ಕಾದಂಬರಿ: "ನನ್ನಿ"
ಲೇಖಕರು: ಕರಣಂ ಪವನ ಪ್ರಸಾದ್
'ನನ್ನಿ' ಎಂದರೆ ಸತ್ಯ. ಮುಖಪುಟದಲ್ಲಿ ನನ್ ಒಬ್ಬಳ ಫೋಟೋ ಇರುವುದರಿಂದ ಇದು ನನ್ ಒಬ್ಬಳ ಕಥೆ, ಅದಕ್ಕಾಗಿ ನನ್ನಿ ಎಂದಿಟ್ಟಿದ್ದಾರೆ ಎಂದುಕೊಂಡಿದ್ದೆ. ಆದರೆ ನನ್ನಿ ಎಂಬುದು ಕನ್ನಡ ಪದ ಅಂತ ಕನ್ನಡಿಗಳಾಗಿರುವ ನನಗೆ ಕಾದಂಬರಿ ಮುಗಿಸಿದ ಮೇಲೆ ಕಡೆಯ ಪುಟದ ಲೇಖಕರ ಹಿನ್ನುಡಿ ನೋಡಿ ಅರ್ಥವಾಯ್ತು.
ನಮಗೆ ಪರಿಚಿತತೆಗಿಂತಲೂ ಅಪರಿಚಿತತೆ ಕಡೆಯೇ ಒಲವು ಜಾಸ್ತಿ. ಏಕೆಂದರೆ ಅವರ ಬಗ್ಗೆ ಹೆಚ್ಚು ತಿಳಿದಿರುವುದಿಲ್ಲವಲ್ಲ. ಇಲ್ಲಿಯೂ ಬಾಲಕಿಯಾದ ದುರ್ಗಾ ತನಗೆ ಎದುರಾಗುವ ಲೈಂಗಿಕ ಕಿರುಕುಳದಿಂದ ತಪ್ಪಿಸಿಕೊಳ್ಳಲು ಬೇರೆ ದಾರಿಯಿಲ್ಲದೇ 'ನನ್' (ಸಿಸ್ಟರ್ ರೋಣ) ಆಗುತ್ತಾಳೆ. ಅದಾದ ನಂತರವೇ ಅವಳಿಗೆ ಅಲ್ಲಿನ ಕರಾಳ ಮುಖ ತೆರೆದುಕೊಳ್ಳುತ್ತಾ ಹೋಗುತ್ತದೆ.
ಕರಾಳವೆಂದರೆ.....
ಇವಳ ಜೊತೆ ಯಾರೂ ಕೆಟ್ಟದಾಗಿ ನಡೆದುಕೊಳ್ಳುವುದಿಲ್ಲ ಅಥವಾ ಇವಳ ಮೇಲೆ ದೈಹಿಕವಾಗಿ ಆಗಲೀ ಮಾನಸಿಕವಾಗಿಯಾಗಲೀ ದೌರ್ಜನ್ಯ ನಡೆಸುವುದಿಲ್ಲ. ಆದರೆ ಸೇವೆಯ ನೆಪದಲ್ಲಿ ಬಡಜನರ ಮೇಲೆ ನಡೆಯುತ್ತಿರುವ ದೌರ್ಜನ್ಯ ಕಂಡು ಆಕೆ ಕೊರಗುತ್ತಾಳೆ. ಏಕೆಂದರೆ ಅವರ ಸಿ.ಎಂ.ಸಿ (Charity Mission for culcutta) ಸಂಸ್ಥೆಯಲ್ಲಿರುವ ಅನಾಥರು, ವಯೋವೃದ್ಧರು ಖಾಯಿಲೆಯಿಂದಲೋ ಹಸಿವೆಯಿಂದಲೋ ನೋವು ಅನುಭವಿಸುತ್ತಿರುವುದನ್ನು ಕಂಡು 'ಅವರು ಪಾಪ ಅನುಭವಿಸುತ್ತಿದ್ದಾರೆ' ಎಂದು ಅವರಿಗೆ ಚಿಕಿತ್ಸೆ ಕೊಡದೇ ಸಾಯಲು ಬಿಡುವುದು, ಊಟ ಹಾಕುತ್ತೇವೆ ಅಂತ ಪ್ರಚಾರ ಕೊಟ್ಟು ಊಟಕ್ಕಾಗಿ ಬರುವ ಭಿಕ್ಷುಕರನ್ನು ಓಡಿಸುವುದು, ಕ್ರಿಸ್ತ ಅವರಿಗೆ ಸಾವಿನ ದಾರಿಯನ್ನು ಆಯ್ಕೆ ಮಾಡಿದ್ದಾನೆ ಎನ್ನುವುದು ಇದೆಲ್ಲರಿಂದ ಕಥಾನಾಯಕಿ ರೋಣ ಬೇಸತ್ತು ಹೋಗಿರುತ್ತಾಳೆ.
