Part 4 of the 8 volume historical fiction series on the Chitradurga Paleyagars, Hosa Hagalu narrates the reign on Bharamappa Nayaka, the most illustrious Nayaka in Chitradurga's history. Written in poetic prose, the narrative is as evocative as the other volumes and transports the reader to ages gone by, to the hillocks and forts of Chitradurga.
'ತಳುಕು ರಾಮಸ್ವಾಮಯ್ಯ ಸುಬ್ಬರಾಯ' ಅವರು ಕನ್ನಡದ ಮೊದಲ ಪ್ರಾಧ್ಯಾಪಕರಾದ ತಳುಕಿನ ವೆಂಕಣ್ಣಯ್ಯನವರ ತಮ್ಮನವರ ಮಗ. ಇವರು ಹುಟ್ಟಿದ್ದು ೧೯೧೯ರಲ್ಲಿ. ಅವರು ಬರೆದ 'ನಾಗರಹಾವು' ಕಾದಂಬರಿಯಲ್ಲಿನ ರಾಮಾಚಾರಿಯ ಪಾತ್ರದಂತೆಯೇ ಅವರು ಛಲದ ಮನುಷ್ಯರಾಗಿದ್ದವರು. ಬಹಳ ಕಷ್ಟದಲ್ಲಿ ಜೀವಿಸಿದವರು. ಇವರ ಕೃತಿಗಳಾದ ಕಂಬನಿಯ ಕುಯಿಲು, ರಕ್ತರಾತ್ರಿ, ಮತ್ತು ತಿರುಗುಬಾಣ, ಚಿತ್ರದುರ್ಗದ ಇತಿಹಾಸವನ್ನು ಬಹಳ ರಸವತ್ತಾಗಿ ಚಿತ್ರಿಸಿವೆ ಎಂದು ವಿಮರ್ಶಕರ ಅಭಿಪ್ರಾಯ. ಏಪ್ರಿಲ್ ೧೦, ೧೯೮೪ರಲ್ಲಿ ಹೃದಯಾಘಾತವಾಗಿ ಬೆಂಗಳೂರಿನ ರಾಜಾಜಿನಗರದಲ್ಲಿರುವ 'ವರಲಕ್ಷ್ಮಿ ನರ್ಸಿಂಗ್ ಹೋಂ'ನಲ್ಲಿ ನಿಧನ ಹೊಂದಿದರು.
ಚಿತ್ರದುರ್ಗದ ಇತಿಹಾಸದಲ್ಲಿಯೇ ಒಂದು ಕರಾಳ ಕ್ರೂರ ಛಾಯೆ ತಿಳಿಯಾದ ಸಂದರ್ಭದಲ್ಲಿ ಮತ್ತಿ ತಿಮ್ಮಣ್ಣನ ವಂಶಕ್ಕೆ ಮುಂದಿನ ವಾರಸುದಾರರು ಇಲ್ಲವಾಗಿರುತ್ತಾರೆ. ಇಂತಹ ಜಟಿಲ ಸಂದರ್ಭದಲ್ಲಿ ಮುರುಘಾ ರಾಜೇಂದ್ರ ಸ್ವಾಮೀಜಿ ಅವರ ಸಮಯಪ್ರಜ್ಞೆ, ಮುಂದಾಲೋಚನೆ ಮತ್ತು ಮಧ್ಯಸ್ಥಿಕೆಯಿಂದಾಗಿ ಮತ್ತಿ ವಂಶದ ಇನ್ನೊಂದು ಕೊಂಡಿಯೇ ಆದ ಬಿಳಿಚೋಡಿನ ಕಸ್ತೂರಿರಂಗಪ್ಪ ನಾಯಕರ ಮಗನಾದ ಬರಮಣ್ಣನನ್ನು ಚಿತ್ರದುರ್ಗದ ದೊರೆಯಾಗಿಸುವರು.
