ಪಾರ್ವತಿ ಜಿ.ಐತಾಳ ಅವರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕ ಎಂಬ ಹಳ್ಳಿಯಲ್ಲಿ ಜುಲೈ 23, 1957ರಂದು ಜನಿಸಿದರು..ಪಾರ್ವತಿ ಅವರು ಅನೇಕ ಸಣ್ಣ ಕಥೆ, ಕವನ, ನಾಟಕ ಬರೆದಿರುವರಾದರೂ, ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉದ್ಯೋಗದೊಂದಿಗೆ ಉದಯವಾಣಿ, ಮುಂಗಾರು ಇತ್ಯಾದಿ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದರು. ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳ ಭಾಷೆಯನ್ನು ಕಲಿತು, ಕನ್ನಡದೊಂದಿಗೆ ಹಿಂದಿ, ಇಂಗ್ಲಿಷ್, ಮಲಯಾಳ, ತುಳು ಭಾಷೆಗಳನ್ನು ಕಲಿತು ಪಂಚಭಾಷಾಪ್ರವೀಣೆಯಾಗಿದ್ದಾರೆ. ಅವರ ಕೆಲವು ಪ್ರಕಟಿತ ಕೃತಿಗಳು ಹೊನ್ನ ಬೆಳಕೆ ಬಾ (ಕವನ ಸಂಕಲನ), ನಾನು ಗೃಹಲಕ್ಷ್ಮಿ, ನಾನೇನು ಮಾಡಲಿ, ಹೆಣ್ಣು ಮಗಳು, ವನಮಾಲ ಕೀಲುಗೊಂಬೆ, ಮೂಕ ಹಕ್ಕಿ. ‘ಜೀವಿಕ್ಯಾನ ಮರನ್ನು ಪೋಯ ಸ್ತ್ರೀ’ ಕಾದಂಬರಿ ಕನ್ನಡಕ್ಕೆ ಪಟ ತೆರೆಯುವ ಮುನ್ನ ಕೃತಿಯಾಗಿ ಅನುವಾದಿಸಿದ್ದಾರೆ. ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಮಲ್ಲಿಕಾ ದತ್ತಿನಿಧಿ ಪ್ರಶಸ್ತಿ, ಗೋವಿಂದರಾವ್ ಸ್ಮಾರಕ ಕಾದಂಬರಿ ವಿಮರ್ಶಾ ಬಹುಮಾನ, ಎಚ್.ವಿ. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ಸಂದಿವೆ.
1981ರಲ್ಲಿ ಮೈಸೂರಿನ ಮಾನಸಗಂಗೋತ್ರಿಯಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದರು. 2012ರಲ್ಲಿ ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದರು.
ತುಂಬಾ ಸಲ ಆತ್ಮಕಥೆಗಳ ಓದುವಾಗಲೇ ಇದರಲ್ಲಿ ಸುಳ್ಳು ತುಂಬಿದೆ ಎಂದೋ ,ಆತ್ಮರತಿ ತುಂಬಿದೆ ಎಂದೋ ಅನಿಸಿ ಬೇಸರವಾಗುತ್ತದೆ. ಕೆಲವೇ ಕೆಲವು ಆತ್ಮಕಥೆಗಳು ಇದ್ದದ್ದನ್ನು ಇದ್ದ ಹಾಗೆ ನಿರ್ಲಿಪ್ತ ಭಾವದಲ್ಲಿ ಬರೆಯಲ್ಪಟ್ಟಿದೆ. ಕನ್ನಡದಲ್ಲಿ ಶಶಿಧರ ವಿಶ್ವಾಮಿತ್ರರ 'ಸಂಚಿ' ಯಂತಹ ಆತ್ಮಕಥೆ ಬರಿಯ ಆತ್ಮಕಥೆ ಆಗದೆ ಕ್ಷಯದ ವಿರುದ್ಧದ ಸಂಶೋಧನೆಯ ಹೊಳಹುಗಳನ್ನೂ ಹೊಂದಿದೆ. ಮಾಸ್ತಿಯವರ ' ಭಾವ' ಮೂರು ಸಂಪುಟಗಳು ಆ ಕಾಲದ ಸಮಾಜದ ದಟ್ಟ ಪರಿಚಯವನ್ನೂ ಮಾಡಿಕೊಡುತ್ತದೆ. ' ಭಿತ್ತಿ' ಹೋರಾಟದ ಬದುಕಿನ ಪರಿಚಯ ಮಾಡಿಕೊಡುತ್ತದೆ.
