ಶಾಲೆಯ ಒಳಗೆ ಶರತ್ಗೆ ಪೂರ್ವಿ ಎದುರಾಳಿ. ಪೂರ್ವಿಗೆ ಶರತ್ ಎದುರಾಳಿ. ಕ್ಲಾಸ್ರೂಮುಗಳು ಎಸ್ಸಾಮ್ ಹಾಲುಗಳೇ ಅವರ ಯುದ್ಧಭೂಮಿ. ಶಾಲೆಯ ಹೊರಗೆ ನಿರ್ದಯಿ ಬದುಕು ಇಬ್ಬರಿಗೂ ಎದುರಾಳಿ. ಪ್ರತ್ಯೇಕವಾಗಿ ಹೋರಾಡಿದರೆ ಸೋಲು ಖಚಿತ; ಒಂದಾಗಿ ಹೋರಾಡಲು ಅವನು ಕಟ್ಟುನಿಟ್ಟಿನ ಆದರ್ಶವಾದಿ; ಅವಳು ಬದುಕನ್ನು ವಂಚಿಸುವಷ್ಟು ವಾಸ್ತವವಾದಿ. ಹೀಗಿದ್ದಾಗ ಇಬ್ಬರೂ ಆಯ್ಕೆ ಮಾಡಿಕೊಂಡ ಮಾರ್ಗ ಯಾವುದು? ಅಷ್ಟಕ್ಕೂ ಬದುಕೆಂದರೆ ತಮಗಾಗಿ ಹೋರಾಡುವುದಾ, ಇನ್ನೊಬ್ಬರಿಗಾಗಿ ಹೋರಾಡುವುದಾ? ಪ್ರೇಮವೆಂದರೆ ತ್ಯಾಗವಾ, ದಾನವಾ? ಕನಸೆಂದರೆ ನಾವೇ ಕಟ್ಟಿಕೊಳ್ಳುವುದಾ, ಇನ್ನೊಬ್ಬರು ನಮಗಾಗಿ ಕಟ್ಟುವುದಾ?
ಮಧು ವೈ ಎನ್ ತುಮಕೂರು ಜಿಲ್ಲೆಯವರು. ತುಮಕೂರಿನ ನವೋದಯ ವಿದ್ಯಾಲಯದಲ್ಲಿ ವಿದ್ಯಾಭ್ಯಾಸ. ಬೆಂಗಳೂರಿನ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿಯಿಂದ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್ ವಿಭಾಗದಲ್ಲಿ ಎಂಜಿನಿಯರಿಂಗ್ ಪದವಿ. ಬಿಟ್ಸ್ ಪಿಲಾನಿಯಿಂದ ಸಾಫ್ಟವೇರ್ ಸಿಸ್ಟಮ್ಸ್‌ನಲ್ಲಿ ಮಾಸ್ಟರ್ಸ್ ಡಿಗ್ರಿ. ಮೈಸೂರಿನ ಇನ್ಫೋಸಿಸ್ ಸಂಸ್ಥೆಯಲ್ಲಿ ಉದ್ಯೋಗ ಆರಂಭ. ಸದ್ಯಕ್ಕೆ ಐಬಿಎಮ್ ಉದ್ಯೋಗಿ. ಬೆಂಗಳೂರಿನಲ್ಲಿ ವಾಸ.
