Jump to ratings and reviews
Rate this book

ಸ್ವಾತಂತ್ರ್ಯದ ಓಟ

Rate this book

1111 pages, Unknown Binding

First published January 1, 2012

1 person is currently reading
7 people want to read

Ratings & Reviews

What do you think?
Rate this book

Friends & Following

Create a free account to discover what your friends think of this book!

Community Reviews

5 stars
3 (75%)
4 stars
1 (25%)
3 stars
0 (0%)
2 stars
0 (0%)
1 star
0 (0%)
Displaying 1 - 2 of 2 reviews
172 reviews20 followers
May 19, 2025
#ಅಕ್ಷರವಿಹಾರ_೨೦೨೫
ಕೃತಿ: ಸ್ವಾತಂತ್ರ್ಯದ ಓಟ
ಲೇಖಕರು: ಬೊಳುವಾರು ಮಹಮ್ಮದ್ ಕುಂಞಿ
ಪ್ರಕಾಶಕರು: ಕಾಮಧೇನು ಪುಸ್ತಕ ಭವನ, ಬೆಂಗಳೂರು
ಬೆಲೆ: 900 ರೂಪಾಯಿಗಳು
ಪ್ರಕಟಣೆಯ ವರ್ಷ: 2012

ನಾನು ಓದಿದ ಕನ್ನಡದ ಅತ್ಯಂತ ದೊಡ್ಡ ಕೃತಿ ಇದು. 1110 ಪುಟಗಳು.‌ ಸಮಯವನ್ನು ಹೊಂದಿಸಿಕೊಂಡು 21 ದಿನಗಳಲ್ಲಿ ಓದಿ ಮುಗಿಸಿದೆ. ಗಾತ್ರದಲ್ಲಿ ದೊಡ್ಡದಾಗಿದ್ದರೂ ಕೊನೆಯ ಪುಟವನ್ನು ಮುಗಿಸಿದಾಗ ಛೇ… ಮುಗಿದೇ ಹೋಯ್ತು ಎನ್ನುವ ಭಾವವು ಮೂಡಿದರೆ ಅದಕ್ಕಿಂತ ಹೆಚ್ಚಾಗಿ ಇನ್ನೇನು ಹೇಳಬಹುದು. ಮೊದಲ ಪುಟವನ್ನು ಓದುವುದಷ್ಟೇ ನಾವು ಮಾಡಬಹುದಾದದ್ದು, ಮಿಕ್ಕೆಲ್ಲಾ ಪುಟಗಳನ್ನು ತಾನೇ ಓದಿಸಿಕೊಳ್ಳುವ ಕೃತಿ. ಮಂಗಳೂರಿನ ಭಾಷೆಯ ಬಳಕೆ ನನ್ನ ಮಟ್ಟಿಗೆ ಇನ್ನೊಂದು ಧನಾತ್ಮಕ ಅಂಶ. ಈ ವರ್ಷ ಓದಿದ ಅತ್ಯುತ್ತಮ ಕೃತಿಗಳ ಪೈಕಿ ಇದಕ್ಕೆ ಮೊದಲನೆಯ ಸ್ಥಾನ.

