Jump to ratings and reviews
Rate this book

ಕೊಪ್ಪರಿಗೆ ಮನೆ | Kopparige Mane

Rate this book
A Novel

400 pages, Paperback

Published January 1, 2024

6 people want to read

About the author

N. Mogasale

18 books2 followers
ನಾ.ಮೊಗಸಾಲೆ ಎನ್ನುವ ಹೆಸರಿನಲ್ಲಿ ಓದುಗರಿಗೆ ಪರಿಚಿತರಾದ ಡಾ| ನಾರಾಯಣ ಭಟ್ಟ, ಮೊಗಸಾಲೆ ಇವರು ಹುಟ್ಟಿದ್ದು ೧೯೪೪ ಅಗಸ್ಟ ೨೭ ರಂದು. ಅವರು ಹುಟ್ಟಿದ ಊರು ಸಾರ್ಕುಡೇಲು ಮನೆ. ಈ ಗ್ರಾಮ ಇದೀಗ ಕಾಸರಗೋಡು ಜಿಲ್ಲೆಯ ಕೇರಳ ರಾಜ್ಯದಲ್ಲಿ ಮಂಜೇಶ್ವರದ ಹತ್ತಿರ ಇದೆ. ೧೯೪೯ರಲ್ಲಿ ತಂದೆ ತೀರಿಕೊಂಡದ್ದರಿಂದ ಮೊಗಸಾಲೆಯವರು ಚಿಕ್ಕಪ್ಪನ ಸುಪರ್ದಿನಲ್ಲಿ ಬೆಳೆದರು. ೧೯೬೧ರಲ್ಲಿ ಎಸ್.ಎಸ್.ಸಿ. ಪರೀಕ್ಷೆಯಲ್ಲಿ ತೇರ್ಗಡೆಯಾದ ಬಳಿಕ, ಉಡುಪಿಯ ಆಯುರ್ವೇದ ಕಾಲೇಜಿನಲ್ಲಿ ಕಲಿತು, ೧೯೬೫ರಲ್ಲಿ ಡಿ.ಎಸ್.ಸಿ.ಎ. ಪದವಿಯನ್ನು ಪಡೆದರು.

ಬರವಣಿಗೆ ಸಂಘಟನೆಗಳ ಮೂಲಕ ನಾ.ಮೊಗಸಾಲೆಯವರು ಕನ್ನಡ ಸಾಹಿತ್ಯಕ್ಕೆ ಬಹುಮುಖ ಸೇವೆ ಸಲ್ಲಿಸಿದ್ದಾರೆ.

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
1 (50%)
4 stars
1 (50%)
3 stars
0 (0%)
2 stars
0 (0%)
1 star
0 (0%)
Displaying 1 - 2 of 2 reviews
173 reviews22 followers
September 28, 2025
#ಪುಸ್ತಕಪರಿಚಯ_೪
#ಅಕ್ಷರವಿಹಾರ_೨೦೨೫
ಕೃತಿ: ಕೊಪ್ಪರಿಗೆ ಮನೆ
ಲೇಖಕರು: ನಾ. ಮೊಗಸಾಲೆ
ಪ್ರಕಾಶಕರು: ಸಾಹಿತ್ಯ ಪ್ರಕಾಶನ,ಹುಬ್ಬಳ್ಳಿ

ನಾ. ಮೊಗಸಾಲೆಯವರ ಪುಸ್ತಕಗಳ ಓದು ನನಗೆ ಆಪ್ಯಾಯಮಾನ. ಓದಿನಲ್ಲಿ ತನ್ಮಯತೆ, ಏಕಾಗ್ರತೆಯನ್ನು ಸಾಧಿಸಲು ಹೆಚ್ಚಿನ ಪರಿಶ್ರಮ ಬೇಕಾಗಿಲ್ಲ ಎನ್ನುವುದು ಪ್ರಮುಖ ಕಾರಣ. ಕೃತಿಯಲ್ಲಿಯ ಸೀತಾಪುರ,ರಾಮಪುರ,ಗುತ್ತು ಬರ್ಕೆ, ಪೈಗಳು,ಶೆಟ್ಟರು,ಆಳ್ವರು,ಮಾಂಕು,ಚೀಂಕ್ರ ಮೊದಲಾದ ಸ್ಥಳನಾಮಗಳು ಮತ್ತು ವ್ಯಕ್ತಿ ನಾಮಗಳು ಸೀದಾ ಕತೆಯೊಳಕ್ಕೆ ಸೆಳೆದು ಬಿಡುತ್ತವೆ, ನಾನು ಹುಟ್ಟಿ ಬೆಳೆದ ಪರಿಸರದ ಕಾರಣವಾಗಿ ಈ ಹೆಸರುಗಳು ಪ್ರವೇಶಿಕೆಯನ್ನು ಇನ್ನಷ್ಟು ಸರಳವಾಗಿಸುತ್ತವೆ. ಪ್ರಸ್ತುತ ಕೃತಿಯಲ್ಲಿ ಸರಿಸುಮಾರು 1870-1930ರ ವರೆಗಿನ ಹವ್ಯಕ ಸಮಾಜದ ಕತೆಯು ಎರಡು ತಲೆಮಾರುಗಳ ಮೂಲಕ ಓದುಗರೆದುರು ಅನಾವರಣಗೊಳ್ಳುತ್ತದೆ.