ಇವರ ಹಲವಾರು ಕತೆಗಳು ಕನ್ನಡದ ಪ್ರಮುಖ ಕಥಾಸ್ಪರ್ಧೆಗಳಲ್ಲಿ ಬಹುಮಾನ ಪಡೆದಿವೆ. ಚೊಚ್ಚಲ ಕೃತಿ ‘ಕಾರೇಹಣ್ಣು’ 2019ರ ‘ಈ ಹೊತ್ತಿಗೆ ಕಥಾ ಸಂಕಲನ ಪ್ರಶಸ್ತಿ’ ಪಡೆದಿದೆ. ಎರಡನೆಯ ಕಥಾ ಸಂಕಲನ ‘ಫೀಫೋ’ ಹೊಸ ಮಾದರಿಯ ಕತೆಗಳ ಗುಚ್ಛವೆಂದು ಗುರುತಿಸಿಕೊಂಡಿದೆ. ಇವರ ‘ಕನಸೇ ಕಾಡುಮಲ್ಲಿಗೆ’ ಕನ್ನಡದಲ್ಲಿ ವಿರಳಾತಿವಿರಳವಾಗಿರುವ ಯಂಗ್ ಅಡಲ್ಟ್ ಮಾದರಿಯ, ಹಾಸ್ಯ-ಪ್ರಣಯ ಮಿಶ್ರಿತ ಲವಲವಿಕೆಯ ಕಾದಂಬರಿಯೆಂದು ಓದುಗರ ಪ್ರೀತಿಗೆ ಪಾತ್ರವಾಗಿದೆ. ‘ಡಾರ್ಕ್‌ವೆಬ್’ ಕೃತಿ ತಂತ್ರಜ್ಞಾನದ ಸಂಗತಿಗಳನ್ನು ಕಥಾ ಮಾದರಿಯಲ್ಲಿ ಪ್ರಸ್ತುತಪಡಿಸಿರುವ ಕನ್ನಡದ ಮೊದಲ ತಂತ್ರಜ್ಞಾನ ಪುಸ್ತಕವೆಂದು ಮೆಚ್ಚುಗೆ ಪಡೆದಿದೆ. ಅದೇ ಮಾದರಿಯ ಹೊಸ ಪುಸ್ತಕ ‘ಆರ್ಟಿಫೀಶಿಯಲ್ ಇಂಟೆಲಿಜೆನ್ಸ್, ಸರಳಗನ್ನಡದಲ್ಲಿ’ ಕನ್ನಡದಲ್ಲಿ ಎಐ ಬಗ್ಗೆ ಮೂಡಿ ಬಂದಿರುವ ಪ್ರಥಮ ಕೃತಿಯಾಗಿ ಗಮನ ಸೆಳೆದಿದೆ.
ಇವರು ಸದ್ಯಕ್ಕೆ ವಿಜಯಕರ್ನಾಟಕ ಪತ್ರಿಕೆಗೆ ‘ಟೆಕ್‌ಪೋಸ್ಟ್’ ಎಂಬ ಅಂಕಣದಲ್ಲಿ ಎರಡು ವಾರಕ್ಕೊಮ್ಮೆ ವಿಜ್ಞಾನ ತಂತ್ರಜ್ಞಾನ ಕುರಿತಾಗಿ ಲೇಖನಗಳನ್ನು ಬರೆಯುತ್ತಿರುವರು.
ಲೇಖಕರ ಭಾಷೆ ಚೆನ್ನಾಗಿದೆ. ಆದರೆ ' ಕನಸೇ ಕಾಡುಮಲ್ಲಿಗೆ' ಓದಿದವರಿಗೆ ಮತ್ತದೇ ಕತೆ ಓದ್ತಾ ಇದೇವೋ ಎಂಬ ಅನುಮಾನ ಕಾಡುತ್ತದೆ. ಪಾತ್ರಗಳು ಹಾಗೂ ಕತೆ ಎಂಬತ್ತರ ದಶಕದ ಕನ್ನಡ ಸಿನಿಮಾಗಳಿಂದ ಎದ್ದು ಬಂದಷ್ಟೇ ಸಿಲ್ಲಿಯಾಗಿದೆ. ' ಏನೂಂದ್ರೇ ಹೊಡೀಬೇಡಾಂದ್ರೆ..' ತರಹದ ಕಲ್ಪನಾ ರೋಧನೆ ನಾಯಕಿ ಪಾತ್ರದಲ್ಲಿ ಕಾಣುತ್ತದೆ. ಪೋಷಕ ಪಾತ್ರಗಳು ಒಂದೂ ಸರಿಯಾಗಿ ಬೆಳೆದಿಲ್ಲ. ಒಂದು ಸತ್ಯ ಅಂಶ ಇಟ್ಟುಕೊಂಡು ಅದರ ಸುತ್ತಲೂ ಕತೆ ಕಟ್ಟಿದ ಹಾಗೆ ಅನಿಸಿತು. ಮಧು ಅವರ ಹಿಂದಿನ ಕಾದಂಬರಿ ಓದಿದವರಿಗೆ ಕೊನೆ ಮಾಡುವುದು ಅವರ ಫೋರ್ಟೆ ಅಲ್ಲ ಎಂದು ಚೆನ್ನಾಗಿ ಗೊತ್ತಿರುತ್ತದೆ. ಒಟ್ಟಾರೆ ಹೇಳಬೇಕಾದರೆ ಇದು ರ‌್ಯಾಂಕ್ ಪಡೆಯುವ ಅರ್ಹತೆ ಇರುವ ವಿದ್ಯಾರ್ಥಿ ಕಡಿಮೆ ಮಾರ್ಕ್ ತೆಗೆದಾಗ ಬರುವ ಕೋಪ. ಅಷ್ಟು ಪ್ರತಿಭೆ ಇರುವ ಲೇಖಕ ಇಂತಹ ಸಾಮಾನ್ಯ ಕಾದಂಬರಿ ಬರೆದರಲ್ಲ ಎಂದು ಬೇಸರವಾಗುತ್ತದೆ.