ಸಂಸ್ಥೆಯ ಮದರ್ ಎಲಿಸಾರ ಬಗ್ಗೆ ರೋಣಳಿಗೆ ದ್ವಂದ್ವ. ಅವರು ಮಾಡುತ್ತಿರುವುದು ಸರಿಯೋ ಅಥವಾ ಮಾನವೀಯತೆ ಸರಿಯೋ ಅಂತ. ಬಹುಪಾಲು ಈ ಯೋಚನೆಗಳಲ್ಲಿಯೇ ಬಸವಳಿಯುತ್ತಿರುತ್ತಾಳೆ. ಅವಳೂ ಸಹ ಉಳಿದ ಎಲ್ಲರಂತೆ ಇರಬಹುದಿತ್ತು. ನೋಡಿಯೂ ನೋಡದ ಹಾಗೆ..... ಈ ದೀನ-ಅಶಕ್ತರ ಕರ್ಮವನ್ನು ಕಂಡು 'ಅವರ ಪಾಪವನ್ನು ಅವರು ಅನುಭವಿಸುತ್ತಾರೆ, ನನಗ್ಯಾಕೆ ಆ ಗೊಡವೆ?' ಅಂತ ರೋಣಾಳು ಸಹ ಕೆಸರಿಗಂಟದ ಕಮಲದ ಹಾಗೆ ಇದ್ದುಬಿಡಬಹುದಿತ್ತು. ಆದರೆ ರೋಣಾಳ ಸೂಕ್ಷ್ಮ ಮನಸ್ಸು ಹಾಗಿರಲು ಬಿಡದೇ ತನಗೆ ತಾನೇ ಅಪಾಯ ತಂದೊಡ್ಡುತ್ತಿರುತ್ತದೆ.
ಜೀವನದ ನಿರ್ಧಾರವನ್ನು ಕೇವಲ ಕೆಲವೇ ಸೆಕೆಂಡುಗಳಲ್ಲಿ ಮಾಡಿಬಿಡಬಹುದು. ಆದರೆ ಆ ನಿರ್ಧಾರಕ್ಕೆ ಬದ್ಧವಾಗಿ ಜೀವನದ ಕೊನೆವರೆಗೂ ನಡೆದುಕೊಳ್ಳುವುದು ಬಹಳ ಕಷ್ಟವಿದೆ. ಮದುವೆಯಾದರೆ ಒಂದು ಪಕ್ಷ ಜಗಳವಾಡಲು ಗಂಡನಿರುತ್ತಾನೆ, ಬೇಸರ ಮರೆಯಲು ಮಕ್ಕಳಿರುತ್ತಾರೆ, ಬಂಧು-ಬಳಗವಿರುತ್ತದೆ. ಆದರೆ ಐಹಿಕ ಭೋಗಗಳನ್ನು ತ್ಯಜಿಸಿ ತನ್ನನ್ನು ಕ್ರಿಸ್ತನಿಗಾಗಿ ಅರ್ಪಿಸಿಕೊಂಡ ನನ್ ಒಬ್ಬಳಿಗೆ ತನ್ನವರು ಎನಿಸಿಕೊಳ್ಳುವವನು ಕ್ರಿಸ್ತನೊಬ್ಬನೇ. ಆತನೊಂದಿಗೇ ಆಕೆ ಸಂವಹನ ಮಾಡಬೇಕು. ಆಕೆಯ ಅಳು-ನಗು-ಸುಖ-ದುಃಖ ಎಲ್ಲವೂ ಕ್ರಿಸ್ತನಿಗೇ ಮೀಸಲು.
