ಮಧ್ಯ ಘಟ್ಟ ಓದಿದ್ದರೆ ಅದೇ ರೀತಿಯಲ್ಲಿ ಒಂದು ಅಜ್ಞಾತ ಹಳ್ಳಿಯಲ್ಲಿ ಜರುಗುವ ವಿಲಕ್ಷಣ ಘಟನೆಗಳ ಕಥೆ . ಕಣ್ಣಿಗೆ ಕಟ್ಟುವ ಸಂದರ ಬರವಣಿಗೆ. ಪರಿಸರದ ಹಸಿರು ಪದಗಳಲ್ಲಿ ಸೊಗಸಾಗಿ ಮೂಡಿ ಬಂದು ಓದುಗರೆದುರು ಬೆಟ್ಟ ಹತ್ತಿ ಇಳಿವ ಚಾರಣದ ಅನುಭವ ನೀಡುತ್ತದೆ. ಎಲ್ಲ ಕತೆ ನಮ್ಮ ಊರಿನಲ್ಲಿ ನಡೆದ ಸಾದಾರಣ ಕತೆ ತರನಾಗೆ ಇದೆ ಅಂತ ಅನಿಸುವ ಹೊತ್ತಿಗೆ ಅತಿ ಅಮಾನುಷ ಪವಾಡಗಳು ಜರುಗಿ ಇನ್ನೆಲೋ ಕೊಂಡೊಯ್ಯುತ್ತದೆ. ಮಾನವ ಸಂಬಂಧಗಳು, ಜಟಿಲ ಆಲೋಚನೆಗಳು , ಕುರುಡು ಭಕ್ತಿ ವೈರಾಗ್ಯ ಹೀಗೆ ಹಲವು ಮಹತ್ತರ ವಿಷಯಗಳು ಪಕ್ಕದ ಊರಿನ ಸರ್ವೇ ಸಾಮಾನ್ಯ ಕತೆ ಎನ್ನುವಂತೆ ವಿವರಿಸಲಾಗಿದೆ. ಅದೇ ಪುಸ್ತಕದ ಪ್ಲಸ್ ಪಾಯಿಂಟ್.
ಶ್ರೀಧರ ಬಳಗಾರರ ಈಸಾಡುತಾವ ಜೀವ ಎನ್ನುವ ಕಥಾ ಸಂಕಲನವನ್ನು ಹಿಂದೆ ಓದಿದ್ದೆ, ನಾನು ಬದುಕುತ್ತಿರುವ ಸಣ್ಣ ವೃತ್ತವೊಂದರ ಪರಿಧಿಯೊಳಗೆ ಅತ್ಯಂತ ಸಹಜವಾಗಿರುವ ದುರಂತಗಳನ್ನು ಕಟ್ಟಿಕೊಟ್ಟಿದ್ದ ಆ ಸಂಕಲನದ ಕಥೆಗಳು ಬಹಳ ಕಾಡಿದ್ದವು, ಆಡುಕಳ ಕೂಡ ಅಂತದ್ದೇ ಒಂದು ಕಥೆ, ಆದರೆ ಇದರ ಕಾಲಘಟ್ಟವನ್ನು ಊಹೆ ಮಾಡಿಕೊಳ್ಳುವುದು ಕಷ್ಟ, ಪ್ರಪಂಚದ ಸಮಸ್ತ ತಂಟೆ ತಕರಾರು ತರಲೆ ಇತ್ಯಾದಿಗಳೂ ಅದರ ಪ್ರಮಾಣಕ್ಕನುಸಾರವಾಗಿ ಒಂದು ಹಾಳು ಕೊಂಪೆಯಂತ ಹಳ್ಳಿಗೂ ಇವೆ ಎನ್ನುವ atom theory ಯ ದರ್ಶನ ಕಾದಂಬರಿಯಲ್ಲಿ ಕಂಡಿತು ಮತ್ತು ಆ ಆಡುಕಳ ನನ್ನ ಊರು ಆದೀತು, ಸೂರಣ್ಣ ಅಥವಾ ದಶರಥ ಅಲ್ಲಾ ಯಾವುದೇ ಪಾತ್ರ ನಾನೂ ಆದೇನು ಎನ್ನುವುದೇ ಬೆಚ್ಚಿ ಬೀಳಿಸಿದ ಸಂಗತಿ. ಕೊನೆಯ ಭಾಗದ ಕೆಲವು ಘಟನೆಗಳು ಸ್ವಲ್ಪ ನಾಟಕೀಯ ಎನಿಸಿದವು. ಕಾದಂಬರಿಯಲ್ಲಿ ಬರುವ ಪುರಾತನ ಮನೆಯ, ಖಾನಾವಳಿಯ, ಹೊಟೆಲ್ ರೂಮುಗಳ ವಿವರಣೆ ಅತ್ಯದ್ಭುತ.
