Vasudhendra (ವಸುಧೇಂದ್ರ) was born at Sandur in Ballari district, Karnataka. After working as a software professional for more than twenty years, Vasudhendra now runs his own publication house, Chanda Pustaka, which publishes and encourages new writing in Kannada and has instituted the Chanda Pustaka Award which recognizes young short story writers. He is also associated with local support groups for LGBT individuals. The author of thirteen books in Kannada, that have sold over 80,000 copies, Vasudhendra has won many literary awards, including the Kannada Sahitya Academy Book Prize, the Da Raa Bendre Story Award and the Dr U.R. Ananthamurthy Award.
ವಸುದೇಂದ್ರರವರ ಯಾವ ಪುಸ್ತಕ ಓದಿದ್ರು ನಾನು ಎಮೋಷನಲ್ ಆಗ್ತೀನಿ ಅನ್ಸುತ್ತೆ , ಅಷ್ಟೊಂದು ಭಾವನಾತ್ಮಕವಾಗಿ ಬರೀತಾರೆ. ಇರುವ ೬ ಕತೆಗಳು ವಿಭಿನ್ನವಾಗಿವೆ. ಬರೆದ ಕಥೆಗಳೆಲ್ಲವೂ ೧೯೯೭-೯೮ ಇಸವಿಯಲ್ಲಿ ಬರೆದ್ದಿದ್ದಾದರೂ ಇವತ್ತಿಗೂ ಪ್ರಸ್ತುತ. ಮನೀಷೆ ಕಥೆ ಪಾತ್ರದಂತೆ ನಮ್ಮಲ್ಲಿ ಅನೇಕರು ಬದುಕುತ್ತ ಇದೀವಿ, ಬದುಕಿದ್ದು ಸತ್ತಂತೆ. ಏನು ಬೇಕು ಏನು ಬೇಡಗಳ ಪರಿವೆಯೇ ಇಲ್ಲ, ದುಡ್ಡಿನ ಹಿಂದೆ ಬಿದ್ದು ನಮ್ಮ ಆಂತರ್ಯದ ಕರೆಗೆ ಕಿವಿ ಕೊಡುತ್ತ ಇಲ್ಲ. ಪೂಗದಿರಲೊ ರಂಗ ನನ್ನ ಬಾಲ್ಯನ್ನ ನೆನಪಿಸಿದ ಕಥೆ, ನನ್ನ ಅಜ್ಜಿಯ ಮನೆ ನೆನಪಾಯ್ತು. ಮೌಡ್ಯೋಪಾಸನೆ ಕರುಳು ಕಿವುಚಿ ಹಾಕಿತು. ತಮ್ಮನ ಪ್ರಥಮ ತಿಂಗಳ ಸಂಬಳವನ್ನ ಅಮ್ಮನ ಅಂತ್ಯಕ್ರಿಯೆಗೆ ಉಪಯೋಗಿಸೋ ಹಾಗೆ ಆಯ್ತು ಅಂತ ಅವ್ನು ಅತ್ತಾಗ ಅಯ್ಯೋ ಈ ಪಾಡು ಯಾರಿಗೂ ಬರದೇ ಇರ್ಲಿ ಅಂತ ಒಮ್ಮೆ ಯೋಚಿಸಿದ್ದಂತೂ ದಿಟ . ಹುಲಿಗೆವ್ವ ಕಥೆಯಿಂದ ಈ IT ಕ್ರಾಂತಿ ಎಷ್ಟೋ ಜನರ ಬಾಳು ಹಸನಾಗಿಸಿದೆ ಅನ್ನೋದು ಸತ್ಯ ಅಂತ ತಿಳಿಯಿತು
ಒಂದು ಒಳ್ಳೆಯ ಕಥಾ ಸಂಕಲನ , ಮಧ್ವ ಸಂಪ್ರದಾಯದ ವಿಧವೆಯರನ್ನು ಆ ಸಮಾಜ ನಡೆಸಿಕೊಳ್ಳುವ ಹಾಗು ಅಲ್ಲಿನ ಮಡಿವಂತಿಕೆಯ ಹೇರಿಕೆಯ ಬಗ್ಗೆ ಕಥೆಗಳಿವೆ , ನನಗೆ ಮನೀಷೆ ಮತ್ತು ಹುಲಿಗವ್ವ ತುಂಬಾ ಇಷ್ಟವಾದ ಕಥೆಗಳು .
#ಅಕ್ಷರವಿಹಾರ_೨೦೨೪ ಕೃತಿ: ಮನೀಷೆ ಲೇಖಕರು: ವಸುಧೇಂದ್ರ ಪ್ರಕಾಶಕರು: ಛಂದ ಪುಸ್ತಕ, ಬೆಂಗಳೂರು
ಈ ಪುಸ್ತಕದ ಕುರಿತು ವಸುಧೇಂದ್ರ ಅವರೇ ಬರೆದ ಅನುಭವದ ಮಾತುಗಳನ್ನು ಫೇಸ್ಬುಕ್ನಲ್ಲಿ ಹಿಂದೊಮ್ಮೆ ಓದಿದ್ದೆ. ಆ ಲೇಖನದಲ್ಲಿ ಅವರು ಈ ಪುಸ್ತಕದಲ್ಲಿನ ಕತೆಗಳು ತಿರಸ್ಕೃತಗೊಂಡಿದ್ದು ಮತ್ತು ಪ್ರಕಾಶನಕ್ಕೆ ಅನುಭವಿಸಿದ ತೊಂದರೆಗಳು ಮತ್ತು ಇವುಗಳೆಲ್ಲದರ ಪರಿಣಾಮವಾಗಿ ಬರೆಯುವುದನ್ನೇ ನಿಲ್ಲಿಸಬೇಕೆಂದು ಆಲೋಚಿಸಿದ್ದರ ಕುರಿತು ಬರೆದುಕೊಂಡಿದ್ದರು. “ತೇಜೋ-ತುಂಗಭದ್ರಾ” ಕೃತಿಯನ್ನು ಓದಿ ನಂತರ ಇತರ ಹಲವಾರು ಪುಸ್ತಕಗಳನ್ನು ಓದಿದ ಮೇಲೆ ಅವರು ತಮ್ಮ ಬರವಣಿಗೆಯ ಪ್ರಾರಂಭಿಕ ಹಂತದಲ್ಲಿ ಯಾವ ತರಹ ಬರೆದಿರಬಹುದು ಎಂಬ ಕುತೂಹಲ ಸಹಜವಾಗಿ ಹುಟ್ಟಿಕೊಂಡಿತು. ಮನದಿಂಗಿತವನರಿತಂತೆ ವೀಣಾ ನಾಯಕ್ ಮೇಡಂ ಅವರು ವಿಭಾ ವಿಶ್ವನಾಥ್ ಅವರ ಪ್ರಾಯೋಜಕತ್ವದಲ್ಲಿ ಈ ಪುಸ್ತಕವನ್ನು ಬಹುಮಾನವಾಗಿ ಕಳುಹಿಸಿಕೊಟ್ಟರು. ವೀರಲೋಕದವರು ಆಯೋಜಿಸಿದ ಪುಸ್ತಕ ಸಂತೆ ಕಾರ್ಯಕ್ರಮದಲ್ಲಿ ವಸುಧೇಂದ್ರ ಅವರನ್ನು ಭೇಟಿಯಾಗಿ ಈ ಪುಸ್ತಕಕ್ಕೆ ಅವರ ಹಸ್ತಾಕ್ಷರವನ್ನು ಸಹ ಪಡೆದುಕೊಂಡದ್ದು ಒಂದು ಹೊಸ ಅನುಭವ. ನಾನು ಪುಸ್ತಕದ ಕುರಿತು ಓದಿದ್ದು,ಅದೇ ಪುಸ್ತಕ ಬಹುಮಾನವಾಗಿ ಸಿಕ್ಕಿದ್ದು, ಆರಂಭದ ಹತ್ತು ಹಲವು ತೊಡಕುಗಳನ್ನು ದಾಟಿ ಏಳನೆಯ ಮುದ್ರಣದ ಈ ಪುಸ್ತಕಕ್ಕೆ ಲೇಖಕರಿಂದ ಹಸ್ತಾಕ್ಷರ ಹಾಕಿಸಿಕೊಂಡಿದ್ದು, ಇವುಗಳನ್ನು ಒಟ್ಟಾಗಿ ಗಮನಿಸಿದರೆ ಏಕೆ ವಿಶೇಷ ಅನುಭವ ಎಂಬುದು ಸ್ಪಷ್ಟವಾದೀತು.
