Jump to ratings and reviews
Rate this book

ಬಲಿಪಾದ | Balipaada

Rate this book
ಶ್ರೀಧರ ಬಳಗಾರರ ಕಾದಂಬರಿ 'ಬಲಿಪಾದ' ಸೃಷ್ಟಿಶೀಲ ಲೇಖಕನೊಬ್ಬ ಸ್ಥಳೀಯ ಜನಸಮುದಾಯದವರ ಜೀವನದ ಜತೆ ಆಳವಾಗಿಯೂ, ತೀವ್ರವಾಗಿಯೂ ತೊಡಗಿಕೊಂಡು ವಿಕಾಸವಾದ ಕೃತಿಯಾಗಿದೆ.ಹಲವು ವಿರೋಧಾಭಾಸಗಳ ಪದರುಗಳ ಸಮುದಾಯದ ಸಾವಯವ ಮತ್ತು ಸಂಕೀರ್ಣ ಯೋಜನೆಯನ್ನು ಇಲ್ಲಿ ಕಾರ್ಯಗತಗೊಳಿಸಲಾಗಿದೆ. ಭೂಮಿ,ಕಾಡು,ಪಕ್ಷಿ ಮತ್ತು ಪ್ರಾಣಿಗಳೊಂದಿಗೆ ಪವಿತ್ರ ಸಂಬಂಧವನ್ನು ಹೊಂದಿದ್ದ ಸ್ಥಳೀಯರ ದುರಂತ ಅಂತ್ಯದ ಕಥನವನ್ನು ನಿರೂಪಿಸಲು ಸಮುದಾಯದ ಕುರಿತು ಕಳಕಳಿ ಹೊಂದಿರುವ ಲೇಖಕನಿಂದ ಮಾತ್ರ ಸಾಧ್ಯ. ಕಾದಂಬರಿಯುದ್ದಕ್ಕೂ ಅನುಭವಕ್ಕೆ ಬರುವ ನಿರ್ಲಿಪ್ತ ಮತ್ತು ಸಂಯಮದ ನಿರೂಪಣೆ ಬದುಕಿನ ದುರಂತ ದರ್ಶನವನ್ನು ವಿನೂತನ ಗಾಂಭೀರ್ಯ ಮತ್ತು ಘನತೆಯ ಎತ್ತರಕ್ಕೆ ಒಯ್ದಿದೆ.

ಕಾದಂಬರಿಯನ್ನು ವಿಶಿಷ್ಟ ಭೌತಿಕ ಪ್ರದೇಶದಲ್ಲಿ ಸ್ಥಳೀಕರಿಸಿದ ಕಾರಣದಿಂದ ಮತ್ತು ಆ ಪ್ರದೇಶದ ಸತ್ವವನ್ನು ಅತ್ಯಂತ ಬಿಕ್ಕಟ್ಟಿನ ಕಾಲಘಟ್ಟದ ಜೀವನದಲ್ಲಿ ಆವಾಹನೆ ಮಾಡಿದ್ದರಿಂದ, ಅದು ಈವರೆಗೆ ನಿಜವಾದ ಕಾಳಜಿ ತೋರಿರದ ಸಾಂದ್ರವಾದ ಅಪರಿಚಿತ ಆಧುನಿಕ ಪ್ರಜ್ಞೆಯ ಬಹುಸ್ತರೀಯ ಬ್ರಹ್ಮಾಂಡದೊಳಗೆ ನಮ್ಮನ್ನು ಕರೆದೊಯ್ಯುತ್ತದೆ.ನಮಗೆ ಅನ್ಯವಾದ ಸಂಸ್ಕೃತಿ ಮತ್ತಿ ಸಮಾಜದ ಬಗ್ಗೆ ನಾವು ತೋರುತ್ತಿರುವ ಸ್ಪಂದನ ನಿರಾಸಕ್ತಿ ಹಾಗೂ ಸಿನಿಕತನದಿಂದ ಕೂಡಿದ ಕಾಲದಲ್ಲಿ ಅಪಾರ ಕಲ್ಪನಾಶಕ್ತಿಯ ಹೊರತಾಗಿಯೂ ಶ್ರೀಧರ ಬಳಗಾರರ ನೈತಿಕ ಸ್ಥೈರ್ಯ ಮತ್ತು ನಂಬಿಕೆ ಈ ಕೃತಿಯನ್ನು ಸೃಷ್ಟಿಸಿದೆ. ಕಾದಂಬರಿ ನಮ್ಮ ಸಾಂಸ್ಕೃತಿಕ ಸಂವೇದನೆಗೆ ಸವಾಲೊಡ್ಡುತ್ತದೆ ಮತ್ತು ಏಕತಾನತೆಯಿಂದ ಶಿಥಿಲವಾದ ನಮ್ಮ ಲೋಕವನ್ನು ಮುಖಾಮುಖಿಯಾಗುತ್ತ ಗತ ಮತ್ತು ವರ್ತಮಾನದ ನಮ್ಮ ತಿಳಿವಳಿಕೆಯನ್ನು ಮರುನಿರ್ದೇಶಿಸಲು ಒತ್ತಾಯಿಸುತ್ತದೆ.
~ಎನ್. ಮನು ಚಕ್ರವರ್ತಿ

