ಲಿಂಗನಮಕ್ಕಿ, ತಳಕಳಲೆ ಜಲಾಶಯಗಳ ನೀರಿನಿಂದಾಗಿ ೧೫೩ ಹಳ್ಳಿಗಳು ಮುಳುಗಡೆಯಾಗಿದ್ದವು ಅಂದರೆ ಸರಿ ಸುಮಾರು ೩೮೪೭ ಕುಟುಂಬಗಳು ಆ ಹಳ್ಳಿಗಳಿಂದ ಬೇರೆಕಡೆಗೆ ಸ್ಥಳಾಂತರ ಮಾಡಬೇಕಿತ್ತು. ಒಂದು ಕಡೆ ಈ ಜಲಾಶಯ ನಿರ್ಮಾಣದಿಂದ ವಿದ್ಯುತ್ ಒದಗಿಸುವ ಪ್ರಗತಿಪರ ಯೋಜನೆ ಒಳ್ಳೆಯದಾದರೂ ಮತ್ತೊಂದು ಕಡೆ ಮನೆ ತೋಟ ಎಂದು ಆ ಹಳ್ಳಿಯಲ್ಲೇ ಬಾಳಿ ಬದುಕಿದ ಕುಟುಂಬಗಳು ಆ ಹಳ್ಳಿಯನ್ನು ಬಿಡಬೇಕಾಗುವ ಪ್ರಸಂಗ ಬಂದಾಗ ಅವರು ಪಟ್ಟ ಕಷ್ಟಗಳನ್ನು ನೆನೆದರೆ ಸಂಕಟವಾಗುತ್ತದೆ. ಅಣೆಕಟ್ಟು ಕಟ್ಟುವುದರಿಂದ ನೀರು ನಿಲ್ಲುತ್ತದೆ, ವಿದ್ಯುತ್ ತಯಾರಿಯಾಗುತ್ತದೆ, ಆದರೆ ಮುಳುಗಡೆಯಾಗಿದ್ದು ಹಳ್ಳಿಗಳೆ? ಅಥವ ಜನಾಂಗವೆ? ಅವರ ನಂಬಿಕೆಗಳೆ?ಪ್ರೀತಿ ವಾತ್ಸಲ್ಯಗಳೆ? ಸರಕಾರ ಬೇರೆಕಡೆ ಬದುಕಲು ಅವಕಾಶ ಕಲ್ಪಿಸಿಕೊಟ್ಟರೂ ಹುಟ್ಟಿನಿಂದ ಅಲ್ಲೇ ಬಾಳಿ ಬದುಕಿದ ಜನರು ಬೇರಡಗೆ ಹೋಗಿ ಜೀವನವನ್ನು ಸಾಗಿಸುವಾಗ ಎಷ್ಟು ಮನಸ್ಸುಗಳು ನೊಂದಿರಬೇಕು?. ಶರಾವತಿ ಯೋಜನೆಯಿಂದ ಮುಳುಗಿಹೋಗಲಿರುವ ಹಳ್ಳಿ, ಊರುಗಳಲ್ಲಿ ಹಲವು ಶಿಲಾಶಾಸನ, ಮಾಸ್ತಿಕಲ್ಲು, ವೀರಗಲ್ಲು, ವಿಗ್ರಹಗಳು ಇರುವುದೆಂದು ಆ ಶಾಸನಗಳ ನಕಲು ಮಾಡಿಕೊಂಡು ವರದಿ ಒಪ್ಪಿಸುವುದಾಗಿ ಇಲ್ಲಿರುವ ಕಥಾನಾಯಕ ರಮೇಶನಿಗೆ ಸರ್ಕಾರದಿಂದ ಆದೇಶ ಬರುತ್ತದೆ. ಶಾಸನಗಳನ್ನು ಪತ್ತೆಹಚ್ಚುವ ಸಮಯದಲ್ಲಿ ಪ್ರತಿ ಹಳ್ಳಿಯ ಜನರ ಮನಸ್ಸುಗಳನ್ನು ಅರಿಯುತ್ತಾ ಹೋಗುತ್ತಾನೆ, ಯೋಜನೆ ಒಳ್ಳೆಯದು , ಆದರೆ ಹಳ್ಳಿಯ ಜನಾಂಗದ ದೃಷ್ಟಿಯಿಂದ ನೋಡಿದರೆ ಸರ್ಕಾರದ ಆದೇಶ ಮೀರುವಂತಿಲ್ಲ ಆ ಸಂದರ್ಭದಲ್ಲಿ ತಾನು ನಿಸ್ಸಹಾಯಕನೆಂದು ದುಃಖಪಡುತ್ತಾನೆ.