ನೂತನ ನಾಯಕರಾಗಿ ಪಟ್ಟವೇರಿದ ಬರಮಪ್ಪನಾಯಕರ ಅವಧಿಯಿಂದ ದುರ್ಗಕ್ಕೆ 'ಹೊಸಹಗಲು' ಆರಂಭವಾಗುವುದು. ಇದರಲ್ಲಿ ಪೂಜ್ಯ ಸ್ವಾಮೀಜಿಯವರ, ಮಹಾಮಂತ್ರಿ ಪರಶುರಾಮ ನಾಯಕರ, ದಳವಾಯಿ ಬರಮಣ್ಣನವರ ಹಾಗೂ ನಾಗತಿಯವರ ದೃಡ ಸಂಕಲ್ಪವೂ ಸೇರಿರುತ್ತದೆ. ನಾಯಕರ ಈ ಚರಿತ್ರೆ ಕುರಿತು ತ. ರಾ. ಸು.ರವರು ಬಹಳ ಸೊಗಸಾಗಿ ಕಾದಂಬರಿಯನ್ನು ಚಿತ್ರಿಸಿದ್ದಾರೆ. ವಿಶೇಷವಾಗಿ ನಾಯಕರ ಮನಸ್ಸಿನಲ್ಲಿ ಹಾಗೆಯೆ ರಾಜ್ಯದಲ್ಲಿ ಸಂಭವಿಸುವ ಕಲಹ ಮತ್ತು ಇವೆಲ್ಲವನ್ನೂ ಗೆದ್ದು ನಾಯಕರು ಧೀಮಂತರಾಗುವ ಸುಸಂದರ್ಭ. ಚಿತ್ರದುರ್ಗ ಕಂಡ, ಓರ್ವ ಅಸಾಮಾನ್ಯ ದೊರೆಗೆ ಪದವಂದನೆಯನ್ನೂ ಲೇಖಕರು ಸಲ್ಲಿಸುವರು. ಈ ಮೂಲಕ ಲೇಖಕರು ತಮ್ಮ ದುರ್ಗದ ಅಭಿಮಾನವನ್ನ ಪುಟಪುಟದಲ್ಲಿಯೂ ಪ್ರಕಟಿಸಿರಿರುವುದು ಗಮನಾರ್ಹ.
ಕತ್ತಲೆಂದಿಗೂ ಶಾಶ್ವತವಲ್ಲ. ಇರುಳು ಮುಗಿಯಲೇಬೇಕು "ಹೊಸಹಗಲು" ಮೂಡಲೇಬೇಕು. ಅರಾಜಕತೆ, ದ್ವಂದ್ವ, ಭಿನ್ನಾಭಿಪ್ರಾಯಗಳೆಲ್ಲವೂ ರಾಜ್ಯಾಡಳಿತದಲ್ಲಿ ಸರ್ವೇ ಸಾಮಾನ್ಯ. ಬಹುತೇಕ ನಾವು ಓದಿಕೊಂಡಿರುವ ಎಲ್ಲಾ ಐತಿಹಾಸಿಕ ಕಥೆಗಳು ಹೀಗೆ ಇರುತ್ತವೆ ಕುಸಿದು ಮತ್ತೆ ಹುಟ್ಟುತ್ತವೆ, ಆ ಒಬ್ಬ ನಾಯಕನಿಂದ ಆ ಒಬ್ಬ ದಾರ್ಶನಿಕನಿಂದ. ಅಂಥ ಒಬ್ಬ ನಾಯಕನೊಬ್ಬನ ಕನಸುಗಳಿಂದ ಶುರುವಾಗುವುದು ಹೊಸಹಗಲು.
ಈ ಹಿಂದಿನ ಮೂರು ಪುಸ್ತಕಗಳಲ್ಲೂ ಬರುವ ನಾಯಕರ ಆಯ್ಕೆ ಪ್ರಕ್ರಿಯೆ ಇಲ್ಲೂ ಮುಂದುವರೆದಿದೆ. ಬದಲಾವಣೆ ಎಂದರೇ ಇಲ್ಲಿ ಈ ಬಾರಿ ನಾಯಕರದ್ದು ಅವಿರೋಧ ಆಯ್ಕೆ. ಮತ್ತಿವಂಶದ ಕಡೆಯ ಗಂಡು ಸಂತಾನವಾದ ರಂಗಪ್ಪನಾಯಕ ಬಂಧಿಯಾದ ಮೇಲೆ ಪುನಃ ಅವರನ್ನೇ ಪಟ್ಟಕ್ಕೆ ಕೂರಿಸಿದರೇ ಸಿಂಹಾಸನಕ್ಕೆ ಶೋಭೆ ಇರುವುದಿಲ್ಲ ಎಂದು ಅವರ ನೆಂಟರೇ ಆದ ಭರಮಪ್ಪನನ್ನು ನಾಯಕನಾಗಿ ಆರಿಸಲು ತೀರ್ಮಾನಿಸುತ್ತಾರೆ. ತರಾಸುರವರ ಕಲಾತ್ಮಕವಾಗಿ ಕಥೆ ಹೆಣೆದಿರುವ ಚಾತುರ್ಯ ಮುರುಘಾರಾಜೇಂದ್ರ ಸ್ವಾಮಿಗಳ ಆಗಮನವಾದಾಗ ತಿಳಿಯುತ್ತದೆ. ಹಿನ್ನೆಲೆ ತಿಳಿಯಬೇಕೆಂದರೆ ತಿರುಗುಬಾಣ ಓದಲೇಬೇಕು.
