Jump to ratings and reviews
Rate this book

murida kadalu [ಮುರಿದ ಕಡಲು]

Rate this book
ಮುರಿದ ಕಡಲಿನೊಳಗೆ ಈಜಲಾಗದ ಸಂಕಟ

ಕಾದಂಬರಿ ಮಾಧ್ಯಮವು ಸಾಹಿತ್ಯಕ್ಕೆ ಪ್ರವೇಶ ಪಡೆದ ತಕ್ಷಣ ಏನು ಜನಪ್ರಿಯತೆ ಪಡೆಯಿತೋ ಅದನ್ನು ಈ ಗಳಿಗೆಯ ತನಕ ಮತ್ತೊಂದು ವಿಧದ ಬರವಣಿಗೆ ಪಡೆಯಲಿಲ್ಲ. ಇದು ಎಲ್ಲಾ ದೇಶಕಾಲಕ್ಕೂ ಸಲ್ಲುವ ಬರಹಲೋಕದ ವಿದ್ಯಮಾನ. ಬಹುಶಃ ನಮ್ಮ ಮನಸ್ಸುಗಳೊಳಗಿರುವ ವಿಸ್ತಾರವಾದ ಕಥೆಯ ಅಪೇಕ್ಷೆ ಇದಕ್ಕೆ ಕಾರಣವಾಗಿದ್ದಂತೆ, ಸಾಹಿತ್ಯದಲ್ಲಿ ಯಾವ ಜಟಿಲತೆಯನ್ನೂ ಬಯಸದೆ ಸರಾಗ ಮನರಂಜನಾತ್ಮಕ ಓದನ್ನು ಮಾತ್ರ ಅಪೇಕ್ಷಿಸುವ ಒಂದು ಓದುಗ ಸಮೂಹವೂ ಕಾರಣ. ಈ ಕಾರಣದಿಂದಲೆ ಇರಬಹುದು, ಜಗತ್ತಿನ ಬಹುತೇಕ ಭಾಷೆಗಳಲ್ಲಿ ವರ್ಷವರ್ಷವೂ ಹೊರಬರುವ ವಿಪುಲ ಸಂಖ್ಯೆಯ ಕಾದಂಬರಿಗಳು ವಸ್ತುವಿನ ಆಳವನ್ನು‌ ಕೆದಕದೆ ತೇಲಿಸಿಕೊಂಡು ಹೋಗುವ ಗುಣವನ್ನು ಅರಿತೋ ಅರಿಯದೆಯೋ ಲಕ್ಷಣವನ್ನಾಗಿಸಿಕೊಂಡುಬಿಟ್ಟಿವೆ. ಈ ಲಕ್ಷಣವನ್ನೂ‌ ಒಡೆಯುವ ಕಾಲ ಕಳೆದೆರಡು ದಶಕದಿಂದ ಜಗತ್ತಿನೆಲ್ಲೆಡೆ ಆರಂಭವಾಗಿದೆ.

ಭಾರತದ ಭಾಷೆಗಳಲ್ಲೂ ಕೂಡ ಮಧ್ಯಮವರ್ಗದ ಕೌಟುಂಬಿಕ ಭಿತ್ತಿಯನ್ನೇ ಆಧರಿಸಿದ್ದ ಕಾದಂಬರಿಗಳು‌‌ ಕ್ರಮಕ್ರಮೇಣ ಹಿನ್ನೆಲೆಗೆ ಸರಿಯುತ್ತಿವೆ. ಅಲ್ಲಿ ವಸ್ತುವೊಂದರ ಸಮಗ್ರ ಅಧ್ಯಯನದ ಫಲವಾಗಿ ಹೊರಹೊಮ್ಮುವ ಗಂಭೀರ ವಿಚಾರಗಳು ಮುಖ್ಯರಂಗಕ್ಕೆ ಬರುತ್ತಿವೆ. ಸಮಕಾಲೀನ, ಐತಿಹಾಸಿಕ ಅಥವಾ ಪೌರಾಣಿಕ ಈ ಯಾವ ವಸ್ತುವನ್ನೆತ್ತಿಕೊಂಡರೂ ಅಲ್ಲಿ ಭಾವುಕತೆ ಅತಿರಂಜಕತೆ ಭಾಷಾ ವೈಭವಗಳು ಪ್ರಧಾನವಾಗದೆ ವಿಚಾರಗಳ ಕುರಿತು ಸಮಗ್ರ ದೃಷ್ಟಿಕೋನವೊಂದು ನಾಯಕ ನಾಯಕಿಯರನ್ನು ಪಕ್ಕಕ್ಕೆ ಸರಿಸುವಷ್ಟು ಪ್ರಬಲವಾಗುತ್ತಿದೆ. ಇದಕ್ಕೆ ಕನ್ನಡವೂ ಸೇರಿದಂತೆ ಅನೇಕ ಭಾರತೀಯ ಭಾಷೆಗಳ ಕಾದಂಬರಿಗಳನ್ನು ಉದಾಹರಿಸಬಹುದು. ಪ್ರಸ್ತುತ ಕಾದಂಬರಿ ‘ಮುರಿದ ಕಡಲು’ ಕೂಡ ಈ ಉದಾಹರಣೆಗಳಲ್ಲಿ ಸೇರುತ್ತದೆ.