ಆದರೂ ಇದು ತ್ಯಾಗ ಎನಿಸಿಕೊಳ್ಳೋಲ್ಲ. ಏಕೆಂದರೆ ಪ್ರವಾದಿ ಸ್ಯಾಮ್ಯುಯೆಲ್ ನಿಗೆ ತ್ಯಾಗ ಬೇಕಿ್ಲಲ್ಲ. ವಿಧೇಯತೆ ಮಾತ್ರ ಬೇಕು. ಹೇಳಿದಂತೆ ಪಾಲಿಸುವವರು ಮಾತ್ರವೇ ಉಳಿಯಬೇಕು (ಸ್ಯಾಮ್ಯುಯೆಲ್ ೧೫:೩)
ರೋಣಾಳೋ ಎಲ್ಲವನ್ನೂ ಪ್ರಶ್ನಿಸಿ ಕಷ್ಟಗಳನ್ನು ಎದುರು ಹಾಕಿಕೊಳ್ಳುವಂತಹ ವ್ಯಕ್ತಿತ್ವ ಉಳ್ಳವಳು. ಮದರ್ ಎಲಿಸಾರನ್ನೇ ತನ್ನ ವಾದದಿಂದ ಸೋಲಿಸುವ ಧೈರ್ಯ ಉಳ್ಳವಳು. ಆದರೆ ಪ್ರೇಮದ ವಿಚಾರದಲ್ಲಿ ಮಾತ್ರ ಆಕೆಗೆ ಈ ಧೈರ್ಯವಿಲ್ಲ. ತನಗೆ ಸಹಾಯ ಮಾಡಿದ ಮಿಲ್ಟನ್ ಫ್ಯಾಬ್ರಿಗಾಸನನ್ನು ಆಕೆಯೂ ಒಪ್ಪಿ ಅಪ್ಪಿಬಿಡುತ್ತಾಳೆ. ಅವನೊಬ್ಬನೇ ಆಕೆಯ ಬಲಹೀನತೆ. ಇದನ್ನು ಹೊರತು ಪಡಿಸಿ 'ನನ್' ಆಗಿ ತಾನು ಪರಪುರುಷನೊಂದಿಗೆ ಸಂಬಂಧ ಇರಿಸಿಕೊಂಡಿರುವೆ ಎಂಬ ಗಿಲ್ಟ್ ಆಕೆಯನ್ನು ಕಾಡುವುದಿಲ್ಲ. ಈ ನಡುವೆ ಮಿಲ್ಟನ್ ಆಕೆಗೆ ನೀಡುವ ಎರಿಕ್ ಬರ್ಗ್ ಪುಸ್ತಕಗಳನ್ನು ಓದುತ್ತಾ ಜೀವನದ ಸತ್ಯಗಳನ್ನು ಅರಿಯುತ್ತಾ ಹೋಗುತ್ತಾಳೆ.
ಇದರ ಜೊತೆಜೊತೆಗೇ ಮತ್ತೊಂದು ಕಥೆಯಿದೆ. ಅದರಲ್ಲಿ ಮತಾಂತರವಿದೆ, ಜಾತಿ ಜಗಳವಿದೆ, ಆಸ್ತಿ ವಿವಾದವಿದೆ, ತಂದೆ-ಮಗಳ ಪ್ರೇಮವಿದೆ, ಇಬ್ಬರು ಹುಡುಗಿಯರ ಸ್ನೇಹವಿದೆ, ಬೆಕ್ಕಿನ ಸಹವಾಸವಿದೆ, ಮದುವೆಯಿದೆ, ಕೊನೆಗೆ ಸಿಸ್ಟರ್ ರೋಣಾಳೂ ಈ ಕಥೆಯ ಒಂದು ಭಾಗವಾಗುತ್ತಾಳೆ. ಇಲ್ಲಿಂದ ರೋಣಾ ಜೀವನದ ಮತ್ತೊಂದು ಭಾಗವನ್ನು ಎದುರಿಸುತ್ತಾಳೆ.
ಜನರ ವಿವಿಧ ಮುಖಗಳ ಪರಿಚಯ ಅವಳಿಗಾಗುತ್ತದೆ. ಸಂದರ್ಭಕ್ಕೆ ತಕ್ಕಂತೆ ಬದಲಾಗುವ ಮನುಷ್ಯರ ಗುಣ ಕಂಡು ರೋಣ ಬೆರಗಾಗುತ್ತಾಳೆ. ಅವಳ ಜೀವನದಲ್ಲಿ ಬದಲಾಗದೇ ಉಳಿದವಳೆಂದರೆ ಅವಳ ಸ್ನೇಹಿತೆ ಸಿಸ್ಟರ್ ಶುಭಾ ಮಾತ್ರ. ಉಳಿದವರು ಗಾಳಿ ಬಂದಂತೆ ತೂರುವವರು. ಅದಕ್ಕಾಗಿಯೇ ನೇರ ನಡೆನುಡಿಯ ರೋಣಳನ್ನು ಕಂಡರೆ ಯಾರಿಗೂ ಆಗದು. ಹಾಗಂತ ಅವಳನ್ನು ಎದುರೆದುರು ಖಂಡಿಸಲೂ ಅವರಿಂದಾಗದು. ಹಿಂದಿನಿಂದ ಗಾಳಿಸುದ್ದಿ ಹರಡುವುದಷ್ಟೇ ಅವರ ಕೆಲಸ.