ಸೀತಾಪುರದ ಶಂಕರಭಟ್ಟರು ಊರಿನ ಪಟೇಲರು ಮತ್ತು ಅಲ್ಲಿನ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೋಕೆಸ್ತರರು ಹೌದು. ವಾರ್ಷಿಕ ಉತ್ಸವದ ದಿನದ ದೇವರ ನುಡಿಯಂತೆ ಮುಳಿಹುಲ್ಲಿನ ಛಾವಣಿಯನ್ನು ತೆಗೆಸಿ ಮಂಗಳೂರು ಹೆಂಚು ಹೊದಿಸುವ ಮೂಲಕ ಪ್ರಾರಂಭವಾಗಿ, ಅವರ ಮಗನ ಕಾಲದಲ್ಲಿ ಅದೇ ದೇವಸ್ಥಾನಕ್ಕೆ ಸಂಬಂಧಪಟ್ಟ ದೈವಸ್ಥಾನದ ಛಾವಣಿಗೆ ಹೆಂಚು ಹೊದಿಸುವವರೆಗೆ ಹೋಗುತ್ತದೆ. ತನ್ನ ಒಕ್ಕಲು ಮಕ್ಕಳ ಸಹಕಾರ, ಊರಿನ ಗುತ್ತುಮನೆಯ ಸಹಕಾರದ ಜೊತೆಗೆ ತನ್ನ ಆಸ್ತಿಯನ್ನು ಪರಭಾರೆ ಮಾಡುವ ಮೂಲಕ ಆ ಕುಟುಂಬವು ದೇವರ ಮೇಲಿನ ಶ್ರದ್ಧೆಯನ್ನು ನಂಬಿಕೆಯನ್ನು ಸ್ಥಿರಗೊಳಿಸುತ್ತದೆ. ಇಂದಿಗೂ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಯಾಣ ಮಾಡುವಾಗ ರಸ್ತೆಬದಿಯಲ್ಲಿ ಸಾಲು ಸಾಲು ದೇವಸ್ಥಾನಗಳ ಜೀರ್ಣೋದ್ಧಾರ ಬ್ರಹ್ಮಕಲಶದ ಫಲಕಗಳನ್ನು ಕಾಣಬಹುದು, ಆದರೆ ಸುಮಾರು ನೂರು ನೂರಿಪ್ಪತ್ತು ವರ್ಷಗಳ ಹಿಂದೆ ಈ ಕೆಲಸವನ್ನು ಮಾಡಲು ಯಾವ ತರಹದ ಸವಾಲುಗಳಿದ್ದವು ಎನ್ನುವುದು ವಿವರವಾಗಿ ತೆರೆದುಕೊಳ್ಳುತ್ತದೆ. ಇಂದು ಎಲ್ಲದರಲ್ಲೂ ಎಲ್ಲೆಂದರಲ್ಲೂ ಧಾವಂತವು ಇದ್ದರೆ ಅಂದಿನ ಕಾಲಮಾನದಲ್ಲಿ ನಿಧಾನವೇ ಪ್ರಧಾನ ಎಂಬಂತಹ ಜೀವನಶೈಲಿಯ ಚಿತ್ರಣವಿದೆ. ದೇವಸ್ಥಾನ ಮತ್ತು ದೈವಸ್ಥಾನದ ಕತೆಯನ್ನು ಓದುವಾಗ,ಕಣ್ಣೆದುರು ಪುಸ್ತಕದಲ್ಲಿ ಒಂದು ಕತೆಯು ನಡೆಯುತ್ತಿದ್ದರೆ, ನನ್ನ ಮನಃಪಟಲದಲ್ಲಿ ನಾನು ನೋಡಿದ, ಕೇಳಿದ ಮತ್ತು ನನ್ನ ಅನುಭವಕ್ಕೆ ಬಂದ ಕತೆಗಳು ಮುನ್ನೆಲೆಗೆ ಬಂದು ಒಂದು ತರಹದ ವಿಶಿಷ್ಟವಾದ ಅನುಭವವನ್ನು ಉಂಟುಮಾಡಿತು.

ಇನ್ನು ಕತೆಯಲ್ಲಿ ಗಮನಸೆಳೆದ ಅಂಶವೆಂದರೆ ಸ್ತ್ರೀ ಪುರುಷ ಸಮಾನತೆಯ ಕುರಿತಾದ ಒಂದೆರಡು ಮಾತುಗಳು. ತನ್ನಿಬ್ಬರು ಹೆಣ್ಣು ಮಕ್ಕಳಲ್ಲಿ ಒಬ್ಬಳು ಗಂಡನಿಂದ ತಿರಸ್ಕೃತಳಾಗಿ ತವರಿಗೆ ಬಂದರೆ, ಇನ್ನೊಬ್ಬಳು ಗಂಡ ತೀರಿಕೊಂಡು ತವರು ಸೇರುತ್ತಾಳೆ. ಆ ಬಗ್ಗೆ ಕೇವಲ ದುಃಖ ಮಾತ್ರ ವ್ಯಕ್ತಪಡಿಸಿ ವಿಧಿಯನ್ನು ದೂರುವ ಶಂಕರಭಟ್ಟರ ಸಂಸಾರ, ಮಗನಾದ ಕೇಶವಭಟ್ಟರ ಹೆಂಡತಿ ಸತ್ತಾಗ ಮಗನನ್ನು ಮರು ಮದುವೆಗೆ ಸ್ವತಃ ತಾಯಿಯೇ ಒತ್ತಾಯಿಸುವುದು,ಆ ಸಂದರ್ಭದಲ್ಲಿ ಒಂದು ಗಂಡಿಗೆ ಒಂದು ಹೆಣ್ಣು ಜೀವ ಬೇಕೇ ಬೇಕೆಂದು ಹೇಳುವಾಗ ಅದೇ ವಿಚಾರ ತನ್ನ ಇಬ್ಬರು ಹೆಣ್ಣುಮಕ್ಕಳ ಬಗ್ಗೆ ಯಾಕೆ ಮೂಡಲಿಲ್ಲ ಎನ್ನುವುದು ಆಶ್ಚರ್ಯದ ವಿಚಾರ. ಸಾಮಾಜಿಕ ಕಟ್ಟುಪಾಡುಗಳಿದ್ದರೂ ಅವರ ಮನದಲ್ಲಿ ಸಹ ಆ ವಿಚಾರ ಮೂಡಿರುವುದು ದುರದೃಷ್ಟಕರ. ಮುಂದೆ ಕೇಶವಭಟ್ಟರು ಹೆಣ್ಣೊಬ್ಬಳ ಮೋಹದಲ್ಲಿ ಸಿಲಕಿದಾಗ ವಿಧವೆಯಾದ ಅವರ ಅಕ್ಕ ಮೌನವಾಗಿ ಸಮ್ಮತಿ ಸೂಚಿಸುವುದು ಸಹ ಗಂಡು ಹೆಣ್ಣೆಂಬ ಬೇಧವಿಲ್ಲದ ಆ ಕಾಲದ ಮನಸ್ಥಿತಿಯನ್ನು ಪ್ರತಿಫಲಿಸುತ್ತದೆ.

