊರತೆಗಳು ಬರುವುದು ನಾಯಕನ ಅಥವಾ ಮುಖ್ಯ ಪಾತ್ರದ ಬಳಗಕ್ಕೆ.
ಈ ಕಾದಂಬರಿಯ ಕುರಿತಾಗಿ ಬರೆಯುವ ಮೊದಲೇ ಇದು ಲೇಖಕರ ಆತ್ಮಕಥೆಯೋ ಎಂಬ ಸಂಶಯ ಗಾಢವಾಗಿ ಬಂದು ಹಾಗಾಗಿ ಬರೆಯುವುದು ಸರಿಯೋ ತಪ್ಪೋ ಎಂಬ ಹಲವಾರು ಗೊಂದಲಗಳು ಇನ್ನೂ ಇವೆ.
ಮೊದಲನೆಯದಾಗಿ ಇದರಲ್ಲಿ ಚಿತ್ರಿಸಿದ ಈ ಎನ್‌ಆರ್‌ಐ ಬಳಗ ಇದು ಭಾರತದಲ್ಲಿ ಮಾಹಿತಿ ಕ್ರಾಂತಿ ಆಗುವ ಸಮಯದಲ್ಲಿ ಅಮೆರಿಕಕ್ಕೆ ಹಾರಿದ ಬಳಗ. ಇದರಲ್ಲಿ ಎಂಬತ್ತು ಪ್ರತಿಶತಕ್ಕಿಂತ ಜಾಸ್ತಿ ಮೇಲ್ವರ್ಗದ ಜನ .ಅದರಲ್ಲೂ ಬ್ರಾಹ್ಮಣರು ಇರುವುದು. ಹಾಗಾಗಿ ಕಾವ್ಯಾ ಕಡಮೆಯವರ ತೊಟ್ಟು ಕ್ರಾಂತಿ ಸಂಕಲನದ ಕತೆಯೊಂದರಲ್ಲಿ ಗುರುತಿಸಿದ ಹಾಗೆ ಈ ಬಳಗದ ಜನ ತಾವು ವಿಮಾನ ಹತ್ತಿದಾಗಿನ ಕಾಲದ ಫ್ಯಾಶನ್ ,ಆಚರಣೆಗಳ ಈಗಲೂ ನಾಸ್ಚಾಲ್ಜಿಕ್ ಆಗಿ ನೆನೆಸಿಕೊಂಡು ತಾವು ಅರ್ಧಂಬರ್ಧ ಪಾಲಿಸಿಕೊಂಡು ಮಕ್ಕಳಿಗೂ ಚೂರು ಚೂರು ಹೇಳಿಕೊಟ್ಟು ತನ್ಮೂಲಕ ತಮ್ಮ ಬೇರುಗಳ ಜೊತೆ ತಾವು ಇದ್ದೇವೆ ಎನ್ನುವ ಭ್ರಮಾಧೀನ ಮಂದಿ. ಇದಕ್ಕೆ ಪೂರಕವೆಂಬಂತೆ ಅವರ ಬಳಿ ಇರುವ ಹಣ , ಊರಿನಲ್ಲಿ ಏನೋ ಒಂದಕ್ಕೆ ಹಣ ಕೊಟ್ಟು ಒಟ್ಟಾರೆ ತಮ್ಮ ಗಿಲ್ಟ್ ಫೀಲನ್ನು ಹೋಗಲಾಡಿಸಿಕೊಂಡು ಬದುಕಲು ಇರಬೇಕಾದ ಸಾಧನ. ಕನ್ವರ್ಟಡ್ ಆರ್ ಮೋರ್ ಕಮಿಟೆಡ್ ಎಂಬ ಮಾತಿಗೆ ಅನ್ವರ್ಥ.
