ಕಾದಂಬರಿ :ರೇಷ್ಮೆ ಬಟ್ಟೆ (ಒನಪು ಬಟ್ಟೆ ಒರಟು ದಾರಿ)
ಲೇಖಕರು: ವಸುಧೇಂದ್ರ
ಛಂದ ಪುಸ್ತಕ
ಬೆಲೆ: ೪೫೦/-
ವಸುಧೇಂದ್ರ ರವರ ರೇಷ್ಮೆ ಬಟ್ಟೆ ಕಾದಂಬರಿ ಓದಿ ಮುಗಿಸಿದ ನಂತರ ಸಗನೇಮಿ, ಮಧುಮಾಯ, ಮಿತ್ರವಂದಕ ಈ ಪಾತ್ರಗಳು, ಕೆಲವು ಅದ್ಭುತ ಸಾಲುಗಳು ಮರೆಯಲಾಗದು. ಈ ಇಡೀ ಕಾದಂಬರಿ ಓದಿದ್ದು ಆಫೀಸಿನ ಕ್ಯಾಬಿನಲ್ಲೇ, ಕೆಲಸದಲ್ಲಿ ಬಿಜಿ, ಇಬ್ಬರ ಮಕ್ಕಳ ಜೊತೆ ಆಟ, ಪಾಠ, ಆರೋಗ್ಯದಲ್ಲಿ ಏರುಪೇರು ಈ ಎಲ್ಲಾ ಕಾರಣದಿಂದ ಈ ನಡುವೆ ಓದಲು ಸಮಯ ಸಾಕಾಗುತ್ತಿರಲಿಲ್ಲ. ಕ್ಯಾಬಿನಲ್ಲಿ ಇನ್ನೇನು ಕೆಲಸ? ಕಾದಂಬರಿಗಳನ್ನು ಓದಲು ಆ ಸಮಯ ಉಪಯೋಗಿಸಿಕೊಂಡೆ, ಒಂದು ಅದ್ಭುತ ಕಾದಂಬರಿ ಓದಿ ಖುಷಿಯಾಯುತು, ವಿಮರ್ಶೆ ಬರೆಯುವ ತನಕ ಮತ್ತೊಂದು ಪುಸ್ತಕವನ್ನು ಓದಲು ಸಾಧ್ಯವಾಗಲಿಲ್ಲ.
ಇದು ಎರಡನೆಯ ಶತಮಾನದ ಕಥೆ, ಪುರುಷಪುರ, ಸಮರಖಂಡ, ಹಳದಿ ಸಮುದ್ರ, ಲುಓಯಾಂಗ್, ತಕ್ಲಾಮಕಾನ್ ಮರಭೂಮಿ, ದನ್ಹುಅಂಗ್ ಏಷ್ಯಾ ಖಂಡದ ಪೂರ್ವ ಭಾಗ ಹಾಗು ಪಶ್ಚಿಮ ಭಾಗದ ಸುತ್ತ ಮುತ್ತ ನಡೆಯುವ ಕಥೆ. ವ್ಯಾಪಾರವೆನ್ನುವುದು ಮನುಷ್ಯನ ಜೀವನದಲ್ಲಿ ಏನೆಲ್ಲಾ ಪರಿಣಾಮಗಳನ್ನು ಬೀರುತ್ತೆಂದರೆ, ಸುಖದಲ್ಲಿರುವವನನ್ನು ದುಃಖಕ್ಕೆ, ದುಃಖದಲ್ಲಿರುವವನನ್ನು ಸುಖಕ್ಕೆ ಕೊಂಡೊಯ್ಯುವುದು, ಬಡವನು ಶ್ರೀಮಂತನಾದುದು, ಶ್ರೀಮಂತನು ಬಡವನಾದುದು, ದೈನಂದಿಕ ಜೀವನದಲ್ಲಾಗುವ ಏರುಪೇರು, ಪ್ರೀತಿಯನ್ನೇ ತ್ಯಾಗ ಮಾಡುವ ಪ್ರಸಂಗ, ಕಾಡಿನಲ್ಲಿರುವವರು ನಾಡಿಗೆ ಬಂದಾಗ ಎದುರಾಗುವ ಸಂಕಷ್ಟಗಳು, ಪ್ರಾಣಹಾನಿ ಈ ಎಲ್ಲವೂ ವ್ಯಾಪಾರ ಎನ್ನುವುದು ಮನುಷ್ಯನ ಜೀವನದ ದಿಕ್ಕನ್ನೇ ಬದಲಾಯಿಸಿಬಿಡುತ್ತದೆ.