ಕತೆಯ ಬಗ್ಗೆ, ಕತೆಯನ್ನು ಬೆಳೆಸಿದ ಬಗೆಗೆ ಏನು ಹೇಳಿದರೂ ಕಡಿಮೆಯೇ. ಎಲ್ಲಿಂದ ಪ್ರಾರಂಭಿಸಿ ಎಲ್ಲಿ ನಿಲ್ಲಿಸಬೇಕೆಂದು ನನ್ನ ಅರಿವಿನ ಮಿತಿಯನ್ನು ಮೀರಿದ್ದು. ನನ್ನ ಗ್ರಹಿಕೆಗೆ ಸಿಕ್ಕಿದ್ದನ್ನು ಹೇಳುವ ಸಣ್ಣ ಪ್ರಯತ್ನವನ್ನು ಮಾಡಿದ್ದೇನೆ ಅಷ್ಟೇ. ಸ್ವಾತಂತ್ರ್ಯದ ಘೋಷಣೆಯಾಗಿ ಭಾರತವು ಇಬ್ಭಾಗವಾದಾಗ ಇಬ್ಬರು ಅಸಹಾಯಕ ಹೆಣ್ಣು ಮಕ್ಕಳ ಜೊತೆಗೆ ಅನಿವಾರ್ಯತೆ ಮತ್ತು ಆಕಸ್ಮಿಕವಾಗಿ ಭಾರತ ಸೇರುವ ಚಾಂದ್ ಅಲೀಯಿಂದ ಪ್ರಾರಂಭಿಸಿ ಮತ್ತೆ ಲಾಹೋರಿಗೆ ಸೇರುವ ಪ್ರಯತ್ನದಲ್ಲಿ ಮುತ್ತುಪಾಡಿಯನ್ನು ಸೇರಿ ಹೆಚ್ಚು ಕಮ್ಮಿ ಇಲ್ಲಿಯವನೇ ಆಗಿ ಹೋಗುವ, ತನ್ನ ಮೊಮ್ಮಗಳ ಮೂಲಕ ಮತ್ತೆ ತನ್ನವರನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿ ಆಗುವ ಮರ್ಮಾಘಾತದವರೆಗೆ, ಸರಿ ಸುಮಾರು ಐವತ್ತು ವರ್ಷಗಳ ಭಾರತದ ಕತೆಯು ನಮ್ಮೆದುರು ತೆರೆದುಕೊಳ್ಳುತ್ತದೆ. ಕತೆಯ ಬಹುಭಾಗ ನಡೆಯುವುದು ಮಂಗಳೂರಿನ ಸಮೀಪದ “ಮುತ್ತುಪ್ಪಾಡಿ” ಎಂಬ ಊರಿನಲ್ಲಾದರೂ, ಈ ಕತೆಯು ಭಾರತದ ಯಾವುದೇ ಒಂದು ಊರಿನಲ್ಲಿ, ಹಳ್ಳಿಯಲ್ಲಿ ನಡೆದಿರಬಹುದಾದ ಕತೆಯೆಂಬ ವಿಚಾರವು ಓದುಗರಲ್ಲಿ ಗಟ್ಟಿಗೊಳ್ಳುತ್ತದೆ. ಇಲ್ಲಿ ಚಾಂದ್ ಅಲೀ, ತನ್ವೀರ್, ಅನಂತಣ್ಣ, ಹಂಝಾಕಾ, ಅವುಲಿಯಾ ಕೇವಲ ಕತೆಯ ಪಾತ್ರಗಳ ಹೆಸರು ಮಾತ್ರ. ಅಂತಹಾ ವ್ಯಕ್ತಿತ್ವದ ಹತ್ತು ಹಲವು ವ್ಯಕ್ತಿಗಳು ನಮ್ಮ ಕಣ್ಣೆದುರೇ ಆಗಿ ಹೋಗಿದ್ದಿರಬಹುದು. ಕಾಲ್ಪನಿಕ ಪಾತ್ರಗಳ ಜೊತೆಗೆ ಬರುವ ಲಾಲ್ ಕಿಶನ್, ಕುಲದೀಪ್ ನಯ್ಯರ್, ರಾಜೀಂದ್ರ ಸಾಚಾರ್, ಕೆ.ಕೆ. ಪೈ ಎಂಬ ನಿಜ ಜೀವನದ ಪಾತ್ರಗಳು ಸೂಕ್ಷ್ಮವಾಗಿ ಬಂದು ಹೋಗುವ ಮೂಲಕ, ಕತೆಯ ಹಲವು ಘಟನೆಗಳಿಗೆ ಅಧಿಕೃತತೆಯ ಮುದ್ರೆಯನ್ನು ಒತ್ತುವ ಪ್ರಯತ್ನವನ್ನು ಮಾಡುತ್ತದೆ.