ಇನ್ನು ಕಾದಂಬರಿಯ ಪಾತ್ರಗಳ ಬಗ್ಗೆ. ಇಲ್ಲಿ ಮಗಳಿಗಾಗಲೀ ಆಕೆಯ ಗೆಳೆಯನಿಗಾಗಲೀ ತಮ್ಮ ತಮ್ಮ ಧರ್ಮ/ ಮತದ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಗೆಳೆಯನಿಗಾದರೂ ತನ್ನ ಅಪ್ಪ ಅಮ್ಮನಿಗೆ ಮೆಚ್ಚುಗೆಯಾಗುವ ಹಾಗೆ ಮದುವೆಯಾಗುವ ಆಸೆ ಇದೆ. ಮಗಳಿಗೆ ಅದೂ ಇಲ್ಲ. ಇರುವುದು ಒಬ್ಬಳೇ ಮಗಳು ಎಂಬ ಮುದ್ದು ಆಕೆಯ ಮದುವೆಗೆ ಎಲ್ಲಾ ಖರ್ಚು ಕೊಡುವುದರ ಹೊರತಾಗಿ ಆಕೆಗೆ ವಿಷಯದ ಬಗ್ಗೆ ತಿಳಿಸುವುದಾಗಲೀ ,ಆಕೆಗೆ ಅರ್ಥ ಮಾಡಿಸುವ ಶಕ್ತಿಯಾಗಲೀ ಮುಖ್ಯ ಪಾತ್ರಕ್ಕೂ ಆತನ ಮಡದಿಗೂ ಇಲ್ಲ. ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಮುಖ್ಯ ಪಾತ್ರ ಆತನ ಮಡದಿ ,ಮಗಳ ಗೆಳೆಯನ ಅಪ್ಪ ಅಮ್ಮ ಇಬ್ಬರೂ ತಮ್ಮ ಕಾಲಕ್ಕೆ ಕ್ರಾಂತಿಕಾರಿ ಎಂಬ ಮದುವೆ ಆದವರು. ಇದೊಂತರಾ ವಯಸ್ಸಾದ ಹಾಗೆ ತಾವು ನಂಬಿದ ಲಿಬರಲ್ ಎಲ್ಲಾ ಮೂಟೆ ಕಟ್ಟಿ ಕರ್ಮಠರಾಗುವ ನಮ್ಮ ಎಲ್ಲಾ ಹಿರಿಯರ ಹಾಗೆ. (ಹೆಚ್ಚು ಮಾತೇಕೆ.. ಯೌವ್ವನದಲ್ಲಿ ಜಿಹಾದ್ ತರಹದ ಕ್ರಾಂತಿಕಾರಿ ಕಾದಂಬರಿ ಬರೆದ ಬೊಳುವಾರು ತಮ್ಮ ಇಳಿವಯಸ್ಸಿನಲ್ಲಿ ಮುಲ್ಲಾಗಳಿಂದ ಜಾಸ್ತಿ ಸಮರ್ಥನೆ ಮಾಡುವುದು ಗಮನಿಸಿಲ್ಲವೇ?)
