ನಿಲ್ಲು ನಿಲ್ಲೇ ಪತಂಗ ಕಾದಂಬರಿ ನಿಮ್ಮನ್ನು ಒಂದೇ ಸಲಕ್ಕೆ ಪೂರ್ಣಚಂದ್ರ ತೇಜಸ್ವಿಯವರ ಊರಿಗೆ ಹೊತ್ತೊಯ್ಯುತ್ತದೆ. ಅಲ್ಲಿ ಕರ್ವಾಲೋ ಚಿಕ್ಕಪ್ಪನಂತೆ ಕಾಣುವ ಫಣಿಕ್ಕರ್ ನಿಮಗೆ ಸಿಗುತ್ತಾರೆ. ಅವರ ಹುಡುಕಾಟದ ಹಾದಿಯಲ್ಲಿ ನೀವು ಊಹಿಸಿರದ ಅಪೂರ್ವ ಘಟನೆಯೊಂದು ನಡೆದು ಮೈತುಂಬ ಚಿಟ್ಟೆ ಮೂಡಿದಂತೆ ರೋಮಾಂಚನವಾಗುತ್ತದೆ. ಹರೀಶ್ ಕೇರ ಪುರಸೊತ್ತು ಸಿಕ್ಕಾಗೆಲ್ಲ ಕಾಡು ಸುತ್ತುತ್ತಿರುತ್ತಾರೆ. ಅವರಿಗೆ ಮನುಷ್ಯರಿಗಿಂತ ಮರಗಳೇ ಪ್ರಿಯ. ಮಾತಿಗಿಂತ ಮೌನವೇ ಆಪ್ಯಾಯಮಾನ. ಈ ಕತೆಯುದ್ದಕ್ಕೂ ಕಾಡಿಗಷ್ಟೇ ವಿಶಿಷ್ಟವಾಗಿರುವ ನೀರವ, ನಿಗೂಢ, ವಿಸ್ಮಯ ಮತ್ತು ವಿನೀತಗೊಳಿಸುವ ಗುಣ ದಟ್ಟ ಕಾಡಿನಂತೆ ಹಬ್ಬಿಕೊಂಡಿದೆ. ತಿಳಿನೀರಿನಂಥ ಭಾಷೆ, ಆಪ್ತರಂತೆ ಬಂದುಹೋಗುವ ಪಾತ್ರಗಳು, ಬೆರಗಿನ ಜತೆಗೇ ಎದುರಾಗುವ ಭಯವಿಹ್ವಲ ಸಂಗತಿಗಳು ಈ ಕಥನವನ್ನು ದೈನಿಕದ ಯಾತನಾಮಯ ಚಕ್ರಸುಳಿಯಿಂದ ಹೊರಗಿಟ್ಟಿವೆ. ಮುಟ್ಟಿದರೆ ಭಟ್ಟನೆ ನೀರಾಗಿಬಿಡುವ ಮಂಜುಹನಿ ನೆಲೆಸಿರುವ ಹುಲ್ಲುದಾರಿಯಲ್ಲಿ ಮುಂಜಾನೆ ಹೆಜ್ಜೆಹಾಕುತ್ತಾ ಹೋದಹಾಗೆ, ಎದುರಿನ ಕಣಿವೆಯಿಂದ ಇಷ್ಟಿಷ್ಟೇ ಮೂಡುವ ಸೂರ್ಯ ನಮ್ಮ ಚೈತನ್ಯವನ್ನು ಬೆಳಗುವಂತೆ, ಈ ಕತೆ ತೆರೆದುಕೊಳ್ಳುತ್ತಾ ಹೋದಂತೆ ಇನ್ನೊಂದು ಜಗತ್ತು ನಮ್ಮನ್ನು ಸ್ವಾಗತಿಸುತ್ತದೆ. ಈ ಮರುಳುಗೊಳಿಸುವ ಕದನಕ್ಕಾಗಿ ನಾನು ಹರೀಶ್ ಕೇರ ಅವರನ್ನು ಅಭಿನಂದಿಸುತ್ತೇನೆ. ಪೂರ್ಣಚಂದ್ರ ತೇಜಸ್ವಿ ನಮ್ಮನ್ನು ಅಷ್ಟೊಂದು ಪ್ರಭಾವಿಸದೇ ಹೋಗಿದ್ದರೆ ಇಂಥದ್ದೊಂದು ಕಾದಂಬರಿಯೇ ಸಾಧ್ಯವಾಗುತ್ತಿರಲಿಲ್ಲ. ಸಾಹಿತ್ಯ ಪರಂಪರೆಗೂ ಸಾಹಿತ್ಯಕ್ಕೂ ಇರುವ ಸಂಬಂಧವೇ ಅಂಥದ್ದು. ಇಂದು ಅರಳಿದ ಹೂವು ನಾಳೆ ಹುಟ್ಟಲಿರುವ ಹೂವಿನ ಗಿಡಕ್ಕೆ ಸಹಜಸ್ಫೂರ್ತಿ. - ಜೋಗಿ
ಪುಸ್ತಕವನ್ನು ಕೈಗೆತ್ತಿಕೊಂಡಾಗ ಅನಿಸಿದ್ದು: ಪಶ್ಚಿಮ ಘಟ್ಟದಲ್ಲಿ ಅಪರೂಪದ ಒಂದು ಚಿಟ್ಟೆ ಹುಡುಕುವ ತಂಡ, ಆ ತಂಡದಲ್ಲಿ ಕಾಣಿಸುವ ಪರಿಚಿತ ಮುಖಗಳು—ಇವೆಲ್ಲವೂ ಕರ್ವಾಲೋ ಪುಸ್ತಕದ ಛಾಯೆಯಂತೆ ಕಾಣಿಸಿತು. ಕಥೆ ಮುಂದೆ ಸಾಗುತ್ತಿದ್ದಂತೆ ಬೆಟ್ಟ ಕಾಡಿನ ನಡುವೆ ಸಾಗುವ ಪಯಣ, ಅಲ್ಲಿನ ಪ್ರಕೃತಿ ಸಂಪನ್ಮೂಲ, ನಾಗರಿಕತೆಯಿಂದ ಬಲು ದೂರ ಬದುಕುತ್ತಿರುವ ಜನಗಳು, ಅವರ ಸಮಸ್ಯೆಗಳು ಎಲ್ಲವನ್ನೂ ಲೇಖಕರು ಚೆನ್ನಾಗಿ ತೋರಿಸಿದ್ದಾರೆ. ಕರ್ವಾಲೋ ಓದಿರುವವರಿಗೆ ಇದು ಸ್ವಲ್ಪ ನೀರಸವೆನ್ನಿಸಿದರೂ, ಹೊಸ ಓದುಗರಿಗೆ ಖುಷಿ ಕೊಡುತ್ತದೆ.
ಈ ವರ್ಷ ನಾನು ಓದಿದ ಮೊದಲ ಕೃತಿ.. ತೇಜಸ್ವಿ ಯವರಿಗೆ ಕೊಡುಗೆಯಾಗಿ ಈ ಪುಸ್ತಕವನ್ನು ಬರೆದಿದ್ದಾರೆ. ಒಂದು ರೀತಿಯ ಪತಂಗವನ್ನು ಹುಡುಕುವ ಗೋಜಿನಲ್ಲಿ ಚಾರ್ಮಾಡಿ ಘಾಟಿಯ ಬೆಟ್ಟಗಳ ನಡುವೆ ಹೋಗುವ ಒಂದು ವಿಜ್ಞಾನಿಗಳ ತಂಡ ಹಾಗೂ ಅವರಿಗೆ ಎದುರಾಗುವ ತಾಪತ್ರಯಗಳನ್ನು ಚೆನ್ನಾಗಿ ವಿವರಿಸಿದ್ದಾರೆ.. ಚಿಟ್ಟೆ,ಪತಂಗ,ಕೀಟ,ಮರ, ಸಸಿ,ನಿಸರ್ಗದ ಬಗ್ಗೆ ಭಾರಿ ಮಾಹಿತಿಯಿದೆ. ಒಂದು ಒಳ್ಳೆ ಓದು ..