ಇನ್ನು ಇಲ್ಲಿರುವ ಆರು ಕತೆಗಳು ಸಹ ಲೇಖಕರ ಮೊದಲ ಪ್ರಯತ್ನ ಎಂಬ ಯಾವ ರಿಯಾಯಿತಿಯ ಅವಶ್ಯಕತೆಯನ್ನು ಬೇಡದಿರುವ ಕತೆಗಳು. “ಸಮಾಜದ ಮೌಢ್ಯಕ್ಕೆ ಬಲಿಯಾದ ಮಡಿ ಹೆಂಗಸರಿಗೆ” ಅರ್ಪಿತವಾದಂತಹ ಕತೆಗಳು ಒಂದು ತರಹದ ಗುಂಗಿನಲ್ಲಿ ನನ್ನನ್ನು ಹಿಡಿದಿಟ್ಟಿವೆ. ಈಗಿನ ಕಾಲವನ್ನು ಪರಿಗಣಿಸಿದರೆ ಈ ತರಹದ ಒಂದು ಕಾಲಘಟ್ಟವನ್ನು ದಾಟಿ ನಾವು ಮುಂದಕ್ಕೆ ಸಾಗಿರುವುದು ದುಃಖ ಮತ್ತು ಸಮಾಧಾನವನ್ನು ಒಟ್ಟಿಗೆ ಉಂಟುಮಾಡುತ್ತದೆ. ಆರು ಕತೆಗಳಲ್ಲಿ ಮೂರು ಕತೆಗಳು ಸಂಪೂರ್ಣವಾಗಿ ಕಿರಿ ಪ್ರಾಯದಲ್ಲಿಯೇ ವಿಧವೆಯರಾಗಿ ನರಕಯಾತನೆಯನ್ನು ಅನುಭವಿಸಿದ ಮಹಿಳೆಯರ ಬಗ್ಗೆ. “ನಮ್ಮ ವಾಜೀನ್ನು ಆಟಕ್ಕೆ ಸೇರಿಸಿಕೊಳ್ರೋ” ಕತೆಯಲ್ಲಿ ಮಡಿ ಹೆಂಗಸಾದ ಕಮಲಮ್ಮ ತೊನ್ನು ರೋಗದಿಂದ ಪೀಡಿತನಾದ ಮಗನ ಜೀವನವನ್ನು ಸಮಾಜದ ಮುಖ್ಯವಾಹಿನಿಗೆ ಸೇರಿಸುವ ಪ್ರಯತ್ನದ ಕತೆ. ಗಂಡನನ್ನು ಕಳೆದುಕೊಂಡ ದುಃಖದ ಜೊತೆಗೆ ಇರುವ ಒಬ್ಬ ಮಗನನ್ನು ಅನಿಷ್ಠದಂತೆ ಕಾಣುವ ಸಮಾಜ, ಇದರ ಒಳಹೊರಗುಗಳ ಅರಿವಿಲ್ಲದೆ ಆಗಾಗ ತಾಯಿಯ ಕೋಪಕ್ಕೆ ಬಲಿಯಾಗುವ ವಾಜಿ, ಈ ಇಬ್ಬರ ಮನದೊಳಗೆ ನಡೆದಿರಬಹುದಾದ ಸಂಘರ್ಷಗಳು ಯಾವ ರೂಪದ್ದಿಬಹುದು… ಸಾಮಾಜಿಕ ನೀತಿ ನಿಯಮಗಳ ಹೆಸರಿನಲ್ಲಿ ಈ ಮನಸ್ಸುಗಳ ಮೇಲೆ ಎಂತಹಾ ದಾಳಿಯಾಗಿರಬಹುದು ಎಂದು ಯೋಚಿಸಿದರೆ ಮನಸ್ಸು ಮ್ಲಾನವಾಗುವುದು ಖಂಡಿತಾ. ಇದೇ ರೀತಿ “ಹುಲಿಯ ಬೆನ್ನೇರಿ” ಮತ್ತು “ಮೌಢ್ಯೋಪಾಸನೆ” ಕತೆಗಳು ತಮಗಾದ ಅನ್ಯಾಯವನ್ನು ಗಂಭೀರವಾಗಿ ಪರಿಗಣಿಸದೆ ಮಡಿಯಲ್ಲಿಯೇ ತಮ್ಮ ವ್ಯಕ್ತಿತ್ವವನ್ನು ಕಂಡು ರೂಪಿಸಿಕೊಂಡ ಮಹಿಳೆಯರ ಬಗ್ಗೆ ವಿಚಾರ ಮಾಡುವಾಗ ಹೃದಯ ಭಾರವಾಗುತ್ತದೆ.