232 pages, Paperback

Published January 1, 2026

Loading...
Loading...

About the author

Sridhara Balagara

11 books1 follower
ಲೇಖಕ ಶ್ರೀಧರ ಬಳಗಾರ ಅವರ ಊರು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಸಮೀಪದಲ್ಲಿರುವ ಬಳಗಾರ. ಕುಮಟಾದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಅವರು, ಅಧೋಮುಖ', 'ಮುಖಾಂತರ', `ಇಳೆ ಎಂಬ ಕನಸು', 'ಒಂದು ಫೋಟೋದ ನೆಗೆಟಿವ್', 'ಅಮೃತಪಡಿ' ಎಂಬ ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಜೊತೆಗೆ 'ಕೇತಕಿಯ ಬನ', 'ಆಡುಕಳ' ಎಂಬ ಕಾದಂಬರಿಗಳು, 'ರಥ ಬೀದಿ' ಮತ್ತು 'ಕಾಲಪಲ್ಲಟ' ಅಂಕಣ ಬರಹಗಳು, ಹಾಗೇ ಕೆಲವು ಕಥೆಗಳು ಇಂಗ್ಲಿಷ್, ತಮಿಳು, ಹಿಂದಿಗೆ ಭಾಷಾಂತರಗೊಂಡಿವೆ. ಇನ್ನು ಕರ್ನಾಟಕ ವಿಶ್ವವಿದ್ಯಾಲಯ ಮತ್ತು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿಯ ಪದವಿ ಪಠ್ಯಕ್ಕೆ (ಕನ್ನಡ) ಸೇರ್ಪಡೆಯಾಗಿವೆ.

ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಎರಡು ಸಲ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿ, ಶಿವಮೊಗ್ಗ ಕರ್ನಾಟಕ ಸಂಘದ ಯು.ಆರ್. ಅನಂತಮೂರ್ತಿ ಕಥಾ ಪ್ರಶಸ್ತಿ, ದ.ರಾ. ಬೇಂದ್ರೆ ಸ್ಮಾರಕ ಸಾಹಿತ್ಯ ಪುರಸ್ಕಾರ, ವಾರಂಬಳ್ಳಿ ಪ್ರತಿಷ್ಠಾನ ಕಥಾ ಪ್ರಶಸ್ತಿ, ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ, ಡಾ. ಬೆಸಗರಹಳ್ಳಿ ರಾಮಣ್ಣ ಸಂಸ್ಕರಣಾ ಸಾಹಿತ್ಯ ಪ್ರಶಸ್ತಿ, ಅಜೂರ ಪುಸ್ತಕ ಪ್ರತಿಷ್ಠಾನ ಪ್ರಶಸ್ತಿ ಮತ್ತು 'ಅಮ್ಮ' ಪ್ರಶಸ್ತಿ ಸೇರಿದಂತೆ ಹಲವು ಗೌರನ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
1 (50%)
4 stars
1 (50%)
3 stars
0 (0%)
2 stars
0 (0%)
1 star
0 (0%)
Displaying 1 - 1 of 1 review
Profile Image for Prashanth Bhat.
2,335 reviews147 followers
October 22, 2026
ಬಲಿಪಾದ - ಶ್ರೀಧರ ಬಳಗಾರ