ಇನ್ನು ಮೂರನೆಯ ಭಾಗದಲ್ಲಿ ದೇಶದೆಲ್ಲೆಡೆ ಸ್ವಾತಂತ್ರ್ಯ ಚಳುವಳಿಯ ಕಾವು ಏರುಗತಿಯನ್ನು ಪಡೆಯುವ ಹೊತ್ತಿನಲ್ಲಿ ಸ್ವಾಭಾವಿಕವಾಗಿ ಅದು ಸೀತಾಪುರವನ್ನು ಸಹ ಪ್ರವೇಶಿಸುತ್ತದೆ. ಇಂದು ನಾವು ಕೇವಲ ಗಾಂಧೀಜಿಯವರಿಂದ ಮಾತ್ರ ಸ್ವಾತಂತ್ರ್ಯ ದೊರಕಲಿಲ್ಲ, ಇನ್ನು ಹಲವು ಮಹಾತ್ಮರು ಅದಕ್ಕಾಗಿ ತಮ್ಮ ತಮ್ಮ ಕೊಡುಗೆಗಳನ್ನು ನೀಡಿದ್ದಾರೆ ಎಂಬ ಚರ್ಚೆಯನ್ನು ನಡೆಸುವ ಕಾಲಘಟ್ಟದಲ್ಲಿ ಇದ್ದೇವೆ. ಅದರ ಸರಿ ತಪ್ಪುಗಳು ಬೇರೆ ವಿಷಯ. ಇಲ್ಲಿ ಮುಖ್ಯವಾಗಿ ನನಗೆ ಅನಿಸಿದ್ದು, ಇಂತಹಾ ಮುಂಚೂಣಿಯ ನಾಯಕರುಗಳಿಂದ ಪ್ರಭಾವಿತರಾಗಿ ಯಾವುದೋ ಶಾಲೆಯ ಮೇಸ್ಟ್ರು, ಯಾರೋ ಒಬ್ಬ ದೊಡ್ಡ ಹಿಡುವಳಿದಾರ,ಒಬ್ಬ ಸಣ್ಣ ಜವಾನ ಅಥವಾ ಯಾವುದೋ ಶಾಲೆ ಕಾಲೇಜಿನ ವಿದ್ಯಾರ್ಥಿ ತಳಮಟ್ಟದಲ್ಲಿ ನಡೆಸಿದ ಕಾರ್ಯಾಚರಣೆ, ಅವರು ಮೂಡಿಸಿದ ಅರಿವು ಮತ್ತು ತ್ಯಾಗಗಳ ಕುರಿತಾಗಿ ಒಂದು ಬಾರಿಯೂ ಯೋಚಿಸಲಿಲ್ಲವಲ್ಲ ಎಂದು ಯೋಚನೆ ಮನಸ್ಸಿನಲ್ಲಿ ಮೂಡಿತು. ಈ ತಳಮಟ್ಟದ ಕಾರ್ಯಕರ್ತರು ತಮಗೆ ದೊರೆತ ಅವಕಾಶದಲ್ಲಿ, ಸಿಕ್ಕಿದ ವೇದಿಕೆಗಳಲ್ಲಿ ಸ್ವಾತಂತ್ರ್ಯದ ಬಗೆಗಿನ ಅರಿವನ್ನು ಮೂಡಿಸಿ ದೊರಕಿಸಿಕಂಡ ಸ್ವಾತಂತ್ರ್ಯದ ಬಗೆಗೆ ಇಂದು ತಳೆದಿರುವ ಅಸಡ್ಡೆಯನ್ನು ಗಮನಿಸುವಾಗ ಒಂದು ಬಗೆಯ ವಿಷಾದವುಂಟಾಗುತ್ತದೆ.

ಒಟ್ಟಿನಲ್ಲಿ ಈ ಕಾದಂಬರಿಯು ಒಂದು ಕೌಟುಂಬಿಕ ವಾತಾವರಣದ ಮೂಲಕ ಒಟ್ಟು ಸಮಾಜದ ಒಂದು ರಾಷ್ಟ್ರದ ಒಂದು ಕಾಲಘಟ್ಟದ ಚಿತ್ರಣವನ್ನು, ಉನ್ನತಿ ಅವನತಿಗಳನ್ನು, ಸಾಮಾಜಿಕ ಪಲ್ಲಟಗಳನ್ನು, ಹಂತಹಂತವಾಗಿ ಒಂದು ಸಮಾಜ ಅಥವಾ ದೇಶ ಹಲವಾರು ಮಜಲುಗಳನ್ನು ದಾಟಿ ಆಧುನಿಕತೆಗೆ ತೆರೆದುಕೊಳ್ಳುವ ಸುಂದರ ಚಿತ್ರಣವು ಕೃತಿಯಲ್ಲಿದೆ. ಬಹಳ ತೃಪ್ತಿದಾಯಕ ಓದು…

ನಮಸ್ಕಾರ,
ಅಮಿತ್ ಕಾಮತ್
Profile Image for Karthikeya Bhat.
109 reviews13 followers
August 23, 2025
ಕೊಪ್ಪರಿಗೆ ಮನೆ
ಡಾ॥ ನಾ ಮೊಗಸಾಲೆ

ಕೊಪ್ಪರಿಗೆ ಮನೆ ೧೮೭೦ ರಿಂದ ೧೯೩೦ರ ನಡುವೆ ತುಳುನಾಡು ಹಾಗು ಕಾಸರಗೋಡಿನ ಭಾಗದ ಅದರಲ್ಲೂ ಹವ್ಯಕ ಸಮುದಾಯದ ವಿವರಗಳನ್ನು ಒಳಗೊಂಡಿರುವ ಕಾದಂಬರಿ. ಈ ಕಾದಂಬರಿಯು ಎರಡು ತಲೆಮಾರಿನ ಕಥೆಯನ್ನು ಹೇಳುತ್ತದೆ. ಒಂದು ತಲೆಮಾರಿನ ಕೊಪ್ಪರಿಗೆ ಮನೆಯ ಶಂಕರ ಭಟ್ಟರದ್ದು ಮತ್ತೊಂದು ಅವರ ಮಗ ಕೇಶವ ಭಟ್ಟರದ್ದು. ಈ ಕಾದಂಬರಿಯಲ್ಲೂ ಸಹ ಸೀತಾಪುರ ಹಾಗು ದುರ್ಗಾಪರಮೇಶ್ವರಿ ದೇವಲಾಯವೇ ಕೇಂದ್ರವಾಗಿದೆ. ಕೇಶವ ಭಟ್ಟರ ಕಾಲದಲ್ಲಿ ಗಾಂಧೀಯ ಪ್ರಭಾವ ಸ್ವಾತಂತ್ರ ಚಳುವಳಿಯಲ್ಲಿ ಪಾಲ್ಗೊಳ್ಳಲು ಎಷ್ಟು ಪ್ರಭಾವ ಬೀರುತ್ತೆಂದರೆ ಕಾದಂಬರಿ ಓದುತ್ತಾ ಓದುತ್ತಾ ಆಶ್ಚರ್ಯವಾಗುತ್ತದೆ. ಇಲ್ಲಿ ಎಲ್ಲೂ ಗಾಂಧೀ ಕಾಣಿಸಿಕೊಳ್ಳುವುದಿಲ್ಲ, ಆದರೆ ಅವರ ಆದರ್ಶಗಳು, ಅದನ್ನನುಸರಿಸುವ ವ್ಯಕ್ತಿಗಳು, ಸ್ವಾತಂತ್ರ ಗಳಿಸಲು ನಡೆಸುವ ಹೋರಾಟಗಳು ಕಂಡುಬರುತ್ತವೆ. ಗಾಂಧೀಯ ಪ್ರಭಾವ ಎಷ್ಟೆಂದರೆ ಸ್ವಾತಂತ್ರಕೋಸ್ಕರ ತನ್ನಲ್ಲಿರುವ ಚಿನ್ನವನ್ನು ಸ್ವಾತಂತ್ರ ನಿಧಿಗೆ ತುಂಬಿಸಲು ಹೊರಡುವ ಕಾವೇರಿಯಂತವರು, ಪಟೇಲಿಕೆ ವೃತ್ತಿಗೆ ರಾಜೀನಾಮೆ ಕೊಟ್ಟು ಬ್ರಿಟೀಷರ ಕೆಳಗೆ ಕೆಲಸಮಾಡುವುದನ್ನು ತ್ಯಜಿಸುವ ಕೇಶವ ಭಟ್ಟರು, ಟೊಪ್ಪಿ ಶಂಕರ ಭಟ್ಟರಂತವರು, ಓದಲು ಅವಕಾಶವಿದ್ದರೂ ಅದನ್ನೆಲ್ಲಾ ಮಧ್ಯದಲ್ಲೇ ಬಿಟ್ಟು ಸ್ವಾತಂತ್ರ ಹೋರಟಾಕ್ಕಿಳಿಯುವ ಯುವಕರೂ, ದೇವಸ್ಥಾನದಲ್ಲಿ ಹರಿಕಥೆ ಮಾಡಲು ಬಂದು ಬೊಲೇ ಭಾರತ್ ಮತಾಕಿ ಜೈ ಎಂದು ಸ್ವಾತಂತ್ರ ಚಳುವಳಿಯಲ್ಲಿ ಭಾಗವಹಿಸಲು ಜನರಲ್ಲಿ ಆಸಕ್ತಿ ಹುಟ್ಟಿಸುವಂತ ಪ್ರಯತ್ನಗಳು ಹಾಗು ಇನ್ನೂ ಹಲವು ಪ್ರಕರಣಗಳು ಈ ಕಾದಂಬರಿಯಲ್ಲಿ ಕಂಡುಬರುತ್ತದೆ.