“ಮನೀಷೆ” ಕತೆಯು ಒಂದು ಬಗೆಯಲ್ಲಿ ನಮ್ಮ ಇಂದಿನ ಸಮಾಜದ ಕತೆ. ಈ ಕತೆಯ ವಸ್ತು ಯಾವ ಕಾಲಕ್ಕೂ ಸಲ್ಲುವುದು ಎಂದು ನನ್ನ ಅಭಿಮತ. ನನಗೇನು ಬೇಕು ಎಂಬ ಗೋಜಿಗೆ ಹೋಗದೆ ಬಹುತೇಕರು ನಡೆದ ದಾರಿಯೇ ಸರಿಯಾದ ದಾರಿಯೆಂದು ತಿಳಿದು, ಅದರಲ್ಲಿ ಬಹುದೂರ ಸಾಗಿ ದಿಕ್ಕೆಟ್ಟು ನಿಂತು, ಹಿಂತಿರುಗಿ ನೋಡಿದಾಗ ವಾಪಾಸು ಹೋಗಲು ಆಗದೇ, ಮುಂದೆ ಹೋಗುವ ದಾರಿ ಸ್ಪಷ್ಟವಿಲ್ಲದೆ, ಸಮೂಹದಲ್ಲಿ ಸ್ವಂತಿಕೆಯನ್ನೇ ಕಳೆದುಕೊಂಡು ಬದುಕು ಸಾಗಿಸುವ ಬವಣೆಯೇ ಇಲ್ಲಿನ ಕತೆ. ಇದರ ಜೊತೆಗೆ ಒಂದು ಹಂತವನ್ನು ದಾಟಿದ ಮೇಲೆ ನಾವು ಬಯಸುವ ಆರಾಮದ, ವಿರಾಮದ ಬದುಕು ಸಹ ನಮ್ಮ ಸ್ವಂತಿಕೆಯನ್ನು ನಾಶಪಡಿಸುವುದು ಎಂಬುದನ್ನು ಸಹ ಕತೆಯು ಓದುಗರಿಗೆ ದಾಟಿಸುತ್ತದೆ. “ಬಾಗಿಲಿನಾಚೆ ಪೋಗದಿರಲೋ ರಂಗ” ಕತೆಯ ಹೆಸರೇ ಹೇಳುವಂತೆ ಅತಿಯಾದ ಮುದ್ದು ಮಾಡುವಿಕೆ ಮಕ್ಕಳನ್ನು ಬಾಲ್ಯ ಸಹಜವಾದ ಅನುಭವಗಳಿಂದ ವಂಚಿತವಾಗಿಸುವ ದುರಂತದ ಕುರಿತಾದ ಕತೆ. ಬೆರಗುಗಣ್ಣಿನ, ಮುಗ್ಧ ಮನಸ್ಸಿನ ಮೂಲಕ ದೊರಕುವ ಪ್ರಾಪಂಚಿಕ ಅನುಭವಗಳ ಜೊತೆಗೆ ವರ್ಣರಂಜಿತವಾಗಬೇಕಿದ್ದ ಬಾಲ್ಯವನ್ನು ಅತಿಯಾದ ಕಾಳಜಿ ಕೂಪ ಮಂಡೂಕದಂತೆ ಏಕತಾನತೆಗೆ ದೂಡುವುದು ಎಷ್ಟು ಸರಿ ಎಂಬ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳಬೇಕು. ಲೇಖಕರು ಉದಾಹರಿಸಿದ ಸಂಗತಿಗಳು, ಕತೆಗಳಿಗೆ ಬಳಸಿಕೊಂಡ ಉಪಮೆಗಳನ್ನು ಓದುವುದೇ ಒಂದು ಸುಖ.