ಮನೋಜ್ ರೂಪ್ಡಾ ಅವರ ಈ ಹಿಂದಿ ಕಾದಂಬರಿಯು ತರೆದಿಡುವ ಲೋಕ ಬಹುಕಾಲ‌ ನಮ್ಮ ಮನಸ್ಸನ್ನು ಅಶಾಂತಗೊಳಿಸುತ್ತದೆ. ಗಾಢ ದುಃಖವೊಂದು ಆವರಿಸಿ ಒಲ್ಲೆ ಎಂಬುವವರನ್ನೂ ಬಿಡದೆ ವಿಚಾರದಾಳಕ್ಕೆ ಎಳೆಯುತ್ತದೆ. ಮುರಿದ ದೋಣಿಯನ್ನು ಹೇಗೋ ದುರಸ್ತಿ ಮಾಡಬಹುದು. ಕಡಲೇ ಮುರಿದರೆ? ಚಂದ್ರಶೇಖರ ಮದಭಾವಿಯವರ ಕನ್ನಡ ಅನುವಾದವು ಎಲ್ಲಿಯೂ ತೊಡಕಿಗೆ ಸಿಕ್ಕಿಹಾಕಿಕೊಳ್ಳದೆ, ಮೂಲ ಕಾದಂಬರಿಕಾರರ ’ದನಿ’ಯನ್ನು ಕಿಂಚಿತ್ತೂ ಪಲ್ಲಟಿಸದೆ ಕಾದಂಬರಿಯನ್ನು ಓದುಗರಿಗೆ ಇತ್ತಿದೆ. ಇದು ಛಂದ ಪ್ರಕಾಶನದ ವಿಶೇಷತೆ.

ಈ ಕಾದಂಬರಿಯ ನಾಯಕ ನಾಯಕಿ ಖಳ ಎಲ್ಲವೂ ಒಂದೇ! ಅದು ಮಾನುಷ ನೀಚತನ. ಯಾವತ್ತೂ ಮನುಷ್ಯ ಜಗತ್ತನ್ನು ಆಳಿರುವುದು ಸಜ್ಜನರಲ್ಲ, ತನ್ನ ಹಿತವನ್ನು ರಕ್ಷಿಸಿಕೊಳ್ಳುವ ಬಲಾಢ್ಯರ ಗುಂಪು. ಈ ಗುಂಪಿಗೆ ಸಮಷ್ಟಿಯ ಒಳಿತು ಕೆಡುಕು ವಿಷಯವಲ್ಲ. ಒಟ್ಟು ಸಮಾಜದ ಗತಿಯೇನು ಎಂಬ ಪ್ರಶ್ನೆಯನ್ನು ಅದು ಉತ್ತರಿಸುತ್ತ ಬಂದಿರುವುದು ಒಂದೇ ಒಂದು ವಾಕ್ಯದಿಂದ - ನಾನು ಉಳಿಯಬೇಕು, ಮತ್ತು ಯಾರು ಉಳಿಯುತ್ತಾರೋ ಅವರೇ ಸಮಾಜ!

ಇಂತಹ ಮಾನುಷನೀಚತ್ವದ ಒಳಗನ್ನು ನೆಲ, ಕಾಡು, ನೀರು ಈ ಮೂರು ನೆಲೆಗಳಲ್ಲೂ ಸಂದರ್ಭಗಳನ್ನು ಸೃಷ್ಟಿಸಿಕೊಳ್ಳುತ್ತ ಕಾದಂಬರಿಯು ಬಗೆಯುತ್ತದೆ. ಕೊನೆಗೆ ಉಳಿಯುವ ಸಂಕಟ - ತಮ್ಮ ಪಾಡಿಗೆ ಬದುಕುವ ಬಹುಜನರ ಗುಂಪು ಕೊನೆಗೂ ಒಂದು ಹಿಡಿ ನೀಚರ ಪ್ರತ್ಯಕ್ಷ ಯಾ ಪರೋಕ್ಷ ಅಧೀನದಲ್ಲೇ ಇದ್ದುಬಿಡುತ್ತದೆ ಎಂಬುದು. ಪ್ರತಿರೋಧವು ಹುಟ್ಟಿದಾಗಲೂ ಈ ಬಹುಜನರ ಗುಂಪು ತಮಗೊಳಿತು ಮಾಡಬಹುದಾದ ಪ್ರತಿರೋಧಕ್ಕೆ ಕೈಜೋಡಿಸದೆ ನೀಚರ ಪೋಷಣೆಗೆ ನಿಂತುಬಿಡುತ್ತದೆ ಎಂಬುದು. ನಿಜವಾದ ಮಾನುಷ ಚರಿತ್ರೆ ಇದೇ ಆಗಿದೆ.