ಕಾರ್ಗಲ್ಲಿನಿಂದ ತನ್ನ ಕೆಲಸವನ್ನು ಶುರುಮಾಡುತ್ತಾನೆ, ಶಾಸನ, ಮಾಸ್ತಿಕಲ್ಲು, ವೀರಗಲ್ಲು, ದೇವಾಲಯ ಹುಡುಕುವುದು. ಲಿಂಗನಮಕ್ಕಿ ಅಣೆಕಟ್ಟಿನ ಯೋಜನೆಯಲ್ಲಿ ಹಿಡತೆರಿ ಹಳ್ಳಿಯೂ ಒಂದು. ಅಲ್ಲಿ ಕೆಲವು ವೀರಗಲ್ಲುಗಳು ದೊರೆಯುತ್ತವೆ, ಯುದ್ಧದಲ್ಲಿ ಸತ್ತ ವೀರನ ಹೆಸರನ್ನು ಕಲ್ಲಿನ ಮೇಲೆ ಕೆತ್ತಿರುವುದರಿಂದ ಅವುಗಳನ್ನು ವೀರಗಲ್ಲು ಎಂದು ಕರೆಯುವುದಾಗಿ ತಿಳಿದುಬರುತ್ತದೆ. ಇಕ್ಕೇರಿ ಅರಸರಿಗೂ ಹಾಡುವಳ್ಳಿ ರಾಣಿಗೂ ಯುದ್ಧ ನಡೆದು ಇಕ್ಕೇರಿ ವೆಂಕಟಪ್ಪ ಸೋತು ಓಡಿಹೋದ ರಣರಂಗವನ್ನು ಕಂಡು ಅದರ ಮಾಹಿತಿಯನ್ನು ಸಂಗ್ರಹಿಸುತ್ತಾನೆ. ಹಿಡತೆರಿ ಪಟೇಲರ ಮನೆಯನ್ನು ಹಿಡತೆರಿ ಅರೆಮನೆಯಂದು ಕರೆಯುತ್ತಿದ್ದರು ಹಾಗು ಅಲ್ಲಿ ಜಿನಾಲಯವು, ಮಾಸ್ತಿಕಲ್ಲು, ವಿಗ್ರಹಗಳು ಕಂಡುಬರುತ್ತದೆ. ಅರಮನೆ ಹುಕ್ಲುನಲ್ಲಿ ಲಕ್ಷ್ಮೀನಾರಾಯಣ ದೇವಾಲಯ, ಅಲ್ಲಿರುವ ಕೆಲವು ಶಾಸನಗಳೂ ದೊರೆಯುತ್ತವೆ. ಮುಂದ್ರೋಡಿಯಲ್ಲಿ ಕೆಲವು ಮಹತ್ವದ ಶಿಲ್ಪಗಳು ದೊರೆಯುತ್ತವೆ. ಕಾಳಮಂಜಿ, ಬಿದನೂರು ಹುಕ್ಲು ಇಲ್ಲೆಲ್ಲ ಕೆಲ ಜಿನಬಿಂಬಗಳು ದೊರೆಯುತ್ತವೆ . ಭಾರಂಗಿ ಸೀಮೆಯ ಇಂದ್ರವಾಡಿ ಎಂಬಲ್ಲಿ ಪಾರ್ಶ್ವನಾಥ ವಿಗ್ರಹವನ್ನು ಸರ್ಕಾರದ ಆದೇಶದ ಮೇಲೆ ಪತ್ತೆಹಚ್ಚಲು ಯಶಸ್ವಿಯಾಗುತ್ತಾನೆ. ಗೇರುಸೊಪ್ಪೆ, ಇಂದ್ರೋಡಿ, ಚಿತ್ರೋಡಿಯಲ್ಲಿ ಜೈನ ಆಲಯಗಳೂ ದೊರಕುತ್ತವೆ. ಗುಡ್ಡಬರೆಯಲ್ಲಿ ನಗರವನ್ನು ಆಳುತ್ತಿದ್ದ ಮುಂಡಿಗೆ ದೊರೆಗಳನ್ನು ಶಿವಪ್ಪನಾಯಕ ಸೋಲಿಸಿದ್ದ ನೆನಪಿನ ಧ್ವಜಸ್ತಂಭ ದೊರೆಯುತ್ತದೆ. ಆದರೆ ಗುಡ್ಡೆಬರೆಯ ರಂಗೇಗೌಡರು ಬೆಂಗಳೂರು, ದಿಲ್ಲಿಯಲ್ಲಿ ಗಿರಾಕಿ ಹುಡುಕಿ ಎಷ್ಟೋ ವಿಗ್ರಹಗಳನ್ನು ಮಾರಿದ ವಿಷಯವನ್ನು ತಿಳಿದು ಬೇಸರವಾಗುತ್ತದೆ, ಲಿಂಗನಮಕ್ಕಿ ಜಲಾಶಯದ ಬಳಿ ವಸ್ತು ಪ್ರದರ್ಶನಾಲಯವನ್ನು ಮಾಡಲು ಸರ್ಕಾರ ನಿರ್ಧರಿಸಿದ್ದ ಕಾರಣ ಎಲ್ಲೆಲ್ಲಿ ಶಾಸನಗಳು, ಮಾಸ್ತಿಕಲ್ಲುಗಳು, ವಿಗ್ರಹಗಳು ಮುಳುಗಡೆ ಪ್ರದೇಶದಲ್ಲಿ ತಾನು ವಿವರ ಸಂಗ್ರಹಿಸಿದ್ದನೊ ಅದಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ರಮೇಶ ತಿಳಿಸುತ್ತಾನೆ.
ಈ ಕೆಲಸದಲ್ಲಿರುವ ಸಮಯದಲ್ಲೇ ಮಂಡ್ಯದಿಂದ ಕೆಲವು ಪತ್ರಗಳು ಬರತೊಡಗುತ್ತವೆ. ತಾನು ಮದುವೆಯಾದ ಕಮಲೆಗೆ ಮದುವೆ ಮುಂಚೆ ಯಾರ ಜೊತೆಯೇ ಸಂಬಂಧವಿತ್ತೆಂದು ಆಧಾರದ ಸಮೇತ ಮಾಹಿತಿ ಬಂದಾಗ ತಾಳ್ಮೆ ಕೆಡದೆ ಪತ್ರವನ್ನು ಕಳುಹಿಸಿದ್ದು ಯಾರು ಇದರಿಂದ ಅವರಿಗೆ ಲಾಭವಾದರೂ ಏನು ಎಂಬುದನ್ನು ತಾಳ್ಮೆಯಿಂದ ನಿಭಾಯಿಸುತ್ತಾನೆ. ಕಮಲೆಯ ಮೇಲೆ ಪ್ರೀತಿ ಒಂದು ಕಾರಣವಾದರೆ ಮದುವೆಯ ಮುಂಚೆ ಏನು ನಡೆದಿದೆಯೋ ಅದು ತನಗೆ ಸಂಬಂಧವಿಲ್ಲ, ಮದುವೆಯ ನಂತರ ಇಬ್ಬರಿಗೂ ಪರಸ್ಪರ ಪ್ರೀತಿ ಇರುವುದಂತೂ ನಿಜ, ಆ ದೃಷ್ಟಿಯಿಂದ ತಮ್ಮ ಜೀವನವನ್ನು ಸಂತೋಷವಾಗಿ ಮುಂದುವರೆಸುತ್ತಾರೆ. ಅಣೆಕಟ್ಟು ಹತ್ತಿರ ವಸ್ತು ಪ್ರದರ್ಶನಾಲಯಕ್ಕೆ ಹೋದಾಗ ತಾನು ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಆ ಯಾ ವಿಗ್ರಹಗಳನ್ನು ,ಶಾಸನಗಳನ್ನು