ಮರು ಓದಿಗೆ ಒಂದು ಟಿಪ್ಪಣಿ
ಕರ್ವಾಲೋ ಓದುವುದು ಎಂದರೆ ನನ್ನ ಬಾಲ್ಯಕ್ಕೆ ಮರುಳುವ ಹೆದ್ದಾರಿಯೇ ಸರಿ. ಇದು ನಾನು ಓದಿದ ಮೊದಲ ಕನ್ನಡ ಪುಸ್ತಕ. ಅಚ್ಚರಿಯ ನನ್ನ ಕಣ್ಣುಗಳನ್ನು ಪ್ರಕಾಶಿಸಿ ಸಾಹಿತ್ಯಲೋಕದ ಒಳಗೆ ಮಾಯಾವಿಯಂತೆ ಸೆಳೆದು ಎಳೆದುಕೊಂಡ ಹೊತ್ತಿಗೆಯಿದು. ಮತ್ತೆ ಮತ್ತೆ ಓದುವುದು ಆ ಚಮತ್ಕಾರದ ಕ್ಷಣದ ಪುನರ್ಮಿಲನದ ಅನುಭವಕ್ಕೆ.
ಈ ಕೃತಿ ನೂರು ಮುದ್ರಣಗಳ ಮೈಲುಗಲ್ಲಿನ ಸನಿಹದಲ್ಲಿದೆ, ಇಷ್ಟು ಓದುಗರನ್ನು ಆಕರ್ಷಿಸಲು ಕಾರಣವೇನಿರಬಹುದು ಎಂಬುದನ್ನು ಹುಡುಕುತ್ತ ಹೊರಟರೆ ಅನೇಕ ಕಾರಣಗಳು ಸಿಗಬಹುದು. ಆದರೆ ನನ್ನ ಮಟ್ಟಿಗೆ ಬಹು ಮುಖ್ಯ ಕಾರಣ ಕಗ್ಗಲ್ಲಿನಂತ ಜೀವ ವಿಕಾಸದ ವಿಷಯದ ಮೇಲಿನ ಕಥೆಯನ್ನು ಸಾಮನ್ಯರ ಮೂಲಕ ಹೇಳಿಸಿದ್ದು. ಓದುಗರು ಕನೆಕ್ಟ್ ಆಗಿದ್ದು ಇಲ್ಲಿಯೇ ಎಂಬುದು. ಹಾರುವ ಓತಿ, ಜೇನು ನೊಣ, ಮಿಂಚು ಹುಳು, ವಿಕಾಸ ಇವೆಲ್ಲವೂ ವೈಜ್ಞಾನಿಕವಾಗಿ ಹೇಳುತ್ತಾ ಹೋದರೆ ಕೆಟ್ಟ ಬೋರು ಎನಿಸಿ ಪುಸ್ತಕ ಮಡಚಿಟ್ಟು ಓಡಿಯೇ ಹೋಗುತ್ತೇವೆ, ತೇಜಸ್ವಿರವರು ಸುಲಭ ಭಾಷೆಯಲ್ಲಿ ಹುಲು ಮಾನವರಿಗೂ ಅರ್ಥವಾಗುವ ರೀತಿಯಲ್ಲಿ ಹೇಳಿರುವ ಇಲ್ಲಿನ ತಂತ್ರ ಮತ್ತೆ ಮತ್ತೆ ಓದುವಂತೆ ಮಾಡುತ್ತದೆ.
