||• ಮಂದ್ರ •||
5/5
ನೀವು ಈ ಪುಸ್ತಕ ಓದುವ ಮುನ್ನ ಒಂದೆರಡು ಹಿಂದೂಸ್ತಾನಿ ಸಂಗೀತ ಕಛೇರಿಗಳನ್ನು ಆಲಿಸಿ. ಒಂದೆರಡು ನೃತ್ಯ ಪ್ರದರ್ಶನವನ್ನು ವೀಕ್ಷಿಸಿ. ಜಯದೇವ ಕವಿಯ ಅಷ್ಟ ಪದಿಗಳು ಸಿಕ್ಕಲ್ಲಿ ಆನಂದಿಸಿ. ಒಂದಷ್ಟು ಸ್ವರ ಜ್ಞಾನ, ಸಪ್ತ�� ಮುಂತಾದವುಗಳ ಬಗ್ಗೆ ಮಾಹಿತಿ ಕಲೆಹಾಕಿ. ಸಂಗೀತಗಾರ ಮತ್ತು ನೃತ್ಯಗಾರ ಮಿತ್ರರಿದ್ದರೇ ಕೂಲಂಕಷವಾಗಿ ಈ ಕುರಿತು ಮಾತನಾಡಿ ಮತ್ತಷ್ಟು ತಯಾರಿ ಮಾಡಿಕೊಳ್ಳಿ. ನಂತರ, ಮಂದ್ರ ಪುಸ್ತಕವನ್ನು ಓದಲು ಶುರುವಿಡಿ!!! ಬರೆಯುವ ಮುನ್ನ ಲೇಖಕನೊಬ್ಬ ತನ್ನ ಪುಸ್ತಕಕ್ಕಾಗಿ ಸಂಶೋಧನೆ ಮಾಡುವುದು ಸಹಜ ಮತ್ತು ಸಾಮಾನ್ಯ. ಅದೇ ರೀತ್ಯ ಪೂರ್ವ ತಯಾರಿಯನ್ನು ಓದುಗನು ಮಾಡಿಕೊಳ್ಳಬೇಕು ಎನಿಸುವಂತೆ ಮಾಡುವುದು ಮಂದ್ರ ಪುಸ್ತಕದ ಅಗಣಿತ ವಿಶೇಷತೆಗಳಲ್ಲೊಂದು.
ಎಸ್ ಎಲ್ ಭೈರಪ್ಪನವರ ಬೃಹತ್ ಕಾದಂಬರಿಗಳ ಬಗ್ಗೆ ಯಾವಾಗಲೂ ಒಂದು ವಿಚಿತ್ರ ಕುತೂಹಲ ಮೂಡುತ್ತಿತ್ತು. ತೀರಾತಿತೀರ ೭೦೦-೮೦೦ ಪುಟಗಳಷ್ಟು ಪಾತ್ರಗಳನ್ನು ಸಲಹಿಕೊಂಡು ಹೋಗುವುದರ ಬಗ್ಗೆಯೂ ಕೂಡಾ. ಪಾತ್ರಗಳು ಸನ್ನಿವೇಶಗಳೊಂದಿಗೆ ಹೇಗೆ ತಳುಕು ಹಾಕಿಕೊಳ್ಳುತ್ತವೆ, ಸನ್ನಿವೇಶಗಳು ಪಾತ್ರಗಳೊಂದಿಗೆ ಹೇಗೆ ಜೀವಿಸುತ್ತವೆ ಎಂಬ ಅನನ್ಯ ಕುತೂಹಲಗಳೊಂದಿಗೆ ಈ ಪುಸ್ತಕದ ಓದು ಶುರುವಾಯಿತು. ಓದು ಸಾಗಿದಂತೆ ಎಷ್ಟೊಂದು ಹಿಂದೂಸ್ತಾನಿ ರಾಗಗಳನ್ನು ಕೇಳಿದೆ, ಮಂದ್ರ ಅತಿಮಂದ್ರ ತಾರಕ ಷಡ್ಜ ಎಂಬ ಸಪ್ತಕಗಳನ್ನು ಅನುಭವಿಸಿದೆ. ನೃತ್ಯವನ್ನೂ ನೋಡಿದೆ! ಒಟ್ಟಾರೇ, ಮಂದ್ರವನ್ನು ಕೇವಲ ಪುಸ್ತಕವೆಂದರೇ ತುಸು ಕಡಿಮೆಯೇ. ಮಂದ್ರ ಪುಸ್ತಕ ರೂಪದ ದೃಶ್ಯ ಕಾವ್ಯ!!! ಮಂದ್ರದ ತೀವ್ರತೆ ಚಂಡಮಾರುತವಾಗಿ ವಾಯುವೇಗದೊಂದಿಗೆ ಓದುಗನಂತರಾಳಕ್ಕೆ ಇಳಿಯುತ್ತದೆ.