ಹವ್ಯಕ ಸಮಾಜದ ಭಾಷೆ ಅಲ್ಲಲ್ಲಿ ಮುದ ನೀಡುತ್ತೆ. ಸೂರಣ್ಣ, ಭವಾನಿಯಂತವರಿಂದಾನೆ ದಾಯಾದಿ ಕಲಹಗಳು ಪ್ರಪಂಚದಲ್ಲಿ ನಡಿಯುತ್ತ ಇರೋದು. ದಶರಥ ನಂತಹವರನ್ನ ಪ್ರಪಂಚದ ಜನ ಹೇಗೆ ಸ್ವಾರ್ತಕ್ಕೆ ಬಳಸಿಕೊಳ್ತಾರೆ ಅನ್ನೋದು ೧೦೦ ರಷ್ಟು ಸತ್ಯ.
ಶ್ರೀಧರ ಬಳಗಾರರ ಎರಡನೆಯ ಕಾದಂಬರಿ ಇದು. ಸಾಮಾನ್ಯವಾಗಿ ಅವರ ಕತೆ ,ಕಾದಂಬರಿ ಹಳ್ಳಿಯ ಕೇಂದ್ರವಾಗಿಟ್ಟುಕೊಂಡವು. ಅಲ್ಲಿಗೆ ಆಧುನಿಕತೆಯ ಗಾಳಿ ತಾಕುವುದಿಲ್ಲ. ಇಲ್ಲಿ ಆಡುಕಳ ಎಂಬ ಫಲವತ್ತಾದ ಜಾಗದ ಸುತ್ತ ಕತೆ ಹೆಣೆಯಲ್ಪಟ್ಟಿದೆ. ಅದರ ಒಡೆಯ ದಶರಥನ ಮೇಲೆ ಅನಿರೀಕ್ಷಿತ ದಾಳಿಯಾದಾಗ ಅವನ ಉಪಚಾರಕ್ಕೋ, ತಮ್ಮ ಸ್ವಾರ್ಥಕ್ಕೋ ಅವನ ಸುತ್ತ ಸೇರುವ ಜನರ ಮನೋವ್ಯಾಪಾರ, ಅಲೌಕಿಕ ಅನ್ನಬಹುದಾದ ಜಾಗದ ದೇವರ ಪ್ರಭಾವಳಿ, ಇದ್ದಕ್ಕಿದ್ದಂತೆ ಈಗಿದ್ದರು ಈಗಿಲ್ಲ ಎಂಬಂತೆ ಕಣ್ಮರೆಯಾಗುವ ಜನರು, ಪರಿಸರವೂ ಪಾತ್ರವಾಗಿ ಅದು ಒಳ್ಳೆಯದಾ ಕೆಟ್ಟದಾ ಎಂದೂ ಚಿಂತನೆಗೆ ಹಚ್ಚುವ ಬರವಣಿಗೆ.