ಇಲ್ಲಿನ ಪಾತ್ರವರ್ಗ ಮಜವಾಗಿವೆ, ಮಂದಣ್ಣ ಸಾರ್ವಕಾಲಿಕ ಉತ್ತಮ ಪಾತ್ರಗಳಲ್ಲಿ ಒಂದು. ಆ ಪಾತ್ರ ಸಿಲುಕುವ ವಿವಿಧ ಸಂದರ್ಭಗಳೇ ಕಾದಂಬರಿಯ ಜೀವಂತಿಕೆ, ಅವನೇ ಈ ಕಾದಂಬರಿಯ ಸಾರಥಿ. ಊರೂರೇ ಅವನನ್ನು ಅಪ್ರಯೋಜಕ ಅಂದುಕೊಳ್ಳುತ್ತಿದ್ದರೆ ಕರ್ವಾಲೋ ಅವನನ್ನು ಅವತಾರ ಪುರುಷನಂತೆ ಕಾಣುತ್ತಾರೆ, ಅವನ ಅವಲೋಕನ ಕೌಶಲ್ಯವನ್ನು ಗುರುತಿಸಿರುತ್ತಾರೆ. ಅವನ ಬಗ್ಗೆ ಕರ್ವಾಲೋ ಹೇಳುವ ಈ ಮಾತನ್ನು ಗಮನಿಸಿ
"ಇಲ್ಲ ಇಲ್ಲ ಈ ಒಂದು ವಿಷಯದಲ್ಲಿ ಮಂದಣ್ಣನ್ನ ಮೀರಿಸುವವರು ಯಾರೂ ಇಲ್ಲ. ಅಷ್ಟೊಂದು ಚೆನ್ನಾಗಿ ಗ್ರಹಿಸ್ತಾನೆ. ಅವನೊಬ್ಬ ಹುಟ್ಟಾ ನ್ಯಾಚುರಲಿಸ್ಟ್. ಹೆಚ್ಚು ಕಡಿಮೆ ಈವರೆಗೂ ಅವನು ಹೇಳಿರೋದು ಒಂದೊಂದು ಕೂಡ ಅದರ ವಿವರಗಳಲ್ಲಿ ಸಹ ಸುಳ್ಳಾಗಿಲ್ಲ, ಅಷ್ಟೊಂದು ಸೂಕ್ಷ್ಮವಾಗಿ ಗ್ರಹಿಸ್ತಾನೆ. ಅದ್ಭುತ ಪ್ರಕೃತಿ ಶಾಸ್ತ್ರಜ್ಞ ಅವನು. ಅಂಥೋನು ನನ್ನ ಹತ್ತಿರ ಬಂದು ಪ್ಯೂನ್ ಕೆಲಸ ಕೊಡೀoದರೆ ನನಗೆ ಸಿಟ್ಟು ಬರೋದಿಲ್ಲವೇ ರಾಸ್ಕಲ್." ಇದು ಮಂದಣ್ಣನ ಒಟ್ಟು ವ್ಯಕ್ತಿತ್ವವನ್ನು ಕಟ್ಟಿ ಕೊಡುತ್ತದೆ, ತನ್ನ ಬಳಿ ಇರುವ ಅಭೂತಪೂರ್ವ ಪ್ರತಿಭೆ ಸ್ವತಃ ಅವನಿಗೆ ತಿಳಿಯದೇ ಇರುವುದು, ಅವನ ಜೀವನದ ದುರಂತ
ಕರ್ವಾಲೋರು ಎಲ್ಲವನ್ನು ಭಿನ್ನ ನೋಟದಿಂದ ಕಾಣುವುದು ಓದುಗರನ್ನು ಕೌತುಕರನ್ನಾಗಿ ಬೆರಗು ಕಣ್ಣಿನಿಂದ ಓದಿಸಿಕೊಂಡು ಹೋಗುತ್ತದೆ, ಕರ್ವಾಲೋ ಪಾತ್ರವನ್ನು ಓದುವ ಪ್ರತಿಯೊಬ್ಬ ಓದುಗನು ಇವರನೊಮ್ಮೆ ನೋಡಬೇಕಲ್ಲ ಅನಿಸದೇ ಇರಲಾರದು, ಅವರ ಪ್ರಬುದ್ಧತೆ, ಜೀವ ವಿಕಾಸದ ಮೇಲಿನ ಅವರ ಸಂಭಾಷಣೆ, ಕೀಟದ, ಓತಿಯ ವಿವರಣೆ ಇವೆಲ್ಲವೂ ಅವರನ್ನು ಪ್ರಾಜ್ಞರನ್ನಾಗಿ ಚಿತ್ರಿಸುತ್ತದೆ. ಆದರೆ ಇವೆಲ್ಲಕ್ಕಿಂತ ಹೆಚ್ಚಾಗಿ ಆ ಪಾತ್ರದ ಆಕರ್ಷಣೆ ಇರುವುದು ಅವರ ಮೆದು ಹೃದಯದಿಂದ, ಮಂದಣ್ಣನ ಪರ ಕರ್ವಾಲೋರವರು ಕೋರ್ಟಿಗೆ ಹೋಗಿ ಸಾಕ್ಷಿ ಹೇಳಲು ಅವರ ಸಹೋದ್ಯೋಗಿ ಪ್ರಭಾಕರ ಕೇಳಲು ಹಿಂದೇಟು ಹಾಕಿದಾಗ ಕರ್ವಾಲೋರ ಪ್ರತಿಕ್ರಿಯೆ ಗಮನಿಸಿ "ನಾನ್ಸೆನ್ಸ್, ನನ್ನ ಹತ್ತಿರ ಶಿಷ್ಯವೃತ್ತಿ ಮಾಡಿ ನೀನು ತರಾಬೇತಾಗಿರೋದು ಇಷ್ಟೇನೋ ಪ್ರಭಾಕರ. ನಾನು ಪ್ರೊಫೆಸರು, ಮಂದಣ್ಣ ಹಳ್ಳಿ ಗಮಾರ, ಇವೆಲ್ಲ ಹೆಬ್ಬುಬ್ಬೆ ನೀನು ನಿಜಾಂತ ತಿಳಿದರೆ ಏನಪ್ಪಾ ಕಲಿತಂತೆ ಆಯ್ತು? ಇದರಲ್ಲೇ ನಿನ್ನ ಆಯಸ್ಸು ಮುಗಿದುಹೋಗುತ್ತೆ. ಸತ್ಯದ ಕಿಂಚಿತ್ ದರ್ಶನಾನೂ ಆಗೋಲ್ಲ ನಿನಗೆ. ಈ ಮಾಯೇನೆಲ್ಲ ಮೀರಬೇಕು ನಾವು. ಆಗಲೇ ನಿಮಗೆ ಬೇರೆ ಬೇರೆ ಜಗತ್ತು, ಪ್ರಪಂಚ ಕಾಣ್ತದೆ." ಅವರ ಸೂಕ್ಷ್ಮ, ಶಾಂತಚಿತ್ತ ಲಕ್ಷಣಗಳು ಸಾಧನೆ ಮಾಡಿದ ರಿಷಿಯಂತೆ ಕಾಣಿಸುತ್ತದೆ, ಇದಕ್ಕೆ ನಿರೂಪಕರ ಮಾತೊಂದನ್ನು ಇಲ್ಲಿ ಗಮನಿಸಿ - "ಕೊಂಚ ದೂರದಲ್ಲೇ ಧಗಧಗಿಸುತ್ತಿದ್ದ ಬೆಳಕು ಅವರ ಮುಖವನ್ನು ಕತ್ತಲ ಹಿನ್ನಲೆಯಲ್ಲಿ ದೇದೀಪ್ಯಮಾನ ಮಾಡಿತ್ತು. ಪುರಾತನ ಮಹರ್ಷಿಯೋರ್ವನ ಮುಖದಂತೆ ಅವರ ಗಡ್ಡ ಮೀಸೆ ವದನ ಕಾಣುತ್ತಿತ್ತು." ಈ ಪಾತ್ರ ಮಲೆನಾಡಿನ ಶ್ರೀಮಂತಿಕೆಯನ್ನು ಜಡವೆಂದು ಭಾವಿಸುವ ಅಲ್ಲಿನ ಜನರೊಳಗೆ ಚೇತನವೊಂದನ್ನು ಬಡಿದೆಬ್ಬಿಸುವ ರೂಪಕದಂತೆ ಧ್ವನಿಸುತ್ತದೆ