ಪೃಥುಗಳ ಮತ್ತು ಯವನರ ನಡುವೆ ನಡೆಯುವ ಯುದ್ಧದ ಸಮಯದಲ್ಲಿ ವಿಜಯದ ಪೃಥುಗಳ ಪಡೆಯು ಒಂದು ಕೋಲಿನ ತುದಿಗೆ ಬಾವುಟವನ್ನು ಕಟ್ಟಿ ಹಾರಿಸಿದಾಗ ಆ ಮಿಂಚುವ ಬಟ್ಟೆಯನ್ನು ನೋಡಿದ ಯವನರಿಗೆ ಆಶ್ಚರ್ಯವಾಗುತ್ತದೆ, ಅಂತಹ ಅಪುರೂಪದ ಬಟ್ಟೆಯನ್ನು ಹಾಗು ಆ ಬಟ್ಟೆಯಲ್ಲಿದ್ದ ಬಣ್ಣಗಳನ್ನು ಕಂಡಿರದೆ ಇರುವ ಯವನರಿಗೆ ತಮ್ಮನ್ನು ಜಾಣತನದಲ್ಲಿ ಎಂದೂ ಮೀರಿಸಲಾಗದ ಪೃಥುಗಳಿಗೆ ಈ ಬಟ್ಟೆಯನ್ನು ಕೊಟ್ಟವರು ಯಾರು? ಅಥವಾ ಅವರೇ ಸೃಷ್ಟಿಸಿದರೆ ಎಂದು ಯೋಚನೆಗೀಡಾಗುತ್ತಾರೆ. ಹೀಗೆ ಪ್ರಾರಂಭವಾಗುವ ಕಥೆ ಓದಿಸಿಕೊಂಡು ಹೋಗುತ್ತದೆ, ರೇಷ್ಮೆ ಬಟ್ಟೆ ಬೆಳೆಯುವ ಹಾಗು ನೇಯುವ ವಿದ್ಯೆಯು ಚೀನಿಯರು ರಹಸ್ಯವಾಗಿಟ್ಟಿದ್ದರೂ ಅದು ಈ ವ್ಯಾಪಾರದ ಸಾರ್ಥದಲ್ಲಿ ಆ ಗುಟ್ಟು ಹೇಗೆ ಬಯಲಾಗಿಬಿಡುತ್ತದೆ ಹಾಗು ಚೀನಾದ ಮಹಾರಾಜನಿಗೆ ಬುದ್ಧನು(ತಥಾಗತನು) ಕನಸ್ಸಿನಲ್ಲಿ ಕಂಡು ಅದನ್ನು ಸಭೆಯಲ್ಲಿ ವಿವರಿಸಿದಾಗ ಆತನು ಭಾರತದಲ್ಲಿರುವುದಾಗಿ ತಿಳಿದು ಆತನನ್ನು ಒಡೆನೆಯೇ ತಮ್ಮ ದೇಶಕ್ಕೆ ಕರೆದುತನ್ನಿ ಎನ್ನುವ ಶರತ್ತಿನಿಂದ ಈ ಕಾದಂಬರಿ ಪ್ರಾರಂಭವಾಗುವುದು ಅದ್ಭುತ. ಅಂದರೆ ರೇಷ್ಮೆ ಬಟ್ಟೆಯ (Silk route) ಜೊತೆಗೆ ಬೌದ್ಧ ಧರ್ಮವು ಭಾರತದಿಂದ ಚೀನಾ ಹಾಗು ಸಿಂಹಳದವರೆಗೂ ತಥಾಗತನ ಶಿಷ್ಯರು ಹೇಗೆ ಪ್ರಚಾರ ಮಾಡುತ್ತಾ ಹೋಗುತ್ತಾರೆನ್ನುವುದು ಕಾದಂಬರಿಯಲ್ಲಿ ಕಾಣಬಹುದು.