ಇನ್ನು ಕಾದಂಬರಿ ಮುಖ್ಯ ಪಾತ್ರ ಅನಂತ. ಆತನಿಗೆ ಸ್ವಂತ ನಿರ್ಧಾರ ಎಂಬುದಾಗಲೀ ,ಅದನ್ನು ತೆಗೆದುಕೊಳ್ಳುವ ಶಕ್ತಿಯಾಗಲಿ ಇಲ್ಲವೇ ಇಲ್ಲ. ವಾಟ್ಸಪ್,ಯೂ ಟ್ಯೂಬುಗಳ ಪ್ರವಚನ ಕುಟುಂಬ ಅಪ್‌ಡೇಟ್‌ಗಳ ಮಾಹಿತಿ ತಪ್ಪಿಹೋಯಿತು ಎಂಬ ಹಳಹಳಿ ಬಿಟ್ಟರೆ, ತನ್ನ ಆಘಾತದಿಂದಾದ ಇಹ ಪರದ ಚಿಂತೆ ಬಿಟ್ಟರೆ ಅವನಿಗೆ ಅಂಥ ಸರಿ ತಪ್ಪು ಪ್ರಜ್ಞೆ ಕಾಡಿದ್ದು ಕಾಣಲಿಲ್ಲ. ಇಲ್ಲಿ ಮುಖ್ಯ ಸಮಸ್ಯೆಗಳೆಲ್ಲ ಬರುವುದು ಊರಿನಲ್ಲಿ ಇಂಡಿಯಾದಲ್ಲಿ ಇರುವ ಇವನ ಬಳಗದವರಿಗೆ ಜಾತಿಯ ವಿಷಯದಲ್ಲಿ. ಆ ಕರ್ಮಠತನದ ಚಿತ್ರಣ ಎಷ್ಟು ಕಠಿಣವಾಗಿ ಬಂದಿದೆ ಎಂದರೆ ಇದನ್ನು ಯಾರಾದರೂ ಅಪ್ಪಟ ಮಾಧ್ವರು ಓದಿದರೆ ಹೇಗೆಲ್ಲ ಪ್ರತಿಕ್ರಿಯೆ ಕೊಡಬಹುದು ಎಂದು ನೆನೆಸಿ ನಗು ಬಂತು.
ಮೊದಲನೆಯದಾಗಿ ಇಲ್ಲಿನ ಪಾತ್ರಗಳ ಬೆಳವಣಿಗೆ ಸಮಂಜಸ ಅನಿಸಲಿಲ್ಲ. ತಾವು ಯಾವುದನ್ನೂ ಸರಿಯಾಗಿ ಫಾಲೋ ಮಾಡದೆ ಮಗಳಿಗೂ ಕಲಿಸದೆ ಹತ್ತು ವರ್ಷಕ್ಕೆ ನಾಲ್ಕು ಸಲ ಹೋಗುವ ಊರಿನವರ ಅಭಿಪ್ರಾಯಕ್ಕೆ ಇಷ್ಟೆಲ್ಲ ಕ್ಲೇಶ ಯಾಕೆ ಅನಿಸಿತು. ಬಹುಶಃ ನಾನು ಎನ್‌ಆರ್‌ಐ ಆಗಿದ್ದರೆ ಈ ಪರದೇಶೀ ತಬ್ಬಲಿತನ ಇನ್ನೂ ಗಾಢವಾಗಿ ಗೊತ್ತಾಗುತ್ತಿತ್ತೋ ಏನೋ.
ಇನ್ನು ಇದನ್ನು ಸಂಸ್ಕಾರಕ್ಕೆ ಹೋಲಿಸಿ ಬರೆದ ಕೆಲ ವಿಮರ್ಶೆಗಳ ಓದಿದೆ. ನಮ್ಮ ಸ್ಟಾರ್ ನಟರ ಸುತ್ತಲಿನ ಹೊಗಳುಭಟರ ಹಾಗೆ ಈ ಕನ್ನಡದ ಕೆಲವು ಲೇಖಕರ ಸುತ್ತಲಿನ ನಾಲ್ಕು ಮಂದಿ . ಸರಿಯಾಗಿ ಗಮನಿಸಿದರೆ ಅವರು ಬಿಡುಗಡೆಯಾದ ಎಲ್ಲಾ ಕೃತಿಗಳಿಗೂ ಇದೇ ತರ ವಿಮರ್ಶೆ ಬರೆದಿರುವುದು ಗಮನಿಸಬಹುದು. ಅವರ ಪ್ರಕಾರ ಅವರಿಗೆ ಬರೆಯಲು ಸಿಕ್ಕಿದ ಎಲ್ಲವೂ ಕನ್ನಡದ ಮಹತ್ವದ ಕೃತಿಗಳೇ. ಸಂಸ್ಕಾರ ಎಂಬ ಕಾದಂಬರಿ ತನ್ನ ಮೂಲದಲ್ಲೇ ಬಿರುಕಿಕೊಂಡು ಕಟ್ಟಿದ ಒಂದು ಕಟ್ಟಡ. ಅದು ಆ ಕಾಲದಲ್ಲಿ ಷಾಕ್ ಹುಟ್ಟಿಸುವ ಹೊರತಾಗಿ ಮತ್ತೇನೂ ಸಾಧಿಸಿಲ್ಲ. ಈ ಕಾದಂಬರಿಯಲ್ಲಿ ಬರುವ ಕರ್ಮಠತನವನ್ನೆಲ್ಲ ಹೊಸ ತಲೆಮಾರು ಅನುಕೂಲ ಶಾಸ್ತ್ರವನ್ನಾಗಿ ಮಾರ್ಪಡಿಸಿ ಸುಮಾರು ಸಮಯ ಆಗಿದೆ.