ಮೊದಲೇ ಹೇಳಿದಂತೆ ಶ್ರೀಧರ ಬಳಗಾರರ ಪ್ರಪಂಚ ಹಳ್ಳಿಯೆಂಬ ಚೌಕಟ್ಟಿನೊಳಗೆ ಬರುವಂತಹದ್ದು; ಅದರೊಳಗೆ ಗಾಳಿಗೆ ಎಲೆ ಅಲುಗಿದರೂ ಅದರ ಸದ್ದು ಊರಿಡೇ ಕೇಳುವಂತಹದ್ದು. ಹಾಗಾಗಿಯೇ ಅನಿರೀಕ್ಷಿತವಾದ ಘಟನೆ ಊರಲ್ಲಿ ಉಂಟುಮಾಡುವ ತಲ್ಲಣ ದೊಡ್ಡದೇ ಆಗುತ್ತದೆ. ಕತಾನಾಯಕ ಅಂತ ಇಲ್ಲದ ಊರೇ ಕತೆಯಾದರೆ ಏನೆಲ್ಲ ನಿರೀಕ್ಷಿಸಬಹುದೋ ಅದೆಲ್ಲವೂ ಇಲ್ಲಿದೆ. ಸ್ವಾಭಾವಿಕವಾಗಿ ಒಳಿತು- ಕೆಡುಕು ಎಂದು ವಿಂಗಡಿಸಿ ನೋಡಬಹುದಾದ ಪಾತ್ರಗಳಿಲ್ಲ. ತನ್ನ ಪಾಡಿಗೆ ತಾನಿದ್ದ ಬಡಪಾಯಿಯೊಬ್ಬ ಹಾಗಿರಲು ಬಿಡದೆ ಪರಿಸರವೇ ಅವನಿಗೆ ಪ್ರತಿಕೂಲವಾಗುವ ಸನ್ನಿವೇಶ ಇಲ್ಲಿದೆ. ಕಾದಂಬರಿಯ ಕೊನೆಯಲ್ಲಿ ಕೊಂಚ ಅವಸರವಾಗಿ ಆಧುನಿಕತೆಗೆ ಹಳ್ಳಿ ತೆರೆದುಕೊಂಡಂತೆ ಆಗುವ ಬದಲಾವಣೆಗಳು ಬೇಗ ಬೇಗ ಆದಂತೆ ಅನಿಸಿತು.
ಓದಿದರೆ ಗುಂಗು ಹಿಡಿಸುವಂತೆ ಬರೆಯುವ ಬಳಗಾರರ ಎಲ್ಲಾ ಕತೆ,ಕಾದಂಬರಿಗಳೂ ಇಂತಹುದೇ ಅಂತ ಹೇಳಲಾರದ ಆದರೆ ಹಳ್ಳಿಯೊಂದರ ಹಳೆಯ ಕಾಲದ ಚಿತ್ರಣದಂತೆ ಭಾಸವಾಗುತ್ತದೆ. ಮೊಬೈಲ್ ಪೋನೂ ,ಇಂಟರ್‍ನೆಟ್ ಕೂಡ ಇಲ್ಲದ ಕಾಡಿನ ನಡುವೆ ಹಳೆಯ ಕಾಲದಲ್ಲಿ ವಿಹರಿಸಿ ಬರಲು ಕೂತಲ್ಲಿಗೆ ಒಳ್ಳೆಯ ತಾಣ!!!
ನಾಲ್ಕಕೆರೆಯ ಭೂಮಿಯ ಸುತ್ತ ನಾನಾ ತರಹದ ಜನರ ಮಧ್ಯೆ ನಾನಾ ತರಹದ ಘಟನೆಗಳು ಸಂಭವಿಸುವ ಕಥೆಯೇ ಆಡುಕಳ.
ಆಧುನಿಕತೆಯ ಸ್ಪರ್ಶವಿಲ್ಲದ ಫಲವತ್ತಾದ ಭೂಮಿ ಆಡುಕಳ. ಅದರೊಳಗೆ ಪುಟ್ಟ ಸಂಸಾರ ಸಾಗಿಸುತ್ತಿದ್ದ ಅಮಾಯಕ(?) ದಶರಥನ ಬಾಳಲ್ಲಿ ಉಂಟಾದ ಅನಿರೀಕ್ಷಿತ ಸನ್ನಿವೇಶಗಳಿಂದ ಆಡುಕಳ ಮತ್ತು ದಶರಥನ ಜಗತ್ತೆ ಬದಲಾಗುತ್ತದೆ. ಆ ಬದಲಾದ ಜಗತ್ತಿನೊಳಗೆ ಓದುಗನು ಒಳಗೊಳ್ಳುತ್ತಾ ಸಾಗುತ್ತಾನೆ ಕೂಡ.
ಪಕ್ಕ ವ್ಯಾಪಾರಿ ಗಂಗಣ್ಣ, ಸದ್ದುಣಿಯಾದ ಮದ್ಗುಣಿ ಡಾಕ್ಟರ್, ಆಸ್ತಿಯ ಆಮಿಷದಲ್ಲಿ ಶಾಮೀಲಾಗಿರುವ ಸೂರಣ್ಣ ಮತ್ತು ಹೆಂಡತಿ, ಕನ್ಯೆಯರ ಹುಡುಕುವ ಪ್ರಯತ್ನದಲ್ಲಿರುವ ಅವನ ಕುಲಪುತ್ರರು, ಹುಂಬ ಹುಮಾಟಿ, ಕಾಲಕಾಲಕ್ಕೆ ಮಾಯವಾಗುವ ಬಕಾಲ, ಅಂಕೆಯೊಳಗಿರುವ ಅಥವಾ ಅಂಕೆಯಲ್ಲಿರಿಸಿಕೊಂಡಿರುವ ಕಾಮಾಕ್ಷಿ.. ಹೀಗೆ ಹಲವು ಪಾತ್ರಗಳ ಸಂಯೋಜನೆ ಅನನ್ಯವಾದದು.
ಇಡಿ ಕತೆಯ ಜೀವಾಳವೆಂದರೆ ಪಾತ್ರಗಳನ್ನು, ಸನ್ನಿವೇಶಗಳನ್ನು, ಸ್ಥಳಗಳನ್ನು ಕಟ್ಟಿಕೊಟ್ಟಿರುವ ರೀತಿ ಮತ್ತು ಬಳಸಿರುವ ಭಾಷೆ.
ಜೇನು ಬಿಡಿಸುವ ಸಾಹಸ, ಆಲೆ ಮನೆಯ ಚಿತ್ರಣ, ಮದುವೆಯ ಸಂಭ್ರಮ, ಕಾಮಾಕ್ಷಿಯೊಳಗೆ ಆಹ್ವಾನೆಯಾಗುವ ದೈವ, ಗಣಪತಿ ಹಬ್ಬ, ಡಾಕ್ಟರ್ ರೋಗಿಯನ್ನು ಪರೀಕ್ಷಿಸುವ ರೀತಿ, ಇವೆಲ್ಲದರ ಚಿತ್ರಣ ಸೊಗಸಾಗಿದೆ.
ಸ್ವರ್ಗದ ತೊಟ್ಟಿಲಾಗಿದ್ದ ಆಡುಕಳ, ಮನುಷ್ಯನ ದುರಾಸೆಯಿಂದ ನರಕದ ಮಡುವಾಗುವುದರೊಂದಿಗೆ ಮುಕ್ತಾಯವಾಗುತ್ತದೆ.
ಕೊನೆಯಲ್ಲಿ ಅವಸರದಿಂದ ಮುಕ್ತಾಯವಾಯಿತು ಎಂಬುದೊಂದು ನನ್ನ ಕೊಸರು ಅಷ್ಟೇ.
#ಪರಿಚಯ_೬_೨೦೨೬ ಕೃತಿ: ಆಡುಕಳ ಲೇಖಕರು: ಶ್ರೀಧರ ಬಳಗಾರ ಪ್ರಕಾಶಕರು: ಅಂಕಿತ ಪುಸ್ತಕ, ಬೆಂಗಳೂರು
ಅಪ್ಪಟ ದೇಸಿ ಸೊಗಡಿನ, ಪುಟ ಪುಟಗಳಲ್ಲಿ ಮಣ್ಣಿನ ಘಮಲನ್ನು ಹೊಂದಿರುವ ಕಾದಂಬರಿ. ಹಳ್ಳಿಯೊಂದರಲ್ಲಿ ನಡೆಯುವ ಸಾಮಾನ್ಯ ಜನರ ನೋವು ನಲಿವಿನ ಕತೆಗಳು, ಬದುಕಿನ ಏರುಪೇರುಗಳು, ಕಾಲಾನುಕ್ರಮದಲ್ಲಿ ಜರುಗಿಹೋಗುವ ಅನೇಕ ಘಟನೆಗಳನ್ನು ಜೀವಂತವಾಗಿ ತೆರೆದಿಡುವ ಕೃತಿ ಇದು. ಆಧುನಿಕತೆಯ ಅಧ್ಯಾಯಗಳು ತೆರೆದುಕೊಳ್ಳುವ ಮುಂಚೆ ನಡೆದುಹೋದ ಬದುಕಿನ ಕಾಲಘಟ್ಟಗಳನ್ನು ಚಿತ್ರಿಸುವ ಕಾದಂಬರಿಯು,ಅಂದಿನ ಕಾಲದ ಮನುಷ್ಯ ಸಹಜವಾದ ಗುಣಾವಗುಣಗಳನ್ನು ವಿಶ್ಲೇಷಿಸುತ್ತದೆ.
