ಯಾವ ಹದಿಬದೆಯೆಂದು ಕೇಳಿದೆಯಾ ರಾಣವ್ವೇ... ಇರುವ ಇಬ್ಬರಲ್ಲಿ ಯಾರ ಶಾಪವೆಂದು ಹೇಳಲಿ? ಉರಿಗಿಚ್ಚಿಗೆ ಮೈಯಿತ್ತ ಇವಳದೋ, ಇಲ್ಲಾ, ನೀರ್ಗೆಚ್ಚಿಗೆ ಮೈತೆತ್ತ ಅವಳದೋ?
ಮುನ್ನೊಡೆಯ ಹೀಗೆ ಹೊನ್ನಾಜಮ್ಮಣ್ಣಿಯನ್ನು ಹೀಗೆ ನಿಸ್ಸಹಾಯಕನಾಗಿ ಕೇಳುತ್ತಾನೆ. ಬದುಕೆಂಬ ಬದುಕನ್ನೇ ತನ್ನದಲ್ಲದ ತಪ್ಪೊಂದಕ್ಕೆ ಅಲ್ಲಲ್ಲ ಶಾಪವೊಂದಕ್ಕೆ ಕೈಚೆಲ್ಲಿ ಎದೆಬರಿದು ಮಾಡಿಕೊಂಡು ಮಮ್ಮಲ ಮರುಗುವ ಮಹಿಷೂರಿನ ರಾಜನಿಗಾಗಿ ಓದುಗರು ಮಿಡಿಯುತ್ತಾರೆ. ಆ ಹೊತ್ತಿಗೆ ಪುಸ್ತಕದಲ್ಲಿ ಅಜಮಾಸು ೩೦೦-೩೨೦ ಪುಟಗಳನ್ನು ಓದಿರುತ್ತಾರೆ.
ನಿಯುಕ್ತಿ ಪುರಾಣ ನನ್ನ ಬಹುನಿರೀಕ್ಷಿತ ಪುಸ್ತಕ. ಇತಿಹಾಸ ಮತ್ತು ನೈಜ ಘಟನೆಯಾಧಾರಿತ ವಸ್ತುಗಳು ನನಗೆ ಬಹು ನೆಚ್ಚಿತವಲ್ಲವಾದರೂ ವಸ್ತಾರೆ ಸರ್ ನೀಡಿದ್ದ ಪೀಠಿಕೆ ಸಾಕಷ್ಟು ಕುತೂಹಲವನ್ನು ನನ್ನಲ್ಲಿ ಹುಟ್ಟು ಹಾಕಿಸಿ ಕಾಯುವಂತೆ ಮಾಡಿತ್ತು. ಅದಲ್ಲದೇ, ವಸ್ತಾರೆ ಸರ್‌ರವರ ಬಹುಮುಖ ಪ್ರತಿಭಾವಳಿಗಳ ಮಧ್ಯೆ ಇಂಥದ್ದೊಂದು ವಸ್ತು ಹೇಗೆ ರೂಪುಗೊಳ್ಳುತ್ತದೆ ಎಂಬ ಕುತೂಹಲವೂ ಇತ್ತು. ಏಕೆಂದರೆ, ನಾನು ಓದಿರುವ ವಸ್ತಾರೆ ಸರ್ ಬರಹಗಳು ನಮ್ಮನ್ನು ಭೇದಿಸಿದ್ದು, ಛೇದಿಸಿದ್ದು ಪ್ರೇಮವೆಂಬ ವಸ್ತುವಿಂದ, ನಗರವನ್ನೇ ಒಡಲಾಗಿಸಿಕೊಂಡ ಹಸಿ ಹಸಿ ಸತ್ಯಗಳಿಂದ! ನಿಯುಕ್ತಿ ಪುರಾಣದ ವಸ್ತು ಅವರಿಗೆ ಮತ್ತು ಅವರ ವೃತ್ತಿಯ ಜೊತೆಗೆ ಹೊಸ ಸವಾಲು ಎಂತಂದುಕೊಂಡು ನನ್ನ ಕಾಯುವಿಕೆಯನ್ನು ಮೊದಲಾಗಿಸಿಕೊಂಡಿದ್ದೆ. ಕಾಯುವಿಕೆಗೆ ಮೋಸವಾಗಿಲ್ಲ, ಸರಿಸುಮಾರು ಎರಡು ವರ್ಷ ಕಾಯಿಸಿದ್ದಕ್ಕೆ ಪ್ರತಿಯಾಗಿ ಅತ್ಯಮೋಘ ಕಥೆಯನ್ನು ಹೆಣೆದುಕೊಟ್ಟು ಓದುಗನನ್ನು ಸುಖಿಯಾಗಿಸುವಲ್ಲಿ ವಸ್ತಾರೆ ಸರ್ ಗೆದ್ದಿದ್ದಾರೆ. ಮತ್ತೊಮ್ಮೆ.