ಹಾಗಾದರೆ ಇದರಲ್ಲಿ ಬರೆದದ್ದು ಸಂಪೂರ್ಣ ಕಾಲ್ಪನಿಕವೇ? ಖಂಡಿತ ಅಲ್ಲ. ಇದರಲ್ಲಿ ಬರೆದದ್ದು ಎಲ್ಲವೂ ನಿಜ. ಹೆಚ್ಚು ಮಾತೇಕೆ. ಇಲ್ಲೇ ಫೇಸ್ಬುಕ್ ನಲ್ಲೇ ಒಂದು ಸಣ್ಣ ವಿಚಾರ ಎತ್ಕೊಂಡು ದಿನಗಟ್ಟಲೇ ಮಾಧ್ವ ಸ್ಮಾರ್ತ ಗುಂಪುಗಳ ಜಗಳ ಕಾಣುವುದಿಲ್ಲವೇ?
ನನ್ನ ಪ್ರಶ್ನೆ ಇದರ ರಿಲವೆನ್ಸ್ ಬಗ್ಗೆ. ಪ್ರಸ್ತುತತೆಯ ಬಗ್ಗೆ. ಲಂಕೇಶ್ ಅಂದೇ ಬರೆದ ಹಾಗೆ ' ಆ ಹಾರುವಯ್ಯ ಬರ್ದದ್ದು ಯಾಕೆ ಓದ್ತೀರಿ. ಅದ್ರಲ್ಲೇನಿದೆ ಬ್ರಾಹ್ಮಣರ ಗೊಡ್ಡು ಆಚರಣೆಗಳ ಬಗ್ಗೆ' ಎಂಬ ಒಂದೇ ಸಾಲಿನ ಮೂಲಕ ಈ ಕಾದಂಬರಿಯನ್ನು ಹಲವರು ಎಡಗೈಯ ಸರಿಸಿ ಇಡುತ್ತಾರೆ ಇಲ್ಲಿ ಬರೆದ ಆಚರಣೆ ಅವರಿಗೆ ಅರ್ಥ ಆಗೂದು ಕಷ್ಟವೇ. ಇನ್ನು ಇತರರ ಎಬಡ ಬಳಗಕ್ಕೆ ಇದು ಒಂದು ಒಳ್ಳೆಯ ಟೂಲ್ ಆಗಿ ಪ್ರಹಾರ ಮಾಡಲು ಬಳಕೆ ಆಗುತ್ತದೆ ಅಷ್ಟೇ.
ತಮ್ಮ ಎಲ್ಲಾ ಗೊಂದಲಗಳ ವೆಂಟಿಂಗ್ ಮಾಡಲು ಬರೆದಿದೆ ಅನ್ನಿಸುವ ಈ ಕಾದಂಬರಿ ಕೊನೆಗೆ ಎಬಡರ ಕೈಯಲ್ಲಿ ಬ್ರಾಹ್ಮಣರ ಹಣಿಯುವ ಆಯುಧವಾಗಿ ಬಳಕೆಯಾಗಬಹುದಷ್ಟೆ ಎಂಬುದು ಇದರ ಮಹತ್ವ.