ಹೀಗೆ ಹತ್ತು ಹಲವು ಶ್ರೇಷ್ಠ ಆತ್ಮಕತೆಗಳು ಕನ್ನಡಕ್ಕೆ ದಕ್ಕಿವೆ. ಅಂತಹ ಸಾಲಿನಲ್ಲಿ ನಿರ್ವಿವಾದವಾಗಿ ಸೇರಬಲ್ಲ ಕೃತಿ ಇದು.
ಈ ಕೃತಿ ನನಗೆ ಇನ್ನಷ್ಟು ಇಷ್ಟವಾಗಲು ಕಾರಣ ಕೃತಿಯ ಲೇಖಕಿ ನಾನು ಬೆಳೆದ ಪರಿಸರದವರು.ಹಾಗಾಗಿ ಅವರ ಬಾಲ್ಯದ ಚಿತ್ರಣ ನನ್ನ ಮನೆಯದ್ದೇ ಅನಿಸಿ ನೆನಪಿನ ದೋಣಿಯಲ್ಲಿ ಕೂತು ಹುಟ್ಟು ಹಾಕುವಂತಾಯಿತು.
ಬಾಲ್ಯದ ,ಯೌವ್ವನದ, ವೃತ್ತಿ ಬದುಕಿನ, ಸಂಸಾರದ ಚಿತ್ರಣ ಅತ್ಯಂತ ಪ್ರಾಮಾಣಿಕವಾಗಿ ಮತ್ತು ಸಂಯಮದಿಂದ ಮೂಡಿ ಬಂದ ಹಾಗೆ ಅನಿಸಿತು.
ಓದುವಾಗಲೇ ಇದರಲ್ಲಿ ಒಂಚೂರು ಉತ್ಪ್ರೇಕ್ಷೆ ಇಲ್ಲ ಎಂದು ಅನಿಸಿದಂತಹ ಆತ್ಮಕಥೆ.
ಪಾರ್ವತೀ ಐತಾಳರ ನೆನಪಿನ ಶಕ್ತಿಗೆ ಭೇಷ್ ಅನ್ನಲೇ ಬೇಕು . ಕೆಲವು ಬಾಲ್ಯದ ಘಟನೆಗಳು ಅವರ ನೆನಪಿನಲ್ಲಿ ಹೇಗೆ ಮರೆಯದೆ ಉಳಿದಿದೆ ಅನ್ನೋದೇ ಆಶ್ಚರ್ಯ ...ಅವರು ಅವರ ಬಾಲ್ಯ , ಯೌವನ, ಶಾಲೆ, ಕಾಲೇಜು, ವೃತ್ತಿ , ಗೃಹಸ್ತಾಶ್ರಮ , ಸಾಹಿತ್ಯ ಬರವಣಿಗೆ ಎಲ್ಲವನ್ನು ನಿರ್ಭೀಡೆ ಇಂದ ಬರೆದಿದ್ದಾರೆ. ಎಲ್ಲೂ ಉತ್ಪ್ರೇಕ್ಷೆ ಅನ್ನಿಸಲಿಲ್ಲ . ಅವರ ಸಾಹಿತ್ಯದ ಬಗ್ಗೆ ಇನ್ನು ಒಂಚೂರು ಹೇಳಿಕೊಳ್ಳ ಬಹುದಿತ್ತೇನೊ ಎಂಬೊದು ನನ್ನ ಅಭಿಪ್ರಾಯ.