ನಾಡಿನ ಜೀವನವನ್ನು ಅನುಭವಿಸಿದ ಶಿಖನೇಮ ನಾಡಿನ ಜೀವನ ಇಷ್ಟವಾಗದೇ ಕಾಡಿಗೆ ಬಂದು ತುಷಾರ ಗುಂಪಿನಲ್ಲಿ ಸೇರಿಕೊಂಡು ತುಷಾರ ಜನಾಂಗಕ್ಕೆ ನಾಯಕನಾಗಿ ಮಾರ್ಗದರ್ಶನ ನೀಡುವುದು ಹಾಗು ಹಲವು ಬಣ್ಣಗಳ, ವಾಸನೆಗಳ, ಮನುಷ್ಯನಿಗೆ ಕಣ್ಣಿಗಿಂತ ಸದ್ಧುಗಳ ಕುರಿತು ನಾನಾ ವಿಚಾರಗಳನ್ನು ತಿಳಿಹೇಳುವ ಪ್ರಸಂಗಗಳು ಇಷ್ಟವಾಯಿತು. ನಾಡಿನಲ್ಲಿ ಒಳ್ಳೆಯ ಬಣ್ಣ ಕಾಣುವುದಿಲ್ಲ, ಒಂದೇ ಕಡೆ ಜೀವನ ಸಾಗಿಸುವ ಪರಿಸ್ಥಿತಿ ಆತನಿಗೆ ಇಷ್ಟವಿರಲಿಲ್ಲ, ಕಾಡಿನ ಜೀವನದಲ್ಲಿ ಒಳ್ಳೊಳ್ಳೆ ಬಣ್ಣಗಳು, ತರ ತರದ ವಾಸನೆಗಳು, ಒಂದು ಕಡೆ ಹೆಚ್ಚು ಕಾಲೂರದೇ ನಾನಾ ಕಡೆ ಹೋಗಿ ಜೀವನ ಸಾಗಿಸುವ ಆತನ ಆಲೋಚನೆಗಳು ಇದರಿಂದ ತುಷಾರ ಗುಂಪಿನಲ್ಲಿರುವ ಮಧ್ಯವಯಸ್ಕರಿಗಾಗುವ ಕಿರಿಕಿರಿಗಳು, ಕಾಡಿನಲ್ಲಿ ಸಿಗುವ ಪದಾರ್ಥಗಳನ್ನು ನಾಡಿಗೆ ಹೋಗಿ ಮಾರಿ ನಾಡಿನಿಂದ ಅಕ್ಕಿ, ಬೆಳೆ, ಇನ್ನಿತರೆ ಧಾನ್ಯಗಳನ್ನು ತಂದು ಜೀವನ ಸಾಗಿಸುವ ಸಮಯದಲ್ಲಿ, ಪುರುಷಪುರದ ಕಾನಿಷ್ಕ ಮಹಾರಾಜನು ವ್ಯಾಪಾರದಲ್ಲಿ ನಾಣ್ಯದ ಚಲವಣೆಯನ್ನು ಜಾರಿಗೆ ತಂದಾಗ ತುಷಾರ ಜನರು ಪಡುವ ತೊಂದರೆಗಳು, ವಿಧಿಯಿಲ್ಲದೆ ಕ್ರಮೇಣ ಅದಕ್ಕೆ ಹೊಂದಿಕೊಳ್ಳುವುದು ಚೆನ್ನಾಗಿ ಮೂಡಿಬಂದಿದೆ.
