ಕವಲು..
[ Spoilers alert ]
ತುಂಬ ವಾದ ಮಾಡುವವರ ಜೊತೆ ಮೌನದಿಂದಿರುವುದು ಒಳ್ಳೆಯದಂತೆ.
ಯಾಕೆ ಮುಖ್ಯ ಪಾತ್ರಗಳಿಗೆ ಯಾವುದೇ ನೈತಿಕತೆಯೇ ಇಲ್ಲವಲ್ಲ? ಅದರಲ್ಲೂ ಹೆಣ್ಣು ಪಾತ್ರಗಳು ಒಮ್ಮೆಯೂ ಅದರ ಬಗ್ಗೆ ಯೋಚಿಸುತ್ತಾ ಇಲ್ಲವಲ್ಲ? ಎಂದು ಮನಸ್ಸಿನೊಳಗೆ ವಾದ ಏರ್ಪಡುತ್ತಿತ್ತು ಓದುತ್ತಾ ಹೋದಂತೆ.
ಆ ಪಾತ್ರಗಳ ಗುಣಧರ್ಮಗಳೇ ಹಾಗೆ, ಅವುಗಳನ್ನು ಸುಮ್ಮನೆ ನೋಡುತ್ತಾ (ಓದುತ್ತಾ) ಮೌನವಹಿಸಬೇಕು ಅಷ್ಟೇ, ಅಂತ ಮುಂದುವರಿಸಿದೆ.
ಕವಲು, ಆಧುನಿಕ ಬದುಕಿನ ಮತ್ತು ಕುಟುಂಬದ ಅದರಲ್ಲೂ ಮೇಲ್ವರ್ಗದ ಗಂಡು ಹೆಣ್ಣಿನ ಸಂಬಂಧಗಳ ಬಗ್ಗೆ ಮತ್ತು ಕಾನೂನು ಕಟ್ಟಲೆಗಳ ಸಂಕೀರ್ಣತೆ ಬಗ್ಗೆ ಇರುವ ಕಥನ.
ಮಂಗಳ, ಜಯಕುಮಾರ್, ವಿನಯಚಂದ್ರ ಮತ್ತು ಇಳಾ ಮುಖ್ಯ ಪಾತ್ರಗಳು.
ಮಂಗಳ ಮತ್ತು ಇಳಾ ಪಾತ್ರಗಳಲ್ಲಿ ಅಂತಹ ಹೆಚ್ಚು ವ್ಯತ್ಯಾಸವಿಲ್ಲ. ಇಬ್ಬರೂ ಮಹಿಳಾವಾದ, ಹೆಣ್ಣಿನ ಸ್ವಾತಂತ್ರ್ಯ, ಪಾಶ್ಚಿಮಾತ್ಯ ಜಗತ್ತಿನ ಧೋರಣೆಗಳನ್ನು ಮೈಗೂಡಿಸಿಕೊಂಡವರು.
ಇಳಾ ಪಾಶ್ಚಿಮಾತ್ಯ ದೇಶದಲ್ಲಿ ಇದ್ದು ಅಲ್ಲಿಯ ಮುಕ್ತತೆಗಳನ್ನು ಅರಿತಿದ್ದವಳು. ಮಂಗಳಾ ತನ್ನ ಶಿಕ್ಷಕಿ ಇಳಾಳಿಂದ ಪ್ರಭಾವಿತಳಾದವಳು.
ಕಾಮಾತುರಕ್ಕೆ ಬಲಿಬಿದ್ದು ಮಂಗಳಾಳನ್ನು ತನ್ನ ಎರಡನೇ ಪತ್ನಿಯಾಗಿ ಸ್ವೀಕರಿಸುವ ಜಯಕುಮಾರ ನಂತರ ಅವಳ 'ಮಹಿಳಾವಾದ'ದ ಮಾತಿನ ಬಿರುಸಿಗೆ ಸಿಕ್ಕಿ ನುಜ್ಜುಗುಜ್ಜಾಗುತ್ತ, ವೇಶ್ಯೆಯರ ಸಹವಾಸಕ್ಕೆ ಬಿದ್ದು, ಕಾನೂನು ಕೋಟಲೆಗಳಿಗೆ ಸಿಲುಕಿ ಹೈರಾಣನಾಗುತ್ತಾನೆ.
ಅವನ ಜೀವನದ ಸುಂದರ ಕ್ಷಣಗಳೆಂದರೆ ತನ್ನ ಮೊದಲ ಪತ್ನಿ ವೈಜಯಂತಿಯ ಜೊತೆ ಕಳೆದ ಜೀವನ ಮತ್ತು ಆಕಸ್ಮಿಕವಾಗಿ ಮಾನಸಿಕ ಶಕ್ತಿ ಕಳೆದುಕೊಳ್ಳುವ ತನ್ನ ಮಗಳ 'ಪುಟ್ಟಕ್ಕ'ನ ಸಹಚರ್ಯ.