ಕಾದಂಬರಿಯಲ್ಲಿ ಬರುವ ಜೇನು ಸಂಗ್ರಹಣೆ, ಗಿಡಮೂಲಿಕೆಗಳ ಬಳಕೆ, ಆಲೆಮನೆಯಲ್ಲಿ ನಡೆಯುವ ವೃತ್ತಾಂತಗಳು, ಹಳ್ಳಿಯಲ್ಲಿ ನಡೆಯುತ್ತಿದ್ದ ಮದುವೆ ಮುಂಜಿಗಳು,ಹಬ್ಬಗಳ ಗೌಜುಗಳ ವಿವರಣೆಯು ದಟ್ಟವಾಗಿ ಮನಸ್ಸಿನ ಆಳದಲ್ಲಿ ಕೂತು ಬಿಡುವಂತಹ ವಿವರಣೆ. ಅವಿಭಕ್ತ ಕುಟುಂಬವೊಂದರಲ್ಲಿ ಜಮೀನು ಹಿಸ್ಸೆಯಾಗುತ್ತ ಸಾಗಿದಂತೆ ಸಂಕುಚಿತವಾಗುವ ಮನಸ್ಸುಗಳು, ನೈತಿಕತೆಯ ತಳಹದಿಯಲ್ಲಿನ ದೇವರು ಎಂಬ ನಂಬಿಕೆಗಳು ವ್ಯಾಪಾರದ ವಸ್ತುವಾಗಿ ಮಾರ್ಪಡುವುದು,ಯಾರ ಅಂಕೆಗೆ ಸಿಗದೇ ನಡೆಯುವ ಹಲವು ನಿಗೂಢ ಘಟನೆಗಳು ಕಾದಂಬರಿಯ ಒಟ್ಟಂದವನ್ನು ಹೆಚ್ಚಿಸಿವೆ.
ಬರವಣಿಗೆಯ ಒಂದೆರಡು ಝಲಕ್ ನೋಡಿ
“ಕಳ್ಳರಿಂದ ಮುಖಭಂಗಕ್ಕೆ ಒಳಗಾದ ಪ್ರಸಂಗದ ವಿವರ ಕೇಳುವುದು ಅನಾಗರಿಕವೆನಿಸಿತ್ತು. ಮಾನ-ಮರ್ಯದೆಯ ಸೂಕ್ಷ್ಮ ವಿಷಯವಾದ್ದರಿಂದ ಮಾತಿಗೆ ಸಿಗದ ಪದಗಳೆ ಲಜ್ಜೆಯಿಂದ ಮುದುಡಿ ಶಬ್ದಸೂತಕವೊಂದು ತಾನೇ ತಾನಾಗಿ ಸೃಷ್ಟಿಯಾಗಿತ್ತು. ಈ ಅಕ್ಷರ ಅಸ್ಪೃಶ್ಯತನವೇ ರಕ್ಷಣಾ ಕವಚವಾಗಿ ದಶರಥ ಆಮೆಯಂತೆ ಹೊದಿಕೆಯೊಳಗೆ ಸೇರಿಕೊಂಡು ಹೊರಲೋಕವನ್ನು ರೆಪ್ಪೆಯಿಂದ ಮುಚ್ಚಿದ”.