ನಾನು ಲವ್ ಸ್ಟೋರಿಗಳನ್ನು ಓದುವುದು ಕಡಿಮೆ. ಕಾರಣ ಇಷ್ಟೇ.. ಹೋಗುವ ದಾರಿ ಎಷ್ಟೇ ಸುಂದರವಾಗಿರಲಿ, ಪ್ರೇಮ ಕಥೆಯ ಅಂತ್ಯ ತುಂಬ ಪ್ರಿಡಿಕ್ಟಬಲ್. ಒಂದೋ ಪ್ರೇಮಿಗಳು ಜೊತೆಯಾಗಿ ಸುಖವಾಗಿ ಬದುಕಿ ನನಗೆ ಹೊಟ್ಟೆಕಿಚ್ಚು ಮಾಡಿಸುತ್ತಾರೆ. ಅಥವಾ ಕಥೆ ದುರಂತದಲ್ಲಿ ಅಂತ್ಯವಾಗಿ 'ಅಯ್ಯೋ ಇಂಥಾ ಮುದ್ದು ಜೋಡಿಗೆ ಹೀಗಾಯ್ತಲ್ಲಾ' ಅನ್ನೋ ಹೊಟ್ಟೆಯುರಿ ಉಂಟುಮಾಡುತ್ತಾರೆ.ಹಾಗಿದ್ದರೂ 'ಇಂತಿ, ಪೂರ್ವಿ' ಓದಿದೆ. ಒಂದಷ್ಟು ನಗುತ್ತಾ, ಲೇಖಕರನ್ನು ಹಳಿಯುತ್ತಾ, ಅಳುತ್ತಾ .... ಉಫ್!
ಇದೊಂದು ತುಂಬ ನಾಸ್ಟಾಲ್ಜಿಕ್ ಫೀಲ್ ಕೊಡೋ ಬೇಸಿಕ್ ಮೊಬೈಲ್ ಸೆಟ್ಟಿನ- ನೂರು ಫ್ರೀ ಮೆಸೇಜುಗಳ ಕಾಲದ ಲವ್ ಸ್ಟೋರಿ ಮತ್ತು ಲವ್ ಸ್ಟೋರಿಯಾಚೆಗೂ ಜೀವನ ಇದೆ ಎಂದು ನೆನಪಿಸೋ ಸ್ಟೋರಿ. ಮೊದಲ ಕೆಲ ಪುಟಗಳವರೆಗೆ 'ಕನಸೇ ಕಾಡುಮಲ್ಲಿಗೆ'ಯದೇ ಮುಂದುವರೆದ ಭಾಗವೇನೋ ಎನಿಸುತ್ತದೆ but its different.
ನಾವು ಹುಟ್ಟಿದಂದಿನಿಂದ ಹತ್ತಾರು ಸಿನಿಮಾಗಳಲ್ಲಿ ಸಾವಿರಾರು ಬಾರಿ ನೋಡಿದ ಅದೇ ಪ್ರೇಮಕಥೆ, ಊಹೆಗೆ ತಕ್ಕ ದಾರಿ, ಅದದೇ ತಿರುವುಗಳು ಇದ್ದರೂ....ಊ..ಊ... 'ಇಂತಿ,ಪೂರ್ವಿ' ವಿಭಿನ್ನ ಅನಿಸೋದು, ಓದುಗರನ್ನು ಹಿಡಿದಿಡೋದು ಭಾಷೆ ಮತ್ತು ನಿರೂಪಣೆಯ ಕಾರಣಕ್ಕೆ. ಮಧು ವೈ.ಎನ್'ರ ಕಥಾಸಂಕಲನದಲ್ಲಿ ಕಾಣಸಿಗುವ ಭಾಷೆಗೂ ಕಾದಂಬರಿಗಳಲ್ಲಿ ಕಾಣಸಿಗುವ ಭಾಷೆ, ನಿರೂಪಣೆಗೂ ಅಜಗಜಾಂತರ. ಬಹುಶಃ ಸಣ್ಣ ಕಥೆಗಳ ಒಟ್ಟೂ ಚೌಕಟ್ಟು ಚಿಕ್ಕದಿರುವುದರಿಂದಲೋ ಏನೋ, ಹೇಳಹೊರಟ ಕತೆಯನ್ನು ಗಂಭೀರವಾಗಿ ಹೇಳಿ ಮುಗಿಸುವ ಲೇಖಕ ಕಾದಂಬರಿಗಳ ವಿಷಯಕ್ಕೆ ಭಾಳಾ ಧಾರಾಳಿ. ಓದುಗರನ್ನು ಆಕರ್ಷಿಸುತ್ತಾ, ರಂಜಿಸುತ್ತಾ ತೆಳು ಹಾಸ್ಯದಲ್ಲಿ ಮೈಮರೆಸಿ ಆ ಮರೆವಿನ ಮಾಯಾ ಘಳಿಗೆಯಲ್ಲೆ ರಪ್ಪನೆ ನೆಲಕ್ಕಪ್ಪಳಿಸುವಂತೆ ವಾಸ್ತವದ ಕಹಿ ಕಷಾಯ ಕುಡಿಸಿಬಿಡುತ್ತಾರೆ. ಲಘುವಾಗಿ ಆಡುತ್ತಾಡುತ್ತಾ ಸಾಗಿದ್ದ ಕಥೆ ಇಪ್ಪತ್ತೊಂದನೇ ಅಧ್ಯಾಯ ತಲುಪಿದಾಗ ಓದುತ್ತಿದ್ದ ನನಗೆ ಅಕ್ಷರಗಳು ಕಾಣದಷ್ಟು ಕಣ್ಣು ಕೊಳವಾಗಿತ್ತು.
ಮೊದಲ ಕಾದಂಬರಿ ಕನಸೇ ಕಾಡುಮಲ್ಲಿಗೆ ಡಿಡಿ ಚಂದನದಲ್ಲೂ ಪ್ರಸಾರ ಯೋಗ್ಯವಾಗಬಲ್ಲ u/a cerificateಗೆ ಅರ್ಹವಾಗಿ ಮುದ್ದಾಗಿತ್ತು. ಇಂತಿ,ಪೂರ್ವಿ ದ್ವಿತೀಯಾರ್ಧದಲ್ಲಿ ನೆಟ್ಫ್ಲಿಕ್ಸ್ ಸಿನಿಮಾಗಳಂತಾ a certificate ದೃಷ್ಯಾವಳಿಗಳಿಂದ ಕೂಡಿದ್ದು ಓದುವಾಗ 'ಏ ಥೋ ಥೋ ಥೋ!' ಅನಿಸಿದ್ದು ಸುಳ್ಳಲ್ಲ.
ಪುಸ್ತಕ ಮುದ್ರಣದ ವಿಷಯದಲ್ಲಿ ಸ್ವಲ್ಪ ಎಡಿಟಿಂಗ್ ಅಗತ್ಯ ಇತ್ತು ಅನಿಸಿದರೂ ಓದಿನ ಭರಕ್ಕೆ ಅದೇನೂ ಅಡಚಣೆ ಅನಿಸಲಿಲ್ಲ. ಟಿನ್ - ಅರ್ಲೀ ಇಪ್ಪತ್ತರ ಓದುಗರಿಗೆ, ಹೊಸ ಓದುಗರಿಗೆ, ಒಂದು ಹೆವೀ ಓದಿನ ನಂತರ ಚೂರು ಲೈಟ್ ರೀಡ್ ಇರಲಿ ಅಂದುಕೊಳ್ಳೋರಿಗೆ ಇಷ್ಟವಾಗುವಂತಾ ಮಜವಾದ ಓದು.
"ಒಂದು ಮಾತಿದೆ ಬದುಕು ನಮಗೆ ತುಂಬಾ ಅವಕಾಶ ಕೊಡುತ್ತದೆ ಜೀವನನ್ನು ಸರಿ ಮಾಡಿ ಕೊಳ್ಳಲು ಅಂತ. ಆದ್ರೆ ಇಲ್ಲಿ ನಾಯಕಿಯೇ ಬದುಕಿಗೆ ಒಂದಿಷ್ಟು ಅವಕಾಶ ಕೊಟ್ಟಿದ್ದಳು ಸರಿ ಆಗು ಅಂತ ಆದ್ರೆ ಕೊನೆಯವರೆಗೂ ಅವಳಿಗೆ ಸರಿ ಆಗಲಿಲ್ಲ..."
