#ಪರಿಚಯ_೩೬_೨೦೨೬ ಕೃತಿ: ಜಾಂಗುಲಿಕ ಲೇಖಕರು: ಡಾ. ಕಿರಣ್ ವಿ.ಎಸ್. ಪ್ರಕಾಶಕರು: ಸಾಹಿತ್ಯ ಭಂಡಾರ, ಬೆಂಗಳೂರು
ಡಾ.ಕಿರಣ್ ಅವರ “ಸೆರೆಂಡಿಪಿಟಿ” ಪುಸ್ತಕವನ್ನು ಓದಿದ್ದೆ. ವೈದ್ಯಕೀಯ ಲೋಕದ ಅನೇಕ ರೋಚಕ ಸಂಶೋಧನೆಗಳ ಕುರಿತಾದ ಲೇಖನಗಳ ಗುಚ್ಛವು ಬಹಳಷ್ಟು ಇಷ್ಟವಾಗಿತ್ತು. ಸಂಕೀರ್ಣವಾದ ವೈದ್ಯಕೀಯ ವಿಷಯಗಳನ್ನು ಇದಕ್ಕಿಂತ ಸರಳವಾಗಿ ಬರೆಯಲು ಸಾಧ್ಯವಿಲ್ಲ ಎನ್ನುವಂತಿತ್ತು ಅಲ್ಲಿನ ನಿರೂಪಣೆ. ಸಹಜವಾಗಿ “ಜಾಂಗುಲಿಕ” ಪುಸ್ತಕವು ಮೆಡಿಕಲ್ ಮಿಸ್ಟರಿ ಕಥಾಸರಣಿ ಎಂಬ ಅಡಿಬರಹವನ್ನು ಹೊತ್ತು ಬಂದಾಗ ನಿರೀಕ್ಷೆ ಇಮ್ಮಡಿಸಿತ್ತು. ವೈದ್ಯಕೀಯ ಪತ್ತೇದಾರಿ ಮಾದರಿಯ ಕತೆಗಳನ್ನು ನಾನು ಇದೇ ಮೊದಲ ಬಾರಿ ಓದಿದ್ದು. ಇತರ ಭಾಷೆಗಳಲ್ಲಿ ಸಹ ನಾನು ಈ ಪ್ರಕಾರವನ್ನು ಓದಿಲ್ಲವಾದ್ದರಿಂದ ಮತ್ತು ವೈದ್ಯಕೀಯ ವಿಭಾಗದಲ್ಲಿ ಹದಿನೈದು ವರ್ಷಗಳ ಕಾಲ ಕೆಲಸ ಮಾಡಿರುವ ಅನುಭವವನ್ನು ಹೊಂದಿರುವ ಕಾರಣ ಲೇಖಕರು ಯಾವ ವಿಷಯವನ್ನು ಹೇಗೆ ನಿರೂಪಿಸಿರಬಹುದು ಎನ್ನುವ ಕುತೂಹಲ ಸಹ ಇತ್ತು.
ಎಲ್ಲಾ ಕತೆಗಳು ಪ್ರಧಾನವಾಗಿ ರೋಗಿಗಳ ರೋಗ ನಿರ್ಣಯದ ಸುತ್ತ ಹೆಣೆಯಲ್ಪಟ್ಟಿದ್ದು, ರೋಗಿಗಳ ದೇಹ ಪ್ರಕೃತಿಯಲ್ಲಿ ಕಂಡು ಬರುವ ವ್ಯತ್ಯಾಸಗಳು ಮತ್ತು ರೋಗಿಗಳ ಸಂಬಂಧಿಕರು ಒದಗಿಸುವ ಮಾಹಿತಿಯನ್ನು ಆಧರಿಸಿ ನಡೆಸುವ ಪರೀಕ್ಷೆಗಳು ಹಾಗೂ ಈ ಎಲ್ಲದರ ನಡುವೆ ಬಿಟ್ಟುಹೋದ ಒಂದು ಕೊಂಡಿಯನ್ನು ಬೆಸೆಯುವ ಮೂಲಕ ರೋಗಿಯನ್ನು ಗುಣಪಡಿಸುವ ಮಾದರಿಯ ಕತೆಗಳಿವು. ಪ್ರತಿಯೊಂದು ಕತೆಯಲ್ಲಿ ಸಹ ರೋಚಕತೆಯನ್ನು ಕಾಯ್ದುಕೊಳ್ಳುವಲ್ಲಿ ಸಫಲವಾಗಿರುವ ಲೇಖಕರು ಒಮ್ಮೆಗೇ ಎಲ್ಲವನ್ನೂ ಹೇಳದೆ ಒಂದೊಂದೇ ಸಿಕ್ಕುಗಳನ್ನು ಬಿಡಿಸುವ ಮೂಲಕ ಓದುಗರನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡುತ್ತಾರೆ. ಆ ಮೂಲಕ ತನ್ನ ಪ್ರಕಾರಕ್ಕೆ ಇಲ್ಲಿನ ಕತೆಗಳು ನಿಷ್ಟವಾಗಿವೆ.
