ಫೈಲಿನೊಳಗಿದ್ದ ಡಾಕ್ಯೂಮೆಂಟ್ಗಳ ಕಡೆಗೆ ಗಮನಹರಿಸುತ್ತಾ, ತನ್ನ ಕೈಯಲ್ಲಿದ್ದ ಉರಿವ ಸಿಗರೇಟನ್ನು ನೆಲಕ್ಕೆಸೆದ ನಂತರ ಅದನ್ನು ಕಾಲಿನಿಂದ ಹೊಸಕಿ ಹಾಕಿ, ಇನ್ನೇನು ಜೇಬಿನೊಳಗಿನಿಂದ ಹೊಸ ಸಿಗರೇಟನ್ನು ಕೈಗೆತ್ತಿಕೊಳ್ಳಬೇಕೆನ್ನುವಷ್ಟರಲ್ಲಿ ಅವನೆದುರಿಗಿದ್ದ ದೇವಸ್ಥಾನದ ಗರ್ಭಗುಡಿಯಿಂದ ಸದ್ದೊಂದು ಹೊರಹೊಮ್ಮಿದಂತಾಯಿತು. ಯಾರೋ ಕೂಗಿಕೊಂಡಂತಹ ಸದ್ದು!! ತಕ್ಷಣವೇ ಆ ಸದ್ದಿಗೆ ಪ್ರತಿಕ್ರಿಯಿಸುತ್ತಾ "ಇವ್ಳಿಗೆ ಹೇಳ್ದೆ, ಈ ಟೈಮಲ್ಲಿ ಪೂಜೆ ಗೀಜೆ ಬೇಡ ಅಂತ. ನನ್ನ ಮಾತೇ ಕೇಳಲ್ಲ" ಎಂದು ಕಿರಿಕಿರಿಗೊಂಡ ಹಿಮವಂತನು, ತನ್ನ ಕೈಯಲ್ಲಿದ್ದ ಫೈಲನ್ನು ಆತುರಾತುರವಾಗಿ ಕಾರಿನೊಳಗಿಟ್ಟು ನಂತರ ಅದೇ ಆತುರದಲ್ಲಿ ತನ್ನೆದುರಿಗಿದ್ದ ಗರ್ಭಗುಡಿಯತ್ತ ಹೆಜ್ಜೆ ಹಾಕಿದ. ಗಾಢ ಮೌನವನ್ನು ತುಂಬಿಕೊಂಡಿದ್ದ ದೇವಸ್ಥಾನದ ಒಳಗೆ ನಡೆದು ಬಂದು "ಮಯೂರಿ, ಮಯೂರಿ.. ಏನದು ಸದ್ದು?'' ಎಂದು ಕೇಳುತ್ತಾ ಗರ್ಭಗುಡಿಯ ಸನಿಹಕ್ಕೆ ಬಂದವನಿಗೆ ಅತ್ತ ಕಡೆಯಿಂದ ಯಾವುದೇ ಪ್ರತಿಕ್ರಿಯೆಯಿರಲಿಲ್ಲ. ಇದು ಹಿಮವಂತನಲ್ಲಿ ಸಣ್ಣನೆಯ ಆತಂಕವನ್ನು ಹುಟ್ಟಿಸಿ "ಮಯೂರಿ.. ಮಯೂರಿ" ಎಂದು ಕೂಗುತ್ತಾ ತನ್ನೆದುರಿಗಿದ್ದ ಗರ್ಭಗುಡಿಯನ್ನು ಪ್ರವೇಶಿಸಿದವನಿಗೆ ಅಲ್ಲೊಂದು ಬಹುದೊಡ್ಡ ಅಚ್ಚರಿ ಕಾದಿತ್ತು. ಗರ್ಭಗುಡಿಯೊಳಗೆ ಮಯೂರಿಯಿರಲಿಲ್ಲ. ಹಾಗೆಯೇ ಶಕುನವೆಂಬಂತೆ ಗರ್ಭಗುಡಿಯೊಳಗಿದ್ದ ದೀಪವೂ ಆರಿತ್ತು!!
ವೃತ್ತಿಯಿಂದ ಸಹಾಯಕ ನಿರ್ದೇಶಕರಾಗಿರುವ ಕೌಶಿಕ್ ಕೂಡುರಸ್ತೆ ಅವರು ಮೂಲತಃ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಕೂಡುರಸ್ತೆ ಗ್ರಾಮದವರು. ತಂದೆ-ಹೆಚ್.ಎಸ್. ತಮ್ಮೇಗೌಡ, ತಾಯಿ ಭಾಗ್ಯ ಆಚಾರ್ಯ ಇನ್ಸ್ಟಿಟ್ಯೂಟಿನಲ್ಲಿ ಏರೋನಾಟಿಕಲ್ ಇಂಜಿನಿಯರಿಂಗ್ ಪದವಿಯನ್ನು ಪಡೆದಿರುವ ಅವರು ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ‘ಹೃದಯದ ಮಾತು’ ಇವರ ಮೊದಲ ಪ್ರಕಟಿತ ಕವನ ಸಂಕಲನ.