ಲೇಖಕರು ಕನ್ನಡಕ್ಕೆ ಒಂದಿಷ್ಟು ಹೊಸ ಓದುಗರನ್ನು ರೆಡಿ ಮಾಡಿಯೇ ಶುದ್ಧ ಅಂತ ನಿರ್ಧಾರ ಮಾಡಿ ಬರಿತಾ ಇದ್ದಾರೆ..ಇದಕ್ಕಿಂತ ಮೊದಲ ಪುಸ್ತಕ "ಕನಸೇ ಕಾಡು ಮಲ್ಲಿಗೆ" ಒಂದು ಸಿಂಪಲ್ ಕತೆ ಎಳೆಯನ್ನ ಹೊಂದಿದ್ದರೂ... ಆ ಬರವಣಿಗೆ, ಆ ವಿವರಣೆ, ಆ ಹಾಸ್ಯರಸದ ಉಪಯೋಗ ಒಂದಿಷ್ಟು ಹೊಸ ಓದುಗರನ್ನು ಹುಟ್ಟು ಹಾಕಿರುವುದರಲ್ಲಿ ಡೌಟ್ ಇಲ್ಲ...
ಇಂತಿ ಪೂರ್ವಿ ಒಂದು ಪ್ರೇಮ ಕತೆ . ಬದುಕಿನ ಕ್ರೌರ್ಯ, ದುರಾದೃಷ್ಟ, ಅಸಹಾಯಕತೆ ಸುತ್ತ ಹೆಣೆದ ಪ್ರೇಮ ಕತೆ. ಕತೆಯ ಕೊನೆ open end ಇದೆ. ನಾವೇ ಏನೂ ಬೇಕಾದರೂ ಕಲ್ಪನೆ ಮಾಡಿಕೊಳ್ಳಬಹುದು. ನಾನು ಇದನ್ನು ಲೇಖಕರ ಕತೆ ಕಟ್ಟುವ ಪ್ರಯೋಗ ಎನ್ನುತ್ತೇನೆ. ಅದು ಕೂಡ ನನಗೆ ಇಷ್ಟ ಆಯ್ತು.
ಹಾಗೆಯೇ ಇಷ್ಟು ಚಂದ ಪ್ರೇಮ ಕತೆಯ ಒಳಗೆ ಎಷ್ಟು ಜಾಣ್ಮೆಯಿಂದ ಉನ್ನತ ಶಿಕ್ಷಣದ ಸೀಟುಗಳ ಹಂಚಿಕೆಯ ಮಾಪಿಯಾವನ್ನು ಕತೆಯಲ್ಲಿ ಬಳಸಿ ಕೊಂಡಿದ್ದಾರೆ ಅಂದ್ರೆ.. super 👌.
ಆದ್ರೆ ಈ ಕತೆಯ ಮುಖ್ಯ ರಸವೇ ವಿಷಾದ, ಹಾಗಿದ್ದಾಗ ಓದುಗರನ್ನು ಹಿಡಿದು ಇಡುವುದು ಸ್ವಲ್ಪ ಕಷ್ಟ. ಸರಸ ಸಲ್ಲಾಪದ ನಡುವೆ ಬರುವ, ವಿಜ್ಞಾನ ಮತ್ತು ಆಧ್ಯಾತ್ಮ ವಿಷಯಗಳ ಚರ್ಚೆ ಹೊಸ ಓದುಗರ ತಲೆ ಮೇಲಿಂದ ಹೋಗುವ ಸಾಧ್ಯತೆ ಇದೆ.
"ಕನಸೇ" ಹುಟ್ಟಿ ಹಾಕಿರುವ banch mark ತಲುಪಲು ಸ್ವಲ್ಪ ಕಷ್ಟ ಪಡತ್ತೆ ಈ ಪುಸ್ತಕ ಅಂತ ನನಗೆ ಅನ್ನಿಸ್ತಾ ಇದೆ.