ಈ ಕಾದಂಬರಿಯಲ್ಲಿ ಅಲ್ಲಲ್ಲಿ ತುಳುವಿನ ಪದಗಳು, ವಿಷು ಹಬ್ಬದಲ್ಲಿ ಕಣಿ ಇಡುವ ಆಚಾರ ವಿಚಾರಗಳು, ಆದಿನ ಗೇಣಿದಾರರು ಅಕ್ಕಿ ಮುಡಿಗಳನ್ನು ಅರ್ಪಿಸಿದಾಗ ಅವರಿಗೆ ಹಬ್ಬದೂಟದ ಪ್ರಸಂಗವು. ಶ್ರೀಮಂತಿಕೆಯನ್ನು ಜಮೀನು, ಜವಳಿಗಳಲ್ಲಿ ಗುರುತಿಸಲಾಗುತ್ತಿರಲಿಲ್ಲ, ಎಷ್ಟು ಅಕ್ಕಿ ಮುಡಿ ಗೇಣಿ ಬರುತ್ತದೆ ಎಂಬುದನ್ನು ಆಧಾರವಿಟ್ಟುಕೊಂಡು ಗುರುತಿಸುವುದರ ಕುರಿತು, ಬಂಟರಲ್ಲಿ ಅಳಿಯ ಸಂತಾನದ ಕಟ್ಟು, ಗುತ್ತಿನ ಸ್ಥಿರ ಆಸ್ತಿಗಳಿಗೆ ಹಾಗು ಆಡಳಿತಕ್ಕೆ ಯಜಮಾನಿಯೇ ಒಡತಿ ಹಾಗು ಇನ್ನಿತರೆ ಗುತ್ತಿನವರ ಸಂಪ್ರದಾಯಗಳ ಕುರಿತು, ದೇವಿಗೆ ಮಂಡಲಪೂಜೆಯ ವಿಧಿ ವಿಧಾನ, ಮಂದ್ರಾಯಿ, ದುರ್ಗಾಲಾಯಿ ಹಾಗು ಇನ್ನಿತರೆ ದೈವಗಳ ನೇಮದ ಕುರಿತು, ಕಂಬಳದ ವಿಶೇಷತೆಯ ಕುರಿತು ಹಾಗು ಮುನ್ನುಡಿಯಲ್ಲಿ ಹೇಳಿದ ಹಾಗೆ ಈ ಕಾದಂಬರಿಯು ಜಾತೀಯತೆ, ಅಸ್ಪೃಷ್ಯತೆ, ಶ್ರೀಮಂತಿಕೆ, ಮನೆತನದ ಪ್ರತಿಷ್ಠೆ, ದೇವರು ಹಾಗು ದೈವಗಳಲ್ಲಿರುವ ನಂಬಿಕೆ, ಮನುಷ್ಯನ ಜೀವನದಲ್ಲಿ ಎನೆಲ್ಲಾ ಘಟನೆಗಳು ನಡೆಯುತ್ತವೆಯೋ ಅದಕ್ಕೆ ಪರಿಸರವೇ ಕಾರಣವೆಂಬುದು, ವೈದ್ಯಪದ್ಧತಿ, ಪಟೇಲಿಕೆಯ ವ್ಯವಸ್ಥೆ, ದೇವಾಲಯದ ಜಾತ್ರೆ, ಭೂತಾರಾಧನೆ ವಿಧಿವಿಧಾನಗಳ ಕುರಿತು ಲೇಖಕರು ಈ ಕಾದಂಬರಿಯಲ್ಲಿ ಈ ಎಲ್ಲಾ ವಿವರಗಳ ಕುರಿತು ಚೆನ್ನಾಗಿ ವರ್ಣಿಸಿದ್ದಾರೆ.

