ತುಂಬ ಹಿಂದಿನಿಂದಲೂ ಅತಿಮಾನುಷತೆಯ ಬಗ್ಗೆ ಕತೆಗಳು ಇದ್ದವಾದರೂ ಆಗ ಸರಿಯಾದ ಸಾಕ್ಷಿಗಳಿಲ್ಲದೇ ಅವೆಲ್ಲವೂ ಕೇವಲ ಕತೆಗಳಾಗಿ ಉಳಿದು ಹೋಗಿದ್ದವು. ಆದರೆ ಈಗ ಹಾಗಲ್ಲ, ಪ್ಯಾರಾನಾರ್ಮಲ್ ಕ್ಷೇತ್ರವೆನ್ನುವುದು ಸಾಕಷ್ಟು ಬೆಳವಣಿಗೆ ಕಂಡಿದೆ. ತಾರ್ಕಿಕ ವಿಶ್ಲೇಷಣೆ, ಸಂಶೋಧನಾ ಸಾಮರ್ಥ್ಯ ಮತ್ತು ಅಧ್ಯಯನಗಳಿಂದಾಗಿ ಒಂದು ಕಾಲಕ್ಕೆ ಕೇವಲ ಭ್ರಮೆಯಷ್ಟೇ ಎನ್ನಿಸುವಂತಿದ್ದ ಕೆಲವು ವಿಷಯಗಳು ಈಗ, ಕೇವಲ ಭ್ರಮೆಯಲ್ಲ, ಭ್ರಮೆಯನ್ನು ಮೀರಿದ್ದು ಇನ್ನೇನೋ ಇದೆ ಎನ್ನುವ ಭಾವನೆಯನ್ನು ಹುಟ್ಟಿಸುವಲ್ಲಿ ಯಶಸ್ವಿಯಾಗಿವೆ. ಸರಿಯಾಗಿ ಗಮನಿಸಿದರೆ ಪ್ಯಾರಾನಾರ್ಮಲ್ ಕ್ಷೇತ್ರ ಕೂಡ, ಸೈಕಾಲಜಿ, ಭೌತಶಾಸ್ತ್ರ ಪರಿಸರ ವಿಜ್ಞಾನ ಮತ್ತು ಮನುಷ್ಯ ಗ್ರಹಿಕೆಯ ಭಾಗವೇ ಎನ್ನುವುದು ಅರ್ಥವಾಗುವುದು ಕಷ್ಟವೇನಲ್ಲ, ಎಲ್ಲಕ್ಕಿಂತ ಹೆಚ್ಚಾಗಿ ಈ ಬಗೆಯ ಓದು, ಓದುಗನ ಕಲ್ಪನಾ ಶಕ್ತಿಯನ್ನು ಒರೆಗೆ ಹಚ್ಚುತ್ತದೆ. ಓದುಗನ ಆಲೋಚನಾ ಶಕ್ತಿಯನ್ನು ವೃದ್ಧಿಸುತ್ತಲೇ ಈ ರೀತಿಯ ವಸ್ತುಗಳೆಡೆಗಿನ ಸಿನಿಕತನವನ್ನೂ ಸಹ ಕಡಿಮೆ ಮಾಡುತ್ತವೆ. ಹಾಗೆ ಮಾಡುವುದರ ಮೂಲಕ ಮುಕ್ತ ಮನಸ್ಸಿನಿಂದ ಈ ಕ್ಷೇತ್ರದ ಬಗ್ಗೆ ಯೋಚಿಸುವಂತೆ ಮಾಡುತ್ತದೆ. ಅನಾವಶ್ಯಕವಾಗಿ ಭಯ ಹುಟ್ಟಿಸುವ ವಿಷಯಗಳು ಅರಿವಿಗೆ ಸಿಕ್ಕುತ್ತವೆ. ಇಲ್ಲಿ ನಮ್ಮನ್ನೂ ಮೀರಿದ್ದು ಇನ್ನೇನೋ ಇದೆ ಎನ್ನುವುದು ಆರಿವಾಗಿ ಭಯ ಕಡಿಮೆಯಾಗಿ ಆತ್ಮ ವಿಶ್ವಾಸ ಹೆಚ್ಚುತ್ತದೆ ಎಂದರೂ ಅತಿಶಯೋಕ್ತಿಯಲ್ಲ.