ಕುರುಬ ಭರಮಣ್ಣನು ಅವನ ಕನಸಿನಂತೆ ಪಾಳೆಯಗಾರ ಭರಮಪ್ಪನಾಯಕನಾದ ನಂತರ ರಂಗಪ್ಪನಾಯಕ ಕುತ್ಸಿತ ಮಾತಿಗೆ ಕುಗ್ಗುತ್ತಾನೆ. ಕುಗ್ಗುವುದು ಹಿಗ್ಗುವುದರ ಮೊದಲ ಸಂಕೇತವೆನ್ನುವಂತೆ ಭರಮಪ್ಪನಾಯಕ ರಾಜ್ಯದ ಅಭಿವೃದ್ಧಿಯ ರೂಪುರೇಷೆಗಳನ್ನು ಸಿದ್ಧಪಡಿಸುತ್ತಾನೆ. ಪ್ರಧಾನಿಗಳು ನಾಯಕರ ಮಾತಿಗೆ ತಲೆದೂಗುತ್ತಾರೆ. "ಹಾಲಿನಲ್ಲಿ ಕೈ ತೊಳೆಯುವ" ಸಮೃದ್ಧ ಸಾಮ್ರಾಜ್ಯವನ್ನು ಕಟ್ಟಲು ಎಲ್ಲ ರೀತಿಯ ಸಿದ್ಧತೆಗಳು ಶುರುವಾಗುತ್ತವೆ. ಜನರ ಪ್ರೀತ್ಯಾಶೀರ್ವಾದಗಳೂ ಕೂಡ ದೊರೆಯುತ್ತವೆ. ಭರಮಸಾಗರ, ಭೀಮಸಮುದ್ರದ ಉಲ್ಲೇಖ ದುರ್ಗಕ್ಕೆ ಕೈ ಬೀಸಿ ಕರೆಯುತ್ತದೆ
ಕುಣಿಯುವ ಕುದುರೆಯ ಕಾಲಿಗೆ ಅಡ್ಡವಿಡಲೊಂದು ಪಾತ್ರವೂ ಬೇಕು. ಬೆಳೆಯುವ ಸಾಮ್ರಾಜ್ಯವನ್ನು ತುಳಿಯಲೊಂದು ವೈರಿಬಣವೂ ಇರಬೇಕು. ರಂಗಪ್ಪನಾಯಕನ ತವರಾದ ಹರಪನಹಳ್ಳಿಯ ಬಸವಂತನಾಯಕನು ದುರ್ಗದ ಮೇಲೆ ಕಣ್ಣಿಡುತ್ತಾನೆ. ದುರ್ಗದ ಅಭಿವೃದ್ಧಿಯಲಿ ಬಂದ ಆರ್ಥಿಕ ತೊಡಕುಗಳನ್ನು ಉಪಯೋಗಿಸಿಕೊಳ್ಳಲು, ದುರ್ಗದವರನ್ನೇ ಬಳಸಿಕೊಂಡು ದುರ್ಗವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ.