ಪುಸ್ತಕದ ಮೊದಲ ಪುಟದಲ್ಲಿ ಹೀಗೊಂದು ವಾಕ್ಯವಿದೆ.
...ಕಲೆಯನ್ನ ನೋಡಿದಾಗ ಸ್ವರ್ಗಪ್ರವೇಶ ಮಾಡಿದ ಹಾಗುಗುತ್ತೆ. ಕಲಾವಿದನ ಒಳಹೊಕ್ಕಾಗ ಬೇರೆಯೇ ಇರುತ್ತೆ. ಯಾಕೆ ಈ ಕಾಂಟ್ರಡಿಕ್ಷನ್?
ಈ ಸ್ಟೇಟ್‌ಮೆಂಟ್ ಎಷ್ಟೊಂದು ಕಲಾವಿದರ ವೈಯಕ್ತಿಕ ಬದುಕಿಗೆ ಅನ್ವಯಿಸುತ್ತೆ ಅಲ್ಲವಾ ಎಂದನಿಸಿತು. ಪುಸ್ತಕದ ಮುಂದೆಯೂ ಈ ಸಾಲುಗಳು ಬರುತ್ತವೆ. ಆ ಸನ್ನಿವೇಶದಲ್ಲಿ ಇನ್ನೂ ಗಾಢವಾಗಿ ತಲುಪುತ್ತವೆ.
ಮಂದ್ರದಲ್ಲಿ ಬರುವ ಮೂರು ಮುಖ್ಯ ಪಾತ್ರಗಳು ಪುಸ್ತಕದುದ್ದಕ್ಕೂ ಮಂದ್ರದಿಂದ ಷಡ್ಜಕ್ಕೆ, ಷಡ್ಜದಿಂದ ಮಂದ್ರಕ್ಕೆ, ಸಪ್ತಕಗಳಿಂದ ಸಪ್ತಕಗಳಿಗೆ, ಲಾಸ್ಯದಿಂದ ತಾಂಡವಕ್ಕೆ, ತಾಂಡವದಿಂದ ಲಾಸ್ಯಕ್ಕೆ, ಭಂಗಿಯಿಂದ ಭಂಗಿಗೆ, ಭಾವದಿಂದ ಭಾವಕ್ಕೆ ಬದಲಾಗುತ್ತಾ ಹೋಗುತ್ತವೆ, ಅಭಿವ್ಯಕ್ತಿಸುತ್ತವೆ. ಅಭಿನಯಿಸುತ್ತವೆ!! ಈ ಮೇಲೆ ಹೇಳಿದ ಹಾಗೇ ಮಂದ್ರ ಕೇವಲ ಪುಸ್ತಕವಲ್ಲ. ಮಂದ್ರ ಪುಸ್ತಕ ರೂಪದ ದೃಶ್ಯ ಕಾವ್ಯ. ನವರಸಗಳನ್ನು ಅನುಭವಿಸುವ ಅನುಭಾವಿಸುವ ವಿಶೇಷ ಪಾತ್ರಗಳಿವು. ಒಂದೆಡೆ ಓದುಗ ಅವರ ಸ್ವರಸಾಧನೆಗೆ ವಾಹ್ ಎಂದು ಉದ್ಗರಿಸುತ್ತಾನೆ. ಇನ್ನೊಂದೆಡೆ ಮತ್ತವರ ವೈಯಕ್ತಿಕ ಹಳವಂಡಗಳನ್ನು ಓದಿದಾಗ ಹೇವರಿಕೆ ಪಡುತ್ತಾನೆ. ಮತ್ತೆ, ಯಾಕೆ ಈ ಕಾಂಟ್ರಡಿಕ್ಷನ್?