ಗುರುರಾಜ್ ಸರ್ ಬರೆಯುವ ಮಿನಿ ಹಾರರ್ ಕಥೆಗಳು ನನಗಿಷ್ಟ. ಆ ಕಥೆಗಳು ಫೇಸ್ಬುಕ್ಕಿನಲ್ಲಿ ಪ್ರಕಟವಾದರಂತೂ ಕಮೆಂಟ್ ಸೆಕ್ಷನ್ ಓದುವುದೂ ಒಂದು ಗಮ್ಮತ್ತಿನ ವಿಷಯ. ಗುರು ಸರ್ ಕಾಲ್ಪನಿಕ ಕಥೆಗಳನ್ನು ಬರೆಯುವಷ್ಟೇ ಚೆನ್ನಾಗಿ non fiction ಕೂಡ ಬರೆಯುತ್ತಾರಾದರು ನಮ್ಮಂತ ಅಭಿಮಾನಿ ಮನಸ್ಸುಗಳು ಅದರಲ್ಲೂ ಹಾರರ್ ಎಲಿಮೆಂಟನ್ನೇ ಹುಡುಕುತ್ತವೆ. ಎಷ್ಟೋ ಬಾರಿ ಸರ್ ಯಾವುದೋ ಗಹನವಾದ ವಿಷಯದ ಬಗ್ಗೆ ಬರೆದಾಗಲೂ ಅಲ್ಯಾರೋ 'ಅಯ್ಯೋ! ಇದು ನಿಜಕ್ಕು ಹಾರರ್' ಎಂದೋ 'ಕಡೆಯವರೆಗೂ ಭೂತ ಎಲ್ಲಿ ಎಂದು ಹುಡುಕಿದೆ' ಎಂದೋ ಕಮೆಂಟ್ ಮಾಡಿದ್ದು ನೋಡಿದ್ದೇನೆ. ನಮ್ಮೆಲ್ಲರ ಹಾರರ್ ಅಡಿಕ್ಷನ್ ನೋಡಿ ಬೇಸತ್ತರೋ ಏನೊ.. 'ತಗಳ್ರಪ್ಪ, non fictionನಲ್ಲೂ ಹಾರರ್ರೇ ಬರೀತೀನಿ, ಸರಿನಾ' ಅಂತ ಸಮಾಧಾನ ಮಾಡುವಂತಿದೆ ಈ ಪುಸ್ತಕ.
ಪೂರ್ತಿ ಕಾಲ್ಪನಿಕವೂ ಅಲ್ಲದ, ಹಾಗಂತ ಸಾಕ್ಷಿ ಆಧಾರಗಳೊಂದಿಗೆ ಇದು ಇಷ್ಟೇ, ಇದೆ ಸತ್ಯ ಎಂದೂ ಹೇಳಗೊಡದ ಮನುಷ್ಯನ ಅರಿವಿಗೆ ನಿಲುಕದ ಇಪ್ಪತ್ತೊಂದು ವಿಭಿನ್ನ ವೃತ್ತಾಂತಗಳನ್ನು ಲೇಖಕರು ಈ ಪುಸ್ತಕದಲ್ಲಿ ಪರಿಚಯಿಸಿದ್ದಾರೆ. ಪ್ಯಾರಾನಾರ್ಮಲ್ ಅಥವಾ ಅತಿಮಾನುಷ ಅಸ್ತಿತ್ವದ ಬಗ್ಗೆ, ಅದರ ಗಂಭೀರತೆಯ ಬಗ್ಗೆ ಸಂಶೋಧನೆ ನಡೆಸುವ ಸಂಸ್ಥೆಗಳ ಪರಿಚಯವನ್ನೂ ಮಾಡಿಕೊಟ್ಟಿದ್ದಾರೆ.
ಓದಿನ ನಂತರ ಮನಸ್ಸಿನಲ್ಲಿ ಸುಳಿಯುವ 'ಇದನ್ನೆಲ್ಲ ಎಷ್ಟು ನಂಬಲಿ, ನಂಬಲೋ ಬಿಡಲೋ' ಎಂಬ ಪ್ರಶ್ನೆಗಳಿಗೆ ಪುಸ್ತಕದ ಮುಖಪುಟದಲ್ಲಿರುವ "For those who belive, no explanation is necessary. For those who don't, no explanation is possible" ಎನ್ನುವ ಸಾಲುಗಳೇ ಉತ್ತರವಾಗಿ ನಿಲ್ಲುತ್ತವೆ.
ಚಿಂತಕ ಮನಸ್ಸಿಗೆ ದೇವರು, ದೈವ, ಅತಿಮಾನುಷ ಅಸ್ತಿತ್ವ ಎಲ್ಲದರೆಡೆಗೆ ಗೌರವ ಬೆರೆತ ಕುತೂಹಲ ಮೂಡಿಸುವ, ಲಘುವಾಗಿ ಪರಿಗಣಿಸುವವರಿಗೆ ಕ್ಯಾಂಪ್ ಫೈರ್ ಕಥೆಗಳಂತೆ ರಂಜಿಸುವ ಗುಣವಿರುವ ಸತ್ಯಘಟನೆ ಆಧಾರಿತ ಹಾರರ್ ಕಥನಗಳು ಖಂಡಿತಕ್ಕೂ ಒಂದು ಹೊಸಬಗೆಯ ಪ್ರಯತ್ನ.
ಇಪ್ಪತ್ತೊಂದು ನೈಜ ಘಟನೆಗಳ ಆಧಾರಿತ ಕಥೆಗಳು. ಹಾರರ್ ಸಿನಿಮಾಗಳನ್ನ ತುಂಬಾ ಇಷ್ಟ ಪಡ್ತೇನೆ (except Slasher Horrors). ನೋಡಿದ್ರೆ ಮಧ್ಯ ರಾತ್ರಿ ಲೈಟ್ ಆಫ್ ಮಾಡ್ಕೊಂಡು earphones ಹಾಕಿನೇ ನೋಡೋದು. ಆ ತರ ನೋಡಿದ್ರೇನೇ ಥ್ರಿಲ್ ಅಂತ ನನ್ನ ಹಾಸ್ಟೆಲ್ ದಿನಗಳಲ್ಲಿ ವೀಕೆಂಡಲ್ಲಿ ನೋಡೋ ಅಭ್ಯಾಸದಿಂದ ನಂಬಿದೇನೆ. ಹಾಗೇ ಅನುಭವಿಸಿ ಎಂದು ಎಲ್ರಿಗೂ ಹೇಳ್ತೇನೆ.
ವೈಯಕ್ತಿಕವಾಗಿ ನನಗೆ ಈ ಪುಸ್ತಕ ಹೇಗನಿಸಿತು ಅಂತ ವಿಮರ್ಶಿಸೋ ಬದಲು ಒಬ್ಬ ಸಾಮಾನ್ಯ ಓದುಗನಿಗೆ ಎಂತಾ ಅನುಭವ ಸಿಗಬಹುದು ಅನ್ನೋ ದೃಷ್ಟಿಕೋನದಿಂದ ವಿಮರ್ಶಿಸೋ ವಿಭಿನ್ನ ಪ್ರಯತ್ನ ಮಾಡುತ್ತೇನೆ.
ಪ್ಯಾರಾಧ್ಯಾಯ ಅನ್ನೋ ಹೆಸರಲ್ಲಿರೋ ಪರಿವಿಡಿಯಲ್ಲಿ ಕತೆಗಳ ಹೆಸರೇ ಎರಡೆರಡು ಸಾಲುಗಳು. ಕತೆಯ ಹೆಸರಲ್ಲೇ ಕತೆ ಏನು ಅಂತ ಗೊತ್ತಾಗುತ್ತೆ. ಉದಾಹರಣೆಗೆ, "ಶಿಮ್ಲಾದ ಆ ಬಂಗಲೆಯ ಕಿಟಕಿಯಲ್ಲಿ ಕಾಣುತ್ತಿದ್ದ ಬ್ರಿಟಿಷ್ ಅಧಿಕಾರಿ ತೀರಿಕೊಂಡೇ ಹತ್ತಾರು ವರ್ಷಗಳಾಗಿದ್ದವು". ಅಲ್ಲಿಗೆ ಕತೆ ಗೊತ್ತಾಯಿತು, ಇನ್ನೇನಿದ್ದರೂ ಲೇಖಕರ ಕೆಲಸ ಅದರ ಸುತ್ತ ನಡೆದಿರೋ ಘಟನೆಗಳ ವಿವರ - ಕೆಲವೊಂದು ನೈಜ, ಕೆಲವೊಂದು ವದಂತಿ, ಇನ್ನೂ ಕೆಲವು ನಂಬಲಸಾಧ್ಯ. ಪ್ರತೀ ಕತೆಯಲ್ಲೂ ಲೇಖಕರು ಈ ಒಂದು ಫಾರ್ಮ್ಯಾಟ್ ಬಳಸಿದ್ದಾರೆ.