ಕೆಳದಿಯವರ ಬೆಂಬಲದಿಂದ ಅಣಜಿಯನ್ನು ವಶಪಡಿಸಿಕೊಳ್ಳುವುದು ಹರಪನಹಳ್ಳಿಯವರ ಮೊದಲ ಗೆಲುವು ಹಾಗೂ ಭರಮಪ್ಪನಾಯಕನ ಮೊದಲ ಯುದ್ಧ ಮತ್ತು ಮೊದಲ ಸೋಲು. ಆ ಸೋಲಿನಿಂದ ಭರಮಪ್ಪನಾಯಕ ಕುಗ್ಗುತ್ತಾನೆ. ಅಭಿವೃದ್ದಿ ಕುಂಠಿತವಾಗುತ್ತದೆ. ಅಲ್ಲಿಂದಾಚೆಗೆ ಕಾದಂಬರಿಯು ಇನ್ನೊಂದು ರೂಪವನ್ನೇ ಪಡೆದುಕೊಳ್ಳುತ್ತದೆ. ಏನಾಯಿತು? ಉತ್ತರ ಪುಸ್ತಕದಲ್ಲಿದೆ
ಅಂದ ಹಾಗೇ ಈ ಪುಸ್ತಕವು ಕತ್ತಿ ಮಸೆಯುವುದಕ್ಕಿಂತ ಬದುಕಿನ ಸತ್ಯಗಳು, ಕನಸಿನ ಮಹತ್ವ, ಸ್ವಾಮಿನಿಷ್ಠೆ, ರಾಜ್ಯಾಡಳಿತ, ಅಭಿವೃದ್ಧಿಯ ಕುರಿತು ಮಾತನಾಡುತ್ತದೆ. ಏಕತಾನವೆನಿಸದಂತೆ ವಿಷಯ ಬದಲಾಯಿಸಿ ತರಾಸುರವರು ಓದುಗರ ಮನಗೆಲ್ಲುತ್ತಾರೆ. ಸಮಯ ಮಾಡಿಕೊಂಡು ಓದಿ
ಮುಂದೆ ಭರಮಪ್ಪನಾಯಕನ ದುರ್ಗದ ವಿರುದ್ದ ಬಸವಂತನಾಯಕನ ಯುದ್ಧ, ಆಂತರಿಕ ಬಿಕ್ಕಟ್ಟು ಮತ್ತು ಮುರುಘಾರಾಜೇಂದ್ರಸ್ವಾಮಿಗಳ ಭವಿಷ್ಯವಾಣಿ ಇವುಗಳನ್ನು ಮನದಲ್ಲಿಟ್ಟುಕೊಂಡು "ವಿಜಯೋತ್ಸವ" ಶುರುಮಾಡಲಿದ್ದೇನೆ. ಸಿಗುತ್ತೇನೆ.
ಮುದ್ದಣ್ಣ ನ ಅಂತ್ಯದೊಂದಿಗೆ ದುರ್ಗಕ್ಕೆ ಕವಿದ ಕಾರ್ಮೋಡ ಸರಿಯಿತು ಎಂಬ ಭ್ರಮೆಯಲ್ಲಿ ಮೈಮರೆತ ದುರ್ಗಕ್ಕೆ ಒಂದು ಹೊಸ ಸಮಸ್ಯೆ ಎದುರಾಗಿದೆ.. ಅದೇ.. ಮುಂದಿನ ನಾಯಕ ಯಾರಾಗಬೇಕು ಎಂಬುದು. ಹಿಂದೆ ಮುದ್ದಣ್ಣ ಪಟ್ಟಕ್ಕೆ ತಂದ ರಂಗಪ್ಪ ನಾಯಕರೋ ಅಥವಾ ಹೊಸ ತಲೆ ಯೋ?
ಜನರ ಬೆಂಬಲದೊಂದಿಗೆ ಪಟ್ಟಕ್ಕೆ ಬಂದ ಹಿಂದೆ ಕುರಿ ಕಾಯುತ್ತಿದ್ದ ಭರಮಪ್ಪ ನಾಯಕರು ಏನೇನು ಮಾಡಿದರು? ಅವರು ನಡೆಸಿದ ಜೀರ್ಣೋದ್ಧಾರ ಕಾರ್ಯಗಳು ಎಂತಹುದು? ಅದಕ್ಕಾಗಿ ಅವರು ಜನರನ್ನು ಹೇಗೆ ಒಗ್ಗೂಡಿಸಿದರು? ಇಂತಹ ಸನ್ನಿವೇಶದಲ್ಲಿ ನೆರೆಯ ಹರಪಹಳ್ಳಿಯ ಪಾಳಯಗಾರರ ಪಿತೂರಿ ಸಫಲವಾಯಿತೇ?
ದುರ್ಗದಲ್ಲಿ ನವ ಯುಗ ಆರಂಭವಾಗಿದೆ, ಜೊತೆಗೆ ಹೊಸ ರಾಜಕಾರಣದ ಸಮಸ್ಯೆಗಳೂ! ಹೊಸ ನಾಯಕರು - ಹೊಸ ಗುರುಗಳ ಜೊತೆಗೆ ಬೆನ್ನೆಲುಬಾಗಿ ಹಳೇ ತಲೆಗಳು !