ಆ ಚರಿತ್ರೆಯನ್ನೇ ಈ ಕಾದಂಬರಿ ಪ್ರಸ್ತುತದ ಮಾವೋವಾದಿ ಸಶಸ್ತ್ರ ನಕ್ಸಲ್ ಕ್ರಾಂತಿ, ನಿಶ್ಶಬ್ದವಾಗಿ ಜಗತ್ತನ್ನು ಹೀರುತ್ತಿರುವ ಹಿಡಿಯಷ್ಟು ಕಾರ್ಪೊರೇಟ್ ಪಿಪಾಸಿಗಳ ಸಂಚು, ಎಂದೂ ಸ್ವಹಿತದ ಆಚೆಗೆ ಯೋಚಿಸದ ರಾಜಕೀಯ ಈ ಮೂರೂ ಭಿತ್ತಿಗಳಲ್ಲಿ ಚಿತ್ರಿಸುತ್ತದೆ. ಇವು‌ ಮೂರೂ ಭಾರತದ ಸಮಸ್ಯೆಗಳಾಗಿರುವಾಗಲೇ ಇಡೀ ವಿಶ್ವದ್ದೂ ಆಗಿರುವ ಕಹಿಸತ್ಯವನ್ನು ಮೂರು ಒಡೆಯುವ ರೂಪಕಗಳ ಮೂಲಕ ತಣ್ಣಗೆ ವಿವರಿಸುವ ವಿವರಣೆಯು ಇಂತಹ ಓದಿಗೆ ತೆರೆದುಕೊಳ್ಳದಿರುವವರೊಳಗೆ ಹೊಟ್ಟೆತೊಳಸು ಉಂಟು ಮಾಡಿದರೆ ಅನಿರೀಕ್ಷಿತವಲ್ಲ.

ಜೀವಂತ ಮನುಷ್ಯ, ಜೀವಂತ ಪ್ರಾಣಿ, ಜೀವಂತ ವಸ್ತುವನ್ನು ಜೀವವಿರುವಾಗಲೇ ಒಡೆದು ಛಿದ್ರಗೊಳಿಸಿ ಆನಂದಿಸುವ ಮನುಷ್ಯ ಮತ್ತು ಇದು ವಿನಾಶಕಾರಿಯೆಂದು ತಿಳಿದೂ ಮೌನವಾಗಿ ಬೆಂಬಲಿಸುವ ಗುಂಪು ಎರಡೂ ಎಂದೂ ಇರುತ್ತವೆ. ಇದೇ ಕಾದಂಬರಿ ಹೇಳುವ ಸತ್ಯ. ಪ್ರತಿರೋಧದ ಧ್ವನಿಗೆ ಸರ್ವವಿನಾಶದ ಕೊನೆಯಲ್ಲಿ ಚಮಚೆಯಷ್ಟು ಗೆಲುವು ದೊರೆಯಬಹುದಾದರೂ ಅದು ಶಾಶ್ವತವಲ್ಲ.
ವಸುಧೇಂದ್ರ ಮತ್ತು ಛಂದ ನಿಮಗೆ ನನ್ನ ನಮಸ್ಕಾರ.

- ಲಲಿತಾ ಸಿದ್ಧಬಸವಯ್ಯ

202 pages, Paperback

Published January 1, 2025

Loading...
Loading...

About the author

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
0 (0%)
4 stars
1 (33%)
3 stars
1 (33%)
2 stars
1 (33%)
1 star
0 (0%)
Displaying 1 - 2 of 2 reviews
Profile Image for Prashanth Bhat.
2,263 reviews144 followers
June 14, 2025
ಛಂದದ ಇತ್ತೀಚಿನ ಅನುವಾದದ ಆಯ್ಕೆಗಳು ಅದರ ಹಿಂದಿನ ಅನುವಾದಗಳಿಂದ ಭಿನ್ನವಾಗಿದೆ. ಮೊದಲಿನ ಅದರ ಪ್ರಕಟಣೆಗಳ ನವಿರು ,ನಾಸ್ಚಾಲ್ಜಿಕ್ ಪುಸ್ತಕಗಳ ನಂತರ ಸ್ವಲ್ಪ ಕಾಲ ಕಮ್ಯೂನಿಸ್ಟ್ ಅಥವಾ ಮಧ್ಯಮ ವರ್ಗೀಯ ದೇಶಗಳ ಹೋರಾಟದ ಕುರಿತಾದ ಜನರ ಕುರಿತಾದ ಪುಸ್ತಕಗಳು ಬಂದರೆ ಅದಾದ ಮೇಲೆ ವಸುಧೇಂದ್ರರು ಓಪನ್ ಅಪ್ ಆದ ಮೇಲೆ ಅದರ ಪ್ರಕಟಣೆಗಳು ಎಲ್‌ಜಿಬಿಟಿಕ್ಯು ಕುರಿತಾಗಿ ಇತ್ತು.‌ಇತ್ತೀಚೆಗೆ ಇದು ಮುಖ್ಯವಾಗಿ ಈಶಾನ್ಯ ರಾಜ್ಯಗಳ ಮಾವೋ ವಾದಿ ಮತ್ತು ಪೋಲಿಸ್ ಸಂಘರ್ಷದ ಕಡೆ ಹೊರಳಿಕೊಂಡಿದೆ.

ಈ ಕಾದಂಬರಿ ಖುಷಿಯ ಓದು ಅಲ್ಲ.

