ಪತ್ರಕರ್ತ, ಬರಹಗಾರರಾಗಿರುವ ಮಣಿಕಾಂತ್ ಅವರು ಮೂಲತಃ ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಆಯತನಹಳ್ಳಿಯವರು. ಆಟೋ ಮೊಬೈಲ್ ಇಂಜಿನಿಯರಿಂಗ್ ಪದವಿ ಪಡೆದಿರುವ ಇವರು ವಿಜಯ ಕರ್ನಾಟಕ, ಹಾಯ್ ಬೆಂಗಳೂರು, ಸಂಯುಕ್ತ ಕರ್ನಾಟಕ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿರುವ ಇವರು ಈ ಗುಲಾಬಿಯು ನಿನಗಾಗಿ, ಮರೆಯಲಿ ಹ್ಯಾಂಗ, ಉಭಯ ಕುಶಲೋಪರಿ ಸಾಂಪ್ರತ, ಹಾಡು ಹುಟ್ಟಿದ ಸಮಯ ಎಂಬ ಅಂಕಣಗಳನ್ನು ಬರೆದಿದ್ದಾರೆ. ಇವರ ಬರೆದಿರುವ ಕೃತಿಗಳೆಂದರೆ ಅಮ್ಮ ಹೇಳಿದ ಎಂಟು ಸುಳ್ಳುಗಳು, ಹಾಡು ಹುಟ್ಟಿದ ಸಮಯ, ಅಪ್ಪ ಅಂದ್ರೆ ಆಕಾಶ, ಭಾವ ತೀರ ಯಾನ, ಮನಸು ಮಾತಾಡಿತು ಮುಂತಾದವು. ಇವರ ಅಮ್ಮ ಹೇಳಿದ ಎಂಟು ಸುಳ್ಳುಗಳು ಕೃತಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಅವ್ವ ಪ್ರಶಸ್ತಿ ದೊರಕಿದೆ.
ಮಣಿಕಾಂತ್ ಸರ್ ಅವರೇ ಹೇಳುವಂತೆ ಅವರ ಪುಸ್ತಕದಲ್ಲಿ ಹುಬ್ಬೇರಿಸುವಂತಹ ಸಾಹಿತ್ಯದ ಬಳಕೆಯಿರುವುದಿಲ್ಲ. ಉತ್ಕಟ ಉಪಮೆ ರೂಪಕಗಳು? ಊಹೂಂ ಇಲ್ಲ!! ಆದರೂ ಮಣಿಕಾಂತ್ ಸರ್ ಅವರ ಪುಸ್ತಕಗಳು ಇಷ್ಟ ಆಗುತ್ತವೆ. ಒಂದು ತಣ್ಣನೆ ಸಂಜೆಯಲ್ಲೋ ಅಥವಾ ಬದುಕು ಭಾರ ಅನಿಸುವ ವೇಳೆಯಲ್ಲೋ ಸುಮ್ಮನೆ ಇವರ ಪುಸ್ತಕಗಳನ್ನು ಓದಿದರೇ ಬದುಕು ಇದ್ದಕ್ಕಿದ್ದಂತೆ ಹಸಿರಾಗಿಬಿಟ್ಟಿರುತ್ತದೆ. ಕಾರಣವಿಷ್ಟೇ, ಇವರು ಪರಿಚಯಿಸುವ ಜೀವಗಳ ಹೋರಾಟಗಳೆದುರು ನಮ್ಮ ಹಳವಂಡಗಳೇನೇನೂ ಅಲ್ಲ ಎನಿಸಿ ಹೊಸ ಹುರುಪು ಮೂಡುವುದಂತೂ ಸತ್ಯ.
ಅಪ್ಪ ಅಂದ್ರೆ ಆಕಾಶ, ಅಮ್ಮ ಹೇಳಿದ ಎಂಟು ಸುಳ್ಳುಗಳು, ನವಿಲುಗರಿ, ಈ ಗುಲಾಬಿಯು ನಿನಗಾಗಿ, ಉಭಯಕುಶಲೋಪರಿ ಸಾಂಪ್ರತ ಪುಸ್ತಕಗಳಂತೆ ಮನಸು ಮಾತಾಡಿತು ಪುಸ್ತಕವೂ ಸಹ ಅವರ ಅಂಕಣ ಬರಹಗಳ ಅಮೂಲ್ಯ ಸಂಗ್ರಹ. ನೂರಾ ಅರವತ್ನಾಲ್ಕು ಪುಟಗಳಷ್ಟು ಚೈತನ್ಯ ತುಂಬಿಕೊಂಡಿರುವ ಪುಸ್ತಕ ಓದಲೇಬೇಕು.
