Jayanth Kaikini is an Indian poet, short stories author and a lyricist working in Kannada cinema. ಜಯಂತ ಗೌರೀಶ ಕಾಯ್ಕಿಣಿ(ಜನನ : ೨೪,ಜನವರಿ, ೧೯೫೫) ಕನ್ನಡದ ಸಮಕಾಲೀನ ಕಥೆಗಾರರಲ್ಲಿ ಪ್ರಮುಖರು. ಜಯಂತ್ ರ ಕತೆ-ಕಾವ್ಯಗಳಲ್ಲಿ ಸೂಕ್ಷ್ಮಸಂವೇದನೆ ಬಹುತೇಕ ಕಾಣಸಿಗುವ ವಸ್ತು.ಇಳಿಸಂಜೆಯ ಬಿಸಿಲು,ಬಿಸಿಲುಕೋಲು,ಪಾತರಗಿತ್ತಿ,ಬಣ್ಣ ಅವರ ಬರಹಗಳಲ್ಲಿ ಸಾಮಾನ್ಯವಾಗಿ ಪ್ರತಿಫಲಿಸುತ್ತಲೇ ಇರುತ್ತವೆ. ಮೆದುಮಾತಿನ,ಮೆಲುದನಿಯ ವ್ಯಕ್ತಿತ್ವ ಅವರದು.[೩] ಸಾಹಿತ್ಯ ಪ್ರಕಾರಗಳ ಹಲವು ವಿಭಾಗಗಳಲ್ಲಿ, ಕವಿಯಾಗಿ, ಈಟಿವಿ ಕನ್ನಡ ವಾಹಿನಿಯಲ್ಲಿ ಸಂದರ್ಶಕನಾಗಿ, ಸಿನೆಮಾ ಹಾಡುಗಳ ಸಾಹಿತಿ,ಸಂಭಾಷಣೆಗಾರನಾಗಿ, ಅಂಕಣಕಾರ ನಾಗಿ, ನಾಟಕಕಾರನಾಗಿ, ಕಥೆಗಾರನಾಗಿ, ಮತ್ತು ಕನ್ನಡಿಗರ (ಸಾಗರದಾಚೆಗೂ ನೆಲೆ ನಿಂತಿರುವ ಕನ್ನಡಿಗರ) ಅಚ್ಚುಮೆಚ್ಚಿನ ಲೇಖಕರಾಗಿದ್ದಾರೆ.
ಇದೊಂದು ಹದಿಮೂರು ಸಣ್ಣಕಥೆಗಳ ಸಂಕಲನ. ಕೆಲವು ಕಥೆಗಳು ಗೋಕರ್ಣದ ರಥಬೀದಿಯ ಸುತ್ತಮುತ್ತ ನಡೆದರೆ, ಮತ್ತೆ ಕೆಲವು ಮುಂಬೈ ನಗರಿಯಲ್ಲಿ ನಡೆಯುತ್ತವೆ. ಟ್ರೈಸೈಕಲ್, ಬಣ್ಣದ ಕಾಲಿನಂತ ಕಥೆಗಳಲ್ಲಿ ಮನುಷ್ಯರ ಸೂಕ್ಷ್ಮ ಸಂವೇದನೆಯ ಎಳೆಯನ್ನು ಕಾಯ್ಕಿಣಿಯವರು ಮನೋಜ್ಞವಾಗಿ ಬರೆದಿದ್ದಾರೆ. ಈ ಪುಸ್ತಕದ ಎಲ್ಲಾ ಕಥೆಗಳಲ್ಲೂ ಕನ್ನಡದ ಅಪರೂಪದ ಅಥವಾ ಪ್ರಾಚೀನ ಪದಗಳನ್ನು ಪೋಣಿಸಿದ್ದರೆ. ಉದಾಹರಣೆಗಾಗಿ ಹೇಳುವುದಾದರೆ ಚಾಳು(ಮನೆ),ತಾಟು (ಪಾತ್ರೆ), ಹೊರಳೆ( ಮೂಗಿನ ಹೊಳ್ಳೆ), ಸಂಪು (ಮುಷ್ಕರ), ನಿರಂಬಳ (ನಿರ್ಭಯ),ಬಡಿವಾರ(ಪರಿಶೀಲನೆ) ಹೀಗೆ ಹತ್ತು ಹಲವು ಪದಪುಂಜಗಳ ಬಳಕೆಯಾಗಿವೆ. ಕೆಲವೊಮ್ಮೆ ಮುದ್ರಣದಲ್ಲಿ ತಪ್ಪಾಗಿದೆಯೇನೋ ಎಂಬಷ್ಟರ ಮಟ್ಟಿಗೆ ಅಪರಿಚಿತ ಪದಗಳನ್ನು ಬಳಸಿದ್ದಾರೆ. ಅಪರೂಪದ ಪದಗಳ ಅರ್ಥವನ್ನು ಪುಟದ ಕೊನೆಯಲ್ಲೋ ಅಥವಾ ಪುಸ್ತಕದ ಕೊನೆಯಲ್ಲಿ ಕೊಟ್ಟಿದ್ದರೆ ಉತ್ತಮವಾಗಿರುತ್ತಿತ್ತು. ಇಂತಹ ಪದಗಳ ಲೋಕರೂಢಿಯಲ್ಲಿ ಉಪಯೋಗಿಸಿದರೆ ಶ್ರೀಮಂತ ಭಾಷೆಯಾದ ಕನ್ನಡದ ಎಡೆಯಲ್ಲಿ ಇಂಗ್ಲೀಷ್ ಪದ ಬಳಸಿ ಕನ್ನಡದ ಅಂದ ಹಾಳುಗೆಡಗುವ ಪ್ರಮೇಯ ಕಡಿಮೆಯಾಗಬಹುದು. ಕನ್ನಡದ ಬಗ್ಗೆ ಪ್ರೀತಿ, ಗೌರುವ, ಶ್ರೀಮಂತಿಕೆ ಕನ್ನಡಿಗರಲ್ಲಿ ಹೆಚ್ಚಾಗಬಹುದು. ಈ ಕಥಾಸಂಕಲನದ ಸಣ್ಣ ಸಣ್ಣ ಕಥೆಗಳಲ್ಲೂ ಅದರದ್ದೇ ಒಂದು ಲೋಕ ಸೃಷ್ಟಿಸಿ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಲೇಖಕರ ಇನ್ನಿತರ ಪುಸ್ತಕಗಳ ಬಗ್ಗೆ ಕುತೂಹಲ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾಯ್ಕಿಣಿಯವರ ಕಥೆಗಳಿಗೆ ಆರಂಭವೂ ಇರುವುದಿಲ್ಲ, ಅಂತ್ಯವೂ ಇರುವುದಿಲ್ಲ. 'ಒಂದಾನೊಂದು ಕಾಲದಲ್ಲಿ' ಎಂದು ಶುರುವಾಗುವ ಕಥೆಗಳಂತು ಅಲ್ಲವೇ ಅಲ್ಲ. ಸಾಮಾನ್ಯ ಜನರ ಅಸಮಾನ್ಯ ಬದುಕಿನ ಕಥೆಗಳವು. ಕಾಲ್ಪನಿಕವೋ ಅಥವ ವಾಸ್ತವೋ ಎಂದು ಗೊಂದಲಕ್ಕೀಡು ಮಾಡಿ ಘಾಸಿಗೊಳಿಸುವ ಗುಣವಿರುವ ಈ ಕಥೆಗಳು ಕವಿಯ ಕಲ್ಪನೆಯಾದರೂ, ಯಾವುದೋ ಅಪರಿಚಿತ ಪರ್ಯಾಯ ಲೋಕದಲ್ಲಿ ಇವು ವಾಸ್ತವಾಗಿರಬಹುದೇನೋ ಎಂಬ ಯೋಚನೆಗೆ ಸಿಲುಕಿಸುತ್ತವೆ. 'ಅಂತ್ಯ ನಿಮ್ಮ ಊಹೆಗೆ ಬಿಟ್ಟಿದ್ದು' ಎಂಬಂತೆ ಹುಸಿನಗೆ ಬೀರುವ ಅಪೂರ್ಣತೆ ಈ ಕಥೆಗಳಿಗೆ ಇದ್ದರೂ, ತೀರ ಸರಳವೆನಿಸುವಂತಹ, ಇಂದಿನ ಯುಗದಲ್ಲಿ ಎಲ್ಲೋ ಕಾಣೆಯಾಗಿರುವ ಮಾನವೀಯ ಮೌಲ್ಯಗಳನ್ನೊಳಗೊಂಡಿವೆ. ನನ್ನ ಮನಮುಟ್ಟಿದ ಕಥೆಗಳು ಹೊಸ್ತಿಲು, ಸ್ವಪ್ನದೋಷ, ಬಿಡು ಬಿಡು ನಿನ್ನಯ.... ಮತ್ತು ಚಂದ್ರಶಾಲೆ. ✨️