ನಿರೂಪಕರ ಪಾತ್ರ ತಮಾಷೆಯಿಂದ ಎಲ್ಲರನ್ನು ಬೈಯುತ್ತಲ್ಲೇ, ಕೊಂಚ ಅಸ್ವಾಭಾವಿಕರಂತೆ ವರ್ತಿಸುತ್ತಾ ಕೆಲವೊಮ್ಮೆ ತ್ರಾಸು ಕೊಡುವಂತೆ ಸಾಗುತ್ತದೆ. ಆದರೆ ಇವರು ಇತರ ಪಾತ್ರಗಳಿಗೆ ಕೊಡುವ ಪ್ರತ್ಯುತ್ತರಗಳು, ವಕ್ರ ವಿನೋದ ಮಾತುಗಳು ನಗೆಗಡಲ್ಲಿನಲ್ಲಿ ತೇಲಿಸುತ್ತದೆ. ಈ ಪಾತ್ರ ಮಂದಣ್ಣ, ಪ್ಯಾರ, ಕರಿಯಪ್ಪರಿಗೆ ಮಾತು ಮಾತಿಗೂ ಗಮಾರ, ಎಡ್ಡ, ಹಜಾಮ ಎಂದೆಲ್ಲ ಬೈಯುವುದು ಅತಿ ಅನಿಸುತ್ತದೆ..
ಇನ್ನೂ ಈ ಕಾದಂಬರಿಯ ಸಂಭಾಷಣೆಯಂತೂ ಅಮೋಘ, ಪ್ರಭಾಕರ ಎಂಬ ಪಾತ್ರ ಕ್ಯಾಮೆರಾ ಮತ್ತು ಇತರೆ ಸಲಕರಣೆ ಕತ್ತಿಗೆ ನೇತುಹಾಕಿಕೊಂಡಾಗ ಬರುವ ಸಂಭಾಷಣೆಯಲ್ಲಿ ಕಾಣುವ ಉಪಮೆ ನೋಡಿ "ಪ್ರಭಾಕರ ಕ್ಯಾಮರಾ, ಲೆನ್ಸ್ ಗಳು ಇತ್ಯಾದಿ ನೊರೆಂಟು ಕುತ್ತಿಗೆ ತೋಳು ಮುಂತಾದಕ್ಕೆಲ್ಲ ಕಾಯಿ ಬಿಟ್ಟ ತೆಂಗಿನ ಮರದಂತೆ ಜೋತುಕೊಂಡಿದ್ದ". ಇನ್ನೊಮ್ಮೆ ಮಾತನಾಡುವಾಗ ವಿಷಯ ದಾರಿ ತಪ್ಪಿ ಹೋದಾಗ ಕರ್ವಾಲೋರ ಮಾತನ್ನು ಕೇಳಿ "ನೋಡಿ ನೋಡಿ ಮುಖ್ಯ ವಿಷಯ ಬಿಟ್ಟು ಅಡ್ಡದಾರಿ ತುಳೀಬೇಡಿ. ಕೆಲಸಕ್ಕೆ ಬಾರದ ಹರಟೇಲೇ ಮುದುಕರಾಗ್ತೀವಿ. ಕಾಲ ಸರೀತಾ ಇದೆ." ಜೇನುಗಳ ಕಾಟದಿಂದ ನಿರೂಪಕರು ಜೇನನ್ನು ಒಂದು ಅನರ್ಹ ಕೀಟವೆಂದಾಗ ಕರ್ವಾಲೋ ಹೇಳುವ ಈ ಮಾತು ಸಮಂಜಸ ಎನಿಸುತ್ತದೆ "ನೋ ನೋ ನೀವು ತಪ್ಪು ತಿಳಿದಿದ್ದೀರಿ, ನಂಬಿಕೆಗೆ ಅನರ್ಹವಾಗಿರೋ ಮೊದಲನೇ ಸ್ಪೀಷಿ ಎಂದರೆ ಹೋಮೋಸೆಪಿಯನ್. ಎರಡು ಕಾಲಿನ ಮಾನವ." ಮೌ ಮೌ ಜೇನು ನೊಣಕ್ಕೆಹೆದರಿ ಕರಿ ಕಂಬಳಿಯನ್ನು ಹೊದ್ದುಕೊಂಡು