ನೀನು ಟಾಂಜೆನಿಯದಲ್ಲಿರುವ ಇರುವ ಅರುಶಾಗೆ ಹೊರಡಲು ಸಿದ್ದನಾಗು. ಅಲ್ಲಿ ಜಗತ್ತಿನ ಎಲ್ಲೆಡೆಯಿಂದ ವಿಜ್ಞಾನಿಗಳು ಮತ್ತು ಸಂಶೋಧಕರು ಬಂದಿರುತ್ತಾರೆ. ನಿನ್ನ ಸಾಧನೆಗೂ ಇದು ಒಂದು ದೊಡ್ಡ ಗೌರವ ಮತ್ತು ಹೆಮ್ಮೆಯ ಕ್ಷಣವಾಗಿರುತ್ತದೆ ಎಂದರು..
ಅಲ್ಲಿಗೆ ನಾನು ಬಸ್ಸಿನಲ್ಲಿ ಹೋಗಬಹುದು. ಪ್ರಯಾಣವು ಎಷ್ಟು ಗಂಟೆಗಳ ಕಾಲವೋ ಗೊತ್ತಿಲ್ಲ. ಅಲ್ಲಿ ಸಮಾವೇಶದಲ್ಲಿ ಕೇಕ್ ಮತ್ತು ಹುರಿದ ಜೋಳವು ತಿನ್ನಲು ಸಿಗಬಹುದು. ಏನೇ ಇರಲಿ ಅಲ್ಲಿಗೆ ಹೋಗಲು ಈಗ ನನ್ನ ಬಳಿ ಹಣವಿಲ್ಲ.
ವಿಲಿಯಂ ಇನ್ನು ಒಂದು ಮುಖ್ಯವಾದ ವಿಷಯ. ನೀನು ಅಲ್ಲಿಗೆ ವಿಮಾನದಲ್ಲಿ ಹೋಗುತ್ತಿರುವೆ, ಒಂದು ಹೋಟೆಲ್ನಲ್ಲಿ ತಂಗುತ್ತಿರುವೆ ಮತ್ತು ಸದ್ಯದಲ್ಲೇ ಶಾಲೆಗೆ ಮರಳುತ್ತಿರುವೆ.."
ಈ ಮೇಲಿನ ವಾಕ್ಯಗಳನ್ನ ಓದುವಾಗ ಅಚ್ಚರಿಯ ಭಾವ ಮೂಡುತ್ತದೆ.. ಅದೇ, ಪುಸ್ತಕ ಓದುತ್ತಾ ಈ ಮೇಲಿನ ವಾಕ್ಯಗಳಲ್ಲಿಗೆ ಬಂದಾಗ ಅಚ್ಚರಿಯಲ್ಲದೆ ಖುಷಿಯಿಂದ ಕಣ್ಣಂಚು ಒದ್ದೆಯಾಗುತ್ತದೆ..
ಆಫ್ರಿಕಾದ ಪುಟ್ಟ ಹಳ್ಳಿಯೊಂದರಲ್ಲಿ, ಬಡತನದಲ್ಲಿ ಜನಿಸಿದ, ಭೀಕರ ಬರಗಾಲದಿಂದ ಶಾಲೆಗೆ ಹೋಗಲಾಗದ ಸ್ಥಿತಿಗೆ ತಲುಪಿ.. ಅದರಿಂದ ಕುಗ್ಗದೆ ಮನೆಯ ಬುಡದಲ್ಲಿ ಪುಟ್ಟ ಗಾಳಿಯಂತ್ರ(windmill) ವನ್ನ ನಿರ್ಮಿಸಿ, ಇಡೀ ಮನೆಗೆ, ಕೊನೆಗೆ ಇಡೀ ಊರಿಗೆ ಬೆಳಕನ್ನು ಹರಿಸಿದ 'ವಿಲಿಯಂ ಕಾಂಕ್ವಾಂಬಾ' ಎಂಬ ಹುಡುಗನ ಜೀವನದ ಯಶೋಗಾಥೆಯೇ #ಗಾಳಿ_ಪಳಗಿಸಿದ_ಬಾಲಕ.
ಭೀಕರ ಕ್ಷಾಮದಿಂದ ತನ್ನ ಕುಟುಂಬ ಅಲ್ಲದೆ ಇಡೀ ಊರೇ ಒಂದು ಹೊತ್ತು ಉಣ್ಣುವುದಕ್ಕೆ ತತ್ವಾರ ಪಡುತ್ತಿರುವಾಗ, ಓದುವುದಕ್ಕೆ ಅದಮ್ಯ ಉತ್ಸಾಹವಿದ್ದರೂ ಶಾಲೆ ಎಂಬುದು ಅವನಿಗೆ ಕೈಗೆಟುಕದ ಕನಸಾಗುತ್ತದೆ. ಆದರೆ ಅವನು ಅಂತಹ ಸಮಯದಲ್ಲೂ ತನ್ನ ಊರಿನ ಲೈಬ್ರರಿಯಲ್ಲಿ ಪುಸ್ತಕಗಳ ಜೊತೆಗೆ ಒಡನಾಟ ಸಾಧಿಸುತ್ತಾ, ಅವುಗಳಲ್ಲಿ ವಿಜ್ಞಾನಕ್ಕೆ ಸಂಬಂಧಪಟ್ಟ ವಿಷಯಗಳನ್ನು ಓದುತ್ತಾ, ವಿದ್ಯುತ್ತನ್ನು ಮನೆಗೆ ತಂದರೆ ಹಸಿವೆಯನ್ನು ಮತ್ತು ಸ್ವಾವಲಂಬನೆಯನ್ನು ಗಳಿಸಬಹುದಲ್ಲಾ ಎಂಬ ಆಲೋಚನೆಯಲ್ಲಿ ಗಾಳಿಯಂತ್ರವನ್ನು ನಿರ್ಮಿಸಲು ಶುರುಮಾಡುತ್ತಾನೆ.
ಆದರೆ ಇದರಿಂದ ಅವನು ಊರಿನವರಿಂದ ಹುಚ್ಚನೆಂದು ಕರೆಸಿಕೊಳ್ಳ ಬೇಕಾಗುತ್ತದೆ. ಯಂತ್ರಕ್ಕೆ ಸಂಬಂಧಪಟ್ಟ ಸರಕುಗಳನ್ನು ಕೊಳ್ಳಲಾಗದೆ ಗುಜರಿ ತಿಪ್ಪೆಯಲ್ಲಿ ಹುಡುಕ ಬೇಕಾಗುತ್ತದೆ. ಇತರ ಹುಡುಗರಿಂದ ಅಪಹಾಸ್ಯಕ್ಕೆ ಒಳಗಾಗ ಬೇಕಾಗುತ್ತದೆ. ಆದರೆ ಇದಾವುದರಿಂದಲೂ ತಲೆ ಕೆಡಿಸಿಕೊಳ್ಳದೆ ತನಗೆ ಸಿಕ್ಕ ಬೇರೆ ಬೇರೆ ಯಂತ್ರಗಳ ಬಿಡಿ ಭಾಗಗಳ ಸಹಾಯದಿಂದ ಗಾಳಿಯಂತ್ರವನ್ನು ನಿರ್ಮಿಸಿ ವಿದ್ಯುತ್ ಹರಿಸುತ್ತಾನೆ.
ಅವನ ಈ ಯಶಸ್ಸು ಅವನಿಗೆ ತನ್ನ ಊರಿನಲ್ಲಲದೆ ವಿಶ್ವದಾದ್ಯಂತ ಹೆಸರು ತಂದುಕೊಡುತ್ತದೆ. ಜೊತೆಗೆ ಅವನ ಶಾಲೆಯ ಕನಸು ಊಹಿಸಲಾಸಧ್ಯ ರೀತಿಯಲ್ಲಿ ಕೂಡ ನನಸಾಗುತ್ತದೆ.
ವಿಲಿಯಂ ಕಾಂಕ್ವಾಂಬಾ ನ ಈ ಜೀವನಗಾಥೆ ಅನೇಕರಿಗೆ ಸ್ಫೂರ್ತಿಯಾಗುವುದರಲ್ಲಿ ಸಂದೇಹವಿಲ್ಲ.
ಚಂದವಾದ ಕನ್ನಡನುವಾದಕ್ಕೆ ಲೇಖಕರಾದ ಕರುಣಾ ಬಿ ಎಸ್ ರವರಿಗೊಂದು ವಂದನೆ ಹೇಳಲೆಬೇಕು.
ಆಫ್ರಿಕಾದ ವಿದ್ಯುತ್ ಸಂಪರ್ಕ ಇರದ ಹಳ್ಳಿಯಲ್ಲಿ ವಿಲಿಯಂ ಕಾಂಕ್ವಾಂಬಾ ಎಂಬ ಹುಡುಗ ಗುಜರಿ ಸಾಮಾನುಗಳಿಂದ ಗಾಳಿಯಂತ್ರ ನಿರ್ಮಿಸಿದ ಕತೆ. ಬರೇ ಅಷ್ಟೇ ಅಲ್ಲ. ಅಲ್ಲಿನ ಭೀಕರ ಬರಗಾಲ,ರಾಜಕೀಯ ಸ್ಥಿತಿ, ಬದುಕಿನ ಹೋರಾಟ ಇತ್ಯಾದಿಗಳ ತೆರೆದಿಡುವುದರಿಂದ ಇದು ಇನ್ನೂ ಹೆಚ್ಚಾಗಿ ತಟ್ಟುತ್ತದೆ. ಅನುವಾದ ಅಂತ ಅನಿಸದಿರುವುದು ಹೆಗ್ಗಳಿಕೆ