ಇದು ಡಿಪ್ರೆಷನ್ ಕೊಡುವ ಓದು.

ಇಲ್ಲಿ ಒಂದು ಕಡೆ ಆದಿವಾಸಿಗಳ ಬವಣೆಗಳಿವೆ.‌ಅತ್ಲಾಗೆ ಪೋಲಿಸರ ಕೈಗೂ ಇತ್ಲಾಗೆ ಮಾವೋವಾದಿಗಳ ಕೈಗೂ ಸಿಕ್ಕಿ ನಜ್ಜುಗುಜ್ಜಾದ ಅವರ ದಾರುಣ ಬದುಕಿದೆ. ಕಥಾನಾಯಕ ಇದೇ ಪಂಗಡಕ್ಕೆ ಸೇರಿದವನಾದರೂ ಹುಟ್ಟೂರ ದಾಟಿ ಹಡಗಿನ ಕೆಲಸಕ್ಕೆ ಸೇರಿದವನು.‌ ನಕ್ಸಲ್ ಆದ ತನ್ನಕ್ಕನ ಹುಡುಕಿಕೊಂಡು ಬಂದವನಿಗೆ ಬಂಡವಾಳಶಾಹಿಗಳ ಹಿಡಿತಕ್ಕೆ ಯಾರೂ ಬಲಿಯಾಗದೆ ಇರಲು ಸಾಧ್ಯವೇ ಇಲ್ಲ ಅನಿಸುತ್ತದೆ.

ಕಾದಂಬರಿಯ ಕೊನೆಗೆ ಅವನು ಕೆಲಸ ಮಾಡುವ ಹಡಗೂ ಅವನ ಊರಿನ ಜನರೂ ಎಲ್ಲರೂ ಒಂದೇ ವಿಧಿಯನ್ನು ಉಳ್ಳವರು ಎಂಬ ಸತ್ಯ ಅರಿವಾಗುತ್ತದೆ.

ಇದು ಬೆಳಕು ಕಾಣುವ ಆಯ್ಕೆ ಇಲ್ಲದವರ ಕತೆಯಾಗಿ ಉಳಿಯುತ್ತದೆ.

ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇದನ್ನು ಪ್ರೊಪಗಾಂಡ ಆಗಿ ನೋಡಬಹುದು ಎಂಬ ಅನುಮಾನವೂ ನನಗಿದೆ..
ಅದನ್ನು ವಿಮರ್ಶಕರು ನಿರ್ಧರಿಸುತ್ತಾರೆ.
ಅವರು ಹೊಗಳಿ ಬರೆದರೆ ಇದು ಖಂಡಿತವಾಗಿ ಪ್ರೊಪಗಾಂಡ ಪುಸ್ತಕವೇ.

ಆದರೆ ಛಂದ ಪ್ರಕಾಶನ ಮತ್ತು ವಿಮರ್ಶಕರು ಒಂದು ಅಂತರ ಕಾಯ್ದುಕೊಂಡ ಕಾರಣ ಆ ನಿರೀಕ್ಷೆ ಇಲ್ಲ.

ಕೊನೆಗೆ ದಟ್ಟ ವಿಷಾದ ಮಾತ್ರ ಇದನ್ನು ಮುಗಿಸಿದಾಗ ಉಳಿಯುತ್ತದೆ.


*******

ಈ ಕೃತಿಯ ಒಂದೆರಡು ಪ್ಯಾರಾಗಳು ಇದರ ಟೋನ್ ಅನ್ನು ಓದುವ ಆಸಕ್ತಿ ಉಳ್ಳವರಿಗೆ ಸಹಕಾರಿ ಎಂದು ಕೊಟ್ಟಿದ್ದೇನೆ.