ಕೂತಿದ್ದ ನಿರೂಪಕರಿಗೆ ಮಂದಣ್ಣ ಹೇಳುವ ಈ ಮಾತು ಗಮನಿಸಿ ಎಷ್ಟು ಮಜವಾಗಿದೆ "ಏನ್ ಸಾರ್, ಕಂಬ್ಳಿ ಹೊದ್ದುಕೊಂಡು? ಕರಿಯಪ್ಪ ನೋಡಿದ್ರೆ ಕರಡೀ ಅಂತ ಏರಿಸೇಬಿಡ್ತಾನೆ." ಹೀಗೆ ಕಚಗುಳಿ ಇಡುತ್ತಾ ನಮ್ಮನ್ನು ಎಚ್ಚರಿಸುತ್ತ, ಜೀವ ವಿಕಾಸದ ಬಗ್ಗೆ ತಿಳಿಸುತ್ತಾ ಸಾಗುವ ಮಾತುಗಳು ಸುಂದರ ರಸಾನುಭವವನ್ನು ಉಣಬಡಿಸುತ್ತದೆ.
ಈ ಕಾದಂಬರಿಯನ್ನು ಓದಿ ಅಥವಾ ಇದರ ಬಗ್ಗೆ ತಿಳಿದುಕೊಂಡು ಇಲ್ಲಿ ಬರುವ ಹಾರುವ ಓತಿಯನ್ನು ಕಾಡಿನಿಂದ ಹುಡುಕಿ ಇಡಿದು ತೇಜಸ್ವಿರ ಬಳಿ ತರುತ್ತಿದ್ದರಂತೆ. ಈಗಲೂ ನಾವು ಹಾರುವ ಓತಿಯನ್ನು ಮಲೆನಾಡಿನಲ್ಲಿ ಕಾಣಬಹುದು, ಇಷ್ಟೇ ಏಕೆ ನನ್ನ ಸ್ನಾತಕ ಪದವಿಯ ಸಮಯದಲ್ಲಿ ಈ ಓತಿಯನ್ನು ನಮ್ಮ ಕೀಟಶಾಸ್ತ್ರದ ಲ್ಯಾಬಿನಲ್ಲಿ ದೊಡ್ಡ ವಯಲ್ಲಿನಲ್ಲಿ ಇಟ್ಟಿದನ್ನು ನೋಡಿದೀನಿ ಅದರ ಮೇಲೆ ಕರ್ವಾಲೋ ಕಾದಂಬರಿಯಲ್ಲಿ ಬರುವ ಹಾರುವ ಓತಿಯಂದೇ ಹೆಸರಿಸಿದ್ದರು. ಇವೆಲ್ಲ ಕಂಡಾಗ ಅನಿಸಿದ್ದು ಹಾರುವ ಓತಿ ಇಲ್ಲಿ ಒಂದು ರೂಪಕವಷ್ಟೇ, ಮಾನವ ಏನೇ ಆವಿಷ್ಕಾರ ಮಾಡಿದ್ದರೂ ಏನೇ ಸಾಧಿಸಿದ್ದರೂ ಅವನ ಗಣನೆಯ ಆಚೆಗೆ, ಅವನು ತಿಳಿದುಕೊಳ್ಳಬೇಕಾದುದ್ದು ಆಗಸದಷ್ಟು ವಿಶಾಲವಾಗಿದೆ ಎಂಬುದು, ತಿಳಿದುಕೊಂಡಿದ್ದರೂ ಇದೇ ಅಂತಿಮ ಸತ್ಯ ಎಂಬುದಕ್ಕೂ ಖಾತ್ರಿ ಇಲ್ಲ. ಇದಕ್ಕೆ ಸೂಚನೆಯಾಗಿ ಕಾದಂಬರಿಯಲ್ಲಿ ಕೊನೆಯ ಸಾಲು ಮನದಲ್ಲಿ ಉಳಿಯುತ್ತದೆ "ತಪ್ಪು ಸರಿ ಹೇಗೆ ಹೇಳ್ತೀರಿ. ನಮಗೆ ಈ ಕ್ಷಣ, ಇಲ್ಲಿ ಹೀಗನ್ನಿಸಿದೆ, ಜೀವ ವಿಕಾಸಕ್ಕೆ ಎಲ್ಲಿದೆ ಕೊನೆ."