ಶಂಕರ ಭಟ್ಟರ ಪಟೇಲಿಕೆಯ ಸಮಯದಲ್ಲಿ ಒಂದು ದಿವಸ ದೇವಸ್ಥಾನದ ಆವರಣದಲ್ಲಿ ಮಂಡಲಪೂಜೆಯ ಸಮಯದಲ್ಲಿ,ಬ್ರಹ್ಮವಾಹಕರಾದ ವಾಸುದೇವ ತಾಳಿತ್ತಾಯರು ಕೈಸನ್ನೆಗಳನ್ನು ಮಾಡುತ್ತಾ ದೇವಿಯ ಅಪ್ಪಣೆ ಎಂದು ಇಡೀ ಸಭೆಗೆ ಹಾಗು ಮುಖ್ಯವಾಗಿ ಪಟೇಲ ಶಂಕರಭಟ್ಟರಲ್ಲಿ *ದೇವಸ್ಥಾನ ಗರ್ಭಗುಡಿ ಹಾಗು ಗೋಪುರಗಳಿಗೆ ಮುಳಿಹುಲ್ಲು ಹೊದಿಸುವುದನ್ನು ನಿಲ್ಲಿಸಿ, ಬದಲಿಗೆ ಶಾಶ್ವತವಾದ ಸೂರನ್ನು ಮಾಡಿಸಬೇಕು ಎಂದು ದೇವಿಯ ಬಯಕೆಯಾಗಿದೆ* ಎಂಬುದರಿಂದ ಕಾದಂಬರಿ ಶುರುವಾಗುತ್ತದೆ. ಶಂಕರ ಭಟ್ಟರು ಪಟೇಲರಾದರೂ ಹೇಳಿಕೊಳ್ಳುವಷ್ಟು ಶ್ರೀಮಂತರಲ್ಲಾ ಹಾಗು ಅವರು ಬಡವರೂ ಅಲ್ಲ. ಆ ದಿನಗಳಲ್ಲಿ ಶ್ರೀಮಂತಿಕೆಯನ್ನು ಎಕರೆ , ಜಮೀನು ಇತ್ಯಾದಿಗಳಿಂದ ಗುರುತಿಸುವುದು ಕಡಿಮೆ, ಎಷ್ಟು ಮುಡಿ ಅಕ್ಕಿ ಗೇಣಿ ಬರುತ್ತದೆ? ಎಷ್ಟು ರೂಪಾಯಿ ಸರ್ಕಾರಕ್ಕೆ ತೀರ್ವೆ ಕಟ್ಟುತ್ತಾರೆ?ಎಂಬುದರಿಂದ ಅಳೆಯುತ್ತಿದ್ದರು, ಕೊಪ್ಪರಿಗೆ ಮನೆಯ ಶಂಕರ ಭಟ್ಟರ ಮನೆಗೆ ಗೇಣಿ ಎಷ್ಟು ಬರುತ್ತದೆ, ಗೇಣಿ ಬರುವ ಜಮೀನು ಎಷ್ಟಿದೆ ಎನ್ನುವುದು ಯಾರಿಗೂ ತಿಳಿದಿರಲಿಲ್ಲ. ಗೇಣಿದಾರರು ವರ್ಷಕ್ಕೊಮ್ಮೆ ಯುಗಾದಿ ಹಬ್ಬದ ದಿವಸ ಗೇಣಿ ಕೊಡುವುದು ರೂಢಿ, ಕೆಲವರು ತಪ್ಪಿಸಿದರೂ ಪಟೇಲರೂ ಅವರಿಗೆ ಕಾಲವಕಾಶಕೊಡುತ್ತಿದ್ದರು. ಇದರಿಂದ ಶಂಕರ ಭಟ್ಟರೆಂದರೆ ಗೇಣಿದಾರರಿಗೆ ಅಪಾರ ಪ್ರೀತಿ. ಶಂಕರ ಭಟ್ಟರ ಪತ್ನಿ ಗಂಗಮ್ಮ ಕೂಡ ಗಂಡನ ಧರ್ಮಕಾರಗಳಲ್ಲಿ ಸಹಭಾಗಿಯಾಗಿರುತ್ತಿದ್ದರು. ಈ ದಂಪತಿಗಳಿಗೆ ಮೂರು ಮಕ್ಕಳು, ಸರಸ್ವತಿ ಮದುವೆಯಾಗಿ ವರ್ಷದಲ್ಲೇ ಗಂಡನನ್ನು ಕಳೆದುಕೊಂಡು ತವರು ಮನೆಯಲ್ಲಿ ಕೆಂಪು ಸೀರೆ ಹುಡುವ ಇನ್ನೂ ೨೫ ವರ್ಷ ದಾಟದಿರುವ ಸರಸ್ವತಿಗೆ ಬಂದ ವಿಪತ್ತನ್ನು ಕಂಡು ಬೇಸರವಾಗುತ್ತದೆ, ಲಕ್ಷ್ಮಿ ಮದುವೆಯಾಗಿ ತನ್ನ ಗಂಡನು ಅನ್ಯಜಾತಿಯವಳನ್ನು ಇಡಿಸಿಕೊಂಡ ಕಾರಣ ಲಕ್ಷ್ಮಿಯನ್ನು ತ್ಯಜಿಸಿದ್ದನು, ಗಂಡನಿಂದ ದೂರವಾಗಿ ಅದೇ ಕೊರಗಿನಲ್ಲಿ ಲಕ್ಷ್ಮಿ ಆತ್ಮಹತ್ಯೆ ಮಾಡಿಕೊಂಡಾಗ ಪಟೇಲರು ಕುಗ್ಗಿ ಹೋಗುತ್ತಾರೆ. ಮಗ ಕೇಶವ ಭಟ್ಟರು ಶಾಲೆ ಮೆಟ್ಟಲೇರಿದರೂ ಆರನೆ ತರಗತಿಗೆ ನಾಂದಿ ಹಾಡಿ ವ್ಯವಸಾಯ, ದೇವಸ್ಥಾನದ ಕೆಲಸಗಳಲ್ಲಿ ತಂದೆಗೆ ನೆರವಾಗುತ್ತಾರೆ. ಲಕ್ಷ್ಮಿ ಹಾಗು ಸರಸ್ವತಿ ಜೀವನದಲ್ಲಿ ನಡೆದ ಘಟನೆಗಳು ಗಂಗಮ್ಮ ಶಂಕರ ಭಟ್ಟರಿಗೆ ಮರೆಯಲು ಸಾಧ್ಯವಾಗದೆ ದಿನಾ ಕೊರುಗುತ್ತಾರೆ.