#ನಾ_ಓದಿದ_ಪುಸ್ತಕ: #ಇಂತಿ_ಪೂರ್ವಿ ಆಕೆ ತನಗೆ ಬೇಕು ಅನ್ನೋದನ್ನ ಪಡೆಯಬೇಕು ಎಂಬ ಛಲಗಾರ್ತಿ, ಅವನು ಏನು ಕಡಿಮೆ ಇಲ್ಲ ಇಂತಿಪ್ಪ ವಾತಾವರಣ,ಆಟ ಪಾಠಗಳ ನಡುವೆ ಹುಟ್ಟಿಕೊಂಡ ಪೈಪೋಟಿ,ಪಿಯುಸಿ ಮುಗಿಸಿ ಇಂಜಿನಿಯರಿಂಗ್ ಬಂದ ಜೋಡಿ ಇಲ್ಲಿಯೂ ಟ್ವಿಸ್ಟ್, ಇಬ್ರೂ ದಕ್ಕಿದನ್ನು ತ್ಯಜಿಸಿ ಬಂದವರು ಒಬ್ರು, ದಕ್ಕದೇ ಅನಿವಾರ್ಯಕ್ಕೆ ಸ್ವೀಕರಿಸಿ ಬಂದಿದ್ದು ಇನ್ನೊಬ್ಬರು. ಶಿಕ್ಷಣ ವ್ಯವಸ್ಥೆಯ ಕರಾಳ ಸತ್ಯವನ್ನು ಒಂದೇ ನುಡಿಯಲ್ಲಿ ಹೇಳಿದ್ದಾರೆ ಲೇಖಕರು. ಇಬ್ಬರ ನಡೆ ನುಡಿ ಬೇರೆ, ಸಿದ್ಧಾಂತಗಳು ಬೇರೆ ಅಷ್ಟೇ ಯಾಕೆ ಕೌಟುಂಬಿಕ ವ್ಯವಸ್ಥೆಯ ಕಟ್ಟುಪಾಡುಗಳೇ ಬೇರೆ, ಆದ್ರೆ ಗುರಿ ಮಾತ್ರ ಒಂದೇ ಉದ್ಧಾರ ಆಗ್ಬೇಕು.
ಲೇಖಕ ಮಧು ಅವ್ರ ಕಾದಂಬರಿಗಳನ್ನು ನಾನು ಬಲ್ಲೆ, ಇದ್ರ ಹಿಂದಿನ ಕನಸೇ ಕಾಡುಮಲ್ಲಿಗೆ ಕೂಡ ಇದೆ ರೀತಿ, ಅವ್ರೇ ಹೇಳಿದಂತೆ ಆದ್ರ ಮುಂದುವರಿದ ಭಾಗ ಅಂತ, ಒಟ್ಟಾರೆ ಅದು ಒಂತರಾ ಫ್ರೆಶ್ನೆಸ್ ಇದ್ರೆ ಇದರಲ್ಲೊಂದು ಗುರಿಯೆಡೆಗಿನ ಗಟ್ಟಿತನ ಇದೆ,ಜೊತೆಗೊಂದಿಷ್ಟು ಪೋಲಿತನವು ಸಹ,ಕೆಲವೊಂದು ಭಾಷೆ ತೀರ ಅತಿ ಅನ್ನಿಸ್ತು ಅದಿಲ್ಲದೆಯೂ ಈ ಕಾದಂಬರಿ ಬರೆಯಬಹುದಿತ್ತೇನೋ ಅನ್ನಿಸ್ತು ನಂಗೆ,ಇರ್ಲಿ ಅದು ಲೇಖಕನ ಇಚ್ಛೆ ಓದಿ ಹೇಳುವುದು ನಮ್ ಇಚ್ಛೆ ಏನಂತೀರಾ? ತುಮಕೂರಿನ ಸೊಗಡಿನ ಭಾಷೆ,ಅಲ್ಲಿನ ವಾತಾವರಣ ಅಲ್ಲಲ್ಲಿ ಕೇಳಿಬರುವ Raw ಬೈಗುಳ,ಇಂಜಿನಿಯರಿಂಗ್ ಅಲ್ಲಿ ಬರುವ ಸನ್ನಿವೇಶಗಳು,Gen Z ತಾಗುವ ಕೆಲವು ವಸ್ತುಗಳು ಒಟ್ಟಾರೆ ಮನಸಿಗೆ ಮುದ ನೀಡುತ್ತೆ.