ಮಂದ್ರ ಓದುವಾಗ ಸಾಕಷ್ಟು ಮೌಲ್ಯ ಸಂಘರ್ಷಗಳಾದವು. ಬಹುಮುಖ್ಯವಾದದ್ದು, ಅರ್ಪಣಾಭಾವದ ಕುರಿತು. ಶ್ರೀ ಪುರಂದರದಾಸರು "ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ" ಎಂದಿದ್ದಾರೆ. ಗುರುವಿಗೆ ಸಕಲವನ್ನೂ ಅರ್ಪಿಸದ ಹೊರತು ಸಾಧನೆ ಮಾಡುವುದು ಅಸಾಧ್ಯ ಎಂದುಕೊಂಡಿದ್ದೆ. ಆದರೆ "ಸಕಲ"ದ ವ್ಯಾಖ್ಯಾನ ಬದಲಾದದ್ದನ್ನು ಮಂದ್ರದಲ್ಲಿ ಕಾಣಬಹುದು. ಮುಕ್ತವಾಗಿ ಯೋಚಿಸುವಾಗ ಆ ಅರ್ಪಣೆ ತುಚ್ಛ ಭಾವವೋ ಅಥವಾ ಅರ್ಪಣೆಯ ಉಚ್ಛ ಭಾವವೋ ಎಂಬ ಕಲಮಲ ಓದುಗನಲ್ಲಿ ಭುಗಿಲೇಳುತ್ತದೆ.
ತೀರಾ ಆಡುಭಾಷೆಯಲ್ಲಿ ಹೇಳುವೆವೆಂದರೇ - "ಕಾಮ, ಕಾಸು, ಖ್ಯಾತಿ" ಮನುಷ್ಯ ಮಾತ್ರದವನನ್ನು ಯಾವ ಮಟ್ಟಿಗೆ ಎಳೆಯಬಲ್ಲದು ಎಂಬುದನ್ನು ಮಂದ್ರದಲ್ಲಿ ಕಾಣಬಹುದು. ಗುರು ಕಾಮಿಯಾಗಬಾರದು, ಕಲಾವಿದೆ ಖ್ಯಾತಿಯ ಆಶೆ ಪಡಬಾರದು ಹಾಗೂ ಇಬ್ಬರೂ ಧನದಾಹಿಗಳಾಗಬಾರದು ಎಂದು ಸಾಮಾನ್ಯರಾಗಿ ನಾವು ಹೇಳಬಹುದು. ಆದರೇ ಆ ಹಂತಕ್ಕೆ ತಲುಪಿದ ಮೇಲೆ ಇಂತಹ ಸಹಜ ಆಕರ್ಷಣೆಗಳು ಸಹಜ ಎಂದನಿಸಿತು. ಅದರ ನ್ಯಾಯಾನ್ಯಯ, ಸತ್ಯಸಂಧತೆ, ನೀತಿ-ನಿಷ್ಕರ್ಷೆಗಳು ಅವನಿಗೆ ಸಂಬಂಧ ಪಟ್ಟಿರುತ್ತವೆ ಎಂದೂ ಕೂಡ ಅನಿಸಿತು.
ಮಂದ್ರಕ್ಕೆ ಓದುಗ ಕೊಡಬಹುದಾದ ಮತ್ತೊಂದು ದೃಷ್ಟಿಕೋನ - ಪಶ್ಚಾತ್ತಾಪ ಮತ್ತು ಸಮರ್ಥನೆ. ಮನುಷ್ಯನೊಬ್ಬ ತಾನು ಮಾಡುವ, ಮನು ನೀತಿಯಾಧಾರದಲ್ಲಿ ಹೇಯ ಎನಿಸಬಲ್ಲ ಕೃತ್ಯಗಳಿಗೆ ಸಮರ್ಥನೆ ಕೊಟ್ಟುಕೊಂಡು, ತನ್ನನ್ನು ತಾನು ನಿರಪರಾಧಿ, ಮುಗ್ಧ ಎಂದು ಘೋಷಿಸಿಕೊಂಡುಬಿಟ್ಟರೇ ಆಗುವ ಅನಾಹುತಗಳನ್ನು ತಡೆಯಲಾಗುವುದಿಲ್ಲ. ಅದೇ ಕೃತ್ಯಗಳಿಂದ ಪಾಪಿಭಾವ ಕಾಡಿದರೇ ಪಾಪಗಳ ಸಂಖ್ಯೆಯಾದರೂ ಕಡಿಮೆಯಾಗುತ್ತಿತ್ತು. ಮೊದಲು ಸಮರ್ಥನೆ ನೀಡಿ ನಂತರ ಪಶ್ಚಾತ್ತಾಪದ ಹಾದಿ ತುಳಿದು ಕೊನೆಗೆ ಪಾರಮಾರ್ಥದೆಡೆಗೆ ಸಾಗುವ ಮನುಷ್ಯನದು ಅವತಾರವಲ್ಲ, ಅವಸಾನ ಎಂಬುದನ್ನು ಮಂದ್ರ ತಿಳಿಸುತ್ತದೆ. ಅಂದಹಾಗೇ ಇದು ಆಸ್ತಿಕ ನಾಸ್ತಿಕವಾದವಲ್ಲ. ಕರ್ಮದ ವಾದವಷ್ಟೇ!!!