ಇಷ್ಟೇ ಆಗಿದ್ದರೆ ಈ ಪುಸ್ತಕವು ಇತರ ಪತ್ತೇದಾರಿ ಕೃತಿಗಳಂತೆ ಅಗಿಬಿಡುತ್ತಿತ್ತು. ಇದಕ್ಕೆ ಹೊರತಾಗಿ ವೈದ್ಯಕೀಯ ಲೋಕದ ತಲ್ಲಣಗಳು, ವೈದ್ಯರುಗಳು ದಿನನಿತ್ಯ ಸೆಣಸಬೇಕಾದ ವೈಯಕ್ತಿಕ,ಕೌಟಂಬಿಕ ಇರುಸುಮುರುಸುಗಳು, ಆಸ್ಪತ್ರೆಗಳಲ್ಲಿ ನಡೆಯುವ ಒಳ ರಾಜಕೀಯ,ವೃತ್ತಿಬಾಂಧವರ ನಡುವೆ ನಡೆಯುವ ಶ್ರೇಷ್ಠತೆಯ ಮೇಲಾಟಗಳು, ತಮ್ಮ ವೈದ್ಯಕೀಯ ಉಪಕರಣಗಳನ್ನು ನಕಲಿ ದಂಧೆಯವರ ಕೈಯಿಂದ ರಕ್ಷಿಸಿಕೊಳ್ಳಲು ಕಂಪನಿಗಳು ತೆಗೆದುಕೊಳ್ಳುವ ಮುನ್ನೆಚ್ಚರಿಕೆಗಳು, ಹಲವು ಸಂದರ್ಭಗಳಲ್ಲಿ ಸ್ಥಾಪಿತ ವ್ಯವಸ್ಥೆಯ ಜೊತೆಗೆ ಏಗಬೇಕಾದ ಅನಿವಾರ್ಯತೆಗಳನ್ನು ಸಮರ್ಥವಾಗಿ ಪುಸ್ತಕವು ಬಿಡಿಸಿಟ್ಟಿದೆ. ಮೊದಲ ಎಂಟು ಕತೆಗಳು ಆಧುನಿಕ ವೈದ್ಯಕೀಯ ಪದ್ಧತಿಗಳು ಯಾವ ರೀತಿ ನಾಗಾಲೋಟದಿಂದ ಮುನ್ನೆಡೆಯುತ್ತಿವೆ ಎಂಬುದನ್ನು ಪ್ರಸ್ತುತಪಡಿಸಿದರೆ, ಕೊನೆಯ ಕತೆಯಲ್ಲಿ ಇಷ್ಟೆಲ್ಲಾ ಸಂಶೋಧನೆಗಳು, ಆಧುನಿಕ ತಂತ್ರಜ್ಞಾನ ಮುಂದುವರೆದರೂ ಕೆಲವು ಭೂ ಪ್ರದೇಶಗಳು ಇದರಿಂದ ವಂಚಿತರಾಗಿರುವುದರ ಬಗೆಗಿನ ನೋವನ್ನು ಹೊರಹಾಕುತ್ತದೆ. ಹಿಂದಿನ ಕಾಲದಲ್ಲಿನ ಚಿಕಿತ್ಸೆಯ ಬಗ್ಗೆ ಸರಿಯಾದ ಮಾಹಿತಿಗಳು ಮುಂದಿನ ಜನಾಂಗಕ್ಕೆ ವರ್ಗಾವಣೆಯಾಗದ ಪರಿಣಾಮವಾಗಿ ಅವುಗಳ ಪ್ರಾಮುಖ್ಯತೆಯು ಸರಿದುಹೋಗಿ ಕೇವಲ ಕಟ್ಟುಕತೆಗಳಾಗಿ ಮೂಢನಂಬಿಕೆಗಳಾಗಿ ಉಳಿದಿರುವುದು ಒಂದು ವಿಪರ್ಯಾಸ.