ನಾನಾಪೋಷಕರ ಎರಡನೆಯ ಮಗ ಮಿತ್ರವಂದಕ ವ್ಯವಸಾಯದಲ್ಲಿ ಆಸಕ್ತಿಯಿಲ್ಲದೆ ಸಮರಖಂಡದಿಂದ ಸೋಗ್ದಾನಗರದಲ್ಲಿ ನೀಲಿರಾಗ ಹರಳುಗಳ ಗಣಿಗಳಲ್ಲಿ ಕೆಲಸಕ್ಕೆ ಸೇರಿಕೊಂಡು, ನಂತರ ಮಧುಮಾಯಳನ್ನು ಭೇಟಿಯಾಗಿ, ಅವರಿಬ್ಬರ ನಡುವೆ ಪ್ರೀತಿ ಬೆಳೆದು, ಮಿತ್ರವಂದಕನ ವ್ಯಾಪಾರದ ಸಲುವಾಗಿ ತನ್ನನ್ನೇ ಮಾರಿಕೊಂಡು (ಚೀನಾ ದೇಶಕ್ಕೆ ತೊತ್ತಿನ ಹೆಣ್ಣಾಗಿ ಮಾರಿ) ಅದರಿಂದ ಪಡೆದ ಬಹು ಅಮೂಲ್ಯವಾದ ಬಂಗಾರ, ಬೆಳ್ಳಿ ನಾಣ್ಯಗಳನ್ನು ರೇಷ್ಮೆ ಗಂಟಿನಲ್ಲಿ ಮಿತ್ರವಂದಕನಿಗೆ ತಲುಪಿಸಿ ಆತನು ವ್ಯಾಪಾರದಲ್ಲಿ ಹೆಚ್ಚು ಅಭಿವೃದ್ಧಿಹೊಂದಲಿ ಎನ್ನುವ ತ್ಯಾಗದ ಗುಣವು ಇಷ್ಟವಾಗುತ್ತದೆ. ಇಲ್ಲಿ ಪಾರಸೀಕರ ಆಚಾರ ವಿಚಾರಗಳು, ಪಾದ್ರಿ ಜರಾತುಷ್ಟ್ರನ ತತ್ವಗಳನ್ನೂ ನಾನಪೋಷಕರ ಪಾತ್ರದ ಮೂಲಕ ಎಳೆಎಳೆಯಾಗಿ ವಿವರಿಸಿದ್ದಾರೆ.
ಕಾಂಗ್ಫೂಜೀ ತತ್ವಜ್ಞಾನಿಗಳ ಜೊತೆ ಸಂಭಾಷಣೆಗಳು, ಉಪ್ಪು ಮತ್ತು ಕಬ್ಬಿಣವು ದೇವರು ಪ್ರಜೆಗಳಿಗೆ ಕೊಟ್ಟಿರುವ ಕಚ್ಚಾ ಪದಾರ್ಥಗಳೆಂದು ನಂಬುವ ಕಾಂಗ್ಫೂಜೀಗಳು, ಅದೇ ಕಚ್ಚಾ ಪದಾರ್ಥಗಳನ್ನು ವ್ಯಾಪಾರಕ್ಕೆ ಬಳಸಿ ಅಭಿವೃದ್ಧಿ ಹೊಂದಿ ನಾಲ್ಕು ಹಾಗು ಐದನೆಯ ಶ್ರೇಣಿಯನ್ನು ಪಡೆದುಕೊಂಡ ಕುಟುಂಬದ ಪ್ರಸಂಗಗಳು, ಚೀನಾದ ಗೃಹಿಣಿಯರೆಲ್ಲರೂ ರೇಷ್ಮೆ ಉದ್ದಿಮೆಯಲ್ಲಿ ತೊಡಗಿಕೊಂಡ ಪ್ರಸಂಗಗಳು, ತಾವೋ ಧರ್ಮದ ಕುರಿತು, ರೇಷ್ಮೆಯನ್ನು ದೇವರಾಗಿ ಪೂಜಿಸುವ ಕುರಿತು, ಹೂಣರ ಕಿರಿಕಿರಿಯನ್ನು ತಪ್ಪಿಸಿಕೊಳ್ಳಲು ಶತಮಾನಗಳಿಂದ ಚೀನಾದ ರಾಜರು ಗೋಡೆಯನ್ನು ವಿಸ್ತರಿಸುವ ಬಗ್ಗೆ, ಕಾನಿಷ್ಕ ಮಹಾರಾಜರ ಆದೇಶದಂತೆ ಸಾರ್ಥದ ತಂಡ ಜೊತೆ ಬೌದ್ಧಮಿತ್ರ(ಸಮಣ) ಹಾಗು