“ಎಂದಿನಂತೆ ದಶರಥ ಆಕಾಶದಲ್ಲಿ ನಕ್ಷತ್ರಗಳು ಗೋಚರಿಸುವ ಮುಸ್ಸಂಜೆಯ ಹೊತ್ತಿಗೆ ನಸುಗೆಂಪು ಬೆಳಕಿನಲ್ಲಿ ಕೊಟ್ಟಿಗೆ ಚಾಕರಿ ಮುಗಿಸಿದ. ತನಗೆ ಪ್ರಿಯವಾದ ರೀತಿಯಲ್ಲಿ ಅಕ್ಕಿಯನ್ನು ಒರಳಲ್ಲಿ ನುಣ್ಣಗೆ ಬೀಸಿದ. ಮಣ್ಣಿನೊಲೆಗೆ ಬೆಂಕಿಯಿಟ್ಟು ಕಾವಿನ ಮೇಲೆ ಬಂಡಿ ಇಟ್ಟು, ಉಂಡೆ ಕಟ್ಟಿದ ಹಸಿ ಹಿಟ್ಟನ್ನು ಉರುಟು ಕಲ್ಲಿನ ಮಣೆಯ ಮೇಲಿಟ್ಟು ಅಂಗೈಯಲ್ಲಿ ತಟ್ಟಿ, ಅರಳಿಸಿ, ಕಾದ ಬಂಡಿಯಲ್ಲಿ ಬೇಯಿಸಿ, ಮಿನುಗುವ ಕೆಂಡದ ಮ��ಲಿಟ್ಟು ಉಬ್ಬಿಸಿ, ತೆಂಗಿನ ಕಾಯಿ ಚಟ್ಲಿ ಜತೆಗೆ ತಿಂದು ಊಟ ಮುಗಿಸಿದ. ಮನೆಯ ಎದುರಿನ ಗದ್ದೆಯ ಬಯಲಲ್ಲಿ ಮಂಜು ಮಬ್ಬಿನ ಬೆಳದಿಂಗಳು ಸ್ವಪ್ನದಂತೆ ಸುರಿಯುತ್ತಿತ್ತು. ಗದ್ದೆಯ ತುಂಬ ನೆರಳಿನ ತೋಟವಿತ್ತು. ಚಿಕ್ಕದಾಗುತ್ತ ಪೂರ್ವ ದಿಗಂತದಿಂದ ಮೇಲಕ್ಕೇರುತ್ತಿರುವ ಚಂದ್ರ ಹಸುರು ಬೆಟ್ಟದ ಸಾಲಿನಿಂದ ಮೇಲಕ್ಕೆ ಸಾಗಿದ್ದ. ಹುಮಾಟಿಯ ಬಿಡಾರದಲ್ಲಿ ಎಂದಿನಂತೆ ದೀಪದ ಬೆಳಕು ಕಾಣಲಿಲ್ಲ. ಮಾತಿನ ಸದ್ದಿರದ ನಿಶ್ಯಬ್ದ ಕವಿದಿತ್ತು. ಕಾಡಿನತ್ತ ನಿಶಾಚರ ಕೀಟಗಳು ಚೀರುತ್ತಿದ್ದವು. ಮಿಂಚುಹುಳಗಳು ಅಲ್ಲೊಂದು ಇಲ್ಲೊಂದು ಮಿನುಗುತ್ತಿದ್ದವು. ಈಶಾನ್ಯ ಮೂಲೆಯ ದೊಡ್ಡ ಮರದ ಕಡೆ ಗೂಬೆಯೊಂದು ಆಗಾಗ ಹೂಂಕಾರ ಹಾಕುತ್ತಿತ್ತು. ರಾತ್ರಿ ದಟ್ಟವಾಗುತ್ತ ತಾರಾ ಮಂಡಲ ಚಲಿಸುತ್ತ ಹಳ್ಳದ ನೀರಿನ ಸದ್ದು ದೊಡ್ಡದಾಗುತ್ತ ಹಳ್ಳದ ದಂಡೆಯ ಜೊಂಡು ಹುಲ್ಲಿನ ಅಡಿಯ ಬಿಲದಲ್ಲಿ ಅವಿತ ಏಡಿಗಳು ಸಿಳ್ಳ ಹಾಕುತ್ತ ಇರುಳು ವಿಸ್ತಾರವಾಯಿತು. ಸಾವಿತ್ರಿಯ ನೆನಪಾಗಿ ದಶರಥ ಖಿನ್ನನಾದ. ನೆರಳಿನ ರಂಗೋಲಿಯ ಅಂಗಳದಲ್ಲಿ ದಶರಥ ಓಡಾಡಿದ”
ಮೊದಲ ಬಾರಿ 'ಆಡುಕಳ' ಎಂಬ ಹೆಸರು ಕೇಳಿದಾಗ ಇದೊಂದು ಕನ್ನಡ ಪದವೇ ಏನಿದರ ಅರ್ಥ ಎಂದು ಯೋಚಿಸಿದ್ದೆ. ಪುಸ್ತಕವನ್ನು ಓದಲು ಆರಂಭಿಸಿದ ಮೇಲೆ ತಿಳಿದದ್ದು ಇದೊಂದು ಸ್ಥಳದ ಹೆಸರೆಂದು.