ವಿವರಣೆಗೆ ದೆವ್ವ ಭೂತ ಅಂತ ಔಟ್ಡೇಟೆಡ್ ಸ್ಟೈಲ್ ಬಳಸದೇ ಅತಿಮಾನುಷ ಅಥವಾ ನೆಗೆಟಿವ್ ಎನರ್ಜಿಯ ಕಾನ್ಸೆಪ್ಟ್ನ ಪ್ರಯೋಗ ಬಹುತೇಕ ಕತೆಗಳಲ್ಲಿ ಕಾಣಬಹುದು. ಹಾಗಾಗಿ ಪಕ್ಕಾ ಭೂತ ಪ್ರೇತ ಅಭಿಮಾನಿಗಳು ಕತೆಯ ಮೊದಲ ಭಾಗ ಇಷ್ಟ ಪಟ್ಟರೆ, ಮಿಕ್ಕಿದ್ದು, ಅದನ್ನ ನಂಬದೆ ಇರೋವ್ರಿಗೆ ವಿಜ್ಞಾನದ ದೃಷ್ಟಿಯಿಂದ ಒಂದು ಸಾಂತ್ವನದ ಕೊನೆ ಕೊಡುತ್ತೆ.
ಮುಖ್ಯವಾಗಿ ನೆನಪಿಟ್ಟುಕೊಳ್ಳೋ ವಿಷಯ, ಇಂತಹ ಅತಿಮಾನುಷ ಘಟನೆಗಳು ನಡೆದಾಗ ನಮ್ಮ ಮೆದುಳು ಅದನ್ನ ಯಾವ ರೀತಿಯಲ್ಲಿ ಸ್ವೀಕರಿಸುತ್ತವೆ ಅದರಮೇಲಿದೆ ಅನ್ನೋ ಹಲವರ ಯೋಚನೆ. ಆದರೆ ಇಲ್ಲಿರೋ ನಿಜ - ನಮ್ಮ ತೀವ್ರವಾದ ನಂಬಿಕೆಗಳು ನಮ್ಮ ಮೆದುಳನ್ನ ಯಾವ ರೀತಿಯಲ್ಲಿ train ಮಾಡುತ್ತವೆ ಅನ್ನೋದು. ಇಲ್ಲಿ ಹಗಲು, ಇರುಳು, ಸುತ್ತಲೂ ಜನ ಇದ್ದಾಗ, ಒಬ್ಬಂಟಿ ಇದ್ದಾಗ, ಇದು ಬದಲಾಗುತ್ತಾ ಇರುವುದು. ಇಂತಹ ವಿಷಯಗಳಲ್ಲಿ ನಾವು ಎಷ್ಟು ಯೋಚ್ನೆ ಮಾಡ್ತೀವೋ ಅಷ್ಟು ಹೊಸ ಹೊಸ ಆಯಾಮಗಳು ಹುಟ್ಟುತ್ತವೆ.
ಕಥೆಗಳೆಲ್ಲ ಓದಿ ಮುಗಿಸಿದ ಮೇಲೂ, ಕೆಲವೊಂದು ಪ್ರಶ್ನೆಗಳು ಓದುಗರಲ್ಲಿ ಹುಟ್ಟುತ್ತವೆ. ಅದಕ್ಕೊಂದು ಸೂಕ್ತ ಪರಿಹಾರ ಕೊನೆಯ ಕತೆಯಲ್ಲಿ ಲೇಖಕರು ನೀಡಿದ್ದಾರೆ. ಇದು ಅವರ ಜವಾಬ್ದಾರಿ ಎಂದು ಭಾವಿಸಿ ಅವ್ರು ಉತ್ತರ ನೀಡಿದಕ್ಕೆ ಧನ್ಯವಾದಗಳು.