ದೇವಸ್ಥಾನಕ್ಕೆ ಹಂಚು ಹೊದೆಸಲು ಊರಿನ ಜನರು, ಮಿತ್ತುಬೈಲು ಗುತ್ತಿನಾರರು ಸಹಾಯ ಮಾಡಿದರೂ ಅದು ಅತ್ಯಲ್ಪ ಕಾಣಿಕೆಯೆ, ಹಂಚು ಹೊದೆಸಲು ತಮ್ಮಲ್ಲಿರುವ ಅಕ್ಕಿಮಡಿಗಳು, ನಗ ನಾಣ್ಯ, ಕಷ್ಟಬಂದಾಗ ನೆರವಾಗಬಹುದೆಂದು ಬೆಳ್ಳಿ ನಾಣ್ಯಗಳನ್ನು ಭದ್ರವಾಗಿ ಕಾಪಾಡಿಕೊಂಡು ಬಂದ ಪತ್ನಿ ಗಂಗಮ್ಮನ ಹಣ ಹಾಗು ತಮ್ಮ ಜಮೀನನ್ನೇ ಪಣಕ್ಕಿಟ್ಟು ಮೊದಲಬಾರಿಗೆ ತಮ್ಮ ಜೀವನದಲ್ಲಿ ಸಾಲತೆಗೆದುಕೊಂಡು ಆ ಸಾಲ ತೀರಿಸಲಾಗದೆ ಜಮೀನನ್ನೇ ವಿಕ್ರಯಿಸಿ ಹಂಚು ಹೊದೆಸುವುದನ್ನು ಪೂರ್ತಿಗೊಳಿಸುವಷ್ಟರಲ್ಲಿ ತಮ್ಮ ಅರ್ಧ ಆಸ್ತಿಯನ್ನೇ ಕಳೆದುಕೊಳ್ಳುವ ಸಂಧರ್ಭ ಶಂಕರ ಭಟ್ಟರಿಗೆ ಬರುತ್ತದೆ. ಆದರೆ ಹಂಚು ಹೊದೆಸುವ ಕೆಲಸ ಪೂರ್ತಿಗೊಂಡಾಗ ಊರಿನ ಜನರಿಗೆ ಪಟೇಲರ ಮೇಲೆ ಇನ್ನೂ ಹೆಚ್ಚು ಗೌರವ ಉಂಟಾಗುತ್ತದೆ. ಒಂದು ಕಡೆಯಿಂದ ಮತ್ತೊಂದು ಕಡೆ ಹೋಗಲು ಕಾಲ್ನಡಿಗೆ ಅಥವಾ ಎತ್ತಿನ ಗಾಡಿಗಳಿರುವ ಸಮಯದಲ್ಲಿ ಆಗಿನ್ನೂ ಗೂಡ್ಸ್ ರೈಲು ಮಂಗಳೂರಿಗೆ ಬಾರದಿದ್ದಲ್ಲಿ, ದೇವಸ್ಥಾನಕ್ಕೆ ಹಂಚುಗಳನ್ನು ಮಂಗಳೂರಿನಿಂದ ಸೀತಾಪುರಕ್ಕೆ ತರುವಾಗ ಪಡುವ ಸಾಹಸ ಹೇಳತೀರದು, ಅದೇ ಕೇಶವ ಭಟ್ಟರ ಕಾಲಕ್ಕೆ ರೈಲು ಸಂಚಾರ ಪ್ರಾರಂಭವಾಗಿ ದೈವ ಗುಡಿಗಳಿಗೆ ಹಂಚುಗಳನ್ನು ಸಾಗಿಸಲು ಅಷ್ಟು ಕಷ್ಟವಾಗುವುದಿಲ್ಲ.

ಶಂಕರ ಭಟ್ಟರ ಕಾಲದ ನಂತರ ಕೇಶವ ಭಟ್ಟರ ಕಾಲದಲ್ಲೂ ತನ್ನ ತಂದೆಗೆ ದೇವರ ಮೇಲಿದ್ದ ಶ್ರದ್ಧಾ ಭಕ್ತಿಯು ಅವರಲ್ಲೂ ಮುಂದುವರೆಯುತ್ತದೆ, ಕೇಶವ ಭಟ್ಟರ ಕಾಲದಲ್ಲಿ ದೈವದ ಗುಡಿಯ ಜೀರ್ಣೋರ್ದ್ಧಾರವಾಗುತ್ತದೆ, ಅವರೂ ತಮ್ಮ ಆಸ್ತಿಯಲ್ಲಿ ಇದಕ್ಕಾಗಿ ಒಂದು ಭಾಗವನ್ನು ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತದೆ. ಕೇಶವ ಭಟ್ಟರು ತನ್ನ ತಾಯಿ ಗಂಗಮ್ಮನ ತಮ್ಮನ ಮಗಳು ಗೌರಿಯನ್ನು ಮದುವೆಯಾಗಿ ಸುಖವಾಗಿದ್ದರೂ, ಆಕೆಯು ಗರ್ಭವತಿಯಾಗಿ, ಸರಿ ಸಮಾರು ೬-೭ ಸಲ ಗರ್ಭದರಿಸಿದರೂ ಮೂರು ತಿಂಗಳಾದ ನಂತರ ಗೌರಿಗೆ ಗರ್ಭಸ್ರಾವವಾಗುವುದನ್ನು ಕಂಡು ವ್ಯಥೆಪಡುತ್ತಾರೆ. ಆ ದುಃಖದಲ್ಲೇ ಗೌರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಾಗ ಅವರ ದುಃಖ ಹೇಳತೀರದು. ತಂದೆಯ ಕಾಲದಿಂದ ಹಾಗು ತನ್ನ ಕಾಲದಲ್ಲೂ ಸಹ ದೇವರಿಗೆ ಎಷ್ಟು ನಿಷ್ಠೆಯಿಂದ ನಡೆದುಕೊಂಡರೂ, ದೇವ, ದೈವಗಳಿಗೆ ಮುಳಿಹುಲ್ಲು ಬದಲು ಹಂಚು ಹೊದಿಸಿ ಗುಡಿ ಜೀರ್ಣೋದ್ದಾರ ಗೊಳಿಸಿದರೂ ದೇವ ಹಾಗು ದೈವಗಳು ತಮ್ಮ ಮೇಲೆಕೆ ಕರುಣೆ ತೋರಿಸಲಿಲ್ಲವಲ್ಲಾ ಎಂದು ಕಣ್ಣೀರು ಸುರಿಸುತ್ತಾರೆ. ಮರುಮದುವೆಗೆ ತಾಯಿ ಎಷ್ಟೇ ಒತ್ತಾಯಮಾಡಿದರೂ ಕೇಶವ ಭಟ್ಟರು ಒಪ್ಪುವುದಿಲ್ಲ. ಅದೇ ಸಮಯದಲ್ಲಿ ಮಿತ್ತುಬೈಲು ಗುತ್ತಿನವರ ಜೊತೆ ಕಂಬಳ ನೋಡಲು ಹೋದಾಗ ಕಾವೇರಿಯನ್ನು ಕಂಡು ಆಕೆಯ ರೂಪಕ್ಕೆ ಮಾರಿಹೋಗುತ್ತಾರೆ. ಆಕೆಯು ಭುಜಬಲಿ ಬಂಗರು ಇಡಿಸಿಕೊಂಡವಳೆಂದು ತಿಳಿದರೂ ಆಕೆಯನ್ನು ಇಡಿಸಿಕೊಳ್ಳಲು ನಿರ್ಧರಿಸಿದಾಗ ಕಾವೇರಿ ಒಡ್ಡುವ ಶರತ್ತುಗಳೆಲ್ಲವನ್ನೂ ಒಪ್ಪಿ ಭುಜಬಲ ಬಂಗರರನ್ನೂ ಒಪ್ಪಿಸಿ ಕಾವೇರಿಯನ್ನು ಸೀತಾಪುರಕ್ಕೆ ಕೊಂಡೊಯ್ದು ಕೊಪ್ಪರಿಗೆ ಮನೆಯಲ್ಲಿ ಇರಿಸಿಕೊಳ್ಳದೆ ಬೇರೆಯೇ ಮನೆ ಮಾಡಿಕೊಡುತ್ತಾರೆ. ಇದರಿಂದ ತಾಯಿ ಗಂಗಮ್ಮನಿಗೆ ಸಂಕಟ, ಆದರೂ ಮಗನ ಸಂತೋಷವನ್ನೇ ಬಯಸುವ ಆಕೆ ಕಾವೇರಿಯ ವಿಷಯದಲ್ಲಿ ಕೇಶವ ಭಟ್ಟರಿಗೆ ನೆರವಾಗುತ್ತಾರೆ. ಆಗಿನ ಕಾಲದಲ್ಲಿ ಇಡಿಸಿಕೊಂಡಿದ್ದಾರೆಂದರೆ ಅದೊಂದು ಪ್ರತಿಷ್ಟೆಯ ವಿಷಯ.

