ವೀರಪ್ಪನ್ ಅಂದ ತಕ್ಷಣ ಮನಸ್ಸಿನಲ್ಲಿ ಮೂಡುವುದು ದಪ್ಪ ಮೀಸೆ, ಒಣಕಲು ಶರೀರ, ದಂತ ಚೋರ, ಕಾಡುಗಳ್ಳ ಎಂಬ ಅನ್ವರ್ಥನಾಮಗಳು. ಅವನ ಬಗ್ಗೆ ಕೇಳಿರುವ, ನೋಡಿರುವ, ಓದಿರುವ ಅನೇಕ ವಿಷಯಗಳು ಋಣಾತ್ಮಕ ವಿಷಯಗಳೇ. ಅವನ ಇನ್ನೊಂದು ಮುಖವನ್ನು ತೆರೆದಿಡುತ್ತದೆ ಈ ಕೃತಿ.
ಹಾಗಂತ ಅವನು ಒಳ್ಳೆಯವನು ಅಥವಾ ಕೆಟ್ಟವನು ಎಂದು ಇಲ್ಲಿ ವಿಶ್ಲೇಷಿಸಿಲ್ಲ. ಕಾಡಿನಲ್ಲಿ ಕಳೆದ 14 ದಿನಗಳ ಪ್ರವಾಸದ ಕಥೆಯಂತೆ ಈ ಕೃತಿಯನ್ನು ರಚಿಸಿದ್ದಾರೆ ಲೇಖಕರು.
ವೀರಪ್ಪನ್ ಮತ್ತು ಅವನ ಸಂಗಡಿಗರ ಒಡನಾಟ, ಅವರೆಲ್ಲರಿಗೂ ಇರುವ ಕಾಡಿನ ಬಗೆಗಿನ ಅಗಾಧ ಜ್ಞಾನ, ಭಾವುಕತೆ, ಪ್ರಾಣಿ ಪಕ್ಷಿಗಳ ಅನುಕರಣೆ, ದೈವ ಭಕ್ತಿ, ಹೊರ ಜಗತ್ತಿನ ಬಗ್ಗೆ ಅವರಿಗಿರುವ ಅಜ್ಞಾನ. ಹೀಗೆ ಹಲವು ವಿಷಯಗಳ ಬಗ್ಗೆ ಬೆಳಕು ಚೆಲ್ಲುತ್ತದೆ ಈ ಕೃತಿ.
ಇನ್ನೂ ವೀರಪ್ಪನ್ನೊಳಗೊಬ್ಬ ಇರುವ ಹೋರಾಟಗಾರ, ಪರಿಸರ ತಜ್ಞ, ಕಲಾವಿದ, ಕ್ರಾಂತಿಕಾರಿ, ವಿದೂಷಕ ಪಾತ್ರಗಳನ್ನು ಕೂಡ ಪರಿಚಯಿಸುತ್ತದೆ.
ಲೇಖಕರುಗಳಾದ ಕೃಪಾಕರ್-ಸೇನಾನಿಯವರ ಬಗ್ಗೆ ಎಷ್ಟು ಹೇಳಿದರು ಕಮ್ಮಿಯೇ. ಅವರ 'ಕೆನ್ನಾಯಿಯ ಜಾಡಿನಲ್ಲಿ' ಪುಸ್ತಕ, ಕೆ ಪುಟ್ಟಸ್ವಾಮಿಯವರೊಂದಿಗೆ ಹೊರತಂದ 'ಜೀವಜಾಲ' ಪುಸ್ತಕಗಳು ಜೀವ ಜಗತ್ತಿನ ಬಗ್ಗೆ ತಿಳಿದುಕೊಳ್ಳಬೇಕೆಂಬುವವರ ಕಾಪಿಟ್ಟುಕೊಳ್ಳಬೇಕಾದ ಪುಸ್ತಕಗಳು.
ಇಂತಹ ಘನ ವ್ಯಕ್ತಿತ್ವದ ಇವರಿಬ್ಬರು ಅಂತಹ ವೀರಪ್ಪನೊಂದಿಗೆ ಬಹಳ ವರ್ಷಗಳಿಂದ ಪರಿಚಯ ಇರುವವರಂತೆ ಅವನೊಟ್ಟಿಗೆ ಬಹಳ ಸಹಜವಾಗಿ ವರ್ತಿಸುತ್ತಾ, ಒಂದು ಹಂತದಲ್ಲಿ ಅವನನ್ನು ತಪ್ಪು ಒಪ್ಪಿಕೊಂಡು ಶರಣಾಗುವುದಕ್ಕೆ ಒಪ್ಪಿಸುತ್ತಾರೆ ಕೂಡ.
ಇವರ ಜೊತೆಗೆ ಅಪಹರಣಕ್ಕೊಳಗಾದ ಡಾಕ್ಟರ್ ಮೈಥಿ ಮತ್ತು ಇನ್ನಿತರರನ್ನು ಸಮರ್ಥವಾಗಿ, ಮಾನಸಿಕ ಸ್ಥಿಮಿತವನ್ನು ಕಳೆದುಕೊಳ್ಳದಂತೆ ಜೊತೆಗಿರಿಸಿಕೊಳ್ಳುತ್ತಾರೆ.
ಈ ಕೃತಿಯ ವಿಶೇಷತೆ ಎಂದರೆ ಓದುತ್ತಾ ಹೋದಂತೆ ಎಲ್ಲೂ ಗೋಳಿನ ಕಥೆ ಅನಿಸುವುದಿಲ್ಲ. ಗೆಳೆಯರೆಲ್ಲರೂ ಸೇರಿ ಯಾವುದೋ ಚಾರಣಕ್ಕಾಗಿ ಹೋಗಿ ಬಂದಂತೆ ಅನಿಸುತ್ತದೆ. ಅದಕ್ಕೆ ಮುಖ್ಯ ಕಾರಣ ಕೃತಿಯನ್ನು ತಿಳಿಹಾಸ್ಯದಲ್ಲಿ ನಿರೂಪಿಸಿರುವುದು.
ಉತ್ತಮ ಕೃತಿ.