(ಅವರು ಮಣೆಯ ಒಂದು ಸುಸಂಸ್ಕೃತ ಭಾಗದಿಂದ ಬಂದವರು, ಅಲ್ಲಿ ಹೋರಾಟಗಳ
ಮತ್ತು ಕಷ್ಟಗಳ ಸಂಪ್ರದಾಯವಿಲ್ಲ. ಅವರು ಯಾವುದೇ ತೊಂದರೆಗಳಿಲ್ಲದ ಸರಳ, ಸುರಕ್ಷಿತ
ಜೀವನಶೈಲಿಯನ್ನು ಆನುವಂಶಿಕವಾಗಿ ಪಡೆದಿದ್ದರು. ಅಲ್ಲಿ ಎಲ್ಲದಕ್ಕೂ ಮಿತಿಯಿರುತ್ತದೆ
ಮತ್ತು ಯಾವುದೇ ರೀತಿಯ ದುಂದುಗಾರಿಕೆ ಅಥವಾ ದುಸ್ಸಾಹಸದಿಂದ ತಪ್ಪಿಸಿಕೊಳ್ಳಲು
ಪ್ರಯತ್ನಿಸಲಾಗುತ್ತದೆ. ಎಲ್ಲವನ್ನೂ ಮೊದಲೇ ಯೋಜಿಸುವ ಸಂಸ್ಕಾರ ಅವರಿಗೆ ಬಾಲ್ಯದಲ್ಲೆ
ಸಿಕ್ಕಿತ್ತು. ತಿಂಗಳ ಮೊದಲ ದಿನದಿಂದ ಕೊನೆಯ ದಿನದವರೆಗೆ ಸಂಭವನೀಯ ವೆಚ್ಚಗಳ
ಪಟ್ಟಿಯನ್ನು ಮಾಡುವುದು ಅವರ ಕುಟುಂಬದ ಸಂಪ್ರದಾಯವಾಗಿತ್ತು. ಪಟ್ಟಿಯನ್ನು ಮಾಡಿದ
ಮೇಲೆ, ಯಾವುದೇ ರೀತಿಯ ಅನಿರೀಕ್ಷಿತ ಖರ್ಚು, ವಿನೋದ ಅಥವಾ ಆತಿಥ್ಯವನ್ನು
ತಪ್ಪಿಸಲು ಪ್ರಯತ್ನಿಸಲಾಗುತ್ತಿತ್ತು. ಅವರು ಮೂಲಭೂತವಾಗಿ ಜಿಪುಣರಾಗಿಲ್ಲದಿದ್ದರೂ
ಅವರನ್ನು ನಿರ್ಧರಿತ ಪಟ್ಟಿಯಿಂದ ತೆಗೆದುಹಾಕುವುದು ತುಂಬಾ ಸುಲಭವಾಗಿರಲಿಲ್ಲ.
ಯಾವುದೇ ಬಂದರಿನಲ್ಲಿ ಹಡಗು ನಿಂತಾಗ, ಹಡಗಿನ ಎಲ್ಲಾ ಸಿಬ್ಬಂದಿ ಒಟ್ಟಾಗಿ ಆ
ಕರಾವಳಿ ನಗರದ ಒಳ ಪ್ರದೇಶಗಳಲ್ಲಿ ಮೋಜು ಮಾಡಲು ಹೋಗುತ್ತಿದ್ದರು. ಆ ಸಮಯದಲ್ಲಿ
ಕೆಲವು ದೊಡ್ಡ ಸಾಮೂಹಿಕ ವೆಚ್ಚದಲ್ಲಿ ಪಾಲುದಾರರಾಗಲು ಸಂಜಯ್ ದೇಶಪಾಂಡೆ
ಅವರನ್ನು ಬಲವಂತ ಮಾಡಲಾಗುತ್ತಿತ್ತು. ಅವರು ಅದರಲ್ಲಿ ಭಾಗಿಯಾಗುವುದನ್ನು
ತಪ್ಪಿಸಿಕೊಳ್ಳಲು ತುಂಬಾ ಪ್ರಯತ್ನಿಸುತ್ತಿದ್ದರು. ಆದರೆ ಕೊನೆಗೆ ಸೋತು ಜೇಬಿಗೆ ಕೈ ಹಾಕಿದಾಗ
ಎಲ್ಲರ ಕಣ್ಣು ಅವರ ಜೇಬಿನತ್ತ ನೆಟ್ಟಿರುತ್ತಿತ್ತು. ಅವರ ಜೇಬಿನೊಳಗೆ ಅವರ ಬೆರಳುಗಳ ಮಧ್ಯೆ
ನಡೆಯುವ ಉಭಯಸಂಕಟ ನೋಡಲು ಮಜವಾಗಿರುತ್ತಿತ್ತು. ಜೇಬಿನಿಂದ ಹಣ ತೆಗೆದು
ಒಮ್ಮೆಲೆ ಎಣಿಸುವ ಬದಲು ತಮ್ಮ ಬಳಿ ಒಟ್ಟು ಎಷ್ಟು ಹಣವಿದೆ ಎಂದು ಯಾರಿಗೂ
ತಿಳಿಯಬಾರದೆಂದು ಜೇಬಿನೊಳಗೇ ಎಣಿಸುತ್ತಿದ್ದರು. ಅವರ ಬೆರಳುಗಳು ಎಲ್ಲಾ ರೀತಿಯ
ನೋಟುಗಳನ್ನು ಗುರುತಿಸುತ್ತಿದ್ದವು. ಅವರು ಯಾವಾಗಲೂ ತಮ್ಮ ಜೇಬಿನಲ್ಲಿ ಚಿಲ್ಲರೆಯನ್ನು