ತನ್ನ ಬುದ್ಧಿಮತ್ತೆಗೆ ಸರಿಹೊಂದುವಳು ಎಂದು ಇಳಾಳನ್ನು ಮದುವೆಯಾದ ವಿನಯಚಂದ್ರ, ಅವಳ 'ಮಹಿಳಾವಾದ'ದ ಮಾತಿನ ಬಿರುಸಿಗೆ ಸಿಕ್ಕಿದರೂ ಅದನ್ನು ಚಾಣಾಕ್ಷತೆಯಿಂದ ಬಿಡಿಸಿಕೊಂಡು ದಿಲ್ಲಿಗೆ ಹೋಗಿ ನೆಲೆಸುತ್ತಾನೆ.
ಅವಳಿಂದ, ಮಗಳಿಂದ ದೂರವಿದ್ದರೂ ಫೋನ್ ಮುಖಾಂತರ ಮತ್ತು ರಜಾದಿನಗಳಲ್ಲಿ ತನ್ನ ಮಗಳು ಸುಜಯಾಳನ್ನ
ಭೇಟಿಯಾಗುತ್ತಿರುತ್ತಾನೆ.
ಸುಜಯ ಒಂದೊಮ್ಮೆ ತನ್ನ ಅಪ್ಪನ ಜೊತೆ ಅವನ ಹಳ್ಳಿಗೆ ಹೋದಾಗ ಅಲ್ಲಿನ ಪರಿಸರ, ಚಿಕ್ಕಪ್ಪ, ಚಿಕ್ಕಮ್ಮ, ಅವರ ಮಗನಾದ ಸತೀಶ, ಅಜ್ಜಿ ಇವರೆಲ್ಲರ ಪ್ರೀತಿಗೆ ಪಾತ್ರಳಾಗುತ್ತಾಳೆ. ಅಮ್ಮನ ಮುಕ್ತತೆಗಿಂತ ಒಟ್ಟು ಜೀವನದ ಸಂಭ್ರಮಕ್ಕೆ ಅಲ್ಲಿ ಅವಳು ಒಳಗಾಗುತ್ತಾಳೆ. ಇದರಿಂದ, ಮುಂದೆ ಅವಳು ಅಮ್ಮನ ಮಹಿಳಾವಾದದಿಂದ ದೂರವಾಗಿ ಸಂಬಂಧಗಳ ಬೆಲೆ ಅರಿಯುತ್ತಾಳೆ.
ಇಲ್ಲಿ ಮುಖ್ಯವಾದುದೆಂದರೆ ಕಾಮ ಸಂಬಂಧಗಳು ಮತ್ತು ಕಾನೂನು ಕಟ್ಟಳೆಗಳ ಸಂಕೀರ್ಣತೆ ಅದರಲ್ಲೂ ಹೆಣ್ಣಿನ ಪರವಾದ ಕಾನೂನುಗಳು ಮತ್ತು ಮಹಿಳೆ ಎಂದ ತಕ್ಷಣ ಅವಳು ಅಬಲೆಯಲ್ಲ ಅವಳಲ್ಲು ಗಂಡಿನಲ್ಲಿರುವ ವಾಂಛಲ್ಯಗಳು, ಕುಟಿಲತೆಗಳು ಕೂಡ ಇರುತ್ತವೆ ಎಂಬುದು.
ಕಾಮ ಸಂಬಂಧಗಳಿಗೆ ಇಳಾ ಮತ್ತು ಮಂಗಳ ಇಬ್ಬರಿಗೂ ಯಾವುದೇ ನೈತಿಕತೆ ಅಡ್ಡಬರುವುದಿಲ್ಲ. ಅವರು ಅದಕ್ಕೆ ಕೊಡುವ ಸಮಜಾಯಿಷಿ ಎಂದರೆ ಹೆಣ್ಣಿನ ಸ್ವಾತಂತ್ರ, ಮುಕ್ತಕಾಮ, ಪಾಶ್ಚಿಮಾತ್ಯ ದೇಶಗಳ ತುಲನೆ ಇವುಗಳೇ.