ಕಾವೇರಿಯಲ್ಲಿ ೨ ಗಂಡು ಮಕ್ಕಳನ್ನು ಪಡೆಯುತ್ತಾರೆ, ಕೊಪ್ಪರಿಗೆ ಮನಗೆ ಹಾಗು ಕೇಶವ ಭಟ್ಟರ ನಂತರ ಕಾವೇರಿಯಲ್ಲಿ ಹುಟ್ಟಿದ ಮಕ್ಕಳನ್ನು ಉತ್ತರಾಧಿಕಾರಿಯಾಗಿ ಸ್ವೀಕರಿಸ ಬೇಕೋ ಬೇಡವೋ ಎಂದು ಗಂಗಮ್ಮನವರಿಗೆ ಆಲೋಚನೆಯಾಗುತ್ತದೆ. ಇಡಿಸಿಕೊಳ್ಳುವುದಕ್ಕೆ ಅಡ್ಡಿ ಬಾರದಿರುವ ಜಾತಿಯು ಆ ಮಕ್ಕಳು ಸ್ವಂತವೆಂದು ಸ್ವೀಕರಿಸುವುದಕ್ಕೆ ಜಾತಿಯೆಂಬುದು ಅಡ್ಡ ಬರುವುದು ವಿಪರ್ಯಾಸವೆ. ಇದೇ ಸಮಯದಲ್ಲಿ ಗಾಂಧಿ ಆದರ್ಶಗಳು ಊರೂರಿಗೆ ಹಬ್ಬಿ ಸೀತಾಪುರಕ್ಕೂ ಕಾಲಿಟ್ಟಾಗ ಟೊಪ್ಪಿ ಶಂಕರ ಭಟ್ಟರು ಹಾಗು ಇನ್ನಿತರೆ ವ್ಯಕ್ತಿಗಳಿಂದ ಗಾಂಧೀತತ್ವಗಳ ಕುರಿತು, ಬ್ರಿಟೀಷರನ್ನು ದೇಶದಿಂದ ಓಡಿಸಿ ಸ್ವಾತಂತ್ರ ಪಡೆಯಲು ಅದಕ್ಕಾಗಿ ತಾವೆಲ್ಲಾ ಒಟ್ಟಿಗೆ ಸೇರಿ ಎನೆಲ್ಲಾ ಮಾಡಬೇಕೆಂಬುದನ್ನು ಮನೆ ಮನೆಗೆ ತಲುಪಿ ವ್ಯಾಖ್ಯಾನ ಮಾಡುತ್ತಾರೆ. ಬ್ರೀಟೀಷರ ಆಳ್ವಿಕೆಯಲ್ಲಿ ಕೊಪ್ಪರಿಗೆ ಮನೆಗೆ ಪಟೇಲತ್ವವು ವಂಶಪಾರಂಪರ್ಯದಿಂದ ಬಂದಿರುತ್ತದೆ, ಅದನ್ನು ತ್ಯಜಿಸಲು ಟೊಪ್ಪಿ ಶಂಕರ ಭಟ್ಟರು ಕೇಶವ ಭಟ್ಟರಿಗೆ ಸೂಚಿಸುವ ಜೊತೆಗೆ, ಹೆಣ್ಣು ಭೋಗದ ವಸ್ತುವಲ್ಲಾ, ಆಕೆಗೂ ಮನಸ್ಸೆಂಬುದಿರುತ್ತದೆ, ಕಾವೇರಿಯನ್ನು ಬೇರೆ ಮನೆಯಲ್ಲಿ ಇಡಿಸಿಕೊಳ್ಳುವುದಲ್ಲಾ, ಆಕೆಯನ್ನು ಮನಸಾರೆ ಸ್ವೀಕರಿಸಿದ್ದೇ ಆದರೆ ಕೊಪ್ಪರಿಗೆ ಮನಗೆ ಕರೆತಂದು ಧರ್ಮಪತ್ನಿಯಾಗಿ ಸ್ವೀಕರಿಸಬೇಕೆಂದು ಟೊಪ್ಪಿ ಶಂಕರ ಭಟ್ಟರು ವಾದಿಸುತ್ತಾರೆ. ಒಂದು ಕಡೆ ಕೇಶವ ಭಟ್ಟರಿಗೆ ಟೊಪ್ಪಿ ಶಂಕರ ಭಟ್ಟರ ಮಾತು ಒಪ್ಪಿಗೆಯಾಗಿ ಕಾವೇರಿಯ ಬಳಿ ಕೋಳಿಕೊಂಡಾಗ ಕೇಶವ ಭಟ್ಟರಿಗೆ ಊರಿನಲ್ಲಿ ಒಳ್ಳೆ ಹೆಸರಿದೆ ಅದನ್ನು ಹಾಳು ಮಾಡಲು ಇಷ್ಟವಿಲ್ಲವೆಂದು ಆ ಅವಕಾಶವನ್ನು ತಿರಸ್ಕರಿಸುತ್ತಾಳೆ.