ಉತ್ತರ ಕನ್ನಡದ ನೆಲದಿಂದ ಕನ್ನಡಕ್ಕೆ ಅತ್ಯುತ್ತಮ ಕಥೆಗಾರರು ದೊರೆತಿದ್ದಾರೆ. ಅವರಲ್ಲಿ ಮೇಲ್ಮಟ್ಟದಲ್ಲಿ ಇರುವವರು ಶ್ರೀಧರ ಬಳಗಾರ. ಅವರ ಹೆಚ್ಚಿನ ಪ್ರಕಟಿತ ಕತೆಗಳ ಓದಿದ್ದೇನೆ. ಒಂದೇ ಒಂದು ಕತೆಯೂ ದುರ್ಬಲ ಎಂದು ಅನಿಸದ ಕಥನ ಶೈಲಿ ಅವರದು.
ಆದರೆ ಕಾದಂಬರಿಗಳ ವಿಷಯಕ್ಕೆ ಬಂದಾಗ ನನಗೆ ಅವರಿಗೆ ಈ ದೊಡ್ಡ ಕ್ಯಾನ್‌ವಾಸ್ ಒಗ್ಗುತ್ತಿಲ್ಲವೇನೋ ಅನಿಸಿತ್ತು. ಮೃಗಶಿರ ಕಾದಂಬರಿ ಓದಿ ಸ್ವಲ್ಪ ನಿರಾಸೆಯಾಗಿತ್ತು.
ಆದರೆ ಈ ಕಾದಂಬರಿ ಅದೆಲ್ಲವನ್ನೂ ನಿವಾರಿಸಿದೆ.

ಕನ್ನಡ ಸಾಹಿತ್ಯ ಪರ್ವ ಕಾಲದಲ್ಲಿದೆ. ಎಲ್ಲರೂ ಓಡುತ್ತಿದ್ದಾರೆ.‌ ಇದರ ನಡುವೆ ಸಾವಧಾನದ ಓದಿಗೆ ಬೇಕಾದ ತಾಳ್ಮೆಯಾಗಲೀ, ಸಮಯವಾಗಲೀ ಹೊಂದಿಸಿಕೊಳ್ಳುವುದು ಕಷ್ಟ. ಅವರವರ ಬದುಕು ಅದರ ಅನಿವಾರ್ಯತೆಗಳು.
ಆದರೆ ಇದರ ನಡುವೆಯೂ ಅಲ್ಲೊಂದು 'ಜೀವರತಿ' ಇಲ್ಲೊಂದು ' ಬಲಿಪಾದ' ಕಳೆದುಹೋದ ಕಾಲದ ನಿಧಾನಗತಿಯ ಕಥನವನ್ನು ಯಾವ ರಾಜಿಗೂ ಒಳಗಾಗದೆ ದಟ್ಟ ವಿವರಗಳೊಂದಿಗೆ ಹೇಳಿ ಬಹುಕಾಲ ನೆನಪಲ್ಲಿ ಉಳಿಯುತ್ತದೆ.

ಈ ಕಾದಂಬರಿ ಪೋರ್ಚುಗೀಸರ ಆಕ್ರಮಣ ತಪ್ಪಿಸಿಕೊಂಡು ಜೋಯಿಡಾದ ಕಾಡಿಗೆ ಬಂದು ಅಲ್ಲೇ ಬೇರು ಬಿಟ್ಟ ಕುಣಬಿ ಜನರ ಕಥನ.
ಇಲ್ಲಿ ಮೂರು ತಲೆಮಾರುಗಳ ದನಿ ಕತೆಯಾಗಿದೆ. ಆಧುನಿಕತೆಗೆ ತೆರೆಯುವಾಗ ಆಗುವ ಎಲ್ಲಾ ಸಮಸ್ಯೆಗಳು ಇಲ್ಲಿ ಪೂರ್ಣ ವಿವರಗಳ ಜೊತೆ ಬರುತ್ತದೆ. ಅದರ ಜೊತೆಗೇ ಮನುಷ್ಯರ ಸಣ್ಣತನಗಳು ,ಪ್ರಕೃತಿಯ ಮುನಿಸು, ಕಾರ್ಣಿಕ, ಪ್ರೀತಿ, ಅಸಹಾಯಕತೆ ,ಭೂಮಿ ತಾಯಿಯ ಆಕ್ರಂದನ ಹೀಗೆ ಎದೆಯ ತಟ್ಟುವ ಎಲ್ಲವೂ ಇಲ್ಲಿದೆ.

ಆದರೆ ಶ್ರೀಧರ ಬಳಗಾರರು ಈ ಕತೆಯನ್ನು ಹನ್ನೆರಡು ವರ್ಷಗಳ ‌ಒಡನಾಟದಿಂದ ಆ ಜನಾಂಗದ ನಡುವೆ ಇದ್ದು ನಾವೇ ನೋಡುವ ಹಾಗೆ ಬರೆದ ರೀತಿ ನಮ್ಮನ್ನುಆ ಕಾಲಕ್ಕೆ ಆ ಪ್ರಕೃತಿಯ ಒಡಲಿಗೆ ಕರೆದುಕೊಂಡು ಹೋಗುತ್ತದೆ.
ಅವರ ಭಾಷೆ, ಆಚರಣೆ ಹಾಗೂ ಸಂಘರ್ಷಗಳ ವಿವರಣೆ ಇವೆಲ್ಲದರಲ್ಲಿ ಅವರು ನೀಡುವ ವಿವರಣೆ ಹಾಗೂ ಹಿಡಿತ ಅವರ ಅನುಭವ ಹಾಗೂ ಅಧ್ಯಯನದ ಫಲ.

ಇಲ್ಲಿ ಅಜ್ಜನಿಗೆ ಎದುರಾಗುವ ಸಮಸ್ಯೆಯ ,ಮಗನಿಗೆ ಎದುರಾಗುವ ಸಮಸ್ಯೆಯ ಸ್ವರೂಪ ಬೇರೆ. ಮೊಮ್ಮಗನ ಕಾಲಕ್ಕೆ ಆ ಯುದ್ಧ ಸೋತಾಗಿದೆ. ಅಲ್ಲಿ ಹತಾಶೆ ಮತ್ತು ಭವಿಷ್ಯದ ಗೊಂದಲವಷ್ಟೇ ಇದೆ.
ಇದನ್ನು ಗೆದ್ದವರ ಅಥವಾ ಸೋತವರ ಕಥೆ ಎನ್ನದೆ ಹೋರಾಟದ ಕಥೆ ಎಂದು ಕರೆಯಬೇಕಷ್ಟೆ.

ಇನ್ನೂರು ಚಿಲ್ಲರೆ ಪುಟಗಳ ಕೃತಿಯಲ್ಲಿ ಬರುವ ವಿವರಗಳು ಮಹಾಕಾದಂಬರಿಯ ಸ್ವರೂಪದ್ದು ಎಂದು ಅನಿಸಿತು. ತುಂಬಾ ಸಾವಧಾನದ ಓದಷ್ಟೇ ಈ ಕಾದಂಬರಿಯ ಅಂತಃ ಸತ್ವ ಅರಿಯಲು ಸಹಕಾರಿ.

ಒಂದೇ ಒಂದು ಕೊರತೆ ಎನಿಸಿದ್ದು ಕಾದಂಬರಿಯಲ್ಲಿ ಬರುವ ಆಡುಭಾಷೆಯ ಪದಗಳ ಅರ್ಥ ಕೊನೆಯಲ್ಲಿ ಕೊಟ್ಟರೆ ಆಗುತ್ತಿತ್ತು ಎಂದು. ಡಿಕ್ಷನರಿ ‌ನೋಡಿದರೂ ಸಿಗದ ಹಲವು ಪದಗಳು ಇವೆ.
ಒಟ್ಟಾರೆ ಓದಿಗೆ ಅದರಿಂದ ತೊಂದರೆ ಅನಿಸಲಿಲ್ಲ.
Displaying 1 - 1 of 1 review