ಎ.ಕೆ.ರಾಮಾನುಜನ್ . ನನಗೆ ಅಲ್ಪ ಸ್ವಲ್ಪ ಗೊತ್ತು. ಹೇಗಂತೀರಾ? ಅದೇನೋ ಮುನ್ನೂರು ರಾಮಾಯಣ ವಿಷಯದಲ್ಲಿ ವಿವಾದ ಆದದ್ದು ಗೊತ್ತು. Folk tales from india ಓದಿ ಗೊತ್ತು. ಜೋಗಿ ಬರೆದ ಜಾನಕಿ ಕಾಲಂ ಅಂಕಣದಲ್ಲಿ ರಾಮಾನುಜನ್ ಕವಿತೆ ಮರ ಮತ್ತು ಮನುಷ್ಯನ ಸಮೀಕರಿಸಿ ಬರೆದದ್ದು ಓದಿದ್ದೆ. ಎಲ್ಲಕ್ಕಿಂತ ಹೆಚ್ಚಾಗಿ 'ಹೊಕ್ಕುಳಲ್ಲಿ ಹೂವಿಲ್ಲ' ಸಂಕಲನದ ಈ ಕವಿತೆ ಚೆನ್ನಾಗಿದೆ ಅಂತ ಮೊದಲ ಓದಿಗೇ ಇಷ್ಟವಾಗಿತ್ತು.
ಅದರಲ್ಲಿ ಇದು ~ : ಕಾಡು ಮರಗಳ ಮಧ್ಯ ಮನೆ. ಸಿಮೆಂಟು ಬಿರುಕಿನ ಹುಲ್ಲು. ಅಮೇರಿಕನ್ ಮಾರ್ಕೆಟ್ಟಿನಲ್ಲಿ ಹಚ್ಚಗೆ ಕೊಯ್ದ ಕೊತ್ತಂಬರಿ ಸೊಪ್ಪು .
ಅನೇಕ ಬರಹಗಾರರು ಅವರ ಹೆಸರು ಉಲ್ಲೇಖ ಮಾಡುವುದರ ಗಮನಿಸಿದ್ದರೂ ಅವರ ೧೯೯೩ರಲ್ಲೇ ಹೋದದ್ದರಿಂದ ಮತ್ತು ಅವರ ಯಾವ ಪಾಠವೂ ನಮ್ಮ ಪಠ್ಯ ಪುಸ್ತಕದಲ್ಲಿ ಇರದುದರಿಂದ (ಇದು ವ್ಯಂಗ್ಯ ಮತ್ತು ದುರಂತ) ಜನ ಯಾರೂ ಅಂತ ಐಡಿಯಾವೇ ಇರಲಿಲ್ಲ. ಹಾಗಾಗಿ 'ಮತ್ತೊಬ್ಬನ ಆತ್ಮಚರಿತ್ರೆ' ಓದುವಾಗ ನನಗೆ ನೆನಪಿದ್ದದ್ದು ಕೊತ್ತಂಬರಿ ಸೊಪ್ಪು ಮಾತ್ರ. ಎಂತಹ ಪುಸ್ತಕ ಅಂತೀರಿ? ಸಾಮಾನ್ಯವಾಗಿ ಒಂದು ಒಳ್ಳೆಯ ಲೇಖನದ ಕೆಲ ಸಾಲುಗಳಿಗಷ್ಟೇ ಜಗ್ಗನೆ ಹೊಳೆವ ಗುಣವಿರುತ್ತದೆ. ಅದರಿಂದಲೇ ಇಡೀ ಲೇಖನಕ್ಕೆ ಹೊಳಪು ಬರುವುದು. ರಾಮಾನುಜನ್ ಆತ್ಮಚರಿತ್ರೆ (ಹಾಗಂದುಕೊಂಡರೆ) ಯಲ್ಲಿ ಪ್ರತೀ ಸಾಲೂ ಪ್ರತೀ ಪದಕ್ಕೂ ಆ ಮಾಂತ್ರಿಕ ಗುಣವಿದೆ. ಉದಾಹರಣೆಗೆ ಈ ಪ್ಯಾರಾ ನೋಡಿ ' ಎಲ್ಲೆಸ್ಡಿ ಇತ್ಯಾದಿ ಭ್ರಾಂತಿಕಾರಕ ಗುಳಿಗೆ ತೆಗೆದುಕೊಂಡವರ ಹಾಗೆ - ಒಂದೇ ಒಂದು ಸಾರಿ ಅದನ್ನು ತಿಂದು, ಎಂಟೊಂಬತ್ತು ಗಂಟೆ ಪ್ರಪಂಚ ತಲೆಕೆಳಗಾಗಿ,ಆಕಾಶ ಭೂಮಿ ಕುರ್ಚಿ ಮುಖ ಮರ ಬೆರಳು ಚಿಕ್ಕಂದಿನಲ್ಲಿ ಸತ್ತ ತಂಗಿಯ ಕೈಯಿ ಕಣ್ಣೆದುರಿಗಿನ ಗಾಜುವಜ್ರದ ಶಾಂಡಿಲಿಯರ್ ರತ್ನದೀಪ ಎಲ್ಲ ಮಿನುಮಿನುಗಿ ಹೊಳೆದು,ನೂರೆಂಟು ಸಪ್ತರಂಗಿ ಬಣ್ಣವಾಗಿ ಗಿರ್ರಂತ ತಿರು ತಿರುಗಿ ಬಂದು,ಈ ಮಹಾಭ್ರಾಂತಿಯ ಉಬ್ಬರ ಮಾರನೆಯ ಮಧ್ಯಾಹ್ನ ಇಳಿದೀತು. ಆದರೂ ಅಷ್ಟಕ್ಕೇ ನಿಲ್ಲದೆ, ಒಳಗೆಲ್ಲೋ ಗುಪ್ತವಾಗಿದ್ದು, ಮತ್ತೆ ಮತ್ತೆ ಎಷ್ಟೋ ವರುಷಗಳಾದ ಮೇಲೆ ಥಟ್ಟಂತ ಹೇಳದೆ ಕೇಳದೆ ಎಲ್ಲೆಲ್ಲೋ - ಕಾರು ನಿಲ್ಲಿಸಿ ಜರ್ಮನಿಯಲ್ಲೋ ಮೈಸೂರಿನಲ್ಲೋ ಯಾವುದೋ ಕಕ್ಕಸಿನಲ್ಲಿ ಉಚ್ಚೆ ಹೊಯ್ಯುತ್ತಿರುವಾಗ- ಥಟ್ಟಂತ ಆ ಅನುಭವ ಮರುಕಳಿಸಿ ಉಚ್ಚೆಯಲ್ಲಿ ಕಾಮನಬಿಲ್ಲು...' ಹೀಗೆ, ಇಷ್ಟೇ ಅಲ್ಲ ಈ ಸಾಲು ನೋಡಿ ಬೇಕಾದರೆ, 'ತೇಪೆ, ಈ ಮೈಯಿ ಪುರಾತನ ಜೀವಗಳ ಬಯಲಾಜಿಕಲ್ ತೇಪೆ. ಮನಸ್ಸು ಹಿಂದಿನವರ ಹತ್ತಿರದವರ ಓದಿ ಕೇಳಿದವರ ತೇಪೆ. ನಮ್ಮೊಳಗೆ ಯಾರ ಯಾರದೋ ಚರಿತ್ರೆ ಉದಾಹರಣೆ ಬಿಡಿಸಿ ನೋಡಿದರೆ ನಾವು ನಾವಲ್ಲ, ಯಾರು ಯಾರೋ ಅಂಕಡೊಂಕಸಂಕಪಾಲದ ಹಾಗೆ ಎಲ್ಲೋ ಬಸ್ಸಿನಲ್ಲಿ ಕೇಳಿದ ಹಾಡು, ತಲೆಯಲ್ಲಿ ಅಂಟಿಕೊಂಡು ಹತ್ತು ವರ್ಷದಾಚೆ ಮನಸ್ಸಿನಲ್ಲಿ ನುಡಿಯುತ್ತದೆ' ಹೀಗೆಲ್ಲ ಬರೆದ ರಾಮಾನುಜನ್ ಒಳಗೇ ಕೈ ಹಾಕಿ ಮೀಟುತ್ತಾರೆ.ನಿನ್ನೆಯಿಂದ ನೂರು ಚಿಲ್ಲರೆ ಪುಟಗಳ ಪುಸ್ತಕ ಓದಿ ಸವಿದಿದ್ದೇನೆ.ಯಾಕೋ ತುಂಬಾ ಇಷ್ಟವಾಗಿಬಿಟ್ಟರು.