ಯಾರೋ ಪಾತ್ರೆ ತಿಕ್ಕುವ ಹುಡುಗಿ ಬೆಸ್ಟ್ ಸೆಲ್ಲರ್ ಬುಕ್ ಬರೆದದ್ದು, ಅಸ್ಪೃಶ್ಯ ಎನಿಸಿಕೊಂಡವನ ಕೈ ಕುಲುಕಲು ಸಮಾಜ ಎದ್ದು ನಿಂತದ್ದು, ವಿಶೇಷ ಚೇತನರ ವೀರಗಾಥೆ, ಅಪ್ಪನೊಬ್ಬನ ಆರ್ತನಾದ, ಯಾರ ಕಣ್ಣಲ್ಲೋ ಅನಾಥನಿಗೆ ಅಮ್ಮ ಸಿಕ್ಕಿದ್ದು, ಕಿರಿಯನೊಬ್ಬನ ಹಿರಿತನ, ಲಾಲಿ ಹಾಡಿನಿಂದ ಚಿತ್ರಾರೊಂದಿಗೆ ಹಾಡಿದಂಥ ತೀರಾ ಸಾಮಾನ್ಯಳ ಕಥೆ ಸೇರಿದಂತೆ ಸುಮಾರು ೩೩ ಜೀವಗಳ ಕಥೆಯನ್ನು ಮಣಿಕಾಂತ್ ಸರ್ ನಮಗೆ ಕೊಟ್ಟಿದ್ದಾರೆ.
ಸಮಯ ಸಿಕ್ಕಾಗ ಓದಿಕೊಳ್ಳಿ, ಹನಿಗಣ್ಣಾದರೆ ನಾ ಜವಾಬ್ದಾರನಲ್ಲ!!!
ಕನ್ನಡದ ಜನಪ್ರಿಯ ಬರಹಗಾರರಾದ ಎ.ಆರ್.ಮಣಿಕಾಂತ್ ಅವರ ಮನಸ್ಸು ಮಾತಾಡಿತು ಪುಸ್ತಕ ಓದಿ ಮುಗಿಸಿದೆ....ಎ.ಆರ್ ಮಣಿಕಾಂತ್ ಅವರ ಬರವಣಿಗೆ ಶೈಲಿ ಬಹಳ ವಿಭಿನ್ನ ಹಾಗೂ ಆತ್ಮವಿಶ್ವಾಸ ತುಂಬುವ ಸತ್ಯ ಘಟನೆ ಆಧಾರಿತ ಬರಹವಿರುತ್ತದೆ....
ಇವರ ಅಮ್ಮ ಹೇಳಿದ ಎಂಟು ಸುಳ್ಳುಗಳು,ಅಪ್ಪ ಅಂದರೆ ಆಕಾಶ,ಭಾವತೀರ ಯಾನ ಓದಿದ್ದ ನನಗೆ ಈ ಪುಸ್ತಕದಲ್ಲೂ ಅವರ ಎಂದಿನಂತೆ ಸಿಗುವ ಆ ಸ್ವಾದ ಇದರಲ್ಲೂ ಸಿಕ್ಕಿತು.
ಮನಸು ಮಾತಾಡಿತು ಈ ಪುಸ್ತಕದಲ್ಲಿ ಇವರ ಹಲವು ಲೇಖನಗಳು ನಮ್ಮನ್ನು ಕಾಡುತ್ತವೆ.ಇವೆಲ್ಲವೂ ಬೇರೆ ಲೋಕಕ್ಕೆ ನಮ್ಮನ್ನು ಕೊಂಡೊಯ್ಯುತ್ತದೆ. ಒಟ್ಟಿನಲ್ಲಿ ಎ.ಆರ್ ಮಣಿಕಾಂತ್ ಅವರ ಸತ್ಯ ಘಟನೆ ಆಧಾರಿತ, ಜೀವನದಲ್ಲಿ ಕಷ್ಟ ಪಟ್ಟು ಸಾಧನೆ ಮಾಡಿದವರ ಕಥೆಗಳು ನಮ್ಮ ಮೇಲೆ ಆತ್ಮವಿಶ್ವಾಸ ಹಾಗೂ ಅತ್ಯಂತ ಪ್ರಭಾವ ಬೀರುವುದಂತೂ ಸತ್ಯ.