'ನನ್ನಿ'ಯಲ್ಲಿ ಸಿಸ್ಟರ್ ರೋಣಾಳ ಜೊತೆಜೊತೆಯಲ್ಲಿಯೂ ನಮಗೂ ಸಹ ಸತ್ಯದ ದರ್ಶನವಾಗುತ್ತಾ ಹೋಗುತ್ತದೆ. ರೋಣಾಳ ಚರ್ಚಿನ ಜೀವನ ಮತ್ತು ರಾಯಪ್ಪನ ಕರುಣಾಜನಕ ಕಥೆಯ ಜೊತೆಯಲ್ಲಿಯೇ ಮತ್ತೊಂದು ಸತ್ಯದ ಅನಾವರಣವಿದೆ. ದೀನ-ಅಶಕ್ತರಿಗಾಗಿ ಒಂದು ಸಂಸ್ಥೆಯನ್ನು ತೆರೆದು ಆ ಜನರ ಕಣ್ಣೀರು-ಖಾಯಿಲೆಗಳನ್ನೇ ಬಂಡವಳ ಮಾಡಿಕೊಂಡು, ಪ್ರಪಂಚದೆಡೆಯಿಂದ ಹಣವನ್ನು ವಂತಿಕೆಯನ್ನಾಗಿ ಸ್ವೀಕರಿಸಿ ದುಡ್ಡು ಮಾಡಿಕೊಳ್ಳುವ ಜನರ ಬಗೆಗೂ ಸೂಕ್ಷ್ಮವಾಗಿ ತಿಳಿಸಲಾಗಿದೆ. ಇವರಿಗಿಂತಲೂ ಮಕ್ಕಳಿಗೆ ಪಾಠ ಹೇಳಿಕೊಡುವ ನಾನೇ ಗ್ರೇಟ್ ಅಂತ ರೋಣಾ ಹೆಮ್ಮೆ ಪಡುತ್ತಾಳೆ.
ಹೆಣ್ಣಿನ ಮಾನಸಿಕ ತುಮುಲ, ಆಕೆಯ ಭಾವಾಭಿವ್ಯಕ್ತಿಗನ್ನು ಲೇಖಕರು ಸಮರ್ಥವಾಗಿ ಚಿತ್ರಿಸಿದ್ದಾರೆ. ಅದಕ್ಕಿಂತ ಹೆಚ್ಚು ಬೆರಗುಗೊಳಿಸುವುದು ಬೂಸಿ ಎಂಬ ಬೆಕ್ಕಿನ ವಿವರ. ಬೆಕ್ಕು ಸಾಕಿದವರಿಗೆ ಮಾತ್ರವೇ ಅರ್ಥವಾಗುವ ಬೆಕ್ಕಿನ ನಡವಳಿಕೆ ಓದಿ ನಿಜಕ್ಕೂ ದಂಗಾದೆ. ಒಬ್ಬ ಮನುಷ್ಯ ಇಷ್ಟೆಲ್ಲಾ ಅಧ್ಯಯನ ಮಾಡಿರಲು ಸಾಧ್ಯವಾ ಎಂದೆನಿಸಿತು. ಅದಕ್ಕಿಂತಲೂ ಹೆಚ್ಚಾಗಿ ಈ ಪುಸ್ತಕ ನಮ್ಮ ಮಕ್ಕಳಿಗೆ ಪಠ್ಯವಾದರೆ 'ದೂರದ ಬೆಟ್ಟ ನುಣ್ಣಗೆ' ಅಂತ ತಿಳಿದವರಿಗೆ ಜ್ಞಾನೋದಯವಾಗಬಹುದು ಎಂದೆನಿಸಿತು.
************
ಕೆ.ಎ.ಸೌಮ್ಯ
ಮೈಸೂರು