ಇನ್ನು, ಜಯಕುಮಾರ ಒಂದು ಬಾರಿ ಕಾಮಕ್ಕೆ ಬಲಿಯಾಗಿ ತೊಂದರೆ ಅನುಭವಿಸುತ್ತಿದ್ದರೂ, ನೈತಿಕತೆಯ ಪ್ರಜ್ಞೆ ಮೂಡಿದರೂ ಮತ್ತೆ ಮತ್ತೆ ಅದಕ್ಕೆ ಬಲಿಯಾಗಿ ಕಾನೂನಿನ ಕೈದಿಯಾಗುತ್ತಾನೆ.
ಪ್ರಭಾಕರ ಮತ್ತು ಮಂತ್ರಿಯ ಪಾತ್ರಗಳು ಗಂಡಿನ ಕಾಮವಾಂಛೆಯ, ಅನೈತಿಕವೇ ನೈತಿಕವೆಂದೂ ವರ್ತಿಸುವ ಚಾಲಾಕಿ ಪಾತ್ರಗಳು.
ಜಯಕುಮಾರನ ಸಂಸಾರದ ಬಗ್ಗೆ ಎಲ್ಲಾ ಗೊತ್ತಿದ್ದು, ಅವನ ಮಗಳಾದ ಪುಟ್ಟಕ್ಕ (ವತ್ಸಲಾ)ಳನ್ನು ಪ್ರೀತಿಯಿಂದ ಸಾಕಿ ಸಲಹುವ ಪಾತ್ರ ದ್ಯಾವಕ್ಕ.
ತನ್ನ ಮಾವನ ಮನೆಯಲ್ಲಿದ್ದುಕೊಂಡು ಓದಿ, ದೂರದ ಅಮೇರಿಕಾದಲ್ಲಿ ಕೆಲಸಗಳಿಸಿಕೊಂಡು, ಅಲ್ಲಿ ಲಿವಿಂಗ್ ಟುಗೇದರ್ ಸಂಬಂಧ ಹೊಂದಿ, ಅದು ಮುರಿದು ಬಿದ್ದು ಮತ್ತೊಂದು ಪ್ರೇಮದಲ್ಲಿ ಮುಳುಗಿ, ಮದುವೆಯಾಗಿ, ತೊಂದರೆಗೊಳಪಟ್ಟು, ಅಲ್ಲಿನ ಕಾನೂನುಗಳಿಗೆ ಸಿಕ್ಕಿ ಒದ್ದಾಡಿ, ಕೊನೆಗೆ ಭಾರತಕ್ಕೆ ಬಂದು, ಅಜ್ಜಿಯ ಮಾತುಗಳಿಗೆ ಒಪ್ಪಿ ಪುಟ್ಟಕ್ಕನ ಮದುವೆಯಾಗಿ, ಜೀವನದ ಒಂದು ಹಂತಕ್ಕೆ ಬರುವ ಪಾತ್ರ ನಚಿಕೇತ.
ಮೂವತ್ತು ವರ್ಷಗಳಿಂದ ಎಲ್ಲ ಸಂಬಂಧಗಳನ್ನು ಕಡಿದುಕೊಂಡು ದೂರವಿದ್ದು, ನಂತರ ತನ್ನ ಕುಟುಂಬವನ್ನು ಕೂಡಿಕೊಂಡು ಮೊಮ್ಮಗಳ ಮಾನಸಿಕ ಬೆಳವಣಿಗೆಯನ್ನು ಹೆಚ್ಚಿಸುತ್ತ, ಮಗ ಜಯಕುಮಾರನಿಗೆ ಧೈರ್ಯ ತುಂಬುತ್ತಾ, ಮೊಮ್ಮಗ ನಚಿಕೇತನಿಗೆ ತನ್ನ ಅನುಭವ ಮಾತುಗಳನ್ನಾಡಿ ಪುಟ್ಟಕ್ಕನೊಂದಿಗೆ ಮದುವೆಗೆ ಒಪ್ಪಿಸುವ ಜಯಕುಮಾರನ ತಾಯಿ ಪಾತ್ರ.
ಎಲ್ಲಾ ಪಾತ್ರಗಳೂ ನೆನಪಿನಲ್ಲುಳಿಯುವಂತವೆ.
ನಾನು ಓದಿದ ಭೈರಪ್ಪನವರ ಕಾದಂಬರಿಗಳಲ್ಲಿ ಇದೊಂದು ವಿಭಿನ್ನ ಮತ್ತು ಉತ್ತಮ ಕಾದಂಬರಿಯಾದರೂ ಅವರ ಪುಸ್ತಕಗಳನ್ನು ಓದಿಯಾದ ನಂತರ ಸಿಗುವ ಒಂದು 'ಅಮೂರ್ತ ಭಾವನೆ' ಇದರಲ್ಲಿ ಯಾಕೋ ಸಿಗಲಿಲ್ಲ!