ಬಾಲ್ಯದಲ್ಲಿ ನಾನು ಕಂಡ ಇಬ್ಬರು ಅಪೂರ್ವ ಪ್ರೇಮಿಗಳು ಮತ್ತೆ ಮತ್ತೆ ಕನಸಿನಲ್ಲಿ ಬಂದು ನಮ್ಮ ಕತೆ ಬರಿ ಅಂತ ಅಂಗಲಾಚುತ್ತಿದ್ದರು. ಅವರನ್ನು ನಿರ್ಲಕ್ಷಿಸಿ ಓಡಾಡುತ್ತಿದ್ದೆ. ಇವನೊಬ್ಬ ಉಪಯೋಗಕ್ಕೆ ಬರದ ಜುಜುಬಿ ಕಾದಂಬರಿಕಾರ ಅಂತ ಅವರಿಬ್ಬರೂ ನನ್ನ ಬಗ್ಗೆ ಅಪಪ್ರಚಾರ ಶುರುಮಾಡಿದರು. ಇದು ಯಾಕೋ ಅತಿರೇಕಕ್ಕೆ ಹೋಗುತ್ತಿದೆ. ಅನ್ನಿಸಿ ಅವರನ್ನು ಕರೆಸಿಕೊಂಡು, ಮಾತಾಡಿ, ನಿಮ್ಮ ಕತೆ ಬರೆಯುತ್ತೇನೆ ಅಂದೆ. ಬರೆಯುತ್ತಾ ಹೋದ ಹಾಗೇ ನಾನೊಬ್ಬ ಸೆಕೆಂಡ್ ರೇಟ್ ಕಾದಂಬರಿಕಾರ ಅನ್ನಿಸತೊಡಗಿತು. ತಾರುಣ್ಯದ ತೀವ್ರತೆ, ಹುಮ್ಮಸ್ಸು, ತಕರಾರು, ತಲ್ಲಣಗಳನ್ನು ಮಾತಿನಲ್ಲಿ ಹಿಡಿದಿಡುವ ಕಷ್ಟ ಅರಿವಾಗತೊಡಗಿತು. ಅವರಿಬ್ಬರೂ ನನ್ನ ಮೇಲೆ ಸೇಡು ತೀರಿಸಿಕೊಳ್ಳಲಿಕ್ಕೆಂದೇ ವಿಚಿತ್ರವಾದ ವರ್ತಿಸುತ್ತಿದ್ದರು. ಬೇಕಂತಲೇ ದಾರಿ ತಪ್ಪುತ್ತಿದ್ದರು. ನನ್ನ ಬುದ್ಧಿಮಾತುಗಳನ್ನೂ ಅನುಭವದ ಹಿತನುಡಿಗಳನ್ನೂ ಕೇಳದೇ, ತಮಗಿಷ್ಟ ಬಂದ ಹಾಗೆ ಬದುಕುತ್ತಿದ್ದರು. ಕೊನೆಗೂ ಪಟ್ಟು ಬಿಡದೇ ನಾನು ಅವರನ್ನೊಂದು ದಾರಿಗೆ ತಂದೆ ಅನ್ನುವಷ್ಟರಲ್ಲಿ ಅನಾಹುತವೊಂದು ನಡೆದುಹೋಯಿತು. ಜೀವನದಲ್ಲಿ ಏನು ನಡೆಯಬೇಕು ಅನ್ನುವುದನ್ನು ಜೀವನವೇ ನಿರ್ಧರಿಸುತ್ತದೆ ಅಂತ ಗೊತ್ತಾಯಿತು. ಈ ಕಾದಂಬರಿ ಓದಿದ ನಿಮಗೂ ನಾನೊಬ್ಬ ಎರಡನೇ -ದರ್ಜೆಯ ಕಾದಂಬರಿಕಾರ ಅನ್ನಿಸಬಹುದು. ಹಾಗೇನಾದರೂ ಅನ್ನಿಸಿದರೆ ನಾನು ಸರಿಯಾಗಿಯೇ ಬರೆದಿದ್ದೇನೆ ಅಂತ ಸಮಾಧಾನವಾಗುತ್ತದೆ.
Jogi Girish Rao Hatwar ಹುಟ್ಟೂರು ಮಂಗಳೂರಿನ ಸುರತ್ಕಲ್ ಸಮೀಪದಲ್ಲಿರುವ ಹೊಸಬೆಟ್ಟು. ಹತ್ವಾರ್ ಮನೆತನಕ್ಕೆ ಸೇರಿದ ಜೋಗಿ ಓದಿದ್ದು ಗುರುವಾಯನಕೆರೆ ಮತ್ತು ಉಪ್ಪಿನಂಗಡಿಗಳಲ್ಲಿ. ತಂದೆ ಶ್ರೀಧರರಾವ್ ಕೃಷಿಕರು. ತಾಯಿ ಶಾರದೆ. ಹಿರಿಯ ಸೋದರ ಹತ್ವಾರ ನಾರಾಯಣ ರಾವ್ ಯಕ್ಷಗಾನ ಪ್ರಸಂಗಗಳನ್ನು ಬರೆದು, ತಾಳಮದ್ದಲೆ ಅರ್ಥಧಾರಿಯಾಗಿ, ಲೇಖಕರಾಗಿ ಪ್ರಸಿದ್ಧರು. ೧೮ನೇ ವಯಸ್ಸಿಗೆ ಬರಹ ಆರಂಭಿಸಿದ ಜೋಗಿ ಓದಿದ್ದು ಬಿ.ಕಾಂ. ಕಾಲೇಜು ದಿನಗಳಲ್ಲಿ ಅವರ ಸಾಹಿತ್ಯ ಆಸಕ್ತಿಯನ್ನು ರೂಪಿಸಿದವರು ಬಳ್ಳ ವೆಂಕಟರಮಣ. ಬೆಂಗಳೂರಿಗೆ ೧೯೮೯ರಲ್ಲಿ ಕಾಲಿಟ್ಟ ಗಿರೀಶ ರಾವ್ ಹತ್ವಾರ್ ಅವರನ್ನು ಜೋಗಿಯಾಗಿ ರೂಪಿಸಿದವರು ವೈಎನ್ ಕೆ. ಸದ್ಯ ಬೆಂಗಳೂರಲ್ಲಿ ನೆಲೆನಿಂತಿರುವ ಜೋಗಿ ಪತ್ನಿ ಜ್ಯೋತಿ, ಮಗಳು ಖುಷಿಯೊಂದಿಗೆ ಜೀವಿಸುತ್ತಿದ್ದಾರೆ.