ನಾನು ಚಿಕ್ಕಂದಿನಲ್ಲಿ ಕಾಣುತ್ತಲೇ ಬೆಳೆದ ಚಿಕ್ಕಮಗಳೂರು ಜಿಲ್ಲೆಯ ನನ್ನ ಹಳ್ಳಿ ಪಟ್ಟಣಗಳಿಗಿಂತ ಹೆಚ್ಚೇನೂ ಬೇರೆ ಎನಿಸದ ಯಲ್ಲಾಪುರ ಪೇಟೆ, ಮಣ್ಮನೆ, ಬಿದ್ರಳ್ಳಿ, ಆಡುಕಳಗಳು ಮತ್ತು ಅಲ್ಲಿನ ಬದುಕಿನ ಕ್ರಮ ಕಾದಂಬರಿಯಲ್ಲಿ ಮೊದಲಿಗೆ ನನ್ನನ್ನು ಸೆಳೆದ ಅಂಶ. ಕತೆಯ ಆರಂಭದಲ್ಲಿ ಮತ್ತು ಉದ್ದಕ್ಕೂ ಅಂತರ್ಗಾಮಿಯಾಗಿ ಕಾಣಿಸಿಕೊಳ್ಳುವುದು ಆಡುಕಳದ ಭೂಮಿಯ ಒಡೆತನಕ್ಕೆ ಸಂಬಂಧಿಸಿದಂತೆ ನಡೆಯುವ ದಾಯಾದಿ ಕಲಹ. ಹಳ್ಳಿಯ ಅವಿಭಕ್ತ ಕುಟುಂಬಗಳ ಮೂಲಭೂತ ಹಿನ್ನೆಲೆಯಿಂದ ಬಂದ ಓದುಗರಿಗೆ ಈ ಕಲಹಗಳು ಮನುಷ್ಯ ಸಂಬಂಧಗಳನ್ನು ಹಾಳುಗೆಡವುವ ಬಗೆ, ಅವರ ಆಳದ ವಿವೇಕ, ಸದ್ಭಾವನೆಗಳು ನಾಶವಾಗುವ ಬಗೆ, ಇವುಗಳ ಅನುಭವ ಇದ್ದೇ ಇರುತ್ತದೆ. ಕಾದಂಬರಿಯ ಮುಖ್ಯ ಪಾತ್ರವಾದ ದಶರಥನ ಕುಟುಂಬವನ್ನು ಹಿನ್ನೆಲೆಯಾಗಿಸಿ, ಆಸ್ತಿಗಾಗಿ ಆ ಕುಟುಂಬದಲ್ಲಿ ನಡೆಯುವ ಸೂಕ್ಷ್ಮ ಸಂಚುಗಾರಿಕೆ, ಕುಟಿಲೋಪಾಯಗಳ ಚಿತ್ರಣವಿದೆ.
ದಾಯಾದಿ ಕಲಹ ಕೃತಿಯ ಒಂದು ಆಯಾಮವಾದರೆ, ಸಮುದಾಯವೊಂದರ ಜೀವನ ಕ್ರಮ, ಸಾಂಸ್ಕೃತಿಕ ಆಚರಣೆಯ ಚಿತ್ರಣವೂ ಪರಿಣಾಮಕಾರಿಯಾಗಿದೆ. ಖಾನಾವಳಿಯ ಗಂಗಣ್ಣ, ಮದ್ಗುಣಿ ಡಾಕ್ಟರು, ಜೇನು ಕೀಳುವ ಬಕಾಲ, ಮೈಮೇಲೆ ದೇವರು ಬರುವ ಕಾಮಾಕ್ಷಿ, ಇನ್ನು ಮೊದಲಾದ ಪಾತ್ರಗಳೂ ಉತ್ತಮವಾಗಿ ಮೂಡಿಬಂದಿವೆ.