ಬೌದ್ಧಭಿಕ್ಕುಗಳು ರಾಜನ ಆದೇಶದಂತೆ ಬೌದ್ಧ ತತ್ವವನ್ನು ಪ್ರಚಾರ ಮಾಡಬೇಕು, ಬೌದ್ಧ ವಿಹಾರಗಳು ಸ್ಥಾಪನೆಯಾಗಬೇಕು ಎನ್ನುವ ಆಕಾಂಕ್ಷೆಯಿಂದ ಹೊರಟಾಗ ಎದುರಾಗುವ ಸಂಕಷ್ಟಗಳು, ತಕ್ಲಮಕಾನಂತಹ ಭೀಕರ ಮರಭೂಮಿಯಲ್ಲಿ ಸಾರ್ಥದ ತಂಡದ ಜೊತೆ ಹೊರಟ ಸಗನೇಮಿ, ಹವಿನೇಮ, ಬೌದ್ಧಭಿಕ್ಕುಗಳು, ಮಿತ್ರವಂದಕ, ಹೀಗೆ ನಾನಾ ದೇಶದವರು ವ್ಯಾಪಾರದ ಸಲುವಾಗಿ ಸಾರ್ಥದ ತಂಡದಲ್ಲಿ ಭೇಟಿಯಾಗಿ ಭಾಷೆ ಬಾರದಿದ್ದರೂ ಅವರಲ್ಲಿ ಅನ್ಯೋನ್ಯತೆ ಬೆಳೆಯುವುದು, ಬೌದ್ಧತತ್ವಗಳನ್ನು ಅರ್ಥಮಾಡಿಕೊಳ್ಳುವುದು, ಒಬ್ಬರಿಗೊಬ್ಬರು ನೆರವಾಗಿ ಇನ್ನೇನು ಚೀನಾ ಮುಟ್ಟಬೇಕು ಆಗ
ಹೂಣರು ಆಕ್ರಮಣ ಮಾಡಿ ಸಾರ್ಥದ ತಂಡದ ನಾಯಕನನ್ನು ಇನ್ನಿತರರನ್ನು ಕೊಂದು ಅವರ ಪದಾರ್ಥಗಳನ್ನು ದೋಚಿಕೊಂಡು ಹೋದಾಗ, ಆ ಸಮಯದಲ್ಲೂ ಇನ್ನುಳಿದ ಜನರು ತಮ್ಮ ಪ್ರಯಾಣ ಮುಂದುವರೆಸುತ್ತಾ ಆ ಮರುಭೂಮಿಯಲ್ಲಿ ಸರಿಯಾದ ಆಹಾರವಿಲ್ಲದೆ, ಕುಡಿಯಲು ನೀರಿಲ್ಲದೆ ತಮ್ಮ ಗುರಿ ಮುಟ್ಟುತ್ತಾರಾ? ಕಡೆಯಲ್ಲಿ ಮಿತ್ರವಂದಕ ಹಾಗು ಮಧುಮಾಯ ಭೇಟಿಯಾಗುತ್ತಾರಾ? ಕಾನಿಷ್ಕನ ಬೌದ್ಧಧರ್ಮ ಪ್ರಚಾರ ಆಕಾಂಕ್ಷೆಯು ಫಲಿಸಿತೆ? ಕಾಡಿನಿಂದ ನಾಡಿಗೆ ಬಂದ ಸಗನೇಮಿ ಹವನೇಮ ತಕ್ಲಮಕಾನ ಮರಭೂಮಿಯಲ್ಲಿ ಪಡುವ ಕಷ್ಟಗಳಿಂದ ಅವರಿಗೆ ನಾಡಿನಲ್ಲಿ ಜೀವನ ನಡೆಸುವ ನಿರ್ಧಾರ ತಾವು ತೆಗೆದುಕೊಂಡದ್ದು ಸರಿಯನ್ನಿಸಿತೆ? ರೇಷ್ಮೆ ಗುಟ್ಟು ಚೀನಾದಿಂದ ಇಡೀ ಏಷ್ಯಾ ಖಂಡಕ್ಕೆ ರಟ್ಟಾಗುವ ಪ್ರಸಂಗ? ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿ ಹೇಳುವುದಕ್ಕಿಂತ ಕಾದಂಬರಿ ಓದಿದರೆ ಉತ್ತಮ
*ಕಾರ್ತಿಕೇಯ*