ಇನ್ನೊಂದು ವಿಷ್ಯ ಅಂದ್ರೆ ಇಡೀ ಕಾದಂಬರಿಯದ್ದು ಒಂದು ತೂಕವಾದ್ರೆ, ಅಲ್ಲೊಂದು ಪ್ರೀತಿ ಎಂಬ ಅನುಭೂತಿ ಇತಿಶ್ರೀ ಹಾಡಿದ ಅಧ್ಯಾಯ ಒಂದಿದೆ ಅದರದ್ದೇ ಒಂದು ತೂಕ,ಯಾರು, ಯಾರಿಂದ,ಏನಕ್ಕಾಗಿ ಎಂಬುದು ಕಾದಂಬರಿ ಓದಿಯೇ ನೀವು ತಿಳಿದುಕೊಳ್ಳಿ. ಇನ್ನು ಕೆಲವು ತತ್ವಜ್ಞಾನದ ಸಾಲುಗಳು ಖಂಡಿತ ಕಾಡುತ್ತವೆ
ಓದು ಶುರುಮಾಡಬೇಕು ಅನ್ನೋರು ನೀವು ಆಗಿದ್ರೆ, ಅಥವಾ ಏನೇನೋ ಓದಿ ತಲೆ ಬಿಸಿಯಾಗಿದ್ರೆ, ಒಂದೊಳ್ಳೆ ಪ್ರೇಮಕಥೆ ಓದೋಣ ಅಂತ ನಿಮ್ಗೆ ಅನ್ಸಿದ್ರೆ , ಅಷ್ಟೇ ಯಾಕೆ ಏನು ಓದಬೇಕು ಅಂತ ಗೊತ್ತಿಲ್ಲದಿದ್ರೆ ಈ ಪುಸ್ತಕ ಓದಿ ಯಾಕೆ ಅಂದ್ರೆ ಓದಿಸಿಕೊಳ್ಳುವ ಓದಿದ ನಂತರವೂ ನೆನಪಲ್ಲಿ ಉಳಿಯುವ ಪಾತ್ರಗಳು ಇಲ್ಲಿ ಬಹಳಷ್ಟು ಇದ್ದಾವೆ. ಧನ್ಯವಾದಗಳು ಮಧು ಈ ಪುಸ್ತಕ ಸಾಹಿತ್ಯ ಲೋಕಕ್ಕೆ ಕೊಟ್ಟಿದ್ದಕ್ಕೆ
ಪಿಯುಸಿ ಪಾಸಾದ ವಿದ್ಯಾರ್ಥಿಗಳು ತಮ್ಮ ಹದಿವಯಸ್ಸಿನ ಮಂಗಾಟ ಬಿಟ್ಟು ಭವಿಷ್ಯ ರೂಪಿಸಿಕೊಳ್ಳುವಾಗ ಪ್ರೀತಿ ಪ್ರೇಮಗಳ ಸುಳಿಯಲ್ಲಿ ಸಿಲುಕುತ್ತಾರೆ. ಇಬ್ಬರಿಗೂ ಅವರದ್ದೇ ಆದ ಅನಿವಾರ್ಯಗಳಿವೆ. ಸರ್ಕಾರಿ ವಸತಿ ಶಾಲೆಯಲ್ಲಿ ಓದಿದ ಬಡ ವಿದ್ಯಾರ್ಥಿನಿ, ಮಧ್ಯಮ ವರ್ಗದ ನಿರೀಕ್ಷೆಗಳ ಭಾರ ಹೊತ್ತ ವಿದ್ಯಾರ್ಥಿ ಇಬ್ಬರ ನಡುವಿನ ಸೆಳೆತ ಮತ್ತು ಏರಿಳಿತವೇ ಕಾದಂಬರಿಯಾಗಿದೆ. ಇಬ್ಬರಲ್ಲಿಯೂ ತಮ್ಮ ಪರಿಸ್ಥಿತಿಗಳಿಂದ ಮುಂದೆ ಬರಬೇಕು ಎನ್ನುವ ತುಡಿತವಿದೆ. ಆದರೆ ಸಮಾಜದ ಆದರ್ಶಗಳು, ವಾಸ್ತವದ ನೋವು, ನಲಿವುಗಳು, ಸಮವಯಸ್ಕರ ಅನುಕೂಲಗಳು ಇವರನ್ನು ಕಟ್ಟಿಹಾಕುತ್ತವೆ. ವೈದ್ಯಕೀಯ ಸೀಟು ತ್ಯಾಗ ಮಾಡಿ, ಎಂಜಿನಿಯರಿಂಗ್‌ಗೆ ಬರುವ ಪೂರ್ವಿ, ವೈದ್ಯಕೀಯ ಬಯಸಿದ್ದರೂ ಅಂಕಗಳಿಲ್ಲದೆ ಎಂಜಿನಿಯರಿಂಗ್ ಓದಲು ಬರುವ ಶರತ್. ಯಾರು ಯಾರಿಗಾಗಿ ತ್ಯಾಗ ಮಾಡಿದರು? ಯಾರು ಯಾರಿಗೆ ಉಪಕಾರ ಮಾಡಿದರು? ನಮ್ಮ ಸಮಾಜದ ಜಾತಿ ಮತ್ತು ವರ್ಗಗಳ ಶ್ರೇಣಿಗಳಿಂದ ಅದೆೇಗೆ ಬಸವಳಿದರು? ಶಿಕ್ಷಣ ವ್ಯವಸ್ಥೆಯಲ್ಲಿರುವ ಓರೆಕೋರೆಗಳು, ವಸತಿ ನಿಲಯಗಳಲ್ಲಿಯ ಸ್ಥಿತಿ ಧಾರ್ಮಿಕ ಕೇಂದ್ರದಲ್ಲಿರುವ ವಿದ್ಯಾರ್ಥಿಗಳ ಪರಿಸ್ಥಿತಿ ಮತ್ತು ಎಲ್ಲ ಕಡೆಯೂ ಊಟಕ್ಕೆ ಇರುವ ಪರಿಪಾಟಲು ಎಲ್ಲವೂ ಚಿತ್ರಕಶಕ್ತಿಯ ಬರವಣಿಗೆಯಲ್ಲಿ ಕಂಡು ಬರುತ್ತವೆ. ಮಕ್ಕಳ ಮೋಹ, ಅವರಿಂದಿರುವ ನಿರೀಕ್ಷೆ, ಔದಾರ್ಯ ತೋರುವಂತಿರುವವರ ಸ್ವಾರ್ಥ, ನಗರ ಬದುಕಿನಲ್ಲಿ ಸ್ವಕೇಂದ್ರಿತ ವ್ಯಕ್ತಿತ್ವಗಳ ಅನಾವರಣ, ಹೀಗೆ ಹಲವು ಆಯಾಮಗಳಲ್ಲಿ ಮನುಷ್ಯರ ಸಹಜಗುಣಗಳನ್ನೇ ಬಿಡಿಸುತ್ತಾ ಹೋಗುತ್ತದೆ ಈ ಕಾದಂಬರಿ. ಈ ಜಗತ್ತು ಇರುವುದೇ ಹೀಗೆ ಎಂಬ ಹತಾಶೆ ಮೂಡುವಾಗಲೇ ಕೆಲವು ಪಾತ್ರಗಳು ಈಗಲೂ ಮಾನವೀಯತೆ ಉಳಿದಿದೆ ಎಂಬುದನ್ನೂ ಹೇಳಿ ಹೋಗುತ್ತವೆ. ನಮ್ಮ ಸಮಾಜದ ಚೌಕಟ್ಟನ್ನು ಮೀರುವುದು ಹೇಗೆ? ಮೀರಿದ ನಂತರವೂ ಯಾವ ಬಂಧನದಲ್ಲಿದ್ದೇವೆ ಎಂಬುದು ಗೊತ್ತಾಗದ ಬಂಧಗಳೇ ಹೇಗೆ ಮೇಲುಗೈ ಸಾಧಿಸುತ್ತವೆ ಇವೆಲ್ಲವೂ ಪ್ರೀತಿ ಪ್ರೇಮಗಳೊಂದಿಗೆ ನಾವೂ ಇದ್ದೇವೆ ಎಂಬಂತೆ ಭಾಸವಾಗುತ್ತಾ ಹೋಗುತ್ತವೆ. ಸಮ್ಮಿಲನದ ಸತ್ಯಕ್ಕೆ ಕನ್ನಡಿ ಹಿಡಿಯುತ್ತಲೇ, ಔದಾರ್ಯದ ಕೈದೀವಿಗೆ ಹಿಡಿಯುವಂತೆ ಮಾಡುತ್ತದೆ ಈ ಪುಸ್ತಕದ ಓದು.
Patho end ಇದ್ರು ಕತೆ ಓದುವಾಗ ಎಲ್ಲೂ bore ಅಂತು ಆಗಲ್ಲ.ಒಂದು ಸಲ ಶುರು ಮಾಡಿದ್ರೆ, ಮುಂದೆ ಏನಾಗುತ್ತೆ ಅನ್ನೂ curiosity li full ಓದಿಸಿಕೊಳ್ಳುವ ಒಂದು innocent love story.ಅಲ್ಲಲ್ಲಿ ಮನಸಾರೆ ನಗೂದು is bonus. ಬರೆದಿರುವ ರೀತಿಗೆ,Fiction ಆದ್ರು ಅತೀ ನಿಜವಾಗಿ ಎಲ್ಲೂ ನಡೆದಿರುವ ಯಾರದೋ ಕತೆ ಅನ್ನಿಸುತ್ತೆ.