ಮತ್ತೊಂದು ಗಮನಿಸಬೇಕಾದ ಅಂಶವೆಂದರೆ ಕತೆಗಳನ್ನು ಕಟ್ಟುವಾಗ ಎಲ್ಲಿಯೂ ಧಾವಂತವಿಲ್ಲ. ನಿಧಾನಕ್ಕೆ ಕತೆಯನ್ನು ಬಿಡಿಸುತ್ತಾ,ಮನೋವ್ಯಾಪಾರಗಳನ್ನು ಚಿತ್ರಿಸುತ್ತಾ, ತುರ್ತು ಸಂದರ್ಭಗಳಲ್ಲಿ ಕ್ಷಣಾರ್ಧದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಅನಿವಾರ್ಯ ಸನ್ನಿವೇಶಗಳನ್ನು ತಾಳ್ಮೆಯಿಂದ ವಿವರಿಸಿರುವ ರೀತಿಯು ಕತೆಗಳು ಓದುಗರ ಮನೋಭೂಮಿಕೆಯನ್ನು ಸಿದ್ಧಪಡಿಸಿಕೊಳ್ಳಲು ಮತ್ತು ಕತೆಯೊಳಗೆ ಇಳಿಯಲು ಸಹಾಯಕವಾಗಿವೆ. ಕ್ಲಿಷ್ಟಕರವಾದ ವೈದ್ಯಕೀಯ ಪದಗಳನ್ನು ಅಭಾಸವಾಗದಂತೆ ಕನ್ನಡಕ್ಕೆ ತರ್ಜುಮೆ ಮಾಡಿರುವುದು,ಗ್ರಾಮ್ಯ ಗಾದೆಗಳನ್ನು ಸಮಯೋಚಿತವಾಗಿ ಬಳಸಿಕೊಂಡಿರುವುದು ಭಾಷಾ ಪ್ರೌಢಿಮೆಗೆ ಸಾಕ್ಷಿ. ಬರಿಯ ಪತ್ತೇದಾರಿಕೆಯ ವಿವರಗಳಿಗೆ ಮಹತ್ವವನ್ನು ಕರುಣಿಸದೆ ಇತರ ಕೌಟುಂಬಿಕ ಸಾಮಾಜಿಕ ವಿವರಗಳನ್ನು ಸಹ ಹಿತಮಿತವಾಗಿ ಬಳಸಿಕೊಂಡಿರುವುದು ಸಾಹಿತ್ಯಿಕವಾಗಿ ಈ ಕೃತಿಯನ್ನು ಎದ್ದು ಕಾಣುವಂತೆ ಮಾಡಿದೆ. ಇಲ್ಲಿನ ಕಥನ ಕಲೆಯನ್ನು ನೋಡಿದ ನಂತರ ವೈದ್ಯಕೀಯವನ್ನು ಹೊರತುಪಡಿಸಿ ಕಾದಂಬರಿ ಪ್ರಕಾರವನ್ನು ಆಯ್ದುಕೊಂಡರೆ ಹೇಗಿರಬಹುದು ಎಂದು ಯೋಚಿಸುತ್ತಿದ್ದೇನೆ.