ಇನ್ನು ಇದರ ಕುರಿತು ಖ್ಯಾತ ಬರಹಗಾರ ವಸುಧೇಂದ್ರ ಇಷ್ಟು ನಿಕಷಕ್ಕೊಡಿದ ಕಾದಂಬರಿ ಇಲ್ಲ ಎಂದು ಬರೆದಿದ್ದರು. ಸ್ವಾಮೀ. ಕನ್ನಡ ಸಾಹಿತ್ಯದಲ್ಲಿ ಸ್ವಧರ್ಮವನ್ನು ಹೆಚ್ಚು ವಿಮರ್ಶಿಸಿ ಬರೆದದ್ದು ಬ್ರಾಹ್ಮಣರೇ. ಕನ್ನಡ ಸಾಹಿತ್ಯದ ಇತಿಹಾಸ ಗಮನಿಸಿದರೆ ಶುರುವಿಂದ ಈಗಿನವರೆಗೆ ಮಾಡಿದ್ದಕ್ಕೆ ಮಾಡದ್ದಕ್ಕೆ ಬೈಯ್ಗಳು ತಿನ್ನುತ್ತಾ ಇರ��ದು ಬ್ರಾಹ್ಮಣರೇ. ಹಾಗಾಗಿ ಹೊಸತಾಗಿ ಏನು ಕಂಡ ಹಾಗಾಯ್ತು?
ಇದರ ಆಯ್ದ ಭಾಗಗಳ ಓದಿಕೊಂಡ ನನ್ನ ಗೆಳೆಯರು ಕಳಿಸಿದ ಮೆಸೇಜ್ ಸರಿಯಾಗಿದೆ ಎಂದು ಅನಿಸಿ ಹಾಕುತ್ತಿರುವೆ
' ಕನ್ನಡದಲ್ಲಿ ಈ ಅಧ್ಯಯನ ಒಂದು ಪಿಎಚ್‌ಡಿ ಗೆ ಯೋಗ್ಯವಾಗಬಹುದು ಮಾರಾಯ.
ಪರದೇಶಿ ಬ್ರಾಹ್ಮಣ ಮುಂಡೇವಕ್ಕೆ ಪರದೇಶದಲ್ಲಿದ್ದಾಗ ಕಾಡುವ ಏಕಾಕಿಪ್ರಜ್ಞೆ ಮತ್ತು ಅವರ ಕತೆಕಾದಂಬರಿಗಳಲ್ಲಿ ಶ್ರಾದ್ಧ-ಪಿಂಡಪ್ರದಾನಗಳ ಕಥಾವಸ್ತುವಿನ್ಯಾಸ - ಒಂದು ತೌಲನಿಕ ಅಧ್ಯಯನ'
ಇದೆಲ್ಲ ಒಬ್ಬ ಓದುಗನಾಗಿ ನನಗೆ ಹೊಳೆದದ್ದು .
ಯಾರಿಗಾದರೂ ನೋವಾಗಿದ್ದರೆ ಅದು ನನಗೂ ಆಗಿದೆ ಎಂದು ತಿಳಿದುಕೊಳ್ಳುವುದು.