‘ಇಂತಿ ನಿಮ್ಮ ಆತ್ಮೀಯ’ ಎಂಬ ಕಾದಂಬರಿಯು ಇವರ ಎರಡನೆಯ ಪ್ರಕಟಿತ ಕೃತಿಯಾಗಿದ್ದು ಎರಡನೇ ಮುದ್ರಣವನ್ನು ಕಂಡಿದೆ. ಈ ಕಾದಂಬರಿಯು ‘ಬಹ್ರೇನ್ ಕನ್ನಡ ಡಿಂಡಿಮ’ ಸಮಾರಂಭದಲ್ಲಿ ಪ್ರದರ್ಶನಗೊಂಡಿದೆ. ಗ್ರಿಫಿನ್ಸ್ ಗುರುಕುಲ ಎಂಬ ಸಂಸ್ಥೆಗೆ ಬಿಸಿನೆಸ್ ಕುರಿತಾದ ‘ಬಿಸಿನೆಸ್ ಮತ್ತು ನಾನು’ ಹಾಗೂ ‘ಬಿಸಿನೆಸ್ ಚಾಣಕ್ಯ’ ಎಂಬ ಪುಸ್ತಕಗಳನ್ನು ನಿರೂಪಣೆ ಮಾಡಿಕೊಟ್ಟಿದ್ದಾರೆ. ಇವರು ‘ದಾನವ’ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದು, ‘ಆಟೋಶಂಕ್ರಿ’ ಎಂಬ ಕಿರುಚಿತ್ರವನ್ನು ನಿರ್ದೇಶಿಸಿದ್ದಾರೆ.
ತಾನು ಬರೆದ ಕಾದಂಬರಿಗಳನ್ನು ಸಿನಿಮಾರೂಪಕ್ಕೆ ತಂದು ನಿರ್ದೇಶಕನಾಗೇಕೆಂಬುದು ಇವರ ಗುರಿ. ಇವರ ಪತ್ತೇದಾರಿಯ ಕಾದಂಬರಿಗಳಾದ ‘ಕಾಲಯ ತಸ್ಮೈ ನಮಃ’, ಮತ್ತು ‘ಸ್ವಪ್ನದ ಬೆನ್ನೇರಿ’ಯನ್ನು ಸ್ನೇಹ ಬುಕ್ ಹೌಸ್ ನವರು ಪ್ರಕಟಿಸಿದ್ದಾರೆ. ಜೊತೆಗೆ ಮತ್ತೊಂದು ಪತ್ತೇದಾರಿಯ ಕಾದಂಬರಿ ‘ತ್ಯಾಗರಾಜ್ ಕಾಲೋನಿ’ ಪ್ರಕಟಗೊಂಡಿದೆ.
ಪತ್ತೇದಾರ ಹಿಮವಂತ ಎಂಬ ಪಾತ್ರವನ್ನಿಟ್ಟುಕೊಂಡು ಸರಣಿ ಕಾದಂಬರಿಗಳ ಬರೆಯುತ್ತಿರುವ ಕೌಶಿಕರ 'ಹಿಮವಂತನ ಹತ್ತನೇ ಸಾಹಸ.'
ಆ ಮುಖ್ಯ ಪತ್ತೇದಾರನಿಗೆ ಏನಾದರೂ ಬ್ಯಾಕ್ ಸ್ಟೋರಿ ಕೊಡಿ. ಅವನನ್ನೂ ಹ್ಯೂಮನ್ ಆ್ಯಂಗಲ್‌ನಲ್ಲಿ ನೋಡುವ ಅವಕಾಶ ಕೊಡಿ. ಇದರಿಂದ ಓದುಗರಿಗೆ ಕನೆಕ್ಟ್ ಆಗುತ್ತದೆ ಎಂಬುದು ನಾನು ಯಾವಾಗಲೂ ಮಾಡುವ ತಕರಾರು.
ಕತೆಗಳು ಮುಂದೇನು ಮುಂದೇನು ಎಂದು ಓದಿಸಿಕೊಂಡು ಹೋದರೂ ಈ ಕೊರತೆ ಕಾಡುತ್ತಿತ್ತು.
ಈ ಕಾದಂಬರಿ ಅದೆಲ್ಲವನ್ನೂ ನಿವಾರಿಸಿದೆ.
ನಿಗೂಢವಾದ ಘಟನೆಗಳು, ರುಂಡವಿಲ್ಲದ ಶವ, ಪರಸ್ಪರರನ್ನೇ ಸಂಶಯದಿಂದ ನೋಡುವ ಊರು, ಊರಿನ ದೇವರ ಕುರಿತಾದ ನಂಬಿಕೆಯ ಕತೆ ಇವೆಲ್ಲವನ್ನೂ ಜೋಡಿಸುವ ಹಾಗೆ ಪತ್ತೇದಾರನ ವೈಯಕ್ತಿಕ ಬದುಕಲ್ಲೇ ಎದುರಾಗುವ ಸಮಸ್ಯೆ
ಇದೆಲ್ಲ ಸೇರಿಸಿ ತೃಪ್ತಿಯಾಗುವ ಹಾಗೆ ಉತ್ತರ ಕೊಡುವ ಸವಾಲು ಎಲ್ಲ ಕೃತಿಕಾರರದ್ದು. ಅದನ್ನು ಕೌಶಿಕ್ ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಇದೊಂದು ಒಳ್ಳೆಯ ವೆಬ್ ಸರಣಿ ಆಗಬಹುದು. ಅಷ್ಟು ಕುತೂಹಲಕಾರಿ ತಿರುವುಗಳಿರುವ ಕತೆ.