ಇಟ್ಟುಕೊಂಡಿರುತ್ತಿದ್ದರು. ಆದ್ದರಿಂದ ಅವರು ಒಪ್ಪಿದ ಮೊತ್ತವನ್ನು ಮೀರಿ ಒಂದು
ಪೈಸೆಯನ್ನೂ ಖರ್ಚು ಮಾಡಬೇಕಾಗಿರಲಿಲ್ಲ. ತನ್ನ ಜೀವನದ ಮುಂಬರುವ ದಿನಗಳನ್ನು
ನಿರೀಕ್ಷಿಸಿ, ಯೋಜಿಸಿದ ಮನುಷ್ಯನಿಗೆ ಯಾವುದೇ ಹಠಾತ್ ಬದಲಾವಣೆಯನ್ನು
ಎದುರಿಸುವುದು ಎಷ್ಟು ಕಷ್ಟಕರವಾಗಬಹುದು?
ಸಂಜಯ್ ದೇಶಪಾಂಡೆಯನ್ನು ಅವರ ಹಾಸಿಗೆಗೆ ಒಪ್ಪಿಸಿ ಯೋಚಿಸಲು ಪ್ರಾರಂಭಿಸಿದೆ.
ಒಂದು ಕಡೆಗೆ ಇಂತಹವರಿದ್ದಾರೆ, ಪ್ರತಿ ಹೆಜ್ಜೆಯನ್ನೂ ಯೋಚನೆ ಮಾಡಿ ಇಡುವವರು.
ಈಗ ತಮ್ಮ ಉಳಿತಾಯಕ್ಕೆ ಧಕ್ಕೆಯಾಗಿರುವುದರಿಂದ ಆತಂಕಗೊಂಡಿದ್ದಾರೆ. ಮತ್ತೊಂದೆಡೆಗೆ,
ಅಂದರೆ ಎದುರಿನ ಕ್ಯಾಬಿನ್‌ನಲ್ಲಿ, ಜೋಗಿಂದರ್ ಸಿಂಗ್‌ನಂತಹ ವ್ಯಕ್ತಿ ಇದ್ದಾರೆ, ಅವರು
ಈಗಾಗಲೇ ಎಲ್ಲವನ್ನೂ ಖರ್ಚು ಮಾಡಿ ಭವಿಷ್ಯಕ್ಕಾಗಿ ಏನನ್ನೂ ಉಳಿತಾಯ ಮಾಡಿಲ್ಲ.
ಜೀವನವು ಹೀಗೆ ಮುಂದುವರಿಯುತ್ತದೆ. ಪ್ರತಿ ಹೊಸ ಪ್ಯಾಕೇಜ್‌ನಿಂದ ಅವರ ಆದಾಯವು
ಹೆಚ್ಚಾಗುತ್ತದೆ ಮತ್ತು ಸಾಲದಲ್ಲಿ ತೆಗೆದುಕೊಂಡ ಎಲ್ಲಾ ವಸ್ತುಗಳ ಕಂತುಗಳು ಸುಲಭವಾಗಿ
ಇತ್ಯರ್ಥವಾಗುತ್ತವೆ, ಮನೆಯ ಎಲ್ಲಾ ಖರ್ಚುಗಳು ಮತ್ತು ಅವರ ಅದ್ದೂರಿ ದುಂದುವೆಚ್ಚವೂ
ಹೀಗೆಯೇ ಮುಂದುವರಿಯುತ್ತದೆ ಎಂದು ಅವರು ಅಂದುಕೊಂಡಿದ್ದರು.
ಈ ಜನರು ಎಷ್ಟು ಸಣ್ಣ ಸಣ್ಣ ವಿಷಯಗಳಿಗೆ ಹೇಗೆ ಗಾಬರಿಯಾಗುತ್ತಾರೆ ಎಂಬುದನ್ನು
ನೋಡಿ ನನಗೆ ಒಂದು ಕ್ಷಣ ನಗು ಬಂತು. ನಾನು ಎಲ್ಲಿಂದ ಬಂದಿದ್ದೆನೋ, ಅಲ್ಲಿ ಜನರನ್ನು
ಅವರ ಬೇರುಗಳಿಂದ ಕಿತ್ತು ಬಿಸಾಡಲಾಗಿದೆ. ಕಾರ್ಪೊರೇಟ್ ಉದ್ಯೋಗಗಳಿಂದ
ಹೊರಹಾಕಲ್ಪಟ್ಟ ಈ ಜನರು ಎಲ್ಲೋ ತಮ್ಮ ಜೀವನೋಪಾಯವನ್ನು ಕಂಡುಕೊಳ್ಳುವರು.
ಆದರೆ ಭೂಮಿ ಬಿಟ್ಟು ಬೇರೇನೂ ಇಲ್ಲದವರು, ಎಲ್ಲಿಗೆ ಹೋಗುವರು? ಗಾಳಿ ನೀರು
ಬದಲಾದಾಗ, ಪ್ರತಿ ಜೀವಿಯು ಆ ಬದಲಾದ ಪರಿಸರದಲ್ಲಿ ತನ್ನನ್ನು ತಾನು ಜೀವಂತವಾಗಿ
ಇಟ್ಟುಕೊಳ್ಳುವುದಕ್ಕೆ ಉಪಾಯ ಹುಡುಕಿಕೊಳ್ಳುತ್ತದೆ. ಮುಂದಿನ ದಿನಗಳಲ್ಲಿ, ಮನುಷ್ಯರು
ಕೂಡ ಸ್ಥಳಾಂತರ ಮತ್ತು ಒಕ್ಕಲೆಬ್ಬಿಸುವಿಕೆಯನ್ನು ಸಹಿಸಿಕೊಳ್ಳಲು ಕಲಿಯುತ್ತಾರೆ ಎಂದು
ನನಗನಿಸುತ್ತದೆ.