(ಸೂಚನೆ - ನಾನು ಮಾಧ್ವ ಅಲ್ಲ. ಮಾಧ್ವರ ಜೊತೆ ಸಂಬಂಧ ಇರುವ ನನ್ನ ಇಷ್ಟರವರೆಗೆ ಅವರು ಯಾವತ್ತೂ ಹೊರಗಿನವ ಎಂದು ಭಾವಿಸದೆ ಅತ್ಯಂತ ಮರ್ಯಾದೆಯಿಂದ ನಡೆಸಿಕೊಂಡಿದ್ದಾರೆ)
ಗುರುಪ್ರಸಾದ್ ಕಾಗಿನೆಲೆ ಅವರ ಈ ಕೃತಿ ಹಿಡಿದು ಓದಿಸಿಕೊಂಡು ಹೋಗುತ್ತದೆ. ತಲೆಮಾರುಗಳ ನಡುವೆ ನಡೆಯುವ ಸಂಪ್ರದಾಯ ಕಂದಾಚಾರಗಳ ತಿಕ್ಕಾಟ ಚೆನ್ನಾಗಿ ಮೂಡಿಬಂದಿದೆ. ಮಾಧ್ವ ಸಂಪ್ರದಾಯದ ಅತೀ ಮಡಿವಂತಿಕೆ, ಸತ್ತ ನಂತರದ ಸ್ವರ್ಗಕ್ಕಾಗಿ ಮಾಡುವ ಘಟಶ್ರಾದ್ಧ, ವೇಣಿ ಹರಣ ದಂತಹ ಅಮಾನವೀಯ ಕೃತ್ಯಗಳು ಚೆನ್ನಾಗಿ ನಿರೂಪಿಸಿದ್ದಾರೆ ಲೇಖಕರು.
ಸ್ವಲ್ಪವಾದರೂ ಈ ಆಚಾರಗಳ ಹಿನ್ನಲೆ ತಿಳಿಯದಿದ್ದರೆ ಓದು ನೀರಸ ಅಥವಾ ಸಪ್ಪೆ ಅನ್ನಿಸುವ ಸಾಧ್ಯತೆ ಇದೆ. ಯಾವ ಧರ್ಮವೂ ಮಾನವೀಯತೆಯ ವಿರುದ್ಧ ಇರುವುದಿಲ್ಲ ಎಂಬ ಸಣ್ಣ ತಿಳಿವಳಿಕೆ ಮೂಡಿದ್ದಲ್ಲಿ ಎಷ್ಟೊಂದು ನೋವುಗಳನ್ನು ತಪ್ಪಿಸಬಹುದಿತ್ತು ಅನ್ನಿಸದೇ ಇರುವುದಿಲ್ಲ. ಓದಿಗೂ ನಂಬಿಕೆಗೂ ಸಂಬಂಧವಿಲ್ಲ ಎಂಬುದನ್ನು ಮಾಧು ದೊಡ್ಡಪ್ಪನ, ಅಬ್ಜೇಶನ ಪಾತ್ರದ ಮೂಲಕ ಲೇಖಕರು ಕಟ್ಟಿಕೊಟ್ಟಿದ್ದಾರೆ.
ಅನಂತು ಅಮೆರಿಕೆಯಲ್ಲಿ ನೆಲೆಸಿದ ಸಂಪ್ರದಾಯಸ್ಥ ಬ್ರಾಹ್ಮಣ ಮನೆತನದಿಂದ ಬಂದ ವ್ಯಕ್ತಿ. ಆದರೆ, ಸಂಪ್ರದಾಯ ಪಾಲಿಸುವ ವ್ಯಕ್ತಿ ಅಲ್ಲ. ಆತನ ತಂದೆ ಮಾಧ್ವ ಸಂಪ್ರದಾಯವರು ತಾಯಿ ಸ್ಮಾರ್ತ ಸಂಪ್ರದಾಯ. ತಾಯಿ ಮಾಧ್ವಳಾಗಲು ಪಡುವ ಪರದಾಟವನ್ನು ನೋಡಿಯೇ ಬೆಳೆದವರು. ಮಾಧ್ವರ ಮದುವೆಯಲ್ಲಿ ಇದ್ದದ್ದರಿಂದ ಮಾಧ್ವಳಾಗಿರಬಹುದು ಎಂದು ನಂಬಿ ಪ್ರೇಮಿಸಿದ್ದು ನರ್ಮದಾಳನ್ನು, ಆಮೇಲೆ ತಿಳಿದದ್ದು ಸ್ಮಾರ್ತ ಬ್ರಾಹ್ಮಣ ಎಂದು. ತದನಂತರ ಶಿವಮೊಗ್ಗದಲ್ಲಿ ಇರದೇ ಅಮೇರಿಕಾ ಹೋರಟದ್ದರಿಂದ ಅನಂತುನ ಹೆಂಡತಿ ಅವನ ತಾಯಿಯಷ್ಟು ಪರಿಪಾಟಲು ಪಡಲಿಲ್ಲ.