ಒಂದು ಕೋಪಿಯ ಕತೆ ಆದಮೇಲೆ ಇದೆ ಕಾದಂಬರಿ ಸಿಕ್ಕಾಪಟ್ಟೆ ಇಷ್ಟವಾಗಿದ್ದು ನನಗೆ. ಓದಿ ಮುಗಿಸಿದಮೇಲೆ ಒಂತರ ಖುಷಿ ಆಯ್ತು; ನಾನು ಒಂದು ಪತ್ತೇದಾರಿ ಕಾದಂಬರಿಯಲ್ಲಿ ಏನೇನು ಇರ್ಬೇಕ ಅಂದುಕೊಂಡಿದ್ನೊ ಅದೆಲ್ಲ ಇಲ್ಲಿತ್ತು. ಬರೀ ತನಿಖೆ ಕೊಲೆ ಅಂತ ಇರ್ದೆ ಇಲ್ಲಿ ಡ್ರಾಮಾ ಇತ್ತು, ಮಿಸ್ಟರಿ ಅದರ ಸುತ್ತಾನೆ ಬೆಳೀತಾ ಇತ್ತು, ಎರಡು ಪಾತ್ರಗಳ ಸುತ್ತಾನೆ ಮುಖ್ಯವಾಗಿ ಕಾದಂಬರಿ ನಡೆಯದೆ ಸುಮಾರು ಪಾತ್ರಗಳು ಮುಖ್ಯವಾಗಿ ಕಾಣಿಸ್ತಿದ್ವು, ಊರನ್ನ ಚೆನ್ನಾಗಿ (ಪರ್ಫೆಕ್ಟ್ ಆಗಿ ಅಲ್ಲದೆ ಇದ್ರು; ಪತ್ತೇದಾರಿ ಕಾದಂಬರಿಗೆ ಬೇಕಾದ್ದನ್ನು ತುಂಬಾ ಚೆನ್ನಾಗೆ) ಎದುರು ಹುಟ್ಟಿಸಿತ್ತು, ಒಂದೇ ಗುಕ್ಕಿನಲ್ಲಿ ಓದಿದ್ರೆ ಒಂದು ಸಿನೆಮಾ ನೋಡೋಕೆ ಬೇಕಾದಷ್ಟೇ ಸಮಯಾನ ಈ ಕಾದಂಬರಿ ತಗೊಳ್ತಿತ್ತು. ಮತ್ತೆ ಕೌಶಿಕ್ ಬರವಣಿಗೆಯಲ್ಲಿ ಹಾಕಿರೋ ಎಫರ್ಟ್ಸ್ ಮಾತ್ರ ತುಂಬಾ ಎದ್ದು ಕಾಣಿಸುತ್ತೆ; ಚೆನ್ನಾಗೆ ಓದಿಸಿಕೊಳ್ಳುತ್ತೆ. ಮಾರಿಕಟ್ಟೆ ಊರಲ್ಲಿ ದೇವಿ ವಿಗ್ರಹ ಕಾಣೆಯಾಗಿದೆ; ಸುಮಾರು ವರ್ಷಗಳ ಹಿಂದೆಯೂ ಹೀಗೆ ಕಾಣೆಯಾಗಿತ್ತು. ಈಗ ಊರಲ್ಲಿ ಒಂದರಮೇಲೊಂದು ಭಯಂಕರ ವಿಚಿತ್ರವಾಗಿ ಸಾವಾಗ್ತ ಇದೆ. ಹಿಮವಂತಂಗೆ ಮದ್ವೆ ಆಗಿದೆ, ಹೆಂಡ್ತಿ ಗರ್ಭಿಣಿ. ಮಾವನ ಮನೆಯಿದ್ದ ಊರೇ ಆ ಮಾರಿಕಟ್ಟೆ. ದೇವಿ ಸೂಚನೆ ಕೊಡ್ತಾ ಇದಾಳೆ, ದಾರಿ ತೋರಿಸ್ತಾ ಇದಾಳೆ. ಹಿಮವಂತ ಕ್ರಾಸ್ ಕನೆಕ್ಷನ್ ಆದ ಕರೆಯಲ್ಲಿ ಕೊಲೆ ಬಗ್ಗೆ ಏನೋ ಚೂರ್ ಪಾರು ಕೇಳಿಸಿಕೊಂಡಿದ್ದಾನೆ. ಮುಂದೇನಾಯ್ತು ತಿಳಿಯೋಕೆ ಈ ಕಾದಂಬರಿ ಓದಿ. ನನಗಂತು ಇಷ್ಟವಾಯ್ತು, ನಿಮಗೂ ಆಗಬಹುದು. ಜೈ.