ಪುಸ್ತಕದಲ್ಲಿ ಒಂದು ಚಕ್ರವಿದೆ. ಯಾವ ಹಂತದಲ್ಲೂ ದುಡುಕುವುದು ಸರಿಯಲ್ಲ ಎಂಬ ಸಂದೇಶವಿದೆ. ಪಾತ್ರಗಳ ಬಗ್ಗೆ ಎಷ್ಟು ಹೇವರಿಕೆಯುಂಟಾಗುತ್ತದೋ ಅಷ್ಟೇ ಅಸಹಾಯಕ ಭಾವವು ಉಂಟಾಗುತ್ತದೆ. ಒಂಟಿತನದ ಕೊರಗು ಕಾಡುತ್ತದೆ. ಕರ್ಮದ ಫಲವೆಂದು ಓದುಗ ಉಪಸಂಹರಿಸುತ್ತಾನೆ.
ಪಾತ್ರ ರಚನೆಯಲ್ಲಿ ಯಾವುದೇ ಪ್ರಶ್ನೆಯಿಲ್ಲ. ಭಾವ ರಚನೆಯೂ ಅಷ್ಟೇ. ಜಲಪಾತ ಕಾದಂಬರಿಯಲ್ಲಿ ಬರುವಂತೆ ಶೃಂಗಾರ ಮತ್ತು ಸಂಗೀತವು ಮಂದ್ರದಲ್ಲೂ ಕೂಡ ಮೇಳೈಸಿದೆ. ಹೃದಯಕ್ಕೆ ಹಿತವಾದ ಭಾವವನ್ನು ನೀಡುತ್ತದೆ. ಶೃಂಗಾರವನ್ನು ಎಲ್ಲಿಯೂ ಅಶ್ಲೀಲಗೊಳಿಸದೇ ಸಂಗೀತ ಮತ್ತು ನೃತ್ಯದೊಡನೆ ಬರೆದು ಆ ಭಾವವನ್ನೂ ಕೂಡ ಮಂದ್ರಕ್ಕಿಳಿಸುತ್ತದೆ. ಇನ್ನೂ ಸಾಕಷ್ಟಿದೆ!!!
ಭೈರಪ್ಪನವರ ಮೇರುಕೃತಿ ಮಂದ್ರ ಇನ್ನೂ ಹತ್ತು ಹಲವು ಆಯಾಮಗಳಲ್ಲಿ ಅರ್ಥವಾಗಬಲ್ಲದು. ಓದುಗ ಮುಕ್ತವಾಗಿ ವಾಸ್ತವವನ್ನು ಒಪ್ಪಿ ಓದುವ ಮನಸ್ಥಿತಿಯನ್ನು ಹೊಂದಬೇಕು ಅಷ್ಟೇ. ಸರಿಸುಮಾರು ಏಳುನೂರು ಪುಟಗಳ ಮಂದ್ರವನ್ನು ಮರೆಯದೇ ಓದಿ. ಸರಸ್ವತಿ ಸಮ್ಮಾನ ಪ್ರಶಸ್ತಿಯಿಂದಲ್ಲ, ಭೈರಪ್ಪನವರ ಸೀಮಾತೀತ ಕಲ್ಪನೆಗೆ, ಭೂಪಾಲಿಗೆ, ಭೈರವಕ್ಕೆ, ಕಲ್ಯಾಣಿಗೆ...!!!
ಧನ್ಯವಾದಗಳು
ಶುಭವಾಗಲಿ
ಅಭಿ...