ಗೊರೂರು ರಾಮಸ್ವಾಮಿ ಅಯ್ಯಂಗಾರ್(ಜುಲೈ ೪, ೧೯೦೪ - ಸೆಪ್ಟೆಂಬರ್ ೮, ೧೯೯೧) ತಮ್ಮ ಪ್ರಬಂಧ ಲೇಖನಗಳಿಂದ ಕನ್ನಡ ಸಾಹಿತ್ಯದಲ್ಲಿ ಛಾಪು ಮೂಡಿಸಿದವರು. ಸ್ವಾತಂತ್ರ್ಯ ಚಳುವಳಿ, ಮೈಸೂರಿನಲ್ಲಿ ಪ್ರಜಾ ಸರ್ಕಾರಕ್ಕಾಗಿ ಚಳುವಳಿ, ಕರ್ನಾಟಕ ಏಕೀಕರಣ ಚಳುವಳಿಗಳಲ್ಲಿ ಹೋರಾಡಿ ಹರಿಜನೋದ್ಧಾರ ಮತ್ತು ಗ್ರಾಮೊದ್ಧಾರಕ್ಕಾಗಿ ಶ್ರಮಿಸಿದ ಅವರೊಬ್ಬ ಅಪ್ರತಿಮ ಗಾಂಧಿವಾದಿ. ಗೊರೂರು ಗ್ರಾಮ, ಹೇಮಾವತಿ ನದಿ – ಈ ಎರಡೂ ಗೊರೂರರ ಸಾಹಿತ್ಯದಿಂದ ಅಮರವಾದವು. ‘ಹೇಮಾವತಿ’, ಆ ಸಾಹಿತ್ಯ ಸಮಸ್ತಕ್ಕೂ ಸ್ಪೂರ್ತಿ. ಹೀಗೆ ಒಂದು ಊರಿನೊಡನೆ, ನದಿಯೊಡನೆ ಅಭಿನ್ನತೆ ಸಾಧಿಸಿದ ಲೇಖಕರು ವಿರಳವೇ. ‘ಹಳ್ಳಿಯ ಚಿತ್ರಗಳು’, ‘ಗರುಡಗಂಬದ ದಾಸಯ್ಯ’, ‘ನಮ್ಮ ಊರಿನ ರಸಿಕರು’, ‘ಬೆಟ್ಟದ ಮನೆಯಲ್ಲಿ ಮತ್ತು ಇತರ ಪ್ರಬಂಧಗಳು’, ‘ಕಥೆಗಳು ಮತ್ತು ವಿನೋದ ಚಿತ್ರಗಳು’, ‘ಬೆಸ್ತರ ಕರಿಯ’, ‘ಹೇಮಾವತಿಯ ತೀರದಲ್ಲಿ ಮತ್ತು ಇತರ ಪ್ರಬಂಧಗಳು’ – ಈ ಸಂಕಲನಗಳಲ್ಲಿನ ಗೊರೂರರ ಪ್ರಬಂಧಗಳಲ್ಲಿ ಕಥಾಂಶ ದಟ್ಟವಾಗಿ ಸೇರಿಕೊಂಡಿವೆ. ಆದ್ದರಿಂದ ಗೊರೂರರ ಪ್ರಬಂಧಗಳು, ‘ಪ್ರಬಂಧ’ ಎಂಬ ಶಬ್ದದ ಸೀಮಿತ ಅರ್ಥಕ್ಕಿಂತ ಹೆಚ್ಚಿನ ವ್ಯಾಪ್ತಿಯುಳ್ಳದ್ದು ಎಂಬುದು ಗಮನಾರ್ಹ. ಗೊರೂರರ ಬರವಣಿಗೆ ಅಪರೂಪದ್ದು ಮತ್ತು ಅವರಿಗೇ ಅನುರೂಪವಾದದ್ದು. ಗೊರೂರರು ಸೆಪ್ಟೆಂಬರ್ 28, 1991ರಲ್ಲಿ ನಿಧನರಾದರು.