ಕಾಡು, ಕಡಲು, ಬಹು ಭಾಷೆಗಳು, ಧರ್ಮಗಳು, ಉತ್ಸವಗಳು, ಹೊಸತನದ ಹಂಬಲ, ದುಡಿಮೆಯ ಛಲ ಎಲ್ಲವುಗಳಿಂದ ಸೊಗಸುಗೂಡಿರುವ ಒಂದು ನೆಲ ಕಾಲಾಂತರದಲ್ಲಿ ಏನಾಗುತ್ತದೆ ಎಂಬ ಪ್ರಶ್ನೆಗೆ ಉತ್ತರ ಕಷ್ಟ, ವೈಭವದ ಮೇರು ಏರಿದ ಊರುಗಳು ಕ್ಷುದ್ರತೆಯ ಆಳ ತಲುಪಿದ ಇತಿಹಾಸಗಳಿವೆ. ಮಲ್ಲಿಗೆಯ ನಾಡಿನಲ್ಲಿ ನೆತ್ತರು ಮಾತನಾಡುತ್ತದೆ. ಪ್ರಿಂಟು, ಪತ್ರಿಕೋದ್ಯಮ, ವಿದ್ಯೆ ಎಲ್ಲದರಲ್ಲೂ ಮೊದಲು ಎನಿಸಿಕೊಂಡ ದಕ್ಷಿಣ ಕನ್ನಡದ ಅಯನ 'ಹೆಳವನ ಹೆಗಲ ಮೇಲೆ ಕುರುಡ ಕುಳಿತಂತೆ' ಆಗಿರುವುದರ ಬಖೈರು ಈ ಕಾದಂಬರಿ. -ಹರೀಶ್ ಕೇರ
Jogi Girish Rao Hatwar ಹುಟ್ಟೂರು ಮಂಗಳೂರಿನ ಸುರತ್ಕಲ್ ಸಮೀಪದಲ್ಲಿರುವ ಹೊಸಬೆಟ್ಟು. ಹತ್ವಾರ್ ಮನೆತನಕ್ಕೆ ಸೇರಿದ ಜೋಗಿ ಓದಿದ್ದು ಗುರುವಾಯನಕೆರೆ ಮತ್ತು ಉಪ್ಪಿನಂಗಡಿಗಳಲ್ಲಿ. ತಂದೆ ಶ್ರೀಧರರಾವ್ ಕೃಷಿಕರು. ತಾಯಿ ಶಾರದೆ. ಹಿರಿಯ ಸೋದರ ಹತ್ವಾರ ನಾರಾಯಣ ರಾವ್ ಯಕ್ಷಗಾನ ಪ್ರಸಂಗಗಳನ್ನು ಬರೆದು, ತಾಳಮದ್ದಲೆ ಅರ್ಥಧಾರಿಯಾಗಿ, ಲೇಖಕರಾಗಿ ಪ್ರಸಿದ್ಧರು. ೧೮ನೇ ವಯಸ್ಸಿಗೆ ಬರಹ ಆರಂಭಿಸಿದ ಜೋಗಿ ಓದಿದ್ದು ಬಿ.ಕಾಂ. ಕಾಲೇಜು ದಿನಗಳಲ್ಲಿ ಅವರ ಸಾಹಿತ್ಯ ಆಸಕ್ತಿಯನ್ನು ರೂಪಿಸಿದವರು ಬಳ್ಳ ವೆಂಕಟರಮಣ. ಬೆಂಗಳೂರಿಗೆ ೧೯೮೯ರಲ್ಲಿ ಕಾಲಿಟ್ಟ ಗಿರೀಶ ರಾವ್ ಹತ್ವಾರ್ ಅವರನ್ನು ಜೋಗಿಯಾಗಿ ರೂಪಿಸಿದವರು ವೈಎನ್ ಕೆ. ಸದ್ಯ ಬೆಂಗಳೂರಲ್ಲಿ ನೆಲೆನಿಂತಿರುವ ಜೋಗಿ ಪತ್ನಿ ಜ್ಯೋತಿ, ಮಗಳು ಖುಷಿಯೊಂದಿಗೆ ಜೀವಿಸುತ್ತಿದ್ದಾರೆ.