ಒಂದೇ ಕಡೆ ಕಂಡು ಇದರಿಂದ ಇತಿಹಾಸದ ಮಾಹಿತಿಯಾದರೂ ಜನರಿಗೆ ಲಭಿಸುತ್ತದೆ ಎಂದು ತನ್ನ ಸಂಶೋಧನಯೆ ಬಗ್ಗೆ ಸಂತೋಷವಾಗುತ್ತದೆ. ಲಿಂಗನಮಕ್ಕಿ ತಲಕಳಲೆ ಅಣೆಕಟ್ಟು ಪೂರ್ತಿಯಾದ ಮೇಲೆ ಒಮ್ಮೆ ಅಣೆಕಟ್ಟನ್ನು ನೋಡಲು ಇಬ್ಬರೂ ಹೇದಾಗ ಕಮಲೆಯ ಕುರಿತು ಬಂದಿರುವ ಪತ್ರಗಳನ್ನು ನೀರಿನಲ್ಲಿ ಎಸೆಯುತ್ತಾನೆ. ಶರಾವತಿಯ ನೀರು ಎಂಥೆಂತವರ ಕಷ್ಟಗಳನ್ನು ತನ್ನ ಮಡಿಲಲ್ಲಿ ಹಾಕಿಕೊಂಡಿದೆ ಅದರಲ್ಲಿ ತನಗೆ ಬಂದಿರುವ ಪತ್ರಗಳೂ ಅಲ್ಲಿಯೇ ಸೇರಲೆಂದು ಎಸೆಯುತ್ತಾನೆ.
ಹಿಂದೆ ಇಲ್ಲೆಲ್ಲ ಮನೆ ತೋಟ ಗದ್ದೆಗಳಿದ್ದವು, ಜನ ಇಲ್ಲಿ ಜೀವನವನ್ನು ಸಾಗಿಸುತ್ತಿದ್ದರು, ಈಗ ಎಲ್ಲಿ ನೋಡಿದರೂ ನೀರು. ಜನಕ್ಕೆ ತೊಂದರೆ ಆಯ್ತು, ಆದರೆ ದೇಶದ ಅಭಿವೃದ್ಧಿ ಬಂದಾಗ ಇಲ್ಲಿದ್ದ ಜನರ ಬದುಕನ್ನು ಪರಿಗಣಿಸಲು ಆಗುವುದಿಲ್ಲ. ಮುಳುಗಡೆಯಿಂದ ಕೆಲವರಿಗೆ ತೊಂದರೆಯಾಯಿತು, ಕೆಲವರಿಗೆ ಅನುಕೂಲವಾಯಿತು, ಕೆಲವರಿಗೆ ಲಾಭ ಆಯ್ತು, ನಷ್ಟ ಆಯ್ತು. ಒಟ್ಟಿಗೆ ಊರಲ್ಲಿದ್ದ ಜನರು ಚದುರಿಹೋದರು. ಒಂದೇ ಮನೆಯಲ್ಲಿದ್ದ ಅಣ್ಣ ತಮ್ಮಂದಿರು ಈ ಯೋಜನೆಯಿಂದ ಆಸ್ತಿ ಪಾಲುಮಾಡಿಕೊಂಡು ದೂರವಾದರು, ಅವರೆಲ್ಲರ ಮನಸ್ಸಿಗೆ ಎಷ್ಟು ದುಃಖವಾಗಿರಬೇಕೆಂದು ಲಿಂಗನಮಕ್ಕಿಯಲ್ಲಿ ನೀರನ್ನು ಕಾಣುತ್ತಾ ತನ್ನ ಕಣ್ಣೀರನ್ನು ರಮೇಶ ಸುರಿಸುತ್ತಾನೆ. ಒಟ್ಟಾರೆ ಲಿಂಗನಮಕ್ಕಿ, ತಳಕಳಲೆ ಜಲಾಶಯಗಳ ನೀರಿನಿಂದಾಗಿ ೧೫೩ ಹಳ್ಳಿಗಳು ಅಂದರೆ ಸರಿ ಸುಮಾರು ೩೮೪೭ ಕುಟುಂಬಗಳು ಮುಳುಗಡೆಯಾಗಿದ್ದವು.