ಕಾವೇರಿಯ ಅಣ್ಣನು ಜಿನ್ನಪ್ಪನೂ ಸ್ವಾತಂತ್ರ ಹೋರಾಟದಲ್ಲಿ ತೊಡಗಿರುತ್ತಾನೆ, ಅವನ ಜೊತೆ ಕಾವೇರಿಯೂ ಕೂಡ, ಸ್ವಾತಂತ್ರಕೋಸ್ಕರ ಪಟೇಲಿಕೆಯನ್ನು ತ್ಯಜಿಸಲು ಕಾವೇರಿ ಕೇಳಿಕೊಂಡದ್ದಲ್ಲದೆ, ಕೊಪ್ಪರಿಗೆ ಮನೆಯಲ್ಲಿದ್ದ ಆಭರಣಗಳನ್ನು ತನಗೆ ಒಪ್ಪಿಸಬೇಕು ಕಾರಣ ಅದು ಸ್ವಾತಂತ್ರ ನಿಧಿಗೆ ಸಮರ್ಪಿಸಬೇಕಾಗಿ ಕೇಳಿಕೊಂಡಾಗ ಒಂದು ಕಡೆ ಆಘಾತವಾದರೂ ಕಾವೇರಿಯ ಮಾತಿಗೆ ಬೆಲೆಕೊಟ್ಟು ಪಟೇಲಿಕೆ ವೃತ್ತಿಗೆ ರಾಜಿನಾಮೆ ಕೊಟ್ಟು, ಗೌರಿಯ ನೆನಪಿಗಾಗಿ ಒಂದು ಆಭರಣವನ್ನಿಟ್ಟುಕೊಂಡು ಉಳಿದೆಲ್ಲವೂ ಕಾವೇರಿಗೆ ಅರ್ಪಿಸಿಬಿಡುತ್ತಾರೆ. ಈ ಸಮಾಜದ ಮುಂದೆ ಕಾವೇರಿಯನ್ನು ಕೊಪ್ಪರಿಗೆ ಮನೆಗೆ ಕೊಂಡೊಯ್ದು ಧರ್ಮಪತ್ನಿಯನ್ನಾಗಿ ಸ್ವೀಕರಿಸಲು ಅವಕಾಶವಾಗದಿದ್ದರೂ ತಮಗೆ ಜನಿಸಿದ ಮಕ್ಕಳಿಗಾದರೂ ಉತ್ತರಾಧಿಕಾರವನ್ನು ಕೊಡಬೇಕೆಂದು ನಿರ್ಧರಿಸುತ್ತಾರೆ. ತಮ್ಮ ಜೀವನಕ್ಕೆ ಎಷ್ಟು ಬೇಕೋ ಅಷ್ಟು ಆಸ್ತಿಯನ್ನಿಟ್ಟುಕೊಂಡು ಉಳಿದೆಲ್ಲವನ್ನೂ ಮಾರಿ ಸ್ವಾತಂತ್ರ ಹೋರಾಟದ ನಿಧಿಗೆ ಸಮರ್ಪಿಸಬೇಕೆಂಬ ನಿರ್ಧಾರದಿಂದ ಅವರೂ ಗಾಂಧೀ ತತ್ವಗಳಿಗೆ ಶರಣಾಗುವಲ್ಲಿಗೆ ಕಾದಂಬರಿ ಮುಕ್ತಾಯವಾಗುತ್ತದೆ.

ಈ ಶಂಕರ ಭಟ್ಟರ ಕುಟುಂಬವು ದೇವ ದೈವಗಳಿಗೆ ಮಾಡಿದ ದೇವತಾಕಾರ್ಯಗಳು ಅಷ್ಟಿಷ್ಟಲ್ಲಾ, ಸ್ವಂತ ಖರ್ಚಿನಿಂದ ಹಂಚು ಹೊದೆಸಿದರೂ ತಮ್ಮ ನಿಜ ಜೀವನದಲ್ಲಿ ಆ ದೇವ ದೈವಗಳ ಕೃಪೆಯಂತೂ ಇರಲಿಲ್ಲ, ಸರಸ್ವತಿ ಬೇಗ ಗಂಡನನ್ನು ಕಳೆದುಕೊಂಡದ್ದು, ಲಕ್ಷ್ಮಿ ಗಂಡನಿಂದ ತಿರಸ್ಕೃತಗೊಂಡದ್ದು ಗೌರಿಗೆ ೬-೭ ಬಾರಿ ಗರ್ಭಸ್ರಾವವಾದದ್ದು ಇದೆಲ್ಲ ಅವರ ಕರ್ಮ, ವಿಧಿಯೆಂಬುದರ ಮಂದೆ ಯಾವ ಆಟವೂ ಸಾಗುವುದಿಲ್ಲ, ದೇವರ ಕರುಣಿಸಿದ್ದನೋ ಇಲ್ಲವೋ ಆದರೂ ಕೇಶವ ಭಟ್ಟರಿಗೆ ಈ ಪ್ರಶ್ನೆಗಳಿಗೆ ನಮಗೆ ಯೋಚಿಸಲು ಬಿಟ್ಟಿದ್ದಾರೆ, ಸೋದರಮಾವನ ಮಗಳನ್ನು ಮದುವೆಯಾದರೆ ಕೆಲವರಿಗೆ ಮಕ್ಕಳಾಗಬಹುದು, ಆಗದೆ ಇರಬಹುದು, ಹುಟ್ಟುವ ಮಕ್ಕಳಲ್ಲಿ ಅಂಗವಿಕಲತೆಯನ್ನೂ ಕಂಡಿದ್ದೇವೆ, ಇಲ್ಲಿ ದೇವರು ದೈವ ಏನು ಮಾಡಲು ಸಾಧ್ಯವಿಲ್ಲ, ಅದಕ್ಕೆಲ್ಲ ಪ್ರಕೃತಿಯಲ್ಲಾಗುವ ಬದಲಾವಣೆಗಳು, ಗೌರಿಗೆ ಅಷ್ಟು ಸಲ ಗರ್ಭಸ್ರಾವವಾಗಲು ಆಕೆಯ ವೀಕ್ ನೆಸ್ ಕಾರಣವು ಇರಬಹುದು, ಹಾರ್ಮೇನಲ್ ಇಂಬ್ಸಾಲೆನ್ಸ್ ಇರಬಹುದು, ಸ್ವಂತ ಅತ್ತೆಯ ಮಗನನ್ನು ಮದೆವೆಯಾದ ಕಾರಣವೂ ಇರಬಹುದು. ಆದರೆ ಕಾವೇರಿಯಲ್ಲಿ ೨ ಮಕ್ಕಳಾಗುತ್ತವೆ, ಅದಕ್ಕೆ ಆಕೆಯಲ್ಲಿ ಮಕ್ಕಳನ್ನು ಪಡೆಯುವ ಗುಣವು ಅದಕ್ಕೆ ತಕ್ಕಂತೆ ಪ್ರಕೃತ���ಯು ಸ್ಪಂದಿಸಿದ್ದೂ ಕಾರಣವಿರುತ್ತದೆ. ಒಟ್ಟಾರೆ ಇಲ್ಲಿ ಪ್ರಕೃತಿಯಲ್ಲಿ ಬದಲಾವಣೆಗಳು ಮನುಷ್ಯರ ಮೇಲೆ ಬಾರುವ ಪ್ರಭಾವವನ್ನು ಕೆಲವು ಸನ್ನಿವೇಷಗಳಿಗೆ ಹೋಲಿಸಬಹುದು.


*ಕಾರ್ತಿಕೇಯ*
Displaying 1 - 2 of 2 reviews

Can't find what you're looking for?

Get help and learn more about the design.