ಪ್ರಸ್ತುತ ಪುಸ್ತಕ ಸಂಪೂರ್ಣ ಪುರಾಣವಲ್ಲ, ಇತಿಹಾಸವಂತೂ ಅಲ್ಲವೇ ಅಲ್ಲ! ಕಲ್ಪಿತವೆಂದರೆ ನಡೆದ ಘನ ಘಟನೆಗಳನ್ನು ಪರಿಗಣಿಸದ ಅಪವಾದ ಬೆನ್ನಿಗೆ ಅಂಟಿಸಿಕೊಂಡ ಹುಣ್ಣು. ಹಾಗಾದರೆ ಈ ಪುಸ್ತಕದ ಒಳಹೇನು ಸುಳುಹೇನು ಎಂಬ ಪ್ರಶ್ನೆ ನಿಮ್ಮೊಳಗೆ ಮೂಡಿದ್ದರೆ ನೀವು ಪುಸ್ತಕವನ್ನು ಓದಬೇಕು. ಓದಿದ ನಂತರ ಪುಸ್ತಕದ ಅಂತ್ಯದಲ್ಲಿ ಬರುವ ಕಾಲಬಂಧ, ಕಾಲಾನುಕ್ರಮಣಿಕೆ, ಅನುಸೂಚಿ, ನಕ್ಷೆಗಳು ಮತ್ತು ವಂಶವೃಕ್ಷವನ್ನು ಓದಬೇಕು. ಒಂದಕ್ಷರ ಬಿಟ್ಟರೂ ಓದುಗನ ನಷ್ಟವೇ ಸರಿ.
ಸದರಿ ಪುರಾಣವನ್ನು ಓದುವುದು ಸುಲಭವಲ್ಲ! ಅಂದರೆ ಅರ್ಥೈಸಲು ಕಷ್ಟ ಎಂಬ ಮಾತಲ್ಲ. ಈ ಪುಸ್ತಕವನ್ನು ಓದುವಾಗ ಮೈಯೆಲ್ಲಾ ಕಣ್ಣಾಗಿರಬೇಕು, ಅತೀವವಾದ ಗಮನ ಮುಖ್ಯ. ಪ್ರತಿಪುಟದಲ್ಲೂ ಏನೋ ಒಂದು ತಿರುವು ಇನ್ನೇನೋ ಒಂದು ಮುಖ್ಯವಾದ ಘಟನೆ ನಡೆಯುತ್ತದೆ. ಅರೆಕ್ಷಣ ಮೈ ಮರೆತರೂ ಪುಸ್ತಕದ ಒಂದು ಕೊಂಡಿ ಸಿಗದೇ ಓದುಗ ಸ್ವಲ್ಪ ಮಟ್ಟಿಗೆ ಅವಾಕ್ಕಾಗುವುದಂತೂ ಖಚಿತ. ಓದುಗನ ಜಾಗೃತತೆಯನ್ನೇ ಜಾಗೃತಗೊಳಿಸುವುದೆಯಲ್ಲ ಅದು ಪುಸ್ತಕದ ಅತಿದೊಡ್ಡ ಗೆಲುವು.
ಇಡೀ ಪುಸ್ತಕವೇ ಸೃಜನಶೀಲ ಭಾಷಾಬಳಕೆಯ ಒರತೆ. ಹಳೇ ಮೈಸೂರಿನ ಗ್ರಾಮ್ಯ ಭಾಷೆ ಪುಸ್ತಕದ ಮತ್ತೊಂದು ಹೈಲೈಟು! ಪುಸ್ತಕದಲ್ಲಿ ಅಲ್ಲಲ್ಲಿ ಸಿಗುವ ಅನುದಿನದ ಬಳಕೆಯ ಪದಗಳ ವ್ಯುತ್ಪತ್ತಿ-ವೃತ್ತಾಂತವೂ ಅರೇ ಹೌದಲ್ಲ ಎನಿಸುತ್ತವೆ. ಅಂದ ಹಾಗೇ, ಚಾಮರಾಜ ಹೆಸರಿನಲ್ಲಿರುವ ಚಾಮ ಪದವು ಶ್ಯಾಮ ಎಂಬುದು ನಿಮಗೆ ಗೊತ್ತಿತ್ತೇ? ನಂಗಂತೂ ಇಲ್ಲ.
ಇತಿಯಾಸ, ಪುರಾಣ, ಜನಪದ ಎಲ್ಲವನ್ನೂ ಬಳಸಿ ಬರೆದಂತ ಕೃತಿ. ಮೈಸೂರು ಸಂಸ್ಥಾನದ ಸುತ್ತಲೂ ಹೆಣೆದಿರುವ ಕತೆ. ಭಾಷೆ ಪ್ರಯೋಗ ಅತ್ಯದ್ಭುತ. ಎಷ್ಟೋ ಕಡೆ ವಸ್ತಾರೆ ಸರ್ ಕನ್ನಡಕ್ಕೆ ಮನಸೋತು ಹೋದೆ. ಪ್ರತಿಯೊಬ್ಬರು ಓದಲೇ ಬೇಕಾದ ಕೃತಿ.