ಮನುಷ್ಯ ಕಾಡುಪ್ರಾಣಿಗಳನ್ನು ಬೇಟೆಯಾಡಿದ ರೋಚಕ ಅನುಭವಗಳನ್ನು ನಾವೆಲ್ಲ ಕೇಳಿದ್ದೇವೆ. ಆದರೆ ಪ್ರಾಣಿಯೊಂದು ಮನುಷ್ಯನನ್ನು ಬೇಟೆಯಾಡಿದ ಅನುಭವವನ್ನು ಕೇಳಿಲ್ಲ. ಹಾಗೆ ಹೇಳುವವರೆಲ್ಲಿರುತ್ತಾರೆ? ಕಾಡುಪ್ರಾಣಿಯೇನಾದರು ಸಿಕ್ಕ ಬೇಟೆಯನ್ನು ಬಿಡುವಂತಹ ಅಡ್ಡಕಸುಬಿಯಾಗಿದ್ದರೆ ಮಾತ್ರ ಅದು ಸಾಧ್ಯ. ಅದರ ಹೊಟ್ಟೆಯಿಂದಲೋ ಬಾಯಿಯಿಂದಲೋ ಅರೆಜೀವವಾಗಿ ಉಳಿದು ಬಂದ ಯಾರಾದರೂ ಹೇಳಿದರೆ ಮಾತ್ರ ಅಂತಹ ಅನುಭವಗಳನ್ನು ಅವರು ಹೇಳಬಹುದು , ನಾವು ಕೇಳಬಹುದು . ಪ್ರದೀಪ ಕೆಂಜಿಗೆ ಬೇರೊಬ್ಬರ ಅಂತಹ ಒಂದು ಅನುಭವವನ್ನು ಅದಿರುವಂತೆಯೇ ನಮಗೆ ಮುಟ್ಟಿಸಿದ್ದಾರೆ . ಲೋಕ ಸಂಗತಿಗಳನ್ನು ಅದಿರುವಂತೆ ಬೆತ್ತಲೆ ನೋಡುವುದೇ ನಿಜವಾಗಿ ಕಲೆ , ಬೆತ್ತಲೆ ಎನ್ನುವುದನ್ನೂ ಮರೆತು . ಯಾಕೆಂದರೆ ನೋಡುವುದನ್ನೆಲ್ಲ ಈವರೆಗೆ ನೋಡಿದ ಜಾಲರಿಯಲ್ಲಿಯೇ ನೋಡಿ ಅಭ್ಯಾಸವಾಗಿರುವ ನಮಗೆ ಜಾಲರಿಯೂ ಬೇಡ ಏನೂ ಸುಮ್ಮನೆ ಹಾಗೆ ನೋಡಿ ಎಂದರೆ ಸಾಧ್ಯವಾಗುವುದಿಲ್ಲ. ಯಾವುದನ್ನಾದರು ಅದಿರುವಂತೆಯೇ ನೋಡಲು ಹೇಳಿಕೊಟ್ಟವರು ಪೂರ್ಣಚಂದ್ರ ತೇಜಸ್ವಿ. ಮಾರಣಾಂತಿಕವಾದ ಹೋರಾಟದ ಸಂದರ್ಭದಲ್ಲಿ ಪ್ರಾಣಿವರ್ತನೆ (ಮನುಷ್ಯನನ್ನೂ ಸೇರಿ) ನಿಸರ್ಗಸಹಜವಾಗಿರುತ್ತದೆ. ಇದನ್ನು ರೋಚಕವಾಗಿಸದೆ ಅದಿರುವಂತೆಯೇ, ಹಾಗೂ ದಿನನಿತ್ಯದ ಬದುಕಿನಲ್ಲಿ ವಿಪರೀತ ಕೃತಕವಾಗಿರುವ ಮನುಷ್ಯ ನಡವಳಿಕೆಯನ್ನು ಅದರ ಎಲ್ಲ ಆಯಾಮಗಳೊಡನೆ ಕೆಂಜಿಗೆ ಈ ಅನುಭವ ಕಥನದಲ್ಲಿ ಮುಂದಿಟ್ಟಿದ್ದಾರೆ.