ಆ ಧರ್ಮ, ಈ ಜಾತಿ, ಮತ್ತೊಂದು ಮತ ಎಂದು ಹರಿದು ಹಂಚಿ ಹೋಗಿರುವ ಈ ಕಾಲಘಟ್ಟದಲ್ಲಿ, ಇವೆಲ್ಲಕ್ಕಿಂತ ಮುಂಚಿನ ಭಾರತ(ಸ್ವಲ್ಪ ಮಟ್ಟಿನ ಕನಿಷ್ಠ ಸಹಿಷ್ಣುತೆ ಎರಡೂ ಕಡೆಗಳಿಂದ ಇದ್ದ ಕಾಲ) ನಮ್ಮೆದುರು ತೆರೆದುಕೊಳ್ಳುತ್ತದೆ. ಈಗಿನ ಪೆಡಂಭೂತವಾಗಿ ಬೆಳೆದಿರುವ ಮತೀಯವಾದದ ಚಿಗುರುಗಳು ಮೊಳಕೆಯೊಡೆಯಲು ಕಾರಣೀಭೂತವಾದ ಅಂಶಗಳ ಬಗ್ಗೆ ಕೃತಿಯು ಗಮನ ಸೆಳೆಯುತ್ತದೆ. ಪ್ರಮುಖವಾಗಿ, ಹಿಂದೂ ಮತ್ತು ಇಸ್ಲಾಂ ಧರ್ಮದ ಆಚರಣೆಗಳಲ್ಲಿನ ವೈಚಾರಿಕತೆ, ವೈವಿಧ್ಯತೆ ಮತ್ತು ಹುಳುಕುಗಳನ್ನು ಧರ್ಮನಿರಪೇಕ್ಷವಾಗಿ ಚರ್ಚಿಸಿರುವುದು ನಮ್ಮಗಳ ದೃಷ್ಟಿಕೋನವನ್ನು ಬದಲಾಯಿಸಬೇಕಾದುದರ ಅನಿವಾರ್ಯತೆಯನ್ನು ಒತ್ತಿ ಹೇಳುತ್ತದೆ. ಭಾರತದಲ್ಲಿ ನಡೆದ ಹಲವಾರು ಪ್ರಮುಖ ಘಟನೆಗಳು ದೇಶದ ಕೊನೆಯ ಹಳ್ಳಿಗಳಲ್ಲಿ ನಡೆಸಿದ, ಎಲ್ಲಿಯೂ ದಾಖಲಾಗದ ಅನಾಹುತಗಳು ಮತ್ತು ಅವಾಂತರಗಳನ್ನು ಕೃತಿಯು ಸಶಕ್ತವಾಗಿ ಬಣ್ಣಿಸಿದೆ. ಇವಕ್ಕೆ ಮಹಾತ್ಮ ಗಾಂಧೀಜಿಯವರ ಹತ್ಯೆ, ಅಡ್ವಾಣಿಯವರ ರಥಯಾತ್ರೆ, ಮತಾಂತರವಾದವರ ಮರು ಸೇರ್ಪಡೆ ಮುಂತಾದ ಘಟನೆಗಳನ್ನು ಉದಾಹರಣೆಯಾಗಿ ತೆಗೆದುಕೊಳ್ಳಬಹುದು.