*******

"ಹಡಗುಗಳು ಕೇವಲ ಸರಕುಗಳನ್ನು ಸಾಗಿಸಲು ಮಾತ್ರ ಎಂದು ಜನರು ಭಾವಿಸುತ್ತಾರೆ.
ಆದರೆ ಹಡಗು ಮನುಷ್ಯನನ್ನು ಒಂದು ಪ್ರಪಂಚದಿಂದ ಇನ್ನೊಂದು ಪ್ರಪಂಚಕ್ಕೆ ಕರೆದುಕೊಂಡು
ಹೋಗುತ್ತದೆ, ಒಂದು ವ್ಯವಸ್ಥೆಯಿಂದ ಇನ್ನೊಂದಕ್ಕೆ ಸಾಗಿಸುತ್ತದೆ ಮತ್ತು ಅದು ತಪ್ಪು ಕೈಗಳಿಗೆ
ಸಿಕ್ಕಿಬಿದ್ದರೆ ನಿರಂತರ ವಿನಾಶದ ವಾಹಕವೂ ಆಗಬಹುದು ಎಂದು ಹಲವರಿಗೆ ತಿಳಿದಿಲ್ಲ.”
ಕ್ಯಾಪ್ಟನ್ ದತ್ ಬಹಳ ಜೋರಾದ ಧ್ವನಿಯಲ್ಲಿ ತಮ್ಮ ಮಾತನ್ನು ಹೇಳಿದರು. ಅವರು
ತಿರುಗಿ ನನ್ನತ್ತ ನೋಡಿ ಸ್ವಲ್ಪ ಸಮಯ ಭಯಾನಕ ಕಣ್ಣುಗಳಿಂದ ದಿಟ್ಟಿಸಿದರು. ನಂತರ ತಮ್ಮ
ಬೆರಳನ್ನು ಗರ್ಜಿಸುವ ಸಮುದ್ರದ ಕಡೆಗೆ ಎತ್ತಿ ದೂರದ ಬದಿಯ ಕಡೆಗೆ ತೋರಿಸಿದರು.
"ಅಲ್ಲಿ ನೋಡು... ನಿನಗೆ ಕಾಣಿಸ್ತಾ ಇದೆಯಲ್ಲ... ಅಲ್ಲಿ ಮೆಡಿಟರೇನಿಯನ್ ಶಿಪ್ಪಿಂಗ್
ಕಂಪನಿಯ ಹಡಗು ನಿಂತಿದೆ. ಅದನ್ನು ಸೊಮಾಲಿಯಾ ದಂಡೆಗೆ ದೂರದಲ್ಲಿ ನಿಲ್ಲಿಸಿ,
ಬೃಹತ್‌ ಕ್ರೇನ್‌ಗಳ ಸಹಾಯದಿಂದ ಹಡಗಿನಲ್ಲಿ ತುಂಬಿದ ಹಾಲಿನ ಪುಡಿಯ ಚೀಲಗಳನ್ನು
ಮತ್ತು ಬೆಣ್ಣೆಯ ಡ್ರಮ್‌ಗಳನ್ನು ಸಮುದ್ರದಲ್ಲಿ ಎಸೆಯಲಾಗುತ್ತಿದೆ.
ನೋಡನೋಡುತ್ತಲೇ ಸಂಪೂರ್ಣ ನೆರವು ಸಾಮಗ್ರಿಯನ್ನು ಸಮುದ್ರದಲ್ಲಿ
ಮುಳುಗಿಸಲಾಯಿತು. ಈ ನೆರವನ್ನು ಕ್ಷಾಮ ಸಂತ್ರಸ್ತರಿಗೆ ಉಚಿತವಾಗಿ ವಿತರಿಸಿದ್ದರೆ ವಿಶ್ವ
ಮಾರುಕಟ್ಟೆಯಲ್ಲಿ ಡೆನ್ಮಾರ್ಕ್‌ ಡೈರಿ ಉತ್ಪನ್ನಗಳ ಮೌಲ್ಯ ಕುಸಿಯುತ್ತಿತ್ತು. ಮೌಲ್ಯ
ಕುಸಿಯದಂತೆ ಉಳಿಸುವುದು ಅವರಿಗೆ ಬಹಳ ಮುಖ್ಯವಾಗಿತ್ತು. ಯೂನಿಸೆಫ್ ಧ್ವಜದ ಕೆಳಗೆ
ನಾನು ಆ ರಾತ್ರಿ ಕಂಡದ್ದು ಸಾಮೂಹಿಕ ಹತ್ಯಾಕಾಂಡಕ್ಕಿಂತಲೂ ಕಡಿಮೆ ಏನಿರಲಿಲ್ಲ. ಅನೇಕ
ಪ್ರಮುಖ ಜನಾಂಗ ಆಧಾರಿತ ಸಾಮೂಹಿಕ ಹತ್ಯಾಕಾಂಡಗಳನ್ನು ಇತಿಹಾಸದಲ್ಲಿ
ಉಲ್ಲೇಖಿಸಲಾಗಿದೆ. ಇದು ನನ್ನ ಮುಂದೆ ನಡೆಯುತ್ತಿರುವ ಮೊದಲ ಆರ್ಥಿಕ ಆಧಾರಿತ