ಒಂದು ತೃಪ್ತಿದಾಯಕ ಓದಿನೊಂದಿಗೆ ಈ ವರ್ಷದ ಓದಿಗೆ ಒಂದು ಪೂರ್ಣ ವಿರಾಮವನ್ನು ಹಾಕುತ್ತಿರುವೆ… ಮುಂದಿನ ವರ್ಷ ಮತ್ತೆ ಸಿಗೋಣ…
ವಸುಧೇಂದ್ರರ ಮನೀಷೆ ಕಥಾಸಂಕಲನ ಓದಿದೆ ಚಂದವಿದೆ ಪುಸ್ತಕ.ಅವರ ಹೆಚ್ಚಿನ ಕತೆಗಳಂತೆ ಬಳ್ಳಾರಿ ಸಂಡೂರಿನ ಮಾಧ್ವ ಕುಟುಂಬಗಳು ಕಥೆಯ ಕೇಂದ್ರಭಾಗ.
ಆದರೆ ಈ ಪುಸ್ತಕದಲ್ಲಿ ಹೆಚ್ಚಿನ ಕತೆಗಳಿರೋದು ಮಡಿಹೆಂಗಸರ ಬಗ್ಗೆ.ಮಡಿಯಾಗಿರೋ ಹೆಂಗಸು ಶುಭಕಾರ್ಯಗಳಲ್ಲಿ ಭಾಗವಹಿಸುವಂತಿಲ್ಲ.ಹೆಚ್ಚಿನ ಸಂದರ್ಭಗಳಲ್ಲಿ ಗಂಡ ಸತ್ತ ಕೂಡಲೇ ಅವನ ಮನೆಯವರು ಆಕೆಯ ಕೈ ಬಿಡುವುದೇ ಹೆಚ್ಚು.ಇದಕ್ಕೆ ಜೊತೆಯಾಗಿ ಆಕೆಗೆ ಮಕ್ಕಳಿದ್ದರಂತೂ ಅವರನ್ನೂ ಸಲಹುವ ಜವಬ್ದಾರಿ ಆಕೆಯ ಮೇಲೆಯೆ. ಇಂತಹ ಹೆಣ್ಣುಮಕ್ಕಳ ಕತೆಯನ್ನ ಬಹಳ ಚೆನ್ನಾಗಿ ಬರೆದಿದ್ದಾರೆ ಲೇಖಕರು.
ಮಡಿಹೆಂಗಸಿಗೆ ಮಗನೊಬ್ಬನಿದ್ದು ಅವನಿಗೆ ತೊನ್ನಿನ ಲಕ್ಷಣಗಳು ಶುರುವಾದರೆ,ತಾನೆ ಅಸ್ಪೃಶ್ಯಳಂತೆ ಬದುಕುತ್ತಿರೋ ಹೊತ್ತಲ್ಲಿ ಮಗನಿಗೂ ಹೀಗಾದರೆ ಅವಳ ನೋವು ಅಸಹಾಯಕತೆಯನ್ನ ಮನಮಿಡಿಯುವಂತೆ ಚಿತ್ರಿಸಿದ್ದಾರೆ.'ನಮ್ಮ ವಾಜಿನ್ನೂ ಆಟಕ್ಕೆ ಸೇರಿಸಿಕೊಳ್ರೋ'ಕಥೆಯಲ್ಲಿ.
ಗಂಡನನ್ನ ಒಲಿಸಿಕೊಳ್ಳಲು ಕಲಿತ ವಾಮಾಚಾರ ವಿದ್ಯೆಯನ್ನ ಅವನು ಸತ್ತ ನಂತರ ಬಿಡಲಾಗದೆ ನಾನಾ ಜನರ ಮೇಲೆ ಪ್ರಯೋಗ ಮಾಡ್ತಾ ಅದಕ್ಕಾಗಿ ಮನದಲ್ಲಿ ಪಶ್ಚಾತ್ತಾಪವಿದ್ರೂ ಬಿಡಲಾಗದ ಅಸಹಾಯಕತೆಯನ್ನ ಅನುಭವಿಸೋ ಹೆಂಗಸಿನ ಕಥೆ.'ಹುಲಿಯ ಬೆನ್ನೇರಿ'.
ಹೆಚ್ಚಿನ ಸಂದರ್ಭಗಳಲ್ಲಿ ಮಕ್ಕಳನ್ನ ನಾವು ಅತಿಯಾಗಿ ಜೋಪಾನ ಮಾಡ್ತೀವಿ.ಹೊರಗೆ ಆಡಬೇಡ ಬೀಳ್ತಿ,ಮಳೆಯಲ್ಲಿ ನೆನೀಬೇಡ ನೆಗಡಿಯಾಗತ್ತೆ,ಬಿಸಿಲಲ್ಲಿ ತಿರುಗಬೇಡ ಸೆಕೆಯಾಗತ್ತೆ ಅಂತೆಲ್ಲ.ಆದ್ರೆ ಮಕ್ಕಳಿಗೆ ಅದೇ ಖುಶಿಯ ಚಿಲುಮೆ.ಹೀಗೆ ತಾಯಿಯಿಂದ ಜೋಪಾನ ಮಾಡಲ್ಪಟ್ಟ ಮಗುವಿನ ಕಥೆಯೇ 'ಬಾಗಲಿಂದಾಚೆ,ಪೋಗದಿರಲೋ ರಂಗ'.ಪುಟ್ಟ ಅಜ್ಜಿ ಊರಿಗೆ ಹೊರಟಾಗ ಸಣ್ಣ ಪುಟ್ಟ ಸಂಗತಿಗಳಲ್ಲಿ ಅವನು ಕಂಡುಕೊಳ್ಳೋ ಖುಶಿ,ತಾಯಣ್ಣನ ಜೊತೆ ಊರು ತಿರುಗಿ ಸೈಕಲ್ ಕಲಿಯೋ ಸನ್ನಿವೇಶಗಳೆಲ್ಲ ಸೀದಾ ಬಾಲ್ಯದ ಓಣಿಯಲ್ಲಿ ಇಳಿಸಿಬಿಡತ್ತೆ.
ಮಡಿಯಾಗಿರೋದು ಮಡಿ ಅಡುಗೆಯನ್ನೇ ಊಟ ಮಾಡೋದನ���ನೇ ಜೀವನ ಕ್ರಮವಾಗಿಸಿಕೊಂಡಿದ್ದ ಅಮ್ಮ ಮಗಳು ಬೇರೆ ಸಂದರ್ಭಗಳಲ್ಲಿ ಆಸ್ಪತ್ರೆ ಸೇರ್ತಾರೆ.ಮಗಳು ತನ್ನ ಮಡಿಯನ್ನ ಸಡಲಿಸಿ ಮೈಲಿಗೆ ಊಟ ಮಾಡಿ ಬದುಕಿ ಊರಿಗೆ ಬಂದು ಇನ್ನು ಸಮಾಜದ ಅಡಿಗೆ ಮಡಿಕೆಲಸಗಳಲ್ಲಿ ತಾನು ಭಾಗವಹಿಸುವಂತಿಲ್ಲ ಎಂದು ಕೊರಗಿ ಸಾವನ್ನಪ್ಪಿದ್ರೆ ತಾಯಿ ಆಸ್ಪತ್ರೆಯ ಊಟವನ್ನ ಮಾಡೋದೆ ಇಲ್ಲ ಅಂತ ಉಪವಾಸ ಮಾಡಿ ಸಾವನ್ನಪ್ಪೋ ಕಥೆ 'ಮೌಢ್ಯೋಪಾಸನೆ'ಯದು.