'ಕಬ್ಬಿನ ಹಬ್ಬ' ಅಧ್ಯಾಯದಲ್ಲಿನ ಆಲೆಮನೆಯ ಚಿತ್ರಣವಂತೂ ನಾನು ಬಾಲ್ಯದಲ್ಲಿ ನೋಡಿದ್ದ ನಮ್ಮ ಕುಟುಂಬದ ಆಲೆಮನೆಯನ್ನು ಯಥಾವತ್ತಾಗಿ ನೆನಪಿಸುವಂತಿತ್ತು. ಶ್ರೀಧರ ಬಳಗಾರರು ದಟ್ಟ ವಿವರಗಳ ಮೂಲಕ ಘಟನೆಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುವುದು ಕಾದಂಬರಿಯ ಒಂದು ವೈಶಿಷ್ಟ್ಯ. ಊರ ಜೀವನದಲ್ಲಿ ಕಾಲದ ಪ್ರಭಾವದಿಂದ ಕಾಣಿಸಿಕೊಳ್ಳುವ ಬದಲಾವಣೆಗಳನ್ನು ಅವರು ವಿವರಿಸುವ ಸ್ವಾರಸ್ಯಕರ ಶೈಲಿಯ ಒಂದು ಉದಾಹರಣೆ ದಶರಥ ಭತ್ತದ ಬೇಸಾಯ ಬಿಟ್ಟು ಅಡಿಕೆ ತೋಟ ಹಾಕದಿರಲು ನಿರ್ಧರಿಸುವ ಸಂದರ್ಭ- "ಕಡಿಮೆ ಕೆಲಸ, ಲಾಭ ಹೆಚ್ಚು ಎಂದೆನಿಸಿದರೂ ಭತ್ತದ ಬೇಸಾಯದಂತೆ ಋತು ವಿಲಾಸವನ್ನಾಗಿ ಹಬ್ಬದ ಸಂಭ್ರಮಾಚಾರಣೆಯಾಗಿ ಆಚರಿಸಲು ಸಾಧ್ಯವಿಲ್ಲವೆನಿಸಿತು. ..ಕೃಷಿ ಗದ್ದೆಯಲ್ಲಿ ಅಡಿಕೆ ತೋಟ ಹಾಕಿದ ನಂತರ ಜೀವನ ಸಂಭ್ರಮವನ್ನು ಕಳೆದುಕೊಂಡಿದ್ದನ್ನು ಅವನು ನೋಡಿದ್ದಾನೆ. ಪಂಜಿ ಸುತ್ತುತ್ತಿದ್ದವರು ಪ್ಯಾಂಟ್ ಧರಿಸಿ, ನೇಗಿಲು ಹಿಡಿಯುವ ಕೈಗಳು ಬೈಕ್ ನಡೆಸುತ್ತ ಪೇಟೆಗೆ ಹೋಗದೆ ಇರಲು ಸಾಧ್ಯವಿಲ್ಲ.." (ಪು 23-24)
ಸಾಹಿತ್ಯ ಪ್ರತಿನಿಧಿಸುವುದು ಯಾವುದೋ ಒಂದು ವಿಚಾರಧಾರೆಯನ್ನೋ, ಚಾರಿತ್ರಿಕ ವಿವರಗಳನ್ನೋ, ಅಥವಾ ನೀತಿ ವಿಚಾರಗಳನ್ನೋ ಅಲ್ಲ. ಅವೆಲ್ಲವೂ ಇಲ್ಲಿ ಮಿಳಿತಗೊಂಡಿರಬಹುದಾದರೂ ಸಾಹಿತ್ಯ ಒಳಗೊಳ್ಳುವ ಸತ್ಯಗಳು ನಮಗೆ ದಕ್ಕಬೇಕಾದರೆ ಅದನ್ನು ಪಾತ್ರಗಳ ಅನುಭವಗಳ ನೆಲೆಯಲ್ಲಿ ಶೋಧಿಸಬೇಕಾಗುತ್ತದೆ.
ಎಲ್ಲ ಶ್ರೇಷ್ಟ ಪುಸ್ತಕಗಳೂ ಹಾಗೇ. ಅವು ನಮ್ಮೊಂದಿಗೆ ಒಂದು ಬಗೆಯ ಸಾವಯವ ಸಂಬಂಧವನ್ನು ಹೊಂದಿರುತ್ತವೆ. ಕೃತಿಯ ಮೂಲಕ ಅದರ ಲೇಖಕರ ವಿಚಾರ, ಭಾವನೆ, ಕಾಳಜಿಗಳು ನಮ್ಮ ಅರಿವಿಗೆ ಬರುತ್ತವೆ. ಹಾಗೆಯೇ ಕೃತಿಯನ್ನು ಓದುವಾಗ ಅದರೊಡನೆ ನಾವು ಅಂತರಂಗದಲ್ಲಿ ನಡೆಸುವ ಸಂವಾದದಲ್ಲಿ ನಮ್ಮ ವಿಚಾರ, ಭಾವನೆ, ಕಾಳಜಿಗಳು ಸ್ಪಷ್ಟಗೊಳ್ಳುತ್ತ ಹೋಗುತ್ತವೆ.