ಅಮೆರಿಕದಲ್ಲಿ ಹುಟ್ಟಿ, ಅಲ್ಲೇ ಬೆಳೆದ ಮಗಳು ಅಕ್ಷರಾ ಪ್ರೀತಿಸುವುದು ಮಾರ್ಮನ್ ಎಂಬ ಕಟ್ಟಾ ಮಡಿವಂತ ಕ್ರೈಸ್ತ ಸಂಪ್ರದಾಯದ ಕೆವಿನ್ ಎಂಬಾತನನ್ನು. ಅಕ್ಷರಾ ಪೂರ್ತಿ ಸಂಪ್ರದಾಯ ವಿರೋಧಿ. ಆಕೆ ಕೆವಿನ್ ನನ್ನು ಪ್ರೀತಿಸಿದಕ್ಕಾಗಿ ಅವರ ಅಪ್ಪನಿಗೆ ದೊರೆತ ಫಲ ಘಟಶ್ರಾದ್ಧ. ಕೆವಿನ್ ಮಾರ್ಮನ್ ಸಂಪ್ರದಾಯ ಪೂರ್ತಿ ಬಲ್ಲವನಲ್ಲದಿದ್ದರೂ ಒಂದೇ ಪಟ್ಟಿಗೆ ತೆಗೆದು ಹಾಕುವವನು ಅಲ್ಲ. ಅಪ್ಪ ಅಮ್ಮನ ವಿರೋಧ ಕಟ್ಟಿಕೊಂಡದ್ದು ಕೂಡ ಅಕ್ಷರಾಳ ಮೇಲಿನ ಪ್ರೀತಿ ಒಂದಾದರೆ ಯಾವುದೇ ಸಂಪ್ರದಾಯವಿಲ್ಲದ ಕೇವಲ ಬಾಲಿವುಡ್ ಹಾಡುಗಳ ಕುಣಿತದ ಮದುವೆ ಎಂದು ಮಾತ್ರ.
ಇದರಲ್ಲಿ ನನಗೆ ಎಲ್ಲೆಡೆ ಕಂಡದ್ದು ಅನಂತು ಪಾತ್ರದ ಅಸಹಾಯಕತೆ ಮತ್ತು ಅಕ್ಷರಾ ಪಾತ್ರದ immaturity. ತಂದೆ ತಾಯಿಗಳು ಪದ್ಧತಿ, ರೀತಿ ನೀತಿ ಹೇಳಿಕೊಟ್ಟಿಲ್ಲ ನಿಜ, ಆಕೆ ಕಲಿಯಲಿಲ್ಲ ಅದೂ ನಿಜ, ಬೇರಾವ ಮತ ಸಿದ್ಧಾಂತ ಧರ್ಮ ಏನೂ ಬೇಕಿಲ್ಲ, ಅದೂ ಸತ್ಯ. ಆದರೆ, ಅಪ್ಪ ಅಮ್ಮನ ದುಡ್ಡಿನಲ್ಲಿ ಮೋಜಿನ ಮದುವೆ ಆಗುತ್ತಿರುವಾಗ ಅವರ ಅಭಿಪ್ರಾಯಕ್ಕೆ ಮನ್ನಣೆ ಕೊಡಬೇಕು ಎಂಬ ಸಹಜವಾದ ಪ್ರತಿಕ್ರಿಯೆಯೂ ಆ ಪಾತ್ರದಲ್ಲಿ ಇಲ್ಲದೇ ಹೋದದ್ದು ಬೇಜಾರು. ತಾಯಿ ಒಂದು ಕುಂಕುಮ ಇಟ್ಟರೂ ಇದು ಸಂಪ್ರದಾಯ ಎಂದು ಹಾರಾಡುವ ಹುಡುಗಿ, ಮೊದಲೇ ನನಗೆ ಹೇಳಬೇಕಾಗಿತ್ತು ನಿಮ್ಮ ದುಡ್ಡು ನಾನು ಬಳಸುತ್ತಿರಲಿಲ್ಲ ಎಂಬ ಹುಡುಗಿಯ ಅದೇ ಬಾಯಿಯಿಂದ ಬರುವ ಮಾತು ಏನೆಂದರೆ - ಹಿಂದೆ ಒಂದು ಸಂದರ್ಭದಲ್ಲಿ- ಅಕ್ಷರಾ ಕೆವಿನ್ ಮದುವೆ ನಮಗೂ ಬೇಜಾರಿದೆ- ಎಂದು ಅನಂತು ಮಾತನಾಡಿದಾಗ ಅಕ್ಷರಾ ಹೇಳುತ್ತಾಳೆ 'ನನ್ನಿಂದ ನಿನಗೆ ಘಟಶ್ರಾದ್ಧ ಆಗಿ ಹೋದಾಗ ನೀನು ಇಷ್ಟೂ ಸಹ ಬೇಜಾರು ಮಾಡಿಕೊಳ್ಳುವುದಿಲ್ಲ ಎಂದು ಅಪೇಕ್ಷಿಸಲು ನೀನು ದೇವರಲ್ಲ' ಎಂದು. ಈ ತರಹದ ದ್ವಂದ್ವದ ಹುಡುಗಿ ಅಕ್ಷರಾ ಎನಿಸಿತು. Clarity ಇದೆ ಎಂದಂದುಕೊಂಡು ಸುಮ್ಮನೆ ತಳ ಬುಡವಿಲ್ಲದೇ ಸಂಪ್ರದಾಯವನ್ನು ವಿರೋಧಿಸುತ್ತಾ ಕೂಡುವ ಜಾಯಮಾನದ ಹುಡುಗಿಯ ಪಾತ್ರ ಎನಿಸಿತು.
ಇನ್ನು ಅನಂತು ಪಾತ್ರ, ತಾಯಿಗೆ ಇಂಗ್ಲೀಷ್ ಬರುತ್ತದೆ ಎಂಬುದು ತಿಳಿದಿಲ್ಲ, ತಾಯಿ - ತಂದೆ ಎಷ್ಟೊಂದು ಕಟ್ಟಾ ಸಂಪ್ರದಾಯವಾದಿಗಳು ಎಂದೂ ತಿಳಿದಿಲ್ಲ, ಅಲ್ಲಿಯ ವಾತಾವರಣದಲ್ಲಿ ಆಗಬಹುದಾದ ಪರಿಣಾಮ ತಿಳಿದಿಲ್ಲ, ಮಗಳು ಪ್ರತಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಾಳೆ ಎಂಬುದರ ಕಡೆಯೂ ಅಲಕ್ಷ್ಯ. ಹೀಗೊಂದು ಜೀವನ, ವ್ಯಕ್ತಿತ್ವ, ಬದುಕಿನ ಅನಾವರಣ ಸಾಧ್ಯವಾ ಎನಿಸಿತು.
ಕೌತುಕದಿಂದೇನೋ ಓದಿಸಿಕೊಂಡು ಹೋಗುತ್ತದೆ ನಿಜ, ಆದರೆ ಕೊನೆಗೆ ಓದಿದರ ಒಟ್ಟು ಸ್ವರೂಪ ಗ್ರಹಿಸುವಲ್ಲಿ ಕೃತಿ ಎಲ್ಲೋ ಎಡವಿತು ಎನಿಸುತ್ತದೆ.
This entire review has been hidden because of spoilers.