ಭಿಕ್ಷೆ ಬೇಡಿ ಜೀವನ ಮಾಡುತ್ತಿದ್ದವನ ಮಗಳು ಹುಲಿಗೆವ್ವನ ಬಾಳ ಪಯಣದ ಕತೆಯೇ 'ಹುಲಿಗೆವ್ವ'.ಅಪ್ಪ ಸತ್ತ ನಂತರ ಭಿಕ್ಷೆ ಯೂ ನಿಂತು ಮುಂಬೈಗೆ ಹೋಗಿ ಮನೆಕೆಲಸ ಮಾಡಿ ಕೊನೆಗೆ ವೇಶ್ಯಾವೃತ್ತಿಯನ್ನೂ ಮಾಡಿ ಕಂಪ್ಯೂಟರ್ ಕಲಿತು ಡಿಗ್ರಿ ಮಾಡಿ ಒಂದು ಕಂಪನಿಯ ಪ್ರಾಜೆಕ್ಟ್ ಮ್ಯಾನೇಜರ್ ಆಗೋ ಗಟ್ಟಿಗಿತ್ತಿ ಹುಲಿಗೆವ್ವನ ಕತೆ ಇದು.
ಮನೀಷೆ ಕತೆಯೂ ನನಗೆ ಬಹಳ ಇಷ್ಟವಾಯ್ತು.ಓದು ಕೆಲಸ ಸಂಸಾರಗಳ ಮಧ್ಯೆ ತೊಳಲಾಡ್ತಿರೋ ಮನುಷ್ಯ ತನ್ನ ಬಾಲ್ಯ ಸ್ನೇಹಿತನ ಸಂಗೀತ ಕಛೇರಿಗೆ ಹೋಗಿ ಅವನ ಬಗ್ಗೆ ಹೆಚ್ಚೆಚ್ಚು ತಿಳಿದುಕೊಂಡತೆಲ್ಲ ತಾನು ಕಳೆದುಕೊಂಡಿರೋದೇನೆಂದು ಅರ್ಥವಾಗ್ತಾ ಕೊನೆಗೆ ನನ್ನನ್ನೇ ನಾನು ಕಳೆದುಕೊಂಡಿದ್ದೇನೆ ಅಂತ ತಿಳಿದುಕೊಳ್ಳುವ ಪರಿ ಚಂದವಿದೆ.
The book is short and quick, although I took gap in the reasoning, it did pace quickly and bought up the memories hidden deep down.
Each story represents a theme, mainly involving the days of the past, if you born around 80's and early 90's, you could have lived a part of your life in the circumstances presented to the characters of the stories.
Albeit being fictional themes, or perhaps semi fictions, it brings forth depiction of the years that were once normal, as that we live now, they lived then. Everything now is just a wisp of fading memories.
Although I did not like the ending of few stories, it is what it is, countless lives live countless stories, they did back then, we do in the now.
೬ ಕಥೆಗಳಿರುವ ಒಂದು ಚಿಕ್ಕ ಕಥಾಸಂಕಲನ. ಪ್ರತಿಯೊಂದು ಕಥೆಯು ವಿಭಿನ್ನ. ಲೇಖಕರು ೯೦ರ ದಶಕದಲ್ಲಿ ಬರೆದಂತಹ ಕಥೆಗಳಿವು. ಹಾಗಾಗಿ ಆ ಕಾಲಘಟ್ಟಕ್ಕೆ ಅನ್ವಯಿಸುವಂತಹ ಕಥೆಗಳಿವೆ. ಮೌಢ್ಯೋಪಾಸನೆಯಿಂದ ತಮ್ಮ ಬದುಕನ್ನೇ ಸವೆದ ಮಹಿಳೆಯರ ಕಥೆ ಒಂದೆಡೆ. 'ಹುಲಿಗೆವ್ವ' ಅನ್ನೋ ಹುಡುಗಿ ಕಷ್ಟವನ್ನು ಮೆಟ್ಟಿನಿಂತು ಬದುಕಲ್ಲಿ ಗೆಲುವು ಸಾಧಿಸಿದ ಕಥೆ ಇನ್ನೊಂದೆಡೆ. ಕೆಲವು ಕಥೆಗಳು ನಮ್ಮ ಬಾಲ್ಯವನ್ನು ಪುನಃ ನೆನಪಿಸುತ್ತವೆ. ಒಟ್ಟಾರೆಯಾಗಿ ತುಂಬಾ ಚೆಂದದ ಪುಸ್ತಕ.