ಈ ಕಾದಂಬರಿಯನ್ನು ಬಹಳಷ್ಟು ಓದುಗರು ತೇಜಸ್ವಿರ ಆತ್ಮಕತೆಯ ಭಾಗವಂತೆ ಓದಿ ಇಲ್ಲಿ ಬರುವ ಪಾತ್ರಗಳನ್ನು ಹುಡುಕುತ್ತ ಮೂಡಿಗೆರೆಗೆ ಹೋಗುವುದು ಕಂಡಿದ್ದೇವೆ, ಕೇಳಿದ್ದೇವೆ. ಇಲ್ಲಿ ಬರುವ ಕರಿಯಪ್ಪ ಎಂಬ ಪಾತ್ರವನ್ನು ಹೋಲುವ ನೈಜ ಹಿರಿಯರ ಸಂದರ್ಶನ ಮಾಡಿರುವ ತುಣುಕನ್ನು ನೋಡಿದ್ದೇನೆ. ಅಷ್ಟೇ ಏಕೆ, ರಾಜೇಶ್ವರಿ ತೇಜಸ್ವಿರವರ "ನನ್ನ ತೇಜಸ್ವಿ" ಪುಸ್ತಕದಲ್ಲಿ ಕುವೆಂಪುರವರು ಸೊಸೆಗೆ ತಮ್ಮ ಇಳಿವಯಸ್ಸಿನಲ್ಲಿ ಮುಗ್ದರಾಗಿ ಕರ್ವಾಲೋ ಅನ್ನುವವರು ಇದ್ದರೇ? ಎಂದು ಕೇಳುವುದನ್ನು ನಾವು ಓದಿದ್ದೇವೆ,
ಏನೇ ಆದರೂ ಇದೊಂದು ಸೃಜನಾತ್ಮಕ ಕೃತಿ, ಆದರೂ ನೈಜತೆಗೆ ಹತ್ತಿರವಾಗುವಂತೆ ಸುತ್ತಮುತ್ತಲಿನ ಜನರೇ ಪಾತ್ರಗಳನ್ನಾಗಿ ಮಾಡಿಕೊಂಡು ಬರೆಯುವಾಗ ಆ ಕೃತಿ ಓದುಗನಿಗೆ ಹತ್ತಿರವಾಗುತ್ತದೆ, ಹಾಗಾಗಿಯೇ ಇದು ತೇಜಸ್ವಿರವರ ಮುಖ್ಯ ಕೃತಿಯಾಗಿ ಓದುಗರ ಮನದಲ್ಲಿ ನಿಲ್ಲುತ್ತದೆ. ಈ ಕೃತಿಯೊಂದು ನಮ್ಮ ಭಾಷೆಯಲ್ಲಿದೆ ಎಂಬುದು ಕನ್ನಡಿಗರ ಹೆಮ್ಮೆಯ ವಿಷಯ, ಓದುವುದು, ಮತ್ತೆ ಮತ್ತೆ ಓದುವುದು ಆಸ್ವಾಧಿಸುವುದು ಓದುಗನ ಮಟ್ಟಿಗೆ ಚಂದದ ದುರಾಸೆಯಷ್ಟೇ