ಮುತ್ತುಪಾಡಿಗೆ ಬಂದ ಚಾಂದ್ ಅಲೀ ಚಾಂದಚ್ಚನಾಗಿ, ಚಾಂದಜ್ಜನಾಗುವವರೆಗಿನ ಐವತ್ತು ವರ್ಷಗಳ ಕಾಲಮಾನದಲ್ಲಿ ಮುತ್ತುಪಾಡಿಯಲ್ಲಿ ಬಹಳಷ್ಟು ನೀರು ಹರಿದು ಹೋಗುತ್ತದೆ. ಆದರೆ ಈ ಎಲ್ಲಾ ವಿದ್ಯಮಾನಗಳು ಸಾಮಾನ್ಯರ ಜೀವನವನ್ನು ಆವರಿಸಿಕೊಳ್ಳುವ ಪರಿ, ಒಂದಕ್ಕೊಂದು ಪೂರಕವೆನ್ನುವಂತಹ ಘಟನೆಗಳು, ಅಚಾನಕ್ಕಾಗಿ ಧುತ್ತನೆ ಎದುರಾಗುವ ಸನ್ನಿವೇಶಗಳು ದೀರ್ಘ ಅವಧಿಯಲ್ಲಿ ಬೀರುವ ಪರಿಣಾಮಗಳ ಕುರಿತಾಗಿ ಬಹಳಷ್ಟು ವಸ್ತುನಿಷ್ಠ ಚರ್ಚೆ ನಡೆಯುತ್ತದೆ. ಹಾಗೆಂದು ಎಲ್ಲವನ್ನೂ ಖುಲ್ಲಂಖುಲ್ಲಾ ಹೇಳುವುದಿಲ್ಲ. ಕೆಲವೊಮ್ಮೆ ಹೇಳಿಯೂ ಹೇಳದಂತಿರುವ ಲೇಖಕರ ಜಾಣ್ಮೆಯನ್ನು ಮೆಚ್ಚಬೇಕು. ಊರಿನಲ್ಲಿ ನಡೆಯುವ ಮುಸ್ಲಿಂ ಮಕ್ಕಳ ಶಿಕ್ಷಣ, ದೇವಾಲಯದ ಉತ್ಸವದಲ್ಲಿ ನಡೆಯುವ ಕೋಮುಗಲಭೆ, ಅಂತರ ಧರ್ಮೀಯ ವಿವಾಹಗಳು, ಧರ್ಮದ ಹೆಸರಿನಲ್ಲಿ ನಡೆಯುವ ಹಗ್ಗ ಜಗ್ಗಾಟಗಳ ಕುರಿತಾದ ವಿವರಗಳು ಎಲ್ಲಾ ಕಾಲಕ್ಕೂ ಪ್ರಸ್ತುತ ಎನ್ನುವಷ್ಟು ಸಹಜವಾಗಿ ಮೂಡಿಬಂದಿವೆ. ಕೆಲವೊಂದು ದುರ್ಭರ ಸನ್ನಿವೇಶಗಳನ್ನು ಎರಡು ಕಡೆಯ ಹಿರಿಯರು ನಿಭಾಯಿಸುವ ರೀತಿ ಇಂದಿನ ಜನಾಂಗಕ್ಕೆ ದಾರಿದೀಪವಾಗಿದೆ. ಇಷ್ಟೆಲ್ಲದರ ನಡುವೆ ಲೇಖಕರು ಪ್ರತಿಯೊಂದು ಘಟನೆಯನ್ನು ಅಥವಾ ಕಥನವನ್ನು ತೆರೆದಿಡುವಲ್ಲಿ ಕೊಡುವ ವಿವರಗಳು ಸನ್ನಿವೇಶವನ್ನು ಮತ್ತಷ್ಟು ಆಪ್ತವಾಗಿಸುತ್ತವೆ. ಎಲ್ಲಾ ಕಡೆಯೂ ನಡೆಯುವಂತಹ ನಂಬಿಕೆ ವಿಶ್ವಾಸದ್ರೋಹ, ದೊಡ್ಡವರ ಸಣ್ಣತನ,ಸಣ್ಣವರ ದೊಡ್ಡ ಗುಣಗಳು, ಏಕತೆಯಲ್ಲಿ ಅನೇಕತೆ, ಸಾಮೂಹಿಕತೆಯಲ್ಲಿನ ವೈಯಕ್ತಿಕತೆ ಕಥಾನಕಕ್ಕೆ ಸಹಜವಾಗಿ ಬಣ್ಣ ತುಂಬುವುದರ ಜೊತೆಗೆ ಬದುಕೆಂಬುದು ಎಷ್ಟು ವರ್ಣರಂಜಿತವೆಂಬ ಬೆರಗನ್ನು ಮೂಡಿಸುತ್ತದೆ. ಈ ವೈರುಧ್ಯಗಳ, ಸಾಮ್ಯತೆಗಳ ನಡುವೆ ಮಾನವೀಯತೆಯ ಸೆಲೆಯೊಂದೇ ಸಂಬಂಧಗಳನ್ನು ಮತ್ತಷ್ಟು ಮಗದಷ್ಟು ಗಟ್ಟಿಗೊಳಿಸುವ ಸಾಧನ ಎಂಬ ಅರಿವು ಓದುಗನಲ್ಲಿ ಮೂಡಿಸುತ್ತದೆ.

ನನ್ನನ್ನು ಬಹುವಾಗಿ ಕಾಡಿದ ವಿವರಗಳೆಂದರೆ ದೇಶ ವಿಭಜನೆಯ ವಿವರಗಳು. ನಿಂತ ನೆಲದಲ್ಲಿ ತಾವು ಇನ್ನು ಮುಂದೆ ಇಲ್ಲಿಗೆ ಸೇರಿದವರಲ್ಲ, ಪರಕೀಯರು, ಶತಶತಮಾನಗಳಿಂದ ಹುಟ್ಟಿ ಬೆಳೆದು ಬಂದ ಪರಂಪರೆಯನ್ನು ನಿಂತ ಕಾಲಿನಲ್ಲಿಯೇ ಬಿಟ್ಟು ತೆರಳಬೇಕಾದ ಅನಿವಾರ್ಯತೆಯು ಸೃಷ್ಟಿಸಿರಬಹುದಾದ ತಲ್ಲಣಗಳನ್ನು ನೆನೆಸುವಾಗ ಮೈ ಜುಮ್ಮೆನಿಸಿತು. ಕಾದಂಬರಿಯ ಸಾಲುಗಳನ್ನು ಉಲ್ಲೇಖಿಸುವುದಾದರೆ “ಬ್ರಿಟಿಷರನ್ನು ಓಡಿಸಿ ಆಯಿತು, ನಮಗೆ ಸ್ವಾತಂತ್ರ್ಯ ಸಿಕ್ಕಿತು. ಹಾಗಾಗಿ ಓಡುತ್ತಿರಬೇಕಾಯಿತು. ದೇಶವನ್ನು ಒಡೆದು ನಾಯಕರೆನಿಸಿಕೊಂಡವರ ಶಾಂತಿಯ ಮಾತುಗಳನ್ನು ಕೇಳುವ ವ್ಯವಧಾನ ಯಾರಿಗೂ ಇರಲಿಲ್ಲ. ಬ್ರಿಟಿಷರನ್ನು ಓಡಿಸಿದ ನಂತರ ತಮ್ಮ ತಮ್ಮ ಸ್ವಾತಂತ್ರ್ಯವನ್ನು ಗಳಿಸಿಕೊಳ್ಳಲು ಅವರು ಓಡುತ್ತಿದ್ದರು. ಅದು ಸ್ವಾತಂತ್ರ್ಯದ ಓಟವಾಗಿತ್ತು”. ಈ ಸಾಲುಗಳಲ್ಲಿರುವ ಕಟುವಾಸ್ತವವನ್ನು ಅಲ್ಲಗಳೆಯಲು ಸಾಧ್ಯವೇ?. ಮನುಷ್ಯನಲ್ಲಿ ಮೂಲತಃ ಇರುವುದು ಕ್ರೌರ್ಯವೇ ಏನೋ? ಅದು ವಿಜೃಂಭಿಸಲು ಸರಿಯಾದ ಅವಕಾಶ ದೊರೆಯದ ಕಾರಣ ಸಭ್ಯತೆಯ ಸೋಗಿನೊಳಗೆ ಅಡಗಿ ಕುಳಿತಿದೆಯೇನೋ ಅರೆಕ್ಷಣ ಅನಿಸಿದ್ದು ಸುಳ್ಳಲ್ಲ.