ಭರಮಪ್ಪ ನಾಯಕರ ಪಟ್ಟಾಭಿಷೇಕ, ದುರ್ಗದಲ್ಲಿ ಅವರು ನಡೆಸಿದ ಸಮಾಜಮುಖಿ ಕೆಲಸಗಳು, ಸೆರೆಯಲ್ಲಿದ್ದ ರಂಗಪ್ಪ ನಾಯಕನನ್ನ ಹರಪನಹಳ್ಳಿಯವರು ಉಪಾಯವಾಗಿ ಬಿಡಿಸಿದ್ದು, ಮಾಯಕೊಂಡ ಗೌಡ ಹಾಗೂ ಹೊಳಲಕೆರೆ ಗೌಡ ಸೇರಿಕೊಂಡು ರಂಗಪ್ಪ ನಾಯಕನ ಸಂಚು ಮುರಿದು ಆತನ ತಲೆ ಹಾರಿಸಿದ್ದು , ಸೇಡು ತೀರಿಸಿಕೊಳ್ಳಲು ಹರಪನಹಳ್ಳಿಯವರು ಅಣಜಿ ಕೋಟೆಯಲ್ಲಿ ಹತ್ಯಾಕಾಂಡ ನಡೆಸಿದ್ದು , ನಂತರ ನಡೆದ ಅಣಜಿ ಯುದ್ಧದಲ್ಲಿ ದುರ್ಗದ ಸೋಲು, ಸೋಲಿನಿಂದ ನೆಲಕಚ್ಚಿ ಹಾಸಿಗೆ ಹಿಡಿದ ಭರಮಪ್ಪ ನಾಯಕ, ಅವನ ಆತ್ಮವಿಶ್ವಾಸವನ್ನು ಮತ್ತೆ ಮೇಲೆತ್ತಿದ ಮುರುಘಾ ರಾಜೇಂದ್ರ ಸ್ವಾಮಿಗಳು , ಮತ್ತೆ ಸಮಯ ನೋಡಿ ಮತ್ತೆ ಅಣಜಿ ಕೋಟೆಯನ್ನು ವಶಪಡಿಸಿಕೊಂಡದ್ದು ! ಹೀಗೆ ಹಲವು ಸನ್ನಿವೇಶಗಳನ್ನು ಸೊಗಸಾಗಿ, ಕಾವ್ಯಾತ್ಮಕವಾಗಿ ವಿವರಿಸಿದ್ದಾರೆ ಲೇಖಕರು.
ಅಣಜಿಯನ್ನು ಗೆದ್ದು ದಳವಾಯಿ ಭರಮಣ್ಣ ತನ್ನ ಮಾತು ಉಳಿಸಿಕೊಂಡ, ಹರಪನ ಹಳ್ಳಿಯನ್ನು ಗೆದ್ದು ಭರಮಪ್ಪ ನಾಯಕ ತನ್ನ ಪ್ರತಿಜ್ಞೆ ಉಳಿಸಿಕೊಳ್ಳುವನೇ?
ತರಾಸು ಅವರ ಚಿತ್ರದುರ್ಗ ಇತಿಹಾಸದ ಆಧಾರದ ಮೇಲೆ ರಚಿತವಾದ ನಾಲ್ಕನೇ ಕಾದಂಬರಿ. ಇವರ ತಿರುಗುಬಾಣ ಕಾದಂಬರಿಯ ಮುಂದಿವರಿದ ಭಾಗ. ದಳವಾಯಿ ಮುದ್ದಣನ ಮರಣಾನಂತರ ದುರ್ಗದಲ್ಲಿ ನಡೆಯುವ ಘಟನೆ, ಮುಂದಿನ ನಾಯಕನ ಜವಾಬ್ದಾರಿ ಒಬ್ಬ ಕುರುಬ ಭರಮಣ್ಣನ ಮೇಲೆ ಬರುತ್ತದೆ. ಮುಂದೆ ಅವನಿಗೆ ಬಿಚ್ಚುಗತ್ತಿ ಭರಮಣ್ಣನಾಯಕ ಎಂದು ನಾಮಾಂಕಿತ ಆಗುತ್ತದೆ. ನಾಯಕನಾಗಿ ಪಟ್ಟಾಭಿಷೇಕ ಆದ ಮೇಲೆ ದುರ್ಗದ ಜನರಿಂದಲೇ ಆದ ಮೋಸದಿಂದ ರಾಜ್ಯ ಕಷ್ಟಕ್ಕೆ ಸಿಕ್ಕುತ್ತದೆ. ಆದರೆ ಮುಂದೆ ಸ್ವಾಮಿಗಳ ಆಶೀರ್ವಾದ ಮತ್ತು ಧೈರ್ಯದ ಮಾತುಗಳಿಂದ ಮತ್ತೆ ಶತ್ರುರಾಜ್ಯದಿಂದ ವಿಜಯವನ್ನು ಸಾರುತ್ತಾರೆ. ಈ ಕಾದಂಬರಿಯಲ್ಲಿ ಭರಮಣ್ಣನಾಯಕ, ಪ್ರಧಾನಿ ಪರಶುರಾಮಪ್ಪ ಮತ್ತು ದಳವಾಯಿ ಭರಮಣ್ಣ ಅವರು ವಿಶಿಷ್ಟವಾದ ಸ್ಥಾನಮಾನವನ್ನು ಹೊಂದಿದ್ದಾರೆ. ದುರ್ಗದ ಸೈನ್ಯ ವಿಜಯಪತಾಕೆ ಹಾರಿಸಿದಾಗ ದಳವಾಯಿ ಭರಮಣ್ಣ ಹೇಳಿದ ಮಾತು: "ಕುನ್ನಿ ಕಂಡೆಯಾ? ಇದು ದುರ್ಗವನ್ನು ಕೆಣಕಿದವರಿಗೆ ಆಗುವ ಗತಿ. ಹೋಗಿ ನಿಮ್ಮ ನಾಯಕನಿಗೆ ಹೇಳು-ಇಂದು ಕೋಟೆಯಲ್ಲಾದುದೇ ನಾಳೆ ಹರಪನಹಳ್ಳಿಯಲ್ಲೂ ಆಗಲಿದೆ. ಅವನ ಹೆಂಡರಿಗೆ ನಮ್ಮ ನಾಯಕರ ಇದಿರು ಮೇಳ ಕಟ್ಟಲು ಸಿದ್ಧವಾಗಿರುವಂತೆ ಹೇಳು. ಅದಕ್ಕಾಗಿ ನಿನ್ನನ್ನು ಉಳಿಸುತ್ತಿದ್ದೇನೆ, ಹೋಗು"
Amazing story of Bilichodina "Bichhugatti BaramappaNayaka" who became the Nayaka of Chitradurga who used to be the Kuruba once and how he lost to Harappanahalli and regain the victory over Anaji fort which was under the caption of HarappanaHalli..
ಚಿತ್ರದುರ್ಗದ ಇತಿಹಾಸ ಕಾದಂಬರಿಯ ನಾಲ್ಕನೇ ಭಾಗ. ಅದ್ಭುತವಾಗಿ ಮೂಡಿ ಬಂದಿದೆ. ಪ್ರತಿಯೊಂದು ಸನ್ನಿವೇಶವು ಕಣ್ಣಿಗೆ ಕಟ್ಟಿದ ಹಾಗೆ ಇದೆ. ಪ್ರಧಾನಿ ಪರಶುರಾಮಪ್ಪ, ದಳವಾಯಿ ಭರಮಣ್ಣ ನವರ ಪಾತ್ರ ತುಂಬಾ ಮುಖ್ಯವಾದದ್ದು ಚಿತ್ರದುರ್ಗದ ಇತಿಹಾಸ ಕಾದಂಬರಿಯಲ್ಲಿ. ಯಾರದೋ ಕೈ ವಶ ವಾಗಬಾರ್ದು ಅರಮನೆ ಅಂತಾ ಹಳೆಯ ನಾಯಕರ ದಾಯಾದಿಗಳ ಮಗನಾದ ಭರಮಣ್ಣ ನನ್ನು ನಾಯಕನನ್ನಾಗಿ ಮಾಡಿದರು. ಕುರುಬ ಭರಮಣ್ಣ ಬಿಚ್ಚುಗತ್ತಿ ಭರಮಪ್ಪ ನಾಯಕ ನಾಗಿದ್ದು, ಚಿತ್ರದುರ್ಗ ವನ್ನು ವೈಭವದತ್ತ ಕೊಂಡ್ಯಿದಿದ್ದು , ಸೋಲೆ ಗೆಲುವಿನ ಸೋಪಾನ ಅನ್ನೋ ಮಾತಿನಿಂದ ಸೋತ ಅಜನಿ ಯನ್ನೂ ಮತ್ತೇ ಗೆದ್ದು ಕೈವಶ ಮಾಡಿಕೊಂಡು ರಾಜನಾಗಿ ಮುಂದುವರೆದಿದ್ದಾನೆ ಭರಮಣ್ಣ. ತ ರಾ ಸು ರವರ ಬರವಣಿಗೆ ಎಲ್ಲೂ ಅತಿಯಾಗದೆ ಸೊಗಸಾಗಿದೆ.