ಈ ಪುಸ್ತಕದ ಕೊನೆಯ ಹತ್ತು ಕಥನಗಳನ್ನ ಒಂದೇಬಾರಿ ಓದಿ ಮಲಗಿದಾಗ ಸಮಯ ರಾತ್ರಿ ಎರಡೂವರೆ ಆಗಿತ್ತು, ಅತಿಶಯೋಕ್ತಿಯಲ್ಲ ಆದರೆ ಕನಸಿನಲ್ಲೆಲ್ಲಾ ಅತಿಮಾನುಷ ಆದರೆ ಅಸ್ಪಷ್ಟ ದೃಶ್ಯಗಳೇ. ಹಾಗಂದ ಮಾತ್ರಕ್ಕೆ ನಾನು ದೆವ್ವ ಭೂತ ಮೋಹಿನಿ ನಾಗವಲ್ಲಿ ಇತ್ಯಾದಿಗಳನ್ನ ನಂಬುತ್ತೇನೆ ಎನ್ನುವುದಿಲ್ಲ, ನಂಬುವುದಿಲ್ಲ ಅಂತಲೂ ಅಲ್ಲ. ಅನುಭವಕ್ಕೆ ಬಾರದ ಎಷ್ಟೋ ವಿಷಯಗಳನ್ನ ನಂಬುವ ನಾವು ಋಣಾತ್ಮಕ ಊರ್ಜೆಗಳ ತರ್ಕದ ಬಗ್ಗೆಯೂ ಯೋಚಿಸಬೇಕಾಗುತ್ತದೆ. ಅತಿಮಾನುಷ ಶಕ್ತಿಗಳ ಕುರಿತು ನಂಬಿಕೆ ಅಪನಂಬಿಕೆ ವೈಯಕ್ತಿಕವಾದದ್ದು, ಮುಖಪುಟದಲ್ಲಿರುವಂತೆ “ನಂಬುವವರಿಗೆ ಯಾವುದೇ ಎಕ್ಸ್ಪ್ಲನೇಶನ್ನ ಅವಶ್ಯಕತೆಯಿಲ್ಲ ನಂಬದವರಿಗೆ ಎಂತಹ ಎಕ್ಸ್ಪ್ಲನೇಶನ್ ಸಹ ಸಮಾಧಾನ ಮಾಡುವಂತದ್ದಲ್ಲ…”
ಪ್ಯಾರಾನಾರ್ಮಲ್ ಎಂದರೆ ದೆವ್ವ ಭೂತ ಪ್ರೇತಗಳ ಕುರಿತು ಮಾಡುವ ವೈಜ್ಞಾನಿಕ ಅಧ್ಯಯನ, ಕನ್ನಡದಲ್ಲಿ ಅಧಿಸಾಮಾನ್ಯ ಎನ್ನುತ್ತಾರಂತೆ. ಈ ಪುಸ್ತಕದಲ್ಲಿರುವುದು ಅಂತಹ ಅಧಿಸಾಮಾನ್ಯಕ್ಕೊಳಪಟ್ಟ ಇಪ್ಪತ್ತೊಂದು ಸತ್ಯಘಟನೆ ಆಧಾರಿತ ಹಾರರ್ ಕಥನಗಳು. ಹೆಚ್ಚಾಗಿ ನಮ್ಮ ದೇಶದ ವಿವಿಧ ಜಾಗಗಳಲ್ಲಿ ನೆಡೆದ ಕೆಲವು ಘಟನೆಗಳ ವಿವರಗಳು ಇಲ್ಲಿವೆ, ಇದೊಂದು non fiction ಪುಸ್ತಕವಾದ್ದರಿಂದ ರೋಚಕತೆ ಕಡಿಮೆಯೇ, ಆದರೂ “ಇಲ್ಲೇನೋ ಹೆದರಿಸುವಂತ್ತದಿದೆ” ಎನ್ನಿಸುವಂತಹ ಬರವಣಿಗಿಯಿದೆ. ಕಥೆ ಕಾದಂಬರಿಗಳಿಗೆ ಅಂಟುಕೊಂಡಿದ್ದ ನನಗೆ “ಪ್ಯಾರಾನಾರ್ಮಲ್” ವಿಭಿನ್ನ ಅನುಭವ ಕೊಟ್ಟಿದ್ದಂತೂ ಸುಳ್ಳಲ್ಲ.