ಇದ್ದಕ್ಕದ್ದಿಂತೆ ಧಡ್ ಎಂದು ಯೋಚನೆ ಬಂತು ಪಾರಿ ಎಲ್ಲಿ ಹೋದ್ಲು!!! ಗಾಬರಿಯಲ್ಲಿ ಬಾತ್‌ರೂಮ್‌ನಲ್ಲಿ ನೋಡಿದರೆ ಅಲ್ಲೂ ಇಲ್ಲ! ಗಿಡಗಳಿಗೆ ನೀರು ಹಾಕುತ್ತಿರಬಹುದಾ ಎಂದು ಅಂಗಳಕ್ಕೆ ಹೋಗಿ ನೋಡಿದರೆ ಅಲ್ಲೂ ಇಲ್ಲ! `ಪಾರಿ.... `ಪಾರಿ...... `ಪಾರಿ........ ಎಷ್ಟೋ ವರ್ಷಗಳ ನಂತರ ಅವಳ ಹೆಸರು ಹಿಡಿದು ಕೂಗುವಾಗ ನಾಲಿಗೆ ತಡೆ ಹಿಡಿದಂತಾಯಿತು. ಉತ್ತರ ಬರಲಿಲ್ಲ. ಸದಾಶಿವ ಈಗ ನಿಜಕ್ಕೂ ಗಾಬರಿಯಾದ. ಏನು ಮಾಡಬೇಕು ಈಗ? ಯಾರಿಗೆ ಹೇಳಬೇಕು? ಮಕ್ಕಳಿಗಾ ಇಲ್ಲವಾ ಪೋಲಿಸರಿಗಾ ಅಂದುಕೊಳ್ಳುವುದರಲ್ಲಿ ಅರೆ! ಪಾರಿಗೇ ಫೋನ್ ಮಾಡಬಹುದಲ್ವಾ ಎಂದು ಹೊಳೆಯಿತು. ಕೂಡಲೇ ಅವಳಿಗೆ ಕಾಲ್ ಮಾಡಿದ. ಅವರದ್ದೇ ರೂಮಿನಲ್ಲಿ ರಿಂಗ್ ಆಗುವುದು ಕೇಳಿಸಿತು! ಫೋನ್ ಇಲ್ಲೇ ಇದೆಯಾ! ಫೋನ್ ಕೂಡಾ ಜೊತೆಗಿಲ್ಲದೆ ಎಲ್ಲಿಗೆ ಹೋದಳು ಎಂದು ಅತ್ತ ಓಡಿದವನು ಸ್ತಂಭೀಭೂತನಾಗಿ ನಿಂತುಬಿಟ್ಟ...
ಭಾರತಿ ಬಿ ವಿ ಅವರು ಜನಿಸಿದ್ದು ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದಲ್ಲಿ. ಬಿ.ಕಾಂ ಪದವೀಧರೆಯಾಗಿರುವ ಇವರಿಗೆ ಕವಿತೆ ರಚನೆ, ಅನುವಾದ, ಪ್ರವಾಸ ಹವ್ಯಾಸಗಳಾಗಿವೆ.
ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿರುವ ಇವರು 'ಸಾಸಿವೆ ತಂದವಳು', 'ಮಿಸಳ್ ಭಾಜಿ', 'ಕಿಚನ್ ಕವಿತೆಗಳು', 'ಜಸ್ಟ್ ಮಾತ್ ಮಾತಲ್ಲಿ', 'ಆನು ನಿನ್ನ ಹಾಡಿದಲ್ಲದೆ ಸೈರಿಸಲಾರೆನಯ್ಯ', 'ನಕ್ಷತ್ರಗಳ ಸುಟ್ಟ ನಾಡಿನಲ್ಲಿ', 'ಎಲ್ಲಿಂದಲೋ ಬಂದವರು' ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರ 'ಸಾಸಿವೆ ತಂದವಳು' ಕೃತಿಗೆ ಶಿವಮೊಗ್ಗ ಕರ್ನಾಟಕ ಸಂಘದ ಎಂ.ಕೆ ಇಂದಿರಾ ಪ್ರಶಸ್ತಿ ಹಾಗೂ 'ಮಿಸಾಳ್ ಬಾಜಿ' ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಬಂದಿದೆ.
ಮೊದಲ ಎರಡು ಕತೆಗಳು ಅದ್ಭುತವಾಗಿದ್ದವು. ಆಮೇಲೆ ಅವರ ಫೋರ್ಟೆ ಅಲ್ಲದ ವಿಷಯ ಹಾಗಾಗಿ ಅಷ್ಟೇನೂ ಕುತೂಹಲ ಹುಟ್ಟಿಸಲಿಲ್ಲ. ಆದರೆ ಎಲ್ಲಾ ಕತೆಗಳೂ ಓದಿಸಿಕೊಂಡು ಹೋಯಿತು.ಕತೆ ಹೇಳುವ ಶೈಲಿ ಸಿದ್ಧಿಸಿದೆ.