ಕೊನೆಯದಾಗಿ ಅನಿಸಿದ್ದು ಇಷ್ಟು, ದೇಶ ವಿಭಜನೆಯಾದಾಗ ಎರಡೂ ಕಡೆಯವರು ಓಡುತ್ತಿದ್ದರು, ತಮ್ಮ ಸಹಸ್ರಾರು ವರ್ಷಗಳ ನಂಬಿಕೆ ಶ್ರದ್ಧೆಗಳನ್ನು ಉಳಿಸಿಕೊಳ್ಳುವ ಸಲುವಾಗಿ, ವರ್ತಮಾನದಲ್ಲಿ ಕವಿದಿರುವ ಗಾಢಾಂಧಕಾರವನ್ನು ದಾಟಿ ಮುಂದೆ ತಮಗೆ‌ ಒದಗಬಹುದಾದ ಅದೃಷ್ಟವನ್ನು ಪರೀಕ್ಷಿಸುವ ಸಲುವಾಗಿ, ದ್ವೇಷದಳ್ಳುರಿಯಲ್ಲಿ ದಹಿಸಿಹೋದ ಅಳಿದುಳಿದ ನೆನಪುಗಳ ಜೊತೆಗೆ ಮತ್ತೆ ಬದುಕು ಕಟ್ಟಿಕೊಳ್ಳುವ ಸಲುವಾಗಿ ಓಡಿದರು. ಓಡಿಯೇ ಓಡಿದರು. ಅದೃಷ್ಟವಿದ್ದವರು ಉಳಿದುಕೊಂಡರು, ಉಳಿದವರು ಒಂದು ಕಾಲದಲ್ಲಿ ತಮ್ಮದಾಗಿದ್ದ ನೆಲದಲ್ಲಿ ಅನಾಥ ಶವವಾಗಿ ಮಲಗಿದರು.

ಬೊಳುವಾರು ಅವರ ಈ ಕೃತಿ ನಾಟಕವಾಗಿ ರೂಪಾಂತರಗೊಂಡು ಪ್ರೇಕ್ಷಕರ ಮುಂದೆ ಬರಲಿದೆ. ಅದು ಒಬ್ಬ ಸಮರ್ಥ ನಿರ್ದೇಶಕರ ಕೈಯಲ್ಲಿ ದೊರೆತು ಕಾದಂಬರಿಯ ಆಶಯವನ್ನು ಪೂರೈಸಲಿ ಎಂಬ ಹಾರೈಕೆಯೊಂದಿಗೆ, ಈ ಮಹತ್ವದ ಕೃತಿಯನ್ನು ಕನ್ನಡ ಸಾಹಿತ್ಯಲೋಕಕ್ಕೆ ನೀಡಿದ ಬೊಳುವಾರು ಸರ್ ಅವರಿಗೆ ಶರಣು ಶರಣಾರ್ಥಿ. ಕೃತಿಯನ್ನು ಓದುವುದೇ ಒಂದು ಅದ್ಭುತ ಅನುಭವ.

ನಮಸ್ಕಾರ,
ಅಮಿತ್ ಕಾಮತ್
Displaying 1 - 2 of 2 reviews

Can't find what you're looking for?

Get help and learn more about the design.