ಹತ್ಯಾಕಾಂಡವಾಗಿತ್ತು, ನಾನು ರಾತ್ರಿಯಿಡೀ ಕ್ರೇನ್‌ಗಳ ಆ ರಾಕ್ಷಸಕ್ರಿಯೆಗಳನ್ನು ನೋಡುತ್ತಿದ್ದೆ.
ಅವು ಸರಕುಗಳನ್ನು ನಾಶಪಡಿಸುವುದರ ಜೊತೆಜೊತೆಗೆ ಮನುಷ್ಯ ಮತ್ತು ಅವನ ಜೀವನವು
ಸುರಕ್ಷಿತವಾಗಿದ್ದ ಗಡಿಗಳನ್ನು ಸಹ ನಾಶಪಡಿಸುತ್ತಿದ್ದವು.
Profile Image for prasada asodu.
91 reviews16 followers
July 2, 2025
ಎರಡು ‘ಬಲ’ಗಳ ನಡುವೆ ಸಿಕ್ಕಿ ಕಣ್ಮರೆಯಾಗುವ ಉಸಿರುಗಳ ಮನುಷ್ಯತ್ವದ ಕತೆಯನ್ನ ಬತ್ಸಾರ್‍ನ ಹುಡುಗನ ಮೂಲಕ ಹೇಳೊ ಹಿಂದಿಯಿಂದ ಕನ್ನಡಕ್ಕೆ ಬಂದ ಕಾದಂಬರಿ. ಒಂದು ತರಹ ‘ಮೌನ’ವಾಗೇ ಉಳಿದ ಕತೆ ಅನ್ನಬಹುದೇನೋ.
ಕಾದಂಬರಿಯ ಮೊದಲ ಸುಮಾರು ಅರವತ್ತು ಪುಟಗಳು, ಹುಡುಗ ತನ್ನ ಊರಿಗೆ ವಾಪಸ್ ಬರುವವರೆಗೂ, ಓದಲು ಸ್ವಲ್ಪ ಕಷ್ಟವೆನಿಸಿತು. 'ಈ ಹು���ುಗ ಯಾಕೆ ಇಷ್ಟು ಅನುಮಾನ ಮತ್ತು ದ್ವಂದ್ವದಲ್ಲೇ ಬದುಕುತ್ತಿದ್ದಾನೆ?' ಅನಿಸ್ತಿತ್ತು. ಆಮೇಲೆ ಶುರುವಾಗೋ ಊರು, ಜನ್ರು, ನಕ್ಸಲರು, ಮಾವೋವಾದಿಗಳು, ಸೈನಿಕರು, ಪೋಲಿಸ್ರು, ಗೆರಿಲ್ಲಾ ದಾಳಿಗಳು, ಸಶಸ್ತ್ರ ಪೊಲೀಸರೆಲ್ಲ ಯಾವುದೇ ಭಾರತದ ಮೂಲೆಯಲ್ಲಿ ಸಿಕ್ಕಿ ನರಳುವ ಕವನಗಳು ಅನಿಸುವಂತೆ ಓದಿಸಿಕೊಂತು. ಭಾರತದ ಹೃದಯಭಾಗದ ಒಂದು ಸಮುದಾಯದ, ಪರಿಸರದ, ಮತ್ತು ಅದಕ್ಕಾಗಿ ನಡೆಯುವ ಹೋರಾಟ ಅಯ್ಯೋ ಅನಿಸುತ್ತೆ. ಸಾಧಾರಣ ಕಾಲ್ಪನಿಕ ಕಾದಂಬರಿಗಳು, ಕತೆಗಳು ನಕ್ಸಲರ ವಿಷಯದಲ್ಲಿ ಬಂದಾಗ ಅಷ್ಟಾಗಿ ಇಷ್ಟ ಆಗದ ನನಗೆ ಅನಾಮಧೇಯ ಹುಡುಗನ ಮೂಲಕ ಹಿಂಸೆ, ವಿನಾಶ, ಮಾವೋವಾದಿ ಚಳುವಳಿಯ ಈ ಕಾದಂಬರಿ ಇಷ್ಟವಾಯಿತು. ಸರ್ಕಾರ, ಅಭಿವೃದ್ದಿ, ರಾಜಕೀಯದತ್ತ ಕೈಮಾಡುವ ಈ ಕಾದಂಬರಿ ಎಷ್ಟು ಸರಿಯೋ ತಪ್ಪೋ ಗೊತ್ತಿಲ್ಲ; ಆದ್ರೆ ಇಲ್ಲಿ ಬಂದ ಪಾತ್ರಗಳು ಎಷ್ಟೋ ಜನರ ‘ಮೌನ’ಗಳಾಗಿ ಸತ್ಯ ಅನಿಸ್ತು.
ಅನುವಾದ ಆರಾಮಾಗಿ ಅಡೆತಡೆ ಇಲ್ದೇ ಓದಿಸಿಕೊಂಡು ಹೋಯ್ತು. ಚೆನ್ನಾಗಿದೆ. ಓದಿ. ಜೈ.
Displaying 1 - 2 of 2 reviews